ಸಿಡ್ಲ ಮಾರಮ್ಮನೂ ಬೋರಮ್ಮನೂ

ಹಿಂಗೆ ಗಂಡನ ಪ್ರಾಣವ ಅತ್ತಿಮರದ ಪೊಟರೇಲಿ ಬುಟ್ಟು, ಮಕ್ಕಳ ಮಡ್ಲಲ್ಲಿ ಕಟ್ಕಂದು ಬಂದ ಬೋರಮ್ಮ ಊರೊಳಗೆ ಬಂದಳೆ, ತಿಂಗಳಾನುಗಟ್ಟಳೆ ಮುಸುಕೆಳೆದು ಮಗ್ಗಲಾದ್ಲು. ಕೊನಿಗೆ ಒಂದಿನ ಎಣ್ಣೆ ನೀರು ಕಾಣದಿರ ಬರಗೂದಲ ಎತ್ತಿ ಕಟ್ಕಂಡಿದ್ದೆ, ಸರಿರಾತ್ರಿಲಿ ಎರಡ ಮಾಡಕ್ಕೆ, ಬೇಲಿ ಅಂಚಿಗೆ ಹೋಗಿ ಕುಂತಕಂಡಳು.

ಸುಮ್ಮನೆ ತಲೆ ಎತ್ತಿ ನೋಡದ್ಲು. “ಚಂದಮಾಮ” ಅನ್ನೋನು ನಗತಾ ಬಿದ್ದನೆ.

ಅನ್ನ ಉಣುಸೋವಾಗ ಅವರವ್ವ ಆಕಾಶದ ಕಡೆ ಬೊಟ್ಟು ಮಾಡಿ ತಿಂಗಳಮಾವನ್ನ ತೋರುಸ್ತಿದ್ದ, ಅಂಗೇ… ನೆನಸಕಂದ್ಲು. ಅದೇ ಬೆಟ್ಟು ಮಾಡಿ ತಾನೂ ಮಕ್ಕಳಿಗೆ ಅನ್ನ ಉಣ್ಣುಸ್ತಿದ್ದನ್ನೂ ನೆನಕಂದ್ಲು.

ಪಾಪ! ಗಂಡಂಗೂ ಅತ್ತೆಮ್ಮ ಇಂಗೆ ತೋರಿದ್ಲಲ್ವಾ? ಅದ ನೆನಿತಿದ್ದಂಗೆ ಕಣ್ಣಲ್ಲಿ ನೀರುಕ್ಕಿ ಅವಾಗವೆ ತುಂಬಕಂಡವು. “ತನ್ನ ಕಳ್ಳು ಅನ್ನದ ತಗ ಹೋಗಿ ಮಣ್ಣು ಮಾಡಿ ಬಂದು, ನನಗೂ ಮಕ್ಳಿಗೂ ಅವತ್ತಿಂದ ಅನ್ನ ನೀರು ಕಾಣುಸ್ತವಳಲ್ಲಾ! ಪಾಯಿ, ನನ್ನ ಅತ್ತೆವ್ವನ ಕಷ್ಟ ಅನ್ನದು ಏಟಿದ್ದಾತು? ದೇವ್ರೆ…”

ಎಲ್ಲನೂ ನೆನಕಂದು ಎದ್ದುಬಂದೋಳೆ ನೀರ ಹಿಡಕಂದು ಹಿತ್ತಲತಾವ ಕಾಯ್ತಾ ನಿಂತಿದ್ದ ಅತ್ತೆಮ್ಮನ ಮುಕ ನೋಡಿ ನೀರ ಮುಟ್ಕಂತಲೇ “ಅತ್ತೆವ್ವ, ನಾನು ಇನ್ನ ಅಳಕುಲ್ಲ. ನಡಿ, ಮನೆ ತೀನಗಂಬ ನೀನೆ ಕಲ್ಲಾಗಿ ನಿಂತಿದೀಯಂತೆ. ನಾನೂ ನಿಂಜೊತಿಗೆ ತೋಳೆತ್ತಿ ಮಕ್ಕಳ ಸಾಕ್ಕಂತೀನಿ.” ಅಂದು ಹೊಸ್ಲು ದಾಟಿ ವಳಗೆ ಬಂದ್ಲು.

ಅತ್ತೆಮ್ಮ ಸೆರಗಲ್ಲಿ ಕಣ್ಣ ಸೀಟಕಂದು ಸೊರಸೊರನೆ ಗೊಣ್ಣೆಯ ಮೂಗಿಂದ ಮ್ಯಾಗ್ ಮುಖನಾಕೆ ಎಳಕಂದಳೆ, ಗಂಟಲಿಂದ ತೆಗದು ತುಪಕ್ಕನೆ ಹಟ್ಟಿ ಕಲ್ಲಿಂದ ಆಚಿಗೆ ಉಗುದು, ಬಂದು ಬಾಗ್ಲ ಅಗಳಿ ಹಾಕುದ್ಲು.

“ಅಯ್ಯೋ, ಪಾಪಿ ನನ್ ಮಗಳೆ, ನಿನ್ನೂ ನಿನ್ನ ಮಕ್ಕಳುನ್ನೂವೆ ಪರದೇಸಿ ಹಂಗೆ, ಎಂಗೆ ಬುಟ್ಟು ಹೋದನೆ? ಆನೆ ಹಿಂಡ ಅಗಲದಂಗೆ ಆ ನನ್ನ ಕಂದ ಹೊಂಟೋದನಲ್ಲಾ… ಇಂಥ ಚಂದೊಳ್ಳಿ ಹೆಣ್ತಿ ಜತೆಲಿ ಬಾಳ ಭಾಗ್ಯ ತರ್ನಿಲ್ಲವಲ್ಲ ಅವನು. ಈ ಎಳೆ ಮಿಡಿ ಸೋತೆ ಕಾಯನಂಗಿರ ಮಕ್ಕಳ ನೋಡಾದ್ರು ಹೊಟ್ಟುರ್ಕಂಬಾರದೆ ನಮ್ಮ ಚೌಡಿ ಅನ್ನ ಆ ಸುಪ್ಪಾಣಿ, ವರ್ಶಕ್ಕೊಂದಪ ಇಕ್ಕಿದ ಅನ್ನ ಬಾಡು ತಿಂತಾಳಲ್ಲ! ಅವ್ಳು ನಮ್ಮ ಕಾಯಕಂಡು ಜೊತೆಲೆ ಇದಾಳೊ? ಇಲ್ವೋ?ಯಾರ ಹಿಂದ್ಗುಟ್ಲಾರ ಎದ್ದು ಹೋಗವಳೋ… ಅಂತವ ಪರೀಕ್ಸೆ ಮಾಡಿ ನೋಡೆ ಬಿಡಬೇಕು,ತಡಿ.”

ಹಿಂಗೆ ಮಗನ್ನೂ, ಗೂಬೆಕಲ್ಲಮ್ಮ ಅನ್ನ ಚೌಡಿನೂ ಬಯಕಂದು ಮನೆ ಸೂರ ನೋಡತಾ ಕೌದಿ ಹೊಚ್ಕಂದ್ಲು. ಬರದಿರ ನಿದ್ದೆ ಕರಿತಾ ಅಳಕಂದ ತನ್ನ ಕರುಳಿಂದ ಎದ್ದೆದ್ದು ಹಾದು ಬರೊ ನೆನಪಿನ ಸುರುಳಿಯ ಬರಸಿಗೆ ತುಳುಕಾಡೋ ಕಣ್ಣೀರ, ಸೊಸೆಗೆ ಕಾಣದಿರ ಹಂಗೆ ದಿಂಬಿನ ಮೇಲೆ ಇಳಿಬುಡ್ತಾ…ನಿಟ್ಟುಸ್ರುಬುಡ್ತಾ, ಮಲಗಿರೊ ಮೊಮಕ್ಳ ತಲೆ ವಳಗೆ ಬೆರಳಾಡುಸ್ತಿದ್ಲು ಮುದುಕಮ್ಮ.

ಹಿಂಗೆ ಅತ್ತೆ ಸೊಸೆ ಒಂದಾಗಿ, ಎರಡು ವರ್ಷ ನೊಗ ಹೊತ್ಕಂಡು ಮನೆ ಭಾರ ಎಳುದ್ರು ಜೋಡೆತ್ತಂಗೆ. ಅಷ್ಟೆ. ಒಳಗೊಳಗೆ ಕೊರಗಿ ಗೆದ್ದಲು ಹಿಡಿದ ಮುದುಕಿ ಪ್ರಾಣಬಿಟ್ಟಳು. ಬೋರಮ್ಮ ಒಂಟಿಯಾದ್ಲು. ಆದರೂವೆ

“ನಂಗೇನು? ಚಿನ್ನದಂಥವು ನಾಕು ಗಂಡುಮಕ್ಕಳು ಮನ್ಲವೆ. ಅವು ನೇಗ್ಲು ಹಿಡಿಯವರ್ಗೂ ವಸಿ ತಾಪತ್ರೆ. ಆಮೇಲೆ ಯಾರಿಗೆ ಹೆದ್ರಕಬೇಕು? ನಾನು” ಅಂದಕಂದೂ… ಕಾಲ ಹಾಕುದ್ಲು. ಮಕ್ಳು ದಿನೆ ದಿನೆ ಅವಳ ಅಕ್ಕರೇಲಿ ಮೈ ಹೊಳ್ಕಳ್ಳದ ನೋಡಿ ಗಂಡನ್ನ ಸಮಾಧಿ ಹೊಲದಲ್ಲಿ ಕಿಲಕಿಲಾಂತ ಅರಳೋ ಹುಚ್ಚೆಳ್ಳು ಹೂವಿನ ಹಾಸಿನಂಗೆ ಮತ್ತೆ ತನ್ನ ಕಾಯದಲ್ಲಿ ಅಂಗೇ.. ರಸ ತುಂಬಕಂಡ್ಲು.

ಕಾಲ ಹಿಂಗೆ ನಡಿತಿರವಾಗ ಒಂದಿನ ಬೋರಮ್ಮ ಕಾಯ್ಲೆ ಮಲಕ್ಕಂಡ್ಲು. ಮ್ಯಾಕೆ ಎದ್ದೇಳದಂಗೆ ಸಳಿಜ್ವರ ಬಂದು ಬುಡದೇನೆ ಅವಳನ್ನ ಹದಿನೈದು ದಿಸ ಮಲಗುಸ್ತು. ಎದ್ರುಗಡೇ ಇರೊ ದಾಯಾದಿ ಯಾಲಕ್ಕಯ್ಯನ ಮನೇರು ಇವರ ಸೌಕರ್ಯ ಮಾಡತಿದ್ರು. ಎರಡು ಮನೆಗೂ ಯಾವಾಗಲೂ ಚಂದ ಅನ್ನಿ. ಕೊಡೊದು ತಗಳದು ಮಾಡ್ಕಂದು ಎರಡು ಮನೆರು ಕಿತ್ತರೂ ಕೀಳದಷ್ಟು ವೈನಾಗಿದ್ರು. ಯಾಲಕ್ಕಯ್ಯ “ಮರಗೌಡನ ರಾಗಿ ಹೊಲದಲ್ಲಿ ಮಂಡಿ ಉದ್ದ ಕಳೆ ಬೆಳದೀತೆ. ತಡಿ, ಇವತ್ತು ಪುರೊಸೊತ್ತಾಗಿದೀನಲ್ಲ. ಪಾಪ ಒಂಟಿ ಹೆಂಗಸು. ಅವಳು ಏನ್ ಮಾಡಾಳು? ಒಂದು ಆಳು ಕರಕಂದು ಹೋಗಿ ಹೊಲ ಅರಗಿ ಕೊಟ್ಟುಬಿಡನ. ಜಡ ಬುಟ್ಟು ಸುಧಾರಸಕಂದು ಎದ್ ಮೇಲೆ, ಅವಳೆಯ ಮಕ್ಕಳ ಕರಕಂದು ಎಂಗೋ ಕಳೆ ಕಿತ್ಕತಾಳೆ. ಬೆಳೆ ಕೈಗೆ ಬತ್ತದೆ.” ಅಂತ ಲೆಕ್ಕಾಚಾರ ಹಾಕ್ಕಂದು ಮನೆ ಹಿತ್ಲಲ್ಲಿರ ನೇಗಲು ನೊಗ ತಗಳಕೆ ಅಂತ ಇವರ ಮನೆ ಹಿಂದಕ್ಕೆ ಬಂದ.

ಇವಳು ಹಿಂದಗಡೆ ಹಟ್ಟಿಕಲ್ಲಲ್ಲಿ ಯಾರೂ ಇಲ್ಲ ಅನಕಂದು, ಉಚ್ಚೆ ಹುಯ್ಯೊಕೆ ಅಂತ ಬಂದು ಕುಂತಿದ್ಲು. ಅಲ್ಲಿಗೆ ಹೋಗೊ ಹೊತ್ತಿಗೇ, ಆಗನಾರದೆಯ, ತೂಬ್ರಸಾಡಕಂದು ಹೋಗಿದ್ಲಾ? ಇದ್ದಕ್ಕಿದ್ದಂಗೆ ಬಂದ ಯಾಲಕ್ಕಯ್ಯನ ನೋಡಿ ಬೋರಮ್ಮ ಒಂದು ಖಂಡುಗ ನಾಚುಗೆ ಆಗಿದ್ದೆ ತಡ, ಧಡಕ್ಕನೆ ಎದ್ದು ನಿಂತ್ಕಂದ್ಳು. ಇವನೂ ಕಂಡ್ರೂ ಕಾಣದನಂಗೆ ತಲೆ ಬಗ್ಗುಸ್ಕಂದು ನೇಗ್ಲು ತಗಳಕೆ ಅಂತ ಬಂದು, ಕೈ ಹಾಕುದ. ಅರ್ಧ ಹುಯ್ದು ದಡಕ್ಕನೆ ಎದ್ದು ನಿಂತವಳ ಉಚ್ಚೆ ಅನ್ನವು, ಅವಳ ಬಿಳೇ ಪಾದದ ಮೇಲೆ ದೇವರ ಮೇಲಿನ ಅಭಿಶೇಕದ ನೀರಂಗೆ ಹರುದು ಹೋತಿದ್ವು. ಅವಳ ಕಡೆ ನೋಡದೆ ಅಂಗೆ ಅರುಗಾಗಿ ಹೊರಟುಹೋದ. ಯಾಲಕ್ಕಿ ಭಾವ ನೋಡುದ್ನೋ ಏನೋ? ಅಂತ ಮನಸ ವಳಗೇ ಇಳೇ ಬುಟ್ಟಕಂಡ್ಲು ಬೋರಮ್ಮ. ಬಂದು ಹಂಡೆ ತಳದ ನೀರ ಗೋರಿ, ತೊಡೆನೂ ಕಾಲನೂ ತೊಳಕಂದು ಮಲಗಿದ್ಲು. “ಚಂದ್ರ… ಬಾವಿ ತಕೆ ಹೋಗಿ ಎಂಗಾರ ಮಾಡಿ ಎರಡು ಬಿಂದಿಗೆ ನೀರ ತಾಬಾರಪ್ಪಾ. ಮನೇ ಹಂಡೇಲಿ ನೀರು ತಳಾರುಕೆ ಹೋಗವೆ.” ಅಮ್ತ ಕೂಗು ಹಾಕುದ್ಲು.

ಅದೇ ಗಳಿಗೇಲಿ ವಳಿಕ್ಕೆ ಬಂದ ಹೊಂಬಾಳೆ “ಅಕ್ಕ, ನೀ ಸುಮ್ಮಗ ಮನಿಕ್ಕ. ಚಂದ್ರ ಹುಡ್ಲ ಜತಿಗೆ ಗೋಲಿಗಜ್ಜುಗ ಆಡತಾ ಈತೆ. ನಾನು ಹಂಡೆ ತುಂಬುಸಿ ಹೋಯ್ತಿನಿ. ಹುಡ್ಲು ಅಲ್ಲೆ ಉಣತಾವೆ. ನಿಂಗೆ ಬಿಸೆಅನ್ನ, ನೀರ್ಸಾರು ತಂದಿದಿನಿ. ಎದ್ದೇಳು ಮೊದ್ಲು, ವಸಿ ಹೊಟ್ಟೆಗ್ ತಿಂದು ಮಲಕ್ಕ” ಅಂದಾಗ ಇವಳಿಗೆ ದುಃಖ ಉಕ್ಕಿ ಕಣ್ಣೀರಾತು. ಅನ್ನಸಾರು ಇಕ್ಕಿ ಉಂಡಾದ ಮೇಲೆ ತಟ್ಟೆ ತುಂಬಲು ಹಾಲು ಕಾಸಿ ತಂದು ಹೂದ್ಲು.

“ಹೊಂಬಿ ಬ್ಯಾಡ ಕನೆ, ಅಬ್ಬಳಿಕೆ ಬತ್ತೀತೆ, ಕಕ್ಕಂಡ್ರೆ.” ಅಂದ ಬೋರಮ್ಮಂಗೆ ಬೆಲ್ಲ ತಂದು ಹಾಲೊಳಗೆ ನುರುದು ಕೊಟ್ಟು, ಅಮಟೆಕಾಯನ ಉಪ್ಪಿನಕಾಯಿ ಗಷ್ಟ ತಂದು ಬಾಯ್ಗೆ ಕೊಟ್ಟ ಹೊಂಬಾಳೆ “ಯೋಚ್ನೆ ಬುಡು. ಕಷ್ಟ ಅನ್ನದು ನಮಗ ಬರದೆ ಅಟ್ಟಿ ಕಲ್ಲಿಗೆ ಬತ್ತದ. ಮನೇಲಿ ಇರೊ ಕರಾವು ಉಂಡು ಮೊದ್ಲು ನೀ ಭದ್ರಾಗು. ನೀನೆ ಮಲಿಕ್ಕಂದ್ರೆ ಮನೆ ಮಾಡೋರ್ಯಾರು ಹೇಳು? ಇವ್ರು ನೇಗಲು ಹೊತ್ಕಂದು ಈ ಕಡಿಂದ ಹೋಗೋವಾಗ, ನಾನು ದನ ಮೇಯಕ್ಕೆ ಹೊಡ್ಕಟ್ಟು ಆ ಕಡಿಂದ ಬತ್ತಿದ್ದೆ. “ಯಾಕೊ ಬೋರಮ್ಮ ತಟ್ಟಾಡುತಾವಳೆ. ಮನೆತಕ ಹೋಗು. ನೀನು… ಇವತ್ತು ಹೊಲತಕೆ ಬರಬೇಡ ಕನಗೀ. ಅವರ ಹೊಟ್ಟೆಗೀಟು ಅನ್ನ ಕಾಣಸು ಅಲ್ಲಗೋಗಿ ಮೊದ್ಲು, ಅಂದ್ರು”

ಮಾತಾಡ್ತಲೆ ನಿಗಾ ಮಾಡ ಅವಳ ಕಂಡು ಅಂಗೆ ಮನಸಲ್ಲಿ ಇವಳು, ವರ್ಶಕ್ಕೊಂದಪ ಗಾಡಿ ಕಟ್ಕಂಡು ಹೋಗ್ಬರೊ ಮನೆದೇವ್ರು ಸಖರಾಯಪಟ್ಟಣದ ಸಕನಿರಂಗ ಹೆಂಡತಿ ಕರಕಂದು ಬಂದು, ಇಲ್ಲೆ ಎದ್ರು ಮನೆ ಯಾಲಕ್ಕಯ್ಯ ಹೊಂಬಾಳೆ ಆಗಿ ನಿಂತಕಂಡಂಗೆ ಕನಸ ಕಂಡಳು. ಆದ್ರೂವೆ, ಉಚ್ಚೆ ಪ್ರಕರಣ ನೆನಪಾಗಿ ಯಾಲಕ್ಕಿ ಭಾವ ಕಂಡನೋ ಏನೋ? ಯಾವಾಗ್ಲೂ ಬೇಲಿಸಾಲಿಗೆ ಹೋಗಿ ತೊಡಚಲ ಮರದ ಮರೆಲಿ ಕೂರುತಿದ್ದ ನನಗೆ ಇವತ್ತು ಯಾಕೆ ಇಂಗೆ ದಿಕ್ಕು ತಪ್ಪುಸ್ತು? ಮಾನಾ ಅನ್ನೋದು ದೊಡ್ಡದು ತೆಗ. ಥೂ!” ಅಂತ ಮನಸ ಮುದುರಕಂದು, ಹಂಗೆ ಕಣ್ಮುಚ್ಚಿ ನಿದ್ದೇಗೆ ಜಾರ ಹೋದೋಳ್ಗೆ, ಹೊಂಬಾಳೆ… ಮನೆ ನಿಗಾ ಮಾಡಿ ಬಾಗಲು ಮುಂದಕ್ಕೆ ಬುಟ್ಟು ಹೋದದ್ದು ಅರವಾಗದಂಗೆ, ನಿದ್ದೆ ಸದ್ದಿಲ್ಲದೆ ಬಂದು ಅಮರಕಂತು.

ಆವತ್ತಿಂದ್ಲೂ ಮುಖ ತಪ್ಸಿ ಮಾತಾಡೊ ಬೋರಮ್ಮನ ಮುಕ ಅಂಗೂ ಇಂಗೂ ಯಾಲಕ್ಕಿ ಕಣ್ಣಿಗೆ ಬೀಳತಿದ್ದಂಗೆ, ಇನ್ನೂ ಇರೊ ಅವಳ ಪ್ರಾಯದ ಮಿಂಚು ಇವನ ಮನಸಲ್ಲಿ, ಕರುಣೆಯ ಸಾಣೆ ಹಿಡಿತಾ ಸೆಳಿತಾ ಇವಳನ್ನೂ ಎಳಿತಿತ್ತು. ಒತ್ತಾಸೆಗೆ ನಿಂತ ಅವನ ಮೇಲೆ ಇವಳುಗೂವೆ, ವಳಗೆ ಮುಚ್ಚಿಟ್ಟಿದ್ದ ಆಸೆ ಅನ್ನ ಕೂಸು ಹುಟ್ಟಿ ಮೊಲೆ ಹಾಲಿಗೆ ಬಾಯ ಬುಡೊ ಕಂದನಂಗೆ, ಸಂದೂ…ಲು ಕನವರಸತಾ ಇತ್ತು. ಎಂದೂ ಊರೊಳುಗಡೇ ಹೆಸರು ಕೆಡುಸ್ಕಳದಿರೊ ಯಾಲಕ್ಕಿ, ಒಂಟಿ ಎಂಗಸಿನ ಅಕ್ಕರೆ ಮಾಡದ ಕಂಡು, ಊರು ಅನ್ನದು ಅವನ ಮೇಲೆ ಆಗೀಗ ಅದರ ಪಾಡಿಗೆ ಅದು, ನಿಗಾ ಇಡತಾ ಇತ್ತು. ಆದ್ರೂ…. ಇವರಿಬ್ಬರೂ ಹತ್ತುರಕ್ಕೆ ಬಂದದ್ದು ಸುಳ್ಳೇ…ನಾಗಿರಲಿಲ್ಲ.

ಕನಸು ಇಂಗಾಡವಾಗಲೇ ಕಣತೂರಮ್ಮನ ಜಾತ್ರೆ ಬಂತು. ಮೂರು ಮೈಲಿ ದಾಟಿ ಸಿಡಿಗೆ ಅಂತ ಹೊಂಟ್ರು. ಹೊಂಬಾಳೆ ಸಂಸಾರದ ಜತೆಲೆಯ, ಹರಕೆ ತೀರ್ಸಿ ಬಂದುಬಿಡನ ಅನಕಂದು ಬೋರಮ್ಮನ ಸಂಸಾರನೂ ಹೊರಡ್ತು.
ನಗ್ತಾ ನಗ್ತಾ ಹೋಗೋರ ನೋಡುದ್ರೆ… ಇದ್ದೋರು ಹೊಟ್ಟುರ್ಕಳದೆ ಬುಟ್ಟಾರ? ಅದ್ರಲ್ಲೂವೆ ಯಾಲಕ್ಕಿ ಅನ್ನ ಸಭ್ಯಸ್ಥ ಇಬ್ಬರನ್ನೂ ಕರಕಂಡು ಊರ ದಾಟೀ ಹೋಯ್ತಾ ಕೂತವನೆ. ಗದ್ದೆ ಗಣ್ಣ ದಾಟಿ ಎಂಗೋ ಊರ ಕಣ್ಣ ತಪ್ಪುಸ್ಕಂದು ತೋಪಿಗೆ ಬಂದ್ರು. ಜಾಲಾರಿ ಹೂವು ಅನ್ನದು ಮಠದ ತೋಪನ್ನೇ ಅಟ್ಟಾಡುಸ್ಕಂದು, ಅಂಗೇಯಾ ಜೇನಿನ ದಂಡು ತಂದು, ಹೂವಿನ ಎದೆ ಮೇಲೆ ಗುಬ್ರಾಕಂಡಿತ್ತು. ಮಕ್ಕಳು, ಹಕ್ಕಿ ಕೆಡುವಿದ ಜಾಲದ ಹೂವಿನ ತೆನೆಯ ಗೊಂಚುಗೊಂಚಲನ್ನೇ ಹಿಡ್ಕಬಂದು ಅವರವ್ವಂಗೆ ಕೊಟ್ವು. ಹೊಂಬಾಳೆ ಮುಡಿಲಿ ಹಕ್ಕಿ ಗರಿಗೆದರದಂಗೆ ಹೂವಿನ ಗೊಂಚಲು ಮುಡಿ ಕಂಡ್ರೆ, ಬೋರಮ್ಮನ ಸೆರಗಲ್ಲಿ ಸೊಂಟದ ಸುತ್ತ ಭದ್ರಾಗಿ, ಗುಬ್ಬಿ ಮರಿ ಹಂಗೆ ಮುದುರಕೊಂಡು, ದೇವರ ತಲೆ ಮೇಲೆ ಬೀಳೊ ಭಾಗ್ಯ ಹೊತ್ತಕಂಡು, ಕುಂತ್ಕಂದ್ವು

 

ಯಾಲಕ್ಕಿ ಲಗುಬಗೆಲಿ ನಡಿತಿದ್ದೋನು, ಹಂಗೆ ವಚ್ಚಗಣ್ಣಲ್ಲಿ ಇದ ಕಂಡು ವಸಿ ಪೆಚ್ಚಾದ. ಹೊಲಮನೆ ನಿಗಾ ಮಾಡದು ಬೇರೆ. ಅವಳ ಹಣೆಬರವ ತಿದ್ದಕಾದದೆ? ಯೋಸನೇಲಿ ವಳಿಗೇ ಗುಯ್ಗುಂಟ್ಕಂದು ಹೋಗೋವಾಗಲೆ ಎದುರುಗಿರೋರ ಕಣ್ಣು ಈ ಗುಂಪ ತನಿಖ್ಹೆ ತೆಗೆಯಾದು ಸೂಕ್ಸ್ಮೆಲಿ ಇವನ ತಿಳುವಳಿಕೆಗೂ ಬಂತು. ತಿರುಗ್ ನೋಡುದ್ರೆ ಒಂದೇ ವಯಸ್ಸಿನ ಗೆಣಕಾತೀರು ಇಬ್ರೂ… ಜೋರಾಗಿ ನಗದು ಕಾಣುಸ್ತು. ಆಳೆತ್ತರದ ಮರದ ಕೆಳುಗಡೆ ಬಿಳೆ ಮೊಲಗಳು ಈಗ ಕಂಡವು…. ಅಷ್ಟು ದೂರದಲ್ಲಿ…. ರಂಗರಂಗಿನ ಹೂವಿನ ಕೊಂಡ ಹೊತ್ಕಂದಿದ್ದ ಗುಲಾಬಿ ಮೆಳೆ ಒಳೀಗೆ ಮಾಯಾಗೋದು.

ಇನ್ನೇನು ಊರಂಚಿಗೆ ಬಂದ್ರು. ಗುಡ್ಡ ದಾಟಿ ಎಡವಿಬಿದ್ರೆ ಕಣತೂರು. ಜಾತ್ರೆಲಿ ಮಕ್ಕಳೀಗೆ ಪೀಪಿ… ತಂತಿ ಮೇಲೆ ಓಲಾಡೊ ಬಣ್ಣದ ಕೋತಿ ತಿಮ್ಮನ್ನ ಕೊಡ್ಸಿ, ಕಪ್ಪೆಯಂಗೆ ಗೊರಯೋ ತಗಡಿನ ಕ್ಯಾಂಪುಸ್ಕನೂ ಕೊಡ್ಸದ್ರು.
ಮಕ್ಕಳ ಕೈ ಹಿಡಕಂಡು ಬೆಂಡುಬತ್ತಾಸ ತಿನ್ಸಿ, ಸಿಡಿ ನೋಡಾಕೆ ಅಂತ ಜನದೊಳಗೆ ಬಂದು ನಿಂತ್ರು. ಹೊಂಬಾಳೆ ಊರಿನ ಒಂದು ಅಜ್ಜಮ್ಮ, ಜನರ ಗುಂಪಲ್ಲಿ ಸಿಕ್ಕಿದ್ದೆಯ, ಇವಳನ್ನ ಬಿಗಿಯಾಗಿ ಹಿಡ್ಕಂತು. ಅದು ಜನದೊಳಗೆ ನಿಧಾನಕ್ಕೆ ನಡ್ಕಬತ್ತಿತ್ತು. ಬಿಟ್ಟುಬರ್ನಾರದೆಯ ಹೊಂಭಾಳೆನೂವೆ ಹಿಂದುಳಕಂದ್ಲು. ನುಗ್ಗಾಡೊ ಜನದೊಳಗೆ ಅವ್ಳು ಹಿಂದಾದ್ಲು. ವತ್ತಿಲೆ ನಿಂತಿದ್ದ ಬೋರಮ್ಮ ಸೊಂಟದಲ್ಲಿದ್ದ ಜಾಲಾರಿ ಹೂವ ತೆಗೆದೋಳೆ ಮಕ್ಕಳ ಕೈಗೂ ಕೊಟ್ಟು ಯಾಲಕ್ಕಿ ಕೈಗೂ ಕೊಟ್ಲು. ಸಿಡಿ ಸುತ್ತು ಬಂದಾಗ ಹಾಕನ ಅಂದಳೆ ತಾನೂ ಕೈಲಿ ಹಿಡ್ಕಂದು ನಿಂತಕಂಡಳು.

ಅವಳು ಕೊಟ್ಟ ಜಾಲಾರಿ ಹೂವಿನ ಘಾಟು ಇವನ ಮತಿಯ ಸೊರಗ್ಸಿ, ಆಸೆಲಿ ಅವಳಿಗೆ ಒರಗಿ ನಿಂತ್ಕಂತು.”ನಿಮ್ಮ ಸುಮ್ನೆ ಬುಟ್ಟಬುಡಕ್ಕೆ ಆದಾದ, ಹಾಂ!” ಅಂದಿದ್ದೆಯ ಅನಾದಿ ಕಾಲದಿಂದ್ಲೂ ಬಂದಿರೊ ಈ ಜಗತ್ತಿನ ಆಸೆಯ ಒಂದೇ ಒಂದು, ಕಂಡರೂ ಕಾಣದಿರಂಗೆ ಇರೋ ಸಣ್ಣೆಳೆ ರೇಖೇ… ಇಬ್ಬರನ್ನೂ ಜಂಟಿ ಮಾಡಿ ತನಗೆ ಬೇಕಾದಂಗೆ ಹೊಲಿಗೆ ಹಾಕತಾ ನಿಂತ್ಕಂತು. ಇಬ್ಬರ ಮೈ ಬಿಸಿನೂವೆ ಹೊಸ ಜನರ ಗುಂಪಿನ ನಡುವೆ ಗರಿ ಬಿಚ್ಚಿ ಇಳೆ ಬಿಟ್ಟಕಂಡು, ಹದವಾದ ಬಿಸ್ಲಲ್ಲಿ ಮೈ ಕಾಯಿಸೊ ಹಕ್ಕಿ ಅಂಗೆ, ನಚ್ಚಗೆ, ಅರೆಗಣ್ಣಲ್ಲಿ ನಿಂತಿತ್ತು. “ತಾಯಿ ಮಾತಾಯಿ” ಜನರ ಕೂಗಿಗೆ ಎಚ್ಚೆತ್ತ ಇಬ್ಬರೂ, ಮಕ್ಕಳ ಬಿಗಿಯಾಗಿ ಹಿಡಕಂದು ಜಾಲಾರಿ ಹೂವ ಸಿಡಿ ಬಲಿಗೆ ಎಸುದ್ರು.

ಅವರನ್ನ ಇಷ್ಟೊತ್ತು ಅಮರಕಂಡಿದ್ದ ಹೂವಿನ ಘಮನ ಇಬ್ಬರ ಮೈಮೇಲಿದ್ದ ಮೋಹದ ಯಾಮಾರಿ ಮುಸುಕನ್ನೂ ಎಳಕಂ…ದು, ನಿಧಾ…ನಕ್ಕೆ ಹಾರತಾ ಹಾರತಾ ಅಡ್ಡೆ ಮೇಲೆ ಕುಂತಿರೊ ಕಣತೂರಮ್ಮನ ಕಣ್ಣಂಗೆ ದೂರಾಯ್ತು.
ಸಿಡಿಕಂಬ ಕೆಳಗಿಳಿತು. ಕೊನೆಗೆ ಎಲ್ಲಿ ನೋಡುದ್ರೂ ಧೂಳು.ಧೂಳು. ಧೂಳು. ಅದರಿಂದ ಪಾರಾಗಿ ಊರಿನ ದಾರಿ ಹಿಡುದು ಬರೊವಾಗಲೇ ಬಂದು ಸೇರಕಂದ ಹೊಂಬಾಳೆ, ತನ್ನ ತವರಿನ ಅಜ್ಜಮ್ಮ ಹೇಳುದ ಕಥೆಯ ಕೇಳುಸ್ಕಂತಲೇ… ಊರ ದಾರಿ ಏನೂ ಅರಿದಿರಂಗೆ ಸಾಗ್ತಾ ಇತ್ತು. ಮುಂದ್ಮುಂದೆ ಓಡೋಡಿ ಹೋಯ್ತಿದ್ದ ಮಕ್ಕಳು ಇದ್ದಕ್ಕಿದ್ದಂಗೆ ಸದ್ದಿಲ್ಲದೆ ಅಲ್ಲೇ ಒಂತಾವ ನಿಂತ್ಕಂದವು. ಏನ್ ನೋಡ್ತಾವೆ? ಅಲ್ಲಿ! ಅಂತ ಇವ್ರೂ ಮುಂದಕ್ಕ ಬಂದು ನೋಡುದ್ರೆ ಎರಡು ಭಾರಿ ನಾಗರ ಹಾವು ಹೆಣಕೊಂಡು ಎಣೆಯಾಡತಾವೆ. ಅಷ್ಟಗಲದ ಹೆಡೆಲೀ ನಾಗರಚಿನ್ಹೆ ಎದ್ದು ಕಾಣತಿರದು. ಇಳಿತಿರೊ ಸಣ್ಣ ಬಿಸುಲಲ್ಲಿ ಮಯ್ಯಿ ಅನ್ನದು ಮಿರಮಿರ ಅಂತ ಮಿಂಚದು…ಅಂಗೇ, ಕಣ್ಣಿಗೆ ತಾಕದು.

ಎತ್ತರೆತ್ತರಕ್ಕೆ, ನುಲುಗಬಲಗನೆ, ಜಡೆ ಹೆಣೆದು ಬಿಚ್ಚಿ, ತಿರುಗಿ ಹೆಣೆಕೊಂದ ಹಾವು, ಗದ್ದೆ ಬಯಲಂಗೆ ಒಂದ್ಸಲ ಚಂದವಾಗಿ, ಕಾಡೊಳಗಿನ ಕತ್ಲೆ ಹಂಗೆ ಇನ್ನೊಂದ್ಸಲಕ್ಕೆ ಹೆದ್ರುಕೆನೂ ತೋರುಸಿ, ಒಂದು ಕಣ್ಕಟ್ಟು ಅನುಭವನ
ಹುಟ್ಟ ಹಾಕ್ತು. ಇಬ್ಬರೆದೆ ಉರೀಲಿ ಹುರಿಯೋ ಭತ್ತದ ಹರಳು, ಒರಳಿಗೆ ಬಿದ್ದು ಅವಲಕ್ಕಿ ಕುಟ್ಟೋ ಲಯಕ್ಕೆ, ಕೆಳಗೆ ಮೇಲೆ ಅಂಗೇ ಓಲಾ…ಡೋ ಜೋಡಿ ಒನಕೆಗಳಂಗೆ ಆಗೋದ್ವು. ನಾದದ ಲೋಕ ತಂಬುರದ ಒಂದೇ ತಂತೀಲಿ ಒಂದೇ ಬೆರಳಲ್ಲಿ ಮಿಡದಂಗೆ ಆಗಿ, ಇಬ್ಬರ ಮನಸೂ ಸದ್ದು ಮಾಡ್ತಾ, ಬಾಯಿಗೆ ನಚ್ಚಗಾಗೊ ಅವಲಕ್ಕಿನ ಅರಳಿಸೊ ಮಂತ್ರ ಹಾಕಿ ತಂತ್ರ ಮಾಡ್ತು. ಇದೇನೂ ತಿಳಿದಿರೊ ಹೊಂಬಾಳೆಯ ಮನಸು ಅನ್ನದು ಪಾಪ! ತವರಿಗೆ ನಾಕು ದಿನದ ಮಟ್ಟಿಗೆ ಹೋಗ್ ಬರೊಕೆ ಹೊಂಚ ಹಾಕತಿತ್ತು.

‍ಲೇಖಕರು admin

March 5, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: