ಡಬ್ಬಿಂಗ್: ಕೈಲಾಗದವರು ಮೈ ಪರಚಿಕೊಂಡರಂತೆ!

ಡಬ್ಬಿಂಗ್ ಅಂತ ಬಂದಾಗ ಮಾತ್ರ ಕನ್ನಡತನದ ನೆನಪಾಗುತ್ತಾ ಸ್ವಾಮಿ?

ಸದಾಶಿವ್ ಸೊರಟೂರು

‘ಕೈಲಾಗದವರು ಮೈ ಪರಚಿಕೊಂಡರಂತೆ!’ ಎಂಬ ಗಾದೆ ಡಬ್ಬಿಂಗ್ ವಿಷಯ ಚರ್ಚೆಗೆ ಬಂದಾಗಲೆಲ್ಲಾ ನನಗೆ ತುಂಬಾ ನೆನಪಾಗುತ್ತದೆ.

ಡಬ್ಬಿಂಗ್ ವಿರೋಧಿಸುವವರಲ್ಲಿ ನಾವು ಕೈಲಾಗದವರು ಎಂಬುದನ್ನು ಸ್ಪಷ್ಟವಾಗಿ ಒಪ್ಪಿಕೊಂಡಂತಾಗುತ್ತದೆ ಅಲ್ಲವೇ? ಓಹೋ, ಡಬ್ಬಿಂಗ್ ವಿಷಯದ ಚರ್ಚೆ ಬಂದ ತಕ್ಷಣ ಅಬ್ಬಾ! ಸಿನೆಮಾ ಇಂಡಸ್ಟ್ರಿಯವರಿಗೆ ಯಾವ ಪರಿಯ ಕನ್ನಡ ಪ್ರೇಮ ಉಕ್ಕಿ ಬರುತ್ತದೋ! ಕನ್ನಡ ನಾಡು ನುಡಿ, ಸಂಸ್ಕೃತಿಗೆ, ಕನ್ನಡಿಗರ ಬೆಳವಣಿಗೆಗೆ, ಕನ್ನಡದ ಬರವಣಿಗೆಗೆ ಕನ್ನಡ ಉಳಿಸಿ, ಬೆಳೆಸುವ ಮಾತಿಗೆ ಡಿಕ್ಶನರಿಯಾನ್ನಾದರೂ ಮೊರೆಹೊಕ್ಕಿ ಮಾತಿಗಿಳಿದುಬಿಡುತ್ತಾರೆ. ಡಬ್ಬಿಂಗ್ ವಿಷಯ ಬಂದಾಗ ಮಾತ್ರ ಇವರಿಗೆ ಕನ್ನಡ ನೆನಪಾಗುವುದೋ?

ಸಾವಿರಾರು ಕಲಾವಿದರು ಕೆಲಸ ಕಳೆದುಕೊಳ್ಳುತ್ತಾರೆ ಎಂಬುದನ್ನು ಈ ನೆಲೆಯಲ್ಲಿ ಒಪ್ಪಿಕೊಳ್ಳೋಣ. ಅಷ್ಟಕ್ಕೂ ಬದುಕಲಿಕ್ಕೆ ಇದೊಂದೇ ಕೆಲಸ ಅಂತ ಇದ್ಯಾ? ಈ ಕೆಲಸವಿಲ್ಲದಿದ್ದರೆ ಬದುಕೇ ಅಂತಹ ಇನ್ನೊಂದು ಕೆಲಸವನ್ನು ನಿಮಗೆ ಕೊಡುತ್ತದೆ ಮಾಡುವ ಹಂಬಲವಿದ್ದರೆ. ಅಲ್ಲವೇ? ಮತ್ತೊಂದು ಕ್ಷೇತ್ರದಲ್ಲಿ ನೀವು ಶಿಖರವನ್ನೇ ಮುಟ್ಟಬಹುದು ಅಲ್ಲವೇ?

ಡಬ್ಬಿಂಗ್ ಬೇಡವೆನ್ನುವುದು ಕೇವಲ ಸಿನೆಮಾ ಇಂಡೆಸ್ಟ್ರಿಯ ಬಹುತೇಕರು ಮತ್ತು ಒಂದೆರಡು ಸಾಮಾಜಿಕ ಸಂಘಟನೆಗಳ ವಾದವೇ ಹೊರತು ಹಣಕೊಟ್ಟು ಸಿನೆಮಾ ನೋಡುವ ಸಾಮಾನ್ಯ ಪ್ರಜೆಯದಲ್ಲ. ಬೇಕಾದರೆ ಒಂದು ಪ್ರಾಮಾಣಿಕ ಸರ್ವೆ ಕಾರ್ಯವೇ ನಡೆದುಬಿಡಲಿ. ಜನತೆ ಏನು ಬಯಸುತ್ತದೆ ಎಂಬುದು ಅವಾಗಲಾದರೂ ತಿಳಿದೀತು ಇವರಿಗೆ.

ನಾವೇನು ಪಾಪ ಮಾಡಿದೀವಿ ಅಂತ ಬೇರೆ ಭಾಷೆಯಲ್ಲಿನ ಕಥೆ, ದೃಶ್ಯ ವೈಭವ, ಅದ್ದೂರಿತನವನ್ನು ನಮ್ಮ ಭಾಷೆಯಲ್ಲಿ ನೋಡಲು, ಸವಿಯಲು ನೀವು ಅಡ್ಡಗಾಲು ಹಾಕುತ್ತಿದ್ದೀರಿ? ಹೋಗಲಿ ಅಂತಹ ಪ್ರಯತ್ನವನ್ನಾದರೂ ನೀವಾದರೂ ಮಾಡಿ ತೋರಿಸಬೇಡವೇ? ಕನ್ನಡದಲ್ಲಿ ಬಂದ ಒಳ್ಳೆಯ ಚಿತ್ರಗಳನ್ನು ಖಂಡಿತ ನೋಡಿ ಪ್ರೋತ್ಸಾಹಿಸುತ್ತಾರೆ ಕನ್ನಡಿಗರು. ಒಳ್ಳೆಯದನ್ನು ನೋಡಲು, ಪ್ರೋತ್ಸಾಹಿಸಲು, ಸವಿಯಲು ಗಡಿಯ ಹಂಗೇಕೆ?

ನಿಮಗೆ ರಿಮೇಕ್ ಮಾಡಲು ಬೇರೆ ಭಾಷೆಯ ಕಥೆ ಬೇಕು, ಶೂಟಿಂಗ್‍ಗೆ ಅಲ್ಲಿನ ಜಾಗ ಬೇಕು, ಬೇರೆ ರಾಜ್ಯದ ನಟ ನಟಿಯರು ಬೇಕು, ನಿರ್ದೇಶಕರು ಬೇಕು, ಕಲಾವಿದರು ಬೇಕು, ಅದರಿಂದ ಬರುವ ಲಾಭವೂ ಬೇಕು. ಆದರೆ ಅದೇ ಸಿನೆಮಾ ಇಲ್ಲಿ ನಿಮ್ಮ ಭಾಷೆಯಲಿ ಬರುತ್ತೆ ಅನ್ನುವುದಾದರೆ ಬೇಡ ಅಲ್ಲವೇ? ಅಂದರೆ ಅರ್ಥ ನೀವು ಪರೋಕ್ಷವಾಗಿ ಒಪ್ಪಿಕೊಂಡಂತೆ ಅಲ್ಲವೇ, ನಾವು ಪರಭಾಷೆಯ ಚಿತ್ರದ ಮಟ್ಟಿಗೆ ಬೆಳೆದಿಲ್ಲ ಎಂಬುದು! ಅಂತಹ ಒಂದು ಭಯವೇ ಇದಕ್ಕೆ ಕಾರಣ ಇರಬಹುದಾ?

ಡಬ್ಬಿಂಗ್‍ಲ್ಲಿ ಭಾಷೆಯ ಸ್ವಾದವನ್ನು ಕೆಡಿಸುತ್ತಾರೆ ಅನ್ನೋ ಒಂದು ಮಾತು ಕೂಡ ಇದೆ, ಕನ್ನಡತನಕ್ಕೆ ಪೆಟ್ಟು ಬೀಳುತ್ತಿದೆ ಅನ್ನೋ ಮಾತು ಕೂಡ ಇದೆ. ನಾವು ನಿಮ್ಮನ್ನು ಹಲವು ಕಾರ್ಯಕ್ರಮಗಳಲ್ಲಿ ನೋಡಿದ್ದೇವೆ, ಎಷ್ಟು ಜನ ನಟ ನಟಿಯರು ಶುದ್ದ ಕನ್ನಡದಲ್ಲಿ ಮಾತಾಡ್ತಾರೆ ಅಂತ! ನಿಮ್ಮ ಎಷ್ಟು ಮಕ್ಕಳು ಕರ್ನಾಟಕದ ಕನ್ನಡ ಶಾಲೆಯಲ್ಲಿ ಓದುತ್ತಿದ್ದಾರೆ? ಎಷ್ಟೋ ಕನ್ನಡ ಶಾಲೆಗಳು ಬಾಗಿಲು ಮುಚ್ಚುತ್ತಿದ್ದರೂ ಅದಕ್ಕೂ ನಿಮಗೆ ಸಂಬಂಧವೇ ಇಲ್ಲದಂತೆ ಕೂರುತ್ತೀರಿ. ಎಷ್ಟೋ ಶಿಕ್ಷಕರು ಕೆಲಸವಿಲ್ಲದೆ ಪರದಾಡುತ್ತಿಲ್ಲವೇ ಅವರ ಕೆಲಸದ ವಿಷಯವಾಗಿ ಯಾವಾಗ ದನಿ ಎತ್ತಿದ್ದೀರಿ? ಕನ್ನಡ ನಾಡಿನಲ್ಲಿ ಅನೇಕ ಸಮಸ್ಯೆಗಳಿವೆ ಅದಕ್ಕೆ ಬಲವಾಗಿ ಹೆಗಲು ಕೊಡುವ ಅಂಥಹ ಧೀಮಂತ ಕಾರ್ಯವನ್ನು ಯಾವುದು ಮಾಡಿದ್ದೀರಿ.

ಕಾವೇರಿ ಮತ್ತು ಮಹದಾಯಿಗೆ ಅಷ್ಟೇ ಸೀಮಿತ ನಿಮ್ಮ ಕೂಗು. ಕನ್ನಡವೆಂದರೆ ಬರೀ ಅವು ಎರಡೇ ಎಂದು ಭಾವಿಸಿದ್ದೀರಾ? ಡಬ್ಬಿಂಗ್ ಬಂದ್ರೆ ನಿಮ್ಮ ಅನ್ನಕ್ಕೆ ಯಾವುದೇ ತೊಂದರೆ ಇಲ್ಲ ಆದರೆ ನಿಮ್ಮ ವೈಭವದ ಜೀವನಕ್ಕೆ ಕಲ್ಲು ಬೀಳುತ್ತದೆ ಎಂಬ ಭಯವೇ? ಅದಕ್ಕಾಗಿ ಕನ್ನಡವನ್ನು ಮುಂದಿಟ್ಟುಕೊಂಡು ಮಾತಾಡುತ್ತೀರಿ? ನೀವು ಗಳಿಸುವ ಕೋಟಿ ಕೋಟಿಯಲ್ಲಿ ಈ ನಾಡಿಗೆ ಅಂತ ಎಷ್ಟು ಎತ್ತಿಟ್ಟಿದ್ದೀರಿ ಯಾಕೆಂದರೆ ನಾಡು ನುಡಿಯನ್ನು ಮುಂದಿಟ್ಟುಕೊಂಡು ಅದನ್ನು ಸಮರ್ಥಿಸಿಕೊಳ್ಳುವಾಗ ಹಾಗೆ ಕೇಳುವುದು ಸೂಕ್ತವೇ ಅಲ್ಲವೇ ನಾವು?

ಪತ್ರಕರ್ತರಾದ ಜೋಗಿಯವರು ಡಬ್ಬಿಂಗ್ ವಿರೋಧಿಸಿ ತುಂಬಾ ವ್ಯಂಗ್ಯವಾಗಿ ತಮ್ಮ ಪೇಸ್ಬುಕ್‍ನಲ್ಲಿ ಬರೆದುಕೊಂಡಿದ್ದಾರೆ. ಯಾರೋ ತಾಯಿ ಉದಾಹರಣೆ ಕೊಟ್ಟು ಹೇಳಿದ್ದನ್ನು ಬರೆದುಕೊಂಡಿದ್ದಾರೆ. ಅದು ಅವರ ಅಕ್ಷರ ಶ್ರೀಮಂತಿಕೆ. ನಿಮ್ಮ ತಾಯಿ ಸತ್ಯದೇವ್ ಐಪಿಎಸ್ ನೋಡ್ತಾರಾ ಅಂತ ಕೇಳ್ತಿರಲ್ಲ, ಜನ ನೋಡುವಂತ ಎಲ್ಲಾ ಸಿನೆಮಾಗಳನ್ನು ಕನ್ನಡ ಇಂಡಸ್ಟ್ರಿ  ಕೊಡ್ತಿದೀಯಾ? ಎಲ್ಲ ಸಿನೆಮಾಗಳನ್ನು ಎಲ್ಲ ವಯೋಮಾನದವರು ನೋಡಬಹುದಾ? ಹೇಳಿ.

ಆ ಸಿನೆಮಾ, ಈ ಸಿನೆಮಾ ಅಂತ ಬೇಡ ಸ್ವಾಮಿ, ಮುಕ್ತವಾಗಿ ಡಬ್ಬಿಂಗ್‍ಗೆ ಅವಕಾಶ ಮಾಡಿಕೊಡಿ. ತಾಯಿ ಬೇಕಾದ ಸಿನೆಮಾನ ತಾಯಿ ನೋಡಿಕೊಳ್ಳುತ್ತಾಳೆ, ಕಾಲೇಜು ಹುಡುಗ್ರು ನೋಡಬೇಕಾದ ಸಿನೆಮಾನ ಅವರು ನೋಡಿಕೊಳ್ಳುತ್ತಾರೆ. ಅಷ್ಟಕ್ಕೂ ಇವರು ಇಂತದ್ದೆ ನೋಡ್ತಾರೆ ಅಂತ ಜಡ್ಜ್ ಮಾಡೋಕೆ ನಾವು ಯಾರು?

ಬೇರೆ ಭಾಷೆಯ ಚಂದದ ಸಿನೆಮಾಗಳು ಬಂದು ನಮ್ಮ ವ್ಯವಹಾರವನ್ನು ಕಸಿಯುತ್ತವೆ ಅಂತ ನಂಬುವ ನೀವು ಅದನ್ನು ಮೀರಿಸಿ ರಾಷ್ಟ್ರಮಟ್ಟದಲ್ಲಿ ಮಿಂಚುವ, ಆಸ್ಕರ್‍ನ್ನು ಮುಟ್ಟಿ ಬರುವ ಸಿನೆಮಾಗಳನ್ನು ತಂದು ನಿಲ್ಲಿಸುತ್ತೇವೆ ಅಂತ ಯಾಕೆ ಮಾತಾಡುವುದಿಲ್ಲ. ಅವರು ಬಂದರೆ ನಾವು ಉಳಿಯುವುದಿಲ್ಲ ಎಂಬುದು ನಾವೇಷ್ಟು ವೀಕ್ ಅಂತ ಒಪ್ಪಿಕೊಂಡಂತೆ ಅಲ್ಲವೆ? ಬಲವಂತವಾಗಿ ತಡೆದು ನಾವು ಬೆಳೆಯುವುದು ಯಾವ ನ್ಯಾಯದಲ್ಲಿದೆ?

ಒಂದು ಬಾಲಿವುಡ್ ಸಿನೆಮಾವನ್ನೋ, ಹಾಲಿವುಡ್ ಸಿನೆಮಾವನ್ನೋ, ಮತ್ಯಾವುದೋ ಒಂದು ಭಾಷೆಯ ಸಿನೆಮಾವನ್ನು ಅದೇ ಅದ್ದೂರಿಯ ದೃಶ್ಯದಲ್ಲಿ ನೋಡಿ ಸವಿಯುವ ಅವಕಾಶವನ್ನು ಯಾಕೆ ತಪ್ಪಿಸುತ್ತೀರಿ? ಹಾಲಿವುಡ್‍ನಂತಹ ಸಿನೆಮಾವನ್ನು ನೀವೂ ಮಾಡಿಕೊಡುವುದಿಲ್ಲ, ಮಾಡುವವರಿಗೂ ಬಿಡುವುದಿಲ್ಲ ಅಂದರೆ ಇದ್ಯಾವ ನ್ಯಾಯ ಸ್ವಾಮಿ? ಅದು ಪ್ರಜೆಯ ಹಕ್ಕು ತಾನೆ? ಡಬ್ಬಿಂಗ್ ಬೇಕು ಬೇಡ ಅಂತ ನಿರ್ಧರಿಸುವುದು ಇಂಡೆಸ್ಟ್ರಿಯಲ್ಲ, ನೋಡುವ ಜನರು, ದೇಶದ ಕಾನೂನು. ಅದು ಆಗಲೇ ಒಪ್ಪಿಕೊಂಡಿರುವಾಗ ನಿಮ್ಮದೇನು ಮಧ್ಯೆ ತಕರಾರು?

ಸಾಹಿತ್ಯದಲ್ಲಿ ನಾವು ಇತರೆ ಭಾಷೆಗಿಂತ ಕೊಂಚ ಮುಂದೆ ಇದ್ದೀವಿ. ಅದು ನಮ್ಮ ಕನ್ನಡ ಕವಿಗಳ, ಸಾಹಿತಿಗಳ, ಬರಹಗಾರರ ಸತ್ವದ ಫಲ. ಬೇರೆಯವರನ್ನು ತಡೆದು ಅವರೆಂದೂ ಬೆಳೆಯಲಿಲ್ಲ. ಸತ್ವ ಯಾವತ್ತೂ ಕೂಡ ಒಂದು ಬೆಲೆಯನ್ನು ತಂದು ಕೊಡುತ್ತದೆ. ಬೆಂಗಳೂರು ಸಾಫ್ಟ್ ವೇರ್‍ಲ್ಲಿ ದಿಗ್ಗಜ ಅನಿಸಿಕೊಂಡಿದ್ದು ಅದರ ಬುದ್ದಿವಂತಿಕೆಯಿಂದ ಹೊರತು ಬೇರೆಯವರನ್ನು ದೂರವಿಟ್ಟು, ಅವರಿಗೆ ಗೊತ್ತಿಲ್ಲದಂತೆ ಅಲ್ಲ. ಇವೆಲ್ಲಾ ಆರೋಗ್ಯಯುತ ಸ್ಪರ್ಧೆಗಳು. ಅಂತಹ ಸ್ಪರ್ಧೆ ಸಿನೆಮಾರಂಗಕ್ಕೆ ಬೇಡವೇ ಬೇಡ ಎಂಬ ವಾದವೇನು!

ಡಬ್ಬಿಂಗ್ ಅಂದ ತಕ್ಷಣ ಯಾಕೆ ನೇರವಾಗಿ ನಾಡು ನುಡಿಯ ಕಡೆ ಹೊರಟು ಬಿಡುತ್ತೀರಿ. ಬೆಂಗಳೂರಿನಲ್ಲಿ ಕೇವಲ 37% ಕನ್ನಡವಿದೆ ಅದು ನಿಮಗೆ ಕಾಣಿಸುವುದಿಲ್ಲವೇ? ಅದು ಕನ್ನಡತನದ ನಷ್ಟವಲ್ಲವೇ? ಕನ್ನಡವನ್ನು ಉಳಿಸಲು ನೀವೇನು ಮಾಡಿದ್ದೀರಿ? ಸಿನೆಮಾ ಒಂದನ್ನು ಬಿಟ್ಟು. ಜೋಗಿಯವರು ‘ತಾಯಿ ಸೆಂಟಿಮೆಂಟ್’ ತಂದು ಡಬ್ಬಿಂಗ್ ಪರವಾಗಿ ಮಾತಾಡಬೇಡಿ ಅಂತಾರೆ, ಕನ್ನಡ ನಾಡು ನುಡಿಯ ಸೆಂಟಿಮೆಂಟ್ ತಂದು ಡಬ್ಬಿಂಗ್ ಬೇಡ ಅಂತ ಹಠ ಮಾಡುತ್ತಿರುವವರು ಯಾರು?

ಡಬ್ಬಿಂಗ್ ಬರಲಿ. ಇಷ್ಟ ಆದವರು ನೋಡಿಕೊಳ್ಳಲಿ. ಉಳಿವಿಗಾಗಿ ಹೋರಾಟ ಅನ್ನುವುದು ಪ್ರಕೃತಿಯ ನಿಯಮ. ಕನ್ನಡ ಸಿನೆಮಾ ಉಳಿಯಬೇಕಾದರೆ ಡಬ್ಬಿಂಗ್ ಸಿನೆಮಾದೊಂದಿಗೆ ಸ್ಪರ್ಧೆಗೆ ನಿಲ್ಲಲ್ಲಿ. ಬೇರೆ ಭಾಷೆಗಿಂತ ಚನ್ನಾಗಿ ಸಿನೆಮಾ ನೀಡುವ ಹಠ ಬರಲಿ. ಜನ ಅದನ್ನು ಮೆಚ್ಚಿಕೊಂಡು ಅವರಾಗಿ ಅವರೇ ಡಬ್ಬಿಂಗ್ ಸಿನೆಮಾ ನೋಡದನ್ನು ನಿಲ್ಲಿಸಿ ಅಪ್ಪಟ ಈ ಮಣ್ಣಿನ ಸಿನೆಮಾ ನೋಡುತ್ತಾರೆ. ಮರ ಸುತ್ತಿಸಿಕೊಂಡು, ಲಾಂಗ್ ಮಚ್ಚು ಹಿಡಿದುಕೊಂಡು ರೀಲು ಸುತ್ತಿಸಿ ನೋಡು ಅಂದ್ರೆ ಯಾರು ನೋಡ್ತಾರೆ?

ಡಬ್ಬಿಂಗ್‍ನ ದಾಳಿಯ ಮಧ್ಯೆಯಾದರೂ ಕನ್ನಡ ಸಿನೆಮಾಗಳು ಗುಣಮಟ್ಟದಲ್ಲಿ ಎದ್ದು ನಿಲ್ಲಲಿ, ಡಬ್ಬಿಂಗ್ ಬೇಡ ಎಂಬ ನೆಪ ಹುಡುಕುವ ಬದಲು.

‍ಲೇಖಕರು avadhi

March 5, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: