ಕ್ಲಾಸಿಕಲ್ ಟಚ್‌ಅಪ್‌ನ ಯಕ್ಷ ಭಾಗವತರು

ರಾಘವೇಂದ್ರ ಬೆಟ್ಟಕೊಪ್ಪ 

 

ಕ್ಲಾಸಿಕಲ್ ಟಚ್‌ಅಪ್‌ನ ಯಕ್ಷ ಭಾಗವತರು
ಗಾನ ‘ಕೋಗಿಲೆ’ಯ ಇಷ್ಟದ ಪದ್ಯಗಳು

ಇವರು ಯಕ್ಷಗಾನದ ಪೌರಾಣಿಕ ಆಖ್ಯಾನದ ಪ್ರಸಿದ್ಧ ಭಾಗವತರು. ಅದೇಕೋ ಗೊತ್ತಿಲ್ಲ. ಅವರು ಒಂದು ಕ್ಷಣ ಬಿಡುವಿದ್ದರೂ ಸಾಕು, ಹಿಂದುಸ್ತಾನಿಯ ಪದ್ಯಗಳನ್ನು, ಹಳೆಯ ಗೀತೆಗಳನ್ನು ಗುಣಗುಣಿಸುತ್ತಲೇ ಇರುತ್ತಾರೆ. ಸಂಗೀತದ ರಾಗಗಳ ಜೊತೆ ಒಡನಾಟ ನಡೆಸುತ್ತಾರೆ. ಇವರು ಭಾಗವತಿಕೆಗೆ ಕೂತರೆ ಸಾಕು, ಅಲ್ಲಿನ ಪದ್ಯಗಳಿಗೂ ಈ ಗುಣಗುಡುಸಿವಿಕೆಯ ಪರಿಣಾಮ ಕಾಣುತ್ತದೆ. ಕಲಿಕೆಯ ಗುಣ ಬೆಳಸಿಕೊಂಡ ಅಪರೂಪದ ಕಲಾವಿದರು. ಇಷ್ಟೇ ಅಲ್ಲ, ಅವರು ಕಲೆಯಲ್ಲಿ ತಲ್ಲೀನವಾಗುವದೂ ಕುತೂಹಲ ಮೂಡಿಸುತ್ತದೆ.

ನಿಜ ಇವರು ಬಡಗಿನ ಯಕ್ಷಗಾನದ ಪ್ರಸಿದ್ಧ ಕಲಾವಿದರು. ಕೇಶವ ಹೆಗಡೆ ಕೊಳಗಿ. ಕಳೆದ ಮೂರುವರೆ ದಶಕಗಳಿಂದ ಯಕ್ಷಗಾನವನ್ನೇ ಉಸಿರಾಗಿಸಿಕೊಂಡ ಅಪರೂಪದ ಮಂಗಲ ಸ್ವರದ ಭಾಗವತರು. ಅವರು ವೇದಿಕೆಯಲ್ಲಿ ಯಕ್ಷಗಾನದ ಮೂಲಕ ಪದ್ಯಗಳ ಮೂಲಕ ಆಖ್ಯಾನ ಕಟ್ಟಿಕೊಟ್ಟರೆ ಇತ್ತ ವೇದಿಕೆ ಇಳಿದರೆ ಅವರು ಗುನುಗುಡಿಸುವದು ಹಿಂದುಸ್ತಾನಿ ಸರಿಗಮಪ ಅಥವ ಅವರ ಇಷ್ಟದ ಯಕ್ಷಗಾನೇತರ ಪದ್ಯಗಳನ್ನೇ.

ಇವರೇ ಅವರು:

ಇವರು ಉತ್ತರ ಕನ್ನಡದ ಸಿದ್ದಾಪುರದ ಪುಟ್ಟ ಊರು ಕೊಳಗಿ. ಈ ಊರಿನ ಹೆಸರನ್ನು ಎತ್ತರಿಸಿದವರು. ಯಕ್ಷಗಾನದ ಮೂಲಕ. ಹಂಗಾರಕಟ್ಟ ಯಕ್ಷಗಾನ ಕಲಾ ಕೇಂದ್ರ, ಹಂಗಾರಕಟ್ಟ ಐರೋಡಿ ಉಡುಪಿ (೧೯೮೪-೮೫)ಯಲ್ಲಿ ಕಲಿತವರು.  ಖ್ಯಾತ ಭಾಗವತರಾಗಿದ್ದ ಶ್ರೀ ನಾರ್ಣಪ್ಪ ಉಪ್ಪೂರು ಹಾಗೂ ಶ್ರೀ ಕೆ.ಪಿ.ಹೆಗಡೆ ಅವರ ಪ್ರಿಯ ಶಿಷ್ಯ. ಕಳೆದ ಮೂರುವರೆ ದಶಕಗಳಿಂದ ನಿರಂತರವಾಗಿ ಯಕ್ಷಗಾನದ (ಬಡಗು ಶೈಲಿ) ಪ್ರಧಾನ ಭಾಗವತ. ರಾಮ ನಿರ್ಯಾಣ, ಸತ್ಯ ಹರಿಶ್ಚಂದ್ರ, ಕರ್ಣಪರ್ವ, ಲವಕುಶ, ಬ್ರಹ್ಮ ಕಪಾಲ, ರತ್ನಾವತಿ ಕಲ್ಯಾಣ, ಕಾರ್ತ್ಯವೀರಾರ್ಜುನ, ಚಂದ್ರಹಾಸ ಚರಿತ್ರೆ, ರಾಮಾಂಜನೇಯ, ಭೀಷ್ಮ ವಿಜಯ ಸೇರಿದಂತೆ ನೂರಾರು ಪೌರಾಣಿಕ ಆಖ್ಯಾನಗಳನ್ನು ನಡೆಸಿಕೊಡುವಲ್ಲಿ ಸಿದ್ಧ ಹಸ್ತರು. ಮಂಗಲ ಸ್ವರದ ಅಪರೂಪದ ಭಾಗವತಿಕೆಗೆ ಲಕ್ಷಾಂತರ ಅಭಿಮಾನಿಗಳನ್ನು ಸೃಷ್ಟಿಸಿಕೊಂಡವರು.

ಯಕ್ಷಗಾನದ ಖ್ಯಾತ ಮೇಳಗಳಾದ ಕಮಲಶಿಲೆ, ಮುಲ್ಕಿ, ಪಂಚಲಿಂಗೇಶ್ವರ ಯಕ್ಷಗಾನ ಮಂಡಳಿ, ಶಿರಸಿ ಯಕ್ಷಗಾನ ಮಂಡಳಿ, ಶ್ರೀವೀರಾಂಜನೇಯ ಯಕ್ಷ ಮಿತ್ರ ಮಂಡಳಿ ಬಚ್ಚಗಾರ, ಶ್ರೀಗುರುಪ್ರಸಾದಿತ ಯಕ್ಷಗಾನ ಮಂಡಳಿ ಸಾಲಿಗ್ರಾಮ , ಪೂರ್ಣಚಂದ್ರ ಯಕ್ಷಗಾನ ಮಂಡಳಿ ಕೊಂಡದಕುಳಿ, ಯಾಜಿ ಯಕ್ಷಮಿತ್ರ ಮಂಡಳಿ ಮೇಳಗಳಲ್ಲಿ ಪ್ರಧಾನ ಭಾಗವತರಾಗಿ ಕಾರ್ಯ ಮಾಡಿದವರು.  ಭಾಗವತಿಕೆಯನ್ನು ಶ್ರದ್ಧೆಯಿಂದ ನಡೆಸಿಕೊಂಡು ಬಂದವರು. ಸಾಂಪ್ರದಾಯಿಕ ಮಟ್ಟು ಬಿಡದೇ ಅದನ್ನು ಉಳಿಸಿಕೊಂಡು ಬಂದವರು.

ತಲೆಮಾರುಗಳ ಕೊಂಡಿ:

ಯಕ್ಷಗಾನದ ಹಿರಿಯ ಕಲಾವಿದರಾದ ದೇವರು ಹೆಗಡೆ, ಪಿ.ವಿ.ಹಾಸ್ಯಗಾರ, ಮಹಾಬಲ ಹೆಗಡೆ, ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಶಂಭು ಹೆಗಡೆ,  ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ, ವಾಸುದೇವ ಸಾಮಗ, ಎಂ.ಎಲ್.ಸಾಮಗ, ಕೊಂಡದಕುಳಿ ರಾಮಚಂದ್ರ ಹೆಗಡೆ, ಕೃಷ್ಣ ಯಾಜಿ, ಗಣಪತಿ ಭಟ್ಟ ಕಣ್ಣಿ, ಗಣಪತಿ ಹೆಗಡೆ ತೋಟಿ, ವಿನಾಯಕ ಹೆಗಡೆ, ವಿ. ಉಮಾಕಾಂತ ಭಟ್ಟ ಸೇರಿದಂತೆ ಅನೇಕ  ಸೇರಿದಂತೆ ಅನೇಕ ಹಿರಿಯ ಕಿರಿಯ ಕಲಾವಿದರನ್ನು ಕುಣಿಸಿದ್ದಾರೆ. ಮಕ್ಕಳಿಂದಲೂ ಹಿಡಿದು ದೊಡ್ಡವರ ತನಕವೂ ಪದ್ಯ ಹೇಳಿ ರಂಗದಲ್ಲಿ ಆಡಿಸಿದ್ದಾರೆ.

ಶಿರಸಿ, ಶಿವಮೊಗ್ಗ, ಮಂಗಳೂರು, ಉಡುಪಿ, ಮೈಸೂರು, ಬೆಂಗಳೂರು, ತಿರುಪತಿ, ಮುಂಬಯಿ, ದೆಹಲಿ, ಪೂನಾ, ಚೆನ್ನೈ, ಕೇರಳ, ಅಮೇರಿಕಾ, ದುಬೈ, ಬೆಹರಿನ್, ಸಿಂಗಾಪುರಗಳಲ್ಲಿ ಪದ್ಯ ಹೇಳಿದ್ದಾರೆ. ದ್ವಂದ್ವ ಭಾಗವತಿಕೆ ಕೂಡ ಮಾಡಿದ್ದಾರೆ. ಇವರ ಹಾಡಿನ ಸಿಡಿ, ಯಕ್ಷಗಾನ ಪ್ರಸಂಗಗಳ ಡಿವಿಡಿಗಳೂ ಬಂದಿವೆ. ಅನಂತ ಹೆಗಡೆ ಕೊಳಗಿ ಯಕ್ಷ ಪ್ರತಿಷ್ಠಾನ ಕೂಡ ನಡೆಸುತ್ತಿದ್ದಾರೆ. ಹಳೆ, ಹೊಸ ತಲೆಮಾರಿನ ಕೊಂಡಿಯಾಗಿದ್ದಾರೆ.

ಯಕ್ಷಗಾನ ನೃತ್ಯ ರೂಪಕದ ಮೂಲಕ ವಿಶ್ವಶಾಂತಿ ಸಂದೇಶ ಸಾರುವ ರೂಪಕಕ್ಕೆ ಕೊಳಗಿ ಅವರು ಧ್ವನಿ ಆಗಿದ್ದಾರೆ. ಯಕ್ಷಗಾನ ಜಾನಪದ ಕಲೆಯಾದರೂ ಶಾಸ್ತ್ರೀಯ ಕಲೆಯಾದ ಹಿಂದುಸ್ತಾನಿ ಸಂಗೀತದ ಜೊತೆಗೆ ಜುಗಲ್ ಬಂದಿ ನಡೆಸಿ ಅನೇಕ ಕಾರ್ಯಕ್ರಮಗಳನ್ನು ನಾಡು, ಹೊರನಾಡುಗಳಲ್ಲಿ ನೀಡಿದ್ದಾರೆ. ಯಕ್ಷಗಾನದ ತಾಕತ್ತನ್ನು ಶಾಸ್ತ್ರೀಯ ಕಲೆಯ ನಡುವೆಯೂ ಬೆಳಗಿಸಿದ್ದು ಸಾಧನೆಗೆ ಇನ್ನೊಂದು ಗರಿ. ಕೊಳಲು, ತಬಲಾಗಳ ನಡುವೆ ಹಿಂದುಸ್ತಾನಿ ಗಾಯನದ ಪದ್ಯಗಳಿಗೆ ಭಾಗವತಿಕೆಯ ಗಮಕ ಗಾಂಭೀರ್ಯ ಒದಗಿಸಿದ್ದಾರೆ. ಈ ಮೂಲಕ ಶಾಸ್ತ್ರೀಯ ಸಂಗೀತ ಲೋಕದಲ್ಲೂ ಹೆಸರು ಮಾಡಲು ಕಾರಣವಾಗಿದೆ.

ಗದಗದಲ್ಲಿ ಕನ್ನಡದ ರಾಷ್ಟ್ರ ಕವಿ ಕುವೆಂಪು ಅವರ ಪದ್ಯಗಳಿಗೆ ಯಕ್ಷಗಾನ ಭಾಗವತಿಕೆಯಲ್ಲಿ ಮರು ಹುಟ್ಟು ನೀಡಿದ್ದಾರೆ. ಒಂದೇ ಮಾತರಂ ಪದ್ಯಕ್ಕೆ ಯಕ್ಷಗಾನದ ಧ್ವನಿಯಾಗಿದ್ದಾರೆ. ಬಸವಣ್ಣನವರ ವಚನಗಳನ್ನು ಯಕ್ಷಗಾನ ಶೈಲಿಯಲ್ಲಿ ರಾಜ್ಯದ  ಎಲ್ಲಡೆ ಪಸರಿಸಿದ್ದಾರೆ. ಇವರ ಭಾಗವತಿಕೆಯ ಸೀಡಿ ೩೦೦ಕ್ಕೂ ಅಧಿಕ ಮಾರುಕಟ್ಟೆಯಲ್ಲಿದೆ. ನಾಡಿನ ಅನೇಕ ಪತ್ರಿಕೆಗಳು ಕೊಳಗಿ ಅವರನ್ನು ಹೊಗಳಿವೆ. ಉದಯವಾಣಿ, ಯಕ್ಷರಂಗ, ಸುಧಾ, ಪ್ರಜಾವಾಣಿ, ಹಸಿರುವಾಸಿ, ಕರ್ಮವೀರಗಳಲ್ಲೂ ಸೇರಿದಂತೆ ಅನೇಕ ಪತ್ರಿಕೆಗಳು ಪುರವಣಿಯಲ್ಲಿ ಲೇಖನಕ್ಕೆ ಆದ್ಯತೆ ನೀಡಿವೆ.

ಅಪ್ಪ ಅನಂತ ಹೆಗಡೆ ಸ್ವತಃ  ಯಕ್ಷಗಾನ ಕಲಾವಿದರಾದರೂ ಮಗನಿಗೆ ಈ ಉದ್ಯೋಗ ಬೇಡ ಎಂಬಂತಿತ್ತು. ಆದರೆ, ಎಸ್ಸೆಸ್ಸೆಲ್ಸಿ ಮುಗಿಸುತ್ತಿದ್ದಂತೇ ಈ ಬಾಲಕನಿಗೆ ಚಂಡೆ, ಮದ್ದಲೆ, ತಾಳದ ಲಯಗಳು ಕಿವಿಯಲ್ಲಿ ಗುಣುಗುಡಿಸಲು ಶುರು ಮಾಡಿದವು. ಅಂದಿನ ಸೆಳೆತ ಇಂದು ಪ್ರೇಕ್ಷಕರನ್ನೇ ತನ್ನತ್ತ ಸೆಳೆಯುವಂತೆ ಮಾಡಿದೆ.

ಕೇಶವ ಹೆಗಡೆ ಅವರಿಗೆ ಕರಾವಳಿ ಕೋಗಿಲೆ, ಗಾನ ಗಂಧರ್ವ, ಯಕ್ಷ ಬಸವ, ಗಾನ ಗಂಧರ್ವ, ಯಕ್ಷ ಸಂಗೀತ ಕಲಾಶ್ರೀ, ಕರಾವಳಿ ರತ್ನಾಕರ ಸೇರಿದಂತೆ ಅನೇಕ ಪುರಸ್ಕಾರಗಳೂ ಬಂದಿವೆ. ಎಸ್‌ವಿಬಿಸಿ ಚಾನೆಲ್, ಚಂದನ ದೂರದರ್ಶನ, ಸುದ್ದಿ ಟಿವಿಗಳಲ್ಲಿ ಸಂದರ್ಶನ, ಯಕ್ಷಗಾನ ಪ್ರಸಾರ ಆಗಿವೆ. ಸ್ವರ ಮಾಧುರ್ಯ, ಮಂಗಲ ಸ್ವರ, ಮೂರು ನಾಲ್ಕು ಗಂಟೆಗಳ ಕಾಲ ಕಥೆ ನಡೆಸುವ ಶೈಲಿ, ರಂಗ ಪ್ರಸ್ತುತಿಯಲ್ಲಿ ತಾಳ ವೈವಿಧ್ಯ, ಯಕ್ಷಗಾನ ರಂಗ ನಿರ್ವಹಣೆಯ ಕೌಶಲ ವಿಶೇಷತೆ.

ನಿರೂಪಿಸಿದ ಭಾಗವತ:

ಬಿಳೆ, ೨, ಕಪ್ ೨, ಬಿಳೆ ೩, ಕಪ್ ೩ರ ಶೃತಿಯಲ್ಲೂ ಇಂಪಾಗಿ ಪದ್ಯ ಹೇಳುವ ಭಾಗವತರು. ಅದು ಇವರ ಕಂಠಸಿರಿಯ ಸೊಗಸು. ಮಧ್ಯಮ ಲಯದಲ್ಲಿ ಪ್ರಸ್ತುತಿ ಇನ್ನೊಂದು ವಿಶೇಷತೆ. ಇಂಥ ಶುದ್ಧ ಶೈಲಿಯ, ಶುದ್ದ ಶಬ್ದಗಳ ಬಳಕೆಯ, ಕೊಳಗಿ ಶೈಲಿ ಎಂದೇ ನಿರೂಪಿಸಿದ ಭಾಗವತ ಇನ್ನೊಬ್ಬರಿಲ್ಲ ಎಂಬ ಶ್ಲಾಘನೆ.

ಶಂಕರಾ… ನಾದ ಶರೀರ:

ಇಂತಿಪ್ಪ ಕೊಳಗಿ ಅವರಿಗೆ ಇಷ್ಟವಾದ ಪದ್ಯ ಎಸ್‌ಪಿ ಬಾಲಸುಬ್ರಹ್ಮಣ್ಯ ಅವರು ಶಂಕರ ನಾದ ಶರೀರಾಪರ  ವೇದವಿಹಾರಾಹರ… ಯಾವತ್ತೂ  ಇವರ ಗುನುಗುಡಿಸುತ್ತಲೇ ಇರುತ್ತಾರೆ.
ಹಿಂದುಸ್ತಾನಿಯ ಪ್ರಸಿದ್ಧ ಗಾಯಕ ಭೀಮಸೇನ ಜೋಶಿ ಅವರು ಹಾಡಿದ ಕೈಲಾಸ ವಾಸ ಗೌರೀಶ ಈಶ, ತೈಲ ಧಾರೆಯಂತೆ ಮನಸೆ ಕೊಡು ಹರಿಯಲ್ಲಿ ಶಂಭೋ ಇನ್ನಷ್ಟು ಆಪ್ತ.

ಬಾಲಮುರಳಿ ಕೃಷ್ಣ ಹಾಗೂ ಜೋಶಿ ಅವರ ಜೊತೆಗಿನ ದ್ವಂದ್ವ, ಹರಿಪ್ರಸಾದ ಚೌರಾಸಿಯಾ ಬಾಲ ಮುರಳಿ ಕೃಷ್ಣ ಅವರ ಹಾಡುಗಳು, ಎಂ.ಎಸ್ ಸುಬ್ಬಲಕ್ಷ್ಮೀ ಅವರ ಭಜನ್, ಲತಾ ಮಂಗೇಷ್ಕರ್ ಅವರ ಹಾಡುಗಳು ಎಂದರೆ ಮುದ ಕೊಡುತ್ತವೆ.
ಜೋಶಿ ಅವರ ಭಾಗ್ಯದ ಲಕ್ಷ್ಮೀ ಬಾರಮ್ಮ, ವಸಂತರಾವ್ ದೇಶಪಾಂಡೆ ಮೃಗನಯನಾ ರಸಿಕ ಮೋಹಿನಿ, ಭಾಮಿನಿ ಮೋಹಿನಿ  ಮನ ಸೆಳೆದಿವೆ. ಯಕ್ಷಗಾನದಲ್ಲಿ ಕೃಷ್ಣಾರ್ಜುನದ ಮಾಣಿಸಿನಿ ಮನಿಯೇ ಬಾರೆ…, ರಾಮ ನಿರ್ಯಾಣದ ಕೇಳಯ್ಯ ರಾಮ ಕೇಳಯ್ಯ, ರಾಮ ನಿರ್ಯಾಣದ ನೋವು ನಲಿವಿನಿಂದ ಕೂಡಿದ ಜೀವನ,

ವಿಶ್ವ ಶಾಂತಿ ಸಂದೇಶ ಯಕ್ಷ ನೃತ್ಯ ಶ್ರೀಕೃಷ್ಣ ವಂದೇ ರೂಪಕ ಹಾಲ ಮಾರಲೆಂದು ಭರದಲಿ ಕೊಡವ ಹೊತ್ತು, ಸತ್ಯಹರಿಶ್ಚಂದ್ರದ ಹಲವು ಗಿರಿ ಕಾನನ, ಕಂಡ ಸರ್ವರ ಪಾದವಾ ಅಂಗದ ಸಂಧಾನದ ಏನಪ್ಪ ರಾವಣೇಂದ್ರ ನೀ ಜಾನಕಿಯನ್ನು ಕಾಣದಂತೆ ಕದ್ದು ತರಬಹುದೇಮ್ಯ., ಬಬ್ರುವಾನ ಕಾಳಗದ ಅಹುದೇ ಎನ್ನಯ ರಮಣ, ಸತ್ಯ ಹರಿಶ್ಚಂದ್ರ ಒಡಲಿ ಉರಿಯನಿಕ್ಕಿದೆ, ಎತ್ತಿದ ತೋಳ ಕಡಿದು ದುಃಖವ ನೀಡಿದೆ… ತಮ್ಮಾ ಕೇಳಲೋ ಧರ್ಮ ಸಂಕಟ  ಅವರ ಇಷ್ಟದ ಪದ್ಯಗಳು. ಕೆಲವು ಪದ್ಯಗಳು ಪ್ರೇಕ್ಷಕರಿಂದ ಕಣ್ಣೀರೂ ಹಾಕಿಸಿವೆ.ಕನ್ನಡದ ಭುವನೇಶ್ವರಿ ಸಿದ್ದುಪರದ ಭುವನಗಿರಿ ಮೇಲಿನ ಭುವನೇಶ್ವರಿ ದೇವ ಪಾಲಿಸೆ ದಯದಿ ಶ್ರೀ ಭುವನಗಿರೇಶ್ವರಿ, ಇಡಗುಂಜಿ ಮೇಲಿನದ್ದುನಂಬಿದೆ ಹೇರಂಭ ನಿನ್ನನ್ನು  ಪದ್ಯ ಮಂಗಲ ಪದ್ಯದಲ್ಲಿ ಕೇಳುಗರ ಮನವನ್ನೂ ಗೆಲ್ಲುತ್ತಾರೆ!

‍ಲೇಖಕರು avadhi

June 19, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Anant Hegde

    ಸುಂದರ ಪರಿಚಯ .ತಿಳಿಯದ ಅನೇಕ ವಿಚಾರಗಳನ್ನು ಒಳಗೊಂಡಿದೆ .ಕೊಳಗಿ ಭಾಗವತಿಕೆ ,ಅವರ ವಿಶೇಷ ಕುತೂಹಲಕಾರಿ ,ಲೇಖಕ ಬೆಟ್ಕೊಪ್ಪ ಅಭಿನಂದಾಹ೯ರು –ಅನಂತಹೆಗ್ಡೆ ,ಬಾಳೇಗದ್ದೆ

    ಪ್ರತಿಕ್ರಿಯೆ
  2. P. Bilimale

    He is an excellent Bhagavat. One of the above photo has taken at Delhi. We have organized a show there.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: