ಶಿವರಾಮ ಕಾರಂತರನ್ನು ಮಾತನಾಡಿಸುವ ದುಸ್ಸಾಹಸ ಮಾಡಿದ್ದೆ

ಚಿದಂಬರ ಬೈಕಂಪಾಡಿ

ಕಡಲತಡಿಯ ಭಾರ್ಗವ ಸಾಹಿತಿ ಡಾ.ಕೆ.ಶಿವರಾಮ ಕಾರಂತರು ಅಂದರೆ ಮೈರೋಮಾಂಚನ ಅವರ ವಿದ್ವತ್ ಗೆ, ಅವರ ಮಾತಿನ ಪ್ರಖರತೆ ಎಷ್ಟೆಂದರೆ ಮತ್ತೆ ಅದರಾಚೆಗೆ ಪ್ರಶ್ನೆ ಮಾಡುವಂತಿಲ್ಲ. ಅವರ ಮಾತಿಗೆ ವಿರುದ್ಧವಾಗಿ ಮಾತನಾಡಿದರೆ ಬೆವರಿಳಿಸಿಕೊಳ್ಳಬೇಕಿತ್ತು. ಸಿಟ್ಟು ಬಂದರೆ ದೂರ್ವಾಸ, ಶಾಂತವಾಗಿದ್ದರೆ ಮಕ್ಕಳಿಗಿಂತಲೂ ಚಿಕ್ಕ ಮಕ್ಕಳಾಗುತ್ತಿದ್ದರು. ಅವರು ಮೂಡ್ ಚೆನ್ನಾಗಿದ್ದರೆ ಪುಟಾಣಿ ಮಕ್ಕಳನ್ನು ಕರೆದು ಮಾತನಾಡಿಸಿ ಅವರ ನಗುವಿಗೆ ತಮ್ಮ ನಗುವನ್ನೂ ಬೆರೆಸಿ ಆಟವಾಡುತ್ತಿದ್ದರು. ಕಾರಂತರನ್ನು ಅರ್ಥಮಾಡಿಕೊಳ್ಳುವುದೆಂದರೆ ಸುಲಭವಾಗಿರಲಿಲ್ಲ ಅವರು ಬದುಕಿರುವ ತನಕವೂ.

ಅವರು ಎಷ್ಟು ಖಡಕ್ಕಾಗಿ ಮಾತನಾಡುತ್ತಿದ್ದರು ಎಂದರೆ ಅವರ ಮಾತಿನ ದಾಳಿಗೆ ಸಿಕ್ಕಿದರೆ ಯಾರಿಗೂ ಮುಖ ತೋರಿಸುವಂತಿರಲಿಲ್ಲ. ಅವರು ಯಾವೊತ್ತೂ ಕಾರ್ಯಕ್ರಮಗಳಿಗೆ ತಡವಾಗಿ ಬರುವ ಪರಿಪಾಠವಿರಲಿಲ್ಲ. ಸಮಯಕ್ಕೆ ಮುಂಚಿತವಾಗಿಯೇ ಬರುವುದು ಅವರ ಅಭ್ಯಾಸ. 1984ರ ಕೊನೆಯ ದಿನಗಳು. ಮಂಗಳೂರು ಪುರಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ. ಮುಂಜಾನೆ ಕಾರ್ಯಕ್ರಮದಲ್ಲಿ ಡಾ.ಶಿವರಾಮ ಕಾರಂತರು ಭಾಗವಹಿಸುವ ಕಾರ್ಯಕ್ರಮ. ಪುರಭವನದಲ್ಲಿ ಜನರೇ ಇಲ್ಲ. ಸಂಘಟಕರೂ ಕೂಡಾ ತಮ್ಮ ತಮ್ಮ ಕೆಲಸಗಳಲ್ಲಿ ಮಗ್ನರಾಗಿದ್ದರು. ಕಾರಂತರು ನಿಗದಿತ ಸಮಯಕ್ಕಿಂತ ಹತ್ತು ನಿಮಿಷ ಮುಂಚಿತವಾಗಿಯೇ ಬಂದು ಪುರಭವನದ ಹಾಲ್ ನಲ್ಲಿ ಕೊನೆಯ ಸಾಲಿನ ಮೂಲೆಯಲ್ಲಿ ಕುಳಿತರು.

ಕಾರಂತರು ಬಂದಿದ್ದಾರೆಂದು ಹೇಳಿದ ಕೂಡಲೇ ಅಂದಿನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿದ್ದ ಕೀಕಾನ ರಾಮಚಂದ್ರ ಅವರು ಕಾರಂತರ ಬಳಿಗೆ ಹೋಗಿ ಮುಂದಿನ ಸಾಲಿಗೆ ಬರುವಂತೆ ಕೇಳಿಕೊಂಡರು. ಅದಕ್ಕೆ ಕಾರಂತರು ನನಗೆ ಇಲ್ಲೇ ಹಿತವಾಗಿದೆ ಎಂದಷ್ಟೇ ಹೇಳಿದರು. ಅಷ್ಟರಲ್ಲಿ ಎಲ್ಲೂರು ಉಮೇಶ್ ರಾವ್ (ಸಾಹಿತ್ಯ ಪರಿಚಾರಕರು)ಬಂದು ಕಾರಂತರಿಗೆ ನಮಸ್ಕರಿಸಿ ಎರಡು ಕುರ್ಚಿ ಬಿಟ್ಟು ಕುಳಿತು ಮಾತಿಗೆ ತೊಡಗಿದರು.

ಕಾರಂತರ ಬಗ್ಗೆ ಓದಿ ತಿಳಿದುಕೊಂಡಿದ್ದ ನನಗೆ ಅವರು ಕೋಪಿಷ್ಟ ಎನ್ನುವ ಮಾಹಿತಿ ಇತ್ತೇ ಹೊರತು ಅವರ ಕೋಪದ ದರ್ಶನವಾಗಿರಲಿಲ್ಲ. ಅವರು ಕ್ಷಣ ಕ್ಷಣಕ್ಕೂ ಕುಳಿತಲ್ಲೇ ಬೆರೆ ಬೇರೆ ಭಂಗಿಯಲ್ಲಿರುತ್ತಿದ್ದರು. ಮುಖವನ್ನು ಒಂದು ಕೈನಿಂದ ಮುಚ್ಚಿಕೊಂಡು ಕುಳಿತರೆ ಮತ್ತೊಂದು ಕ್ಷಣದಲ್ಲಿ ಕುರ್ಚಿಗೆ ಆರಾಮವಾಗಿ ಒರಗಿ ಕುಳಿತುಕೊಳ್ಳುತ್ತಿದ್ದರು, ಅಸ್ಪಷ್ಟವಾಗಿ ಕೇಳಿಸಿದರೆ ಕಿವಿಯನ್ನು ಹತ್ತಿರ ಕೊಂಡುಹೋಗಿ ಕೇಳುತ್ತಿದ್ದರು. ಇವರನ್ನು ದೂರದಿಂದಲೇ ನೋಡುತ್ತಿದ್ದ ನನಗೆ ಅವರ ಹತ್ತಿರಕ್ಕೆ ಹೋಗಿ ಒಂದಷ್ಟು ಫೋಟೋ ತೆಗೆದುಕೊಂಡರೆ ಹೇಗೆ ಅನ್ನಿಸಿತು.

ನನ್ನೊಂದಿಗಿದ್ದ ಛಾಯಾಗ್ರಾಹಕ ಕೇಶವ ವಿಟ್ಲ ಅವರಿಗೆ ಹೋಗಿ ಕಾರಂತರ ಫೋಟೋ ತೆಗೆಯಲು ಹೇಳಿದೆ. ಬೇಡಪ್ಪ ಬೇಡಾ ಅವರು ಸಿಟ್ಟಿಗೆದ್ದರೆ ಎಂದರು. ನೀವೂ ಬಂದರೆ ನಾನು ಫೋಟೋ ತೆಗೆಯುತ್ತೇನೆ ಎಂದರು.

ಹೇಗಾದರೂ ಸರಿ ಅವರನ್ನೇ ಫೋಟೋ ತೆಗೆಯಬೇಕೆಂದು ಪರ್ಮಿಷನ್ ತೆಗೆದುಕೊಂಡು ಕೆಲವು ಫೋಸ್ ತೆಗೆದರಾಯಿತು ಅಂದುಕೊಂಡು ಅಪಧೈರ್ಯದಿಂದಲೇ ಅವರ ಬಳಿಗೆ ಹೋದೆ.

ಸಾರ್ ನಮಸ್ಕಾರ್ ಎಂದೆ. ಅವರೂ ನಮಸ್ಕಾರ ಎಂದವರೇ ಮುಖವನ್ನು ಬೇರೆಡೆಗೆ ತಿರುಗಿಸಿದರು. ಸಾರ್ ನಿಮ್ಮ ಫೋಟೋ ತೆಗಿಯಬೇಕಿತ್ತು ಎಂದೆ. ಒಂದು ಕ್ಷಣ ನನ್ನನ್ನೇ ದುರುಗುಟ್ಟಿ ನೋಡಿ ಯಾಕೆ ಎಂದರು ಗಡುಸು ಧ್ವನಿಯಲ್ಲ.

ಸಾರ್ ಮುಂಗಾರು ಪತ್ರಿಕೆಗೆ ಬೇಕಿತ್ತು ಎಂದೆ. ಹಾಗೇ ನನ್ನನ್ನೇ ನೋಡುತ್ತಿದ್ದರು. ಏನು ಅನಾಹುತ ಕಾದಿದೆಯೋ ಅಂದುಕೊಳ್ಳುತ್ತಿದ್ದಂತೆಯೇ ಮುಂಗಾರುಗೂ ತಗೋ ಹಿಂಗಾರುಗೂ ತಗೋ ಎಂದರೇ ಎರಡೂ ಕೈಗಳನ್ನು ಮೇಲಕ್ಕೆತ್ತಿ ಫೋಸ್ ಕೊಟ್ಟರು. ಕ್ಯಾಮರಾದೊಂದಿಗೆ ರೆಡಿಯಾಗಿದ್ದ ಕೇಶವ ವಿಟ್ಲ ಆ ಕ್ಷಣವೇ ಕ್ಲಿಕ್ಕಿಸಿದ್ದು ಮಾತ್ರವಲ್ಲ ಪದೇ ಪದೇ ಕ್ಲಿಕ್ಕಿಸಿ ಒಂದಷ್ಟು ಫೋಸ್ ಫೋಟೋ ಸಿಕ್ಕಿದ ಸಂತಸದೊಂದಿಗೆ ಅಲ್ಲಿಂದ ಕಾಲುಕಿತ್ತೆವು.

ಆ ದಿನ ಪುಣ್ಯಕ್ಕೆ ನನ್ನ ಅದೃಷ್ಟ ಚೆನ್ನಾಗಿತ್ತು, ಕಾರಂತರನ್ನು ಮಾತನಾಡಿಸಿ ಬಚಾವ್ ಆಗಿ ಬಂದಿದ್ದೆ. ಇದಾದ ಕೆಲವೇ ದಿನಗಳಲ್ಲಿ ಕಾರಂತರು ಸಾರ್ವಜನಿಕ ವೇದಿಕೆಯಲ್ಲಿ ಕಾರಂತರು ತಮ್ಮನ್ನು ಪರಿಚಯ ಮಾಡಿಕೊಟ್ಟ ವ್ಯಕ್ತಿಗೆ ಹಿಗ್ಗಾಮುಗ್ಗಾ ಜಾಡಿಸಿದ್ದನ್ನು ಇಂದಿಗೂ ಮರೆಯಲಾಗಿಲ್ಲ.

ಮಂಗಳೂರು ಪಿವಿಎಸ್ ಕಲಾಕುಂಜದಲ್ಲಿ ಬ್ಯಾಂಕ್ ಅಧಿಕಾರಿಗಳ ಸಮ್ಮೇಳನದ ಉದ್ಘಾಟನೆ. ನೆನಪಿದ್ದ ಹಾಗೆ ಅಖಿಲ ಭಾರತ ಮಟ್ಟದ ಕಾರ್ಯಕ್ರಮ ಅದು. ಕಾರಂತರು ಕಾರ್ಯಕ್ರಮದ ಉದ್ಘಾಟಕರು. ಕಾರಂತರನ್ನು ಪರಿಚಯ ಮಾಡಿಕೊಡುವ ಸರದಿ. ಬೇರೆ ಬೇರೆ ರಾಜ್ಯದವರು ಸಮ್ಮೇಳನಕ್ಕೆ ಬಂದಿದ್ದ ಕಾರಣ ಎಲ್ಲರಿಗೂ ಅರ್ಥವಾಗಬೇಕಿದ್ದರೆ ಆಂಗ್ಲ ಭಾಷೆಯಲ್ಲಿ ಪರಿಚಯ ಮಾಡಿಕೊಡಬೇಕಿತ್ತು. ಆ ವ್ಯಕ್ತಿ (ಈಗ ನೆನಪಿಗೆ ಬರುವುದಿಲ್ಲ) ಕಾರಂತರನ್ನು ಸರಿಸುಮಾರು ಹತ್ತು ನಿಮಿಷಗಳ ಕಾಲ ಪರಿಚಯ ಮಾಡಿದರು. ಕಾರಂತರು ಅವರ ಪರಿಚಯ ಮಾಡುವುದನ್ನು ಕೇಳಿ ಕಡುಕೋಪಗೊಂಡಿದ್ದರು, ಕುಳಿತಲ್ಲೇ ಚಡಪಡಿಸುತ್ತಿದ್ದರು.

ಕೊನೆಗೂ ಪರಿಚಯ ಮುಗಿಯಿತು, ಕಾರಂತರು ದೀಪಬೆಳಗಿಸಿ ನೇರವಾಗಿ ಮೈಕ್ ಬಳಿಗೆ ಹೋಗಿ ಮಾತಿಗೆ ತೊಡಗಿದರು.

ಮಹಾನುಭಾವರು ನನ್ನನ್ನು ಪರಿಚಯ ಮಾಡಿಸಿದರು ಈ ಸಭೆಗೆ. ಗೊತ್ತಿರುವಷ್ಟನ್ನು ಗೊತ್ತಿರುವ ಭಾಷೆಯಲ್ಲಿ ಚುಟುಕಾಗಿ ಹೇಳಬೇಕು. ಗೊತ್ತಿಲ್ಲದ ಭಾಷೆಯಲ್ಲಿ ಗೊತ್ತಿಲ್ಲದ ವಿಚಾರಗಳನ್ನು ಮಾತನಾಡಬಾರದು. ಇವನು ಕಾರಂತ. ಒಂದಷ್ಟು ಪುಸ್ತಕ ಬರೆದವನೆ, ಇನ್ನೂ ಬರೀತಾ ಇದ್ದಾನೆ ಅಂತ ಹೇಳಿದರೇ ಏನು ಗಂಟು ಹೋಗುತ್ತೇ ?. ನಿಮ್ಮಿಂದಾಗಿ ಒಂದು ಭಾಷೆಯೂ ಕೆಡಬೇಕೇ ?, ಹೀಗೆ ಝಾಡಿಸಿದರು. ಇಷ್ಟು ಸಾಕಲ್ಲವೇ ಕಾರಂತರ ಬಾಯಿಂದ ಮುತ್ತುಗಳು ಉದುರಿದರೆ?. ಅವರು ಅದೇ ಸಿಟ್ಟನ್ನು ತಮ್ಮ ಭಾಷಣದ ಉದ್ದಕ್ಕೂ ಹರಿಸಿದ್ದರು. ಅಂದಿನ ಕಾರಂತರ ಸಿಟ್ಟನ್ನು ನೋಡಿ ಯಾವೊತ್ತಿಗೂ ಈ ಕಾರಂತರನ್ನು ಮಾತನಾಡಿಸುವ ದುಸ್ಸಾಹಸಕ್ಕೆ ಹೋಗಬಾರದು ಎಂದು ನಿರ್ಧರಿಸಿ ಬಿಟ್ಟೆ.

ನಾನು ದ.ಕ.ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿದ್ದೆ. ಆಗಷ್ಟೇ ಕರಾವಳಿಗೆ ಕೈಗಾರಿಕೆಗಳು ದಾಳಿಯಿಡಲು ಶುರುವಾಗಿದ್ದವು. ಪರಿಸರದ ಬಗ್ಗೆ ಕಾರಂತರ ಜೊತೆ ಪತ್ರಕರ್ತರ ಸಂಘ ಸಂವಾದ ಏರ್ಪಡಿಸಬೇಕು ಎನ್ನುವ ತೀರ್ಮಾನಕ್ಕೆ ಬಂದು ಅವರನ್ನು ಭೇಟಿ ಮಾಡಿ ಆಹ್ವಾನಿಸಿದೆವು. ಕಾರಂತರು ಬರಲು ಒಪ್ಪಿದರು. ಆಗ ನಮ್ಮ ಸಭೆ ನಡೆಯುತ್ತಿದ್ದುದು ಹೊಟೇಲ್ ಶ್ರೀನಿವಾಸ ಸಭಾಂಗಣದಲ್ಲಿ. ಎ.ರಾಘವೇಂದ್ರ ರಾವ್ ಪತ್ರಕರ್ತರ ಸಂಘದ ಸಭೆ ನಡೆಸಲು ಸಭಾಂಗಣಕ್ಕೆ ಬಾಡಿಗೆ ತೆಗೆದುಕೊಳ್ಳುತ್ತಿರಲಿಲ್ಲ. ಆಗ ಸಂಘಕ್ಕೆ ಯಾವ ಆದಾಯವೂ ಇರಲಿಲ್ಲ. ವರ್ಷಕ್ಕೆ ಸದಸ್ಯತ್ವಕ್ಕೆ ಕಟ್ಟುತ್ತಿದ್ದ ಶುಲ್ಕ ಬಿಟ್ಟರೆ ಉಳಿದ ಖರ್ಚಿಗೆ ನಾವು ನಾವೇ ದೇಣಿಗೆ ಹಾಕಬೇಕಿತ್ತು.

ಆದರೂ ಕಾರಂತರನ್ನು ಕರೆಯುವ ತೀರ್ಮಾನಕ್ಕೆ ಬಂದಿದ್ದೆವು. ನಾನು ಹಣ ಹೊಂದಿಸಿಕೊಳ್ಳಲು ಕಾರಂತರನ್ನು ಕೇಳಿದೆ ಸಾರ್ ನಾವು ನಿಮ್ಮನ್ನು ಕರೆತರಲು ಕಾರು ಕಳುಹಿಸುತ್ತೇವೆ . ಅದಕ್ಕೆ ಅವರು ನಿಮ್ಮಲ್ಲಿ ಕಾರು ಇದೆಯೋ ಎಂದರು. ಇಲ್ಲ ಬಾಡಿಗೆ ಕಾರು ಮಾಡುತ್ತೇವೆ ಎಂದೆ.

ಬಾಡಿಗೆ ಕಾರು ಬೇಡಾ ನಾನೇ ನನ್ನ ಮಾಮೂಲಿ ಕಾರಿನಲ್ಲಿ ಬರುತ್ತೇನೆ. ಡ್ರೈವರ್ ಎಷ್ಟು ಕೇಳ್ತಾನೆ ಅಷ್ಟು ಕೊಡು, ನನ್ನತ್ತ್ರ ಅಲ್ಲ ಎಂದರು. ಸರಿ ಎಂದೆ ಆದರೆ ಕಾರಿಗೆ ಕೊಡುವುದು ಬಾಡಿಗೆ, ಕಾರಂತರಿಗೆ ಸಂಭಾವನೆ ಕೊಡಬೇಕಲ್ಲ ಎನ್ನುವ ಚಿಂತೆ. ಈ ಬಗ್ಗೆ ಅಧ್ಯಕ್ಷರಾಗಿದ್ದ ಯು.ನರಸಿಂಹ ರಾವ್ ಅವರನ್ನು ಕೇಳಿದೆ. ಕಾರಂತರು ಸಂಭಾವನೆ ತೆಗೆದುಕೊಳ್ಳುವುದಿಲ್ಲ, ಅದಕ್ಕೆ ಕಾರಿಗೆ ಕೊಡಲು ಹೇಳಿದ್ದಾರೆ ಸುಮ್ಮನಿರು, ಕಾರಂತರಿಗೆ ಸಂಭಾವನೆ ಕೊಡಲು ಹೋಗಿ ಎಡವಟ್ಟು ಮಾಡಿಕೊಳ್ಳಬೇಡ ಎಂದರು.

ನಮ್ಮ ಕೋರಿಕೆಯಂತೆ ಕಾರಂತರು ಶ್ರೀನಿವಾಸ ಹೊಟೇಲ್ ಸಭಾಂಗಣಕ್ಕೆ ಬಂದು, ಸುಮಾರು ಎರಡು ಗಂಟೆಗೂ ಹೆಚ್ಚು ಕಾಲ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದರು. ಹೋಗುವ ಮುನ್ನ ನನ್ನನ್ನು ನೋಡಿ ನನ್ನ ಸಾರಥಿಯನ್ನು ಮಾತನಾಡಿಸಿದ್ದೀಯಾ ಎಂದರು. ಅದರರ್ಥ ಕಾರಿನ ಬಾಡಿಗೆ ಕೊಟ್ಟಿದ್ದೀಯಲ್ಲ ಎನ್ನುವುದಾಗಿತ್ತು. ಹೌದು ಸಾರ್ ಎಂದೆ, ಬೆನ್ನು ತಟ್ಟಿ ಕಾರು ಹತ್ತಿ ಹೊರಟರು.

ಇಲ್ಲಿ ಯಾವ ಕಿರಿಕ್ ಇಲ್ಲದೆ ಕಾರಂತರು ಸಮಾಧಾನ ಚಿತ್ತರಾಗಿಯೇ ಮಾತನಾಡಿದ್ದ ಕಾರಣ ನನಗೆ ವೈಯಕ್ತಿಕವಾಗಿ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಕಾರಂತರನ್ನು ಕರೆಸಿ ದೊಡ್ಡ ಸಾಧನೆ ಮಾಡಿದಂಥಾ ಖುಷಿ ಪಟ್ಟೆ. ಆನಂತರವೂ ಕಾರಂತರ ಹಲವಾರು ಕಾರ್ಯಕ್ರಮಗಳಿಗೆ ವರದಿ ಮಾಡಲು ಹೋಗಿದ್ದೆ, ಅವರಿಗೆ ನಮಸ್ಕರಿಸಿದ್ದೆ. ಅವರಿಗೆ ಇವನು ಪತ್ರಕರ್ತ ಎನ್ನುವುದು ಗೊತ್ತೇ ಹೊರತು ಅದರಾಚೆಗೆ ಹೇಳಿಕೊಳ್ಳುವ ಸಾಹಸ ಮಾಡಲಿಲ್ಲ, ಆ ಧೈರ್ಯವೂ ಇರಲಿಲ್ಲ.

ಜೆ.ಎಚ್.ಪಟೇಲ್ ಮುಖ್ಯಮಂತ್ರಿಯಾಗಿ ಹೊಸ ಜಿಲ್ಲೆಗಳಸ್ನು ರಚನೆ ಮಾಡಿದಾಗ ದಕ್ಷಿಣ ಕನ್ನಡ ಹೋಳಾಯಿತು, ಉಡುಪಿ ಪ್ರತ್ಯೇಕವಾಯಿತು. ಹಾಗೆಯೇ ಇತರ ಹೊಸ ಜಿಲ್ಲೆಗಳ ರಚನೆಯಾಯಿತು. ದಕ್ಷಿಣ ಕನ್ನಡ ಜಿಲ್ಲೆ ಒಡೆಯುವ ಬದಲು ತಾಲೂಕುಗಳ ರಚನೆಯಾಗಬೇಕೆನ್ನುವ ಕೂಗು ಕೇಳಿ ಬರುತ್ತಿತ್ತು. ಈ ಹಿನ್ನೆಲೆಯಲ್ಲಿ ಕಾರಂತರು ಕೂಡಾ ಜಿಲ್ಲೆ ಒಡೆಯುವುದಕ್ಕೆ ವಿರೋಧವಾಗಿದ್ದರು. ಈ ಕಾರಣಕ್ಕಾಗಿ ಜಿಲ್ಲೆ ವಿಭಜನೆ ಕುರಿತು ಕಾರಂತರನ್ನು ಮಾತನಾಡಿಸಿ ಆಲ್ ಎಡಿಶನ್ ಸುದ್ದಿ ಮಾಡಲು ನಿರ್ಧರಿಸಿದೆ.

ನಾನು ಕನ್ನಡಪ್ರಭದ ವರದಿಗಾರನಾಗಿದ್ದ ಕಾಲ ಅದು. ನೇರವಾಗಿ ಕೋಟ ಸಾಲಿಗ್ರಾಮದ ಡಾ.ಶಿವರಾಮ ಕಾರಂತರ ಮನೆಗೆ ಏಕಾಂಗಿಯಾಗಿ ಹೋದೆ. ಬೇರೆಯವರನ್ನು ಕರೆದುಕೊಡು ಹೋದರೆ ಈ ಸುದ್ದಿಯನ್ನು ಅವರೂ ಬರೆಯುತ್ತಾರೆ ಎನ್ನುವ ಕಾರಣಕ್ಕೆ ಯಾರಿಗೂ ಹೇಳಿರಲಿಲ್ಲ.

ಸಂಜೆ ಸುಮಾರು 4 ಗಂಟೆ ಹೊತ್ತಿಗೆ ಕಾರಂತರ ಮನೆಗೆ ಹೋದೆ. ಬಾಗಿಲು ತೆರೆದಿತ್ತು, ಅಳುಕುತ್ತಲೇ ಒಳಗೆ ಹೋದೆ. ಕಾರಂತರು ಚಾಪೆಯ ಮೇಲೆ ಮೂವತ್ತಕ್ಕೂ ಹೆಚ್ಚು ಪುಸ್ತಕಗಳನ್ನು ಹರಡಿಕೊಂಡು ಏನನ್ನೋ ಹುಡುಕುತ್ತಿದ್ದರು. ನನ್ನನ್ನು ನೋಡಿ ಏನು ಎಂದರು. ನನ್ನ ಪರಿಚಯ ಮಾಡಿಕೊಂಡೆ ಸರಿ ಗೊತ್ತಾಯ್ತು, ಯಾಕೆ ಬಂದೆ ? ಕೇಳಿದರು.

ಏಕಾಏಕಿ ನೀನು ಯಾಕೆ ಬಂದೆ ಎಂದು ಕೇಳಿದರೆ ಏನು ಹೇಳಲಿ ?, ಸಾರ್ ನಿಮ್ಮನ್ನು ಭೇಟಿ ಮಾಡಲೆಂದೇ ಬಂದೆ ಎಂದೆ. ಸರಿ ಕೂತ್ಕೋ ಎಂದರು.

ಅಷ್ಟು ಹೇಳಿದ್ದೇ ತಡ ಕುರ್ಚಿಯಲ್ಲಿ ಕುಳಿತೆ. ಬಾಯಾರಿಕೆ ಬೇಕೇ ? ಕೇಳಿದರು. ಕುಡಿಯಲು ನೀರು ಬೇಕಿತ್ತು, ಆದರೂ ಯಾಕೋ ಬೇಡ ಎಂದೆ. ನೀನು ಬೇಕು ಅಂತ ಕೇಳಿದರೂ ನಾನು ಕೊಡುವುದಿಲ್ಲ, ನನಗೆ ಎದ್ದು ಮಾಡುವಷ್ಟು ಆರೋಗ್ಯ ಇಲ್ಲ. ಅಗೋ ಅಲ್ಲಿ ನೀರು ತುಂಬಿಸಿದ ಫಿಲ್ಟರ್ ಇದೆ. ಲೋಟೆಯೂ ಅಲ್ಲೇ ಇರಬೇಕು. ಬೇಕಾದರೆ ನೀನೇ ಹೋಗಿ ಕುಡಿದುಕೊಂಡೂ ಬಾ ಎಂದರು.

ಎಷ್ಟೇ ಅನಾರೋಗ್ಯವಿದ್ದರೂ ನೇರವಾಗಿ ಹೀಗೆ ಹೇಳಲು ಸಾಧ್ಯವೇ?, ಆದರೂ ಈ ಕಾರಂತರು ಎಷ್ಟು ನಿಷ್ಠುರವಾಗಿ ಹೇಳುತ್ತಾರಲ್ಲ, ಅವರಿಗೆ ಬೇಸರವಾಗಬಹುದು ಅನ್ನಿಸುವುದಿಲ್ಲವೇ ಅಂದುಕೊಂಡೆ.

ಪರವಾಗಿಲ್ಲ ಸಾರ್ ಬಾಯಾರಿಕೆ ಬೇಡ ಎಂದೆ. ನಿನಗೆ ಹಸಿವಾಗಿದ್ದರೆ ನಾನೇನೂ ಮಾಡಲಾಗದು, ಅವಳು ಬರಬೇಕು ಇನ್ನೂ ಒಂದೂವರೆ ಗಂಟೆ ಆಗಬಹುದು (ಅವರು ಹೇಳಿದ್ದು ಮಾಲಿನಿ ಮಲ್ಯರನ್ನು ಕುರಿತು).

ನನಗೇನು ಹಸಿವಿಲ್ಲ ಸಾರ್ ನಿಧಾನವಾಗಿ ಬರಲಿ ಎಂದೆ. ಅವಳ ಆಫೀಸ್ ಬಿಟ್ಟಮೇಲೆಯೇ ಬರೋದು ಎಂದರು. ನಾನು ಅವರನ್ನು ಎಷ್ಟು ಗಂಟೆಗೆ ಬರುತ್ತಾರೆಂದು ಕೇಳದೆಯೂ ಕಾರಂತರು ತಾವಾಗಿಯೇ ಹೇಳಿದರು.

ಆಯ್ತು ಮತ್ತೇನು ಕೇಳಿದರು. ಸಾರ್ ದಕ್ಷಿಣ ಕನ್ನಡ ಜಿಲ್ಲೆಯನ್ನು ಒಡೆದು ಎರಡು ಜಿಲ್ಲೆ ಮಾಡುತ್ತಿದ್ದಾರೆ ? ಎಂದೆ.

ಅವರಿಗೆ ಅಧಿಕಾರ ಇದೆ ಮಾಡ್ತಾರೆ, ಅದಕ್ಕೆ ನಾನೇನು ಮಾಡಲಿ?.

ಸಾರ್ ನಿಮ್ಮಂಥವರು ಗಟ್ಟಿಯಾಗಿ ಮಾತನಾಡಿದರೆ ಒಳ್ಳೆಯದಲ್ಲವೇ ? ಎಂದೆ. ನಾನು ಕಿರುಚಿಕೊಂಡು ಬಾಯಿ ಬಡ್ಕೊಂಡ್ರೆ ಜಿಲ್ಲೆ ಒಡೆಯುವುದನ್ನು ನಿಲ್ಲಿಸ್ತಾರೋ ? ದುರುಗುಟ್ಟಿ ನನ್ನನು ನೋಡಿದರು.

ಇದು ಯಾಕೋ ಟ್ರ್ಯಾಕ್ ಗೆ ಬರ್ತಾ ಇಲ್ಲವಲ್ಲ ಅಂದುಕೊಂಡೆ. ಹಾಗಲ್ಲಾ ಸಾರ್ ಜಿಲ್ಲೆಯನ್ನು ಎರಡು ಮಾಡಿದರೆ ಏನು ಪ್ರಯೋಜನ ? ಎನ್ನುವುದು ಜನರಿಗೆ ಗೊತ್ತಾಗಬೇಕಲ್ಲ ಅಂದೆ.

ಈ ಪ್ರಶ್ನೆಯನ್ನು ಯಾರು ಜಿಲ್ಲೆ ಒಡೀತಾ ಇದ್ದಾರೆ ಅವರಿಗೆ ಕೇಳು ಎಂದರು ಸಿಟ್ಟಿನಿಂದ. ಯಾಕೋ ಕೆಲಸ ಕೆಡುತ್ತಿದೆ ಅನ್ನಿಸಿತು. ಪುಣ್ಯಕ್ಕೆ ಸುಮ್ಮನಿದ್ದೆ. ನಾನು ಮೌನವಾಗಿದ್ದ ಕಾರಣ ಅವರೇ ಮಾತು ಮುಂದುವರಿಸಿದರು.

ನೀನು ಜನರ ಪರವಾಗಿ ಮಾತನಾಡ್ತಿದ್ದೀಯಾ, ಅವರಿಗೆ ಜನ ಯಾವಾಗ ಬೇಕು, ವೋಟು ಹಾಕುವಾಗ ಬೇಕು, ಈಗ ಬೇಕಾಗಿಲ್ಲ. ಹೊಸ ಜಿಲ್ಲೆ ಮಾಡಿದ್ದರೆ ಡಿಸಿ ಬರ್ತಾರೆ, ಎಸ್ಪಿ ಬರ್ತಾರೆ. ಪುಡಾರಿಗಳಿಗೆ ಬೆಳಿಗ್ಗೆ ಎದ್ದು ಅವರ ಜೊತೆ ವಾಕಿಂಗ್ ಜಾಗಿಂಗ್ ಹೋಗಬಹುದು, ರಾತ್ರಿ ಪಾರ್ಟಿಗೀರ್ಟೀ ಅಂತೇನೇನೋ ಮಾಡಬಹುದು.

ಈಗ ನನಗೆ ಪ್ರಶ್ನೆ ಕೇಳುವ ಅವಕಾಶವೇ ಇಲ್ಲ. ಕಾರಂತರು ಹೈಪಿಚ್ ಗೆ ಬಂದಿದ್ದರು. ಒಂದು ಜಿಲ್ಲೆ ಉದಯ ಆದ್ರೆ ಎಷ್ಟು ಜನ ಹೊಸದಾಗಿ ಬರ್ತಾರೆ, ಎಷ್ಟು ಕಚೇರಿ ತೆರೀಬೇಕು, ಅವರಿಗೆ ಮನೆ ಎಲ್ಲಿಂದ ಬರಬೇಕು. ದಿನಕ್ಕೆ ಹೊಸದಾಗಿ ಬಂದವರ ಕುಡಿಯುವ ನೀರು ಎಷ್ಟು ಬೇಕು?, ಈಗ ಇರುವವರಿಗೇ ಸರಿಯಾಗಿ ನೀರಿಲ್ಲ. ಯಾವ ಸುಡುಗಾಡು ಲೆಕ್ಕವೂ ಇವರಲ್ಲಿಲ್ಲ.

ಕಲೆಕ್ಟರ್ ಜೊತೆ ನೇರವಾಗಿ ಮಾತನಾಡಬಹುದು ಎನ್ನುವುದನ್ನು ಬಿಟ್ಟರೆ ಮಣ್ಣಂಗಟ್ಟಿಯೂ ಪ್ರಯೋಜನವಿಲ್ಲ. ಎಷ್ಟು ಮರ ಕಡಿತಾರೆ. ದಾರಿ ಮಾಡಲಿಕ್ಕೆ ಅಂತ ಬಡವರ ಮನೆ ಕೆಡವಿ ಅವಾಂತರ ಸೃಷ್ಟಿಸ್ತಾರೆ. ಜಿಲ್ಲೆ ಮಾಡ್ತಾ ಇರೋದು ಸಮಸ್ಯೆ ಬಗೆ ಹರಿಸಲಿಕ್ಕಲ್ಲ, ಸಮಸ್ಯೆ ಬಿಗಡಾಯಿಸಲಿಕ್ಕೆ ಹೀಗೆ ಪುಂಕಾನುಪುಂಕವಾಗಿ ಹೇಳಿಕೊಂಡೇ ಹೋದರು. ನಾನು ಪ್ರಶ್ನೆ ಕೇಳಿದ್ದರೆ ಇಷ್ಟು ವಿಚಾರಗಳನ್ನು ಅವರು ಖಂಡಿತಕ್ಕೂ ಹೇಳುವುದು ಖಾತ್ರಿ ಇರಲಿಲ್ಲ. ಅವರಿಗೇ ಸಾಕೆನೆಸಿತೇನೋ, ಇಲ್ಲದ ಉಸಾಬರಿ ಜಿಲ್ಲೆ ಬಗ್ಗೆ ನಿನಗೆ ಯಾಕೆ ಸುಮ್ಮನೆ ಇರು ಎಂದವರೇ ಹರಡಿಕೊಂಡಿದ್ದ ಪುಸ್ತಕಗಳ ಪೈಕಿ ಒಂದನ್ನು ಎತ್ತಿಕೊಂಡು ಏನನ್ನೋ ಹುಡುಕತೊಡಗಿದರು. ನನಗಾದರೂ ಸಾಕಾಗುವಷ್ಟು ಊರಣ ಸಿಕ್ಕಿತ್ತು, ಸಾರ್ ನಾನಿನ್ನು ಹೊರಡುತ್ತೇನೆ ಎಂದೆ. ಒಳ್ಳೆಯದು ಎಂದಷ್ಟೇ ಹೇಳಿದರು. ಮತ್ತೆ ಕಾರಂತರನ್ನು ನಾನು ನೋಡಿದ್ದು ಅವರು ಬಾರದಲೋಕಕ್ಕೆ ಪ್ರಯಾಣಿಸಿದ್ದಾಗ.

‍ಲೇಖಕರು avadhi

June 1, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: