ಕೆ ಎನ್ ಶಾಂತಕುಮಾರ್ ಕಂಡಂತೆ ದಂಡಾವತಿ ಶೈಲಿ

‘ಪ್ರಜಾವಾಣಿ’ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರಾಗಿದ್ದ ಪದ್ಮರಾಜ ದಂಡಾವತಿ ಅವರು ಪತ್ರಿಕೆಗಳಲ್ಲಿರಬೇಕಾದ ಭಾಷೆಯ ಪ್ರಯೋಗದ ಬಗ್ಗೆ ನಡೆಸಿದ ಜಿಜ್ಞಾಸೆಯೇ ‘ಮಾಧ್ಯಮ ಭಾಷಾ ದೀಪಿಕೆ’ ಕೃತಿ. ಇದನ್ನು ಹೆಸರಾಂತ ‘ವಿಕಾಸ ಪ್ರಕಾಶನ’ ಪ್ರಕಟಿಸಿದೆ. ಈ ಕೃತಿಯ ಬಿಡುಗಡೆ ಈ ಭಾನುವಾರ (04 ಜೂನ್ 23) ರಂದು ಬೆಂಗಳೂರಿನಲ್ಲಿ ಜರುಗುತ್ತಿದೆ.

ಈ ಕೃತಿಗೆ ‘ಪ್ರಜಾವಾಣಿ’ಯ ಸಂಪಾದಕರಾಗಿದ್ದ ಕೆ ಎನ್ ಶಾಂತಕುಮಾರ್ ಅವರು ಬರೆದ ಮುನ್ನುಡಿ ಇಲ್ಲಿದೆ-

ಭಾಷೆಯ ಶಿಸ್ತು ಮತ್ತು ಶೈಲಿಯ ಬದ್ಧತೆ

-ಕೆ.ಎನ್. ಶಾಂತ ಕುಮಾರ್

ಪತ್ರಕರ್ತನಿಗೂ ಸೃಜನಶೀಲ ಬರಹಗಾರನಿಗೂ ಇರುವ ವ್ಯತ್ಯಾಸವೇನು? ಮೂಲದಲ್ಲಿ ಇಬ್ಬರೂ ಕಥೆ ಹೇಳುವವರೇ. ಹಾಗೆ ಕಥೆ ಹೇಳುವಾಗ ಮೊದಲನೆಯವನು ಸತ್ಯಾಂಶದಿಂದ ಕೂಡಿದ ವಾಸ್ತವಿಕ ವಿದ್ಯಮಾನಗಳೊಂದಿಗೆ ವ್ಯವಹರಿಸಿದರೆ, ಎರಡನೆಯವನು ಕಾಲ್ಪನಿಕ ಲೋಕದ ನಂಟನ್ನು ಹೊಂದಿರುವವನು. ಕಥೆ ಕಟ್ಟುವಿಕೆಯಲ್ಲಿ ಇಬ್ಬರಿಗೂ ಭಾಷೆಯೆಂಬ ಮೂಲದ್ರವ್ಯ ಬೇಕೇಬೇಕು. ಸೃಜನಶೀಲ ಬರಹಗಾರ ತನ್ನ ಕಥೆ ಅಥವಾ ಕಾದಂಬರಿಯ ಶಿಲ್ಪವು ಅಂದವಾಗಿ ಕಾಣಲು ರೂಪಕ, ಅಲಂಕಾರಗಳ ಮೊರೆ ಹೋಗುತ್ತಾನೆ. ಅದೇ ಪತ್ರಕರ್ತ, ತನ್ನ ವರದಿ ಇಲ್ಲವೆ ಲೇಖನವು ಓದುಗನನ್ನು ಗಾಢವಾಗಿ ತಟ್ಟಲು ಅಥವಾ ಆತನ ಮೇಲೆ ನಿಶ್ಚಿತ ಪರಿಣಾಮವನ್ನು ಉಂಟುಮಾಡಲು ಅತ್ಯಂತ ಸರಳ, ಸ್ಪಷ್ಟ ಹಾಗೂ ಅಷ್ಟೇ ಹರಿತವಾದ ಭಾಷೆಯನ್ನು ಪ್ರಯೋಗಿಸುವುದು ರೂಢಿ. ಆದರೆ, ಇತ್ತೀಚಿನ ವರ್ಷಗಳಲ್ಲಿ ಪತ್ರಕರ್ತರು ಬಳಸುತ್ತಿರುವ ಭಾಷೆಯು ದಿಕ್ಕು ತಪ್ಪುತ್ತಿದೆ. ಅದರಿಂದ ಎಡವಟ್ಟುಗಳೂ ಆಗುತ್ತಿವೆ. ಸರಿಯಾದ ಮತ್ತು ಸಮರ್ಪಕವಾದ ಭಾಷಾ ಪ್ರಯೋಗದ ಹಾದಿಯನ್ನು ತಿಳಿಯದೆ ತಡವರಿಸುವ ಅಂತಹ ಪತ್ರಕರ್ತರಿಗೆಲ್ಲ ಗೆಳೆಯ ಪದ್ಮರಾಜ ದಂಡಾವತಿ ಅವರ ‘ಮಾಧ್ಯಮ ಭಾಷಾ ದೀಪಿಕೆ’ ಇದೀಗ ಒಂದು ಕೈದೀವಿಗೆಯಾಗಿ ಸಿಕ್ಕಿದೆ.

ಸುದ್ದಿಮನೆಯಲ್ಲಿ ಭಾಷೆಯು ಶೈಥಿಲ್ಯದ ಹಾದಿ ಹಿಡಿದಿರುವ ದುರಂತದ ಮೂಲವಿರುವುದು ನಮ್ಮ ಪ್ರಾಥಮಿಕ ಶಿಕ್ಷಣ ವ್ಯವಸ್ಥೆಯ ಕುಸಿತದಲ್ಲಿ ಎಂಬುದನ್ನು ದಂಡಾವತಿ ಅವರು ಸರಿಯಾಗಿ ಗುರ್ತಿಸಿದ್ದಾರೆ. ಶಾಲಾ ಮಟ್ಟದಲ್ಲಿಯೇ ಭಾಷಾ ಬೋಧನೆಯು ಲೋಪದಿಂದ ಕೂಡಿದೆ ಎಂದು ನನಗಾದರೂ ಅನಿಸಿದ್ದಿದೆ. ಭಾಷೆಯ ಬೋಧಕರು ಅದರ ಮಹತ್ವವನ್ನು ಸರಿಯಾಗಿ ಗ್ರಹಿಸದೇ ಬೋಧನೆ ಮಾಡುತ್ತಿರುವುದರಿಂದ ದಿನ ಕಳೆದಂತೆ ಈ ಸಮಸ್ಯೆ ದೊಡ್ಡದಾಗಿ ಬೆಳೆಯುತ್ತಿದೆ. ವಾಸ್ತವವಾಗಿ ಯಾವುದೇ ವ್ಯಕ್ತಿ ಪತ್ರಕರ್ತನಾಗಿ ಸುದ್ದಿಮನೆಗೆ ಬಂದಮೇಲೆ ತನ್ನ ಭಾಷೆಯನ್ನು ರೂಢಿಸಿಕೊಳ್ಳುವುದಲ್ಲ. ಅದು ಅಷ್ಟು ಸುಲಭವೂ ಅಲ್ಲ. ಶಿಕ್ಷಣದ ಪ್ರಾಥಮಿಕ ಹಂತದಿಂದಲೇ ಪ್ರತೀ ಮಗುವಿನಲ್ಲಿ ಸರಿಯಾದ ಭಾಷೆಯೂ ಆಕಾರ ಪಡೆಯಬೇಕು. ಹಾಗೆ ಆಕಾರ ಪಡೆದ ಗಟ್ಟಿ ತಳಹದಿಯ ಮೇಲೆಯೇ ಅದು ವ್ಯವಸ್ಥಿತವಾಗಿ ಬೆಳೆಯುತ್ತಾ ಹೋಗಬೇಕು. ಅದೇ ಭಾಷಾ ಕಲಿಕೆಯ ಸರಿಯಾದ ಮತ್ತು ಸಹಜವಾದ ಪ್ರಕ್ರಿಯೆ. ಹಾಗೆ ಭಾಷೆಯನ್ನು ಬೆಳೆಸುವ ಹೊಣೆಗಾರಿಕೆಯಿಂದ ನಮ್ಮ ಶಿಕ್ಷಣ ವ್ಯವಸ್ಥೆಯು ಇತ್ತೀಚಿನ ವರ್ಷಗಳಲ್ಲಿ ಸಂಪೂರ್ಣವಾಗಿ ಮೈಕೊಡವಿಕೊಂಡುಬಿಟ್ಟಿದೆ. ಅದರ ಫಲವನ್ನು ಮಾಧ್ಯಮ ಸಂಸ್ಥೆಗಳೂ ಉಣ್ಣಬೇಕಿದೆ.

‘ಮಾಧ್ಯಮ ಭಾಷಾ ದೀಪಿಕೆ’ಯು ಪತ್ರಕರ್ತರು ಬಳಸುವ ಭಾಷೆಯ ಕುರಿತಾಗಿಯೇ ಪ್ರಧಾನವಾಗಿ ಮಾತನಾಡಿದೆ. ಮುಂದುವರಿದು ಹೇಳುವುದಾದರೆ, ‘ಮಾಧ್ಯಮ ವ್ಯಾಕರಣ’ವೇ ಈ ಕೃತಿಯ ಅಂತಃಕರಣವಾಗಿದೆ. ‘ಶುದ್ಧ ಭಾಷೆ’ ಎನ್ನುವ ಪದವೂ ಇಲ್ಲಿ ಬಳಕೆಯಾಗಿದೆ. ಆದರೆ, ‘ಶುದ್ಧ ಭಾಷೆ’ ಎನ್ನುವುದೇ ಒಂದು ಸಮಸ್ಯೆ. `ದೀಪಿಕೆ ಏಕೆ ಬೇಕು’ ಎಂಬ ಮೊದಲ ಅಧ್ಯಾಯದಲ್ಲಿ ಭಾಷೆಯ ಕುರಿತು ಚರ್ಚಿಸುತ್ತಾ, ಶುದ್ಧ ಭಾಷೆಯ ಪ್ರಸ್ತಾಪ ಆದೊಡನೆ ಯಾವುದು ಶುದ್ಧ ಎನ್ನುವ ಪ್ರಶ್ನೆಯೂ ಬೆನ್ನ ಹಿಂದೆಯೇ ಏಳುತ್ತದೆ ಎನ್ನುವುದನ್ನು ದಂಡಾವತಿ ಅವರು ದಾಖಲಿಸಿದ್ದಾರೆ. ಹಾಗೆಯೇ ಜನರು ಮಾತನಾಡುವ ಯಾವ ಭಾಷೆಯೂ ಅಶುದ್ಧವಾದುದಲ್ಲ ಎಂಬುದನ್ನೂ ಅವರು ಸ್ಪಷ್ಟಪಡಿಸಿದ್ದಾರೆ.

ಎಂಜಿನಿಯರ್‌ಎನ್ನುವುದನ್ನು ಅಭಿಯಂತರ, ಪೊಲೀಸ್ ಎನ್ನುವುದನ್ನು ಆರಕ್ಷಕ, ಸೆಷನ್ಸ್ ಎನ್ನುವುದನ್ನು ಸತ್ರ, ಕಂಪ್ಯೂಟರ್ ಎನ್ನುವುದನ್ನು ಗಣಕಯಂತ್ರ ಎಂದು ಬರೆಯುವಂತೆ ಈ ‘ಶುದ್ಧ ಭಾಷೆ’ಯ ಪರಿಕಲ್ಪನೆ ಅಪೇಕ್ಷಿಸುವುದು ನಮಗೆ ಗೊತ್ತಲ್ಲವೇ? ಶಿಷ್ಟವನ್ನೇ ಶುದ್ಧ ಎಂದು ಪರಿಭಾವಿಸುವ ಮನಃಸ್ಥಿತಿಯೂ ಇಂತಹ ಪರಿಕಲ್ಪನೆಯ ಹಿಂದೆ ಇದ್ದಂತಿದೆ. ಆದರೆ, ಪತ್ರಕರ್ತನಿಗೆ ಶುದ್ಧ ಭಾಷೆಯ ತುರಾಯಿ ಏನೂ ಬೇಕಾಗಿಲ್ಲವೆಂದು ನನಗೆ ಅನಿಸುತ್ತದೆ. ಆತನಿಗೆ ನಿಜಕ್ಕೂ ಬೇಕಿರುವುದು ಸರಿಯಾದ, ಸ್ಪಷ್ಟ ಮತ್ತು ಒಂತನದ (Standardize) ಭಾಷೆ. ಆತ ಬರೆದ ವರದಿಯು ರಾಜ್ಯದ ಯಾವುದೇ ಮೂಲೆಯ ಸಾಮಾನ್ಯ ಓದುಗನಿಗೂ ಸುಲಭವಾಗಿ ಅರ್ಥವಾಗಬೇಕು ಮತ್ತು ವರದಿ ಹೊರಹೊಮ್ಮಿಸುವ ಸಂದೇಶ ಸುಸ್ಪಷ್ಟವಾಗಿರಬೇಕು. ಹಾಗೆಯೇ ಅದರಲ್ಲಿರುವ ವಿವರಗಳು ಓದುಗನ ಮೇಲೆ ಬೀರಬೇಕಾದ ಪರಿಣಾಮವನ್ನು ಅದೇ ತೀವ್ರತೆಯಿಂದ ಬೀರಬೇಕು. ಪತ್ರಕರ್ತನೊಬ್ಬ ಎಷ್ಟೇ ಅದ್ಭುತವಾದ ಮಾಹಿತಿಯನ್ನು ಕಲೆಹಾಕಿದರೂ ಅಂತಿಮವಾಗಿ ಅದು ಹೊಂದಿರಬೇಕಾದ ತೀವ್ರತೆಯಿಂದ, ಸ್ಪಷ್ಟ ಹಾಗೂ ಹರಿತ ಭಾಷೆಯಿಂದ ಓದುಗನನ್ನು ತಲುಪದಿದ್ದರೆ ಹಾಕಿದ ಶ್ರಮವೆಲ್ಲವೂ ನಿರರ್ಥಕ. ಒಂತನದ ಭಾಷೆಯೇ ಪತ್ರಿಕೆಯ ಜೀವಾಳವಾದರೂ ಬರವಣಿಗೆಯ ವೈಶಿಷ್ಟ್ಯವನ್ನು ಹೆಚ್ಚಿಸಲು ಹಿತಮಿತವಾಗಿ ಮತ್ತು ಸಂದರ್ಭಕ್ಕೆ ಅನುಗುಣವಾಗಿ ಸ್ಥಳೀಯ ನುಡಿಗಟ್ಟುಗಳನ್ನು ಬಳಸುವ ಸ್ವಾತಂತ್ರ‍್ಯ ಇದ್ದೇ ಇರುತ್ತದೆ ಎಂಬುದನ್ನೂ ಇಲ್ಲಿ ಒತ್ತಿ ಹೇಳಬೇಕು.

ಪತ್ರಕರ್ತನಿಗೆ ಭಾಷೆಯೇ ಸರ್ವಸ್ವ ಅಲ್ಲವಾದರೂ ಅದರ ಮೂಲಸಂಗತಿಗಳನ್ನು ಆತ ಮರೆಯುವಂತಿಲ್ಲ. ‘ಬರವಣಿಗೆಯಲ್ಲಿ ಕಂಡುಕೊಂಡ ನವನವೀನತೆಯ ಹಿಂದುಗಡೆ ಒಂದು ಸಂತತವಾದ ಭಾಷಾ ಮರ್ಯಾದೆ ಆಧಾರವಾಗಿರಬೇಕು’ ಎಂಬ ಡಿವಿಜಿ ಅವರ ಮಾತು, ಪತ್ರಕರ್ತನ ಭಾಷೆಗೆ ಕಾವಲು ನಿಲ್ಲಬೇಕು. ಒಮ್ಮೊಮ್ಮೆ ನಾವು ಮಾಡುವ ಕಾಗುಣಿತ ದೋಷಗಳು ಅಪಾರ್ಥವನ್ನೋ ಅನ್ಯಾರ್ಥವನ್ನೋ ಧ್ವನಿಸುವ ಅಪಾಯವೂ ಇರುತ್ತದೆ. ಹೀಗಾಗಿ ಕಾಗುಣಿತ ದೋಷಗಳ ಕುರಿತಾಗಿ ಎಚ್ಚರಿಕೆ ಅಗತ್ಯ. ಈ ಕೈಪಿಡಿಯಲ್ಲಿ ಕೆಲವು ಸಾಮಾನ್ಯ ಕಾಗುಣಿತ ದೋಷಗಳನ್ನು ಪಟ್ಟಿ ಮಾಡಲಾಗಿದ್ದು, ಅವುಗಳ ಸರಿಯಾದ ರೂಪವನ್ನೂ ಕೊಡಲಾಗಿದೆ. ಆದರೆ, ಕೆಲವೊಂದು ದೋಷಗಳು ತಾಂತ್ರಿಕವಾಗಿ ದೋಷ ಎನಿಸಿದರೂ ಅರ್ಥದಲ್ಲಿ ವ್ಯತ್ಯಾಸವೇನೂ ಆಗುವುದಿಲ್ಲ. ಓದುಗರೊಂದಿಗೆ ಸರಿಯಾಗಿ ಸಂವಹನ ಮಾಡುವಲ್ಲಿ ಕೂಡ ಅವು ಹಿಂದೆ ಬೀಳುವುದಿಲ್ಲ. ಉದಾಹರಣೆಗೆ ‘ನಗೆಕಡಲಲ್ಲಿ’. ನಗೆ ಮತ್ತು ಕಡಲಲ್ಲಿ ಎಂಬ ಎರಡು ಪದಗಳು ಸೇರಿ ನಗೆಗಡಲಲ್ಲಿ (ಗದಬಾದೇಶ ಸಂಧಿ) ಆಗುವುದು ತಾಂತ್ರಿಕವಾಗಿ ನಿಜವಾದರೂ ನಗೆಕಡಲಲ್ಲಿ ಎಂದು ಓದಿಕೊಂಡರೂ ಸಮಸ್ಯೆ ಏನೂ ಇಲ್ಲ. ಉಪಹಾರ ಎನ್ನುವ ಇನ್ನೊಂದು ಪದದ ಉದಾಹರಣೆಯೂ ಇದೆ. ಉಪ + ಆಹಾರ ಸೇರಿ ಉಪಾಹಾರ (ಸವರ್ಣದೀರ್ಘ ಸಂಧಿ) ಆಗುವುದೇನೋ ಸರಿ. ಆದರೆ, ಜನ ಆಡುಭಾಷೆಯಲ್ಲಿ ಉಪಹಾರ ಎನ್ನುತ್ತಾರೆಯೇ ಹೊರತು ಉಪಾಹಾರ ಮಾಡಲು ಬನ್ನಿ ಎಂದು ದೀರ್ಘ ಸಂಧಿಯ ಸ್ವರೂಪದಲ್ಲಿ ಕರೆಯುವುದಿಲ್ಲ. ಹೀಗಾಗಿ ಉಪಹಾರ ಎಂಬ ಪದವೇ, ಅದು ತಪ್ಪು ಪ್ರಯೋಗವಾದರೂ ಸರಿ, ಬಳಕೆಯಲ್ಲಿ ಇದ್ದಂತಿದೆ. ಇಂತಹ ಕೆಲವು ಕಾರಣಗಳಿಂದಾಗಿ ದೋಷಗಳ ವರ್ಗೀಕರಣ (gradiation) ಮಾಡುವ ಅಗತ್ಯವೂ ಇದೆಯೇನೋ ಎಂದು ನನಗನಿಸುತ್ತದೆ.

‘ಪ್ರಜಾವಾಣಿ’ ಸಂಪಾದಕನಾಗಿ ಹೊಣೆ ನಿಭಾಯಿಸಿದ ಅನುಭವದ ಮೇಲೆ ಹೇಳುವುದಾದರೆ ಪತ್ರಕರ್ತರ ಭಾಷೆಯ ದೋಷಗಳನ್ನು ತಿದ್ದುವುದೆಂದರೆ ಅದು ನದಿ ಪ್ರವಾಹದ ವಿರುದ್ಧ ಈಜಲು ಇಳಿದಂತಹ ಸಾಹಸವೇ ಸರಿ. ಪತ್ರಕರ್ತರ ಮಾತನ್ನು ಬಿಡಿ, ಹಲವು ಸಾಹಿತಿಗಳೂ ದೋಷಪೂರ್ಣ ಭಾಷೆಯನ್ನೇ ಬಳಸುವುದನ್ನು ಕಂಡಿದ್ದೇನೆ. ನಮ್ಮ ‘ಮಯೂರ’ ಪತ್ರಿಕೆಯಲ್ಲಿ ಹಿರಿಯ ಸಾಹಿತಿಯೊಬ್ಬರು ಹಿಂದೊಮ್ಮೆ ‘ಪ್ರಾಮುಖ್ಯತೆ’ ಎಂಬ ಪದಪ್ರಯೋಗ ಮಾಡಿದ್ದರು. ‘ಪ್ರಾಮುಖ್ಯತೆ’ಗೆ ಏನಾದರೂ ಅರ್ಥವಿದೆಯೇ? ಅದು ಪ್ರಾಮುಖ್ಯ ಎಂದಾಗಬೇಕಿತ್ತಲ್ಲವೇ ಎಂದು ಅವರನ್ನು ವಿಚಾರಿಸಿದಾಗ, ತಪ್ಪು ಪದಪ್ರಯೋಗ ಮಾಡಿದ್ದನ್ನು ಅವರು ಒಪ್ಪಿಕೊಂಡರು. ಆದರೆ, ‘ಎಲ್ಲರೂ ಅದೇ ಪದವನ್ನು ಪ್ರಯೋಗ ಮಾಡುತ್ತಿರುವುದರಿಂದ ನಾನೂ ಬಳಕೆ ಮಾಡಿದೆ’ ಎಂದು ಸಮರ್ಥಿಸಿಕೊಂಡರು! ಹಾಗೆಯೇ ಜಾನಪದಕ್ಕೂ ಜನಪದಕ್ಕೂ ಇರುವ ವ್ಯತ್ಯಾಸವನ್ನು ನಮ್ಮ ಪತ್ರಕರ್ತರಿಗೆಲ್ಲ ಮನನ ಮಾಡಿಸುವಲ್ಲಿಯೂ ನಾವು (ನಾನು ಮತ್ತು ದಂಡಾವತಿ) ವಿಫಲರಾದೆವು ಎಂದೇ ಹೇಳಬೇಕು. ಈ ಎರಡೂ ಪದಗಳ ಅರ್ಥ ವ್ಯತ್ಯಾಸದ ಕುರಿತೂ ಈ ದೀಪಿಕೆಯಲ್ಲಿ ಚರ್ಚಿಸಲಾಗಿದೆ. ಜನಪದ ಎನ್ನುವುದು ಜನರಿಗೆ ಸಂಬಂಧಿಸಿದ ಒಂದೊಂದು ಕಲಾಶಾಖೆಗೆ ಬಳಸುವ ಪದ (ಉದಾಹರಣೆಗೆ, ಜನಪದ ಕಲೆ, ಜನಪದ ನೃತ್ಯ, ಜನಪದ ಸಾಹಿತ್ಯ) ಮತ್ತು ಜಾನಪದ ಎಂದರೆ ಎಲ್ಲ ಕಲೆಗಳ ಸಮೂಹ ಎನ್ನುವುದು ಈವರೆಗೂ ಬಹುತೇಕರ ತಲೆಗೆ ಹೋಗಿಲ್ಲ. Folklore ಎಂಬ ಇಂಗ್ಲಿಷ್ ಪದಕ್ಕೆ ಸಂವಾದಿಯಾಗಿ ಜಾನಪದ ಎಂಬ ಪದವಿರುವುದು, ಎಲ್ಲವನ್ನೂ ಒಳಗೊಂಡುದು ಎಂಬ ಅರ್ಥವನ್ನು ಅದು ಧ್ವನಿಸುವುದು ಎಂಬುದನ್ನು ಕನ್ನಡಿಗರಿಗೆ ಅರ್ಥಮಾಡಿಸಿದವರು ಹಾ.ಮಾ. ನಾಯಕರು.

ಪ್ರಧಾನ ಕಚೇರಿಯಲ್ಲಿ ಕುಳಿತ ಅನುಭವಿ ಪತ್ರಕರ್ತರಿಂದ ಹಿಡಿದು ಗ್ರಾಮೀಣ ಭಾಗದಲ್ಲಿ ಕೆಲಸ ಮಾಡುವ ಅರೆಕಾಲಿಕ ಪತ್ರಕರ್ತರವರೆಗೆ ಒಂದು ಪತ್ರಿಕೆಯನ್ನು ರೂಪಿಸುವಲ್ಲಿ ದೊಡ್ಡಪಡೆಯೇ ಕೆಲಸ ಮಾಡುತ್ತಿರುತ್ತದೆ. ಅತ್ಯಂತ ಕ್ಷಿಪ್ರಗತಿಯಲ್ಲಿ ಕೆಲಸ ಮಾಡುವ ಈ ಪತ್ರಕರ್ತರ ಪಡೆಯ ಬರವಣಿಗೆಯಲ್ಲಿ ಒಂದು ಸುಸಂಗತತೆಯಂತೂ ಬೇಕೇಬೇಕು. ಅದಕ್ಕಾಗಿಯೇ ಹಲವು ಇಂಗ್ಲಿಷ್‌ ಮಾಧ್ಯಮಗಳು ಶೈಲಿ ಪುಸ್ತಕವನ್ನು ನಿರ್ವಹಣೆ ಮಾಡುತ್ತವೆ. ಕನ್ನಡದಲ್ಲಿ ಇಂತಹ ಪರಿಪಾಟ ಇನ್ನೂ ಬೆಳೆದಿಲ್ಲ (ಪ್ರಜಾವಾಣಿಯಲ್ಲಿ ಸಮಾನ ಪದಗಳನ್ನು ಬಳಸುವ ಶೈಲಿ ನಿಘಂಟು ರೂಪಿಸುವ ಕೆಲಸ ಹಲವು ವರ್ಷಗಳಿಂದಲೂ ಅಂಬೆಗಾಲು ಹಾಕುತ್ತಿದೆ). ಪ್ರಸಕ್ತ ದೀಪಿಕೆಯೇನೂ ಶೈಲಿ ಪುಸ್ತಕವಲ್ಲವಾದರೂ ಶೈಲಿ ಪುಸ್ತಕದ ಬಹುಪಾಲು ಅಗತ್ಯಗಳನ್ನು ಅದು ಪೂರೈಸುತ್ತಿದೆ. ತಪ್ಪುಗಳನ್ನು ಸೋದಾಹರಣವಾಗಿ ಎತ್ತಿತೋರಿ, ಸರಿ ಏನೆಂಬುದನ್ನು ಚರ್ಚಿಸಿರುವುದು ಇದರ ವಿಶೇಷತೆ.

ಕನ್ನಡದ ಹಲವು ಪತ್ರಿಕೆಗಳನ್ನು ನಿತ್ಯ ಹರಡಿಕೊಂಡು ಇಂತಹ ನೂರಾರು ಉದಾಹರಣೆಗಳನ್ನು ಸಂಗ್ರಹಿಸಿ, ವಿಶ್ಲೇಷಿಸುವಲ್ಲಿ ದಂಡಾವತಿ ಅವರು ಹಾಕಿದ ಪರಿಶ್ರಮ ದೀಪಿಕೆಯ ಉದ್ದಕ್ಕೂ ಎದ್ದುಕಾಣುತ್ತದೆ. `ಪ್ರಜಾವಾಣಿ’ಯ ಪತ್ರಕರ್ತರಿಗೆ ನಾವು ಈ ಹಿಂದೆ ಹೀಗೆಯೇ ಉದಾಹರಣೆ ಸಹಿತವಾಗಿ ತಪ್ಪುಗಳ ಕುರಿತು ವಿವರಣೆ ನೀಡುತ್ತಿದ್ದಾಗ ಅವರ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತಿತ್ತು, ತಪ್ಪುಗಳು ಕಡಿಮೆಯಾಗಲೂ ಇದರಿಂದ ಸಾಧ್ಯವಾಗಿತ್ತು ಎನ್ನುವುದು ಅನುಭವದಿಂದ ಕಂಡುಕೊಂಡ ಸತ್ಯ. ಪತ್ರಕರ್ತರು ಮಾಡಿದ ತಪ್ಪುಗಳಿಗೆ ಕನ್ನಡಿ ಹಿಡಿದ ಕಾರಣದಿಂದ, ಆ ತಪ್ಪುಗಳನ್ನು ಹೇಗೆ ಸರಿಪಡಿಸಬಹುದಿತ್ತು ಎಂಬ ವಿವರಣೆಯನ್ನೂ ನೀಡಿರುವುದರಿಂದ ಈ ದೀಪಿಕೆಗೆ ತನ್ನದೇ ಆದ ಮಹತ್ವವಿದೆ. ಪತ್ರಕರ್ತರಿಗೆ ಮಾರ್ಗದರ್ಶಿಯಾಗಿಯೂ ಇದು ಕೆಲಸ ಮಾಡುತ್ತದೆ. ಕನ್ನಡ ಪತ್ರಿಕೋದ್ಯಮದ ಪ್ರಮುಖ ಕೊರತೆಯೊಂದನ್ನು ನೀಗಿಸುವಲ್ಲಿ ಇದೊಂದು ದೊಡ್ಡ ಹೆಜ್ಜೆಯಾಗಿ ಕಾಣುತ್ತದೆ. ಪ್ರತಿಯೊಂದು ಸುದ್ದಿಮನೆಯಲ್ಲೂ, ಅಷ್ಟೇ ಏಕೆ, ಪ್ರತಿಯೊಬ್ಬ ಪತ್ರಕರ್ತನ ಜತೆಯಲ್ಲೂ ಇರಲೇಬೇಕಾದ ಕೃತಿ ಇದಾಗಿದೆ ಎಂದು ಹೇಳುವುದರಲ್ಲಿ ಯಾವ ಉತ್ಪ್ರೇಕ್ಷೆಯೂ ಇಲ್ಲ. ಪತ್ರಿಕೋದ್ಯಮ ಕಾಲೇಜುಗಳಲ್ಲೂ ಈ ದೀಪಿಕೆ ಆಧರಿತ ಪಾಠಗಳ ಬೋಧನೆಗೆ ವ್ಯವಸ್ಥೆಯಾದರೆ ಮುಂಬರುವ ಪತ್ರಕರ್ತರ ಪಡೆಗೆ ಕಲಿಯುವ ಹಂತದಲ್ಲೇ ಭಾಷೆಯನ್ನು ಸುಧಾರಿಸಿಕೊಳ್ಳಲು ಸಾಧ್ಯವಾದೀತು ಎಂದೂ ನನಗನಿಸಿದೆ.

ಕನ್ನಡದ ಪತ್ರಕರ್ತರು ಎದುರಿಸುವ ಬಹಳಷ್ಟು ಪ್ರಶ್ನೆಗಳಿಗೆ ಈ ದೀಪಿಕೆಯಲ್ಲಿ ಉತ್ತರವಿದೆ. ಕರ್ತೃ, ಕರ್ಮ ಮತ್ತು ಕ್ರಿಯಾಪದದ ಅನ್ವಯಾನುಕ್ರಮದ ಕುರಿತು, ಏಕವಚನ-ಬಹುವಚನ ಸಮಸ್ಯೆಯ ಕುರಿತು, ಮಹಾಪ್ರಾಣದ ಮೋಹದ ಕುರಿತು, ಸಂಧಿ ನಿಯಮಗಳ ಕುರಿತು, ಇನ್ನು, ಇನ್ನೂ ಗೊಂದಲದ ಕುರಿತು ಇಲ್ಲಿ ವಿವರವಾಗಿ ಚರ್ಚಿಸಲಾಗಿದೆ (ವಾಸ್ತವವಾಗಿ, ಪತ್ರಿಕಾ ವರದಿಗಳು ಎದುರಿಸುತ್ತಿರುವ ಬಹುಮುಖ್ಯ ಸವಾಲುಗಳೇ ಇವಾಗಿವೆ).

ಅಪರಾಧ ಹಾಗೂ ನ್ಯಾಯಾಲಯದ ವರದಿಗಾರಿಕೆ ಕುರಿತು ಅಧ್ಯಾಯವೊಂದನ್ನು ಮೀಸಲಿಟ್ಟಿರುವುದು ಕೂಡ ಒಳ್ಳೆಯ ನಿರ್ಧಾರ. ತಲೆಬರಹ, ಶೀರ್ಷಿಕೆಗಳನ್ನು ಸಹ ‘ಸರಿ-ತಪ್ಪು’ ತಕ್ಕಡಿಯಲ್ಲಿಟ್ಟು ತೂಗಿ ನೋಡಿ, ಓದುಗರ ಮುಂದೆ ಇಡಲಾಗಿದೆ. ಹೀಗಿದ್ದೂ ಈ ದೀಪಿಕೆ ಪರಿಪೂರ್ಣವಲ್ಲ. ಯಾವ ವರದಿಯನ್ನು ಹೇಗೆ ಮಾಡಬೇಕು (ಉದಾಹರಣೆಗೆ, ಶಾಸನಸಭೆಗಳ ವರದಿಯನ್ನು ಹೇಗೆ ಮಾಡಬೇಕು, ಕ್ರೀಡಾ ವರದಿಗಳು ಹೇಗಿರಬೇಕು ಇತ್ಯಾದಿ) ಎಂಬುದನ್ನು ಕೆಲವು ಮಾದರಿಗಳ ಸಹಿತ ಚರ್ಚಿಸುವ ಮೂಲಕ ಈ ದೀಪಿಕೆಯ ವ್ಯಾಪ್ತಿಯನ್ನು ಶೈಲಿ ಪುಸ್ತಕವಾಗಿಯೂ ಹಿಗ್ಗಿಸಲು ಸಾಧ್ಯವಿದೆ. ಹಾಗೆಯೇ ಪರಿವಿಡಿ ಜತೆಗೆ ಕೆಲವು ಪ್ರಮುಖ ಪದಗಳು/ವಿಷಯಗಳು ಚರ್ಚೆಯಾಗಿರುವ ಪುಟಗಳ ಮಾಹಿತಿಯನ್ನು ಒಳಗೊಂಡ ಪದಸೂಚಿಯನ್ನೂ ಕೊಟ್ಟಿರುವುದು ತುಂಬಾ ಔಚಿತ್ಯಪೂರ್ಣವಾಗಿದೆ. ಒತ್ತಡದಲ್ಲಿ ಕೆಲಸ ಮಾಡುವ ಪತ್ರಕರ್ತರಿಗೆ ಯಾವುದೇ ಪದದ ಕುರಿತು ಗೊಂದಲ ಉಂಟಾದಾಗ ಪದದ ಚರ್ಚೆಯಿರುವ ಪುಟಕ್ಕೆ ನೇರವಾಗಿ ಹೋಗಲು ಇದರಿಂದ ಅನುಕೂಲವಾಗಲಿದೆ.

ದಂಡಾವತಿ ಅವರು ಹದಿನೈದು ವರ್ಷಗಳವರೆಗೆ ನನ್ನ ನಿಕಟ ಸಹೋದ್ಯೋಗಿ ಆಗಿದ್ದವರು. ಭಾಷೆಯ ಕಡು ವ್ಯಾಮೋಹಿ ಎಂದು ಅವರನ್ನು ಕರೆಯುವಷ್ಟು ಅವರಿಗೆ ಭಾಷೆಯ ಮೇಲೆ ಪ್ರೀತಿ, ಆಸಕ್ತಿ. `ಪ್ರಜಾವಾಣಿ’ಯ ಸಹ ಸಂಪಾದಕರಾಗಿ, ಕಾರ್ಯನಿರ್ವಾಹಕ ಸಂಪಾದಕರಾಗಿ ಅವರು ಬರವಣಿಗೆಯ ಶೈಲಿ ಮತ್ತು ಗುಣಮಟ್ಟವನ್ನು ಕಾಪಾಡಿದವರು, ಹೆಚ್ಚಿಸಿದವರು. ವರದಿಗಳಲ್ಲಿ ನುಸುಳುತ್ತಿದ್ದ ಸಣ್ಣಪುಟ್ಟ ದೋಷಗಳನ್ನೂ ಅವರು ಸಹಿಸುತ್ತಿರಲಿಲ್ಲ. ಇದು ಕೆಲವರಿಗೆ ಅತಿರೇಕವಾಗಿ ಕಂಡಿರಲಿಕ್ಕೂ ಸಾಕು. ಆದರೆ, ಬದ್ಧತೆಯಿಂದ ಕೂಡಿದ ಇಂತಹ ಪ್ರಯತ್ನವಿಲ್ಲದೆ ಸುಧಾರಣೆಯನ್ನು ತರುವುದು ಕಷ್ಟ. ವ್ಯವಸ್ಥೆ ಸುಧಾರಿಸುವವರೆಗೆ ಸುದ್ದಿಮನೆಯಲ್ಲಿ ಪಟ್ಟುಬಿಡದೆ ಲೋಪದೋಷ ಸರಿಪಡಿಸುವ ಇಂತಹ ಪ್ರಯತ್ನಗಳು ತಪಸ್ಸಿನಂತೆ ನಡೆಯುತ್ತಲೇ ಇರಬೇಕು. ಆ ಯತ್ನದಲ್ಲಿ ಈ ದೀಪಿಕೆ ತುಂಬಾ ಉಪಯುಕ್ತ ಎನ್ನುವುದರಲ್ಲಿ ಎರಡು ಮಾತಿಲ್ಲ.

ಮಾಧ್ಯಮದ ಮೇಲೆ, ಭಾಷೆಯ ಮೇಲೆ ದಂಡಾವತಿ ಅವರು ಹೊಂದಿರುವ ಪ್ರೀತಿ, ಕಕ್ಕುಲಾತಿ ಪ್ರಶ್ನಾತೀತ. ನಿವೃತ್ತರಾದ ಮೇಲೂ ಬದ್ಧತೆಯಿಂದ ಈ ದೀಪಿಕೆಯನ್ನು ರೂಪಿಸಿರುವುದಕ್ಕೆ ಅವರ ಆ ಪ್ರೀತಿ, ಕಕ್ಕುಲಾತಿಯೇ ಕಾರಣವಾಗಿದೆ. ಭಾಷೆಯ ಶಿಸ್ತಿಗೆ ಆಗ್ರಹಿಸುವ ಅವರು, ಶೈಲಿಗೆ ಬದ್ಧರಾಗಿ ಇರಬೇಕಾದುದನ್ನೂ ಒತ್ತುಕೊಟ್ಟು ಹೇಳಿದ್ದಾರೆ. ಯಾವುದೇ ವರದಿಯಲ್ಲಿ ಭಾಷೆ-ಶೈಲಿ ಎರಡೂ ಮೇಳೈಸಿದರೆ ಅದು ಓದುಗನೊಂದಿಗೆ ಪರಿಣಾಮಕಾರಿ ಸಂವಹನ ಮಾಡುವುದರಲ್ಲಿ ಎರಡು ಮಾತಿಲ್ಲ. ಇದರಲ್ಲಿರುವ ಶೇ 60-70ರಷ್ಟು ಅಂಶಗಳನ್ನು ಪತ್ರಕರ್ತರು ಅಳವಡಿಸಿಕೊಂಡರೂ ಬಹುಪಾಲು ದೋಷಗಳು ನಿವಾರಣೆಯಾಗುವುವಲ್ಲದೆ ದಂಡಾವತಿ ಅವರ ಶ್ರಮ ಕೂಡ ಸಾರ್ಥಕವಾದಂತೆಯೇ. ಇಂತಹದ್ದೊಂದು ಉಪಯುಕ್ತ ದೀಪಿಕೆಯನ್ನು ಕೊಟ್ಟು ಉಪಕರಿಸಿದ ಅವರಿಗೆ ಕನ್ನಡ ಪತ್ರಿಕೋದ್ಯಮದ ಪರವಾಗಿ ಹಾರ್ದಿಕವಾಗಿ ಅಭಿನಂದಿಸುವೆ.

‍ಲೇಖಕರು avadhi

June 1, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: