ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಾವು ಬದುಕಿನ ಆಟದಲ್ಲಿ, ಬೆಂಗಳೂರಲ್ಲಿ!!

-ಪ್ರಕಾಶ್‍ ಕೊಡಗನೂರ್

೧ .ಸಾವು ಬದುಕಿನ ಆಟದಲ್ಲಿ, ಬೆಂಗಳೂರಲ್ಲಿ!!

ನನ್ನ ಬೆಂಗಳೂರು ಯಾನ
ಮಣಿಪಾಲ, ನಿಮ್ಹಾನ್ಸ್‌ ಆಸ್ಪತ್ರೆಗಳಿಂದ
ಮೊದಲುಗೊಂಡು ಇದೀಗ
ಬ್ಯಾಪ್ಟಿಸ್ಟ್‌ವರೆಗೆ ಮುಂದುವರೆದಿದೆ;
ಚಿಕಿತ್ಸೆಯಲ್ಲಿ ಫಲಕಾಣದೆ ಹೋದರೂ
ಹೊಸ ಹೊಸ ಭರವಸೆಗಳು
ಬದುಕಿನ ಚೇತರಿಕೆಗಳಾಗಿ ಮುನ್ನುಗ್ಗಿವೆ!

ಹಳೆರೋಗ ಪಿತ್ರಾರ್ಜಿತ ಆಸ್ತಿಯಂತೆ
ಹೊಸರೋಗ ಸ್ವಯಾರ್ಜಿತ ಸ್ವತ್ತಿನಂತೆ
ಒಂದುಗೂಡುತ್ತ ಸಾಗಿದೊಡನೆ
ನಾನು ಲಕಲಕನೆ ಹೊಳೆವ ರೋಗಾಧಿಪತಿ!

ಇದೆಲ್ಲದರ ನಡುವೆ
ಪ್ರವಾಹದೋಪಾದಿಯಲ್ಲಿ
ಭೋರ್ಗರೆವ ಜನರು;
ಹಣವಂತರ ಅಧಿಕಾರಸ್ಥರ
ಮೋಜು ಮಸ್ತಿ;
ವ್ಯಾಪಾರಿಗಳ ಉದ್ಯಮಪತಿಗಳ
ದುರಾಸೆ ವಂಚನೆಯ ಜಾಲ
ಸಾಮೂಹಿಕ ಸಂಘಟನಾತ್ಮಕ
ನೆಲೆಯಲ್ಲಿ ನೇಯ್ದ ಬಲೆಗಳಾಗಿ
ಅಮಾಯಕರ ಅಸಹಾಯಕರ
ಮಟ್ಟಹಾಕುವ ಪರಿ
ಬೆಂಗಳೂರಿಗೇ ಕಳಸಪ್ರಾಯದಂತಿದೆ!

ಅಲ್ಲದೆ ಒಂದಿಷ್ಟು ಬಿಡುವು
ಮಾಡಿಕೊಂಡು ನನ್ನ ಪ್ರೀತಿಪಾತ್ರರನ್ನ
ಭೇಟಿಯಾಗಿ ಹಗುರವಾಗೋಣವೆಂದರೆ
ಅವರು ನಿಲುಕಲಾರದಷ್ಟು
ಎತ್ತರಕ್ಕೆ ಬೆಳೆದುಬಿಟ್ಟಿದ್ದಾರೆ;
ಕಲೆ ಸಾಹಿತ್ಯ
ಸಿನಿಮಾ ಸಂಗೀತ
ಪ್ರತಿಕೋದ್ಯಮ ಸಮಾಜದ
ಅಸಮಾನತೆಯ ವಿರುದ್ಧ ಹೋರಾಡುತ್ತಿದ್ದಾರೆ!

ಹಾಗಂತ ನಾನು
ನಿರಾಶನಾಗಲಾರೆ;
ಸಾವು ಬದುಕಿನ ಆಟದಲ್ಲೂ
ಕೈಚೆಲ್ಲಿ ಕೂರಲಾರೆ.
ನನ್ನಿಷ್ಟದ ʻಪದ್ಯಮಾರ್ಗʼದ
ಮೂಲಕವೇ ಅವರನ್ನು
ತಲುಪಲು ಯತ್ನಿಸುತ್ತೇನೆ;
ಅಲ್ಲಿಯವರೆಗೆ ಇರುವ ʻಜೀವʼವನ್ನ
ಜತನದಿಂದ ಕಾಪಾಡಿಕೊಳ್ಳುತ್ತೇನೆ;
ಉಳಿದದ್ದು ಕಾಲಕ್ಕೆ ಬಿಟ್ಟುಬಿಡುತ್ತೇನೆ!!

೨ .ಹರಿವು

ಮೊದಮೊದಲು
ಪ್ರೀತಿ ಭಾವಕ್ಕೆ
ಅಂಟಿಕೊಳ್ಳತ್ತೆ
ತರುವಾಯ ನಿಧಾನಕೆ
ಹೃದಯದಾಳಕ್ಕಿಳಿದು
ಬೇರುಬಿಡತ್ತೆ

ನಂತರ ಪ್ರೀತಿ
ಬುದ್ಧಿಗೆ ಅಂಟಿಕೊಳ್ಳತ್ತೆ
ತರುವಾಯ ನಿಧಾನಕೆ
ಮೆದುಳಿನಾಳಕ್ಕಿಳಿದು
ವಿವೇಕವಾಗತ್ತೆ

ಮುಂದುವರೆದಂತೆ ಪ್ರೀತಿ
ದಾಹಕ್ಕೆ ಅಂಟಿಕೊಳ್ಳತ್ತೆ
ತರುವಾಯ ನಿಧಾನಕೆ
ದೇಹದಾಳಕ್ಕಿಳಿದು
ವಿಷಯಾಸಕ್ತವಾಗತ್ತೆ

ಅನಂತರ ಪ್ರೀತಿ
ಭಾವ ಬುದ್ಧಿ ದಾಹಗಳೆಲ್ಲದರ
ಸಂಗಮದಿಂದ ಮೋಹವಾಗತ್ತೆ
ತರುವಾಯ ನಿಧಾನಕೆ
ಮೆರೆಯಲಾರಂಭಿಸತ್ತೆ

ಕೊನೆಗೆ ಎಲ್ಲ ಗೌಣವಾಗಿ
ಪ್ರೀತಿ ಅತೀತದ ಪ್ರತೀಕವಾಗತ್ತೆ
ತರುವಾಯ ನಿಧಾನಕೆ
ಸುಖಾಂತ್ಯವೊ ದುಃಖಾಂತ್ಯವೊ
ಒಂದಂತೂ ಸಂಭವಿಸತ್ತೆ

೩ .ʻನಾನುʼ ಬೇಕು!

ನಾನು ಬದುಕಲು
ಪ್ರೀತಿ ಬೇಕು

ಪ್ರೀತಿ ಪೊರೆಯಲು
ಕವಿತೆ ಬೇಕು

ಕವಿತೆ ಕಟ್ಟಲು
ಕಸುವು ಬೇಕು

ಕಸುವು ಬರಲು
ಬಿಸುಪು ಬೇಕು

ಬಿಸುಪು ಬೆಳಗಲು
ಬೆಂಕಿ ಬೇಕು

ಬೆಂಕಿ ಭರಿಸಲು
ಕುಲುಮೆ ಬೇಕು

ಕುಲುಮೆ ಆಗಲು
ʻನಾನುʼ ಬೇಕು!

‍ಲೇಖಕರು Admin

17 October, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading