-ಡಾ.ರಾಜೇಂದ್ರಕುಮಾರ್ ಕೆ ಮುದ್ನಾಳ್
‘ಗಾಂಧಿ ಚೌಕ್ ‘ಪ್ರತಿಯೊಂದು ತಾಲೂಕು, ಜಿಲ್ಲಾ ಕೇಂದ್ರಗಳಲ್ಲಿರುವ ಪ್ರಸಿದ್ಧ ವೃತ್ತ, ಇಲ್ಲಿ ಗಾಂಧಿಯ ಪ್ರತಿಮೆಗಳನ್ನು ಪ್ರತಿಷ್ಠಾಪಿಸಲಾಗಿದೆ. ಕುಳಿತಿರುವ, ನಿಂತಿರುವ ಅಥವಾ ನಡೆಯುತ್ತಿರುವ ಬಂಗಿಯ ಗಾಂಧಿ ಕಲಾಕೃತಿಗಳು ಮನಸೂರೆಗೊಳ್ಳುತ್ತವೆ.ಅವು ಅಧಿಕವಾಗಿ ಕಪ್ಪು ಬಣ್ಣ ಕಲ್ಲಿನಿಂದ ರಚನೆಗೊಂಡಿವೆ. ಕೆಲವು ಕಡೆ ಮುಖಾಕೃತಿಯ ಶಿಲ್ಪಗಳು ಕಂಡುಬರುತ್ತವೆ.ಗಾಂಧಿ ಚೌಕಿನಲ್ಲಿರುವ ಪ್ರತಿಮೆಗಳು ಮಳೆಗೆ,ಬಿಸಿಲಿಗೆ, ಹೆದರದೆ ಬಯಲಿನಲ್ಲಿ ಧ್ಯಾನಸ್ತವಾಗಿವೆ. ಕೆಲವು ಕಡೆ ಈಗ ಮೇಲ್ಚಾವಣಿ ಹೊಂದಿ ಮಂಟಪದೊಳಗೆ ಬಂಧಿಯಾಗಿವೆ. ಗಾಂಧಿ ಬಿಸಿಲಿಗೆ,ಚಳಿಗೆ, ಮಳೆಗೆ ಅಂಜದೆ ಇದ್ದ ಗಾಂಧಿ ಪ್ರತಿಮೆಗಳಿಗೆ ಈಗ ಜೀವ ಕಳೆ ಬಂದಂತೆ ಭಾಸವಾಗುತ್ತಿದೆ. ನಾನು ಸಣ್ಣವನಿದ್ದಾಗ ಗಾಂಧಿಗೆ ಮನೆ ಇಲ್ಲವೇ ಎಂದು ಯೋಚಿಸುತಿದ್ದೆ.ಬಯಲಿನಲ್ಲಿ ಏಕೆ ನಿಲ್ಲಿಸಿದ್ದಾರೆ ಎಂದು ಕೇಳುತ್ತಿದ್ದ ನೆನಪು.
ಗಾಂಧಿ ಗುಡಿಗಳಿವೆ,ಪ್ರತಿಷ್ಠಾನಗಳಿವೆ, ಸೇವಾ ಶ್ರಮಗಳು ಕಾರ್ಯನಿರ್ವಹಿಸುತ್ತಿವೆ. ಬಯಲಿನಲ್ಲಿದ್ದ ಗಾಂಧಿ ಪ್ರತಿಮೆಗಳಿಗೆ ತಲೆ ಮೇಲೆ ಸೂರು ಆವರಿಸಿದೆ. ಆದರೆ ಗಾಂಧಿಯ ವಿಚಾರಗಳು ನಮ್ಮ ತಲೆಒಳಗೆ ಹೋಗದೆ ಇರುವುದು ವಿಪರ್ಯಾಸ. ಮನದಲ್ಲಿ ಕೂರುವುದು ಇನ್ನೂ ಅನುಮಾನ. ಗಾಂಧಿ ಬದುಕಿದ ರೀತಿ ಗಮನಿಸಿದರೆ ವಿಚಿತ್ರವೆನಿಸುವುದು.ಅವರೊಬ್ಬ ಪ್ರಾಯೋಗಿಕ ಸಂಕಲ್ಪದ ವ್ಯಕ್ತಿತ್ವ.ಸತ್ಯಾನ್ವೇಷಣೆಯ ಪಥಿಕ. ಅವರ ಆಲೋಚನೆಗಳು ಅರಿಯುವ ನಿಟ್ಟಿನಲ್ಲಿ ‘ತನ್ನನ್ನು ತಾನು ಸ್ವ ವಿಮರ್ಶೆಗೊಳಪಡಿಸಿಕೊಂಡ ವ್ಯಕ್ತಿತ್ವ.ಗಾಂಧೀ ಅಂತರಂಗದ ಅಲೆಗಳನ್ನು ಅರಿಯುವದಕ್ಕಾಗಿ ನಿಮ್ಮೊಂದಿಗೆ ‘ಗಾಂಧಿ ಚೌಕ್’ ಅಂಕಣ ಪ್ರತಿ ಸೋಮವಾರ ಬರುತ್ತಿದೆ. ಏಕೆಂದರೆ ಗಾಂಧಿ ಪ್ರತಿ ಸೋಮವಾರ ಮೌನ ವ್ರತ ಆಚರಿಸುತ್ತಿದ್ದರು. ಮೌನ ಸಮುದ್ರದ ಗಾಂಧಿಯೊಂದಿಗೆ
ಮಾತಾಡೋಣ, ಗಾಂಧಿಯ ಗಂಧ ತೀಡೋಣ ಬನ್ನಿ .
ಗಾಂಧಿ ಒಬ್ಬ ನ್ಯಾಯವಾದಿ.ತನ್ನಲ್ಲಿಗೆ ಬರುವ ಧಾವೆಗಳನ್ನು ಬಗೆಹರಿಸುತ್ತಿದ್ದ.ಹಾಗೆ ನ್ಯಾಯಾಲಯದಲ್ಲಿ ಕೇಸ್ ಹಾಕಿ ಸಮಯ, ಹಣ ಹಾಳು ಮಾಡಿಕೊಳ್ಳದೆ ಚರ್ಚೆ ಸಂವಾದಗಳ ಮೂಲಕ ವಿವಾದಗಳನ್ನು ಪರಿಹ ಸಿಕೊಳ್ಳಬೇಕೆಂಬ ವಿಚಾರ ಗಾಂಧಿಯದಾಗಿತ್ತು. ನ್ಯಾಯಾಲಯದಿಂದ ತೀರ್ಪು ಬರುವ ಹೊತ್ತಿಗೆ ನಮ್ಮ ನೆಮ್ಮದಿ ಹಾಳಗಿರುತ್ತದೆ ಎಂಬ ಅರಿವು ಗಾಂಧಿಗಿತ್ತು.ಇದರಿಂದ ಹಳ್ಳಿಗಳಲ್ಲಿರುವ ನ್ಯಾಯ ಪಂಚಾಯಿತಿಗಳ ಬಗ್ಗೆ ಉತ್ತಮ ಅಭಿಪ್ರಾಯ ಗಾಂಧಿ ಹೊಂದಿದ್ದರು . ವಿವಿಧ ಜನಾಂಗದವರು ಗಾಂಧಿಯನ್ನು ಸಂಪರ್ಕಿಸುತ್ತಿದ್ದರು. ಹಾಗಾಗಿ ಗಾಂಧಿ ಎಲ್ಲಾ ಮತ, ಧರ್ಮಗಳ ಕೃತಿಗಳನ್ನು ಅಧ್ಯಯನ ಮಾಡುತ್ತಿದ್ದರು.ಅಲ್ಲಿನ ಮೌಲ್ಯಗಳನ್ನು ಕರಗತ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದರು.ಕೇವಲ ತಲೆ ಉಪಯೋಗಿಸಿ ಕೆಲಸ ಮಾಡದೆ ದೈಹಿಕ ಶ್ರಮ ಅವಶ್ಯವೆಂದು ಗಾಂಧಿ ಪ್ರತಿಪಾದಿಸುತ್ತಿದ್ದರು.ಹಾಗಾಗಿ ದಕ್ಷಿಣ ಆಫ್ರಿಕದಲ್ಲಿನ ತಮ್ಮ ಸೇವಾಶ್ರಮದಲ್ಲಿ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಫಾರ್ಸಿ, ಬಿಳಿಯರು, ಕರಿಯರು ಪ್ರತಿಯೊಬ್ಬರು ತೋಟದಲ್ಲಿ ಶ್ರಮಿ ಸುತ್ತಿದ್ದರು.4 ಸಾವಿರ ರೂಪಾಯಿಗಳು ಕೊಡುವ ಬ್ಯಾರಿಸ್ಟರ್ ಕೆಲಸ ಬಿಟ್ಟು,ಕೃಷಿಕರಾಗಿದ್ದರು.ಪ್ರತಿ ತಿಂಗಳ ಖರ್ಚಿಗಾಗಿ 40 ರೂಪಾಯಿಯನ್ನು ಕೆಲಸ ಮಾಡುವವರಿಗೆ ಕೊಡುತ್ತಿದ್ದರು. ಗಾಂಧಿಯ ಈ ಕೆಲಸಕ್ಕೆ ವಿದೇಶಿಗರು
ಮನಸೋತ್ತಿದ್ದರು.
ಇಂದಿನ ಯುಗದಲ್ಲಿ ನಾವೆಲ್ಲರೂ ಶ್ರಮ ರಹಿತ ಜೀವನ ಸಾಗಿಸಿ, ರೋಗಗಳಿಗೆ ಆಹ್ವಾನ ನೀಡುತ್ತಿದ್ದೇವೆ . ದೈಹಿಕವಾಗಿ ಅಂಗವಿಕಲತೆಯನ್ನು ಅನುಭವಿಸುತ್ತಿದ್ದೇವೆ ಎಂಬುದರ ಅರಿವು ನಮಗಾಗಬೇಕು.ನಗರದ, ಹಳ್ಳಿಯ ಯಾಂತ್ರಿಕ ಬದುಕಿನ ಒತ್ತಡ ಜೀವನ ನಮ್ಮನ್ನು ಕೃಷಿಯಿಂದ ವಿಮುಖರನ್ನಾಗಿಸಿದೆ. ದುಡಿಮೆ ಕೆಲವರ ಪಾಲಿಗೆ ಇದೆ ಎಂಬ ಅಹಂ ನಮ್ಮ ತಲೆಗೆ ಬಂದಿದೆ.ಇದರಿಂದ ಬಿಡುಗಡೆ ಹೊಂದುವ ದಾರಿಗಳಾವವು ಎಂಬುದನ್ನು ನಾವು ಅರಿತುಕೊಳ್ಳಬೇಕಿದೆ.
ಗಾಂಧಿ ತಮ್ಮ ಸೇವಾಶ್ರಮದಲ್ಲಿ ಯಾರನ್ನು ಕೆಲಸಕ್ಕೆ ಇಟ್ಟುಕೊಂಡಿರಲಿಲ್ಲ. ಪ್ರತಿಯೊಬ್ಬರೂ ದುಡಿಯುತ್ತಿದ್ದರು.ಹಾಗೆ ಒಂದೇ ಅಡುಗೆ ಮನೆಯಲ್ಲಿ ತಯಾರಿಸಿದ ಊಟವನ್ನು ಸೇವಿಸುತ್ತಿದ್ದರು ಎಂಬುದು ವಿಶೇಷ. ಒಮ್ಮೆ ತೋಟದಲ್ಲಿ ಗುಡಿಸಿಲು ನಿರ್ಮಿಸಲು ಮುಂದಾದಾಗ ಗಾಂಧೀಜಿಯೇ ಮೊದಲು ಮೇಲ್ಚಾವಣಿ ನಿರ್ಮಿಸಲು ಮೇಲೆ ಹತ್ತಿದರು. ತಮ್ಮ ನಿಲುವಂಗಿಯಲ್ಲಿ ದೊಡ್ಡ ಮೊಳೆ, ಸಣ್ಣ ಮೊಳೆಗಳನ್ನು ಇಟ್ಟುಕೊಂಡು ಸುತ್ತಿಗೆಯಿಂದ ಅನಾಯಾಸವಾಗಿ ಕೆಲಸ ಮಾಡುತ್ತಿದ್ದರು. ದಿನದ ಆರು ಗಂಟೆಗಳ ಮಾತ್ರ ವಿಶ್ರಾಂತಿ ಪಡೆಯುತ್ತಿದ್ದರೆಂಬುದು ಅವರ ದಿನಚರಿಯಿಂದ ಗೊತ್ತಾಗುತ್ತದೆ.ಗಾಂಧಿ ದೈಹಿಕ ಶ್ರಮಜೀವಿಯಾಗಿದ್ದರು ಎಂಬುದಕ್ಕೆ ಹಲವು ಉಧಾಹರಣೆಗಳಿವೆ. ಅವರು ಒಮ್ಮೆ ಪುಸ್ತಕದ ಕಪಾಟನ್ನು ಮಾಡಲು ಏಳು ಗಂಟೆಗಳ ಕಾಲ ಸತತವಾಗಿ ಕುಳಿತು ಕಪಾಟು ತಯಾರಿಸಿದ್ದರು. ಅವರು ಶ್ರಮಜೀವಿಗಳ ಕುರಿತಾಗಿ ಹೇಳುವ ಮಾತು ಮಹತ್ವದ್ದಾಗಿದೆ.
” ನಾವು ಮೇಸ್ತ್ರಿಗಳನ್ನು, ಚಮ್ಮಾರರನ್ನು, ಬಡಗಿಗಳನ್ನು, ಕಮ್ಮಾರರನ್ನು ಮತ್ತು ಕ್ಷೌರಿಕರನ್ನು ನಮಗಿಂತ ಕೀಳಾಗಿ ನೋಡುತ್ತೇವೆ . ಅವರ ವೃತ್ತಿ ಮತ್ತು ಮನೆಗಳಿಂದ ಎಲ್ಲಾ ಸೌಜನ್ಯ, ಕಲಿಕೆ, ಸಭ್ಯತೆ ಮತ್ತು ಸಂಸ್ಕೃತಿ ಕಸಿದುಕೊಂಡೆವು. ಕುಶಲ ಕೆಲಸವನ್ನು ಕೀಳಾಗಿ ಕಂಡೆವು.ಅತ್ತ ಕಾರಕೂನಗಿರಿಯನ್ನು ಅಟ್ಟಕ್ಕೇರಿಸಿದವು.ನಾವು ಗುಲಾಮಗಿರಿಯನ್ನು ಆಹ್ವಾನಿಸಿದ್ದು ಹೀಗೆಯೇ.ಆದ್ದರಿಂದಲೇ ಅ ಸಂತೋಷದ ಸ್ಥಿತಿಗೆ ಬಂದು ಬಿದ್ದಿದ್ದೇವೆ “ಎಂದು ನಂಬಿದ್ದರು.
ಯಾವ ಕೆಲಸವೂ ಕೀಳಲ್ಲ, ಯಾವ ಕೆಲಸವೂ ಮೇಲಲ್ಲ ಎಂಬ ಅರಿವು ಗಾಂಧಿಯವರಿಗಿತ್ತು ಪ್ರತಿಯೊಂದು ಕೆಲಸವನ್ನು ಅವರೇ ಮಾಡಿಕೊಳ್ಳುತ್ತಿದ್ದರು . ಕ್ಷೌರ ಮಾಡಿಕೊಳ್ಳುವುದು,ಬಟ್ಟೆಗಳಿಗೆ ಇಸ್ತ್ರಿ ಹಾಕುವುದು, ಬೀಸೋ ಕಲ್ಲಿನಿಂದ ಗೋಧಿಯನ್ನು ಪುಡಿ ಮಾಡುತ್ತಿದ್ದರು. ಗಣಿ ಕಾರ್ಮಿಕರ ಆರೈಕೆ ಮಾಡುತ್ತಿದ್ದರು. ಶೌಚಾಲಯಗಳನ್ನು ತೊಳೆಯುತ್ತಿದ್ದರು. ಕುಷ್ಟ ರೋಗಿಗಳ ಗಾಯಕ್ಕೆ ಮುಲಾಮು ಹಚ್ಚುತ್ತಿದ್ದರು. ಗಾಂಧಿ ಸೋಮಾರಿತನದಿಂದ ದೂರವಿದ್ದರು. ಸೋಮಾರಿತನ ನಮ್ಮನ್ನು ಗೆಲುವಿನಿಂದ ದೂರ ಮಾಡುತ್ತದೆ ಎಂಬ ಅರಿವು ನಮಗಾಗಬೇಕು.
ಎಲ್ಲಾ ಕೆಲಸಗಳ ಮಧ್ಯೆ ಗಾಂಧೀಜಿ ಪುಸ್ತಕಗಳ ಬೈಂಡಿಂಗ್ ಮಾಡುತ್ತಿದ್ದರು.ಪತ್ರಿಕೆಗೆ ಲೇಖನಗಳನ್ನು, ಪತ್ರಗಳನ್ನು, ಸಂಪಾದಕೀಯ ಬರೆಯುತ್ತಿದ್ದರು.ನೇಯ್ಗೆ ಕಾಯಕದಲ್ಲಿ ನಿರತರಾಗಿರುತ್ತಿದ್ದರು. 78ರ ವಯಸ್ಸಿನಲ್ಲೂ ಗಾಂಧಿ 18ಗಂಟೆಗಳ ಕಾಲ ಕೆಲಸ ಮಾಡಿದಂತಹ ಧೀಮಂತ ಶ್ರಮಜೀವಿ. ಗಾಂಧೀಜಿಯವರ ಆರೋಗ್ಯದ ಗುಟ್ಟು ನಡಿಗೆಯೇ ಆಗಿತ್ತು. ತಮಗೇನಾದರೂ ಆಯಾಸವಾದರೆ ಶಕ್ತಿಗಾಗಿ ಭಗವಂತನಲ್ಲಿ ಪ್ರಾರ್ಥಿಸುತ್ತಿದ್ದರು . ಜೈಲಿನಲ್ಲಿ ಹರಿದ ಕಂಬಳಿಗಳನ್ನು ಹೊಲೆಯುತ್ತಿದ್ದರು. ಕೈದಿಯಾಗಿದ್ದಾಗ ಸುಮಾರು ಒಂಬತ್ತು ಗಂಟೆಗಳ ಕಾಲ ಗುದ್ದಲಿಯಿಂದ ಒಣ ಭೂಮಿ ತೋಡಿದ್ದರು. ತೋಟಗಾರಿಕೆ ಕೆಲಸದಲ್ಲಿ ಬಹಳಷ್ಟು ಕೆಲಸಗಳನ್ನು ಗಾಂಧಿ ಮಾಡುತ್ತಿದ್ದರು. ಹಾಗಾಗಿ ದಕ್ಷಿಣ ಆಫ್ರಿಕಾದ ಅವರ ಸಹೋದ್ಯೋಗಿ ಮಿತ್ರರು ಅವರನ್ನು ‘ಕರ್ಮವೀರ’ಎಂಬ ಬಿರುದಿಗೆ ಪಾತ್ರರಾಗಿದ್ದರು. ಶಿವಶರಣರ ಕಾಯಕ ಪ್ರಜ್ಞೆ ಗಾಂಧಿಯಲ್ಲಿ ಜಾಗೃತವಾಗಿತ್ತು. ‘ಕಾಯಕದಲ್ಲಿ ನಿರತನಾದಡೆ ಗುರುದರ್ಶನವಾದರೂ ಮರೆಯಬೇಕು’ ಎಂಬ ವಚನಕಾರರ ನಿಟ್ಟಿನಲ್ಲಿ ಗಾಂಧಿ ಕೆಲಸ ಮಾಡಿದ್ದ ರೆನಿಸುತ್ತದೆ. ಹಾಗಾಗಿ ಗೋಪಾಲಕೃಷ್ಣ ಅಡಿಗರು ‘ಭಾರತದ ತಂದೆ ಗಾಂಧಿ ಕವಿತೆಯಲ್ಲಿ ನುಡಿದ ಸಾಲುಗಳಿವು.
ಏಳುವವರೇ ಏಳಿ, ಎದ್ದು ಹಿಡಿಯಿರವನ ಪಥವನು,
ಬಾಳುವವರೆ, ಇದ್ದು ಬಾಳಿ ಅವನ ವೀರ ವ್ರತವನು,
ಏರುವವರೇ ಏರಿ ಅವನು ಏರಿದಂತ ರಥವನು,
ಮುಟ್ಟುವವರೆ, ಮುಟ್ಟಿ ಅವನು ತೋರಿದಂತ ಗುರಿಯನು,
ಪಡೆಯುವವರೆ, ಪಡೆಯಿರವನ ಆತ್ಮದಮರಸಿರಿಯನು,
ಅವನ ದಾರಿಯೊಂದೇ ದಾರಿ, ಉಳಿದುದೆಲ್ಲ ಹಳುವವು,
ಅವನ ಗುರಿಯೇ ಗುರಿಯು,
ಉಳಿದುದೆಲ್ಲ ವಿಫಲ ಚಪಲವು!






0 Comments