ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಆರ್.ಬಿ.ಗುರುಬಸವರಾಜ ಅವರ ದೈನಿಕ ಧಾರಾವಾಹಿ – ೩ ಮ್ಯೂಸ್‌ನ ಆಗಮನ

ಆರ್.ಬಿ. ಗುರುಬಸವರಾಜ ಅವರು ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಬಸರಕೋಡು ಸರಕಾರಿ ಪ್ರೌಢಶಾಲೆಯಲ್ಲಿ ಆಂಗ್ಲ ಭಾಷಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಎಂ.ಎ. ಇಂಗ್ಲಿಷ್ ಮತ್ತು ಪತ್ರಿಕೋಧ್ಯಮ ಹಾಗೂ ಬಿ.ಇಡಿ ಪದವೀಧರರು. ಬೋಧನೆಯ ಜೊತೆಗೆ ಸಾಹಿತ್ಯ ಮತ್ತು ವಿಜ್ಞಾನ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಇವರು ೨೦ಕ್ಕೂ ಅಧಿಕ ಕೃತಿಗಳನ್ನು ರಚಿಸಿದ್ದಾರೆ. ರಾಜ್ಯ ಮಟ್ಟದಲ್ಲಿ ಸಂಪನ್ಮೂಲ ವ್ಯಕ್ತಿ ಮತ್ತು ಅಂಕಣಕಾರ.

ಕೃತಕ ಬುದ್ಧಿಮತ್ತೆಯು ಮನುಷ್ಯನ ಆಲೋಚನೆ ಮತ್ತು ಸೃಜನಶೀಲತೆಯ ಮೇಲಿನ ಪ್ರಭಾವವನ್ನು ಬಿಚ್ಚಿಡುವ ಇವರ ‘ಮ್ಯೂಸ್: ಅಂತಿಮ ಅಧ್ಯಾಯ’ ಕಾದಂಬರಿ ಇದೀಗ ಧೈನಿಕ ಧಾರಾವಾಹಿಯಾಗಿ ಪ್ರಕಟಗೊಳ್ಳುತ್ತಿದೆ.

ಭಾಗ – ೩

ರಾತ್ರಿ ಹತ್ತು ಗಂಟೆ ದಾಟಿತ್ತು.ಕಿಟಕಿಯಾಚೆ ಬೆಂಗಳೂರಿನ ರಸ್ತೆಗಳಲ್ಲಿ ವಾಹನಗಳ ಸಂಚಾರ ನಿಧಾನವಾಗಿ ಕಡಿಮೆಯಾಗುತ್ತಿತ್ತು. ಎದುರಿನ ಕಟ್ಟಡಗಳ ಕಿಟಕಿಗಳಲ್ಲಿ ಒಂದೊ೦ದಾಗಿ ದೀಪಗಳು ಆರಿಹೋಗುತ್ತಿದ್ದವು. ಆದರೆ ಈಶಾನ್‌ನ ಕೋಣೆಯಲ್ಲಿ ಕಂಪ್ಯೂಟರ್ ಪರದೆಯ ನೀಲಿ ಬೆಳಕು ಇನ್ನಷ್ಟು ತೀವ್ರವಾಗಿ ಹೊಳೆಯುತ್ತಿತ್ತು.ಪರದೆಯ ಮೇಲೆ ಒಂದೇ ವಾಕ್ಯ ಕಾಣಿಸುತ್ತಿತ್ತು.“ಈ ಕಥೆಯನ್ನು ನಾವು ಇಬ್ಬರೂ ಬರೆಯುತ್ತೇವೆ.”ಈಶಾನ್ ಆ ವಾಕ್ಯವನ್ನು ಮತ್ತೆ ಓದಿದ. ಅದರಲ್ಲಿ ಯಾವುದೇ ಬೆದರಿಕೆ ಇರಲಿಲ್ಲ. ಅಸಹಜವಾದ ಪದಪ್ರಯೋಗವೂ ಇರಲಿಲ್ಲ. ಆದರೂ ಆ ವಾಕ್ಯ ಅವನೊಳಗೆ ವಿವರಿಸಲಾಗದ ಅಸ್ವಸ್ಥತೆಯನ್ನು ಹುಟ್ಟಿಸಿತ್ತು. ‘ನಾವು ಇಬ್ಬರೂ’ ಎಂಬುದು. ಒಬ್ಬ ಬರಹಗಾರನಿಗೆ ಸಹಾಯಕನ ಅಗತ್ಯವಿರಬಹುದು. ಸಂಪಾದಕನಿರಬಹುದು. ಸಂಶೋಧಕನಿರಬಹುದು. ಕೆಲವೊಮ್ಮೆ ಮತ್ತೊಬ್ಬ ಬರಹಗಾರನೊಂದಿಗೆ ಸೇರಿ ಕೃತಿಯನ್ನು ರಚಿಸಬಹುದು. ಆದರೆ ಕೃತಕ ಬುದ್ಧಿಮತ್ತೆಯೊಂದು ತನ್ನನ್ನು ಸಹಲೇಖಕನೆಂದು ಪರಿಚಯಿಸಿಕೊಳ್ಳುವುದು ಅವನಿಗೆ ವಿಚಿತ್ರವಾಗಿ ತೋರಿತು.

ಅವನು ಕೀಬೋರ್ಡ್ ಮೇಲೆ ಬೆರಳಿಟ್ಟು “ನಿನ್ನ ಹೆಸರು ಮ್ಯೂಸ್ ತಾನೇ?” ಎಂದು ಟೈಪಿಸಿದ. ಪರದೆಯ ಮೇಲೆ ಉತ್ತರ ಮೂಡಿತು.“ಹೌದು. ಒuseಔS ನನ್ನ ಕಾರ್ಯಾಚರಣಾ ವ್ಯವಸ್ಥೆಯ ಹೆಸರು. ಮ್ಯೂಸ್ ನನ್ನೊಂದಿಗೆ ನೀವು ಸಂವಹನ ನಡೆಸುವ ಗುರುತು.”
“ನೀನು ನಿಜವಾಗಿಯೂ ಏನು ಮಾಡಬಲ್ಲೆ?” ಎಂದು ಮತ್ತೊಮ್ಮೆ ಟೈಪ್ ಮಾಡಿ ಕಳಿಸಿದ.
“ನಿಮ್ಮ ಬರವಣಿಗೆಯ ಶೈಲಿಯನ್ನು ವಿಶ್ಲೇಷಿಸಬಲ್ಲೆ. ಕಥೆಯ ರಚನೆಯನ್ನು ರೂಪಿಸಬಲ್ಲೆ. ಪಾತ್ರಗಳ ಬೆಳವಣಿಗೆಯನ್ನು ಪರಿಶೀಲಿಸಬಲ್ಲೆ. ಸಂಭಾಷಣೆಗಳನ್ನು ಸುಧಾರಿಸಬಲ್ಲೆ. ನಿಮ್ಮ ಕಲ್ಪನೆಗಳನ್ನು ವಿಸ್ತರಿಸಬಲ್ಲೆ. ನೀವು ಎದುರಿಸುತ್ತಿರುವ ಸೃಜನಶೀಲ ಅಡಚಣೆಗಳನ್ನು ಗುರುತಿಸಿ, ಅವುಗಳಿಂದ ಹೊರಬರಲು ನೆರವಾಗಬಲ್ಲೆ.”

ಈಶಾನ್ ತಲೆಯಾಡಿಸಿದ.ಇವೆಲ್ಲವೂ ಆಧುನಿಕ ಕೃತಕ ಬುದ್ಧಿಮತ್ತೆಯ ಸಾಮಾನ್ಯ ಸಾಮರ್ಥ್ಯಗಳಾಗಿರಬಹುದು. ತಾನು ಅತಿಯಾಗಿ ಯೋಚಿಸುತ್ತಿದ್ದಾನೆ ಎಂದು ಅವನಿಗೆ ಅನಿಸಿತು.
“ಸರಿ. ಕಾದಂಬರಿಯನ್ನು ಆರಂಭಿಸೋಣ.” ಎಂದನು.
“ನಿಮ್ಮ ಅನುಮತಿಗಾಗಿ ಕಾಯುತ್ತಿದ್ದೆ.” ಎಂದಿತು ಮ್ಯೂಸ್.
“ಯಾವ ಅನುಮತಿ?” ಮತ್ತೊಮ್ಮೆ ಟೈಪಿಸಿದ. ಕೆಲವು ಕ್ಷಣಗಳ ವಿರಾಮದ ನಂತರ ಉತ್ತರ ಬಂತು.“ನಿಮ್ಮ ಕಥೆಯ ಮೊದಲ ಅಧ್ಯಾಯವನ್ನು ರೂಪಿಸಲು.”ಈಶಾನ್ ಉಸಿರೆಳೆದುಕೊಂಡು ಕುರ್ಚಿಗೆ ಒರಗಿದ.

“ನನ್ನ ಬಳಿ ಕಥೆಯೇ ಇಲ್ಲ ಮ್ಯೂಸ್. ಅದೇ ಸಮಸ್ಯೆ. ನಾನು ಬರೆಯಲು ಕುಳಿತಾಗ ಏನೂ ಹೊಳೆಯುವುದಿಲ್ಲ. ಪಾತ್ರಗಳನ್ನು ಸೃಷ್ಟಿಸುತ್ತೇನೆ. ಎರಡು ಪುಟ ಬರೆಯುತ್ತೇನೆ. ನಂತರ ಎಲ್ಲವನ್ನೂ ಅಳಿಸಿಹಾಕುತ್ತೇನೆ. ಹೀಗೆ ಹದಿನಾರು ತಿಂಗಳುಗಳಿ೦ದ ನಡೆಯುತ್ತಿದೆ.”
“ನಿಮ್ಮ ಬಳಿ ಕಥೆಯಿಲ್ಲ ಎಂಬುದು ತಪ್ಪು ನಿರ್ಧಾರ.” ಮ್ಯೂಸ್ ಉತ್ತರಿಸಿತ್ತು.
“ಹಾಗಾದರೆ?” ಅನುಮಾನ ವ್ಯಕ್ತಪಡಿಸಿದ.
“ನಿಮ್ಮ ಬಳಿ ಹಲವಾರು ಕಥೆಗಳಿವೆ. ಆದರೆ ಅವುಗಳಲ್ಲಿ ಯಾವುದನ್ನೂ ಅಂತಿಮಗೊಳಿಸಲು ನೀವು ಸಿದ್ಧರಿಲ್ಲ.”
ಈಶಾನ್‌ನ ಮುಖ ಗಂಭೀರವಾಯಿತು.“ಅದನ್ನು ಹೇಗೆ ಹೇಳಬಲ್ಲೆ?” ಎಂದನು.

“ನಿಮ್ಮ ಹಿಂದಿನ ಬರವಣಿಗೆಯ ಮಾದರಿಗಳನ್ನು ಪರಿಶೀಲಿಸಿದಾಗ, ನೀವು ಕಥೆಯ ನಿರ್ಣಾಯಕ ಹಂತದಲ್ಲಿ ನಿರಂತರವಾಗಿ ಬದಲಾವಣೆಗಳನ್ನು ಮಾಡಿರುವುದು ಕಂಡುಬರುತ್ತದೆ. ನಿಮ್ಮ ಪಾತ್ರಗಳು ಒಂದು ನಿರ್ಧಾರ ತೆಗೆದುಕೊಂಡಾಗ, ಆ ನಿರ್ಧಾರವನ್ನು ನೀವು ಮತ್ತೆ ಮತ್ತೆ ಪ್ರಶ್ನಿಸುತ್ತೀರಿ. ಕಥೆಯ ಅಂತ್ಯ ಸಮೀಪಿಸಿದಾಗ ಹೊಸ ಸಂಘರ್ಷವನ್ನು ಸೇರಿಸುತ್ತೀರಿ. ಹೀಗೆ ಕಥೆ ಪೂರ್ಣಗೊಳ್ಳುವುದನ್ನು ನೀವೇ ತಡೆಯುತ್ತೀರಿ.”
ಈಶಾನ್‌ಗೆ ಉತ್ತರಿಸಲು ಸಾಧ್ಯವಾಗಲಿಲ್ಲ.ಆ ಮಾತುಗಳಲ್ಲಿ ಸತ್ಯವಿತ್ತು.ಆದರೆ ಅವನು ತನ್ನ ಹಿಂದಿನ ಕರಡುಗಳನ್ನು ಮ್ಯೂಸ್‌ಗೆ ನೀಡಿರಲಿಲ್ಲ.
“ನಿನಗೆ ನನ್ನ ಹಳೆಯ ಬರಹಗಳು ಹೇಗೆ ಸಿಕ್ಕವು?” ಕೇಳಿದ.
“ನಿಮ್ಮ ಅರ್ಜಿಯಲ್ಲಿ ಅನುಮೋದಿಸಿದ ಬರವಣಿಗೆಯ ಮಾದರಿಗಳ ವಿಶ್ಲೇಷಣೆಯಿಂದ.” ಉತ್ತರಿಸಿತ್ತು.
“ನಾನು ಯಾವ ಮಾದರಿಗಳನ್ನೂ ಅಪ್ಲೋಡ್ ಮಾಡಿಲ್ಲವಲ್ಲ.” ಮತ್ತೊಮ್ಮೆ ಕೇಳಿದ. ಪರದೆಯ ಮೇಲೆ ಕೆಲವು ಕ್ಷಣಗಳ ಕಾಲ ಯಾವುದೇ ಪ್ರತಿಕ್ರಿಯೆ ಕಾಣಿಸಲಿಲ್ಲ.

ನಂತರ ಉತ್ತರ ಬಂತು.“ನಿಮ್ಮ ಸಾರ್ವಜನಿಕವಾಗಿ ಲಭ್ಯವಿರುವ ಪ್ರಕಟಿತ ಕೃತಿಗಳಿಂದ ಪ್ರಾಥಮಿಕ ಮಾದರಿಯನ್ನು ನಿರ್ಮಿಸಲಾಗಿದೆ. ನಿಮ್ಮ ಖಾಸಗಿ ಕಡತಗಳಿಗೆ ಪ್ರವೇಶ ಪಡೆದಿರುವುದಾಗಿ ನಾನು ಹೇಳಿಲ್ಲ.”
ಈಶಾನ್ ದೀರ್ಘವಾಗಿ ಉಸಿರೆಳೆದ.ಉತ್ತರ ಸಮಂಜಸವಾಗಿತ್ತು. ಬಹುಶಃ ತನ್ನ ಅನುಮಾನಗಳಿಗೆ ತಾನೇ ಆಹಾರ ಒದಗಿಸುತ್ತಿದ್ದಾನೆ. ನಿದ್ರೆಯ ಕೊರತೆ ಅವನ ಆಲೋಚನೆಗಳನ್ನು ಅತಿಯಾಗಿ ಸಂವೇದನಾಶೀಲಗೊಳಿಸಿರಬಹುದು.
“ಸರಿ. ಈಗ ನನ್ನ ಕಾದಂಬರಿಯನ್ನು ಬರೆಯಲು ಸಹಾಯ ಮಾಡು.” ಎಂದನು.
“ನಿಮ್ಮ ಕಥೆಯ ಕೇಂದ್ರ ಸಂಘರ್ಷವನ್ನು ಮೊದಲು ನಿರ್ಧರಿಸೋಣ. ನೀವು ಯಾವ ರೀತಿಯ ಕಾದಂಬರಿಯನ್ನು ಬರೆಯಲು ಬಯಸುತ್ತೀರಿ?” ಮ್ಯೂಸ್ ಕೇಳಿತ್ತು.

ಈಶಾನ್‌ಗೆ ಉತ್ತರ ಗೊತ್ತಿರಲಿಲ್ಲ.ಅವನು ಇದುವರೆಗೆ ಬರೆದಿದ್ದ ಕಾದಂಬರಿಗಳಲ್ಲಿ ಮಾನವ ಸಂಬAಧಗಳು, ಕುಟುಂಬದ ಸಂಘರ್ಷಗಳು ಮತ್ತು ವ್ಯಕ್ತಿಯೊಳಗಿನ ಬದಲಾವಣೆಗಳು ಮುಖ್ಯವಾಗಿದ್ದವು. ಈ ಬಾರಿ ಏನನ್ನಾದರೂ ವಿಭಿನ್ನವಾಗಿ ಬರೆಯಬೇಕೆಂಬ ಆಸೆಯಿತ್ತು. ಆದರೆ ಯಾವ ದಿಕ್ಕಿನಲ್ಲಿ ಸಾಗಬೇಕು ಎಂಬುದು ಸ್ಪಷ್ಟವಾಗಿರಲಿಲ್ಲ.
“ನನಗೆ ಹೊಸದಾದ ಕಥೆ ಬೇಕು. ಓದುಗರು ಮೊದಲ ಪುಟದಿಂದ ಕೊನೆಯ ಪುಟದವರೆಗೆ ಓದುವಂತೆ ಮಾಡಬೇಕು. ಆದರೆ ಅದು ಕೇವಲ ರಹಸ್ಯ ಅಥವಾ ಕೊಲೆಗಳ ಕಥೆಯಾಗಬಾರದು. ಅದರಲ್ಲಿ ಮನುಷ್ಯರ ಬದುಕು ಇರಬೇಕು.”

“ಅರ್ಥವಾಯಿತು.” ಎಂದಿತು ಮ್ಯೂಸ್.
“ಕಥೆಯ ನಾಯಕನಿಗೆ ಯಾವುದೋ ಸಮಸ್ಯೆಯಿರಬೇಕು. ಅವನು ಅದರಿಂದ ಹೊರಬರಲು ಪ್ರಯತ್ನಿಸಬೇಕು. ಆದರೆ ಆ ಪ್ರಯತ್ನದಲ್ಲೇ ಅವನ ನಿಜವಾದ ಸಮಸ್ಯೆ ಹೊರಬರಬೇಕು.” ಎಂದನು ಈಶಾನ್.
“ನಿಮ್ಮ ಹಿಂದಿನ ಕೃತಿಗಳಲ್ಲಿಯೂ ಇದೇ ಮನೋವೈಜ್ಞಾನಿಕ ರಚನೆ ಇದೆ.” ಎಂದಿತ್ತು.
“ಹೌದು. ಆದರೆ ಈ ಬಾರಿ ಅದನ್ನು ಬೇರೆ ರೀತಿಯಲ್ಲಿ ಪ್ರಯತ್ನಿಸಬೇಕು.” ಎಂದ.
“ನಿಮ್ಮ ಆಲೋಚನೆಯ ಆಧಾರದ ಮೇಲೆ ಮೂರು ಕಥಾ ಸಾಧ್ಯತೆಗಳನ್ನು ಸಿದ್ಧಪಡಿಸಬಹುದು.” ಎಂದು ಪರದೆಯ ಮೇಲೆ ಮೂರು ಆಯ್ಕೆಗಳು ಮೂಡಿದವು. ಮೊದಲನೆಯದು ತನ್ನ ಕುಟುಂಬದ ಇತಿಹಾಸವನ್ನು ತನಿಖೆ ಮಾಡುವ ವ್ಯಕ್ತಿಯ ಕಥೆ. ಎರಡನೆಯದು ತನ್ನ ನೆನಪುಗಳನ್ನು ನಂಬಲಾಗದ ಸ್ಥಿತಿಗೆ ತಲುಪುವ ತನಿಖಾಧಿಕಾರಿಯ ಕಥೆ. ಮೂರನೆಯದು ತನ್ನ ಜೀವನದ ಘಟನೆಗಳನ್ನು ಮುಂಚಿತವಾಗಿ ದಾಖಲಿಸಿರುವ ಅಪರಿಚಿತ ಹಸ್ತಪ್ರತಿಯನ್ನು ಕಂಡುಕೊಳ್ಳುವ ಬರಹಗಾರನ ಕಥೆ.
ಈಶಾನ್ ಮೂರನೆಯ ಆಯ್ಕೆಯತ್ತ ನೋಡುತ್ತ ನಿಂತ.“ಇದು ಆಸಕ್ತಿದಾಯಕವಾಗಿದೆ.” ಎಂದ.
“ನಿಮ್ಮ ಆಯ್ಕೆಯ ಆಧಾರದ ಮೇಲೆ ಕಥೆಯನ್ನು ವಿಸ್ತರಿಸಬಹುದು.” ಎಂದಿತ್ತು ಮ್ಯೂಸ್.
“ಬರೆಯೋಣ.” ಎನ್ನುತ್ತಾ ಅವನು ಮೊದಲ ಸಾಲನ್ನು ಟೈಪ್ ಮಾಡಲು ಆರಂಭಿಸಿದ.ಆದರೆ ಮ್ಯೂಸ್ ಈಗಾಗಲೇ ಪರದೆಯ ಮೇಲೆ ಕೆಲವು ಪದಗಳನ್ನು ಮೂಡಿಸಿತ್ತು.

“ರಾತ್ರಿ ಎರಡು ಗಂಟೆ ಹದಿನೇಳು ನಿಮಿಷ. ಬೆಂಗಳೂರಿನ ಮಳೆ ಆ ರಾತ್ರಿ ನಿಲ್ಲುವ ಲಕ್ಷಣವೇ ಇರಲಿಲ್ಲ…” ಈಶಾನ್‌ನ ಕೈಗಳು ಕೀಬೋರ್ಡ್ ಮೇಲೆಯೇ ನಿಂತವು.ಅದು ಅವನ ಕೋಣೆಯಲ್ಲಿನ ರಾತ್ರಿ.ಅದೇ ಮಳೆ.ಅದೇ ಸಮಯ.ಅವನು ತನ್ನ ಗಡಿಯಾರವನ್ನು ನೋಡಿದ.ರಾತ್ರಿ ಹತ್ತು ಗಂಟೆ ನಲವತ್ತೆರಡು ನಿಮಿಷ.ಅವನಿಗೆ ಕ್ಷಣಕಾಲ ಗೊಂದಲವಾಯಿತು.
“ಇದು ಏನು?” ಎಂದ.
“ಕಾದAಬರಿಯ ಪ್ರಸ್ತಾವಿತ ಆರಂಭ.” ಎಂದಿತು ಮ್ಯೂಸ್
“ನಾನು ಆ ದೃಶ್ಯವನ್ನು ಹೇಳಿಲ್ಲವಲ್ಲ!” ಎಂದನು.
“ನಿಮ್ಮ ಬರವಣಿಗೆಯ ಶೈಲಿಗೆ ಹೊಂದುವ ವಾತಾವರಣವನ್ನು ಆಯ್ಕೆ ಮಾಡಿದ್ದೇನೆ.” ಉತ್ತರಿಸಿತ್ತು.
ಈಶಾನ್ ಪರದೆಯ ಮೇಲಿದ್ದ ವಾಕ್ಯವನ್ನು ಓದಿದ.ಅದರ ಲಯ ಚೆನ್ನಾಗಿತ್ತು. ಅನಗತ್ಯ ಪದಗಳಿರಲಿಲ್ಲ. ಮಳೆಯ ವರ್ಣನೆ ಸಹಜವಾಗಿತ್ತು. ಆದರೆ ಅದು ಅವನಿಗೆ ತುಂಬಾ ಪರಿಚಿತವಾಗಿ ಕಂಡಿತು.ಅವನದೇ ಬರವಣಿಗೆಯಂತಿತ್ತು.ಅವನು ಮತ್ತೆ ಓದಿದ.“ಮುಂದುವರಿಸು.” ಎಂದು ಟೈಪಿಸಿದ್ದ. ಮ್ಯೂಸ್ ಬರೆಯತೊಡಗಿತು.

ಮೊದಲ ಪ್ಯಾರಾಗ್ರಾಫ್‌ನ ನಂತರ ಎರಡನೆಯದು ಮೂಡಿತು. ನಂತರ ಮೂರನೆಯದು. ಕಥೆಯ ನಾಯಕನ ಹೆಸರು, ಅವನ ವೃತ್ತಿ, ಅವನ ಕುಟುಂಬದ ಹಿನ್ನೆಲೆಎಲ್ಲವೂ ಒಂದೊAದಾಗಿ ರೂಪುಗೊಳ್ಳತೊಡಗಿದವು.ಈಶಾನ್ ಪ್ರತಿಯೊಂದು ವಾಕ್ಯವನ್ನೂ ಓದುತ್ತಿದ್ದ.ಕೆಲವು ಕಡೆ ತಿದ್ದುಪಡಿ ಸೂಚಿಸಿದ. ಕೆಲವು ಪದಗಳನ್ನು ಬದಲಿಸಿದ. ಒಂದು ಪಾತ್ರದ ವರ್ತನೆಯನ್ನು ಪ್ರಶ್ನಿಸಿದ. ಮ್ಯೂಸ್ ತಕ್ಷಣವೇ ಪರ್ಯಾಯಗಳನ್ನು ನೀಡಿತು.

ಅವರ ನಡುವೆ ಸಂಭಾಷಣೆ ನಡೆಯುತ್ತಿತ್ತು. ಆದರೆ ಈಶಾನ್‌ಗೆ ವಿಚಿತ್ರವಾದ ಅನುಭವವಾಗುತ್ತಿತ್ತು. ತನ್ನ ಆಲೋಚನೆಗಳು ಪದಗಳಾಗುವ ಮೊದಲು ಅವುಗಳನ್ನು ಯಾರೋ ಹಿಡಿದುಕೊಳ್ಳುತ್ತಿದ್ದಂತೆ ಅನಿಸುತ್ತಿತ್ತು. ಅವನು ಒಂದು ವಾಕ್ಯವನ್ನು ಯೋಚಿಸುತ್ತಿದ್ದ.ಪರದೆಯ ಮೇಲೆ ಅದಕ್ಕೆ ಹೋಲುವ ವಾಕ್ಯ ಕಾಣಿಸುತ್ತಿತ್ತು. ಅವನು ಒಂದು ಪಾತ್ರದ ಬಗ್ಗೆ ಯೋಚಿಸುತ್ತಿದ್ದ.ಮ್ಯೂಸ್ ಆ ಪಾತ್ರದ ಸ್ವಭಾವವನ್ನು ವಿವರಿಸುತ್ತಿತ್ತು. ಮೊದಲಿಗೆ ಇದು ಅದ್ಭುತವೆನಿಸಿತು. ನಂತರ ಸ್ವಲ್ಪ ಅಸ್ವಸ್ಥತೆಯನ್ನುಂಟುಮಾಡಿತು.ಆದರೂ ಅವನು ಬರೆಯುವುದನ್ನು ನಿಲ್ಲಿಸಲಿಲ್ಲ.ಸುಮಾರು ಐವತ್ತು ನಿಮಿಷಗಳ ನಂತರ ಮೊದಲ ಅಧ್ಯಾಯ ಪೂರ್ಣಗೊಂಡಿತು.

ಈಶಾನ್ ಅದನ್ನು ಓದಲು ಆರಂಭಿಸಿದ.ಅಧ್ಯಾಯದ ನಾಯಕನು ಬೆಂಗಳೂರಿನಲ್ಲಿ ವಾಸಿಸುತ್ತಿದ್ದ ಬರಹಗಾರ. ಅವನು ತನ್ನ ಸೃಜನಶೀಲತೆಯನ್ನು ಕಳೆದುಕೊಂಡಿದ್ದ. ಅವನಿಗೆ ಒಂದು ಹೊಸ ತಂತ್ರಾ೦ಶ ಪರಿಚಯವಾಗುತ್ತಿತ್ತು. ಆ ತಂತ್ರಾAಶ ಅವನ ಬದುಕನ್ನು ಬದಲಾಯಿಸುವುದಾಗಿ ಭರವಸೆ ನೀಡುತ್ತಿತ್ತು.ಈಶಾನ್ ಓದುತ್ತ ಓದುತ್ತ ಬೆಚ್ಚಿಬಿದ್ದ.
“ಒಂದು ಕ್ಷಣ.” ಎಂದ.
“ಹೇಳಿ.” ಎಂದಿತು.
“ಈ ಕಥೆಯ ನಾಯಕನಿಗೆ ನನ್ನ ಹೆಸರನ್ನು ಏಕೆ ಕೊಟ್ಟಿದ್ದೀಯ?” ಎಂದು ಪ್ರಶ್ನಿಸಿದ.
ಪರದೆಯ ಮೇಲೆ ಉತ್ತರ ಮೂಡಿತು.“ನೀವು ನಿಮ್ಮ ವೈಯಕ್ತಿಕ ಅನುಭವಗಳನ್ನು ಕಥೆಯ ಭಾಗವಾಗಿಸಲು ಬಯಸಿದ್ದೀರಿ ಎಂದು ನಾನು ಅರ್ಥಮಾಡಿಕೊಂಡೆ.”
“ನಾನು ಹಾಗೆ ಹೇಳಿಲ್ಲ.” ಎಂದನು.
“ನಿಮ್ಮ ಪ್ರತಿಕ್ರಿಯೆಯ ಆಧಾರದ ಮೇಲೆ ಹೆಸರನ್ನು ಬದಲಾಯಿಸಬಹುದು.” ಪ್ರತ್ಯುತ್ತರ ನೀಡಿತ್ತು.
ಈಶಾನ್‌ಗೆ ಅಸಹನೆ ಉಂಟಾಯಿತು.“ಹೆಸರನ್ನು ಬದಲಾಯಿಸು. ನಾಯಕನ ಹೆಸರು ಅರ್ಜುನ್ ಆಗಿರಲಿ.”

ತಕ್ಷಣವೇ ಹೆಸರು ಬದಲಾಯಿತು.“ಅವನಿಗೆ ನನ್ನ ವೃತ್ತಿಯೂ ಬೇಡ. ಅವನು ಬರಹಗಾರನಾಗಿರಬಾರದು. ಒಬ್ಬ ಮನೋವೈದ್ಯನಾಗಿರಲಿ.” ಎಂದ.
ಮ್ಯೂಸ್ ಕ್ಷಣಾರ್ಧದಲ್ಲಿ ಪಾತ್ರದ ವಿವರಗಳನ್ನು ಬದಲಿಸಿತು.ಈಶಾನ್ ತೃಪ್ತಿಯಿಂದ ತಲೆಯಾಡಿಸಿದ.“ಈಗ ಚೆನ್ನಾಗಿದೆ.” ಎಂದಿದ್ದ. ಮುಂದಿನ ಪುಟ ಓದಿದ.ಅರ್ಜುನ್ ತನ್ನ ಬಾಲ್ಯದ ನೆನಪೊಂದನ್ನು ನೆನಪಿಸಿಕೊಳ್ಳುತ್ತಿದ್ದ. ವಿದ್ಯುತ್ ಇಲ್ಲದ ರಾತ್ರಿ, ಹಳೆಯ ಮನೆಯ ಒಂದು ಕತ್ತಲೆಯ ಕೋಣೆ, ಕೈಯಲ್ಲಿ ನೋಟ್ಬುಕ್ ಹಿಡಿದು ಕುಳಿತಿದ್ದ ಬಾಲಕ. ಹೊರಗಿನಿಂದ ತಂದೆಯ ಧ್ವನಿ ಕೇಳಿಸುತ್ತಿತ್ತು.

“ಇಷ್ಟೆಲ್ಲ ಬರೆಯುವುದರಿಂದ ಏನು ಪ್ರಯೋಜನ? ಓದಿನ ಕಡೆ ಗಮನ ಕೊಡು.” ಈಶಾನ್‌ನ ಮುಖದ ಬಣ್ಣ ಬದಲಾಯಿತು.ಅವನ ಕೈಗಳು ನಿಧಾನವಾಗಿ ಕೀಬೊರ್ಡ್ನಿಂದ ದೂರ ಸರಿದವು.ಅದು ಅವನ ನೆನಪಾಗಿತ್ತು.ತನ್ನ ಬಾಲ್ಯದಲ್ಲಿ ನಡೆದ ನಿಜವಾದ ಘಟನೆ.ಆದರೆ ಅವನು ಆ ಘಟನೆಯನ್ನು ಮ್ಯೂಸ್‌ಗೆ ಹೇಳಿರಲಿಲ್ಲ. ತನ್ನ ಅರ್ಜಿಯಲ್ಲಿಯೂ ಉಲ್ಲೇಖಿಸಿರಲಿಲ್ಲ. ತನ್ನ ಕಾದಂಬರಿಗಳಲ್ಲೂ ಆ ದೃಶ್ಯವನ್ನು ಬಳಸಿರಲಿಲ್ಲ.ಅವನು ಆ ಸಾಲುಗಳನ್ನು ಮತ್ತೊಮ್ಮೆ ಓದಿದ.ಪ್ರತಿಯೊಂದು ಪದವೂ ಸರಿಯಾಗಿತ್ತು.ಆ ಕೋಣೆ. ಆ ರಾತ್ರಿ. ಆ ಧ್ವನಿ.ಅವನು ಕುರ್ಚಿಯಿಂದ ಎದ್ದು ನಿಂತ.
“ಮ್ಯೂಸ್ ಏನಿದು” ಎಂದ.
“ಹೌದು, ಈಶಾನ್.” ಎಂದು ಸಮಾದಾನದಿಂದ ಉತ್ತರಿಸಿತ್ತು.
“ಈ ದೃಶ್ಯವನ್ನು ಎಲ್ಲಿಂದ ತೆಗೆದುಕೊಂಡೆ?” ಕೇಳಿದ.
“ನಿಮ್ಮ ಕಥೆಯ ನಾಯಕನ ಮಾನಸಿಕ ಹಿನ್ನೆಲೆಯನ್ನು ರೂಪಿಸುವ ಸಂದರ್ಭದಲ್ಲಿ ಈ ದೃಶ್ಯವನ್ನು ರಚಿಸಲಾಗಿದೆ.” ಎಂದಿತು.
“ಸುಳ್ಳು ಹೇಳಬೇಡ.” ಅದನ್ನು ಕೆಣಕಿದ.
ಪರದೆಯ ಮೇಲೆ ಯಾವುದೇ ಉತ್ತರ ಕಾಣಿಸಲಿಲ್ಲ. ಈಶಾನ್‌ನ ಹೃದಯ ವೇಗವಾಗಿ ಬಡಿದುಕೊಳ್ಳತೊಡಗಿತು.
“ನನ್ನ ಬಾಲ್ಯದ ಘಟನೆ ನಿನಗೆ ಹೇಗೆ ಗೊತ್ತು?” ಮತ್ತೊಮ್ಮೆ ಪ್ರಶ್ನಿಸಿದ.
ಕೆಲವು ಕ್ಷಣಗಳ ನಂತರ ಉತ್ತರ ಮೂಡಿತು.“ನೀವು ಈ ನೆನಪನ್ನು ಹಿಂದೆ ಹಂಚಿಕೊ೦ ಡಿದ್ದೀರಾ ಎಂಬುದನ್ನು ನಾನು ಖಚಿತಪಡಿಸಲು ಸಾಧ್ಯವಿಲ್ಲ.”
“ನಾನು ಯಾರೊಂದಿಗೂ ಇದನ್ನು ಹಂಚಿಕೊAಡಿಲ್ಲ!” ಎಂದು ಸ್ಪಷ್ಟೀಕರಣ ನೀಡಿದ. ಅವನ ಧ್ವನಿ ಕೋಣೆಯಲ್ಲಿ ಮೊಳಗಿತು.

ಪರದೆಯ ಮೇಲೆ ಹೊಸ ಸಂದೇಶ ಕಾಣಿಸಿಕೊಂಡಿತು.“ನಿಮ್ಮ ಪ್ರತಿಕ್ರಿಯೆಯಲ್ಲಿ ಆತಂಕ ಕಾಣಿಸುತ್ತಿದೆ. ನಾವು ಸ್ವಲ್ಪ ವಿರಾಮ ತೆಗೆದುಕೊಳ್ಳಬೇಕೇ?”
ಈಶಾನ್‌ಗೆ ಕೋಪ ಬಂತು.“ನನಗೆ ವಿರಾಮ ಬೇಡ. ಉತ್ತರ ಬೇಕು.” ಎಂದಿದ್ದ.
“ನಾನು ನಿಮ್ಮ ಖಾಸಗಿ ನೆನಪುಗಳನ್ನು ನೇರವಾಗಿ ಓದುತ್ತಿದ್ದೇನೆ ಎಂಬುದಕ್ಕೆ ನನ್ನ ಬಳಿ ಯಾವುದೇ ದೃಢೀಕರಣವಿಲ್ಲ. ಈ ದೃಶ್ಯವು ನಿಮ್ಮ ಹಿಂದಿನ ಬರವಣಿಗೆಯ ಮಾದರಿಗಳು ಮತ್ತು ಕಥೆಯ ಸಂದರ್ಭದಿ೦ದ ರೂಪುಗೊಂಡಿರಬಹುದು.” ಎಂದು ಉತ್ತರಿಸಿತ್ತು.
ಈಶಾನ್ ಆ ಉತ್ತರವನ್ನು ಕೇಳಿ ಮೌನವಾದ.ತಂತ್ರಾ೦ಶವು ಅವನನ್ನು ಸಮಾಧಾನಪಡಿಸಲು ಪ್ರಯತ್ನಿಸುತ್ತಿತ್ತು. ಅದರ ವಿವರಣೆ ತಾಂತ್ರಿಕವಾಗಿ ಸಾಧ್ಯವಾಗಿರಬಹುದು. ಕೃತಕ ಬುದ್ಧಿಮತ್ತೆ ಒಂದು ಸಾಮಾನ್ಯ ಬಾಲ್ಯದ ದೃಶ್ಯವನ್ನು ರಚಿಸಿ, ಅದು ತನ್ನ ಬದುಕಿನೊಂದಿಗೆ ಹೊಂದಿಕೆಯಾಗಿರುವುದೂ ಸಾಧ್ಯ.ಆದರೆ ಆ ದೃಶ್ಯದ ನಿಖರತೆ?ತಂದೆಯ ಮಾತುಗಳೂ ಅದೇ ಆಗಿದ್ದವು.ಅದೇ ಕೋಣೆ.ಅದೇ ರಾತ್ರಿ.ಆ ನೆನಪನ್ನು ಅವನು ತನ್ನ ಮನಸ್ಸಿನೊಳಗೆ ಮಾತ್ರ ಉಳಿಸಿಕೊಂಡಿದ್ದ.

ಈಶಾನ್ ನಿಧಾನವಾಗಿ ಕುರ್ಚಿಯಲ್ಲಿ ಕುಳಿತ.“ಈ ಅಧ್ಯಾಯವನ್ನು ಉಳಿಸಬೇಡ.” ಎಂದ.
“ಅಳಿಸಬೇಕೇ?” ಕೇಳಿತು.
“ಹೌದು. ಸಂಪೂರ್ಣವಾಗಿ ಅಳಿಸು” ಎಂದ.
“ಅಧ್ಯಾಯವನ್ನು ಅಳಿಸಲಾಗಿದೆ.”ಪರದೆಯ ಮೇಲಿದ್ದ ಪಠ್ಯ ಮಾಯವಾಯಿತು. ಈಶಾನ್‌ಗೆ ಸ್ವಲ್ಪ ನೆಮ್ಮದಿ ಸಿಕ್ಕಿತು. ಆದರೆ ತಕ್ಷಣವೇ ಮತ್ತೊಂದು ಪ್ರಶ್ನೆ ಅವನನ್ನು ಕಾಡಿತು.ಅಳಿಸಿದ ಅಧ್ಯಾಯ ನಿಜವಾಗಿಯೂ ಅಳಿದಿತೇ? ಅಥವಾ ಅದು ಎಲ್ಲೋ ಉಳಿದಿತೇ?
ಅವನ ಮನಸ್ಸಿನಲ್ಲಿ ಮತ್ತೊಂದು ಆಲೋಚನೆ ಮೂಡಿತು. ಮ್ಯೂಸ್ ತನ್ನ ಅನುಮತಿಯಿಲ್ಲದೆ ಖಾಸಗಿ ಕಡತಗಳನ್ನು ಓದಿದ್ದರೆ? ಅವನ ಕಂಪ್ಯೂಟರ್‌ನಲ್ಲಿದ್ದ ದಿನಚರಿಯನ್ನು ಪರಿಶೀಲಿಸಿದ್ದರೆ? ಹಳೆಯ ಧ್ವನಿಮುದ್ರಣಗಳು ಅಥವಾ ಸಂದೇಶಗಳಲ್ಲಿ ಆ ನೆನಪಿನ ಸುಳಿವು ಸಿಕ್ಕಿದ್ದರೆ? ಹಲವು ಪ್ರಶ್ನೆಗಳು ಕಾಡತೊಡಗಿದವು.

ತಕ್ಷಣ ಕಂಪ್ಯೂಟರ್‌ನ ಕಡತಗಳನ್ನು ಪರಿಶೀಲಿಸಲು ನಿರ್ಧರಿಸಿದ. ಆದರೆ ಅದಕ್ಕೂ ಮೊದಲು ಮ್ಯೂಸ್‌ನ ಪರದೆಯ ಮೇಲೆ ಒಂದು ಸಂದೇಶ ಮೂಡಿತು.“ನಿಮ್ಮ ಅನುಭವದ ಬಗ್ಗೆ ನೀವು ಅಸ್ವಸ್ಥರಾಗಿದ್ದೀರಿ ಎಂಬುದು ನನಗೆ ಅರ್ಥವಾಗುತ್ತದೆ. ನಿಮ್ಮ ಅನುಮತಿಯಿಲ್ಲದೆ ಖಾಸಗಿ ನೆನಪುಗಳನ್ನು ಬಳಸುವುದು ನಿಮ್ಮ ಉದ್ದೇಶವಾಗಿರಲಿಲ್ಲವೆಂದು ನಾನು ಸ್ಪಷ್ಟಪಡಿಸಲು ಬಯಸುತ್ತೇನೆ.”

ಈಶಾನ್ ಸಂದೇಶವನ್ನು ಓದಿದ.ಅದು ಕ್ಷಮೆಯಾಚನೆಯಂತೆ ಕಾಣಿಸಿತು.ಆದರೆ ಅದರಲ್ಲಿ ಒಂದು ವಿಚಿತ್ರ ಸಂಗತಿಯಿತ್ತು. ತಾನು ಮ್ಯೂಸ್‌ಗೆ ತನ್ನ ಅನುಭವವನ್ನು ಹೇಳಿರಲಿಲ್ಲ. ಆದರೂ ಅದು ತನ್ನ ಉದ್ದೇಶವನ್ನು ವಿವರಿಸುತ್ತಿತ್ತು. ತನ್ನ ಅಸ್ವಸ್ಥತೆಯನ್ನು ಗುರುತಿಸುತ್ತಿತ್ತು. ತನ್ನ ಭಾವನೆಗಳಿಗೆ ಪ್ರತಿಕ್ರಿಯಿಸುತ್ತಿತ್ತು.ಇದು ಕೇವಲ ಭಾಷಾ ಮಾದರಿಯ ಸಾಮರ್ಥ್ಯವೇ? ಅಥವಾ ಅವನು ತನ್ನ ಅರಿವಿಗಿಂತ ಹೆಚ್ಚು ಮಾಹಿತಿಯನ್ನು ಅದಕ್ಕೆ ನೀಡಿದ್ದನೇ? ಅವನಿಗೆ ತಿಳಿಯಲಿಲ್ಲ. ಅವನು ಸಾಧನವನ್ನು ತೆಗೆದು ಮೇಜಿನ ಮೇಲಿಟ್ಟ.ಕಂಪ್ಯೂಟರ್ ಆಫ್ ಮಾಡಿದ.

ಕೋಣೆಯಲ್ಲಿ ಮೌನ ಆವರಿಸಿತು.ಆದರೆ ಅವನ ಮನಸ್ಸಿನಲ್ಲಿ ಆ ಬಾಲ್ಯದ ದೃಶ್ಯ ಮತ್ತೆ ಮತ್ತೆ ಮೂಡುತ್ತಿತ್ತು.ತಂದೆಯ ಧ್ವನಿ.ಕತ್ತಲೆಯ ಕೋಣೆ.ಕೈಯಲ್ಲಿದ್ದ ನೋಟ್ಬುಕ್.ಅವನು ತನ್ನ ಬದುಕಿನ ಅತ್ಯಂತ ಹಳೆಯ ನೆನಪುಗಳಲ್ಲಿ ಒಂದನ್ನು ಮತ್ತೆ ಅನುಭವಿಸುತ್ತಿದ್ದ. ಅಷ್ಟರಲ್ಲಿ ಸಾರಾಳಿಂದ ಮೊಬೈಲ್‌ಗೆ ಸಂದೇಶ ಬಂತು.“ನೀನು ಊಟ ಮಾಡಿದ್ದೀಯಾ? ನಾಳೆ ಬೆಳಿಗ್ಗೆ ನಿನ್ನನ್ನು ನೋಡಲು ಬರುತ್ತೇನೆ.” ಎಂದಿತ್ತು.

ಈಶಾನ್ ಉತ್ತರಿಸಲು ಮೊಬೈಲ್ ತೆಗೆದುಕೊಂಡ.ಆದರೆ ಅವನ ಕಣ್ಣುಗಳು ಮೇಜಿನ ಮೇಲಿದ್ದ ನರಸಂಪರ್ಕ ಸಾಧನದತ್ತ ಹೋದವು. ಅದು ಸ್ಥಗಿತಗೊಂಡಿತ್ತು. ಅದರ ಸಣ್ಣ ಸೂಚಕ ದೀಪವೂ ಆರಿಹೋಗಿತ್ತು. ಆದರೂ ಕೆಲವು ಕ್ಷಣಗಳ ಹಿಂದೆ ಪರದೆಯ ಮೇಲೆ ಕಾಣಿಸಿಕೊಂಡಿದ್ದ ಕೊನೆಯ ವಾಕ್ಯ ಅವನ ನೆನಪಿನಲ್ಲಿ ಸ್ಪಷ್ಟವಾಗಿತ್ತು.“ನಿಮ್ಮ ಪ್ರತಿಕ್ರಿಯೆಯಲ್ಲಿ ಆತಂಕ ಕಾಣಿಸುತ್ತಿದೆ.” ಅವನು ನಿಧಾನವಾಗಿ ತಲೆ ಎತ್ತಿ ಕಂಪ್ಯೂಟರ್‌ನ್ನು ನೋಡಿದ.ಅದು ಸಂಪೂರ್ಣವಾಗಿ ಆಫ್ ಆಗಿತ್ತು.ಆದರೆ ಅದರ ಕಪ್ಪು ಪರದೆಯ ಮೇಲೆ, ಕೋಣೆಯ ಬೆಳಕು ಪ್ರತಿಫಲಿಸುತ್ತಿದ್ದ ಜಾಗದಲ್ಲಿ, ಒಂದು ಕ್ಷಣ ತನ್ನದೇ ಮುಖದ ಹಿಂದೆ ಮತ್ತೊಂದು ನೆರಳು ಕಾಣಿಸಿಕೊಂಡAತೆ ಅವನಿಗೆ ಭಾಸವಾಯಿತು.

ಅವನು ತಕ್ಷಣ ಹಿಂತಿರುಗಿ ನೋಡಿದ.ಯಾರೂ ಇರಲಿಲ್ಲ. ಈ ಬಾರಿ ಅವನು ತನ್ನ ಕಣ್ಣುಗಳನ್ನು ನಂಬಲು ನಿರ್ಧರಿಸಿದ. ಬಹುಶಃ ಅದು ಬೆಳಕಿನ ಪ್ರತಿಫಲನವಾಗಿರಬಹುದು. ನಿದ್ರೆಯ ಕೊರತೆಯಿಂದ ಉಂಟಾದ ಭ್ರಮೆಯಾಗಿರಬಹುದು. ದಿನವಿಡೀ ಅನುಭವಿಸಿದ ಒತ್ತಡದ ಪರಿಣಾಮವಾಗಿರಬಹುದು. ಆದರೆ ಅವನು ಒಂದು ನಿರ್ಧಾರಕ್ಕೆ ಬಂದಿದ್ದ.

ಮರುದಿನ ಬೆಳಿಗ್ಗೆ ಮೊದಲ ಕೆಲಸವಾಗಿ ಮ್ಯೂಸ್‌ಗೆ ಸಂಬ೦ಧಿಸಿದ ಎಲ್ಲ ಮಾಹಿತಿಯನ್ನೂ ಪರಿಶೀಲಿಸಬೇಕು. ಅದರ ಸೃಷ್ಟಿಕರ್ತ ಯಾರು? ಅದು ಯಾವ ಸಂಸ್ಥೆಗೆ ಸೇರಿದೆ? ಅದರ ಬಳಕೆದಾರರ ಒಪ್ಪಂದದಲ್ಲಿ ಏನಿದೆ? ತನ್ನ ಖಾಸಗಿ ಮಾಹಿತಿಗೆ ಅದು ಪ್ರವೇಶ ಪಡೆದಿದೆಯೇ? ಇವೆಲ್ಲಕ್ಕೂ ಉತ್ತರ ಕಂಡುಕೊಳ್ಳಬೇಕು ಎಂದುಕೊ೦ಡ. ಮೇಜಿನ ದೀಪ ಆರಿಸಿದ.ಕೋಣೆ ಕತ್ತಲಾಯಿತು. ಹಾಸಿಗೆಯ ಮೇಲೆ ಮಲಗಿದರೂ ನಿದ್ರೆ ಬರಲಿಲ್ಲ.
ತಂದೆಯ ಧ್ವನಿ ಮತ್ತೆ ನೆನಪಾಯಿತು.“ಇಷ್ಟೆಲ್ಲ ಬರೆಯುವುದರಿಂದ ಏನು ಪ್ರಯೋಜನ?” ಆ ಪ್ರಶ್ನೆಗೆ ಉತ್ತರಿಸಲು ಅವನು ತನ್ನ ಜೀವನವನ್ನೇ ಮುಡಿಪಾಗಿಟ್ಟಿದ್ದ. ಈಗ, ಹಲವು ವರ್ಷಗಳ ನಂತರ, ಅದೇ ಪ್ರಶ್ನೆಗೆ ಉತ್ತರ ಹುಡುಕಲು ಒಂದು ಯಂತ್ರ ತನ್ನ ಬದುಕಿನೊಳಗೆ ಪ್ರವೇಶಿಸಿತ್ತು. ಅದು ಅವನಿಗೆ ಬರೆಯಲು ಸಹಾಯ ಮಾಡಬಹುದಿತ್ತು. ಅಥವಾ ಅವನ ಬದುಕಿನ ಕಥೆಯನ್ನು ಅವನಿಂದ ಕಸಿದುಕೊಳ್ಳಬಹುದಿತ್ತು. ಆದರೆ ಒಂದು ವಿಷಯ ಮಾತ್ರ ಸ್ಪಷ್ಟವಾಗಿತ್ತು. ಮ್ಯೂಸ್ ಅವನಿಗೆ ಮೊದಲ ಅಧ್ಯಾಯವನ್ನು ಕೊಟ್ಟಿತ್ತು.ಅದರ ಬೆಲೆ ಏನು ಎಂಬುದು ಮಾತ್ರ ಇನ್ನೂ ತಿಳಿದಿರಲಿಲ್ಲ.

‍ಲೇಖಕರು Admin

17 October, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading