ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪೃಥ್ವಿ ಸೂರಿ ಅಂಕಣ – ಸುರಕ್ಷಿತ ನೀರು (SAFE WATERS)

ಕಾನೂನು ಲೋಕದ ಗಂಭೀರ ವಾತಾವರಣವನ್ನು ಹಾಸ್ಯ ಮತ್ತು ವ್ಯಂಗ್ಯ ಶೈಲಿಯಲ್ಲಿ ಸಾಮಾನ್ಯರಿಗೂ ತಲುಪಿಸುವಲ್ಲಿ ಮುಂಬೈನ ಖ್ಯಾತ ವಕೀಲ ರಾಜು ಜೆ಼ಡ್. ಮೊರೆ. ‘ದಿ ಲೀಫ್‌ಲೆಟ್’ ವೆಬ್‌ಸೈಟ್‌ನ ಜನಪ್ರಿಯ ಅಂಕಣಗಳು ಹಾಗೂ ‘ದಿ ಲಾಕ್‌ಡೌನ್ ಲಾಯರ್’, ‘ಫನ್ ಇನ್ ಲಾ’ ಪುಸ್ತಕಗಳ ಮೂಲಕ ಇವರು ಸಾಹಿತ್ಯ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ. ನ್ಯಾಯಾಂಗ ನಿಂದನೆಗೆ ಒಳಗಾಗದಂತೆ, ವ್ಯವಸ್ಥೆಯ ಲೋಪದೋಷಗಳನ್ನು ಲಘು ಹಾಸ್ಯದಲ್ಲಿ ವಿಮರ್ಶಿಸುವ ಇವರ ಚುರುಕಾದ ಬರವಣಿಗೆ ಕಾನೂನು ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ವಿಶೇಷ ಗಮನ ಸೆಳೆದಿದೆ.

ಕೋರ್ಟಿನ ಗಂಭೀರ ವಾದ-ಪ್ರತಿವಾದಗಳ ನಡುವೆಯೂ ಅಕ್ಷರಗಳನ್ನೇ ಆತ್ಮಬಲವಾಗಿಸಿಕೊಂಡಿರುವ ಅಪರೂಪದ ಪ್ರತಿಭೆ ಪೃಥ್ವಿ ಸೂರಿ. ಚಿಕ್ಕಮಗಳೂರು ಜಿಲ್ಲೆಯ ಕಡೂರಿನಲ್ಲಿ ಬೆಳೆದು, ಹಾಸನದಲ್ಲಿ ಕಾನೂನು ಪದವಿ ಪಡೆದ ಇವರು, ‘ಜನಮಿತ್ರ’ ಪತ್ರಿಕೆಯ ಮೂಲಕ ಅಕ್ಷರ ಫ಼್ಲೋಕಕ್ಕೆ ಕಾಲಿಟ್ಟರು. ಪ್ರಸ್ತುತ ಬೆಂಗಳೂರಿನ ಉಚ್ಚ ನ್ಯಾಯಾಲಯದ ವಕೀಲರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.ಬಾಂಬೆ ಉಚ್ಚ ನ್ಯಾಯಾಲಯದ ವಕೀಲರು, ರಾಜು ಜೆ಼ಡ್. ಮೋರೆ ಅವರ ಇಂಗ್ಲಿಷ್ ನ Fun In Law ಘನ ನ್ಯಾಯಾಲಯದ ಲಘು ಹಾಸ್ಯ ಬರಹಗಳು

ಇನ್ನು ಮುಂದೆ ಕನ್ನಡಕ್ಕೆ ಕರ್ನಾಟಕ ಉಚ್ಚ ನ್ಯಾಯಾಲಯದ ವಕೀಲರಾದ ಪೃಥ್ವಿ ಸೂರಿ ಅವರಿಂದ ಅಂಕಣವಾಗಿ ಬರಲಿದೆ.

ಮೂಲ – ರಾಜು ಜೆ಼ಡ್. ಮೊರೆ

ಕನ್ನಡಕ್ಕೆ – ಪೃಥ್ವಿ ಸೂರಿ

ಅಂಕಣ – 13

ತೊಂಬತ್ತರ ದಶಕದಲ್ಲಿ ಮುಂಬೈನಲ್ಲಿ ಪ್ರತಿಷ್ಠಿತ ಪರಿಸರ ಸಮ್ಮೇಳನವೊಂದನ್ನು ಆಯೋಜಿಸಲಾಗಿತ್ತು. ಸಭಾಂಗಣ ಕಿಕ್ಕಿರಿದು ತುಂಬಿತ್ತು. ಸುಪ್ರೀಂ ಕೋರ್ಟಿನ ನ್ಯಾಯಮೂರ್ತಿಗಳಾಗಿದ್ದ ಜೆ.ಎಸ್. ವರ್ಮಾ ಮತ್ತು ಕುಲದೀಪ್ ಸಿಂಗ್ ಅವರು ಗೌರವ ಅತಿಥಿಗಳಾಗಿ ಸಮ್ಮೇಳನಕ್ಕೆ ಆಗಮಿಸಿದ್ದರು.

ನ್ಯಾಯಮೂರ್ತಿ ಕುಲದೀಪ್ ಸಿಂಗ್ ಅವರು ಯಾವುದೇ ಪೂರ್ವ ಸಿದ್ಧತೆಯಿಲ್ಲದೆ ಮಾತನಾಡಿದ್ದು ಮೇಲ್ನೋಟಕ್ಕೆ ಗೊತ್ತಾಗುತ್ತಿತ್ತು. ಅವರು ಹಾಸ್ಯಪ್ರಿಯ ವ್ಯಕ್ತಿ ಎಂಬುದು ಅವರ ಮಾತಿನಲ್ಲೇ ಎದ್ದುಕಾಣುತ್ತಿತ್ತು. ಅವರ ಭಾಷಣದುದ್ದಕ್ಕೂ ಹಾಸ್ಯದ ಲೇಪನವಿತ್ತು. ಅವರ ಪ್ರತಿ ಮಾತುಗಳು ನಮಗೆ ಹಾಸ್ಯನಟ ಜಸ್ಪಾಲ್ ಸಿಂಗ್ ಭಟ್ಟಿ ಅವರನ್ನು ನೆನಪಿಸುತ್ತಿತ್ತು. ಆ ದಿನ ನ್ಯಾಯಮೂರ್ತಿ ಕುಲದೀಪ್ ಸಿಂಗ್ ಅವರು ಹೇಳಿದ ಒಂದು ಬಹಳ ಸ್ವಾರಸ್ಯಕರ ಪ್ರಸಂಗ ನನಗೆ ಇನ್ನೂ ನೆನಪಿದೆ.

ಯಮುನಾ ನದಿಯ ಮಾಲಿನ್ಯಕ್ಕೆ ಸಂಬಂಧಿಸಿದ ಪ್ರಕರಣವೊಂದರ ವಿಚಾರಣೆಯನ್ನು ಅವರು ಸುಪ್ರೀಂ ಕೋರ್ಟ್‌ನಲ್ಲಿ ನಡೆಸುತ್ತಿದ್ದರು. ನದಿಗೆ ತ್ಯಾಜ್ಯ ಮತ್ತು ಕಲುಷಿತ ನೀರು ಹರಿಸುವುದನ್ನು ತಡೆಯಬೇಕೆಂದು ಸಂಬಂಧಪಟ್ಟ ಸರ್ಕಾರಿ ಸಂಸ್ಥೆಗಳಿಗೆ ನಿರ್ದೇಶನ ನೀಡಿ, ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳಲ್ಲಿ (PIL) ನ್ಯಾಯಾಲಯ ಅನೇಕ ಆದೇಶಗಳನ್ನು ಹೊರಡಿಸಿತ್ತು. ಆದರೂ ಮೇಲ್ನೋಟಕ್ಕೆ ಪರಿಸ್ಥಿತಿ ಸುಧಾರಿಸಿರಲಿಲ್ಲ.

ಅಂದಿನ ಅಟಾರ್ನಿ ಜನರಲ್ ಆಗಿದ್ದ ಅಶೋಕ್ ದೇಸಾಯಿ ಅವರು, ಪ್ರಕರಣವು ವಿಚಾರಣೆಗೆ ಬಂದಾಗಲೆಲ್ಲಾ ಸರ್ಕಾರವು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಂಡಿದೆ ಎಂದು ವಾದಿಸುತ್ತಿದ್ದರು. ಅಷ್ಟೇ ಅಲ್ಲದೆ, ಯಮುನಾ ನದಿಯ ನೀರು ಈಗ ಸುರಕ್ಷಿತವಾಗಿದ್ದು, ಮಾಲಿನ್ಯಮುಕ್ತವಾಗಿದೆ. ಇನ್ನು ಯಾವುದೇ ಹೆಚ್ಚಿನ ನಿರ್ದೇಶನಗಳ ಅಗತ್ಯವಿಲ್ಲ ಎನ್ನಲು ರಾಶಿ ರಾಶಿ “ವೈಜ್ಞಾನಿಕ” ವರದಿಗಳನ್ನು ಸಲ್ಲಿಸುತ್ತಿದ್ದರು.

ಹೀಗೆಲ್ಲ ವಾದ ಮಂಡಿಸಿದಾಗ ತಾವು ಅಟಾರ್ನಿ ಜನರಲ್ ಅವರಿಗೆ ಹೇಳಿದ ಮಾತನ್ನು ನ್ಯಾಯಮೂರ್ತಿ ಕುಲದೀಪ್ ಸಿಂಗ್ ನೆನಪಿಸಿಕೊಂಡು ಹೇಳಿದರು: “ಈಗ ನದಿ ಎಷ್ಟು ಸುರಕ್ಷಿತವಾಗಿದೆ, ಶುದ್ಧವಾಗಿದೆ ಎನ್ನುವುದಾದರೆ, ನಾವಿಬ್ಬರೂ ನಾಳೆ ಬೆಳಗ್ಗೆ ಒಂದು ಗಂಟೆ ಅಲ್ಲಿ ಒಟ್ಟಿಗೆ ಈಜಾಡೋಣ ಬನ್ನಿ!!”

ಈ ವಿಲಕ್ಷಣ ಸಲಹೆಯಿಂದ ಎಜಿಯವರು ಮುಜುಗುರಕ್ಕೊಳಗಾದುದನ್ನು ಕಂಡ ನ್ಯಾಯಮೂರ್ತಿಗಳು “ನಾನು ಪಂಜಾಬಿನ ಮಗ. ಈಜಿದ ನಂತರವೂ ಕೆಲಸಕ್ಕೆ ಹಾಜರಾಗಬಲ್ಲೆ. ಆದರೆ ನಿಮ್ಮ ವಿಷಯದಲ್ಲಿ ನನಗೆ ಖಚಿತವಿಲ್ಲ. ಒಂದು ವೇಳೆ ನೀವು ಕೂಡ ಯಾವ ತೊಂದರೆಯಿಲ್ಲದೆ ಕೆಲಸಕ್ಕೆ ಮರಳಿದರೆ, ನಾನು ಈ ಅಂಕಿ-ಅಂಶಗಳನ್ನು ಒಪ್ಪಿಕೊಳ್ಳುತ್ತೇನೆ. ಆದರೆ, ಇದನ್ನು ನಿಮ್ಮೊಂದಿಗೇ ಪರೀಕ್ಷಿಸಿ ನೋಡಬೇಕೆಂದಿದ್ದೇನೆ. ಹೋಳಿಗೆಯ ರುಚಿ ತಿಂದರಷ್ಟೆ ಗೊತ್ತಾಗುವುದು ಎಂಬುದನ್ನು ನೀವು ಒಪ್ಪುತ್ತೀರಲ್ಲವೇ!”

ಪರಿಸರಪ್ರೇಮಿ ನ್ಯಾಯಾಧೀಶರು ತಮಗೆ ಬಿಸಿ ತುಪ್ಪ ತಿನ್ನಿಸಲು ಬಯಸುತ್ತಿದ್ದಾರೆ ಎಂಬುದು ಅರಿವಾದ ತಕ್ಷಣ, ಅಟಾರ್ನಿ ಜನರಲ್ ದೇಸಾಯಿ ಅವರು ‘ಸುರಕ್ಷಿತ ನೀರು’ ಎನ್ನುವ ತಮ್ಮ ವಾದವನ್ನು ಅಲ್ಲಿಗೆ ನಿಲ್ಲಿಸಿದರು ಎಂದು ನ್ಯಾಯಮೂರ್ತಿ ಕುಲದೀಪ್ ಸಿಂಗ್ ನಗುನಗುತ್ತಾ ವಿವರಿಸಿದರು.

ಅಟಾರ್ನಿ ಜನರಲ್ ಅವರು ಸದ್ದಿಲ್ಲದೆ ಕುಳಿತುಬಿಟ್ಟರು.

‍ಲೇಖಕರು Admin

17 October, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading