ಸಾವಿರಾರು ಮಕ್ಕಳ ಬಾಳನ್ನು ಬೆಳಗಿದ ಗುರು…

ಕುಶ್ವಂತ್ ಕೋಳಿಬೈಲು

‘ಪಿಂಕಿ ಬೆತ್ತ ಎಲ್ಲಿ ಉಂಟಾ’ ಎಂದು ಟ್ಯೂಷನ್ ಅಂಕಲ್ ರೇಗುತ್ತಿದ್ದಂತೆ ತರಗತಿಯೊಳಗೆ ಕ್ಷಣಾರ್ಧದಲ್ಲಿ ಮೌನ ಹೆಪ್ಪುಗಟ್ಟುತ್ತಿತ್ತು. ಅಡುಗೆಮನೆಯೊಳಗೆಲ್ಲೋ ಆಟವಾಡುತ್ತಿದ್ದ ಪಿಂಕಿ ತರಗತಿಯೊಳಗೊಮ್ಮೆ ಇಣುಕಿ ತನ್ನ ಅಪ್ಪನ ಮುಖದಲ್ಲಿ ಬೆತ್ತ ಬೇಕೇ ಬೇಕೆಂಬ ಉಗ್ರ ಕೋಪವಿದ್ದರೆ ಮಾತ್ರ ಮುಂದಿನ ಕೆಲಸಕ್ಕೆ ಅಣಿಯಾಗುತ್ತಿದ್ದಳು. ಅಷ್ಟರಲ್ಲಿ ತರಲೆ ಮಾಡಿದ ವಿದ್ಯಾರ್ಥಿ ಸೂಕ್ತ ಸಮಜಾಯಿಷಿ ನೀಡಿ ವಾತಾವರಣ ತಿಳಿ ಮಾಡಬೇಕಿತ್ತು ಅಥವಾ ಗಣಿತದಲ್ಲಿ ಅಕ್ಷಮ್ಯ ಎಡವಟ್ಟು ಮಾಡಿ ಅಪರಾಧಿ ಸ್ಥಾನದಲ್ಲಿದ್ದವನು ಮರಳಿ ಯತ್ನವ ಮಾಡಿ ಸರಿ ಉತ್ತರ ನೀಡಬೇಕಿತ್ತು. ಅಂಕಲ್ ಕೋಪ ವೈರಲ್ ಜ್ವರದಂತ್ತಿರುತ್ತಿತ್ತು, ಎಷ್ಟು ವೇಗವಾಗಿ ಏರುತ್ತಿತ್ತೂ ಅಷ್ಟೇ ವೇಗವಾಗಿ ಇಳಿದುಬಿಡುತ್ತಿತ್ತು. ಪಿಂಕಿಗೆ ಕೈಸನ್ನೆ ಮಾಡಿ ಬೆತ್ತ ತರಲು ತಡಮಾಡುವಂತೆ ಪುಸಲಾಯಿಸುವ ನನ್ನಂತಹ ತರಲೆಗಳು ಕೂಡ ಅದೇ ತರಗತಿಯಲ್ಲಿದ್ದರು.

ದಯಾನಂದ ಎಂಬ ತಮ್ಮ ಸ್ವಂತ ಹೆಸರು ಊರಿನಲ್ಲಿ ಯಾರಿಗೂ ಗೊತ್ತಿಲ್ಲದಷ್ಟು ದೊಡ್ಡ ಮಟ್ಟದಲ್ಲಿ ಅವರು ಗಣಿತದ ಟ್ಯೂಷನ್ ಅಂಕಲಾಗಿ ಸುಳ್ಯದಲ್ಲಿ ಹೆಸರುಮಾಡಿದ್ದರು. ಅರಣ್ಯ ಇಲಾಖೆಯ ಸರಕಾರಿ ಕೆಲಸವಿದ್ದರೂ ಬೆಳಗ್ಗಿನ ಜಾವ ಮತ್ತು ಸಂಜೆ ಅಂಕಲ್ ಮನೆಯ ಬಳಿ ಮಕ್ಕಳ ಜಾತ್ರೆಯಿರುತ್ತಿತ್ತು. ತಮಗೆ ಬಾಲ್ಯದಿಂದ ಹಿಡಿದಿರುವ ಗಣಿತದ ಹುಚ್ಚು ಬಿಡಿಸಿಕೊಳ್ಳಲು ಹಠಕ್ಕೆ ಬಿದ್ದವರಂತೆ ಅಂಕಲ್ ಗಣಿತದ ತರಗತಿಗಳನ್ನು ತಮ್ಮ ಮನೆಯಲ್ಲಿ ತಗೆದುಕೊಳ್ಳುತ್ತಿದ್ದರು.

ಹಣ ಮಾಡುವ ಹುಚ್ಚಿಲ್ಲವೊ ಏನೋ ಯಾವತ್ತೂ ಅದನ್ನವರು ವಾಣಿಜ್ಯ ದೃಷ್ಟಿಯಿಂದ ನೋಡಿರಲಿಲ್ಲ. ಚಿಕ್ಕ ಕೊಠಡಿಯೊಳಗೆ ಉಪ್ಪಿನಕಾಯಿ ಹಾಕಿದಂತೆ ಕಿಕ್ಕಿರಿದು ತುಂಬಿರುವ ಮಕ್ಕಳು, ಅವರ ನಡುವೆ ಅಂಕಲ್ ಗಣಿತವೆಂಬ ಕಬ್ಬಿಣದ ಕಡಲೆಯಿಂದ ಚಿಕ್ಕಿ ಮಿಠಾಯಿ ತಯಾರಿಸಿ ಮಕ್ಕಳ ಕೈಗಿಡಬೇಕೆಂಬ ಹಠಕ್ಕೆ ಬಿದ್ದ ಸಂತನಂತ್ತಿದ್ದರು. ಬೇರೆ ಬೇರೆ ತರಗತಿಗಳಲ್ಲಿ ಓದುತ್ತಿದ್ದ ಮಕ್ಕಳನ್ನು ಅಲ್ಲಿ ಗುಡ್ಡೆ ಹಾಗಿ, ಅವರವರ ತರಗತಿಗನುಗುಣವಾಗಿ ಲೆಕ್ಕಗಳನ್ನು ನೀಡಿ, ಅದನ್ನು ಬಿಡಿಸಲು ಮಕ್ಕಳಿಗೆ ಒಂದೈದು ನಿಮಿಷ ಸಮಯನೀಡುತ್ತಿದ್ದರು. ತದನಂತರ ಎಲ್ಲಾ ಬೆಪ್ಪುತಕ್ಕಡಿಗಳಿಗೂ ಅರ್ಥವಾಗುವ ಸರಳ ರೀತಿಯಲ್ಲಿ ಕರಿ ಹಲಗೆಯ ಮೇಲೆ ಸರಳೀಕರಿಸಿ ಬರೆಯುತ್ತಿದ್ದರು.

ಅರೋಗ್ಯ ಸಮಸ್ಯೆಗಳು ವಿಪರೀತವಾಗಿ ಯಾವ ಆಸ್ಪತ್ರೆಯಲ್ಲಿಯೂ ಗುಣವಾಗದಾಗ ದೇವರ ಮೊರೆಹೋಗುವಂತೆ ಯಾವ ಶಾಲೆಗೆ ಸೇರಿಸಿದರೂ ಗಣಿತದಲ್ಲಿ ಮಕಾಡೆ ಮಲಗುತ್ತಿದ್ದವರನ್ನು ಟ್ಯೂಷನ್ ಅಂಕಲ್ ಬಳಿಗೆ ಕರೆತರುತ್ತಿದ್ದರು. ಹಳೆಯ ಬೈಕನ್ನು ಸರ್ವಿಸಿಗೆ ನೀಡುವಾಗ ಮೆಕಾನಿಕ್ ಮುಖದಲ್ಲಿ ಮಂದಹಾಸ ಮೂಡುವಂತೆ, ಲೆಕ್ಕದಲ್ಲಿ ವೀಕ್ ಇರುವ ಮಕ್ಕಳನ್ನು ನೋಡಿದಾಗ ಅಂಕಲ್ ಕೂಡ ಮುಗುಳುನಗು ಬೀರಿ ‘ನಾಳೆಯಿಂದ ಬರ್ಲಿ.. ಇಲ್ಲಿ ರಿಪೇರಿಯಾಗದವರು ಯಾರಿಲ್ಲ!!’ ಎಂದು ಧೈರ್ಯ ತುಂಬುತ್ತಿದ್ದರು. ಗಣಿತದಲ್ಲಿ ಡುಮ್ಕಿಹೊಡೆದು ಸಪ್ಲಿಮೆಂಟರಿ ಪರೀಕ್ಷೆಗೆ ಒಂದೇ ತಿಂಗಳಿದ್ದು, ಕೊನೆಯ ಗಳಿಗೆಯಲ್ಲಿ ಒದ್ದಾಡುತ್ತಿರುವ ಮಕ್ಕಳು ಅಂಕಲ್ ಬಳಿ ಬರುತ್ತಿದ್ದ ವಿಶೇಷ ಅತಿಥಿಗಳು. ಅವರಿಗೆ ಕಡೇ ಕ್ಷಣದಲ್ಲಿ ಬಿರುಸಿನ ತರಬೇತಿ ನೀಡಿ‌ ಧೋನಿ ಮಾದರಿಯಲ್ಲಿ ದಡಸೇರಿಸುತ್ತಿದ್ದರು.ಸರಕಾರಿ ಕಲಸದ ನಡುವೆ ಬೆಳಿಗ್ಗೆ, ರಾತ್ರಿ ಗಣಿತದ ಹಿಂದೆ ಬಿದ್ದಿರುವ ಅಂಕಲ್ಗೆ ಬಹುಶಃ ಕನಸಿನಲ್ಲೂ ಲೆಕ್ಕಗಳೇ ಬಿದ್ದಿರಬಹುದು.!!

ನಮ್ಮ ಕೆವಿಜಿ ಹೈಸ್ಕೂಲಿನಲ್ಲಿ ಅನೇಕರು ಬಹಳ ಸಮಯದಿಂದ ಅಂಕಲ್ ಶಿಷ್ಯರಾಗಿದ್ದರು. ನಾನು ಒಂಬತ್ತನೇ ತರಗತಿಯಲ್ಲಿದ್ದಾಗ ಶಾಲೆಯಲ್ಲಿ ಸ್ನೇಹಿತರು ಟ್ಯುಷನ್ ಅಂಕಲ್ ಬಗ್ಗೆ ಕೊಡುತ್ತಿದ್ದ ವಿಪರೀತ ಬಿಲ್ಡಪ್ಗೆ ಮನಸೋತು ಸಂಜೆ ಬ್ಯಾಚಿಗೆ ನೊಂದಣಿಯಾದೆ. ಮುಂದಿನೆರಡು ವರ್ಷ ಗಣಿತದ ಮೇಲಿದ್ದ ಭಯವನ್ನು ಮಂಗಮಾಯವಾಗಿಸಿ ಗಣಿತವನ್ನು ಮಕ್ಕಳಾಟವಾನ್ನಾಗಿಸಿದರು. ಟ್ಯೂಷನ್ ಕ್ಲಾಸಿಗೆ ಸಂಜೆ ಸೈಕಲ್ಲೇರಿ ಹೋಗುವುದೇ ಒಂದು ಅಹ್ಲಾದಕರವಾದ ಅನುಭವವಾಗಿತ್ತು.

ಟ್ಯೂಷನ್ ಅಂಕಲ್ಗೆ ಯಾವ ಆಟಗಾರನಿಗೆ ಯಾವ ರೀತಿಯ ತರಬೇತಿ ನೀಡಬೇಕೆಂಬ ಸ್ಪಷ್ಟ ಕಲೆಗಾರಿಕೆಯಿತ್ತು. ಚುರುಕಿರುವ ಮಕ್ಕಳನ್ನು ಹದ್ದುಬಸ್ತಿನಲ್ಲಿಡಲು ಕಠಿಣವಾದ ಗೂಗ್ಲಿಯನ್ನು ಎಸೆದರೆ, ಹೆದರುವ ಮಕ್ಕಳಿಗೆ ಆತ್ಮವಿಶ್ವಾಸವನ್ನು ತುಂಬಲು ಫುಲ್ ಟಾಸ್ ನೀಡುತ್ತಿದ್ದರು. ಪಿಂಕಿ ಹಲವಾರು ಬಾರಿ ಬೆತ್ತ ತಂದು ಕೊಟ್ಟರೂ ಅಂಕಲ್ ಅದನ್ನು ಬಳಸಿದ್ದು ಮಾತ್ರ ಅತೀ ವಿರಳ. ಅದನ್ನು ಬೀಸುವಾಗ ಅವರ ಮುಖದಲ್ಲಿ ಸಿಟ್ಟಿಗಿಂತ ಹೆಚ್ಚಾಗಿ ನನ್ನ ಕೈಯಿಂದ ಇವನ ತಲೆಯೊಳಗೆ ಗಣಿತವನ್ನು ತುಂಬಿಸಲಾಗುತ್ತಿಲ್ಲವೆಂಬ ಅಸಹಾಯಕ ಭಾವವೇ ಎದ್ದು ಕಾಣುತ್ತಿತ್ತು.

ಪರೀಕ್ಷೆ ಹತ್ತಿರವಾಗುತ್ತಿದ್ದಂತೆ ಒಂದಷ್ಟು ವಿಚಲಿತರಾಗುತ್ತಿದ್ದವರನ್ನು, ಭಯಪಡುವವರನ್ನು ಸದೃಢ ಗೊಳಿಸಲು ಅಂಕಲ್ ಒಂದಷ್ಟು ಆಧ್ಯಾತ್ಮಿಕ ಬೋಧನೆಯನ್ನೂ ನೀಡುತ್ತಿದ್ದರು. ದೇವರ ಮೊರೆಹೋಗುವುದರಿಂದ ಏಕಾಗ್ರತೆ ಹೆಚ್ಚಾಗುವುದೆಂಬುದು ಅಚಲವಾದ ನಂಬಿಕೆ ಅವರಲ್ಲಿತ್ತು. ದಿನಾಂಕ ಮಾರ್ಚ 25, 2001, ಆದಿತ್ಯವಾರ, ಹತ್ತನೆಯ ತರಗತಿಯ ಗಣಿತದ ಪಬ್ಲಿಕ್ ಪರೀಕ್ಷೆಯ ಮುನ್ನಾದಿನ, ಅಂದು ಅಂಕಲ್ ನಮಗಾಗಿ ದಿನಪೂರ್ತಿ ನಾಳೆ ಪರೀಕ್ಷೆಯಲ್ಲಿ ಬರಬಹುದಾದ ಪ್ರಶ್ನೆಗಳ ಬಗ್ಗೆ ವಿಶೇಷ ತರಗತಿಯನ್ನಿಟ್ಟುಕೊಂಡಿದ್ದರು. ಅಂಕಲ್ಗೆ ಗಣಿತದ ಮೇಲೆ ವಿಶೇಷ ಒಲವಿದ್ದಂತೆ ನನಗಾಗ ಕ್ರಿಕೆಟ್ ಹುಚ್ಚು ಹಿಡಿದಿದ್ದ ಕಾಲ. ಅವತ್ತು ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯಾಟವಿತ್ತು. (Ganguly verses Steve Waugh series). ನಾನು ಅಂಕಲ್ ದಿನ ಪೂರ್ತಿ ಆಯೋಜಿಸಿದ್ದ ಆ ಗಣಿತ ಮಹಾಯಾಗಕ್ಕೆ ಚಕ್ಕರ್ ಹಾಕಿ ಕ್ರಿಕೆಟ್ ನೋಡಿ ಅತೀ ಉಲ್ಲಾಸದಿಂದ ಮರುದಿನ ಪರೀಕ್ಷೆಗೆ ಹಾಜರಾದೆ.

ಪರೀಕ್ಷೆಯಲ್ಲಿ ಬಂದಿದ್ದ ಎಲ್ಲ ಪ್ರಶ್ನೆಗಳೂ ನಾನು ಟ್ಯೂಷನ್ನಿನಲ್ಲಿ ಹಲವಾರು ಬಾರಿ ಬರೆದು ಅಭ್ಯಾಸಮಾಡಿದ ಸವಕಲು ಪ್ರಶ್ನೆಗಳೇ ಆಗಿತ್ತು. ಆದರೆ ಫಲಿತಾಂಶ ಬರುವಾಗ ನನ್ನ ನಾನು ಶತಕವಂಚಿತನಾಗಿ 98 ಪಡೆದಿದ್ದೆ. ನಾನು ಅವರ ಕೊನೆಯ ತರಗತಿಗೆ ಚಕ್ಕರ್ ಹಾಕಿದ ಕಾರಣ ಎರಡು ಅಂಕಗಳು ಕಮ್ಮಿ ಬಂತೆಂದು ಹಲವಾರು ಬಾರಿ ತಮ್ಮ ಅಸಮಾಧಾನವನ್ನು ಅಂಕಲ್ ವ್ಯಕ್ತಪಡಿಸಿದ್ದರು. ಗಣಿತದಲ್ಲಿ ಎರಡೆರಡು ಮಕ್ಕಳು ಪಾಸಾಗಬಹುದಷ್ಟು ಮಾರ್ಕ ಬಂದಿದೆ ಸಾಕಲ್ವಾ ಅಂಕಲ್ ಎಂದು ಎಂದಿನಂತೆ ತರಲೆ ಉತ್ತರವನ್ನು ನೀಡಿ ನಾನು ಜಾರಿಕೊಳ್ಳುತ್ತಿದ್ದೆ.

ತಮ್ಮ ಮನೆಯನ್ನೆ ಗಣಿತದ ಪಾಠ ಶಾಲೆಯನ್ನಾಗಿಸಿ, ಸಾವಿರಾರು ಮಕ್ಕಳ ಬಾಳನ್ನು ಬೆಳಗಿದ ಗುರುಗಳಿಗೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು!!

‍ಲೇಖಕರು Admin

September 5, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: