‘ಕವಿತೆ ಬಂಚ್‌’ನಲ್ಲಿ ರೇಖಾ ರಂಗನಾಥ

ಕವಿತೆ ಬಂಚ್-

‘ಅವಧಿ’ಯ ಮತ್ತೊಂದು ಹೊಸ ಪ್ರಯತ್ನ. ಒಂದೇ ಗುಕ್ಕಿಗೆ ಎಲ್ಲಾ ಕವಿತೆಗಳನ್ನು ಓದಿದರೆ ಕವಿಯ ಬನಿ ಗೊತ್ತಾಗುತ್ತದೆ ಎನ್ನುವುದು ನಮ್ಮ ನಂಬಿಕೆ. ನಾವು ಓದಿದ ಓದು ಇದನ್ನು ಅರ್ಥ ಮಾಡಿಸಿದೆ. ಹಾಗಾಗಿ ವಾರಕ್ಕೊಮ್ಮೆ ಹೀಗೆ ಒಬ್ಬ ಕವಿಯ ಹಲವಾರು ಕವಿತೆಗಳು ನಿಮ್ಮ ಮುಂದೆ ಕಾಣಿಸಿಕೊಳ್ಳಲಿದೆ. ಅವಸರ ಬೇಡ. ನಿಧಾನವಾಗಿ ಓದಿ ಕವಿಯ ಅಂತರಂಗ ಹೊಕ್ಕುಬಿಡಿ.

ಈ ಕವಿತೆಗಳ ಬಗ್ಗೆ ಅಭಿಪ್ರಾಯ ಬರೆದು ತಿಳಿಸಿ ಕವಿಗೂ ಖುಷಿಯಾದೀತು ಇನ್ನಷ್ಟು ಬರೆಯಲು ದಾರಿಯಾದೀತು.

ಅಷ್ಟೇ ಅಲ್ಲ, ಹೀಗೆ ‘ಪೊಯೆಟ್ ಆ ದಿ ವೀಕ್’ ಆದವರ ಕವಿತೆಗಳನ್ನು ಇನ್ನೊಬ್ಬ ಸಮರ್ಥ ಓದುಗರು ಓದಿ ಅದರ ಬಗ್ಗೆ ತಮ್ಮ ಟಿಪ್ಪಣಿ ಕೊಡುತ್ತಾರೆ.

ಅದು ನಂತರದ ದಿನಗಳಲ್ಲಿ ಅವಧಿಯಲ್ಲಿ ಪ್ರಕಟವಾಗುತ್ತದೆ.

ರೇಖಾ ರಂಗನಾಥ
ರೇಖಾ ರಂಗನಾಥ ಹಿಂದಿ ಭಾಷೆ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ಹಾವೇರಿ ನಿವಾಸಿ.
ಸಾಹಿತ್ಯದಲ್ಲಿ ಮೂಡಿದ ಒಲವಿನಿಂದಾಗಿ ಕವಿತೆ, ಅಂಕಣಗಳ ರಚನೆಯಲ್ಲಿ ತೊಡಗಿಕೊಂಡಿದ್ದಾರೆ.

1. ಬಯಲಿಗೆ ಬಯಲಾಗು

ಕಣ್ಣು ಸಾಗುವಷ್ಟು
ಮುಂಜಾವಿಗೊಂದು ಹೆಣೆದ
ನೀಲನಕ್ಷೆ ಬೆಳಗು ತಾಗದೆ
ರಾಶಿ ರಾಶಿ ಮೊಳಕೆಯೊಡೆದ
ಕನಸು ಸದ್ದಿಲ್ಲದೇ
ಬೇಲಿಯಂಚಲಿ ಮೊಟರುತಿದೆ

ತೊದಲು ನುಡಿವ ಬಾಯೊಳು
ಚುರುಗುಟ್ಟುವ ಉದರಕಿಚ್ಚು
ತಣಿಯಲು ಒಡಕಲು ಹೆಬ್ಬೆರಳು
ಹಾದಿಗುಂಟ ಹಾಲುಗಲ್ಲಕೆ
ಸುಡುನೆತ್ತಿಯಾಸರೆಯಾಗಿ
ಅಮ್ಮನ ಸೆರಗು
ಅಪ್ಪನ ಬೆನ್ನಿಗೆ ಬಿದ್ದು
ಸೋರುವ ಜೋಳಿಗೆ

ನಿತ್ಯ ಹೊತ್ತೊಯ್ಯುವ
ಸಂಚಾರಕೆ ಸಾವಾಗಿದೆ
ಧಗೆ ಉಂಡು ಉಗಿ ಹಾಯ್ವ ನೆಲವು
ಬಾಯ್ಬಿಟ್ಟು ಕೂತಿದೆ
ಲೆಕ್ಕವಿಡದಿರುವ ಪಾದ
ನಂಬಿಕೆ ಹೊತ್ತು
ತನ್ನ ಸುತ್ತಗಲಕ್ಕೂ
ಅರಸಿ ಹೊರಟಿದೆ ಬೇರು

ಉಸಿರ ಹಸಿರನು ಸವರಿ
ಬದುಕುಳಿದ ನಾಡುಗಳಲಿ
ಮಾಸ್ಕುಗಳು ಜೀವ ತಳೆದು
ಮೈ ನೆರೆದಿವೆ
ಹೊಲೆ ಬಿದ್ದಾಗಿದೆ ನಮ್ಮವರಿಗೆ

ನಿನ್ನ ಪಾದ ಮುಟ್ಟಲಿಲ್ಲ
ಅಂಗೈ ಹಸ್ತಕೆ ತಾಗದ ತೀರ್ಥ ಪ್ರಸಾದ
ನಮಾಜಗೆ ಹಾಸು ಹಾಸಿದಾಗ
ಮುಚ್ಚಿರುವ ದರವಾಜು
ನಂದಿರುವ ಮೊಂಬತ್ತಿ
ಬೆಳಗುವುದಾದರೂ ಎಲ್ಲಿ?

ಒಳ ಉಳಿದವರಾರೋ?
ಹೊರಗಾದವರಾರೋ?
ಹೊರಟ ಹಾದಿ ಸಾಗುವುದೆಲ್ಲಿಗೆ?

ದುಗುಡದ ದುಪ್ಪಟ್ಟಾ ಹೊದ್ದು
ಹೊರಗಾದವಳ ತೋರಲೋ?
ತಳಬೀದಿ ಮುಟ್ಟದಿರುವ
ಹಾಡು ಕೇಳಿಸಲೋ?
ಹಾದಿ ಬದಿಯ ಬಾಳು
ಬಯಲಿಗೆ ಬಯಲಾಗಲೋ?

2. ಚಂದ್ರನನ್ನೇ ಬಿತ್ತುತ್ತಿದ್ದೆ

ನೀನೀದ್ದಿದ್ದರೆ
ಚಂದ್ರನನ್ನೇ ಬಿತ್ತುತ್ತಿದ್ದೆ
ಬಿತ್ತಿದ್ದೇನು?
ಒಂದೇ ಎರಡೇ
ಸಾವಿರಗಟ್ಟಲೇ ಸೂತಕದ ಛಾಯೆ..!

ಶಪಿಸುತ್ತಲೇ ಇದ್ದೆ..
ಹಿಡಿ ಮುಷ್ಟಿ ಹಾಕಿ
ಶಪಿಸುತ್ತಲೇ ಇದ್ದೆ !
ಅಂಗಾತಾದ ರಸ್ತೆಗಳಲಿ
ಒಂಟಿ ಪಿಶಾಚಿಗೂ
ಕೊರೋನಾದ ಕಮಟು.
ಬಾಲ್ಯ ಹರೆಯ, ಮುಪ್ಪು ಎಲ್ಲದೂ
ಎದುಸಿರಲಿ ಕೊನೆಯುಸಿರೆಳೆಯುತಿದೆ

ತಲುಪಲೇ ಇಲ್ಲ
ದಿಗ್ಬಂದನದ ಲಕೋಟೆ
ಹೆರಿಗೆ ನೋವಿಗೂ..
ಜವರಾಯನ ಕರೆಗೂ,
ಲಾಕ್ ಡೌನ್
ಅಂಚೆ ಕಚೇರಿ ತೆವಳುತಿದೆ..

ಗುಳೇಕಾರನ ಗುಡಾರದಲಿ
ಬಣ್ಣ ಬಳಿದ ಕಣ್ಗಳು
ಎಲ್ಲಡೇ..
ದಿಗ್ಭಂದನದ ಲಕ್ಷ್ಮಣ ರೇಖೆ
ಅನ್ನ ಉಣ್ಣುವ ಕೈಗಳಲಿ
ಬರಿದಾದ ಅಕ್ಷಯ ಪಾತ್ರೆ,
ಅವನೀಗ ಮತ್ತೆ
ತೊಯ್ದ ಕಣ್ಗಳ ವಲಸಿಗ..!

ಹುಲುಸಾಗಿ ಬಂದ ಹಲಸು
ಸೀಮೆ ಮೀರದೆ
ಕೂತು ಅಂಡು ಬಸಿಯುತಿದೆ.
ಅದಕೂ
ಶಂಕಿತರ ಸೋಂಕಿನ ಭೀತಿ..!

ಅಂಗಾಂಗ ಕಸಿಯಲ್ಲೂ
ಕೊರೋನಾ ಗಂಟಿನ ನಂಟು,
ಮುಚ್ಚಿದ ಕಿಡಕಿ ಬಾಗಿಲುಗಳ
ಕೋಣೆಯೊಂದರಲ್ಲಿ
ಸೂಜಿ ನಳಿಕೆಯೊಂದಿಗೆ
ಉಸಿರಾಟ ಸಾಗಿದೆ..!

ಎತ್ತ -ಎತ್ತರದ ಮಿನಾರುಗಳವರೆಗೆ
ಹೊಗೆ ಉಗುಳಿದ ಕಾರ್ಖಾನೆ,
ದಟ್ಟ ವಾಹನಗಳ ಆರ್ಭಟ
ಗಾಳಿ ಸೀಳಿಕೊಂಡು
ಹೊಗೆ ಊದಿದ ಹಕ್ಕಿಯೊಂದು
ಎಲ್ಲದೂ
ಧಫನ್ ಆದ ಸದ್ದು..!

ಈಗ ￰ಸ್ವಚ್ಚಂದ ಆಗಸದಲಿ
ತೇಲಿವೆ ಬೆಳ್ಳಿ ಮೋಡಗಳು
ಅಲ್ಲಲ್ಲಿ
ಚಿಂವಗುಡುವ ಸದ್ದಿನಲಿ..
ಮೈದೊಳೆದ ಗಂಗೆ ಯಮುನೆಯರು

ನೊಂದ ಭೂದೇವಿಯ ನಿಟ್ಟುಸಿರೋ ?
ಸರಿದೂಗಿಸುವ ಕ್ರಮವೋ?

3.ಇಳೆಯ ದನಿಗೆ ಬಾನ ಹಾಡು

ಮದನ ಮಾರುತಕೆ
ಸಾಗರದಷ್ಟು ಹನಿ ಹೊತ್ತ
ಚುಂಬಕ ಮೋಡದ ಮೆರವಣಿಗೆ..
ಜಿನಗದಿರುವುದೇ ಗಿರಿಯ
ಅಚ್ಛಾದಿತ ಪುಳಕಕೆ..
ಸೋನೆಯ ಸುವ್ವಾಲೇ
ದಕ್ಕಿದ ಇಳೆಗೆಂದೇ..

ಬಸಿಯುವ ಸೋನೆಯ ತುಂಟಾಟ..
ನೋಟವರಳಿಸಿದೆ ಹೊಂಬಿಸಿಲು..
ಸಪ್ತವರ್ಣಗಳ ಪರವಶತೆಯೊಂದಿಗೆ
ಬಾಂದಳಕೆ ಬಣ್ಣದ ಲೇಪನ

ಬೀಸಿದೆ ಮಾದಕ ಮಾರುತ
ತೆವಳುತಿವೆ ಸಾಲುಗಟ್ಟಿ
ಚುಂಬಕ ಮೋಡಗಳು..
ಬೆಸೆದಿದೆ ತೂಗುಸೇತುವೆ
ತಟಗಳ ಹಾದಿಯಾಗಲು
ತೊರೆಯೆಡೆಗೆ..

ಧೋ…. ಎಂದು
ಧೋಯ್ಯಗುಟ್ಟುವ ಸೋನೆ
ಹರಿವ ಧರ್ಮಕೆ ಬದಿಯ ಮಾತುಂಟೆ ?..
ಜಾರಿಕೆಯಲಿ ಜಾರುತಿದೆ
ಬೆನ್ನು ತೋರುತ ತೊರೆ..

ಕರಿಮುಸುಕಿನ ಕೆನ್ನಾಲಿಗೆಯಲಿ
ಸಪ್ತವರ್ಣಗಳು ಲುಪ್ತವಾಗುವ
ಹೊರಳಿಕೆ..
ಹುಯ್ಯುವ ಸೋನೆಗೆ
ಯಾವ ಹಂಗು…
ಕಟ್ಟೆಚ್ಚರಕೂ ನಿಲುಕದೇ
ಬಳಲಿದೆ ಹೊಂಬಿಸಿಲು..
ಸರಿವ ಸಮಯದೊಡನೆ
ಸೊರಗುತಿವೆ ಸಪ್ತವರ್ಣಗಳು…

4. ಅಸ್ತಂಗತ

ಮಾಸಲು ಉಡುಗೆಯೊಳು
ಮಾಸದ ಹರೆಯ ರಾಜಿಸಿದೆ
ಕೆಕ್ಕರಿಸಿದೆ ಸುತ್ತಡೆ ಕಾಮಾಲೆ
ಕೀಚಕರ ಕಣ್ಣುಗಳು….

ನಿಯತಿ ನಿಯಮದ ವಿಧವೆ
ಇದಿಯಾಗಿ ನಿಂತ ಬದುಕು
ಉಕ್ಕಂದದ ಭಸ್ಮತೆಯ ಸಾಂಗತ್ಯ
ಭೂತಳದ ಸಮಾದಿ.. ದಾಂಪತ್ಯ
ಚತುರೆ ಚಲುವೆ ಹರಿಣಿ
ವಿಷಾದ ಹೃದಯ ಮಡುಗಟ್ಟಿ
ದಿವಗಂತನ ಸ್ಮರಿಸಿ ಅರಿಸಿದೆ
ಕಣ್ಗಡಲು ದಿಗಂತದ ತಾರೆಗಳಲಿ..

ನೆಲಕ್ಕೊರಗಿದ ಕಾಯ ಸೋನೆ
ಕಂಬನಿಗೆ ಮಿಂದು ಮಿಡಿದಿದೆ
ಇರುಳಿಗೆ ಕರಳು ಬೆಚ್ಚಿ
ಹೊರಳಿದೆ ಅಮ್ಮನ ಬಿಗಿದಪ್ಪಿ
ಯುಗಾದಿಯ ವಸಂತಕೆ ಚಿಗುರೆಲೆ
ಕವಲೊಡೆದಂತೆ ಬದುಕಿನ
ಭರವಸೆ ಬೆಳಗಿದೆ…
ಅರುಣೋದಯದ ದೇದಿಪ್ಯಕೆ
ವಿನೂತನ ಬಾಳ್ವೆಗೆ ಹೆಜ್ಜೆ ಹಾಕಿದೆ…

ದ್ವಾರದ ಲಾಳಮುಂಡಿಗೆ ನಡುಗಿ
ಕಟ್ಟೀರುಳಲಿ ದಟ್ಟ ಬಿಂಬವೊಂದು
ಎರಗಿದೆ ಹರಿಣಿಯ ಹರಣಕೆ
ಆಕ್ರಮಣದ ಆಕ್ರಂದನ ನಭೋಮಂಡಲಕೆ
ಬಿಕೋ ರಾತ್ರಿಯಲಿ ಮಾರ್ಧನಿ…
ತತ್ತರಿಸಿ ನಲುಗಿದೆ ಜೀವ…
ಸೂರ್ಯೋದಯಕೆ ಮುನ್ನ ಅಸ್ತಂಗತ
‘ಶೋಷಿತೆ’ ನಾಮದೊಂದಿಗೆ…

ಕಮರಿತು ಎಲೆ ಚಿಗುರೊಡೆಯದೆ….
ವಸಂತ ಯುಗಾದಿಗೆ…..

5. ಉರುಗ ಪಾತಾಕ

ಉರುಗಪತಾಕರ ಲೋಕ
ಉರಗಗಳದೇ ಬೀಡು

ಶಿವನಾಭರಣ ಬಗೆದು
ಎರೆದೆ ಕ್ಷೀರಾಭಿಷೇಕವ

ಉಗಳಿದವು ಕಾರ್ಕೊಟಕ
ವಿಷವ ಕಾಳಸರ್ಪದಂತೆ

ಹಂಬಲಿಸಿದವು ಪುಂಗಿ ನಾದವ
ಪುಂಗಿಯೇ ಬಲ್ಲದವರ

ಮುಂದೆ ನಾ ಕಾಣದ ಪಥವು
ಅರಿಯದ ಹೆಜ್ಜೆಗಳ ಪಯಣ….

6. ಮತ್ತೇ.. ಒಂದು ಕಪ್ ಕಾಫಿ ಬೇಕು

ಪಿಸುಮಾತಿನ ಸಾನಿಧ್ಯದಲಿ
ನಾಳೆಗಳ ಭರವಸೆಯೆಡೆಗೆ
ಮತ್ತೋಮ್ಮೆ ಒಂದು ಕಪ್ ಕಾಫಿ ಗುಟಕರಿಸೋಣವೆ?..
ಸಂತೆಬೀದಿಯ ಚೌಕದ ತಿರುವಿನಂಚು
‘ಕಾಫಿ ಡೇ’ ಸೆಂಟರನಲಿ..

ಒಂದೇ ಸೂರಿನಡಿ
ನಿನ್ನೊಡನೆ ಹೊಸೆದ
ರಸ ನಿಮಿಷಗಳ ಸವಿಗಳಿಗೆಯ ಸವಿಯಲು
ಮತ್ತೇ..
ಒಂದು ಕಪ್ ಕಾಫಿ ಬೇಕೆ ಬೇಕು..

ಸೈರಾಣದ ಮನ
ಬಂಡಾಯ ಹೂಡಿದೆ
ನಿನ್ನೆದೆಯಲಿ ನಗು ನುಸಳಲೆಂದು
ತುಸು ವಿರಾಮ ಕೊಡು
ನಿಷ್ಕರುಣಿತನಕೆ..

ಅಂಗೈಗನ್ನಡಿನೇ ನಾನಾಗಿರುವೆ
ಗುಮಾನಿ ಬಿಸಾಡು
ಹೊಸ್ತಿಲಲಿ ಕಾಲ ಕಾದು ನಿಲ್ಲದು
ಬಿಗಿದ ಕಾಫಿ ಕಪ್ ಸಡಲಿಸು
ಕೊನೆ ಎಂದಾದರು ಸರಿ
ಹಸ್ತ ಚಾಚು..
ಮತ್ತೇ ನಾ ನಿನ್ನ ಕೈಯ
ಒಂದು ಗುಟುಕು ಕಾಫಿ
ಗುಟುಕರಿಸಲು..

‍ಲೇಖಕರು Admin

September 5, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: