ಸರೋಜಿನಿ ಪಡಸಲಗಿ ಸರಣಿ – ಸರಿ ತಪ್ಪುಗಳ ಲೆಕ್ಕಾಚಾರ…

ಸರೋಜಿನಿ ಪಡಸಲಗಿ

7

ಸರಿಯೋ, ತಪ್ಪೋ ನನಗೆ ನನ್ನ ಮಕ್ಕಳ ಶಿಕ್ಷಣದ ವಿಷಯ ಮುಖ್ಯವಾಗಿತ್ತು. ಅವರ ಭವಿಷ್ಯ ಅತಿ ಮುಖ್ಯವಾಗಿತ್ತು. ಆ ಓಡಾಟದ ದಣಿವು, ಆ ಗದ್ದಲ ಗಲಾಟೆಯ ನಡುವೆ ಮಕ್ಕಳು ಏನು ಓದಿಯಾವು, ಹೇಗೆ ಓದಿಯಾವು? ಹೆಚ್ಚು ಸರಿ – ತಪ್ಪುಗಳ ಲೆಕ್ಕ ಹಾಕದೇ ಧಾರವಾಡಕ್ಕೆ ಬಂದು ಬಿಟ್ವಿ. ನನ್ನ ಈ ನಿರ್ಧಾರ ತಪ್ಪು ಎಂದು ಒಮ್ಮೆಯೂ ಅನಿಸಲಿಲ್ಲ, ಅನಿಸಿಲ್ಲ ನಂಗೆ. ಯಾರಾದರೂ ಒಬ್ಬರು ಕಷ್ಟಪಡಲೇಬೇಕಿತ್ತು. ಅದೀಗ ನನ್ನ ಪತಿಯ ಪಾಳಿ ಬಂತು ಅಷ್ಟೇ. ಆದರೆ ಮಕ್ಕಳಿಗೆ ಅನುಕೂಲ ಆಯ್ತು. ಅದೊಂದು ದೊಡ್ಡ ಸಮಾಧಾನಕರ ವಿಷಯ ಆಗಿತ್ತು.

ಚಿಕ್ಕ ಮಗನ ಶಾಲೆ ನಮ್ಮ ಮನೆಯಿಂದ ಬರೀ ಐದು ನಿಮಿಷಗಳ ದಾರಿ. ಮಗಳು ಸಿಟಿಬಸ್ಸಿನಿಂದ ಓಡಾಡ್ತಿದ್ಲು. ಬಸ್ಸುಗಳ ಅನುಕೂಲ ಇತ್ತು. ಬಸ್ ಸ್ಟಾಪ್ ನೂ ಅಷ್ಟೇ ನಾಲ್ಕೈದು ನಿಮಿಷಗಳ ದಾರಿ. ದೊಡ್ಡ ಮಗನಿಗೆ ಸ್ಕೂಟರ್ ಬಂದಿತ್ತು. ಎಲ್ಲಾ ಒಂದು ಮೆಟ್ಟಿಗೆ ಬಂದಂತಾಯ್ತು. ನನ್ನ ಜವಾಬ್ದಾರಿ ಮತ್ತೆ ಒಂದು ತೂಕ ಏರಿಕೆಯಾಯ್ತು. ಎಂದೂ ಕಡಿಮೆ ಇರಲೇ ಇಲ್ಲ. ಆ ಮಾತು ಬೇರೆ.

ಆ ದಿನ ಭಾನುವಾರ. ಸುರೇಶ ಸಂಜೆ ಬರೋವ್ರಿದ್ರು. ನಕ್ಕೀ ಒಂದು ಟೈಮ್ ಅಂತ ಇರಲಿಲ್ಲ. ನನಗೆ ಸ್ವಲ್ಪ ಮಾರ್ಕೆಟ್ ಗೆ ಹೋಗೋದಿತ್ತು – ಮಕ್ಕಳ ಪುಸ್ತಕ, ನೋಟ್ ಬುಕ್, ಪೆನ್ನು, ಪೆನ್ಸಿಲ್ ಎಲ್ಲ ತರೋದಿತ್ತು. ಸುರೇಶ ಅವರ ದಾರಿ ಕಾಯ್ದರೆ ಕೆಲಸ ಆಗೋ ಸಾಧ್ಯತೆ ಇರಲಿಲ್ಲ. ನನ್ನ ಮಗಳನ್ನು ಕರೆದೆ – ‘ಬರ‍್ತಿಯಾ ಪೇಟೆಗೆ ಹೋಗಿ ಬರೂಣು. ನಿಂದು, ನಿನ್ನ ತಮ್ಮಂದು, ಅಣ್ಣಂದು ಎಲ್ಲಾ ಸಾಮಾನು ತಂದ ಬಿಡೂಣು. ನಿನ್ನ ತಮ್ಮನೂ ಒಂದು ಲಿಸ್ಟ್ ಕೊಟ್ಟಾನ. ನಿಮ್ಮಣ್ಣ ಬರೀ ನೋಟ್ಬುಕ್ಸ್ ತರಲಿಕ್ಕೆ ಹೇಳ್ಯಾನ. ಉಳಿದದ್ದನ್ನು ಅವನೇ ನೋಡಿ ತಗೋತಾನಂತ’. ಅಂದೆ. ‘ಇಲ್ಲ ಅಮ್ಮಾ ನನಗ ಬರೂದ ಆಗೂದಿಲ್ಲ. ಅಭ್ಯಾಸ ಜಾಸ್ತಿ ಅದ. ನೀ ಹೋಗಿ ಬಂದ ಬಿಡು’ ಅಂದ್ಲು. ಒಂದು ಗಳಿಗೆ ಅವಳತ್ತ ನೋಡಿದೆ. ಆಕೆ ಏನೋ ಬರೆಯೋದ್ರಲ್ಲಿ ಮಗ್ನಳಾಗಿದ್ಲು. ದೊಡ್ಡ ಮಗ ಎಕ್ಸ್ಟ್ರಾ ಕ್ಲಾಸ್ ಅಂತ ಕಾಲೇಜಿಗೆ ಹೋಗಿದ್ದ. ಚಿಕ್ಕವನೂ ಓದಿನಲ್ಲಿ ತಲ್ಲೀನ.

ಪಕ್ಕದ ರೂಂನಲ್ಲಿ ಮಗುವಿನ ಕೇಕೆಯೊಮ್ಮೆ, ಹಟದ ರಂಪಾಟವೊಮ್ಮೆ ನಡೆದಿತ್ತು, ನನ್ನ ಭಾವನ ಮಗಳ ಮಗೂಂದು. ಎರಡೇ ಬೆಡ್ಡರೂಂ ಇತ್ತು ಆ ಮನೆಗೆ. ಈ ರೂಂ ಸಾಕಷ್ಟು ದೊಡ್ಡದಿತ್ತು. ಇಲ್ಲಿ ಮೂರು ಗೋಡೆಗೆ ಮೂರು ಟೇಬಲ್ – ಚೇರ್, ಅದರ ಪಕ್ಕದಲ್ಲಿ ಅವರವರ ಮಂಚ, ಒಂದು ಬದಿಗೆ ಪುಸ್ತಕಗಳ ಶೆಲ್ಫ್ ಇಟ್ಟು ಹೊಂದಿಸಿ ಕೊಟ್ಟಿದ್ದೆ. ನಾನು ಹಾಲ್ನಲ್ಲಿ ಮಲಗ್ತಿದ್ದೆ. ಇನ್ನೊಂದು ರೂಂನಲ್ಲಿ ಅಂದರೆ ಮಕ್ಕಳ ರೂಂನ ಪಕ್ಕದ ರೂಂನಲ್ಲಿ ಕೂಸು -ಬಾಣಂತಿ, ನನ್ನ ನೆಗೆಣ್ಣಿ ಮಲಗ್ತಿದ್ರು. (ಅಂದರೆ ಆಕೆಯ ತಾಯಿ). ಸರಿ ನನ್ನ ಮಗಳಿಗೆ ಹೇಳಿದೆ- ‘ರೂಂ ಬಾಗಿಲು ಬಂದ್ ಮಾಡ್ಕೊಂಡು ಅಭ್ಯಾಸ ಮಾಡ್ರಿ’ ಅಂತ. ಸೂಕ್ಷ್ಮ ಗೊತ್ತಾಯ್ತು ಆಕೆಗೆ. ಸರಿ ಅಂದ್ಲು. ನಾ ಆಚೆ ಬಂದು ಹಾಲಿನಲ್ಲಿ ಚೇರ್ ಮೇಲೆ ಒರಗಿ ಒಂದು ನಿಮಿಷ ಕಣ್ಮುಚ್ಚಿದೆ.

ಈಗಲೂ ನಾ ತಪ್ಪೇ ಮಾಡ್ತಿದೇನೋ ಏನೋ ಎಂಬನಿಸಿಕೆ. ಮಕ್ಕಳಿಗೆ ಓದಲು ಬೇಕಾಗುವ ಪ್ರಶಾಂತ ವಾತಾವರಣ ಒದಗಿಸಲು ಆಗ್ತಿಲ್ಲ ನನ್ನ ಕೈಲಿ ಎಂಬ ಕೊರಗು, ನೋವು. ಏನು ಹೇಗೆ ಮಾಡಲಿ ಒಂದೂ ತಿಳಿಯದ ಸ್ಥಿತಿ ನನ್ನದು. ಮಕ್ಕಳಿಗೂ ಅದು ರೂಢಿಯಾಗಿತ್ತು. ಯಾವಾಗಲೂ ಮನೆ ತುಂಬಾ ಜನ ಇರೋ ವಾತಾವರಣಕ್ಕೆ ಒಗ್ಗಿಹೋಗಿದ್ರು ಅವರೂ. ಚಿಕ್ಕಂದಿನಿಂದಲೂ ಹಾಗೇನೆ ಇತ್ತಲ್ಲ ರೂಢಿ? ಆದರೆ ಆಗಿಗೂ ಈಗಿಗೂ ಒಂದು ದೊಡ್ಡ ವ್ಯತ್ಯಾಸ ಇತ್ತು. ಈಗ ಮಕ್ಕಳು ದೊಡ್ಡ ಕ್ಲಾಸ್ ಗೆ ಬಂದಿದ್ರು. ಹೀಗಾಗಿ ನನಗೆ ತಪ್ಪಿತಸ್ಥ ಭಾವನೆ ಕಾಡುತ್ತಿತ್ತು. ಯಾಕೋ ಆ ದಿನ ಮರ‍್ಕೆಟ್ ಗೆ ಹೋಗೋದು ಬೇಡ ಅನಿಸಿ ಮಾರನೇ ದಿನ ಮಕ್ಕಳು ಸ್ಕೂಲ್ ಗೆ ಹೋದ ಮೇಲೆ ಹೋಗೋಣ ಅನ್ಕೊಂಡು ಹಾಗೇ ನೆನಪುಗಳಲ್ಲಿ ಮುಳುಗಿ ಹೋದೆ, ನನ್ನನ್ನೇ ನಾನು ವಿಶ್ಲೇಷಿಸಿ ಕೊಳ್ಳುತ್ತಾ.

ನನ್ನ ಪತಿ ಡಾಕ್ಟರ್ ಆದದ್ದರಿಂದ ಎಲ್ಲಾ ಸಂಬಂಧಿಕರಿಗೆ, ಹತ್ತಿರದವರಿಗೆ ನನ್ನ ಮನೆ ಒಂದು ತಂಗುದಾಣ ಆಗಿತ್ತು. ಸ್ವಲ್ಪ ಹುಷಾರಿಲ್ಲಾಂದ್ರೆ ಬಂದು ಬಿಡೋರು; ವಾರಗಟ್ಟಲೆ, ಒಮ್ಮೊಮ್ಮೆ ತಿಂಗಳಾನುಗಟ್ಲೆ ಇದ್ದು ಹೋಗೋರು. ಅವರದು ತಪ್ಪು ಅಂತ ಖಂಡಿತಾ ಹೇಳ್ತಿಲ್ಲ. ಏನೋ ತಮ್ಮವರು ಅಂತ ಬರೋರು ಅವರು. ಆದರೆ ನಮಗಾಗ್ತಿದ್ದ ಅನಾನುಕೂಲತೆಗಳ ಬಗ್ಗೆ ಹೇಳ್ತಿದೀನಿ. ಬಂಕಾಪುರದಲ್ಲಿದ್ದಾಗಂತೂ ಈ ಜನ ಬರೋ ಹೋಗೋದು, ವಸತಿ ಇರೋದು ಇದೆಲ್ಲಾ ಲೆಕ್ಕವಿಲ್ಲದಷ್ಟು. ಹೇಗೆ ನಿಭಾಯಿಸ್ತಿದ್ನೋ ಗೊತ್ತಿಲ್ಲ. ಆದರೆ ಈಗ ಮಾತ್ರ ಈ ಸರಿ- ತಪ್ಪುಗಳ ಲೆಕ್ಕಾಚಾರ ಹಾಕೋದು ಒಂದು ರೂಢಿ ಆಗ್ಹೋಗಿತ್ತು ನಂಗೆ. ತಪ್ಪಿತಸ್ಥ ಭಾವಗಳ ಹೋರಾಟದಲ್ಲಿ ನನ್ನನ್ನೇ ನಾ ರಕ್ಷಿಸಿಕೊಳ್ಳುವ ಪ್ರಯತ್ನದ ಒಂದು ಮುಖ ಇರಬಹುದು ಇದು!

ಈಗ ಕರೆದಾಗ ನನ್ನ ಮಗಳು ಒಲ್ಲೆ ಎಂದಳು. ಆದರೆ ಅವಕ್ಕೆ ಚಿಕ್ಕವರಿದ್ದಾಗ ಹೊರಗೆ ಹೋಗುವ, ತಿರುಗಾಡಿ ಬರುವ ವಯಸ್ಸು, ಮನಸ್ಸು. ನಾವು ಆಗ ಇದ್ದಿದ್ದು ಹಳ್ಳಿಗಳಲ್ಲಿ. ಬಂಕಾಪುರದಲ್ಲಿ ಇದ್ದಾಗ ಹುಬ್ಬಳ್ಳಿ ಒಂದೂವರೆ, ಎರಡು ತಾಸಿನ ದಾರಿ. ಆಗಲೂ ನಮಗೆ ಮಕ್ಕಳನ್ನು ತಿಂಗಳಿಗೆ ಒಂದು ಬಾರಿಯಾದ್ರೂ ಕರಕೊಂಡು ಹೋಗಲಾಗ್ತಿರಲಿಲ್ಲ. ಬಂಕಾಪುರದಲ್ಲಂತೂ ಏನೂ ಇರಲಿಲ್ಲ. ಮಕ್ಕಳು ಬೇಸತ್ತು ಬಿಡೋವು. ಸುರೇಶ ಅವರಿಗೆ ಬಿಡುವು ಇರತಿರಲಿಲ್ಲ. ಅವರನ್ನು ದೂರುತ್ತಿಲ್ಲ ನಾ. ಆದರೆ ಮಕ್ಕಳಾಸೆ ಪೂರೈಸಲಾಗದ ಹತಾಶ ಭಾವ ನಂಗೆ.

ಒಂದು ಘಟನೆ ಮಕ್ಕಳು ಚಿಕ್ಕವರಿದ್ದಾಗಿಂದು ಹೇಳ್ತೀನಿ. ನನ್ನ ದೊಡ್ಡ ಮಗನೂ ಆಗ ನಮ್ಮ ಜೊತೆಗೆ ಇದ್ದ ಇನ್ನೂ. ಆ ದಿನ ಭಾನುವಾರ. ಹುಬ್ಬಳ್ಳಿಯಲ್ಲಿ ‘ ಛೋಟಾ ಚೇತನ್’ ಮೊದಲ ೩ಆ ಸಿನಿಮಾ ಹಿಂದಿಯಲ್ಲಿ, ಓಡುತ್ತಿತ್ತು. ಮಕ್ಕಳಿಗೆ ಆಸೆ, ಕೂತೂಹಲ ಆ ಹೊಸ ಬಗೆಯ ಸಿನಿಮಾ ನೋಡಲು. ಅದು ಸಹಜವೇ. ಆ ಭಾನುವಾರ ದಿನ ನಕ್ಕೀ ಹೋಗೋಣ ಅಂತ ಹೇಳಿದ್ದೆ. ಅಲ್ಲಿದ್ದ ಇನ್ನಿಬ್ರು ಡಾಕ್ಟ್ರ ಮಕ್ಕಳು ಆಗಲೇ ನೋಡಿ ಆಗಿತ್ತು, ತಮ್ಮ ತಮ್ಮ ಅಪ್ಪ- ಅಮ್ಮನೊಡನೆ.

ಆ ದಿನ ಸುರೇಶ ಅವರಿಗೆ ನೆನಪಿಸ್ದೆ; ಮಕ್ಕಳನ್ನೀ ದಿನ ಹುಬ್ಬಳ್ಳಿಗೆ ಕರೆದೊಯ್ಯಬೇಕು ಅಂತ. ಆದರೆ ದವಾಖಾನೆ? ಅಂದ್ರು ನನ್ನ ಪತಿ. ‘ಈ ದಿನ ರವಿವಾರ. ಸೂಟಿ ಅದಲಾ? ಬಂದ ಪೇಷಂಟ್ಸ್ ನೋಡ್ಕೊಳಿಕ್ಕೆ ಇನ್ನಿಬ್ರು ಡಾಕ್ಟ್ರು ಇದ್ದಾರಲಾ ಹೇಳ್ರಿ ಅವರಿಗೆ. ಈ ದಿನ ಹುಡಗೂರನ್ನ ಹುಬ್ಬಳ್ಳಿಗ ಕರಕೊಂಡು ಹೋಗಿ ಬರೂಣು’ ಅಂದೆ. ‘ಸರಿ, ಈಗ ಒಂದ ತಾಸಿನಾಗ ಬಂದ ಬಿಡ್ತೀನಿ. ತಯಾರಾಗ್ರಿ ನೀವು’ ಅಂದ್ರು. ಯಾತಕ್ಕೋ ಡ್ರೈವರ್ ಬಿಸ್ತಿ ಬಂದಿದ್ದ. ಆತ, ‘ಸಾಹೇಬ್ರs ದವಾಖಾನೀದೂ ಸ್ವಲ್ಪ ಸಾಮಾನು ತರೂವ ಅದಾವ್ರೀ. ಜೀಪಿನ್ಯಾಗ ಹೋಗೂಣೇನ್ರಿ’ ಅಂದ. ‘ಆಯ್ತು. ಹಂಗಾರ ನೀನೂ ತಯಾರಿ ಮಾಡ್ಕೋ’ ಅಂತ ಹೇಳಿ ಸುರೇಶ ಆಸ್ಪತ್ರೆಗೆ ಹೋದ್ರು. ಬಿಸ್ತಿನೂ ಹೋದ. ಮಕ್ಕಳಿಗೆ ಖುಷಿಯೋ ಖುಷಿ! ಪಟಾ ಪಟಾ ತಯಾರ ಆದ್ರು. ನಂದೂ ಎಲ್ಲಾ ಮುಗೀತು. ಬಿಸ್ತಿನೂ ಬಂದ. ತಾಸಾಯ್ತು, ಎರಡು ತಾಸಾಯ್ತು. ನನ್ನ ಪತಿ ಪತ್ತೆನೇ ಇಲ್ಲ. ಮನೆ – ಆಸ್ಪತ್ರೆ ಅಲೆದಾಡಿ ಸುಸ್ತಾದ್ವು ನನ್ನ ಮಕ್ಕಳು. ಚಿಕ್ಕ ಮಕ್ಕಳು ಅವು, ಮುಖ ಸಪ್ಪಗೆ ಮಾಡಿಕೊಂಡು ‘ಇನೂ ಅರ್ಧಾ ತಾಸಂತ ಅಮ್ಮ’ ಅನ್ನೋವು.

ಮುಂಜಾನೆ ೧೧ ಗಂಟೆಯಿಂದ ಶುರು ಆದ ಈ ಲೆಫ್ಟ್ – ರೈಟ್ ಮಧ್ಯಾಹ್ನ ಎರಡು ಗಂಟೆವರೆಗೂ ನಡೀತು. ಮಕ್ಕಳು ಹಸಿದಿದ್ರು. ಹುಬ್ಬಳ್ಳಿಗೆ ಹೋಗೋದಿದೆ ಅಂತ ನಾ ಅಡಿಗೆನೂ ಮಾಡಿರಲಿಲ್ಲ. ಬೆಳಗಿನ ತಿಂಡಿಗೆ ಮಾಡಿದ ಇಡ್ಲಿ ಹಿಟ್ಟು ಇತ್ತು. ಇಡ್ಲಿ ಮಾಡಿದೆ ಮತ್ತೆ. ಇನ್ನೊಂದು ರೌಂಡ್ ಇಡ್ಲಿ ಸಾಂಬಾರ್ ಆಯ್ತು ಮಕ್ಕಳದು. ತಿಂದಾದ ಮೇಲೆ ಮತ್ತೆ ಶುರು ಆಯ್ತು ಆಸ್ಪತ್ರೆ ಅಲೆದಾಟ. ‘ಇನ್ನೂ ಒಂದ ತಾಸಂತ ಅಮ್ಮಾ’ ಅಂತ ಮುಖ ಸಪ್ಪಗೆ ಮಾಡಿದ್ವು. ‘ ಬರ‍್ತಾರ ತಡೀರಿ ಈಗ’ ಅಂದೆ. ‘ಯಾವಾಗ ಅಮ್ಮಾ?’ ಅವರ ಪ್ರಶ್ನೆ. ಏನು ಹೇಳಲಿ? ನನಗೋ ನನ್ನ ಪತಿಯ ಮೇಲಿನ ಕೋಪ ಬ್ರಹ್ಮರಂಧ್ರಕ್ಕೆ ಏರಿತ್ತು. ನಾನೇ ಆಸ್ಪತ್ರೆಗೆ ಹೋಗಿ ಕರೆದುಕೊಂಡು ಬರಲಾ ಅನ್ನೋ ಅಷ್ಟು ತಾಳ್ಮೆ ತಪ್ಪಿತ್ತು. ಎದ್ದು ಒಳಗೆ ಹೋದೆ ನನ್ನ ಸಿಟ್ಟು ಮಕ್ಕಳಿಗೆ ಗೊತ್ತಾಗಬಾರದು ಅಂತ.

ಮಕ್ಕಳ ಖುಷಿಯ ಕಿರಿಚಾಟ ಕೇಳಿ ಸುರೇಶ ಬಂದ್ರು ಅನಕೊಂಡೆ. ಹೊರಗೆ ಬಂದೆ. ಮೂರೂವರೆಗೆ ಕೊನೆಗೊಮ್ಮೆ ಬಂದ್ರು ನನ್ನ ಪತಿ! ಚಿಕ್ಕ ಮಕ್ಕಳಲ್ವಾ ಅವು? ಕುಣಿದಾಡಿ ಬಿಟ್ವು ಅಪ್ಪ ಬಂದಿದ್ದಕ್ಕೆ. ನನ್ನ ಪತಿಗೂ ಇಡ್ಲಿ – ಸಾಂಬಾರ್ ಕೊಟ್ಟು ನಾ ಒಂದು ಗ್ಲಾಸ್ ನೀರು ಕುಡಿದೆ, ತಲೆ, ಸಿಟ್ಟು ಎಲ್ಲಾ ಥಣ್ಣಗಾಗಲಿ ಅಂತ. ‘ನೀನೂ ತಗೋಬೇಕಿತ್ತು’ ಅಂದ್ರು ಸುರೇಶ. ‘ಹೊಟ್ಟಿ ತುಂಬೇದ ನಂದು’ ಸ್ವಲ್ಪ ಬಿರುಸಾಗಿಯೇ ಹೇಳಿ ಹೊರಬಂದೆ. ಮಕ್ಕಳ ಅಲೆದಾಟ, ಸಪ್ಪೆ ಮುಖ ನೋಡಿ ಸಂಕಟ ನಂಗೆ. ಅಂತೂ ಇಂತೂ ನಾಲ್ಕು ಗಂಟೆಗೆ ಬಂಕಾಪುರದಿಂದ ಹೊರಟು ೬ ಗಂಟೆಗೆ ಹುಬ್ಬಳ್ಳಿ ಮುಟ್ಟಿದ್ದಾಯ್ತು. ಆಗಿನ್ನೂ ರಸ್ತೆಗಳು ಇಷ್ಟು ಚೆನ್ನಾಗಿರಲಿಲ್ಲ. ೬.೩೦ ರ ಆಟಕ್ಕೆ ‘ಛೋಟಾ ಚೇತನ್’ ಸಿನಿಮಾಕ್ಕೆ ಬ್ಲ್ಯಾಕ್ ನಲ್ಲಿ ಟಿಕೆಟ್ ತಗೊಂಡು ಮಕ್ಕಳಿಗೆ ತೋರಿಸಿ ಅವುಗಳ ಖುಷಿ, ಹಾರಾಟ ನೋಡಿ ಖುಷಿ ನಂಗೆ. ನಾ ಆ ಸಿನಿಮಾ ನೋಡಿದ್ನೋ ಇಲ್ವೋ ಅದು ನನಗಿನ್ನೂ ಖಾತ್ರಿ ಇಲ್ಲ. ಮಕ್ಕಳು ಕುಣಿದಾಡಿದ್ದು ಬೇಜಾರು, ದಣಿವು ಮರೆತು, ಅವುಗಳ ಸಪ್ಪೆ ಮುಖ ಅರಳಿದ್ದನ್ನು ನೋಡುತ್ತಾ ಕುಳಿತದ್ದು ಮಾತ್ರ ಪಕ್ಕಾ ನೆನಪುಂಟು.

ರಾತ್ರಿ ಅಲ್ಲೇ ಊಟ ಮುಗಿಸಿ ವಾಪಸ್ಸು ಬಂಕಾಪುರಕ್ಕೆ ಬಂದ್ವಿ. ಆಸ್ಪತ್ರೆ – ಮನೆ ಅಲೆದಾಡಿ ದಣಿದು ಸುಸ್ತಾಗಿ ಮಕ್ಕಳು ಮಲಗಿ ಬಿಟ್ಟಿದ್ರು. ಇದು ಇಂದಿನ ಒಂದು ದಿನದ ಕತೆ ಅಲ್ಲ. ಪ್ರತಿ ಸಲವೂ ಹೀಗೇ. ಅಲ್ಲಿಂದಿಲ್ಲಿಗೆ ಓಡಾಡಿ ಸೋತ ಮಕ್ಕಳನ್ನು ನೋಡಿ, ಅವರ ಸಪ್ಪೆ ಮುಖ ನೋಡಿ ನನಗೆ ಅವ್ಯಕ್ತ ತಳಮಳ. ಎಲ್ಲಾ ತಯಾರಾಗಿ ಹೋಗೋದನ್ನೇ ಕ್ಯಾನ್ಸಲ್ ಮಾಡಿದ್ದು ಎಷ್ಟೋ ಸಲ! ಈಗ ವಿಚಾರ ಮಾಡಿದಾಗ ಬಹುಶಃ ನಾ ತಪ್ಪಿದೆ , ಸ್ವಲ್ಪ ಕಠಿಣಳಾಗದೇ, ನನ್ನ ಪತಿಗೆ ಕಟ್ಟುನಿಟ್ಟಾಗಿ ತಿಂಗಳಿಗೊಮ್ಮೆ ಆದ್ರೂ ಮಕ್ಕಳನ್ನು ಆಚೆ ಕರೆದುಕೊಂಡು ಹೋಗಲೇಬೇಕು ಅಂತ ಹೇಳದೇ ಅಂತ ಅನಿಸ್ತದೆ. ನಾ ಒಬ್ಬಳೇ ಕರೆದುಕೊಂಡು ಹೋಗಬಹುದಿತ್ತು. ಅದೇನೂ ಅಸಾಧ್ಯದ ಮಾತಾಗಿರಲಿಲ್ಲ. ಆದರೆ ಆ ಪುಟ್ಟ ಮಕ್ಕಳಿಗೆ ಅಪ್ಪನೂ ಜೊತೆಗೆ ಬರಲಿ ಅಂತ ಇರೋದಿಲ್ವಾ? ಮಕ್ಕಳ ಜೊತೆ ಒಂದು ಹತ್ತು ನಿಮಿಷ ಮಾತನಾಡಿ ಆಟ ಆಡಲೂ ಪುರುಸೊತ್ತಿಲ್ಲದ ಗಟ್ಟಿ ನಂಟು ಆಸ್ಪತ್ರೆಯದು ನನ್ನ ಪತಿಗೆ. ಅವರ ಕೆಲಸದ ಒತ್ತಡ ಗೊತ್ತು ನನಗೂ. ಅವರ ದುಡಿತದ ಅರಿವೂ ಉಂಟು.

ವೈದ್ಯಕೀಯ ವೃತ್ತಿ ಅದಕ್ಕೇ ಇನ್ನುಳಿದ ವೃತ್ತಿಗಳಂತಲ್ಲ ಅದನೂ ನಾ ಬಲ್ಲೆ. ಒಂದು ಜೀವ ಉಳಿಸುವ ಹೆಣಗಾಟದ ಆ ಕೆಲಸದ ಒಳಹೊರಗನ್ನು ಬಲ್ಲೆ ವೈದ್ಯರ ಪತ್ನಿಯಾಗಿ. ಆದರೆ ಅದರ ಜೊತೆ ತಾಯಿಯೂ ಹೌದು ನಾ. ಆಸ್ಪತ್ರೆಯ ಕೆಲಸದ ಮಧ್ಯೆಯೇ ಒಂದೈದು ನಿಮಿಷ ಮಕ್ಕಳಿಗಾಗಿಡಿ ಅಂತ ಹೇಳದೇ ಇದ್ದು, ಮಕ್ಕಳ ಬಾಲ್ಯದ ಆ ಸಂತೋಷ ಆನಂದ ತಪ್ಪಿಸಿದ್ದಕ್ಕೆ ನನ್ನ ನಾ ಕ್ಷಮಿಸಿ ಕೊಳ್ಳಲಾರೆ. ಆ ನೋವು ಕೊರಗು ಕೊನೆವರೆಗೂ ನನ್ನ ಜೊತೆಗೆ!

ಇನ್ನೊಂದು ಎಂದೂ ಮರೆಯಲಾಗದ ಘಟನೆ. ಇದೂ ಬಂಕಾಪುರದಲ್ಲಿ ಇದ್ದಾಗಲೇ ನಡೆದದ್ದು. ನಾವು ಬಂಕಾಪುರದಲ್ಲಿ ಇದ್ದದ್ದು ಸುಮಾರು ಏಳು ವರ್ಷ. ಹೀಗಾಗಿ ಅಲ್ಲಿನ ಅನುಭವಗಳೂ ಲೆಕ್ಕವಿಲ್ಲದಷ್ಟು. ನನ್ನ ಪತಿಯ ಊರು ಸವಣೂರು ಅಲ್ಲಿಂದ ೮-೧೦ ಕಿ.ಮೀ. ಅಷ್ಟೇ. ಆ ಭಾನುವಾರದ ಸಂಜೆ ಅಲ್ಲೇನೋ ಕಾರ್ಯಕ್ರಮ ಇತ್ತು. ಆಸ್ಪತ್ರೆ ಜೀಪು ಎಲ್ಲೋ ಹೋಗಿತ್ತು. ಬಸ್ಸಿನಲ್ಲಿ ಹೋಗೋಣ ಅಂದ್ರು ನನ್ನ ಪತಿ. ಸರಿ ಅಂತ ನಾನೂ, ಮಕ್ಕಳೂ ತಯಾರಾಗಿ ಕೂತ್ವಿ. ಮತ್ತೆ ಯಥಾಪ್ರಕಾರ. ಮಧ್ಯಾಹ್ನ ಮೂರು ಗಂಟೆಗೆ ಹೊರಡೋಣ ಅಂದಿದ್ದು ಸಾಯಂಕಾಲ ಐದೂವರೆಯಾದ್ರೂ ಕಾರ್ಯರೂಪಕ್ಕೆ ಬಂದಿರಲಿಲ್ಲ.

ಐದೂ ಮುಕ್ಕಾಲು ಗಂಟೆಗೆ ಬಂದ ನನ್ನ ಪತಿ, ‘ತಡಾ ಆಗೇದ. ಸ್ಕೂಟರ್ ತಗೊಂಡು ಹೋಗೋಣ’ ಅಂದ್ರು. ಹೂಂ ಅಂದೆ. ಚಿಕ್ಕವನು ಆಗ ಎರಡು ವರ್ಷಗಳ ಮಗು. ಸರಿ ಹೊರಟಿತು ನಮ್ಮ ಸಂಸಾರ ಸ್ಕೂಟರ್ ಬೆನ್ನೇರಿ ಸವಣೂರಿನತ್ತ. ಅರ್ಧ ದಾರಿ ಬಂದಿದ್ವಿ – ಮಣ್ಣೂರು ಅಂತಾ ಒಂದು ಹಳ್ಳಿ ಅದನ್ನು ದಾಟಿ ಬಂದ್ವಿ. ಸಂಜೆಯ ತಂಗಾಳಿ, ಮಕ್ಕಳ ಗಲಗಲ ಮಾತು, ಸುತ್ತಲ ಹಸಿರು ಹೊಲಗಳು; ಎಲ್ಲೋ ತೇಲ್ತಿದ್ದೆ. ಫಕ್ಕನೇ ಸ್ಕೂಟರ್ ನಿಂತು ಬಿಟ್ತು! ಒಂದು ಕ್ಷಣ ಎಲ್ಲಾ ಸ್ತಬ್ಧ! ಏನಾಯ್ತು ಅಂದೆ. ‘ಗೊತ್ತಿಲ್ಲ ನೋಡ್ಬೇಕು’ ಅಂದ್ರು ಸುರೇಶ. ಕೆಳಗಿಳಿದೆ ಮಕ್ಕಳೊಡನೆ. ಏನು ಮಾಡೋದು? ಆರೂ ಕಾಲಾಗಿತ್ತು. ಸಣ್ಣಗೆ ಮುಸ್ಸಂಜೆ ಕವೀತಿತ್ತು.

ಸುತ್ತಲಿನ ಹಸಿರು ಹೊಲಗಳು ಈಗ ಹೆದರಿಸಿದಂತನಿಸ್ತು. ಮಕ್ಕಳೂ ಗಾಬರಿಯಾದ್ವು. ಅಷ್ಟ್ರಲ್ಲಿ ಒಂದು ಬಸ್ಸು ಬಂತು; ಹಾವೇರಿಯಿಂದ ಸವಣೂರಿನತ್ತ ಹೊರಟಿತ್ತು. ಸುರೇಶ ಸ್ಕೂಟರ್ ಚೆಕ್ ಮಾಡ್ತಿದ್ದವ್ರು ‘ನೀವು ಬಸ್ಸಿಗೆ ಹೋಗ್ಬಿಡ್ರಿ. ಸ್ಕೂಟರ್ ಪಂಕ್ಚರ್ ಆಗೇದ. ನಾ ಗಾಲಿ ಬದಲಿಸಿ ಕೊಂಡ ಬರ‍್ತೀನಿ’ ಅಂದ್ರು. ಅವರ ಮಾತು ಮುಗಿಯೋಷ್ಟ್ರಲ್ಲಿ ನನ್ನ ದೊಡ್ಡ ಮಗ ಕೈ ಮಾಡಿ ಬಸ್ಸು ನಿಲ್ಲಿಸಿದ. ‘ಹೂಂ ಲಗು ಲಗು ಹತ್ರಿ’ ಅಂದ ಕಂಡಕ್ಟರ್. ನಾನೂ ಮಕ್ಕಳೂ ಗಡಿಬಿಡಿಯಿಂದ ಹತ್ತಿದ್ವಿ. ಬಸ್ಸು ಹೊರಟಿತು. ಕಂಡಕ್ಟರ್ ‘ಅಕ್ಕಾರ ಟಿಕೆಟ್ ರೀ’ ಅಂದಾಗ ನೋಡ್ತೀನಿ – ನನ್ನ ಬ್ಯಾಗ್ ಇಲ್ಲ! ಮುಂದೆ ಸ್ಕೂಟರ್ ಹ್ಯಾಂಡಲ್ ಗೆ ಹಾಕಿದ್ದು ಅಲ್ಲೇ ಬಿಟ್ಟು ಗಡಿಬಿಡಿಯಲ್ಲಿ ಬಸ್ಸು ಹತ್ತಿಬಿಟ್ಟಿದ್ದೆ. ಮತ್ತೆ ಕಂಡಕ್ಟರ್ ಧ್ವನಿ – ‘ಅಕ್ಕಾರ ಟಿಕೆಟ್ ರೀ’. ಅಕ್ಕಾರ ಏನ ಮಾಡಬೇಕು? ದುಡ್ಡೇ ಇಲ್ಲ! ಹಾಗೇ ಹೇಳ್ದೆ ಕಂಡಕ್ಟರ್ ಗೆ. ‘ಹಂಗಂದ್ರ ಏನ್ರೀ ಅಕ್ಕಾರ’ ಅಂತ ಆತ. ನನಗೋ ಕೆಟ್ಟ ಅವಮಾನ; ನನ್ನ ಮಕ್ಕಳು ನನ್ನ ಮಾರಿ ನೋಡ್ತಿದ್ವು. ಯಾರೋ ಒಬ್ಬ ಪುಣ್ಯಾತ್ಮರು ಟಿಕೆಟ್ ದುಡ್ಡು ಕೊಟ್ರು.

ನನಗೆ ಸವಣೂರಿನ ಮಂದಿ ಯಾರದೂ ಅಷ್ಟಾಗಿ ಪರಿಚಯ ಇರಲಿಲ್ಲ. ಅವರು ಬಹುಶಃ ಅಲ್ಲಿ ಸ್ಕೂಟರ್ ಜೊತೆ ನಿಂತ ಸುರೇಶ ಅವರನ್ನು ನೋಡಿದ್ರೋ ಅಥವಾ ಭೂತದಯಾಪರರೋ ಇಂದಿಗೂ ಗೊತ್ತಾಗಿಲ್ಲ. ಸವಣೂರು ಬಂತು. ಥ್ಯಾಂಕ್ಸ್ ಹೇಳಿ ಇಳಿದೆ ಮಕ್ಕಳ ಜೊತೆ. ಅಲ್ಲಿ ಆಗ ಬರೀ ಜಟಕಾ ಇದ್ವು. ಜಟಕಾ ತಗೊಂಡು ಹೊರಟ್ವಿ ಮನೆಗೆ. ನನ್ನ ಮಗ ಕೇಳಿದ ‘ಅಮ್ಮಾ ಜಟಕಾದ ರೊಕ್ಕ?’ ಅಂದ. ‘ಮನೀಗೆ ಹೋಗಿ ಅಲ್ಲೆ ಕಾಕೂನ ಹತ್ರ ತಗೊಂಡು ಕೊಡೋಣ ಪುಟ್ಟಾ’ ಅಂದೆ. ಹೂಂ ಅಂದ. ಅಲ್ಲಿ ನಮ್ಮ ನೆಗೆಣ್ಣಿ ‘ಅಯ್ಯs ಮಹಾರಾಯ್ತಿ ಅದಹೆಂಗ ಬ್ಯಾಗ್ ಮರತ ಹತ್ತಿದೇವಾ’ ಅನಬೇಕ? ಇದು ನೋಡ್ರಿ ವೈದ್ಯರ ಪತ್ನಿ ಪಡೀಪಾಟ್ಲು! ಕತ್ತಲು, ಚಿಕ್ಕ ಚಿಕ್ಕ ಮಕ್ಕಳು, ನಿರ್ಜನ ಪ್ರದೇಶ ಅಂತ ಗಾಬರಿಯಲ್ಲಿ ಗಡಬಡಿಸಿ ಹತ್ತಿದ್ದು ತಪ್ಪೋ? ಗಡಿಬಿಡಿಯಲ್ಲಿ ಬ್ಯಾಗು ಮರೆತದ್ದು ತಪ್ಪೋ? ಈ ಸರಿ- ತಪ್ಪುಗಳ ಲೆಕ್ಕಾಚಾರ ಯಾಕೋ ಬೆಂಬಿಡದೇ ಕಾಡುತ್ತಿದೆ ಈಗೀಗ ! ಆ ಲೆಕ್ಕಾಚಾರದಲ್ಲೇ ಹೆಚ್ಚಿನ ವೇಳೆಯೂ ಕಳೆಯುತ್ತಿದೆ!

| ಇನ್ನು ನಾಳೆಗೆ |

‍ಲೇಖಕರು Admin

September 6, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Shrivatsa Desai

    ಈ ಸರಣಿಯಲ್ಲಿ ಆ ಕಾಲಘಟ್ಟದಲ್ಲಿ (ಈಗಲೂ ಸಹ?) ವೈದ್ಯನ ಪ ತ್ನಿಯು ಎದುರಿಸಬೇಕಾದ ಸಮಸ್ಯೆಗಳು ಮಾನಸಿಕ ಒತ್ತಡಗಳು, ಒಬ್ಬ ‘ಹೋಮ್ ಮೇಕರ್’ ನ ತಲ್ಲಣ -ದ್ವಂದಗಳು, ಹತಾಶೆ-ನಿರಾಶೆಗಳನ್ನು ಮನೋಜ್ಞವಾಗಿ ನಮ್ಮ ಮುಂದಿಟ್ಟಿದ್ದಾರೆ. ಸರೋಜಿನಿ ಪಡಸಲಗಿಯವರು. ಸರಳ ದಾರಿ ಕಂಡರೇ ? ಇದೆಯೇ?

    ಪ್ರತಿಕ್ರಿಯೆ
    • Sarojini Padasalgi

      ಧನ್ಯವಾದಗಳು ಶ್ರೀವತ್ಸ ದೇಸಾಯಿಯವರೇ.
      ಸಿಕ್ಕ ದಾರಿಯನ್ನೇ ಸರಳ ಅಂದುಕೊಳ್ಳೋದೇ ಸರಳ ದಾರಿ . ಇಲ್ಲವಾದರೆ ಕಷ್ಟ.ಹಾಗೇ ಅಂದುಕೊಂಡು ಇಲ್ಲಿಗೆ ಬಂದು ತಲುಪಿ, ಮುಂದೆಯೂ ಹಾಗೇ ಸಾಗೋದೇ! ಅಷ್ಟೇ.
      ಧನ್ಯವಾದಗಳು ಅವಧಿ.

      ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: