ಜಯಲಕ್ಷ್ಮಿ ಪಾಟೀಲ್ ಅಂಕಣ- ನನ್ನೊಳಗೊಂದು ಏಕಾಂಗಿತನ ಬೆಳೆಯತೊಡಗಿತು…

ಜಯಲಕ್ಷ್ಮಿ ಪಾಟೀಲ್ ತಮ್ಮ ‘ಮುಕ್ಕು ಚಿಕ್ಕಿಯ ಕಾಳು’ ಕಾದಂಬರಿ ‘ನೀಲ ಕಡಲ ಬಾನು ಮತ್ತು ಹನಿಯೊಡೆಯುತಿದೆ’ ಕವನ ಸಂಕಲನಗಳ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.

ಈಗಿನ ವಿಜಯಪುರ ಆಗಿನ ಬಿಜಾಪುರದಿಂದ ಹೊರಟ ಪ್ರತಿಭೆ ಮುಂಬೈನಲ್ಲಿ ತಮ್ಮ ಪ್ರತಿಭೆಯ ಗುರುತು ಮೂಡಿಸಿ ಈಗ ಬೆಂಗಳೂರಿನಲ್ಲಿ ನೆಲೆಯೂರಿದ್ದಾರೆ.

ಸಾ ದಯಾ ಅವರ ನಾಟಕದ ಮೂಲಕ ರಂಗ ಪ್ರವೇಶಿಸಿದ ಇವರು ಬೆಂಗಳೂರಿನಲ್ಲಿ ಅದರೊಂದಿಗೆ ಕಿರುತೆರೆ ಹಾಗೂ ಸಿನಿಮಾಗಳಿಗೂ ತಮ್ಮ ವಿಸ್ತರಿಸಿಕೊಂಡರು.

ಮುಕ್ತಮುಕ್ತ, ಮೌನ, ಕಿಚ್ಚು, ಮುಗಿಲು, ಬದುಕು, ಬೆಳಕು ಇವರಿಗೆ ಹೆಸರು ತಂದುಕೊಟ್ಟಿತು. ಚಲನಚಿತ್ರ ಸೆನ್ಸಾರ್ ಮಂಡಳಿ, ದೂರದರ್ಶನ ಚಲನಚಿತ್ರ ಪೂರ್ವ ವೀಕ್ಷಣಾ ಮಂಡಳಿ ಸಮಿತಿಗಳ ಸದಸ್ಯರಾಗಿದ್ದರು.

‘ಈ ಹೊತ್ತಿಗೆ’ ಮೂಲಕ ಸಾಕಷ್ಟು ಕೃತಿ ಸಮೀಕ್ಷೆಗಳನ್ನು ನಡೆಸಿದ್ದಾರೆ. ‘ಜನದನಿ’ ಮಹಿಳಾ ಸಬಲೀಕರಣದಲ್ಲಿ ಈಗ ಮೈಲುಗಲ್ಲು. ‘ಹಂಗು, ಗುಂಗು ಎರಡೂ ಮಿತಿಯಲ್ಲಿದ್ದರೆ ಬದುಕು ಚೆನ್ನ’ ಎನ್ನುವುದು ಇವರ ಧ್ಯೇಯವಾಕ್ಯ.

‘ಅವಧಿ’ಗೆ ಸುರಪರಿಚಿತರಾದ ಜಯಲಕ್ಷ್ಮಿ ಪಾಟೀಲ್ ಇಂದಿನಿಂದ ತಮ್ಮ ಬದುಕಿನ ನಿಲುದಾಣಗಳ ಬಗ್ಗೆ ಬರೆಯಲಿದ್ದಾರೆ.

16

ಹಾಗೆ ಪಂದ್ಯಾಟಗಳಿಗೆ ಹೋದಾಗೊಮ್ಮೆ ಅದದೇ ತಾಲ್ಲೂಕು ಮತ್ತು ಊರುಗಳ ವಿದ್ಯಾರ್ಥಿಗಳು ಬರುತ್ತಿದ್ದರಾದ್ದರಿಂದ ಅವರಲ್ಲಿ ಕೆಲವರ ಪರಿಚಯವಾಗಿತ್ತು. ಅದರಲ್ಲಿ ಕುಷ್ಟಗಿಯಲ್ಲಿ ಕಲಿಯುತ್ತಿದ್ದ ಹುಡುಗಿಯೊಬ್ಬಳು. ಅವಳು ನನ್ನಂತೆಯೇ ಇದ್ದಾಳೆ ಎನ್ನುತ್ತಿದ್ದರು ನಮ್ಮಿಬ್ಬರನ್ನೂ ನೋಡಿದ ಎಲ್ಲರೂ. ಅವಳು ನನಗಿಂತ ಕೊಂಚ ಬೆಳ್ಳಗಿದ್ದಳು ಅನ್ನುವುದು ಬಿಟ್ಟರೆ ನಮ್ಮಿಬ್ಬರಲ್ಲಿ ಹೋಲಿಕೆಗಳಿವೆ ಎಂದು ನನಗೂ ಅನಿಸುತ್ತಿತ್ತು.

ಶುರುವಿನಲ್ಲಿ ತಾನು ಶಹರದ ಹುಡುಗಿ (ಕುಷ್ಟಗಿ ತಾಲ್ಲೂಕಾಗಿತ್ತು ಆಗ) ನಾನು ಹಳ್ಳಿ ಗುಗ್ಗು (ದೋಟಿಹಾಳ) ಎನ್ನುವ ಅಸಡ್ಡೆ ಅವಳಲ್ಲಿ ಕಾಣಿಸಿ ನನಗೆ ಬೇಜಾರಾಗಿತ್ತಾದರೂ, ಕೊನೆ ಕೊನೆಗೆ ಅಂದರೆ ನಾವು ಹತ್ತನೇ ತರಗತಿಗೆ ಬರುವಷ್ಟರಲ್ಲಿ ಆ ಅಸಡ್ಡೆ ಅಳಿಸಿ ಅಲ್ಲಿ ಗೆಳೆತನ ನೆಲೆಸಿತ್ತು. ಅದಕ್ಕೆ ಕಾರಣ ನನ್ನ ತಂದೆ ವೈದ್ಯರು ಎನ್ನುವ ಪ್ರಭಾವವಿರಬೇಕು ಎನ್ನುವುದು ನನ್ನ ಬಲವಾದ ಅನಿಸಿಕೆ.

ಆಗ ಪ್ರಪಂಚದಲ್ಲಿ ಒಂದೇ ಹೋಲಿಕೆಯ ಏಳು ಜನ ಇರುತ್ತಾರೆ ಎಂದು ಯಾರೋ ಹೇಳಿದ್ದು ಕೇಳಿ, ಹೋದ ಕಡೆಯಲೆಲ್ಲ ನನ್ನಂತೆ ಇರುವವರು ಯಾರಾದರೂ ಕಾಣಿಸಬಹುದೇ ಎನ್ನುವ ಕುತೂಹಲ. ಎದುರಾದ ಎಲ್ಲ ಮುಖಗಳನ್ನೂ ಗಮನಿಸುತ್ತಿದ್ದೆ! ಕಾಲಾಂತರದಲ್ಲಿ ‘ಪ್ರಪಂಚದಲ್ಲಿ’ ಎನ್ನುವ ಪದ ನೆನಪಾಗಿ, ‘ಅಯ್ಯೋ ಬಿಡು, ಯಾ ದೇಶದಾಗದಾರೋ ಏನೋ ಉಳ್ದೋರು, ನನಗೊಂದು ಹುಚ್ಚು’ ಎಂದುಕೊಂಡು ತೆಪ್ಪಗಾದೆ. ಅವಳ ಹಾಗೇ ಹನುಮಸಾಗರ, ಹನುಮನಾಳದ ಕೆಲವರು ಪರಿಚಯವಾಗಿದ್ದರು.

ಹನುಮನಾಳದಲ್ಲಿ ನಡೆದ ತಾಲ್ಲೂಕು ಮಟ್ಟದ ಪಂದ್ಯಾಟದಲ್ಲಿ, ನಾನು ಡಿಸ್ಕಸ್ ಥ್ರೊ ಸ್ಪರ್ಧೆಯಲ್ಲಿ ಸ್ಪರ್ಧಾಳುವಾಗಿದ್ದಾಗ, ಡಿಸ್ಕಸನ್ನು ಎಸೆಯುವಾಗ, ಎಷ್ಟು ಬಿಲ್ಲಿನಂತೆ ಹಿಂದೆ ಮಣಿದು, ಮುಂದೆ ಬರುತ್ತಾ ಕೈ ಬೀಸಿ ಎಸೆಯುತ್ತೀವೋ ಅಷ್ಟು ಹೆಚ್ಚು ದೂರದವರೆಗೆ ಡಿಸ್ಕಸ್ ಹೋಗಿ ಬೀಳುತ್ತದೆ ಎನ್ನುವ ಹಿಂಟ್ ಕೊಟ್ಟು ಪ್ರೋತ್ಸಾಹಿಸುವ ಮೂಲಕ, ನಾನು ಗೆಲ್ಲಲು ಅದೇ ಊರಿನ ಒಬ್ಬ ಹುಡುಗ ಕಾರಣನಾಗಿದ್ದ. ಅವನು ಅದಾಗಲೇ ಹೈಸ್ಕೂಲು ಮುಗಿಸಿದ್ದರೂ ಶಾಲೆಯಲ್ಲಿದ್ದಾಗ ತುಂಬಾ ಒಳ್ಳೆಯ ಸ್ಪೋರ್ಟ್ಸ್ಮನ್ ಆಗಿದ್ದ ಕಾರಣಕ್ಕೆ ಅಲ್ಲಿನ ಶಾಲೆಯ ಆಟಗಾರರಿಗೆಲ್ಲ ಅವನಿಂದ ಟ್ರೇನಿಂಗ್ ಸಿಗುತ್ತಿತ್ತು ಎನ್ನುವುದು ನಂತರ ತಿಳಿಯಿತು.

ನಮ್ಮ ಕ್ಲಾಸಲ್ಲಿ ಹುಡುಗಿಯರು ನಾವು ಮೂರೇ ಜನ. ನಾನು, ಬಂದಮ್ಮ ಮತ್ತು ಗಾಯತ್ರಿ. ಬಂದಮ್ಮ ಆಟದಲ್ಲಿ ಯಾವಾಗಲೂ ಮುಂದು! ಅವಳಿದ್ದರೇನೇ ನಾವು ಖೊಖೊ ಗೆಲ್ಲಲು ಸಾಧ್ಯ ಎನ್ನುವುದು ಎಲ್ಲರ ನಂಬಿಕೆಯಾಗಿತ್ತು. ಸತತ ಏಳು ನಿಮಿಷ ಅವಳೊಬ್ಬಳೇ ಆಟವನ್ನು ನಿಭಾಯಿಸಿದ್ದು ಅದೆಷ್ಟು ಸಲವೋ! ಪುಟ್ಟ ಆಕಾರದ ಅವಳು ಅದೆಷ್ಟು ಸರಾಗವಾಗಿ ಅತ್ತಿಂದಿತ್ತ, ಕುಳಿತವರ ನಡುವಿನಿಂದ ನುಣಿಚಿಕೊಳ್ಳುತ್ತಿದ್ದಳೆಂದರೆ ಪಂದ್ಯಾಟಕ್ಕೆ ಬೇರೆ ಊರಿಗೆ ಹೋದಾಗ ಅಲ್ಲಿ ಬಂದ ಎಲ್ಲ ತಂಡಗಳೂ ಅವಳ ಆಟವನ್ನು ಬೆರಗಿನಿಂದ ನೋಡುತ್ತಿದ್ದವು.

ಆಟದ ವಿಷಯದಲ್ಲಿ ನಮ್ಮ ಶಾಲೆಯ ಹೆಮ್ಮೆಯಾಗಿದ್ದಳು ಬಂದಮ್ಮ. ಆದರೆ ಆಟ ಅವಳಲ್ಲಿ ಮಿಳಿತವಾದಷ್ಟು ಓದು ಅಷ್ಟಾಗಿ ಅವಳ ತಲೆಗೆ ಹತ್ತಲಿಲ್ಲ. ಏಳನೇ ತರಗತಿಯಲ್ಲಿದ್ದಾಗಲೇ ಅವಳಿಗೆ ಮದುವೆ ಮಾಡಿದ್ದರು! ಹೆಣ್ಣುಮಕ್ಕಳಲ್ಲಿ ನನ್ನ ಕ್ಲಾಸಿನ ಬಂದಮ್ಮ, ಶರಣಮ್ಮ ಕೆಂಗಾಪುರ (ಶರಣಮ್ಮ ಶಾಲೆಯಲ್ಲಿ ನನಗಿಂತ ಒಂದು ವರ್ಷ ಜ್ಯೂನಿಯರ್, ಈಗ ಶ್ರೀಮತಿ. ಶರಣಮ್ಮ ಗೋರೇಬಾಳ್ ಆಗಿ ತನ್ನ ಸಂಶೋಧನಾ ಕೃತಿಗೆ ‘ಅತ್ತಿಮಬ್ಬೆ’ ಪ್ರಶಸ್ತಿ ಗಳಿಸಿದ್ದಾಳೆ). ನಮ್ಮ ಹೈಸ್ಕೂಲಿಗೆ ಕೀರ್ತಿಯನ್ನು ತರುತ್ತಿದ್ದರೆ, ಗಂಡುಮಕ್ಕಳಲ್ಲಿ ನಮ್ಮದೇ ಕ್ಲಾಸಿನ ಹನುಮಗೌಡ.

ಆಟದ ಪಿರಿಯಡ್ ಇದ್ದ ದಿನ ಅಕಸ್ಮಾತ್ ಇವರಿಬ್ಬರು ಅಥವಾ ಇಬ್ಬರಲ್ಲಿ ಒಬ್ಬರು ಬಂದಿರದಿದ್ದರೆ ಅಂದು ಆಟಕ್ಕೆ ಕಳೆಯೇ ಇರುತ್ತಿರಲಿಲ್ಲ ಅಷ್ಟೇ ಅಲ್ಲ, ಪಿ ಇ ಟೀಚರಲ್ಲೂ ನಿರುತ್ಸಾಹ ಕಾಣುತ್ತಿತ್ತು. ಈಗ ಹನುಮಗೌಡ ಪಿಇ ಟೀಚರ್ ಆಗಿ, ಬಂದಮ್ಮ ಯಾವುದೋ ಸಂಸ್ಥೆಯೊಂದರಲ್ಲಿ ವಾರ್ಡನ್ ಆಗಿ ಕೆಲಸ ಮಾಡುತ್ತಿದ್ದಾರಂತೆ. ನಾನು ಬಿಎಸ್ಸಿ ಓದುತ್ತಿರುವಾಗ ಬಂದಮ್ಮನ ಗಂಡ ತೀರಿಕೊಂಡ ಸುದ್ದಿ ಕೇಳಿ ಆಘಾತವಾಗಿತ್ತು.

ಮದುವೆಯಾಗಬೇಕಾದ ವಯಸ್ಸಿಗೆ ಬಂದಮ್ಮ ವಿಧವೆಯಾದಳು ಎನ್ನುವುದು ನನ್ನನ್ನು ತುಂಬಾ ನೋಯಿಸಿತ್ತು. ಇದರಿಂದಾಗಿ ಆಕೆಯ ಮನೆಯ ಜನರ ಮೇಲೆ ನನಗೆ ಅನೇಕ ವರ್ಷಗಳ ಕಾಲ ಸಿಟ್ಟಿತ್ತು. 

ಹೀಗೆ ಒಮ್ಮೆ ಬಹುಶಃ ನಾನು ಎಂಟನೇ ತರಗತಿಯಲ್ಲಿದ್ದೆ ಅನಿಸುತ್ತೆ, ತಾಲ್ಲೂಕು ಮಟ್ಟದ ಪಂದ್ಯಾಟವಿದ್ದು, ಅದಕ್ಕಾಗಿ ನಮ್ಮಲ್ಲಿ ಶಾಲೆ ಬಿಟ್ಟ ನಂತರ ಒಂದು ಗಂಟೆ ಕಾಲ ಖೊಖೊ ಪ್ರ್ಯಾಕ್ಟೀಸ್ ಮಾಡಿಸುತ್ತಿದ್ದರು. ಅಂದು ಶನಿವಾರ. ಅರ್ಧ ದಿನದ ಶಾಲೆ. ಶಾಲೆ ಮುಗಿದ ಮೇಲೆ ಪ್ರ್ಯಾಕ್ಟೀಸ್ ಇತ್ತು. ಈ ಕುರಿತು ಮನೆಯಲ್ಲಿ ಮುಂಚೆಯೇ ತಿಳಿಸಲು ನಮಗೆ ಹೇಳಲಾಗಿದ್ದರೂ ಮನೆಯಲ್ಲಿ ಲೇಟ್ ಆದ್ರೆ ಬೈತಾರೆ ಎನ್ನುವ ಅಳುಕು ನನ್ನ ಸಹಪಾಠಿಗಳಾದ ಬಂದಮ್ಮ ಮತ್ತು ಗಾಯತ್ರಿಯರದು. ನಾನು ನಿರಾಳವಾಗಿದ್ದೆ. ಅಂದು ಆಟ ಮುಗಿದ ಮೇಲೆ ಅದೆಷ್ಟು ಬಾಯಾರಿತ್ತೆಂದರೆ ಮನೆ ತಲುಪಿ ನೀರು ಕುಡಿಯುವಷ್ಟೂ ಸಹನೆ ಇರಲಿಲ್ಲ ನನ್ನಲ್ಲಿ.

ನಮ್ಮನೆಗೆ ಹೋಗುವ ದಾರಿಯಲ್ಲಿ ಮುನಿಯಪ್ಪಣ್ಣನ ‘ಚಾದ ಅಂಗಡಿ’ ಎಂದೆನಿಸಿಕೊಳ್ಳುವ ಹೊಟೆಲ್ ಇತ್ತು. ಮುನಿಯಪ್ಪಣ್ಣನಿಗೆ ನನ್ನ ತಂದೆಯನ್ನು ಕಂಡರೆ ಅಪಾರ ಗೌರವ. ನನ್ನ ತಂದೆ ತಾಯಿಯನ್ನು, ಅಪ್ಪಾಜಿ ಅಮ್ಮಾ ಅಂತಲೇ ಕರೆಯುತ್ತಿದ್ದ. ಹೀಗಾಗಿ ನಮಗೆಲ್ಲ ಆತ ಅಣ್ಣನಂತೆ. ಮುನಿಯಪ್ಪಣ್ಣನ ಹೊಟೆಲ್ಲು ದಾರಿಯಲ್ಲಿತ್ತು ಎಂದೆನಲ್ಲ, ಅಲ್ಲಿ ನಿಂತು ನೀರು ಕೇಳಿ ಕುಡಿದೆ. ಆಗ ಅವರಲ್ಲಿ ಜರ್ಮನ್ ಸಿಲ್ವರ್ ಎನಿಸಿಕೊಳ್ಳುತ್ತಿದ್ದ ಹಿಡಾಲಿಯಂ ವಾಟಗಾ(ವಾಟೆ/ಲೋಟ)ಗಳಿದ್ದವು. ಅವುಗಳಲ್ಲಿ ನೀರು ಕುಡಿಯುವುದು ನನಗಿಷ್ಟವಿಲ್ಲದ ಮಾತಾಗಿದ್ದರೂ ಬಾಯಾರಿಕೆ ಇಷ್ಟಾನಿಷ್ಟಗಳನ್ನು ಕಡೆಗಣಿಸುವಂತೆ ಮಾಡಿತ್ತು ಅಂದು. ನೀರು ಕುಡಿದ ಮೇಲೆ ಆರಾಮಾಗಿ ನಡೆಯುತ್ತ ಮನೆ ತಲುಪಿದೆ.

ನಾನು ಮನೆ ತಲುಪುವ ಮೊದಲೇ ಹೊಟಲ್ಲಿನಲ್ಲಿ ನಾನು ನೀರು ಕುಡಿದ ವಿಷಯ ತಲುಪಿತ್ತು! ಅಪ್ಪಾ ತುಂಬಾ ಸಿಟ್ಟಿಗೆದ್ದಿದ್ದರು. ‘ಊರಾಗ ನಮ್ಮ ಮಾನ ಕಳೀಬೇಕು ಅನಕೊಂಡಿ? ಮನಿ ಮುಟ್ಟು ಮಟ ತಡಕೊಂಡಿದ್ದ್ರ ಸಾಯ್ತಿದ್ದೆನು?! ಮುನಿಯಪ್ಪನ ಹೊಟೆಲ್ನ್ಯಾಗ ಯಾಕ ನೀರು ಕುಡದಿ? ನೋಡಿದ ಮಂದಿ ಏನ್ ಅನಕೊಂಡಾರು!’ ಮತ್ತೊಮ್ಮೆ ಒಡಗಟಿಗೆಯ ರುಚಿ ಕಂಡಿದ್ದೆ ಅವತ್ತು. ಅಪ್ಪಾ ಇಷ್ಟೆಲ್ಲ ಬಯ್ದು ಹೊಡೆದಾಗಲೂ ನಾನೇನು ತಪ್ಪು ಮಾಡಿದೆ ಎನ್ನುವುದು ತಿಳಿದಿರಲೇಯಿಲ್ಲ ನನಗೆ… ಇದು ಆಗ ಹಳ್ಳಿಗಳಲ್ಲಿ ಹೆಣ್ಣುಮಕ್ಕಳು ಮಾಡಬಾರದವುಗಳಲ್ಲಿ ಒಂದಾಗಿತ್ತು.

ಹಾಗೇ, ‘ನೋಡ್ದೋರು ಏನ್ ಅನಕೊಂಡಾರು!’ ಎನ್ನುವ ಹಿನ್ನೆಲೆಯಲ್ಲಿಯೇ ನಾನು ಮತ್ತೊಮ್ಮೆ ಒದೆ ತಿಂದಿದ್ದು, ಅವರಮ್ಮ ಕಳಿಸಿದ ಏನನ್ನೋ ನಮ್ಮಮ್ಮನಿಗೆ ಕೊಡಲು ಮನೆಗೆ ಬಂದಿದ್ದ ನನ್ನ ಸಹಪಾಠಿಯೊಂದಿಗೆ ಬಹಳಷ್ಟು ಹೊತ್ತು ಮಾತಾಡುತ್ತಾ ಕುಳಿತೆ ಅನ್ನುವ ಕಾರಣಕ್ಕಾಗಿ. ಆಗಲೂ ನನ್ನದೇನು ತಪ್ಪಿಲ್ಲ ಎಂದೇ ಅನಿಸಿತ್ತು. ಇಬ್ಬರ ಮನಸ್ಸಲ್ಲೂ ಕಲ್ಮಶವಾಗಲಿ, ಹದಿಹರೆಯದ ಪ್ರೀತಿ ಪ್ರೇಮದಂಥ ಭಾವವಾಗಲಿ ಇದ್ದಿರಲೇಯಿಲ್ಲ. ಆದರೆ ಆಗಷ್ಟೇ ಹರೆಯಕ್ಕೆ ಕಾಲಿಡುತ್ತಿರುವ ಮಕ್ಕಳ ಮಾತುಕತೆ ಕಂಡು, ಮನೆಯ ಹಿರಿಯರಿಗೆ ಯಾವುದೋ ಅರಿಯದ ಆತಂಕ ಕಾಡಿರಲು ಸಾಕು. ಅದೀಗ ಅರ್ಥವಾಗುತ್ತೆ, ಆಗ ಮಾತ್ರ, ‘ನಾನು ಯಾವ ತಪ್ಪು ಮಾಡದೇಯೂ ಪದೇ ಪದೇ ನನಗೇ ಯಾಕೆ ಈ ಶಿಕ್ಷೆ?’ ಎನ್ನುವ ಕೊರಗಿನಿಂದಾಗಿ ನನ್ನೊಳಗೊಂದು ಏಕಾಂಗಿತನ ಬೆಳೆಯತೊಡಗಿತು.

ಈ ಜಗತ್ತು ನನ್ನದಲ್ಲ ಅನ್ನಿಸತೊಡಗಿತು. ಅಂಥಾ ಹೊತ್ತಲ್ಲೇ ಶಾಲೆಯ ಗೋಡೆಯ ಮೆಲೆ ಯಾರೋ ಕಿಡಿಗೇಡಿಗಳು, ಇಬ್ಬರು ಹುಡುಗರ ಹೆಸರಿನ ನಡುವೆ ನನ್ನ ಹೆಸರನ್ನು ದೊಡ್ಡದಾಗಿ ಇದ್ದಿಲಿನಿಂದ ಬರೆದುಬಿಟ್ಟಿದ್ದರು! ಹೆಸರುಗಳ ಹೊರತಾಗಿ ಅಲ್ಲಿ ಬೇರೆನಿರಲಿಲ್ಲವಾದರೂ ಅಷ್ಟು ಸಾಕಿತ್ತು ಜನರ ಮನಸ್ಸಲ್ಲಿ ಏನೇನೋ ಊಹಾಪೋಹಗಳು ಹುಟ್ಟುವುದಕ್ಕೆ.

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

September 6, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: