ಜೀವನ ಪಾಠಕ್ಕೆ ಹಲವು ಅಮೋಘ ಗುರುಗಳು…

ಡಾ ಪ್ರೇಮಲತ ಬಿ

ನಮ್ಮ ತಪ್ಪುಗಳನ್ನು ಗ್ರಹಿಸಿಯೂ ಗಮನಿಸದಂತೆಯೇ ಇದ್ದು ನಾವು ಬದಲಾಗುವಂತಹ ಪರಿಪಾಟಗಳನ್ನು ಕಲಿಸುವ ಈ ಕೆಲವು ಶಿಕ್ಷಕರು ಬಹಳ ಸೂಕ್ಷ್ಮಮತಿಗಳು.

ಆ ವರ್ಷದ ವಾಲಿಬಾಲ್ ಮ್ಯಾಚ್ ಮುಗಿದಿತ್ತು. ಸೆಣಸಿದ ಎರಡೂ ತಂಡಗಳು ವಿಜಯಿಗಳಾಗಲು ಹೋರಾಡಿ, ಹೈರಾಣಾಗಿದ್ದರು. ಬಂದಿದ್ದ ವಿಶೇಷ ಅತಿಥಿಗಳು ನಮ್ಮ ಸ್ಪರ್ಧೆಗೆ ಸಮಾನ ಬೆಂಬಲ ನೀಡಿ ಎರಡೂ ತಂಡಗಳಿಗೆ ಸೈ ಎನ್ನುವಂತೆ ಪ್ರೋತ್ಸಾಹ ನೀಡಿದ್ದರು. ಅವತ್ತು ಮಾಧ್ಯಮಿಕ ಶಾಲೆಯ ಕ್ರೀಡಾದಿನ. ಗಟ್ಟಿಮುಟ್ಟಾಗಿದ್ದ, ಹುರಿಯಾಳುಗಳಾದ ಈ ವಿಶೇಷ ಅತಿಥಿಗಳು ಸ್ವತಃ ಕ್ರೀಡಾಪಟುಗಳಾಗಿದ್ದುದು ಎಲ್ಲರಿಗೂ ವೇದ್ಯವಾಗಿತ್ತು. ಆಗ ತಾನೇ ಮಣ್ಣಿನ ನೆಲದಲ್ಲಿ ಆಡಿದ್ದ ನಮ್ಮ ಮೈಕೈಗಳೆಲ್ಲ ಧೂಳಾಗಿದ್ದವು.

ಅದಿರಲಿ, ಪ್ರತಿ ಶುಕ್ರವಾರ ಶಾಲೆಯ ತಂಡಗಳ ನಡುವೆ ಆಭ್ಯಾಸದ ಮ್ಯಾಚು ನಡೆದು ವಿಜಯೀ ತಂಡ ಆ ವಾರಾಂತ್ಯಕ್ಕೆ ಬಾಲು ಮತ್ತು ನೆಟ್ಟನ್ನು ಮನೆಗೆ ತಂಗೊಂಡು ಹೋಗುವ ರೂಢಿಯಿತ್ತು. ಸರದಿ ನಮ್ಮದಾದ ದಿನಗಳಲ್ಲಿ ಮನೆಯ ಮುಂದಿನ ರಸ್ತೆಗಳಲ್ಲಿ ಅವತ್ತಿನ ಸಂಜೆ ಮತ್ತು ವಾರಾಂತ್ಯವೆಲ್ಲ ಹಲವು ಸ್ನೇಹಿತರು ಸೇರಿ ವಾಲಿಬಾಲು ಆಡುತ್ತಿದ್ದೆವು. ವಾಲಿಬಾಲು ರಸ್ತೆಯ ಅಕ್ಕ ಪಕ್ಕದ ಚರಂಡಿಗಳಲ್ಲಿ, ಸೆಗಣಿ, ಹೊಲಸುಗಳಲ್ಲಿ ಧಾರಾಳವಾಗಿ ಬೀಳುತ್ತಿತ್ತು, ಅದನ್ನು ನೀರಲ್ಲಿ ತೊಳೆದು ಒಣಗುವ ಮುನ್ನವೇ ನಮ್ಮ ಆಟ ಮತ್ತೆ ಮುಂದುವರೆಯುತ್ತಿತ್ತು. ಇಂತಹ ಬಾಲೇ ನಮ್ಮ ಅವತ್ತಿನ ಆಟದಲ್ಲೂ ಬಳಕೆಯಾಗಿತ್ತು.

ಆಟ ಮುಗಿದ ನಂತರ ಅವತ್ತು ದಣಿದ ಕ್ರೀಡಾಪಟುಗಳಿಗೆ ಶಾಲೆಯ ವತಿಯಿಂದ ಬಿಸ್ಕತ್ತುಗಳನ್ನು ಹಂಚುವ ಕೆಲಸ ನನ್ನ ಪಾಲಿಗೆ ಬಂತು. ತಂಡವೊಂದಕ್ಕೆ ಲೀಡರಳಾಗಿದ್ದ ಹನ್ನೊಂದು–ಹನ್ನೆರಡು ವರ್ಷದ ನನಗೆ ಎಲ್ಲರಿಗೂ ಬಿಸ್ಕತ್ತು ಹಂಚುವ ಗೌರವ ಸಿಕ್ಕಿದ್ದಕ್ಕೆ ಕೋಡು ಹುಟ್ಟಿತ್ತು. ರಪ್ಪನೆ ಪೊಟ್ಟಣ ಹರಿದು ಅದೇ ವಾಲಿಬಾಲಿನಲ್ಲಿ ಆಡಿದ್ದ ನನ್ನ ಗಲೀಜು ಕೈಯನ್ನು ತುರುಕಿ ಎರಡೆರಡು ಬಿಸ್ಕತ್ತುಗಳನ್ನು ಹೊರತೆಗೆದು ಎಲ್ಲರಿಗೂ ನೀಡುತ್ತ ಹೋದೆ. ಬಂದಿದ್ದ ವಿಶೇಷ ಅತಿಥಿಗಳು ಮಕ್ಕಳು ಮತ್ತು ಮಾಸ್ತರರ ಜೊತೆ ಸರದಿಯಲ್ಲಿ ನಿಂತಿದ್ದರು. ಅವರ ಸರದಿ ಬಂದಾಗ ನನ್ನ ಕೈಯಿಂದ ಪೊಟ್ಟಣವನ್ನು ಅಚಾನಕ್ಕು ಎತ್ತಿಕೊಂಡು ನೀನೂ ತಗೋ ಎನ್ನುವಂತೆ ನನ್ನೆಡೆಗೆ ಹಿಡಿದರು. ಅರೆಕ್ಷಣ ಅವಾಕ್ಕಾದ ನನಗೆ, ನನ್ನ ತಪ್ಪಿನ ಅರಿವಾಗಿ ಹೋಯ್ತು! ಅವರು ಮಾತಿನಲ್ಲಿ ಏನೂ ಹೇಳಿರಲಿಲ್ಲ. ಮುಖದಲ್ಲಿ ಮಾತ್ರ ಕಿರುನಗೆಯಿತ್ತು. ಪೆಚ್ಚಾದ ನಾನು ಎರಡು ಬಿಸ್ಕತ್ತು ತಗೊಂಡು, ಪೊಟ್ಟಣವನ್ನೂ ಮರಳಿ ಪಡೆದು, ಅವರೆಡೆ ಅದನ್ನು ಚಾಚಿದೆ. ಯಾವ ಎಗ್ಗಿಲ್ಲದೆ ತಾವೂ ಎರಡು ಬಿಸ್ಕತ್ತು ತಗೊಂಡು ನಗುತ್ತ ಏನೂ ಆಗಿಲ್ಲವೇನೋ ಎನ್ನುವಂತೆ ಅವರು ಮಾಸ್ತರುಗಳ ಜೊತೆ ಮಾತು ಮುಂದುವರೆಸಿದರು. ಅವರ ಹೆಸರು ನನಗೆ ನೆನಪಿಲ್ಲ. ಆದರೆ ಅವತ್ತು ಅವರು ನೀಡಿದ ಪಾಟ ಪಾತ್ರ ಚೆನ್ನಾಗಿ ನೆನಪಿನಲ್ಲುಳಿದಿದೆ.

ಅಂದಿನಿಂದ ಇದುವರೆಗೆ ಶಿಷ್ಟಾಚಾರದ ಹಲವು ಪಾಠಗಳನ್ನು ಕಲಿತಿದ್ದೇನೆ. ಆದರೆ ಅರೆಕ್ಷಣದಲ್ಲಿ ಯಾರಿಗೂ ತಿಳಿಯದ ಹಾಗೆ ಈ ಅತಿಥಿಗಳು ನನಗೆ ಪಾಠ ಕಲಿಸಿದ ಪರಿ ಮಾತ್ರ ಇವತ್ತಿಗೂ ಅವರನ್ನು ನನ್ನ ಬದುಕಿನಲ್ಲಿ ಬಂದುಹೋದ ವಿಶೇಷ ವ್ಯಕ್ತಿಗಳನ್ನಾಗಿ ಮಾಡಿದೆ. ಗಲೀಜು ಕೈಯನ್ನು ಉಪಯೋಗಿಸದೆ ಪೊಟ್ಟಣವನ್ನು ಮುಂದೆ ಚಾಚಿ ಆಯಾ ಮಂದಿಯೇ ತಮ್ಮ ಕೈಗಳಿಂದ ಬಿಸ್ಕತ್ತುಗಳನ್ನು ತೆಗೆದುಕೊಳ್ಳುವಂತೆ ಮಾಡುವುದು ಉತ್ತಮ ಎಂದು ಅವತ್ತು ಕಲಿತೆ. ಅದರ ಜೊತೆ ನಿಯಂತ್ರಣ ಮಾಡಿ ಎರಡೆರಡೇ ಬಿಸ್ಕತ್ತು ಕೊಡುವ ಬದಲು ಅವರಾಗಿ ಎಷ್ಟು ಬೇಕೋ ಅಷ್ಟನ್ನು ತೆಗೆದುಕೊಳ್ಳುವ ಹಕ್ಕನ್ನು ಬೇರೆಯವರಿಗೆ ನೀಡುವುದು ಗೌರವಾರ್ಹ ನಡವಳಿಕೆ ಎಂದು ಕೂಡ ತಿಳಿಯಿತು. ಅವತ್ತು ಏನು ನಡೆಯಿತು ಅನ್ನುವುದು ಯಾರಿಗೂ ತಿಳಿಯದಂತೆ ಸಣ್ಣ ಸಮಯದಲ್ಲಿ ಅವರು ನೀಡಿದ ಅರೆಕ್ಷಣದ ಶಿಷ್ಟಾಚಾರದ ಶಿಕ್ಷಣ ಬದುಕಿನುದ್ದಕ್ಕೂ ಬಂದಿದೆ.

ಜೀವನದಲ್ಲಿ ಬುದ್ಧಿ ಹೇಳಿಕೊಟ್ಟ ಶಿಕ್ಷಕರು ಹಲವರಿದ್ದಾರೆ. ಆದರೆ ಇಂತಹ ಸೂಕ್ಷ್ಮಗ್ರಾಹಿ ಶಿಕ್ಷಕರು ಬಹಳ ಕಡಿಮೆ. ಇದ್ದರೂ ಅವರ ಈ ಬಗೆಯ ವಿಶಿಷ್ಟ ಭೋದನೆಯನ್ನು ಗ್ರಹಿಸುವ ವಿದ್ಯಾರ್ಥಿಗಳು ಕೂಡ ಕಡಿಮೆ ಇರಬಹುದು. ನಮ್ಮ ತಪ್ಪುಗಳನ್ನು ಗ್ರಹಿಸಿಯೂ ಗಮನಿಸದಂತೆಯೇ ಇದ್ದು ನಾವು ಬದಲಾಗುವಂತಹ ಪರಿಪಾಟಗಳನ್ನು ಕಲಿಸುವ ಈ ಕೆಲವರು ಬಹಳ  ಸೂಕ್ಷ್ಮಮತಿಗಳು.

ನನ್ನದು ಗಡಸು ದ್ವನಿ. ಫೋನಿನಲ್ಲಿ ಮೊದಲ ಬಾರಿಗೆ ನನ್ನ ಮಾತನ್ನು ಅತ್ತಕಡೆಯಿಂದ ಕೇಳುವವರು ‘ನಮಸ್ಕಾರ ಸರ್…’ ಅಂತಲೇ ಶುರುಮಾಡಿಕೊಳ್ಳುವುದು! ಹೈಸ್ಕೂಲಿನಲ್ಲಿ ಕರ್ನಾಟಕದಿಂದ ಹೈದರಾಬಾದಿಗೆ ಒಮ್ಮೆ ಚರ್ಚಾಸ್ಪರ್ಧೆಗೆ ಹೋದ ಸಂದರ್ಭ. ದಾರಿಯಲ್ಲಿ ಜೊತೆಯಾದ ಒಬ್ಬರು ನನ್ನೆಡೆ ಬೊಟ್ಟು ಮಾಡಿ ‘ಇವರೊಂಥರಾ ಲೇಡಿ ಶಂಕರ್ ನಾಗ್ ಥರಾ ಮಾತಾಡ್ತಾರಲ್ವಾ’ ಎಂದು ಹೇಳಿದ್ದೂ ಇದೆ! ಕಾಲೇಜಿನ ದಿನಗಳಲ್ಲಿ ಬೆಂಗಳೂರಿನ ರೇಡಿಯೋದಲ್ಲಿ ನಾ. ಸೋಮೇಶ್ವರರ ಜೊತೆ ಮುದ್ದಣ-ಮನೋರಮೆಯರ ಸರಸ ಸಲ್ಲಾಪದ ಒಂದು ಪ್ರಸಂಗದ ರೆಕಾರ್ಡಿಂಗ್ ಗೆ ಅಂತ ಹೋದಾಗ ಮನೋರಮೆ ಎನ್ನುವ ಹೆಣ್ಣು ಪಾತ್ರದ ಎಲ್ಲ ಲಾಲಿತ್ಯಗಳನ್ನು ಬಿಟ್ಟ ನನ್ನ ದ್ವನಿ ಹತ್ತು ವರ್ಷದ ಬಾಲಕನ ರೀತಿ ಕೇಳಿಸಿದ್ದೂ ನೆನಪಿದೆ. ‘ನಿನ್ನ ದ್ವನಿಗೆ ಪಾಶ್ಚಾತ್ಯ ಸಂಗೀತ ತುಂಬ ಚೆನ್ನಾಗಿ ಹೊಂದುತ್ತೆ’ ಎಂದವರೂ ಇದ್ದಾರೆ. ಇದೆಲ್ಲ ಅಂಬೋಣ ಮತ್ತು ಅರಿವಿನೊಂದಿಗೆ ಮುಂದೊಮ್ಮೆ ಪಾಶ್ಚಾತ್ಯ ಶೈಲಿಯ ಸಂಗೀತ ಕಲಿಯುವ ಕುತೂಹಲದಿಂದ ಬಿಟಿಎಸ್ ಬಸ್ ಹತ್ತಿ ಕಾಕ್ಸ್ ಟೌನಿನ ಬೆಂಗಳೂರು ಮ್ಯೂಸಿಕ್ ಶಾಲೆಗೆ ಸೇರಿದ್ದ ದಿನಗಳವು.

ಅಂದುಕೊಂಡಂತೆಯೇ ಭಾರತೀಯ ಸಂಗೀತಕ್ಕೆ ಒದಗದ ನನ್ನ ಧ್ವನಿ ಶಾಸ್ತ್ರೀಯ ಪಾಶ್ಚಾತ್ಯ ಸಂಗೀತದ ‘ಟೆನರ್’ ಗುಂಪಿಗೆ ಸುಲಭವಾಗಿ ಸೇರಿಹೋಗುತ್ತಿತ್ತು.

ಹೊರಗಿನಿಂದ ಸಾಧಾರಣವಾಗಿ ಕಂಡರೂ ಇದು ವಿದೇಶೀ ಶೈಲಿಯ ಶಾಲೆಯಾಗಿತ್ತು. ಬಹುತೇಕರು ಭಾರತೀಯ ವಿದ್ಯಾರ್ಥಿಗಳಾಗಿದ್ದರೂ ಅವರದೇ ವಿಶಿಷ್ಟ ಪಾಶ್ಚಾತ್ಯ ಬಗೆಯ ಬದುಕನ್ನು ನಡೆಸುತ್ತಿದ್ದವರು. ಶಿಕ್ಷಕರು ಕೂಡ. ಇಲ್ಲಿ ಕೂಡ ನನಗೆ ಅಂಥದೇ ಒಬ್ಬ ವಿಶಿಷ್ಟ ಗುರುಗಳು ಸಿಕ್ಕರು. ಮೊದಲಿಗೆ ಇವರಿಗೆ ನಾನು ಬೇರೊಂದು ವರ್ಗದ ವಿದ್ಯಾರ್ಥಿನಿ ಎಂಬ ಮನವರಿಕೆಯಿತ್ತು. ಬಹುಶಃ ಅದನ್ನು ಗ್ರಹಿಸುವುದು ಸುಲಭಸಾಧ್ಯವಾಗಿತ್ತು. ಒಬ್ಬ ವಿದ್ಯಾರ್ಥಿಗೆ ಒಂದು ಗಂಟೆಯ ಕಾಲ ಪಾಠ ನಡೆಸುತ್ತಿದ್ದ ಕಾರಣ ಆಯಾ ವಿದ್ಯಾರ್ಥಿಗೆ ತಕ್ಕಂತೆ ಪಾಠ ಮಾಡಲಾಗುತ್ತಿತ್ತು.

ಈ ಗುರುಗಳು ನನಗಾಗಿ ಅಳವಡಿಸಿಕೊಂಡ ತಂತ್ರಗಳು ಹಲವು. ಪಿಯಾನೋ ಬಾರಿಸಿಕೊಂಡು ಅವರು ಹೇಳಿಕೊಡುವ ಹಾಡುಗಳಿಗೆಲ್ಲ ನನಗೆ ಅರ್ಥವಾಗುವಂತೆ ಹಲವು ವ್ಯಾಖ್ಯಾನಗಳನ್ನು ಕೊಡುತ್ತಿದ್ದರು. ಉದಾಹರಣೆಗೆ ಕ್ರೈಸ್ತ ಧರ್ಮದವರಾದ ಅವರು ಜೀಸಸ್ ನ ಹಾಡು ಹೇಳಿಕೊಡುವಾಗ ದಾಸರ ಪದಗಳ ಉದಾಹರಣೆ ನೀಡುತ್ತಿದ್ದರು. ಭಾವುಕತೆ ಇರದಿದ್ದಲ್ಲಿ ಇಡೀ ಕೋಣೆಯಲ್ಲಿ ಮೋಂಬತ್ತಿಗಳನ್ನು ಹಚ್ಚಿಟ್ಟು ಅದಕ್ಕಾಗಿ ವಿಷೇಶ ವಾತಾವರಣ ಕಲ್ಪಿಸುತ್ತಿದ್ದರು.

ಸಮುದಾಯ ಕಲಿಕೆ ಮತ್ತು ಪ್ರದರ್ಶನಗಳಲ್ಲಿ ನಾನೊಬ್ಬಳು ಭಿನ್ನ ಸಂಸ್ಕ್ರುತಿಯವಳಾಗಿ ಹೊರಬೀಳದಂತೆ ಕಾಳಜಿವಹಿಸುತ್ತಿದ್ದರು. ಆರ್ಥಿಕವಾಗಿ ಅಷ್ಟೇನು ದುಡಿಮೆಯಿಲ್ಲದಿದ್ದರೂ ಬೆಳಿಗ್ಗೆ ಛಾಯಾಗ್ರಾಹಕರಾಗಿ ಸಂಜೆ ಸಂಗೀತಕಾರರಾಗಿ ಕಲೆಗಾಗಿ ಅವರು ತೋರುತ್ತಿದ್ದ ಸಂವೇದನೆಗಳು ಅಮೋಘವಾದವಾಗಿದ್ದವು. ಬಹುಶಃ ಪ್ರತಿ ವಿದ್ಯಾರ್ಥಿಗೂ ಅವರ ಕಾಳಜಿ ಅಂಥದ್ದೇ ಇತ್ತು ಎನ್ನುವುದರಲ್ಲಿ ನನಗೆ ಸಂದೇಹವಿಲ್ಲ. ಇದೇ ಶಾಲೆಯಲ್ಲಿ ಪೋಲೀಸು ಸಬ್ ಇನ್ಸ್ಪೆಕ್ಟರ್ ಹುದ್ದೆಗೆ ಮತ್ತೊಬ್ಬ ಗುರುಗಳೂ ಇದ್ದರು.

ಇವರೆಲ್ಲ ಬೋಧನೆಯ ಪರಿಮಿತಿಯನ್ನು ಮೀರಿ ಇಡೀ ಜೀವನದ ಬಗ್ಗೆ ತಿಳಿಸಿಕೊಟ್ಟಿದ್ದು ಬಹಳಷ್ಟಿದೆ. ಪ್ರತಿ ದಿನ ಹಲವು ಹತ್ತು ಜನರೊಂದಿಗೆ ಒಡನಾಡುತ್ತೇವೆ. ನೂರಾರು, ಸಾವಿರಾರು ಮಂದಿ ಬದುಕಿನಲ್ಲಿ ಬಂದು ಹೋಗುತ್ತಾರೆ. ಆದರೆ ಕೆಲವು ವ್ಯಕ್ತಿಗಳು ಮಾತ್ರ ನಮ್ಮಲ್ಲಿ ಮರೆಯದ ಛಾಪನ್ನು ಮೂಡಿಸಿಬಿಡುತ್ತಾರೆ. ಹೊಗಳದೆ, ತೆಗಳದೆ, ಕೊಂಕಾಡದೆ, ಶಿಕ್ಷಿಸದೆ, ಬೇಸರಿಸಿಕೊಳ್ಳದೆ, ಪಕ್ಷಪಾತಮಾಡದೆ, ಜಾತೀಯತೆ, ಧರ್ಮಗಳನ್ನು, ಅಂತಸ್ತುಗಳನ್ನು ಎಣಿಸದೆ ಇಂತಹ ವ್ಯಕ್ತಿಗಳು ಎಲ್ಲಕ್ಕೂ ಅತೀತವಾದ ವ್ಯಕ್ತಿತ್ವದವರಾಗಿ ಅತ್ಯಂತ ಸರಳವಾಗಿ, ಶ್ರದ್ದೆಯಿಂದ ನಮಗೆ ಹಲವು ವಿಶೇಷ ಮಾದರಿಗಳನ್ನು ಸೃಷ್ಟಿಸಿ ಹೋಗುತ್ತಾರೆ.

ನಾವು ಯಾವುದೋ ಕೆಲವು ನಿಮಿಷಗಳಲ್ಲಿ ಅಥವಾ ಕೆಲವು ಕಾಲ ಮಾತ್ರ ಇವರೊಡನೆ ಒಡನಾಡಿದರೂ ಜೀವನ ಪೂರ್ತಿ ಇವರು ನಮ್ಮ ನೆನಪಿನಲ್ಲಿ ಸವಿಯನ್ನು ಬಿತ್ತಬಲ್ಲ ವಿಷೇಶ ವ್ಯಕ್ತಿತ್ವದವರಾಗಿರುತ್ತಾರೆ.

ದಶಕಕ್ಕೂ ಹಿಂದೆ ಸ್ಕಾಟ್ ಲ್ಯಾಂಡಿನಲ್ಲಿ ಮೊದಲ ಬಾರಿಗೆ ಕೆಲಸ ಶುರುಮಾಡಿದ್ದೆ. ಪರದೇಶದ ಆಸ್ಪತ್ರೆಗಳ ಮೊದಲ ಅನುಭವ. ಇದಕ್ಕೂ ಮೊದಲು 6 ತಿಂಗಳ ಕಾಲ ಯಾವುದೇ ಪಗಾರವಿಲ್ಲದೆ ಅನುಭವಕ್ಕಾಗಿ ಇದೇ ಆಸ್ಪತ್ರೆಯಲ್ಲಿ ಎಲ್ಲರ ಹಿಂದೆ ಮುಂದೆ ಓಡಾಡಿಕೊಂಡು ಕೆಲಸ ಕಲಿತಿದ್ದೆ. ನನ್ನ ಈ ಹೊಸ ಕೆಲಸ ನಮಗೆ ಸಂಬಂಧಪಟ್ಟ ಪರಿಣತಿಯಲ್ಲಿ ಅತಿ ಕೆಳವರ್ಗದ್ದಾಗಿತ್ತು. ಸೀನಿಯರ್ ಹೌಸ್ ಆಫೀಸರ್ ಎಂಬ ಹೆಸರಾದರೂ ನಾವುಗಳೇ ಜೂನಿಯರ್ ಗಳು! ಇಂಥವರು ಇಬ್ಬರಿದ್ದೆವು. ನಡುವೆ ಸಾಮಾನ್ಯವಾಗಿ ಇರಬೇಕಿದ್ದ ರಿಜಿಸ್ಟ್ರಾರ್ ಹುದ್ದೆ ಇರಲಿಲ್ಲ. ಹಾಗಾಗಿ ನಮ್ಮ ಮೇಲಕ್ಕೆ ಉನ್ನತ ಹುದ್ದೆಯ ಕನ್ಸಲ್ಟಂಟ್ ಗಳು ಮಾತ್ರ ಇದ್ದರು. ಇವರುಗಳೇ ನಮಗೆ ಕೆಲಸ ಕಲಿಸುತ್ತಿದ್ದ ಮತ್ತು ನಮ್ಮಿಂದ ಕೆಲಸ ತೆಗೆಯುತ್ತಿದ್ದ ಗುರುಗಳು.

ಇವರಲ್ಲಿ ಅತ್ಯಂತ ಸೀನಿಯರ್ ವ್ಯಕ್ತಿಯಾಗಿದ್ದ ಜೋಸೆಫ್ ಮ್ಯಾಕ್ ಮ್ಯಾನರ್ಸ್ ಎಂಬ ಸಣಕಲು ದೇಹದ ಆರಡಿ ನಾಲ್ಕಿಂಚು ಎತ್ತರದ 56 ವರ್ಷ ವಯಸ್ಸಿನ ವ್ಯಕ್ತಿಯ ಬಗ್ಗೆ ಹೇಳಲೇಬೇಕು. ಆತನ ಹುದ್ದೆಗೆ ಆತನದು ಹೊಂದದ ಅಲಂಕಾರ. ಯಾವುದೋ ಬಟ್ಟೆ, ತೂತಾಗಿರುವ ಕಾಲುಚೀಲ, ಆಗಾಗ ಕೆಟ್ಟು ನಿಲ್ಲುತ್ತಿದ್ದ ಹಳೆಯ ಕಾರನ್ನು ಹೊಂದಿದ್ದ ಆ ವ್ಯಕ್ತಿ ಆಸ್ಪತ್ರೆಗೆ ಬೆಳಿಗ್ಗೆಯೇ ಬಂದು ಕಾರನ್ನು ನಿಲ್ಲಿಸಿ ರೋಗಿಗಳನ್ನು ಎಲ್ಲರಿಗಿನ್ನ ಮೊದಲು ನೋಡುತ್ತಿದ್ದ. ನಂತರ ಹತ್ತು ಕಿ.ಮೀ. ದೂರ ಓಡಿ ವ್ಯಾಯಾಮ ಮಾಡಿ ಬಂದು ನಮ್ಮೆಲ್ಲರೊಡನೆ ಆಸ್ಪತ್ರೆಯ ರೌಂಡಿಗೆ ಅದೇ ಚಡ್ಡಿಯಲ್ಲಿ ಆರಾಮಾಗಿ ಬರುತ್ತಿದ್ದ.

ಆತನ ಕೋಣೆಗೆ ಕಾಲಿಡಲು ಜನರು ಹೆದರುತ್ತಿದ್ದರು. ಕಾರಣ ಆತನಲ್ಲ. ಆತನ ಕೋಣೆಯ ಅಲಂಕಾರ. ಎಡ್ಡಾದಿಡ್ಡಿ ಎಸೆದುಕೊಂಡಿರುತ್ತಿದ್ದ ಪುಸ್ತಕಗಳು, ಬಟ್ಟೆಗಳು, ಬ್ರೇಕ್ ಫಾಸ್ಟ್ ಬಾರ್ ಗಳು ಇವುಗಳ ಮಧ್ಯೆ ಎಲ್ಲಿ ಹೆಜ್ಜೆ ಇಟ್ಟು ಒಳಹೋಗುವುದು ಎಂದು ಎಲ್ಲರೂ ಜೋಕ್ ಮಾಡುತ್ತಿದ್ದರು. ಎಲ್ಲಕ್ಕಿನ್ನ ಹೆಚ್ಚಾಗಿ ಆತನಿಗೆ ತನ್ನ ಭಿನ್ನತೆಯ ಬಗ್ಗೆ ಸಂಪೂರ್ಣ ಅರಿವಿತ್ತು. ಸ್ವತಃ ತನ್ನ ಬಗ್ಗೆ ಆಗಾಗ ಜೋಕುಗಳನ್ನೂ ಮಾಡಿಕೊಳ್ಳುತ್ತಿದ್ದ.

ಬ್ರಿಟನ್ನಿನ ಅತಿ ನಾಜೂಕಿನ ನಡಾವಳಿಯಿರದ, ಮಾತುಕತೆಯಿಲ್ಲದ, ಒಪ್ಪ ಓರಣವಿರದ, ಯಾವುದೇ ಅಧಿಕಾರದ ಗತ್ತಿರದ ಇಂತಹ ಮನುಷ್ಯ ಮಾದರಿಯಿರಲಿ ನನಗೆ ಸಿಕ್ಕ ಅಚ್ಚರಿ ಎಂದರೆ ಸುಳ್ಳಲ್ಲ. ಅದರಲ್ಲೂ ಭಾರತದಲ್ಲಿ ಕಾಲೇಜಿನಲ್ಲಿದ್ದಾಗ, ಕೆಲಸ ಮಾಡುತ್ತಿದ್ದಾಗ ಹೆಚ್.ಓ.ಡಿ. ಬರುತ್ತಿದ್ದಾರೆಂದರೆ ಮೆಡುಸ್ಸಾಗಳೇ ಬರಿತ್ತಿದ್ದಾರೆ ಎಂದು ಹೆದರಿ ಅಡಗುತ್ತಿದ್ದ, ನಮಸ್ಕಾರ ಸರ್ ಎಂದು ವಿಧೆಯತೆ ತೋರಬೇಕಿದ್ದ ಸಾಮಾನ್ಯ ಪರಿಸ್ಥಿತಿಯಲ್ಲಿ ಬೆಳೆದಿದ್ದ ನನಗೆ ಇದೆಲ್ಲ ಹೊಸದೇ ಆಗಿತ್ತು.

ಹೀಗಿದ್ದೂ ಎಲ್ಲರಿಗೂ ಪ್ರೀತಿಯ ’ಜೋ’ ಆಗಿದ್ದ ಆತ ಎಲ್ಲರಿಂದಲೂ ಯಾಕೆ ಗೌರವಿಸಲ್ಪಡುತ್ತಾನೆ ಎಂಬುದು ನಿಧಾನಕ್ಕೆ ತಿಳಿಯುತ್ತ ಹೋಯಿತು.

ಮುಖ್ಯ ಕಾರಣ ಆತನ ಮನಸ್ಸು. ಆತನಿಗೆ ಬದುಕಲ್ಲಿ ಇದ್ದ ಧ್ಯೇಯಗಳು ಮತ್ತು ಸೇವಾ ಮನೋಭಾವ. ತನ್ನ ರೋಗಿಗಳೆಂದರೆ ಅವನಿಗೆ ಜೀವ. ಅವರ ಮಂಚದ ಪಕ್ಕವೇ ಕುಳಿತು, ನಿಂತು ರೋಗಿಗಳನ್ನು ಆತ್ಮೀಯವಾಗಿ ಮಾತಾಡಿಸುತ್ತಿದ್ದ. ಹತ್ತು ಗಂಟೆಗಳ ಕಾಲ ಸತತ ನಿಂತು ಕತ್ತು-ಮುಖದ ಅತ್ಯಂತ ಕಷ್ಟದ ಸರ್ಜರಿಗಳನ್ನು ಮಾಡುತ್ತಿದ್ದ. ನಡುವೆ ಅಬ್ಬಬ್ಬಾ ಎಂದರೆ 15-20 ನಿಮಿಷಗಳ ಬ್ರೇಕ್ ತಗೊಂಡರೆ ಹೆಚ್ಚು. ನಂತರವೂ ರೋಗಿಗಳಿಗಾಗಿ ಸದಾ ಲಭ್ಯವಿರುತ್ತಿದ್ದ ಮನುಷ್ಯ. ಆತನನ್ನು ಬಲ್ಲ ಎಲ್ಲರಿಗೂ ಆತನ ಬಗ್ಗೆ ಇದ್ದ ಗೌರವಕ್ಕೆ ಪಾರವೇ ಇರಲಿಲ್ಲ.

ಆತ ತನ್ನ ಕ್ಷೇತ್ರದಲ್ಲಿ ಪಡೆದಿದ್ದ ಪರಿಣತಿ, ತಿಳುವಳಿಕೆ ಅಪಾರವಾಗಿತ್ತು. ಇಡೀ ಪ್ರಾಂತ್ಯದಲ್ಲಿ ಆತನಿಗೆ ಗುರುತರ ಜವಾಬ್ದಾರಿಗಳಿದ್ದವು. ಅಕಸ್ಮಾತ್ ಅದೃಷ್ಟ ಕೈಕೊಟ್ಟು ರೋಗ ಬಂದರೆ ಜೋನ ಕೈ ಕೆಳಗೆ ರೋಗಿಯಾಗಬಹುದು ಎನ್ನುವಷ್ಟರ ಮಟ್ಟಿಗೆ ಜನರಿಗೆ ಆತನ ಸೇವಾಮನೋಭಾವದ ಅರಿವಿತ್ತು, ನಂಬುಗೆಯಿತ್ತು. ತಾನು ಗಳಿಸಿದ ಸಂಬಳದ ಹಣವನ್ನು ಕೂಡ ಘಾನ, ಭಾರತದ ಮುಂತಾದ ದೇಶಗಳ ಬಡ ರೋಗಿಗಳ ಚಿಕಿತ್ಸೆಗೆ ಬಳುವಳಿ ನೀಡುತ್ತಿದ್ದ.

ಬಡ ದೇಶಗಳಿಗೆ ಹೋಗಿ ಅಲ್ಲಿನ ಯೂನಿವರ್ಸಿಟಿಯ ವೈದ್ಯರುಗಳಿಗೆ ಉಚಿತ ತರಭೇತಿ ನೀಡಿಬರುತ್ತಿದ್ದ. ತೀರ ಏನೂ ತಿಳಿಯದಿದ್ದ ನಮ್ಮಂತೆ ಹೊಸದಾಗಿ ಹೋಗುವವರಿಗೆ ಕೂಡ ಕಲಿಸುವಲ್ಲಿ ದಿನಮೀರಿ ಕೆಲಸ ಮಾಡುತ್ತಿದ್ದ ಈ ವ್ಯಕ್ತಿಗೆ ಕೆಲಸವೇ ದೈವವಾಗಿತ್ತು. ಕೆಲಸದ ಹೊರತಾಗಿ ಕೂಡ ಯಾರಿಗೆ ಬೇಕಾದರೂ ದಿನವೆಲ್ಲ ಖರ್ಚುಮಾಡಿ ಸಹಾಯ ಮಾಡಬಲ್ಲ ಉದಾರ ಗುಣವಿತ್ತು. ತಮ್ಮ ಐಷಾರಾಮಗಳಿಗೆ ಖರ್ಚು ಮಾಡುತ್ತ, ಟಾಕುಟೀಕಾಗಿ ಬಂದು ಸಂಬಳಕ್ಕೆ ಮಾತ್ರ ದುಡಿಯುತ್ತ ಇದ್ದಿದ್ದರೆ ಈತ ಇತರರಿಗಿಂತ ಯಾವ ರೀತಿಯೂ ಭಿನ್ನವಾಗಿರುತ್ತಿರಲಿಲ್ಲ. ತಾನು ಭಿನ್ನವಾಗಿರಬೇಕು ಎಂದು ಕೂಡ ಆತನ ಉದ್ದೇಶವಾಗಿರಲಿಲ್ಲ. ಆತನ ಬದುಕಿನ ಧ್ಯೇಯಗಳೇ ಹಾಗಿದ್ದವು. ಆತನ ಪರದೇಶದಲ್ಲಿ ನಮಗೆ ದೊರೆತ ಓಯಸಿಸ್ ಎನ್ನಬಹುದು. ಈ ಬಗೆಯ ವ್ಯಕ್ತಿಯಾದ ಕಾರಣ ವರ್ಷ ಕಳೆಯುವಲ್ಲಿ ಯಾರಾದರೂ ಆತನ ಪರಮ ಹಿತೈಷಿಗಳಾಗುವುದು ಸಾಧ್ಯವಿತ್ತು. ಜೋ ಗೆ ಕೂಡ ಅಂತಹುದೇ ಒಬ್ಬರು ಗುರುಗಳಿದ್ದರು ಅಂತ ನಂತರ ತಿಳಿಯಿತು.

ದಶಕದಲ್ಲಿ ಜೋನಂಥ ಮತ್ತೊಬ್ಬ ವ್ಯಕ್ತಿಯನ್ನು ಇಲ್ಲಿ ನೋಡಿಲ್ಲ ಎನ್ನುವುದು ಇಂತಹ ವ್ಯಕ್ತಿಗಳು ಎಷ್ಟು ವಿರಳ ಎಂಬುದನ್ನು ಸಾಬೀತುಪಡಿಸುತ್ತದೆ.

ಬಹಳ ಪ್ರಸಿದ್ಧಿ, ತಿಳುವಳಿಕೆ, ಅನುಭವ, ಪ್ರತಿಭೆ ಎಲ್ಲವೂ ಇದ್ದು ಕಳೆದ ೨೫ ವರ್ಷಗಳ ಹಿಂದೆ ಪರಿಚಿತರಾಗಿ ಬದುಕಿನಲ್ಲಿ ನನಗೆ ಅತ್ಯಂತ ವಿರಳವಾದ ಅವಕಾಶ, ಅನುಭವಗಳನ್ನು ನೀಡಿದ ಡಾ.ಸೋಮೇಶ್ವರರು ಪ್ರಾತಃಸ್ಮರಣೀಯರು. ನನ್ನಂತ ನೂರಾರು ಮಂದಿಗೆ ಅವಕಾಶ, ಉತ್ತೇಜನ, ಮಾರ್ಗದರ್ಶನದ ಜೊತೆಗೆ ಆತ್ಮೀಯವಾದ ಸ್ನೇಹಪರ ನಡವಳಿಕೆಯನ್ನು ತೋರಿಸಿದ ಗುರುಗಳು.

ಯಾವುದರ ಬಗ್ಗೆಯೂ ಸಹನೆ ಕಳೆದುಕೊಳ್ಳದೆ, ನಿಧಾನವಾದ ತಮ್ಮದೇ ಶೈಲಿಯಲ್ಲಿ ಅವರು ತಿಳಿ ಹೇಳುವಾಗ, ಯಾವತ್ತೂ ದರ್ಪವನ್ನು ತೋರಿದವರಲ್ಲ. ನಮ್ಮ ಅಲ್ಪ ಅರಿವನ್ನು ನಿಂದಿಸಿದವರಲ್ಲ. ಅವರ ವಿಶಿಷ್ಥ ಬದುಕಿನ ಪ್ರತಿ ದಿನದಲ್ಲಿ ಬಂದು ಹೋಗುವ ಮಂದಿಯೆಷ್ಟೋ? ಆದರೆ, ಎಲ್ಲರನ್ನು ನೆನಪಿಡುವ, ಆದರಿಸುವ, ಅವರಿಗಾಗಿ ಸಮಯ ನೀಡುವ ಇಂಥಹ ವ್ಯಕ್ತಿಗಳು ನಮ್ಮ ಅನುಭವಕ್ಕೆ ಬರುವುದು ಅತ್ಯಂತ ಅಪರೂಪ. ಬಂದಲ್ಲಿ ಅದು ನಮ್ಮ ಅದೃಷ್ಠ.

ಇಂತಹ ಹಲವರು ಗುರುಗಳಿಂದಲೇ ನಮ್ಮಂಥವರ ಸಾಧಾರಣ ಬದುಕು ಹಲವು ರೀತಿಯಲ್ಲಿ ಶ್ರೀಮಂತವಾಗುವುದು ಅನ್ನುವುದರಲ್ಲಿ ಸಂದೇಹವಿಲ್ಲ. ಕಲಿಸಬೇಕು ಎನ್ನುವ ಗೀಳಿರುವ ಗುರುಗಳು ಕೆಲವು ಬಾರಿ ತಮ್ಮ ನಿಯಮಗಳನ್ನು ಸಡಿಲಿಸಿ, ಹೊಸ ವಿಧಾನಗಳನ್ನು ಅಳವಡಿಸಿಕೊಂಡು, ವಿಶೇಷ ಪ್ರಯತ್ನಗಳನ್ನು ಮಾಡುತ್ತಾರೆ. ಕಲಿಯುವ ಜನರಿದ್ದರೆ ಅವರಿಗೆ ಇನ್ನಾವ ಬಾಧೆಗಳೂ ಇರುವುದಿಲ್ಲ.

ಒಬ್ಬರ ಜೀವನಕ್ಕೆ ಪಾಠ ಕಲಿಸುವ, ಮಾದರಿಯಾಗುವ, ಮಾರ್ಗದರ್ಶಕರಾಗುವ ಹಲವರು ಗುರುಗಳು ನಮ್ಮ ಬದಕಲ್ಲಿ ಬಂದು ಹೋಗುತ್ತಾರೆ. ಅವರು ಶಾಲೆಯ ನಾಲ್ಕು ಗೋಡೆಗಳ ನಡುವೆ ಮಾತ್ರ ಸಿಗುತ್ತಾರೆಂದು ಅಂದುಕೊಳ್ಳಬೇಕಿಲ್ಲ. ಜೀವನ ಪಾಠಕ್ಕೆ ಹಲವು ಗುರುಗಳು ಬೇಕು. ನನ್ನ ಬದುಕಲ್ಲಿ ಹೀಗೆ ಬಂದು ಹೋದವರು, ಬರಲಿರುವವರು ಇನ್ನೂ ಹಲವರಿದ್ದಾರೆ.

ಅವರೆಲ್ಲರಿಗೂ ನನ್ನ ಪ್ರಣಾಮಗಳು.

‍ಲೇಖಕರು Admin

September 5, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: