ದೇಶದ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಫುಲೆ…

ಸುಧಾ ಆಡುಕಳ

೧೮೩೧ರಲ್ಲಿ ಜನಿಸಿದ ಸಾವಿತ್ರಿಬಾಯಿ ಫುಲೆಯವರು ಈ ದೇಶದ ಮೊದಲ ಶಿಕ್ಷಕಿಯಾಗಿದ್ದಾರೆ. ತನ್ನ ಪತಿ ಜ್ಯೋತಿಬಾ ಫುಲೆಯವರೊಂದಿಗೆ ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯವಾಗಿದ್ದ ಸಾವಿತ್ರಿಬಾಯಿಯವರು ಪುಣೆಯಲ್ಲಿ ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕೆಂದು ಶಾಲೆಯನ್ನುತೆರೆದವರು. ತಮ್ಮ ಸಮಾಜ ಬಾಂಧವರನ್ನೆಲ್ಲ ಎದುರು ಹಾಕಿಕೊಂಡು ಕೆಳವರ್ಗದ ಹೆಣ್ಣುಮಕ್ಕಳು ಮತ್ತು ವಿಧವೆಯರ ಶಿಕ್ಷಣಕ್ಕಾಗಿ ಶ್ರಮಿಸಿದವರು. ಅನೇಕ ಅವಮಾನಗಳನ್ನು ಅನುಭವಿಸಿದರೂ ತಾವೇ ಶಿಕ್ಷಕಿಯಾಗಿ ಮುಂದೆ ನಿಂತು ಶಾಲೆಗಳನ್ನು ಮುನ್ನಡೆಸಿದವರು. ಅವರು ಸುಮಾರು ೨೦ ವರ್ಷಗಳ ಅವಧಿಯಲ್ಲಿ ತಮ್ಮ ಪತಿ ಜ್ಯೋತಿಬಾರಿಗೆ ಬರೆದ ಮೂರು ಪತ್ರಗಳು ಲಭ್ಯವಿದ್ದು, ‘ಸಾವಿತ್ರಿಬಾಯಿ ಸಮಗ್ರ ವಾಙ್ಮಯ’ದಲ್ಲಿ ಪ್ರಕಟಗೊಂಡಿವೆ. ಇವು ಕೇವಲ ವೈಯಕ್ತಿಯ ವಿಷಯಗಳನ್ನಷ್ಟೇ ಚರ್ಚಿಸದೇ ಅವರ ಸಾಮಾಜಿಕ ಕಾರ್ಯಗಳ ಆಯಾಮಗಳನ್ನು ಮತ್ತು ಅಂದಿನ ಸಾಮಾಜಿಕ ಪರಿಸ್ಥಿತಿಯನ್ನು ತೆರೆದಿಡುತ್ತವೆ. ಶಿಕ್ಷಕ ದಿನಾಚರಣೆಯ ಸಂದರ್ಭದಲ್ಲಿ ದೇಶದ ಮೊದಲ ಮಹಿಳಾ ಶಿಕ್ಷಕಿಯನ್ನು ನೆನಪಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ.

ಪತ್ರ – ೧
ಸಾವಿತ್ರಿಬಾಯಿ ಫುಲೆಯವರು ಬರೆದ ಪತ್ರಗಳಲ್ಲಿ ಮೊದಲ ಪತ್ರವು ಅಕ್ಟೋಬರ್ ೧೮೫೬ರಲ್ಲಿ ಬರೆದುದಾಗಿದೆ. ಇದರಲ್ಲಿ ಜ್ಯೋತಿಬಾ ಫುಲೆ ಮತ್ತು ಅವರು ನಡೆಸುತ್ತಿದ್ದ ಶಿಕ್ಷಣ ಕ್ರಾಂತಿಯ ಬಗ್ಗೆ ಅವರತವರಿನಲ್ಲಿ ನಡೆದ ಚರ್ಚೆಯ ವಿವರಗಳಿವೆ. ಅನಾರೋಗ್ಯದ ಕಾರಣದಿಂದ ತವರಿನಲ್ಲಿದ್ದ ಸಾವಿತ್ರಿಬಾಯಿಯವರು ತನ್ನ ಪತಿಗೆ ಈ ಚರ್ಚೆಯ ವಿವರಗಳನ್ನು ಪತ್ರದ ಮುಖಾಂತರ ತಿಳಿಸುತ್ತಾರೆ.
ಸತ್ಯಸಾಕಾರ ಮೂರ್ತಿಯಾದ ಜ್ಯೋತಿಬಾ ಅವರಿಗೆ,

ನಿಮ್ಮ ಸಾವಿತ್ರಿ ಮಾಡುವ ವಂದನೆಗಳು.

ಬಹಳ ಏರುಪೇರುಗಳ ನಂತರ ಈಗ ನನ್ನಆರೋಗ್ಯವು ಕೊಂಚ ಸುಧಾರಿಸುತ್ತಿದೆ. ಈ ದಿನಗಳಲ್ಲಿ ನನ್ನ ಸಹೋದರ ಅದೆಷ್ಟು ಪ್ರೀತಿ ಮತ್ತು ಕಾಳಜಿಯಿಂದ ನನ್ನನ್ನು ನೋಡಿಕೊಂಡನೆಂದರೆ ಅವನ ಪ್ರೀತಿಗೆ ಬೆಲೆಕಟ್ಟಲಾಗದು. ನಾನು ಪೂರ್ಣವಾಗಿ ಚೇತರಿಸಿಕೊಂಡ ನಂತರ ಪುನಾಕ್ಕೆ ಬರುತ್ತೇನೆ. ನೀವು ನನ್ನ ಬಗ್ಗೆ ಯೋಚಿಸಬೇಡಿ. ನಾನಿಲ್ಲದಿರುವುದರಿಂದ ಫಾತಿಮಾಳಿಗೆ ಎಲ್ಲವನ್ನೂ ನಿಭಾಯಿಸುವುದು ಎಷ್ಟು ಕಷ್ಟವೆಂದು ನನಗೆ ಗೊತು, ಆದರೆ ನನಗೆ ಭರವಸೆಯಿದೆ ಅವಳು ಅದಕ್ಕಾಗಿ ಗೊಣಗಲಾರಳು.

ಹೀಗೆ ನಾವು ಒಂದು ದಿನ ಮಾತನಾಡುತ್ತಿರುವಾಗ ನನ್ನ ಸಹೋದರ ಹೇಳಿದ, ‘ಮಹಾರ್ ಮತ್ತು ಮಾಂಗ್‌ ಜನಾಂಗದ ಉದ್ಧಾರಕ್ಕೆಂದು ಕೆಲಸ ಮಾಡುವುದರಿಂದ ನಿನ್ನನ್ನು, ನಿನ್ನ ಗಂಡನನ್ನು ನಮ್ಮ ಸಮುದಾಯದಿಂದ ಬಹಿಷ್ಕರಿಸಿದ್ದಾರೆ. ಕೆಳವರ್ಗದ ಜನರ ಸಹವಾಸದಿಂದ ನೀವು ಮನೆತನದ ಮರ್ಯಾದೆಯನ್ನು ಕಳೆಯುತ್ತಿದ್ದೀರಿ. ನಮ್ಮ ಸಮುದಾಯದ ರೀತಿ ನೀತಿಗಳನ್ನು ಅನುಸರಿಸಲು ನಿಮಗೇನು ಕಷ್ಟ?’ ಅವನ ಈ ಕಠಿಣ ಮಾತುಗಳನ್ನು ಕೇಳಿ ಅಮ್ಮನಿಗೆ ಬಹಳ ದುಃಖವಾಯಿತು.

ನನ್ನ ಸಹೋದರನು ಒಳ್ಳೆಯ ವ್ಯಕ್ತಿಯೇ ಆಗಿದ್ದರೂ ಅವನ ಸಂಕುಚಿತ ಮನೋಭಾವ ಈ ಮಾತುಗಳನ್ನು ಹೇಳಿಸಿದೆಯೆಂದು ಅಮ್ಮನಿಗೆ ಅರಿವಾಯಿತು. ಅಮ್ಮ ಅವನ ಯೋಚನೆಗಳನ್ನು ತಿದ್ದಲು ನೋಡಿದಳು, ‘ದೇವರು ನಿನಗೆ ಎಷ್ಟೊಳ್ಳೆಯ ನಾಲಿಗೆಯನ್ನುಕೊಟ್ಟಿದ್ದಾನೆ. ಆದರೆ ನೀನದನ್ನು ಒಳ್ಳೆಯದರ ಬದಲು ಕೆಟ್ಟ ಕೆಲಸಕ್ಕೆ ಉಪಯೋಗಿಸುತ್ತಿರುವೆ.’ ನಾನು ಅವನಿಗೆ ನಮ್ಮಸಾಮಾಜಿಕ ಸೇವಾಕಾರ್ಯಗಳ ವಿವರಗಳನ್ನು ನೀಡಿ ಅವನ ಈ ಧೋರಣೆಯಾಕೆ ಸರಿಯಲ್ಲವೆಂದು ತಿಳಿಸಿ ಹೇಳತೊಡಗಿದೆ, ‘ಸಹೋದರ, ನಿನ್ನ ಸಮಾಜ ನಿನಗೆ ತಪ್ಪು ಪಾಠಗಳನ್ನು ಕಲಿಸಿದೆ. ನೀನು ಮತ್ತು ನಿನ್ನ ಬಾಂಧವರು ಹಸು, ಕುರಿ ಮೊದಲಾದ ಪ್ರಾಣಿಗಳನ್ನು ಪ್ರೀತಿಯಿಂದ ಮುಟ್ಟಿ ಮೈದಡವುತ್ತೀರಿ. ವಿಷಕಾರಿ ಹಾವುಗಳಿಗೂ ಹಬ್ಬ ಮಾಡಿ ಹಾಲನ್ನು ಎರೆಯುತ್ತೀರಿ. ಆದರ ನಿಮ್ಮ ಸಹಜೀವಿಗಳಾದ ಕೆಲವರನ್ನು ಮುಟ್ಟದೇದೂರ ಸರಿಯುತ್ತೀರಿ. ಇದ್ದಕ್ಕೇನಾದರೂ ಕಾರಣಗಳಿವೆಯೇನು? ಪೂಜೆ ಮಾಡಲು ಮಡಿಯನ್ನುಟ್ಟ ವೈದಿಕರೆದುರು ನೀನು ಕೂಡಾ ಅಸ್ಪೃಷ್ಯನೆ. ಅವರೂ ನಿನ್ನನ್ನು ಮುಟ್ಟದೆ ದೂರಸರಿಸುತ್ತಾರೆ. ಆ ಸಮಯದಲ್ಲಿ ನೀನೂ ಅವರ ದೃಷ್ಟಿಯಲ್ಲಿ ಮಹಾರ್‌ ಜನರಿಗಿಂತ ಬೇರೆಯೇನಲ್ಲ.’

ನನ್ನ ಮಾತುಗಳಿಂದ ಅವನ ಮುಖವು ಕೆಂಪೇರಿತು. ಅವನು ಕೋಪದಿಂದ ಹೇಳಿದ, ‘ನೀವೇಕೆ ಅವರಿಗೆಲ್ಲ ಶಿಕ್ಷಣ ನೀಡಬೇಕು? ಅದರಿಂದಾಗಿಎಲ್ಲರೂ ನಿಮ್ಮನ್ನು ಆಡಿಕೊಳ್ಳುತ್ತಿದ್ದರೆ ನನಗಂತೂ ಸಹಿಸಲಾಗುವುದಿಲ್ಲ.’ ನಾನು ಅವನಿಗೆ ಇಂಗ್ಲಿಷ್‌ ಕಲಿಕೆಯಿಂದ ಕೆಳವರ್ಗದವರಿಗಾಗುವ ಪ್ರಯೋಜನವನ್ನು ಮನವರಿಕೆ ಮಾಡಿಕೊಡತೊಡಗಿದೆ. ‘ಅರಿವಿನ ಕೊರತೆ ಮನುಷ್ಯನನ್ನು ಮೃಗೀಯತೆಯೆಡೆಗೆ ಒಯ್ಯುತ್ತದೆ. ಶಿಕ್ಷಣದಿಂದ ಮಾತ್ರವೇ ಕೆಳವರ್ಗದ ಜನರ ಜೀವನ ಉನ್ನತೀಕರಣವಾಗಬಲ್ಲುದು. ನನ್ನ ಗಂಡ ಹೀಗೆ ಯೋಚಿಸಬಲ್ಲ ಅಪ್ಪಟ ಮನುಷ್ಯ. ಹಾಗಾಗಿಯೇ ಅವನಿಗೆ ಕೆಳವರ್ಗದವರೂ ನಮ್ಮ ಸಹಜೀವಿಗಳಂತೆ ಕಾಣುತ್ತಾರೆ.

ಸಮಾಜದ ಎಲ್ಲರನ್ನುಎದುರು ಹಾಕಿಕೊಂಡು ಅವರ ಉದ್ಧಾರಕ್ಕಾಗಿ ಅವನು ಶ್ರಮಿಸುತ್ತಾನೆ. ಶಿಕ್ಷಣದಿಂದ ಮಾತ್ರವೇ ಅವರೆಲ್ಲರ ಉದ್ಧಾರ ಸಾಧ್ಯ ಎನ್ನುವುದು ಅವನ ಅಚಲ ನಂಬಿಕೆಯಾಗಿದೆ. ಹೆಣ್ಣುಮಕ್ಕಳಿಗೆ, ವಿಧವೆಯರಿಗೆ ಮತ್ತು ಕೆಳವರ್ಗದವರಿಗೆಲ್ಲರಿಗೂ ಶಿಕ್ಷಣ ನೀಡಲು ನಾವಿಬ್ಬರೂ ಕೂಡಿಯೇ ಪ್ರಯತ್ನಿಸುತ್ತೇವೆ. ಆದರೆ ಮೇಲ್ಜಾತಿಯವರಿಗೆ ಈ ಎಲ್ಲರಿಂದ ತಮಗೇನಾದರೂ ಕೆಡುಕಾದರೆ ಎಂಬ ಭಯ. ಅವರೆಲ್ಲಾದರೂ ತಮ್ಮಂತೆಯೇ ಮಂತ್ರೋಚ್ಛಾರಣೆಯನ್ನೂ ಕಲಿತರೆ! ಎಂಬ ದಿಗಿಲು ಅಷ್ಟೆ. ಅದಕ್ಕಾಗಿಯೇ ಇದನ್ನೆಲ್ಲ ವಿರೋಧಿಸುವುದಲ್ಲದೇ ನಿನ್ನಂತಹ ಒಳ್ಳೆಯವನ ತಲೆಯನ್ನೂ ಹಾಳುಮಾಡುತ್ತಾರೆ.’

‘ಒಂದು ಸಲ ಬ್ರಿಟಿಷ್ ಸರಕಾರದವರು ನನ್ನ ಗಂಡನ ಸಾಮಾಜಿಕ ಕೆಲಸಗಳಿಗಾಗಿ ಅವನಿಗೊಂದು ಸನ್ಮಾನ ಸಮಾರಂಭವನ್ನು ಆಯೋಜಿಸಿದ್ದರು. ಇದು ನಮ್ಮ ಸಮಾಜದವರೆಲ್ಲರ ಎದೆಯನ್ನು ಸುಡತೊಡಗಿತು. ನನ್ನ ಗಂಡ ಅವರೆಲ್ಲರಂತೆ ದೇವರ ನಾಮಸ್ಮರಣೆ ಮತ್ತು ಪೂಜೆಯನ್ನು ಮಾಡುವುದಿಲ್ಲ, ಆದರೆ ಅವನು ದೇವರ ಕೆಲಸವನ್ನೇ ಮಾಡುತ್ತಿದ್ದಾನೆ. ನಾನು ಅವನಿಗೆ ಸಹಕರಿಸುತ್ತೇನೆ. ನಾನು ನಿಜಕ್ಕೂ ಈ ಕೆಲಸಗಳಲ್ಲಿ ಧನ್ಯತೆಯನ್ನು ಪಡೆಯುತ್ತೇನೆ. ಮನುಷ್ಯನೊಬ್ಬಏರಬಹುದಾದಎತ್ತರ, ಭಿತ್ತರಗಳನ್ನು ಈ ಎಲ್ಲ ಕಾರ್ಯಗಳೂ ಸಾಕಾರಗೊಳಿಸುತ್ತವೆ.’

ನನ್ನ ಮಾತುಗಳನ್ನು ಅಮ್ಮ ಮತ್ತು ಸಹೋದರಇಬ್ಬರೂ ಮೌನವಾಗಿ ಆಲಿಸಿದರು. ಕೊನೆಯಲ್ಲಿ ನನ್ನ ಸಹೋದರನಿಗೆ ತನ್ನ ತಪ್ಪಿನ ಅರಿವಾಯಿತು. ಅವನು ತನ್ನಒರಟು ಮಾತುಗಳಿಗಾಗಿ ನನ್ನಲ್ಲಿ ಕ್ಷಮೆಯನ್ನೂ ಕೇಳಿದ. ಅಮ್ಮ ಹೇಳಿದಳು, ‘ನಿನ್ನ ನಾಲಗೆ ದೇವರ ಮಾತುಗಳನ್ನೇ ಹೇಳುತ್ತಿದೆ. ನಿನ್ನ ಈ ಮಾತುಗಳು ನಮಗೆ ಆಶೀರ್ವಚನದಂತೆ ಕೇಳಿಸಿತು.’ ಅವಳ ಮಾತುಗಳಿಂದ ನನ್ನ ಮನಸ್ಸುತುಂಬಿಬಂತು. ಇಲ್ಲಿಯೂ ಪುಣೆಯಂತೆಯೇ ಮುಗ್ಧ ಜನರ ಮನಸ್ಸಿನಲ್ಲಿ ವಿಷಬೀಜವನ್ನು ಬಿತ್ತುವ ಮೂರ್ಖಜನರಿದ್ದಾರೆಂದು ನಿಮಗೆ ಅರ್ಥವಾಯಿತು ಅಂದುಕೊಳ್ಳುವೆ. ಇಷ್ಟಕ್ಕೆಲ್ಲ ಹೆದರಿ ನಾವು ನಮ್ಮ ಸತ್ಕಾರ್ಯವನ್ನು ನಿಲ್ಲಿಸಲು ಸಾಧ್ಯವೇನು? ಬದಲಾಗಿ ಇನ್ನಷ್ಟು ಗಾಢವಾಗಿ ನಮ್ಮ ಕೆಲಸಗಳಲ್ಲಿ ತೊಡಗಿಕೊಳ್ಳಬೇಕು. ಇದನ್ನೆಲ್ಲ ನಾವು ಮೀರಲೇಬೇಕು ಮತ್ತು ಭವಿಷ್ಯದಲ್ಲಿ ಗೆಲುವು ನಮ್ಮದೇ ಎಂಬ ಭರವಸೆ ನನಗಿದೆ. ಭವಿಷ್ಯವು ಖಂಡಿತವಾಗಿಯೂ ನಮ್ಮದು.
ಇನ್ನೇನು ಬರೆಯಲಿ?
ವಂದನೆಗಳೊಂದಿಗೆ,
ನಿಮ್ಮ ಸಾವಿತ್ರಿ.

ಪತ್ರ – ೨
ಸಾವಿತ್ರಿಬಾಯಿ ಎರಡನೆಯ ಪತ್ರವನ್ನುಜ್ಯೋತಿಬಾ ಅವರಿಗೆ ಬರೆದದ್ದು ೧೮೬೮ರಲ್ಲಿ. ಬ್ರಾಹ್ಮಣ ಹುಡುಗ ಮತ್ತು ಅಸ್ಪೃಷ್ಯ ಹುಡುಗಿಯ ಪ್ರೇಮ ಪ್ರಕರಣವೊಂದರಲ್ಲಿ ಸಮಾಜದ ಪ್ರತಿಕ್ರಿಯೆಯ ಬಗ್ಗೆ ಅವರು ಈ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
೨೯ ಆಗಸ್ಟ್ ೧೮೬೮
ಸತಾರಾ
ಸತ್ಯಸಾಕಾರ ರೂಪರಾದ ಜ್ಯೋತಿಬಾ ಅವರಿಗೆ ಸಾವಿತ್ರಿ ಮಾಡುವ ಪ್ರಣಾಮಗಳು.
ನಿಮ್ಮ ಪತ್ರ ಬಂದು ತಲುಪಿದೆ. ನಾವೆಲ್ಲರೂ ಇಲ್ಲಿ ಕ್ಷೇಮವಾಗಿದ್ದೇವೆ. ಮುಂದಿನ ತಿಂಗಳು ಐದನೇ ದಿನಾಂಕದಂದು ನಾನು ಊರಿಗೆ ಬರುತ್ತೇನೆ. ಅದರ ಬಗ್ಗೆ ಚಿಂತಿಸಬೇಡಿ. ಈ ಮಧ್ಯೆ ಇಲ್ಲಿ ಒಂದು ವಿಚಿತ್ರವಾದ ಘಟನೆ ನಡೆದಿದೆ. ಊರಿನಲ್ಲಿ ಪೂಜೆ-ಪುನಸ್ಕಾರ ನಡೆಸುತ್ತ, ಜನರಿಗೆ ಭವಿಷ್ಯ ಹೇಳುತ್ತ ತಿರುಗುತ್ತಿದ್ದ ಗಣೇಶನೆಂಬ ಹುಡುಗನೊಬ್ಬ ಶಾರ್ಜ ಎಂಬ ಮಹಾರ್ ಹುಡುಗಿಯನ್ನು ಪ್ರೇಮಿಸಿದ. ಜನರಿಗೆ ವಿಷಯ ಗೊತ್ತಾಗುವಾಗ ಅವಳು ಆರು ತಿಂಗಳ ಗರ್ಭಿಣಿಯಾಗಿದ್ದಳು. ಉದ್ರಿಕ್ತರಾದ ಜನರು ಅವರನ್ನು ಸಾರ್ವಜನಿಕವಾಗಿ ಮೆರವಣಿಗೆ ಮಾಡಿಕೊಲ್ಲುವ ಬೆದರಿಕೆ ಹಾಕಿದರು.

ನನಗೆ ಅವರೆಲ್ಲರ ಈ ಯೋಜನೆ ತಿಳಿಯುತ್ತಿದ್ದಂತೆ ನಾನು ಅಲ್ಲಿಗೆ ಧಾವಿಸಿದೆ. ಪ್ರೇಮಿಗಳ ಹತ್ಯೆಗೆ ಬ್ರಿಟಿಷ್ ಸರಕಾರ ನೀಡುವ ಕಠಿಣವಾದ ಶಿಕ್ಷೆಯನ್ನು ಉಲ್ಲೇಖಿಸಿ ಅವರು ಆ ಕಾರ್ಯದಿಂದ ಹಿಂದೆ ಸರಿಯುವಂತೆ ಮಾಡಿದೆ. ಸಾಧುಬಾ ಅವರು ಅವರಿಬ್ಬರೂ ಊರು ಬಿಡಬೇಕೆಂದು ಹೇಳಿದರು ಮತ್ತು ಆ ಪ್ರೇಮಿಗಳು ಇದಕ್ಕೆ ಒಪ್ಪಿದರು. ಅವರಿಬ್ಬರೂ ಕೃತಜ್ಞತೆಯ ಕಣ್ಣೀರು ಸುರಿಸುತ್ತ ನನ್ನ ಪಾದದ ಮೇಲೆ ಬಿದ್ದರು. ನಾನು ಅವರನ್ನು ಸಂತೈಸಿ ಸಮಾಧಾನಪಡಿಸಿದೆ. ಅವರಿಬ್ಬರನ್ನೂ ಈಗ ನಿಮ್ಮಲ್ಲಿಗೆ ಕಳಿಸುತ್ತಿದ್ದೇನೆ.
ಮತ್ತೇನು ಬರೆಯಲಿ?
ನಿಮ್ಮ ಸಾವಿತ್ರಿ

ಪತ್ರ – ೩
ಸಾವಿತ್ರಿಬಾಯಿಯವರು ತಮ್ಮ ಕೊನೆಯ ಪತ್ರವನ್ನು ಬರೆದದ್ದು ೧೮೭೭ರಲ್ಲಿ. ಮಹಾರಾಷ್ಟ್ರದಲ್ಲಿ ಬಂದ ಭೀಕರ ಬರಗಾಲದಲ್ಲಿ ಅವರ ಸತ್ಯಶೋಧಕ ಸಮಾಜವೂ ಪರಿಹಾರ ಕಾರ್ಯದಲ್ಲಿ ಭಾಗವಹಿಸಿತ್ತು. ಅದರ ಅನುಭವಗಳ ಬಗ್ಗೆ ಈ ಪತ್ರದಲ್ಲಿ ವಿವರಿಸಿದ್ದಾರೆ.
೨೦ ಏಪ್ರಿಲ್ ೧೮೭೭
ಸತ್ಯಸಾಕಾರ ಸ್ವರೂಪರಾದ ಜ್ಯೋತಿಬಾ ಅವರಿಗೆ ಸಾವಿತ್ರಿ ಮಾಡುವ ಪ್ರಣಾಮಗಳು.

೧೮೭೬ ಸರಿದುಹೋಗಿದೆ, ಆದರೆ ಬರಗಾಲವು ಇನ್ನೂ ಹೋಗಿಲ್ಲ ಬದಲಿಗೆ ಇನ್ನಷ್ಟು ಭೀಕರವಾಗುತ್ತ ಸಾಗುತ್ತಿದೆ. ಜನರು ಮತ್ತು ಪ್ರಾಣಿಗಳು ಸಾಯುತ್ತಿದ್ದಾರೆ. ಆಹಾರದ ಕೊರತೆ ಎಲ್ಲರನ್ನೂ ಬಾಧಿಸುತ್ತಿದೆ. ಜನರನ್ನು ಊರಿನಿಂದ ಹೊರಗೆ ಹಾಕಲಾಗುತ್ತಿದೆ. ಅವರು ತಮ್ಮ ಮಕ್ಕಳನ್ನು, ಹೆಣ್ಣುಗಳನ್ನು ಮಾರಿ ಹಣ ತೆಗೆದುಕೊಂಡು ಊರು ಬಿಡುತ್ತಿದ್ದಾರೆ. ಹಳ್ಳ, ಕೊಳ್ಳ, ಕೆರೆಬಾವಿಗಳು ಬತ್ತಿ ಹೋಗುತ್ತಿವೆ, ಕುಡಿಯಲು ನೀರಿಗೂತತ್ವಾರವಿದೆ.

ಮರದಲ್ಲಿ ಎಲೆಗಳೇ ಇಲ್ಲದೇ ಬೋಳಾಗಿವೆ. ಜನರೆಲ್ಲ ನೀರು, ಆಹಾರಕ್ಕಾಗಿ ಅಂಗಾಲಾಚುತ್ತ ನೆಲದಲ್ಲಿ ಬಿದ್ದು ಸಾಯುತ್ತಿದ್ದಾರೆ. ಕೆಲವರು ವಿಷಭರಿತವಾದ ಹಣ್ಣುಗಳನ್ನು ತಿನ್ನುತ್ತಿದ್ದಾರೆ ಮತ್ತು ತಮ್ಮ ಮೂತ್ರವನ್ನೇ ಕುಡಿಯುತ್ತಿದ್ದಾರೆ. ನಮ್ಮ ಸತ್ಯಶೋಧಕ ಸಮಾಜದ ಸ್ವಯಂ ಸೇವಕರು ಅವರಿಗೆಲ್ಲಾ ಆಹಾರ ಮತ್ತು ಪಾನೀಯಗಳನ್ನು ಹಂಚಲು ತಂಡಗಳಲ್ಲಿ ಶ್ರಮಿಸುತ್ತಿದ್ದಾರೆ.

ಸಹೋದರ ಕೊಂಡಾಜಿ ಮತ್ತು ಅವನ ಹೆಂಡತಿ ಉಮಾಬಾಯಿ ನನ್ನನ್ನು ಬಹಳ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ. ಒಟೂರು ಶಾಸ್ತ್ರಿ, ಗಣಪತಿ ಸಕರಾಮ, ದುಂಬಾರೆ ಪಾಟೀಲ್‌ ಅವರು ನಿಮ್ಮನ್ನು ಭೇಟಿಯಾಗಲು ಬಯಸಿದ್ದಾರೆ. ನೀವು ಒಟೂರಿಗೆ ಬಂದು ಅಹಮ್ಮದಾಬಾದಿಗೆ ಹೋಗುವುದು ಒಳ್ಳೆಯದು.

ನಿಮಗೆ ಆರ್. ಬಿ. ಕೃಷ್ಣಾಜಿಪಂಥ್‌ ಮತ್ತು ಲಕ್ಷ್ಮಣ ಶಾಸ್ತ್ರಿ ಅವರ ಪರಿಚಯವಿರಬಹುದು. ಅವರು ನನ್ನಲ್ಲಿಗೆ ಬಂದು ಸ್ವಲ್ಪ ಹಣವನ್ನು ಪರಿಹಾರ ಕಾರ್ಯಗಳಿಗೆಂದು ನೀಡಿ ಹೋದರು.

ಬಡವರಿಗೆ ಬಡ್ಡಿಗೆ ಹಣ ನೀಡುವ ಶ್ರೀಮಂತರು ಪರಿಸ್ಥಿತಿಯನ್ನು ತೀರಾ ಹದಗೆಡಿಸಿದ್ದಾರೆ. ಜನರುಅವರ ವಿರುದ್ಧ ರೊಚ್ಚಿಗೇಳುತ್ತಿದ್ದಾರೆ. ಕಲೆಕ್ಟರ್‌ ಅವರು ಇವೆಲ್ಲವನ್ನೂ ತಡೆಗಟ್ಟಲು ಶ್ರಮಿಸುತ್ತಿದ್ದಾರೆ. ಅವರು ಬಿಳಿಯ ಪೋಲಿಸರ ಕ್ರೌರ್ಯವನ್ನು ತಡೆದು ಶಾಂತಿಯನ್ನು ಸ್ಥಾಪಿಸಲು ಹೆಣಗುತ್ತಿದ್ದಾರೆ. ಸತ್ಯಶೋಧಕ ಸಮಾಜದ ೫೦ ಸ್ವಯಂಸೇವಕರನ್ನುಇದ್ದಕ್ಕಿದ್ದಂತೆಯೇ ಬಂಧಿಸಿದ್ದಾರೆ. ಕಲೆಕ್ಟರ್ ನನ್ನನ್ನು ಮಾತನಾಡಲು ಆಹ್ವಾನಿಸಿದ್ದರು. ನಾನು ಅವರಿಗೆ ಕೇಳಿದೆ, ‘ಸೇವಾ ಕಾರ್ಯದಲ್ಲಿ ನಿಷ್ಪೃಹರಾಗಿ ತೊಡಗಿಕೊಂಡ ಸ್ವಯಂಸೇವಕರ ಬಂಧನ ಸರಿಯೆ?ಯಾವುದೇ ತಪ್ಪು ಮಾಡದ ಅವರನ್ನು ತಕ್ಷಣವೇ ಬಿಡುಗಡೆ ಮಾಡಬೇಕು.’ ಕಲೆಕ್ಟರ್ ಸಾಹೇಬರಿಗೆ ನನ್ನ ಮಾತುಗಳು ಸತ್ಯವೆಂದು ಅನಿಸಿತು. ಅವರು ಬಿಳಿಯ ಸೈನಿಕರಿಗೆ ಗದರಿಸಿದರು, ‘ಈ ರೈತ ಹುಡುಗರು ದರೋಡೆಕೋರರೇನು? ತಕ್ಷಣ ಅವರನ್ನು ಬಿಡುಗಡೆ ಮಾಡಿ.’ ಜನರ ದಂಗೆಯಿಂದ ಅವರು ಎಚ್ಚೆತ್ತುಕೊಂಡಿದ್ದಾರೆ. ನಾಲ್ಕು ಎತ್ತಿನಗಾಡಿ ತುಂಬಾ ಆಹಾರ ಪದಾರ್ಥಗಳನ್ನು ಸರಬರಾಜು ಮಾಡಿದ್ದಾರೆ.

ನೀವು ಸಾಮಾಜಿಕ ಸೇವಾಕಾರ್ಯದಲ್ಲಿ ನಿಮ್ಮನ್ನು ತೊಡಗಿಸಿಕೊಂಡಿರುವಿರಿ. ಬಡವರು ಮತ್ತು ಹಿಂದುಳಿದವರ ಉದ್ಧಾರಕ್ಕಾಗಿ ನಡೆಸುತ್ತಿರುವ ಈ ಕಾರ್ಯದಲ್ಲಿ ನಾನು ಎಂದೆಂದಿಗೂ ನಿಮ್ಮಜೊತೆಗಿರುವೆ. ಈ ರೀತಿಯ ಕಾರ್ಯಗಳು ನಿಜಕ್ಕೂ ಜನರಿಗೆ ಅನುಕೂಲವಾಗಲಿವೆ ಎಂಬ ಭರವಸೆ ನನಗಿದೆ.
ಮತ್ತೇನನ್ನು ಬರೆಯಲಾರೆ,
ನಿಮ್ಮ ಪ್ರೀತಿಯ ಸಾವಿತ್ರಿ.

(ಮಾಹಿತಿ ಕೃಪೆ: ಅಂತರ್ಜಾಲ)

‍ಲೇಖಕರು Admin

September 5, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: