ಸರೋಜಿನಿ ಪಡಸಲಗಿ ಸರಣಿ – ಧಾರವಾಡಕ್ಕೆ ಪ್ರಸ್ಥಾನ

ಸರೋಜಿನಿ ಪಡಸಲಗಿ

6

ಕೈಗೆ ಸಿಗದೇ ಸಮಯ ಕಾಲಿಗೆ ಗೆಜ್ಜೆ ಕಟ್ಟಿಕೊಂಡು ಓಡುತ್ತಲೇ ಇತ್ತು. ಯಾರ ಮೊಗ ಅರಳಲಿ, ಮುದುಡಲಿ, ಒಬ್ಬರು ನಗಲಿ ಇನ್ನೊಬ್ಬರು ಅಳಲಿ ಅದಕ್ಯಾವ ಪರಿವೆಯೂ ಇಲ್ಲ, ಹಂಗೂ ಇಲ್ಲ. ಬಲು ನರ‍್ಭಾವುಕ ಈ ಕಾಲ! ಹಾಗೇ ನಡೆದಿತ್ತು – ನಿಯಮದ ಪ್ರಕಾರ ಏಕತಾನವಾಗಿ ಸಮಯ ಸರಿಯುತ್ತಲೇ ಇತ್ತು, ಸಿಹಿ – ಕಹಿ ಘಟನೆಗಳ ನಡುವೆ. ಇತ್ತೀಚೆಗೆ ನನ್ನ ಮನಸಿನಲ್ಲಿ ಆಗಾಗ ಒಂದು ಯೋಚನೆ ಸುಳೀತಾನೇ ಇತ್ತು; ಧಾರವಾಡಕ್ಕೆ ಒಂದು ಮನೆ ಮಾಡಿ ನಾನು ಮಕ್ಕಳೊಂದಿಗೆ ಅಲ್ಲೇ ಇದ್ರೆ ಹೇಗೆ ಅಂತ. ನನ್ನ ಪತಿಗಂತೂ ಅದು ಅಸಾಧ್ಯದ ಮಾತೇ ಆಗಿತ್ತು. ಹೇಗೆ ಮಾಡೋದು, ಏನು ಮಾಡೋದು ಅಂತ ಯೋಚನೆ ನಂಗೆ. ಕೊನೆಗೂ ಆ ಕಾಲ ಬಂದೇ ಬಿಡ್ತು. ಅದರ ಮೊದಲು ನಾನು ಇನ್ನೂ ಸ್ವಲ್ಪ ಇಲ್ಲಿನ ವಿಷಯ ಹೇಳೋದಿದೆ. ನಾನಿ ಬಗ್ಗೆ ಸ್ವಲ್ಪ ಬರೀತೀನಿ ಇಲ್ಲಿ.

ನಾನಿ ಒಬ್ಬ ಮುಸ್ಲಿಂ ಮಹಿಳೆ. ವಯಸ್ಸಾಗಿತ್ತು, ಆದರೂ ಚಟುವಟಿಕೆಯ ಹೆಂಗಸು ಆಕೆ. ಅಲ್ಲೇ ದವಾಖಾನೆಲೇ ಇರತಿದ್ಲು. ಅನಧಿಕೃತವಾಗಿ ಅಲ್ಲಿನ ಆಯಾ ಥರಾನೇ ಆಗಿ ಬಿಟ್ಟಿದ್ಲು. ಗರಗ ಆಸ್ಪತ್ರೆಯಲ್ಲಿ ಬರೀ ಒಬ್ಬ ಅಟೆಂಡರ್ ಮಾತ್ರ ಇದ್ದದ್ದು. ಹೀಗಾಗಿ ನಾನಿಯ ಇರುವಿಕೆ ಬಹಳೇ ಸಹಾಯಕವೇ ಆಗಿತ್ತು ಅಲ್ಲಿ. ಹೆರಿಗೆ ಕೇಸ್ ಗಳಲ್ಲಿ ಸಿಸ್ಟರ್ ಗೆ ಸಹಾಯಕಳೂ ಅವಳೇ. ದವಾಖಾನೆನ ಗುಡಿಸಿ, ಒರೆಸಿ ಸ್ವಚ್ಛ ಮಾಡೋಳೂ ಅವಳೇ. ಅಲ್ಲೇ ರೋಗಿಗಳ ಸಂಬಂಧಿಕರು ಕೊಡುವ ಊಟ ತಿಂಡಿ; ಇಲ್ಲಿ ವೈದ್ಯರ ಮನೆಯಲ್ಲಿ ಊಟ ಆಗ್ತಿತ್ತು, ತಿಂಡಿ ಚಹಾನೂ ನಡೀತಿತ್ತು.

ಆಸ್ಪತ್ರೆಯಲ್ಲೇ ಮಲಗ್ತಿದ್ಲು ಅವಳು ರಾತ್ರಿ. ಯಾರೇ ವೈದ್ಯಾಧಿಕಾರಿಗಳು ಬಂದ್ರೂ ಅವರ ಮನೆಗೆಲಸದ ಜವಾಬ್ದಾರಿ ತಾನೇ ವಹಿಸಿಕೊಂಡು ಬಿಡೋಳು ನಾನಿ. ಅಲ್ಲಿ ಸಿಗೋ ಸಂಬಳ, ದವಾಖಾನೆಯಲ್ಲಿ ರೋಗಿಗಳು, ಹೆರಿಗೆ ಮುಗಿಸಿಕೊಂಡು ಹೋಗುವ ಹೆಂಗಸರು ಕೊಡುವ ದುಡ್ಡು, ವೈದ್ಯಾಧಿಕಾರಿಗಳು ಕೊಡುವ (ಅವರ ಕೈಯಿಂದಲೇ) ಹಣ ಅವಳಿಗೆ ಆದಾಯವಾಗಿತ್ತು. ಹೀಗೇ ನಡಕೊಂಡು ಹೋಗ್ತಿತ್ತು ಅವಳ ಜೀವನ. ಅವಳು ಮಾಡುವ ಎಡವಟ್ಟು ಕೆಲಸಗಳಿಗೂ ಏನೂ ಕಮ್ಮಿ ಇರಲಿಲ್ಲ. ಒಮ್ಮೊಮ್ಮೆ ಕೋಪ ಬರೋದು, ಒಮ್ಮೊಮ್ಮೆ ನಗು. ಒಟ್ಟಿನಲ್ಲಿ ನಮಗೆ ಅವಳು – ಅವಳಿಗೆ ನಾವು, ಬಿಡದ ಗಂಟು!

ನನ್ನ ಭಾವನವರ ಮಗಳ ಬಾಣಂತಿತನದ ಸಮಯದಲ್ಲಿ ನಡೀತಿದು. ಆಕೆಯ ಹೆರಿಗೆ ಧಾರವಾಡದಲ್ಲಿ ಆಯ್ತು. ೮ನೇ ದಿನ ಗರಗಕ್ಕೆ ಕರೆದುಕೊಂಡು ಬಂದ್ವಿ ಅವಳನ್ನು, ಮಗುವಿನೊಂದಿಗೆ. ಎಲ್ಲಾ ತಯಾರಿ ಮಾಡಿದ್ದೆ. ಇದ್ದಿಲು ಒಂದು ಸಿಕ್ಕಿರಲಿಲ್ಲ. ಮಾರನೇ ದಿನ ತಂದು ಕೊಡುವುದಾಗಿ ಹೇಳಿದ್ಲು ಗಫಾರ್ ನ ಅಮ್ಮ. ಆದರೆ ನಾವು ಒಂದಿನ ಮೊದಲೇ ಕರೆದುಕೊಂಡು ಬಂದಾಗಿತ್ತು. ಆ ದಿನ ಸಂಜೆ ಮಗೂಗೆ ಲೋಬಾನ (ಸಾಂಬ್ರಾಣಿ) ಹಾಕಲು ಇದ್ದಿಲು ಬೇಕಾಗಿತ್ತು. ಅಲ್ಲೊಂದು ಚಿಕ್ಕ ಹೊಟೇಲ್ ಇತ್ತು, ಬಸ್ಸುಗಳು ನಿಲ್ಲೋ ಸ್ಥಳದ ಪಕ್ಕದಲ್ಲೇ. ಅವರು ಅಲ್ಲೇ ಹಿಂಭಾಗದಲ್ಲಿ ಒಲೆಯ ಮೇಲೆ ತಮಗೆ ಹೊಟೆಲ್ ಗೆ ಬೇಕಾಗುವ ತಿಂಡಿ – ತಿನಿಸು, ಚಹಾ ಮಾಡೋದು ನೋಡಿದ್ದೆ. ಅದಕ್ಕೇ ನಾನು ನಾನೀನ್ನ ಕರೆದು ಆ ಹೊಟಲ್ ಗೆ ಹೋಗಿ ಅವರ ಹತ್ರ ಕೇಳಿ ಇದ್ಲಿ ತಗೊಂಡು ಬಾ ಅಂತ ದುಡ್ಡು ಕೊಟ್ಟು ಕಳಿಸಿದೆ.

೬ ಗಂಟೆಗೆ ಕಳಿಸಿದ್ದು ಅವಳನ್ನು ೭ ಗಂಟೆಯಾದ್ರೂ ಪತ್ತೆ ಇಲ್ಲ! ನಮ್ಮ ನೆಗೆಣ್ಣಿ(ವಾರಗಿತ್ತಿ) ಗಡಿಬಿಡಿ ಶುರು ಆಯ್ತು- ‘ಸರೋಜಿನಿ ಇದ್ಲಿ ಎಲ್ಲೆದ? ಒಂಚೂರ ಕೆಂಡಾ ಮಾಡಿಕೊಡು. ಕೂಸಿಗೆ ಲೋಬಾನ ಹಾಕ್ತೀನಿ’ ಅಂತ. ‘ಐದ ನಿಮಿಷ ತಡೀರಿ. ಕೊಡ್ತಿನೀಗ’ ಅಂದೆ ನಾ. ಏನು ಮಾಡೋದು ತಿಳೀಲಿಲ್ಲ. ಮುಂದೆ ಹದಿನೈದು ನಿಮಿಷಗಳಾದ ಮೇಲೆ ಬಂದ್ಲು ನಾನಿ ಕೈ ಬೀಸಿಕೊಂಡು! ನಾ ಕೇಳೋ ಮೊದಲೇ ನನ್ನ ಸನ್ನೆ ಮಾಡಿ ಕರೆದ್ಲು. ಹೋದೆ, ಹೇಳಿದ್ಲು ನಾನಿ, ‘ಅಮ್ಮಾ ವಂಹಾ ನಯೀಗೇ, ಮಿರ್ಚಿ ಹೈ, ಭಜಿ ಹೈʼ ಅಂದ್ಲು. ನಂಗೆ ತಲೆ ಬುಡ ತಿಳೀಲಿಲ್ಲ.

‘ಮಿರ್ಚಿ, ಭಜಿ ಯಾಕ ಕೇಳ್ದಿ ನಾನಿ? ಇದ್ಲಿ ಬೇಕು’ ಅಂದೆ. ‘ವೋಚ ಗೇ ಮಾ, ಇಡ್ಲಿ ನಂಹಿ ಹೈ. ಮರ‍್ಚಿ ಹೈ ಭಜಿ ಹೈ’ ಅಂದ್ಲವಳು. ನಂಗೆ ನಗಬೇಕೋ, ಅಳಬೇಕೋ ತಿಳೀಲಿಲ್ಲ. ನಾ ‘ಇದ್ಲಿ’ ಅಂದಿದ್ದು ಅವಳು ‘ಇಡ್ಲಿ’ ಅಂತ ತಿಳಿದುಕೊಂಡು ಈ ಘೋಟಾಳಾ! ‘ನಾನಿ ಕೋಯಲಾಗೇ, ಇಡ್ಲಿ ನಂಹಿ ಚಾಹೀಯೇ. ಕೋಯಲಾಗೇ ಮಾ ಕೋಯಲಾ, ಇದ್ಲಿ’ ಅಂತ ಒತ್ತಿ ಒತ್ತಿ ಹೇಳಿ ನಗು ತಡೀಲಾರದೇ ಜೋರಾಗಿ ನಗಲಾರಂಭಿಸಿದೆ. ಯಾರಿಗೂ ಗೊತ್ತಾಗದಂತೆ ಕೆಲಸಾ ಮುಗಿಸ ಬೇಕು ಅನಕೊಂಡಿದ್ದೆ. ನಾನಿ ಗದ್ಲಾ! ಎಲ್ಲರಿಗೂ ಗೊತ್ತಾಗಿ ಹೋಯ್ತು. ನಕ್ಕಿದ್ದೇ ನಕ್ಕಿದ್ದು! ಪಕ್ಕದ ಮನೆ ಸಿಸ್ಟರ್ ಮಗು – ಬಾಣಂತೀನ ನೋಡೋಕೆ ಬಂದವ್ರು ‘ ವೈನೀ ನನ್ನ ಕೇಳಬಾರದೇನ್ರಿ? ನಾನಿ ಕೆಲಸ ಇಂಥಾವೇ. ನಮ್ಮನ್ಯಾಗ ಅದಾವ ತಡ್ರಿ. ಕಳಸ್ತೀನಿ ‘ ಅಂತ ಕಳಿಸಿ ಕೊಟ್ರು ನಾನಿ ಕೈಲೇ!

ಅಲ್ಲಿ ಗರಗದಲ್ಲಿ ನಮ್ಮ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣಕ್ಕೆ ನಲ್ಲಿ ಇನ್ನೂ ಬಂದಿರಲಿಲ್ಲ. ಊರಲ್ಲೂ ಅಷ್ಟೇ, ಅಲ್ಲೊಂದು ಇಲ್ಲೊಂದು ಇದ್ವು. ಆದರೆ ನೀರು ಹಂಗಂಗೇ. ಹೆಚ್ಚು ಕಡಿಮೆ ಎಲ್ಲರ ಮನೆಯಲ್ಲೂ ಬಾವಿ ಇದ್ವು. ಇಲ್ಲಿ ನಮ್ಮ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಇದ್ದ ಸಿಹಿನೀರಿನ ಬಾವಿ, ಅಲ್ಲಿರುವ ನಮ್ಮ ನಾಲ್ಕು ಮನೆಗಳಿಗೆ, ಆಸ್ಪತ್ರೆಗೆ, ಅಲ್ಲಿನ ಸಿಬ್ಬಂದಿಗೆ, ರೋಗಿಗಳಿಗೆ ತುಂಬಾ ದೊಡ್ಡ ಆಧಾರವಾಗಿತ್ತು. ನಲ್ಲಿ ಇಲ್ಲ ಎಂಬುದು ನಮ್ಮ ಅರಿವಿಗೇ ಬಂದಿರಲಿಲ್ಲ. ಅಷ್ಟು ಸಹಾಯಕವಾಗಿತ್ತು ನಮಗೆಲ್ಲಾ ಅದು. ಈ ಬಾವಿಲೀ ಒಂದು ದಿನ ರಾತ್ರಿ ಒಬ್ಬ ಹೆಣ್ಣು ಮಗಳು ಹಾರಿ ಆತ್ಮಹತ್ಯೆ ಮಾಡಿಕೊಂಡು ಬಿಟ್ಲು. ಬೆಳಿಗ್ಗೆ ನೀರು ಸೇದಲು ಹೋದ ರೋಗಿಯ ಸಂಬಂಧಿಕರೊಬ್ರು ಬಾವಿಯಲ್ಲಿ ಬೋರಲಾಗಿ ತೇಲುವ ಆ ಹೆಂಗಸಿನ ದೇಹವನ್ನು ನೋಡಿ, ಕಿರುಚಾಡಿದಾಗಲೇ ಗೊತ್ತಾಗಿದ್ದು ಎಲ್ಲರಿಗೂ. ನೀರಿನ ಹಾಹಾಕಾರ ಎದ್ದು ಬಿಟ್ತು. ದೊಡ್ಡ ಸಮಸ್ಯೆ ಆಯ್ತು ನೀರಿಂದು.

ಆಸ್ಪತ್ರೆಯ ಆವರಣದ ಇದಿರಿಗೆ, ಮಧ್ಯದಲ್ಲಿರುವ ರಸ್ತೆ ದಾಟಿ ಆ ಕಡೆ ಒಂದು ಬಾವಿ ಇತ್ತು. ಅಲ್ಲಿಂದ ನೀರು ತರಬೇಕಿತ್ತು. ಆ ನೀರು ಸ್ವಲ್ಪ ಸವುಳೂ ಇತ್ತು. ಆಸ್ಪತ್ರೆಯಲ್ಲಿನ ರೋಗಿಗಳಿಗೆ, ಸಿಬ್ಬಂದಿ ವರ್ಗಕ್ಕೆ , ಅಲ್ಲಿರುವ ಕುಟುಂಬಗಳಿಗೆ ದೊಡ್ಡ ತೊಂದರೆ ಆಯ್ತು. ಸುರೇಶ ಅವರ ಓಡಾಟ, ಈ ದವಾಖಾನೆ ಗಲಾಟೆಯ ಮಧ್ಯನೇ ಶುರು ಆಯ್ತು. ಎರಡು ಮೂರು ದಿನಗಳಲ್ಲಿ ಬೋರ್ ವೆಲ್ ಮಂಜೂರಾಗಿ ಕೆಲಸ ಶುರು ಆಯ್ತು. ೮ -೧೦ ದಿನಗಳಲ್ಲಿ ಆ ಬೋರ್ ವೆಲ್ ನ ನೀರು ನಲ್ಲಿ ಮುಖಾಂತರ ಎಲ್ಲ ಕಡೆ ಸರಬರಾಜೂ ಆಗಲಾರಂಭಿಸ್ತು. ಹೀಗೇ ದಿನಕ್ಕೊಂದು ಹೊಸ ಅನುಭವಗಳು, ಸಮಸ್ಯೆ- ಪರಿಹಾರಗಳ ಜೊತೆ ದಿನ ಸರಿಯುತ್ತಲೇ ಇದ್ವು ಗೊತ್ತೇ ಆಗದಂತೆ.

ಗರಗದಲ್ಲಿನ ಇನ್ನೆರಡು ವಿಷಯಗಳ ಬಗ್ಗೆ ಹೇಳದಿದ್ದರೆ ಈ ಬರವಣಿಗೆ ಅಪೂರ್ಣ. ನಾವಿದ್ದ ಗರಗ ಒಂದು ಪುಟ್ಟ ಗ್ರಾಮವಾದರೂ ಭಾರತದ ಭೂಪಟದಲ್ಲಿ ತನ್ನದೇ ಆದ ಒಂದು ವಿಶಿಷ್ಟ ಸ್ಥಾನ, ಮಾನವನ್ನು ಗಳಿಸಿಕೊಂಡಿದೆ ಅಂದರೆ ಅಚ್ಚರಿ ಪಡಬೇಕಿಲ್ಲ. ಅಂಥ ಊರಿನಲ್ಲಿ ನಾವಿದ್ದು ಬಂದುದು ನಮಗೆ ಹೆಮ್ಮೆ. ಈ ಪುಟ್ಟ ಗ್ರಾಮದ ಖಾದಿ ಗ್ರಾಮೋದ್ಯೋಗ ಸಂಸ್ಥೆಯಲ್ಲಿ ನಮ್ಮ ರಾಷ್ಪ್ರೀಯ ತ್ರಿವರ್ಣ ಧ್ವಜಕ್ಕೆ ಬೇಕಾಗುವ ಖಾದಿ ಬಟ್ಟೆಯನ್ನು ನೇಯುವ ನೇಕಾರರು ಇದ್ದಾರೆ. ಅದಕ್ಕೆ ಬೇಕಾಗುವ ನೂಲನ್ನು ಅದೇ ಊರಿನ, ಸುತ್ತಲಿನ ಹಳ್ಳಿಗಳ ಹೆಣ್ಣುಮಕ್ಕಳು ನೂತು ಕೊಡುತ್ತಾರೆ. ಅಲ್ಲಿನ ಎಷ್ಟೋ ಕುಟುಂಬಗಳ ಉಪಜೀವನದ ಆಧಾರವಾಗಿದೆ ಈ ಕೇಂದ್ರ. ಇದು ನಾರಾಯಣರಾವ ಕಬ್ಬೂರ, ಕರಮರಕರ, ನರಸಿಂಹ ಧಾಬಡೆಯವರಂತಹ ಕಟ್ಟಾ ಗಾಂಧಿ ಅನುಯಾಯಿಗಳಿಂದ ಸ್ಥಾಪಿತವಾದದ್ದು. ಇಲ್ಲಿ ತಯಾರಾದ ಬಟ್ಟೆಯಿಂದ ಹುಬ್ಬಳ್ಳಿಯ ಬೆಂಗೇರಿ ಖಾದಿ ಗ್ರಾಮೋದ್ಯೋಗ ಕೇಂದ್ರದಲ್ಲಿ ರಾಷ್ಟ್ರೀಯಧ್ವಜ ಕೆಲವೊಂದು ನಿಯಮಗಳನುಸಾರ ತಯಾರಾಗಿ ಮತ್ತೆ ಗರಗದ ಖಾದಿ ಭಾಂಡಾರಕ್ಕೆ ಬಂದು, ಅಲ್ಲಿಂದ ದೇಶಾದ್ಯಂತ ಮಾರಾಟವಾಗ್ತವೆ. ಕೆಂಪು ಕೋಟೆಯ ಮೇಲೆ, ಪಾರ‍್ಲಿಮೆಂಟ್ ಮೇಲೆ ಹಾರಾಡುವ ರಾಷ್ಟ್ರಧ್ವಜದ ತವರು ಈ ಪುಟ್ಟ ಗ್ರಾಮ ಗರಗ.

ಈಗೀಗ ಕಾರ್ಮಿಕರ ತೊಂದರೆ ಕಂಡು ಬರುತ್ತಿರುವುದಾಗಿ ಕೇಂದ್ರದ ಸಂಘಟಕರ ಹೇಳಿಕೆ. ಯಾವುದೇ ಅನುದಾನವಿಲ್ಲದೇ ನಡೆಯುವ ಖಾದಿ ಗ್ರಾಮೋದ್ಯೋಗ ಕೇಂದ್ರ ಇದಾಗಿತ್ತು ನಾವಲ್ಲಿದ್ದಾಗ. ಈಗಿನ ಬೆಳವಣಿಗೆ ಹೇಗೇಂತ ಗೊತ್ತಿಲ್ಲ ನಂಗೆ.

ಇಲ್ಲಿನ ಇನ್ನೊಂದು ಪ್ರಸಿದ್ಧ, ನೋಡಲೇ ಬೇಕಾದ ಸ್ಥಳವೆಂದರೆ ಗರಗದ ಮಡಿವಾಳೇಶ್ವರ ದೇವಸ್ಥಾನ, ಪಕ್ಕದಲ್ಲೇ ಇರುವ ಮಡಿವಾಳಜ್ಜನ ಮಠ. ಮಡಿವಾಳೇಶ್ವರ ಅಜ್ಜನವರು ಪವಾಡ ಪುರುಷರು. ಹುಬ್ಬಳ್ಳಿಯ ಸಿದ್ಧಾರೂಢ ಸ್ವಾಮಿಗಳ ಸಮ ಕಾಲೀನರು. ಆ ಮಠದ ಜಾತ್ರಾಮಹೋತ್ಸವ ಭಾರತಹುಣ್ಣಿಮೆ ಸಮಯದಲ್ಲಿ ನಡೀತದೆ. ಅಂದರೆ ಹೆಚ್ಚಾಗಿ ಫೆಬ್ರವರಿಲೀ. ಸುಮಾರು ಒಂದು ವಾರದ ಸಂಭ್ರಮ ಅದು. ಆಗ ನಡೆಯುವ ಕುಸ್ತಿ ಪಂದ್ಯಗಳು ಆ ಜಾತ್ರೆಗೆ ಒಂದು ವೈಶಿಷ್ಟ್ಯತೆ ತಂದು ಕೊಟ್ಟಿವೆ ಅಂದರೆ ತಪ್ಪಿಲ್ಲ. ಯಾವಾಗಲೂ ಅನ್ನದಾಸೋಹ ನಡೆಯುವ ಮಠ ಇದು. ಬಂದ ಭಕ್ತರನ್ನು ಹಸಿದ ಹೊಟ್ಟೆಯಲ್ಲಿ ಕಳಿಸದ, ಆಪ್ತತೆಯಲ್ಲಿ ಮೀಯಿಸುವ ಪ್ರಶಾಂತ ಸ್ಥಳ ಅದು. ವಾರಕ್ಕೊಮ್ಮೆ ನಮ್ಮ ಭೇಟಿ ತಪ್ಪದೇ ಅಲ್ಲಿದ್ದೇ ಇರುತ್ತಿತ್ತು, ಸ್ವಲ್ಪ ತಡವಾಗಿಯಾದರೂ.

ನನ್ನ ಮಗಳ ಎಸ್.ಎಸ್.ಎಲ್.ಸಿ. ಮುಗೀತು. ಕೇಂದ್ರಕ್ಕೆ ಮೊದಲಿಗಳಾಗಿ ೯೦% ಅಂಕಗಳೊಂದಿಗೆ ಪಾಸ್ ಆಗಿದ್ಲು, ಅಷ್ಟೊಂದು ತೊಂದರೆಗಳಿದ್ರೂ. ಅವಳು ಹತ್ತನೇ ತರಗತಿಗೆ ಬಂದು ಸ್ವಲ್ಪೇ ದಿನಗಳಲ್ಲಿ ಅವಳಿಗೆ ಜೋರು ಜ್ವರ ಶುರು ಆಯ್ತು. ಕೋಚಿಂಗ್ ಸಲುವಾಗಿ ಬೆಳಗಿನ ೭.೩೦ ಬಸ್ಸಿಗೆ ಹೊರಟು ಸ್ಕೂಲ್ ಮುಗಿಸಿ, ಒಟ್ಟಿಗೇ ಸಾಯಂಕಾಲ ೬.೩೦ ಗೆ ಬರೋಳು ಮನೆಗೆ. ಅವಳ ಜೊತೆಗೇ ನನ್ನ ಚಿಕ್ಕ ಮಗನೂ ಅಷ್ಟೊತ್ತಿಗೆನೇ ಹೋಗ್ತಿದ್ದ ಅವಳೊಬ್ಬಳೇ ಹೋಗಬೇಕಾಗ್ತಿತ್ತು ಅಂತ. ಹೀಗಾಗಿ ಎರಡೂ ಮಕ್ಕಳು ಸುಸ್ತಾಗಿ ಬಿಡೋವು. ಮಳೆ ಬೇರೆ. ಆದರೆ ಬೇರೆ ದಾರಿ ಇರಲಿಲ್ಲ. ಈ ಥರದ ಕ್ಷಣ ಬಿಡುವಿಲ್ಲದ ಓಡಾಟದ ದಣಿವಿಗೆ ಜ್ವರ ಬಂತೋ ಏನೋ! ಅದು ಅಷ್ಟಕ್ಕೇ ನಿಲ್ಲದೇ ಟೈಫಾಯ್ಡಗೆ ತಿರುಗಿ, ಮೂರು ಸಲ ತಿರು ತಿರುಗಿ ಬಂದು ತುಂಬಾ ತೊಂದರೆ ಆಯ್ತು ಅವಳಿಗೆ. ದೇವರ ದಯೆ- ಈ ಎಲ್ಲಾ ತೊಂದರೆ, ಗಲಾಟೆಗಳ ನಡುವೆ ಅವಳು ಚೆನ್ನಾಗಿ ಮಾಡಿದ್ಲು. ಧಾರವಾಡದ ಜೆ.ಎಸ್.ಎಸ್. ಕಾಲೇಜು ಸೇರಿದ್ಲು ಅವಳು ಗರಗದಿಂದ ಓಡಾಡಲು ಅನುಕೂಲ ಅಂತ. ಈಗಲೂ ಅಷ್ಟೇ; ಬೆಳಿಗ್ಗೆ ೮ ರ ಬಸ್ಸಿಗೆ ಹೊರಟ್ರೆ ಸಂಜೆ ವಾಪಸ್ಸು ಬರೋದು ತುಂಬಾ ತಡ ಆಗೋದು.

ಒಂದೊಂದು ದಿನ ಎಂಟು ಗಂಟೆ ಆಗ್ತಿತ್ತು. ದಣಿದು ಬಿಡ್ತಿದ್ಲು. ಹೀಗಾದ್ರೆ ಓದೋದು ಯಾವಾಗ ? ಆಕೆ ನಾ ಎಲ್ಲ ನಿಭಾಯಿಸ್ತೀನಿ, ಇಲ್ಲಿಂದಲೇ ಓಡಾಡ್ತೀನಿ ಅಂದ್ಲು. ತಮ್ಮ ಅಪ್ಪನಿಗೆ ತೊಂದರೆ ಆಗಬಾರದು ಅನ್ನೋದು ಅವಳ ಇರಾದೆ. ಚಿಕ್ಕ ಮಗನೂ ಈ ಸಲ ಒಂಬತ್ತನೇ ಕ್ಲಾಸ್ ನಲ್ಲಿದ್ದ. ಬರೋ ವರ್ಷ ಆತಂದೂ ಎಸ್.ಎಸ್.ಎಲ್.ಸಿ. ಕೋಚಿಂಗ್ ವಗೈರೆ ತುಂಬಾ ತೊಂದರೆ ಆಗೋದು ಅಂತ ಗೊತ್ತೇ ಆಗಿತ್ತು ಮಗಳ ಅನುಭವದಿಂದ.

ದೊಡ್ಡ ಮಗಂದೂ ಧಾರವಾಡ SDM Engineering ಕಾಲೇಜಿಗೆ ಒಂದನೇ ಸೆಮಿಸ್ಟರ್ ಗೆ ಅಡ್ಮಿಷನ್ ಆಗಿತ್ತು. ಎಲ್ಲರನ್ನೂ ಹಾಸ್ಟೆಲ್ನಲ್ಲಿ ಬಿಡೋದು ಸರಿಯಲ್ಲ ಇಷ್ಟು ಹತ್ರದಲ್ಲಿದ್ದು ಅಂತ ನನ್ನ ವಿಚಾರ. ಆಗಾಗ ಮನದಲ್ಲಿ ಸುಳಿಯುತ್ತಿದ್ದ ವಿಚಾರಕ್ಕೊಂದು ಮುಹೂರ್ತ ರೂಪ ಕೊಟ್ಟು ಧಾರವಾಡ ದತ್ತ ಪ್ರಸ್ಥಾನ ಖಾತ್ರಿ ಆದಂತಾಯ್ತು. ಅಲ್ಲೇ ಮಾಳಮಡ್ಡಿಯಲ್ಲಿನ ಕೇಶವನಗರದಲ್ಲಿ ವುಡ್ ಸೈಡ್ ಅಪರ‍್ಟ್ಮೆಂಟ್ ನಲ್ಲಿ ಒಂದನ್ನು ಬಾಡಿಗೆಗೆ ತಗೊಂಡು ೪-೫ ದಿನಗಳಲ್ಲಿ ಹೊರಡೋದಿತ್ತು. ಆಗಲೇ ಶಾಲೆ – ಕಾಲೇಜು ಶುರು ಆಗಿದ್ವು. ಬರೋ ವಾರದಿಂದ ದೊಡ್ಡ ಮಗನ ಒಂದನೇ ಸೆಮಿಸ್ಟರ್ ನ ಕ್ಲಾಸ್ ಶುರು ಆಗೋದಿತ್ತು. ಅದಕ್ಕೇ ಗಡಿಬಿಡಿಯಲ್ಲಿ ಹೊರಟಾಯ್ತು. ಪ್ಯಾಕಿಂಗ್ ಶುರು ಮಾಡಿದ್ವಿ. ಸುರೇಶ ಅವರು ಗರಗದಲ್ಲಿ; ನಾನು ಮಕ್ಕಳು ಧಾರವಾಡದಲ್ಲಿ. ಬೇರೆ ದಾರಿ ಇರಲಿಲ್ಲ. ಹೀಗಾಗಿ ನಾನು- ನನ್ನ ಮಕ್ಕಳು ಗರಗದಲ್ಲಿ ಇದ್ದದ್ದು ಬರೋಬ್ಬರಿ ಮೂರು ವರ್ಷ!

ಪ್ಯಾಕಿಂಗ್ ಶುರು ಮಾಡಿದ್ದೆ. ಆದರೆ ನನಗೆ ಇಬ್ಬಂದಿ. ಇಲ್ಲಿ ಸುರೇಶ ಅವರನ್ನು ಒಬ್ಬರನ್ನೇ ಬಿಟ್ಟು ಹೋಗಬೇಕಾದ ಅನಿವಾರ್ಯತೆ. ಅವರಿಗೆ ಧಾರವಾಡದಿಂದ ಓಡಾಡುವದಂತೂ ಸಾಧ್ಯವಿಲ್ಲದ ಮಾತು. ಒಬ್ಬರೇ ವೈದ್ಯರು ಇವರು ಅಲ್ಲಿರೋದು. ಪುಟ್ಟ ಕುಗ್ರಾಮವೇ ಗರಗ ಕೂಡಾ. ಹೊರಗೆಲ್ಲೂ ಊಟ- ತಿಂಡಿ ವ್ಯವಸ್ಥೆ ಸಾಧ್ಯವಿಲ್ಲದ ಸಂಗತಿ. ಹೇಗ್ಹೇಗೆ ವಿಚಾರ ಮಾಡಿದ್ರೂ ಯಾವುದೇ ದಾರಿ ಹೊಳೆಯಲೇ ಇಲ್ಲ. ಊಟ – ತಿಂಡಿ ಮಾಡಿಟ್ಟುಕೊಂಡು ದಾರಿ ಕಾಯ್ತಿದ್ರೂ ಬಂದು ತಿಂದು ಹೋಗಲೂ ಸಮಯ ಇಲ್ಲದಷ್ಟು ಕೆಲಸ. ಕುಡೀತಿರುವ ಚಹಾ ಅರ್ಧಕ್ಕೆನೇ ಬಿಟ್ಟು ಹೋದ ಸಂದರ್ಭಗಳಿಗೇನೂ ಕೊರತೆ ಇರಲಿಲ್ಲ.

ಇನ್ನು ತಾವೇ ಮಾಡಿಕೊಂಡು ತಿನ್ನೋದಂತೂ ದೂರದ ವಿಷಯ, ಯೋಚಿಸಲೂ ಆಗದ್ದು. ಧಾರವಾಡಕ್ಕೇ ಮನೆ ಮಾಡಿ ಇರೋದೂ ಅತ್ಯಾವಶ್ಯಕವಾಗಿತ್ತು ಮಕ್ಕಳ ಭವಿಷ್ಯದ ದೃಷ್ಟಿಯಿಂದ. ಇಲ್ಲಿ ನನ್ನ ಪತಿಯನ್ನು ಒಬ್ಬರನ್ನೇ ಬಿಟ್ಟು ಹೋಗೋದೂ ನನಗೆ ಅಸಾಧ್ಯ ಎನಿಸುತ್ತಿತ್ತು. ಆಗ ಅಲ್ಲಿನ ಆಸ್ಪತ್ರೆಯ ಸಿಬ್ಬಂದಿ ಒಬ್ಬರು ಕುಲಕರ್ಣಿ ಅಂತ, ಅವರ ಮನೆ ಅಲ್ಲೇ ಇತ್ತು. ಅವರು – ‘ವೈನೀ ನಾ ಡಬ್ಬಿ ತಂದು ಕೊಡ್ತೀನಿ ಸಾಹೇಬ್ರಿಗೆ. ನೀವೇನೂ ವಿಚಾರ ಮಾಡಬ್ಯಾಡ್ರಿ. ಒಂಚೂರೂ ಕಾಳಜಿ ಮಾಡಬ್ಯಾಡ್ರಿ. ಅಗದೀ ಆರಾಮ ಇರತಾರ ಸಾಹೇಬರು ಇಲ್ಲಿ. ಅವರ ಕಾಳಜಿ ನನಗ ಬಿಟ್ಟಬಿಡ್ರಿ ನೀವು’ ಅಂದ್ರು. ಆದರೆ ಇದು ಒಂದಿನ, ಎರಡು ದಿನಗಳ ಮಾತಲ್ಲ. ಅದೆಲ್ಲಾ ಸರಿ ಹೋಗೋ ಮಾತಲ್ಲ ಅನಿಸ್ತು. ಅವರೂ ಇಬ್ಬರೂ ಕೆಲಸಕ್ಕೆ ಹೋಗೋರು, ಮನೆಯಲ್ಲಿ ವಯಸ್ಸಾದ ತಾಯಿ, ಇಬ್ಬರು ಮಕ್ಕಳು. ಕೊನೆಗೆ ಸುರೇಶ ತಾವೇ ಅಡಿಗೆ ಮಾಡಿಕೊಳ್ಳೋದಾಗಿ ಹೇಳಿದರು. ಯಾವಾಗ ಆಗದೇ ಇರೋ ಅಂಥಾ ಪರಿಸ್ಥಿತಿ ಬಂದರೆ ಕುಲರ‍್ಣಿ ಯವರ ಮನೆಯ ಡಬ್ಬಿ ಅಂತೂ ಇದ್ದೇ ಇರತದೆ ಅಂದಾಗ ನಾ ಒಪ್ಪಲೇ ಬೇಕಾಯ್ತು, ಇದೆಷ್ಟರ ಮಟ್ಟಿಗೆ ಸಾಧ್ಯವೋ ದೇವರೇ ಬಲ್ಲ ಎಂಬ ಅರೆಮನಸಿನೊಂದಿಗೆ.

ಆ ಪ್ರಕಾರ ಸುರೇಶ ಅವರ ಅನುಕೂಲಕ್ಕೆ ತಕ್ಕ ಹಾಗೆ ಅಡಿಗೆ ಮನೆ ಹೊಂದಿಸಿದ್ದಾಯ್ತು. ಒಂದು ಪುಟ್ಟ ಕುಕ್ಕರ್, ಸ್ಟೌ ಎಲ್ಲಾ ಖರೀದಿ ಆಯ್ತು. ವಾರಕ್ಕೊಂದು ಸಲ ಬಂದು ಹೋಗೋದಾಗಿ ಹೇಳಿದರು ನನ್ನ ಪತಿ. ಎಷ್ಟು ಸಾಧ್ಯವೋ ಅಷ್ಟು ತಿಂಡಿಗಳನ್ನು, ಅಂದರೆ, ಅವಲಕ್ಕಿ, ಚುರಮುರಿ, ಚೂಡಾ, ಉಂಡಿಗಳು ಇಂಥವನ್ನು ಮಾಡಿ ಡಬ್ಬಿಗಳಲ್ಲಿ ತುಂಬಿಸಿಟ್ಟು ಲೇಬಲ್ ಹಚ್ಚಿ ಅಲ್ಲೇ ಕಿಚನ್ ಟೇಬಲ್ ನ ಶೆಲ್ಫ್ ಗಳಲ್ಲಿ ಜೋಡಿಸಿಟ್ಟೆ. ಹಾಗೇ ಅಡಿಗೆಗೆ ಬೇಕಾಗುವ ಎಲ್ಲ ಸಾಮಾನುಗಳು, ಮಸಾಲೆ ಪುಡಿ, ಚಟ್ನಿಪುಡಿ, ಮೆಂತ್ಯ ಹಿಟ್ಟು, ಉಪ್ಪಿನಕಾಯಿ – ಪ್ರತಿಯೊಂದಕ್ಕೂ ಲೇಬಲ್ ಅಂಟಿಸಿ ಜೋಡಿಸಿದ್ದಾಯ್ತು ಎಲ್ಲವನ್ನೂ ಕಿಚನ್ ಟೇಬಲ್ ನಲ್ಲೇ. ಇದರ ಜೊತೆಗೆ ನಮ್ಮ ಪ್ಯಾಕಿಂಗ್! ಸುಸ್ತಾಗಿ ಹೋದೆ ನಾ; ದೈಹಿಕವಾಗಿ, ಮಾನಸಿಕವಾಗಿ. ಆದರೆ ಅನಿವರ‍್ಯ. ಇದೂ ಅಲ್ಲದೇ ಧಾರವಾಡದಲ್ಲಿ ಎಲ್ಲವನ್ನೂ ಒಬ್ಬಳೇ ನಿಭಾಯಿಸಲು ತಯಾರಾಗಬೇಕಿತ್ತು. ಬೇರೆ ದಾರಿ ಇರಲಿಲ್ಲ. ಮಕ್ಕಳ ಭವಿಷ್ಯದ ಮುಂದೆ ಎಲ್ಲಾ ಗೌಣ ಅನಿಸಿತ್ತು ಆ ಕ್ಷಣಕ್ಕೆ. ಅದು ಸತ್ಯವೂ ಹೌದು!

ಕೊನೆಗೂ ಆ ದಿನ ಬಂದೇ ಬಂತು – ಹೊರಟು ನಿಂತ್ವಿ ನಾನು, ನನ್ನ ಮಕ್ಕಳು ಧಾರವಾಡಕ್ಕೆ , ನನ್ನ ಪತಿಯನ್ನು ಅಲ್ಲೇ ಗರಗದ ಆಸ್ಪತ್ರೆ, ಆಸ್ಪತ್ರೆಯ ಸಿಬ್ಬಂದಿ, ರೋಗಿಗಳೊಡನೆ ಬಿಟ್ಟು. ನಮ್ಮ ಭಾವನ ಮಗಳು ಆಗ ಮೂರೂವರೆ ತಿಂಗಳ ಬಾಣಂತಿ. ಆ ಕೂಸು ಹಾಗೂ ಅವಳನ್ನೂ ಜೊತೆಗೆ ಕರೆದುಕೊಂಡು ಬದುಕಿನ ಇನ್ನೊಂದು ಹೊಸ ಪುಟ ತೆರೆಯಲು ಧಾರವಾಡದತ್ತ ಸಾಗಿತು ನಮ್ಮ ಪಯಣ ಕೇಶವನಗರದ ವುಡ್ ಸೈಡ್ ಅಪಾರ್ಟ್ಮೆಂಟ್ ನತ್ತ!

| ಇನ್ನು ನಾಳೆಗೆ |

‍ಲೇಖಕರು Admin

September 5, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: