ಸಾವಿತ್ರಿ ’ಸಿರಿಪದ’

ಡಾ.ಕೆ. ಸಾವಿತ್ರಿ ನೆನಹಿನ ಪಲ್ಲವಿ….. ಪ್ರಭು ಶಕ್ತಿ ಮತ್ತು ಜನಶಕ್ತಿ ಸದಾ ಮುಖಾಮುಖಿ ಆಗುತ್ತಲೇ ಇವೆ. ವಾಗ್ವಾದ ನಡೆಸುತ್ತಲೆ ಇವೆ.ಇಂಥ ವಾಗ್ವಾದಗಳಿಗೆ ಅಪರೂಪಕ್ಕೊಮ್ಮೆ ಮಾಧ್ಯಮಗಳು ಸ್ಪಂದಿಸುವುದು ಆರೋಗ್ಯಪೂರ್ಣ ಬೆಳವಣಿಗೆ. ಉದ್ಯಮ ಜಗತ್ತಿನ ತುತ್ತೂರಿಗಳಾಗಿಯೇ ಉಸಿರಾಡಬೇಕಾದ ಹೆಚ್ಚಿನ ಮಾಧ್ಯಮಗಳು ಪ್ರಭುಶಕ್ತಿಗೆ ದೊಗ್ಗುಸಲಾಮು ಹಾಕುತ್ತಲೇ ಇದ್ದರೆ, ಅದರಲ್ಲಿ ವಿಶೇಷತೆ ಇಲ್ಲ. ಆದರೆ ಅದನ್ನು ಮೀರಿ ಜನಶಕ್ತಿಗೆ ಧ್ವನಿಯಾಗುವ ಮಾಧ್ಯಮಗಳು ಕೆಲವಾದರೂ ಇರುವುದರಿಂದ ಇಂದು ತಳಸಮುದಾಯದ ಧ್ವನಿಗಳು ವಾಗ್ವಾದ ನಡೆಸಲು ಸಾಧ್ಯವಾಗಿ ಪ್ರಭುಶಕ್ತಿ ಬಿಂಬಿಸುವ ಜನಶಕ್ತಿಯ ಇನ್ನೊಂದು ಮುಖ ಕಾಣುವಂತಾಗಿದೆ. ಇದು ಮುಂದೆ ಸಹಜ ಚರಿತ್ರೆಯನ್ನು ಕಟ್ಟಬಯಸುವವರಿಗೆ, ಮೆಟ್ಟಿಲಾಗುತ್ತದೆ. ಈ ಹಿನ್ನಲೆಯಲ್ಲಿ ನನ್ನ ಅಧ್ಯಯನದ ಅಭಿವ್ಯಕ್ತಿಗೆ ಆಸ್ಪದ ನೀಡಿದ ವಾರ್ತಾ ಭಾರತಿ ದೈನಿಕದ ಸಂಪಾದಕ ಎ.ಎಸ್.ಪುತ್ತಿಗೆ ಮತ್ತು ಅವರ ಪತ್ರಿಕಾ ಬಳಗಕ್ಕೆ ನನ್ನ ಕೃತಜ್ಞತೆಗಳು. ವಾರ್ತಾ ಭಾರತಿಯಲ್ಲಿ ಅಂಕಣ ಬರೆಯಬೇಕೆಂಬ ಸಲಹೆ ಆತ್ಮೀಯರಾದ ಬಿ.ಎಂ.ಬಶೀರ್ ಅವರಿಂದ ಬಂದಾಗ ಸಂತೋಷ ಮತ್ತು ಸಮಸ್ಯೆ ಎರಡೂ ನನ್ನನ್ನು ಕಾಡಿತು. ಆದರು ಹುಚ್ಚು ಧೈರ್ಯದಿಂದ ಒಪ್ಪಿದೆ. ಈ ಅಂಕಣ ಸ್ತ್ರೀಯರ ಸಾಧನೆಗೆ ಬೆಳಕು ಚೆಲ್ಲಲಿ ಎಂಬ ಅವರ ಅಭಿಪ್ರಾಯವನ್ನು ಸ್ವೀಕರಿಸಿದೆ. ಪತ್ರಿಕೆಯ ಪ್ರಧಾನ ಉಪಸಂಪಾದಕರೂ ಆದ ಅವರೇ ಅಂಕಣಕ್ಕೆ ’ಸಿರಿಪದ’ ಎಂಬ ಹೆಸರು ಸೂಚಿಸಿದರು. ಅದೂ ನನಗೆ ಖುಷಿ ಕೊಟ್ಟಿದೆ, ೧೮ನೇ ಫೆಭ್ರವರಿ ೨೦೦೮ ರಂದು ಆರಂಭವಾದ ಅಂಕಣ ಇನ್ನೂ ಮುಂದುವರೆದಿದೆ. ಮೊದಲ ಅಂಕಣಗಳು ’ಚರಿತ್ರೆಯ ಐಸಿರಿ’ ಕೃತಿ ರೂಪದಲ್ಲಿ ತಮ್ಮ ಕೈಸೇರಿದೆ. ಚರಿತ್ರೆಯ ಹನ್ನೊಂದು, ತುಳು ಜನಪದ ಹತ್ತು, ಆಧುನಿಕ ಪ್ರಪಂಚದ ಹದಿನಾರು, ಕಾವ್ಯಪುರಾಣಲೋಕದ ಹದಿಮೂರು, ಒಟ್ಟು ಐವತ್ತು ಮಹಿಳಾ ಸಾಧಕಿಯರ ಸಾಧನೆಗೆ ಯಥಾಶಕ್ತಿ ಬೆಳಕು ಚೆಲ್ಲುವ ಪ್ರಯತ್ನ ಮಾಡಿರುವೆ. ಚರಿತ್ರೆಯ ಅರ್ಧಸತ್ಯವನ್ನು ಪೂರ್ಣ ಸತ್ಯದೆಡೆಗೆ ಸಾಗಿಸುವ ನನ್ನ ಕಿರು ಪ್ರಯತ್ನದಲ್ಲಿ ಯಶಸ್ಸೆಷ್ಟು ಎನ್ನುವುದು ಓದುಗರಿಗೆ ಬಿಟ್ಟದ್ದು ಆದರೆ ನನ್ನ ಈ ಕಿರು ಪ್ರಯತ್ನ ಮುಂದಿನ ಚರಿತ್ರೆಯ ಅಧ್ಯಯನಕ್ಕೆ ಪ್ರೇರಣೆ ನೀಡಿದರೆ ನನಗೆ ಸಂತೋಷ. ಪ್ರಪಂಚದ ಜನಶಕ್ತಿಯ ಅರ್ಧದಷ್ಟಿರುವ ಸ್ತ್ರೀಯರ ಶಕ್ತಿ ಮತ್ತು ಮಿತಿಗಳು ಚರಿತ್ರೆಯ ಅಭ್ಯಾಸದ ಕಕ್ಷೆಗೆ ಸೇರುತ್ತಾ ಆಕರಗಳಾಗಬೇಕು, ಎನ್ನುವುದು ನನ್ನ ಅಭಿಮತ. ಈ ಆಲೋಚನೆಯ ಮೂಲದಿಂದಲೇ ಸ್ತ್ರೀಭೂತಗಳು ಒಂದು ಚಾರಿತ್ರಿಕ ಅಧ್ಯಯನ ಎಂಬ ವಿಷಯವನ್ನು ಎತ್ತಿಕೊಂಡು ನಾನು ಮೈಸೂರು ವಿಶ್ವವಿದ್ಯಾನಿಲಯಕ್ಕೆ ೨೦೦೩ರಲ್ಲಿ ಸಲ್ಲಿಸಿದ ಸಂಪ್ರಬಂಧಕ್ಕೆ ಪಿಹೆಚ್‌ಡಿ ಪದವಿ ದೊರೆಯಿತು. ಅದರಿಂದ ಉತ್ತೇಜಿತಳಾಗಿ ಅಧ್ಯಯನ ಮುಂದುವರೆಸಿದೆ. ಅದರ ಪರಿಣಾಮವಾಗಿ ತುಳುವರ ಚರಿತ್ರೆಯಲ್ಲಿ ಭೂತಾರಾಧನೆಯೆಂದು ಅಪಮೌಲ್ಯಗೊಂಡ ಅವರ ನಂಬಿದ ಸತ್ಯಗಳ ಚರಿತ್ರೆಯನ್ನು ಕೃತಿರೂಪದಲ್ಲಿ ಕೆ.ಎಸ್. ಮುದ್ದಪ್ಪ ಸ್ಮಾರಕ ಟ್ರಸ್ಟ್‌ನ ಮುದ್ದುಶ್ರೀ ಗ್ರಂ ಥಮಾಲೆ (೨೦೦೬)ಯಲ್ಲಿ ಪ್ರಕಟಿಸಿದರು.ಇದಕ್ಕೆ ಕಾರಣರಾದವರು ಸಂಶೋಧಕ, ಪ್ರಕಾಶಕ, ಕಲಾವಿದ, ಅಧ್ಯಾಪಕರೂ ಆದ ಡಾ.ಎಂ.ಬೈರೇಗೌಡ. ಅವರ ಒತ್ತಾಸೆಯಿಂದಲೇ ಈ ಕೃತಿ ಕೂಡಾ ಬೆಳಕು ಕಾಣುತ್ತಿದೆ. ಪ್ರದತಿ ಗ್ರಾಫಿಕ್‌ನ ಪ್ರಕಾಶನ ಬಳಗಕ್ಕೆ ಚಿರಋಣಿ. ಮುಖಚಿತ್ರ ರಚಿಸಿದ ಕಲಾವಿದ ಶಿವು ಹೂಗಾರ್, ಹಿಂಬದಿ ರಕ್ಷಾಪುಟದಲ್ಲಿ ಬಳಸಿರುವ ನನ್ನ ಫೋಟೋ ತೆಗೆದ ಭಾಸ್ಕರ್ ಅಮ್ಟೂರ್ ಅವರಿಗೂ ಕೃತಜ್ಞತೆಗಳು. ಸಿರಿಪದ ಪ್ರಕಟವಾಗುತ್ತಿರುವ ಸಂದರ್ಭದಲ್ಲಿ ಆಗಾಗ ಓದಿ ಮೆಚ್ಚುಗೆ ವ್ಯಕ್ತಪಡಿಸಿ, ವಿಶ್ಲೇಷಿಸುತ್ತಾ, ಸ್ಪೂರ್ತಿ ನೀಡಿದ ಹಿರಿಯ ಸಾಮಾಜಿಕ ಮುಖಂಡ ಗೋಕುಲ ದಾಸ್ ಅವರಿಗೆ ಅನಂತ ವಂದನೆಗಳು. ಈ ಅಂಕಣದಲ್ಲಿನ ’ನಿಸರ್ಗ ಚಿಂತನೆ ತಾಟಕಿಯ ಅಮಾನುಷ ಕಗ್ಗೊಲೆ’ ಲೇಖನವನ್ನು ಓದಿ ಲಂಕೇಶ್ ಪತ್ರಿಕೆಯಲ್ಲಿ ಕವನ ಕಟ್ಟಿಸಿದ ಸಿ.ಕೆ.ರವೀಂದ್ರಕುಮಾರ್, ’ಸಮಾಜ ಶಿಕ್ಷಕಿ ತನ್ನಿಮಾನಿಗಳ ಚಾರಿತ್ರಿಕ ಬಂಡಾಯ’ ಲೇಖನದ ಇತಿಮಿತಿಗಳನ್ನು ಪ್ರಶ್ನಿಸಿದ ರಘುನಾಥ ಎಂ. ವರ್ಕಾಡಿ ಮಂಜೇಶ್ವರ ಅವರಿಗೂ ನನ್ನ ಲೇಖನಗಳನ್ನು ಓದಿ ಮೆಚ್ಚುಗೆಯನ್ನೂ, ಆತ್ಮೀಯ ಪ್ರತಿಕ್ರಿಯೆಯನ್ನು ನೀಡಿದ ನನ್ನೆಲ್ಲಾ ಹಿತೈಷಿಗಗಳು, ವಿಮರ್ಶಕರನ್ನು ನೆನೆಯುವುದು ನನ್ನ ಕರ್ತವ್ಯ. ನನ್ನ ಬರಹಕ್ಕೆ ಸದಾ ಸ್ಪೂರ್ತಿಯ ಸೆಲೆಯಾಗಿರುವ ಮಗ ಸಚಿತ್, ಸಾಗರ ಸಂಗಾತಿಯಾಗಿ ಪ್ರಪಂಚ ಸುತ್ತುತ್ತಿರುವಾಗಲೂ; ಮಗಳು ಶ್ರೇಯಸ್ ವೈದ್ಯೆಯಾಗಿ ಬಿಡುವಿಲ್ಲದ ಒತ್ತಡದಲ್ಲೂ ನನ್ನ ಬರವಣಿಗೆಗೆ ಒತ್ತಾಸೆಯಾಗಿದ್ದಾರೆ. ನನ್ನ ತಂಗಿ ನ್ಯಾಯವಾದಿ ಶೈಲಜಾಳ ಸ್ಫೂರ್ತಿಯೂ ನನ್ನ ಯಶಸ್ವಿನಲ್ಲಿ ಬಹಳಷ್ಟು ಕಾರಣ ಎನ್ನುವುದನ್ನು ಮರೆಯಲಾರೆ. ಚರಿತ್ರೆಗೆ ಆಕರಗಳನ್ನು ಮೌಖಿಕ ಪರಂಪರೆಯ ಜನಪದದಿಂದ ಎತ್ತಿಕೊಳ್ಳುವಾಗ ಅದಕ್ಕೆ ಹಲವು ಪಠ್ಯಾಂತರಗಳು ಅಂತರ್‌ಶಿಸ್ತೀಯ ಅಧ್ಯಯನದ ವೈರುಧ್ಯಗಳು ಇರುವುದರಿಂದ ನನ್ನ ಬರವಣಿಗೆ ವಾಗ್ವಾದಕ್ಕೆ ಎಡೆಮಾಡಿದೆ. ಕೆಲವರಿಗೆ ಜಾಗೃತಿಯನ್ನು, ಕೆಲವರಿಗೆ ಕಿರಿಕಿರಿಯನ್ನು ಉಂಟುಮಾಡಿದೆ ಎನ್ನುವುದು ನನಗೆ ಗೊತ್ತು. ಇವೆಲ್ಲಾ ನ್ನ ಅಧ್ಯಯನದ ಹರವಿಗೆ ಬಲನೀಡಬಹುದು ಎನ್ನುವ ವಿಶ್ವಾಸ ನನ್ನದು. ಈ ವರೆಗೆ ನನ್ನ ಚಿಂತನೆಗಳನ್ನು ಹಂಚಿಕೊಳ್ಳುತ್ತಾ ಬಂದ ವಾರ್ತಾಭಾರತಿಯ ಎಲ್ಲಾ ಓದುಗರಿಗೂ ನನ್ನ ಸವಿನಯ ನೆನಕೆಗಳು. ಇನ್ನು ಮಗದೊಮ್ಮೆ ಓದುಗಲೋಕಕ್ಕೆ ಈ ಕೃತಿಯನ್ನು ಇಡುತ್ತಿದ್ದೇನೆ. ನಮಸ್ಕಾರ
]]>

‍ಲೇಖಕರು avadhi

July 15, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: