ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಾಲು ಸಾಲು ದೀಪಗಳ ಆವಳಿ

-ಸರೋಜಿನಿ ಪಡಸಲಗಿ

ಇದು ದೀಪಾವಳಿ ಇದುವೇ ದೀಪಾವಳಿ!

ಅದೇ ಬಾನು ಅದೇ ಭೂಮಿ
ಅದೇ ಹಗಲು ಅದೇ ಇರುಳು
ಕತ್ತಲ ಗರ್ಭದಿಂ ಹೊಮ್ಮಿತೊ
ಮರಿ ಸೂರ್ಯನೊಲು ಹೊಳೆದು
ಸಾಲು ಸಾಲು ದೀಪಗಳ ಆವಳಿ
ಎಂದಿನಂತಲ್ಲ ಇಂದಿನ ಈ ಬೆಳಗು
ಇದು ದೀಪಾವಳಿ ಇದುವೇ ದೀಪಾವಳಿ

ಅದೆ ಸುಳಿಗಾಳಿ ಭೂಮಿ ಎದೆ ನಡುಗು
ಅದೆ ಮಂಜನ್ಹೊದ್ದ ಮಸುಕು ನಸುಕು
ಇಬ್ಬನಿಲಿ ಮಿಂದ ಅಂಗಳದ ಮಲ್ಲಿಗೆ
ಮುಂಬಾಗಿಲಂಚಿನ ನಗುವ ಚಿತ್ತಾರ
ಹೊಳೆದಿದೆ ಮಿಂಚಿನೊಲು ಇಂದು
ಎಂದಿನಂತಲ್ಲ ಇಂದಿನ ಈ ಬೆಳಗು
ಇದು ದೀಪಾವಳಿ ಇದುವೇ ದೀಪಾವಳಿ

ಅದೆ ಹಕ್ಕಿಗಾನ ಕಲರವದ ತಾನ
ಅದೆ ಸ್ತಬ್ಧ ಮರದೊಡಲ ಗೂಡು
ಚಿಗುರಿನ ತೋರಣ ಬಾನಂಚಿಗೆ
ಹೊನ್ನೀರಿನೆರಕ ಭುವಿಯಂಗಳಕೆ
ಹಕ್ಕಿ ರೆಕ್ಕೆ ಸ್ವರ್ಣ ಕಾಂತಿ ಬೀರಿತಿಂದು
ಎಂದಿನಂತಲ್ಲ ಇಂದಿನ ಈ ಬೆಳಗು
ಇದು ದೀಪಾವಳಿ ಇದುವೇ ದೀಪಾವಳಿ

ಅದೆ ನಾನು ನೀನು ನೋವು ನಲಿವು
ಅದೆ ನೆನಪಿನಿಂಪು ಅದೆ ಕನಸು ಆಸೆ
ಕನಸು ಕೊನರಿತೊ ಆಸೆ ಚಿಗುರಿತೊ
ಮಂದ ತಾರಕೆಯಲಿ ಭಾನು ನಕ್ಕನೊ
ಹೇಗೊ ಚಿಮ್ಮಿತೀ ಹರುಷದ ಹೊನಲು
ಎಂದಿನಂತಲ್ಲ ಇಂದಿನ ಈ ಬೆಳಗು
ಇದು ದೀಪಾವಳಿ ಇದುವೇ ದೀಪಾವಳಿ

‍ಲೇಖಕರು Admin

8 November, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading