-ಸುಧಾ ಹಡಿನಬಾಳ
ಒಲವ ಹಣತೆ ಹಚ್ಚುವ
ವರುಷಕೊಮ್ಮೆ ಬರುವ
ಸಾಲು ದೀಪಗಳ ಹಬ್ಬ
ಸಾಮಾನ್ಯರ ಬದುಕಲಿ
ಸಂಭ್ರಮದ ಪರ್ವ
ಹಚ್ಚುವ ದೀಪಗಳ
ಸಾಲು ಸಾಲು ಬೆಳಕು
ಹೊತ್ತು ತರಲಿ ಸುಜ್ಞಾನದ
ಹೊಸ ಹೊಳಹು
ದೀಪ ಹಚ್ಚುವುದೆಂದರೆ
ಕತ್ತಲೆಗೆ ಹಿಡಿವ ಕಂದೀಲು
ಕತ್ತಲೆ ತೊಲಗಿತೆಂದರೆ
ಸುತ್ತೆಲ್ಲ ಬೆಳಕಿನಾ ಹೊನಲು
ಹಬ್ಬ ಮಾಡುವುದೆ ಅರಿತು
ಬೆರೆತು ಕೂಡಿ ಬಾಳಲು
ಕಿತ್ತಾಡುವುದರಲೇನಿದೆ
ಬರೀ ದ್ವೇಷ ರೋಷ ತಾನೆ?
ಜಾತಿ ಧರ್ಮ ಎಲ್ಲ ಮಿಥ್ಯ
ಮನುಜರೆಲ್ಲ ಒಂದೆ ಸತ್ಯ
ಹೊಂದಾಣಿಕೆಯಲ್ಲೇ ಇದೆ
ಸರಸ ರಸ ಸಮರಸ
ಕೊಟ್ಟೆ ಕಡುಬು ತಿನ್ನುವ
ಸ್ನೇಹ ಸಮತೆ ಬಿತ್ತುವ
ಕಹಿಯ ಮರೆತು ಬಾಳುವ
ಒಲವ ಹಣತೆ ಹಚ್ಚುವ






0 Comments