ಮತ್ತೆ ಮತ್ತೆ ದೀಪದ ಸಾಲು
-ನಾ ದಿವಾಕರ
ದೀಪ ಹಚ್ಚುವಿರಾದರೆ
ಕತ್ತಲೆಯ ತಂತುಗಳನೊಮ್ಮೆ ಹುಡುಕಿ
ಪ್ರಖರ ಬೆಳಕಿನಲಿ
ಬೀದಿ ಬೀದಿ ಅಲೆದರೂ
ನಿಮಗೆ ಕಾಣಲಾರದು
ಎದೆಯ ದೀಪ ನಂದಿಹೋಗಿದೆ
ಶತಮಾನಗಳ ಮುನ್ನ ;
ಬೆಳಕಿನ ಸಾಲಿನಲಿ ಸದ್ದೇನಿರಬಹುದು
ಮಿಣುಕು ಹುಳಗಳೊಂದಿಗೆ
ಹಣತೆಗಳ ಸಂವಾದ !!!!
ಹಿತ್ತಲ ಕತ್ತಲಿನಲಿ ಬೆತ್ತಲೆ ಕಾಣಲಿಲ್ಲವೇ
ಸಂಸ್ಕಾರದ ಮೆದುಗಾಳಿಗೆ
ನೆರಳು ಹೊಯ್ದಾಡುವಾಗ
ಹೆಜ್ಜೆಗಳಷ್ಟೆ ಸಾಕ್ಷಿ ;
ಶಬ್ಧಾಲಿಂಗನದ ಸೊಬಗು
ಬಣ್ಣಗಳ ಚುಕ್ಕಿ ರಂಗೋಲಿಯ
ಮಧ್ಯೆ ನೇಸರನ ಕೊನೆಯುಸಿರಡಗಿದೆ ;
ದುಷ್ಟ ಸಂತೆಯ ಸಾಲು ಜಗುಲಿಯಲಿ
ಸೊರಗಿದ ಜೀವ ಸರಕುಗಳು
ಬಿಕರಿಯಾಗುವ ಹೊತ್ತಿನಲಿ
ಹಣತೆ ಆರಿಸಿಬಿಡಿ ;
ಮರಳಿ ಮರಳಿ ಮರಳುತಿದೆ
ಮಸಣಗಳ ನಾದ ದುಂದುಭಿ
ಹಸುಗೂಸುಗಳ ಚೀತ್ಕಾರ
ನೆಲಸುತರ ಅರಣ್ಯ ರೋದನ
ಪಟಪಟ ಸದ್ದಿನಾಡುಂಬೊಲದಲಿ
ಹಣತೆಗಳ ಎಣ್ಣೆಯಂತಾಗಿದೆ ;
ಮತ್ತೆ ಹಚ್ಚುವಿರಾದರೆ ದೀಪ
ಒಳಗೊಮ್ಮೆ ನೋಡಿಬಿಡಿ
ಮೀಟುವ ಕತ್ತಲ ತಂತುಗಳನು !






0 Comments