ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮುಂಬಯಿಯ ಪುನರಾಭಿವೃದ್ಧಿ,ಒಂಟಿ ಹೋರಾಟ ‘ಲಾಸ್ಟ್‌ ಮ್ಯಾನ್‌ ಇನ್‌ ಟವರ್‌’

-ಕಿರಣ ಭಟ್‌

ಪುನರಾಭಿವೃದ್ಧಿ ಎನ್ನುವದು ಮುಂಬಯಿಯ ಬದುಕಿಗೆ ಈಗ ಸಹಜವಾಗಿಹೋಗಿದೆ. ಇಂಥ ಪುನರಾಭಿವೃದ್ಧಿಯ ಸುಳಿಗೆ ಸಿಕ್ಕ ಮುಂಬಯಿಯ ʼವಿಶ್ರಾಮ್‌ ಕೋ ಆಪರೇಟಿವ್‌ ಹೌಸಿಂಗ್‌ ಸೊಸೈಟಿʼಯ ನಿವಾಸಿಗಳ ಕಥೆಯೇ, ʼಲಾಸ್ಟ್‌ ಮ್ಯಾನ್‌ ಇನ್‌ ಟವರ್‌ʼ

ಸಾಕಷ್ಟು ಹಳೆಯದಾದ ಈ ಸೊಸೈಟಿಯಲ್ಲಿ ಎಲ್ಲ ಬಗೆಯ ಜನರಿದ್ದಾರೆ. ಸಾಲ ಮಾಡಿ ಅಂಗಡಿ ನಡೆಸುವವ, ವಿಶೇಷ ಚೇತನ ಮಗನನ್ನು ಸಾಕುತ್ತಿರುವ ʼಸಂಗೀತಾ ಪುರಿʼ (ದಿವ್ಯಾ ದತ್ತಾ) , ವೃದ್ಧ ಕ್ರಿಶ್ಚಿಯನ್‌ ದಂಪತಿಗಳು, ಅಮೆರಿಕಕ್ಕೆ ಹೋಗುವೆ ಎಂದು ಹಟ ಮಾಡುತ್ತಿರುವ ಮಗಳ ಜೊತೆಗಿರುವ ಒಂಟಿ ಪೋಷಕಿ, ಹೀಗೆ ʼವಿಶ್ರಾಮ್‌ʼ ನಲ್ಲಿರುವ ಪ್ರತಿಯೊಬ್ಬರ ಹೆಗಲ ಮೇಲೂ ಹೊರಲಾರದ ಜವಾಬ್ದಾರಿಗಳೇ. ಇವರೆಲ್ಲರ ಜೊತೆಗೂ ಆತ್ಮೀಯ ಸಂಬಂಧವಿರಿಸಿಕೊಂಡವ ಹಿರಿಯ ʼಯೋಗೇಶ್‌ ಮಿಶ್ರಾ ಉರ್ಫ್ʼ, ʼಮಾಸ್ಟರ್‌ ಜೀʼ (ಮನೋಜ್‌ ಬಾಜಪೇಯಿ), ಸಿನಿಮಾದ ಕೇಂದ್ರ ಬಿಂದು ಅಂದರೆ ʼಲಾಸ್ಟ್‌ ಮ್ಯಾನ್‌ʼ

ತನ್ನ ಪಾಡಿಗೆ ತಾನಿದ್ದ ಇಂಥ ಸೊಸೈಟಿಯಲ್ಲಿ ಬಿಲ್ಡರ್‌ ಧರ್ಮೇನ್‌ ಶಾ (ಬೊಮ್ಮನ್‌ ಇರಾನಿ)ನ ಪ್ರವೇಶದೊಂದಿಗೆ ಅಲ್ಲೋಲ ಕಲ್ಲೋಲವೇಳುತ್ತದೆ. ಸೊಸೈಟಿ ಯ ಕಟ್ಟಡದ ಜಾಗಕ್ಕಾಗಿ ಬಹುದೊಡ್ಡ ಮೊತ್ತದ ಆಮಿಶವನ್ನೊಡ್ಡುತ್ತಾನೆ ಆತ. ಸೊಸೈಟಿಯಲ್ಲಿ ಸಂಚಲನ ಶುರುವಾಗುತ್ತದೆ.ಮನೆ ಮಾರಾಟದ ಹವಾ ಏಳುತೊಡಗುತ್ತದೆ. ಕೆಲವರು ಸಂಭ್ರಮಿಸುತ್ತಾರೆ. ನಾಲ್ಕಾರು ಜನ ಮಾರಾಟಕ್ಕೆ ʼಉಹುಂʼ ಎನ್ನುತ್ತಾರೆ. ಇವರ ಜೊತೆಗೆ,ಮನೆಗಳನ್ನು ಮಾರಾಟ ಮಾಡುವದರ ವಿರುದ್ಧ ಸೆಟೆದು ನಿಂತವನು ಮಾಸ್ಟರ್‌ ಜೀ. ಆತನ ಮನೆಯಲ್ಲಿಆತನ ಹೆಂಡತಿಯ ನೆನಪುಗಳಿವೆ. ಬಿಡಿಸಲಾರದ ಬಂಧಗಳಿವೆ. ಆದರೆ, ಅಗ್ರಿಮೆಂಟ್‌ ನ ದಿನ ಹತ್ತಿರ ಬರುತ್ತಿದ್ದಂತೆ ಎಲ್ಲ ಬದಲಾಗುತ್ತ ಹೋಗುತ್ತದೆ. ಇವನನ್ನು ಬಿಟ್ಟು ಉಳಿದೆಲ್ಲವರೂ ಮನೆ ಮಅರಾಟಕ್ಕೆ ಸಿದ್ಧರಾಗುತ್ತಾರೆ. ಆತನ ಆಪ್ತರಾಗಿದ್ದವರೆಲ್ಲ ಕಳಚಿಕೊಳ್ಳುತ್ತಾರೆ. ವಿರೋಧಿಗಳಾಗುತ್ತಾರೆ. ಒಂದೆಡೆ ಮನೆ ಮಾರುವಂತೆ ಮಗನ ಒತ್ತಡ, ಇನ್ನೊಂದೆಡೆ ಮನೆಯ ಜೊತೆಗಿನ ಭಾವ ಬಂಧಗಳು. ಇವುಗಳನ್ನು ಮಾಸ್ಟರ್‌ ಹೇಗೆ ನಿಭಾಯಿಸುತ್ತಾನೆ ಎನ್ನುವದೇ ಸಿನಿಮಾದ ಕಥೆ.  

ಅರವಿಂದ ಅಡಿಗ ರ ಇದೇ ಹೆಸರಿನ ಕಾದಂಬರಿಯಾಧಾರಿತ ಈ ಚಿತ್ರ ಕ್ಕೆ ಸೊಸೈಟಿಯ ಪುನರಾಭಿವೃದ್ಧಿ ಒಂದು ಹೆಳೆ ಅಷ್ಟೇ. ಅದು ಹೇಳಹೊರಟಿರುವದು ಮನುಷ್ಯನ ಮನಸ್ಥಿತಿಯ ಕುರಿತಂತೆ. ಅನಿವಾರ್ಯತೆಗಳ ಮುಖವಾಡ ಹಾಕಿಕೊಂಡ ಸ್ವಾರ್ಥದ ಕುರಿತಂತೆ. ಆಸೆಗೆ ಬಲಿ ಬಿದ್ದು ಮಾಸ್ಟರ್‌ ರ ಜೊತೆಗಿದ್ದ ಒಬ್ಬೊಬ್ಬರೇ ಅವರನ್ನು ಬಿಟ್ಟು ಬಿಟ್ಟು ಹೋಗುತ್ತ ಒಂದು ಹಂತದಲ್ಲಿ ಅವರನ್ನು ಏಕಾಂಗಿಯಾಗಿಸಿಬಿಡುವದಿದೆಯಲ್ಲ ಅದು ಅವಕಾಶವಾದಿತನದ ಉತ್ತುಂಗ. ಹಣದ ಎದುರು ಸಂಬಂಧಗಳೆಲ್ಲ ಎಷ್ಟು ಅರ್ಥಹೀನ ಎನ್ನುವ ಖಾರವಾದ ಸತ್ಯವನ್ನು ಸಿನಿಮಾ ತೆರೆದಿಡುತ್ತದೆ. ಅಂತೆಯೇ ಹೆಂಡತಿಯ ನೆನಪುಗಳ ಭಾವತೀವ್ರತೆಯಲ್ಲಿ ಸೊಸೈಟಿಯ ಉಳಿದವರ ಭವಿಷ್ಯವನ್ನೂ ಲೆಕ್ಕಿಸದೆ ಮಾಸ್ಟರ್‌ ಜೀ ಅಷ್ಟು ನಿಷ್ಠುರರಾಗಬೇಕಿತ್ತೇ ಎನ್ನುವ ಪ್ರಶ್ನೆಯನ್ನೂ ಎತ್ತುತ್ತದೆ.

ನಿರ್ದೇಶಕ ಬೆನ್‌ ರೇಖಿ ಪಾತ್ರಗಳ ಮನೋಸ್ಥಿತಿಯನ್ನೇ ಕೇಂದ್ರವಾಗಿಟ್ಟುಕೊಂಡು ತೊಂಬತ್ತೇಳು ನಿಮಿಷಗಳ ಸಿನಿಮಾ ಮಾಡಿದ್ದಾರೆ. ಇಲ್ಲಿ ಕಪ್ಪು ಬಿಳುಪು ಶೇಡ್‌ ನ ಪಾತ್ರಗಳಿಲ್ಲ. ಬೊಮ್ಮನ್‌ ಇರಾನಿಯವರ ಪಾತ್ರದ ಚಿತ್ರಣವೂ ಹಾಗೆಯೇ ಅದು ತೀವ್ರವಾದ ಖಳ ಪಾತ್ರವಲ್ಲ. ಮಾಸ್ಟರ್‌ ಜೀ ಯನ್ನು ತನ್ನ ದಾರಿಗೆ ತರಲು ಯತ್ನಿಸುತ್ತ ʼಈ ಮನುಷ್ಯನಿಗೆ ಕೊನೆಗೂ ಏನು ಬೇಕು? ಆತನಿಗೆ ಏನೂ ಬೇಡವೇ?ʼ ಎಂದು ಗಲಿಬಿಲಿಗೊಳ್ಳುವ ಪಾತ್ರ ಅದು. ಹಾಗಂತ ಮಾಸ್ಟರ್‌ ಜೀ ಯನ್ನೂ ಅವರು ಬಿಳಿ ಶೇಡ್‌ ನಲ್ಲಿಟ್ಟಿಲ್ಲ. ಚಿತ್ರದ ಕೊನೆಗೆ ಬಂದಂತೆ ಈ ಮನುಷ್ಯ ಇದೇಕೆ ಹೀಗೆ? ಎನಿಸುವ ಹಾಗೆ ಚಿತ್ರಿಸಿದ್ದಾರೆ.

ಅಭಿನಯದ ವಿಷಯದಲ್ಲಿ ಮಾತೇ ಇಲ್ಲ. ತುಸುವೇ ತುಸು ಬಗ್ಗಿದ, ಬ್ಯಾಗ್‌ ಹೆಗಲಿಗೇರಿಸಿ, ಛತ್ರಿ ಹಿಡಿದು ಹೊರಡುವ, ಹೆಚ್ಚಿನ ಭಾಗ ಕ್ಲೋಸ್‌ ಅಪ್‌ ನಲ್ಲೇ ಕಾಣುವ ಮನೋಜ್‌ ಬಾಜಪೇಯಿ ಅದ್ಭುತವಾಗಿ ನಟಿಸಿದ್ದಾರೆ. ಆದರೆ ಇಲ್ಲಿ ಬೆರಗುಗೊಳಿಸುವದು ಅವರಿಗೆ ಠಕ್ಕರ್‌ ಕೊಟ್ಟಂತೆ ಅಭಿನಯಿಸಿರುವ  ದಿವ್ಯಾ ದತ್ತಾ. ಕೆಲವು ದೃಶ್ಯಗಳಲ್ಲಂತೂ ಆಕೆ ತೀವ್ರವಾಗಿ ಕಾಡುತ್ತಾರೆ. ಅದರಲ್ಲೂ ಸಿನಿಮಾದ ಅಂತಿಮ ಕ್ಷಣದಲ್ಲಿ ಮನೆ ಬಾಗಿಲಲ್ಲಿ ಆಕೆ ಕುರ್ಚಿ ಹಾಕಿಕೊಂಡು ಕುಳಿತು ಇಡುವ ನೆಟ್ಟ ದೃಷ್ಟಿ ಅಪೂರ್ವವಾದದ್ದು. ಒಂದು ರೀತಿಯಲ್ಲಿ ಮಾಸ್ಟರ್‌ ಜೀ ಪಾತ್ರದ ಬೆಳವಣಿಗೆಗೂ ದಿವ್ಯಾ ದತ್ತಾರ ಪೂರಕವಾದ ಅಭಿನಯವೇ ಕಾರಣ. 

ವಸ್ತುವಿನ ದೃಷ್ಟಿಯಿಂದ ನೋಡಿದಾಗ, ಅಗತ್ಯತೆ ಇದ್ದಾಗಲೂ ಮೆಲೋಡ್ರಾಮಾ ದ ಹತ್ತಿರವೂ  ಸುಳಿಯದೇ, ತುಂಬ ಸಂಯಮದಿಂದ ನಿರ್ವಹಿಸಿದ ನೀಟ್‌ ಆದ ಸಿಸಿಮಾ ಇದು.

ಸಿನಿಮಾ Z5 OTT ಯಲ್ಲಿ ಲಭ್ಯವಿದೆ.

‍ಲೇಖಕರು Admin

8 November, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading