ಸರ್, ಕಂಗ್ರಾಟ್ಸ್…

ಪಿ.ಎಸ್. ಅಮರದೀಪ್

“ಸರ್, ಕಂಗ್ರಾಟ್ಸ್, ನೀವು ಈ ವರ್ಷದ  ಹೊಯ್ಸಳ ಹೋಟಲ್ ನ  ಅತ್ಯುತ್ತಮ ಗ್ರಾಹಕ ಪ್ರಶಸ್ತಿಗೆ ಭಾಜನರಾಗಿದ್ದೀರಿ.  

ಮಾಲೀಕರು ಈಗತಾನೇ ಚೀಟಿ ಎತ್ತಿ ನಿಮ್ಮ ಹೆಸರು ಬಂದಿದ್ದು ನೋಡಿ ಖುಷ್ಯಾಗರ”  ಯಾದಗಿರಿಯಲ್ಲಿ ನನ್ನ ಜೊತೆಗಿದ್ದ ಹುಡುಗ  ಧನರಾಜ್ ಫೋನ್ ಮಾಡಿ ಹೇಳುತ್ತಿದ್ದ.  ಅವನು ಮಾತಾಡುತ್ತಿದ್ದಾನೆಂದರೆ, ನಾನು ಏಕಾಏಕಿ ಎಕ್ಸೈಟ್ ಆಗುವುದಿಲ್ಲ.  ಭಲೇ ಹಾಸ್ಯಪ್ರಜ್ಞೆ ಇರುವ ಮನುಷ್ಯ.  

ಯಾದಗಿರಿಗೆ ಹೋದ ಹೊಸತರಲ್ಲಿ “ಸರ, ಈ ನೌಕರಿ ಮಾಡಿ ಕೊನೆಗೆ ಒಂದು ಮನೆ ಕಟ್ಟೋದ್ರಲ್ಲೇ ನಮ್ ಆಯುಷ್ಯ ಮುಗುದೋಗತ್ತ, ಒಂದ್ ಕೆಲ್ಸ ಮಾಡಾಣ, ಒಂದಾರ ಎಕ್ರಿ ಹೊಲ ತುಗೊಂಡು, ಮಿತ್ಯಾನಂದ ಸ್ವಾಮೀಜಿ ಆಶ್ರಮ ಅಂತ ಮಾಡೂಣೂ. 

ನೋಡ್ರಿ, ಒಂದ್ನಾಲ್ಕ್ ಮಂದಿ ಕೈಲೆ ಸುಳ್ಳೇ ಪವಾಡಗಳು ನಡೆದಿರೋ ಥರಾ ಟಾಂಟಾಂ ಮಾಡಿದ್ರ ಸಾಕ, ಹುಚ್ಚು ಮಂದಿ ಕಾವಿ ಕಂಡ್ರ ಕಾಲಿಗ್ ಬೀಳೋರೇನ್ ಕಮ್ಮಿಯಿಲ್ಲ”  ಅಂದು ಗಪ್ಪಾದ.  ಆಗತಾನೇ ನಿತ್ಯಾನಂದ ದೇಶ ಬಿಟ್ಟು ಹೋದ ಸುದ್ದಿ ಚಾಲ್ತಿಯಲ್ಲಿತ್ತು.   ಮುಂದೆ ಏನಾದ್ರೂ ಹೇಳುತ್ತಾನೇನೋ ಅಂತ ಕಾದೆ.  ಸುಮ್ಮನಿದ್ದ.

“ಆದ್ರ, ಇಲ್ಲೊಂದ್ ಸಮಸ್ಯಾದ ನೋಡ್ರಿ, ಏನಿಲ್ಲ, ಹಿರೇ ಸ್ವಾಮ್ಗೋಳು ನೀವಾ ಆಗ್ರಿ, ನಾನ್ ನಿಮ್ಮ ಶಿಷ್ಯ ಆಗಿರ್ತೀನಿ” ಅಂದುಬಿಟ್ಟ. ಭಪ್ಪರೆ ಮಗನೇ ಅಂದಿದ್ದೇ ಅವತ್ತು. ಅಂಥವನು ಫೋನ್ ಮಾಡಿ ಮಾತಾಡುತ್ತಿದ್ದಾನೆಂದರೆ, ಏನೋ ಪೀಠಿಕೆ ಇರಲೇಬೇಕು.   ಬಿಡಿ, ಅದಕ್ಕೆಲ್ಲಾ ಪ್ರತಿ ದಿನ ನಾವು ಬೆಳಿಗ್ಗೆ ತಿಂಡಿಗೆ ಒಂದು ಹೋಟಲ್ಲು, ಮಧ್ಯಾಹ್ನಕ್ಕೆ ಐ.ಬಿ. ರಾತ್ರಿ ಖಾನಾವಳಿ ಹೀಗೆ  ಊಟಕ್ಕೆ ಅಲೆಯುತ್ತಿದ್ದುದೇ ಕಾರಣ.

“ಹಾಳಾದ್ದು ಬದುಕು”  ಹಾಗಂತ ತಾಳ ಹಾಕುತ್ತಿರುವ ಹೊಟ್ಟೆಗೆ ತಿನ್ನುವ ಪ್ರತಿ ಹೊತ್ತಿಗೊಮ್ಮೆ ಅನ್ನಿಸುತ್ತಿದ್ದುದು ನಿಜ.  ಹಾಗಂತ ಹೊಟ್ಟೆಗೆ ಏನನ್ನಾದರು ತಿನ್ನದೇ ಹೋದರೆ ಆದೀತೇ?  ಇದೇ ಮೊದಲೇನಲ್ಲ. 1992-93ರಿಂದಲೇ ಎಸ್.ಎಸ್.ಎಲ್.ಸಿ ಪಾಸಾಗಿ ದಾವಣಗೆರೆಗೆ ಡಿಪ್ಲೊಮಾ ಓದಿಗಾಗಿ ಹಾಸ್ಟಲ್ ಗೆ ಸೇರಿದ ಹೊಸತರಲ್ಲೇ ರೂಢಿಯಾಗಿತ್ತು.  

ಕಡ್ಲಿ ಫ್ಯಾಮಿಲಿಗೆ ಯೂನಿವರ್ಸಿಟಿ ಡೀನ್ ನಂತಿದ್ದ, ತಾನು ಗಾಂಧಿತಾತ ಹೊಸಪೇಟೆಗೆ ಸ್ವಾತಂತ್ರ್ಯ ಹೋರಾಟದ ದಿನಗಳಲ್ಲಿ ನೋಡಿದ್ದ ದಿನಗಳಲ್ಲಿ ಮದುವೆಯಾಗಿ ಈಗಿನ ಟಿ.ಬಿ. ಡ್ಯಾಂ ನಿರ್ಮಾಣದಲ್ಲಿ ಮುಳುಗಡೆಯಾದ ನಾರಾಯಣದೇವರಕೆರೆ ಎನ್ನುವ ಊರಿಗೆ ತಾತನ ಮನೆ ಸೇರಿದ ನಮ್ಮ ಕೊಟ್ರಬಸವ್ವಜ್ಜಿ ತನ್ನ ಜಮಾನದಲ್ಲಿ ಬಟ್ಟೆ ಬರೆ ಇಡಲು ತಂದ ಟ್ರಂಕೊಂದಿತ್ತು.

ಥೇಟ್ ಗಜಪತಿ ಗರ್ವಭಂಗ ಸಿನಿಮಾದಲ್ಲಿ ಧೀರೇಂದ್ರ ಗೋಪಾಲ್ ನನ್ನು ಹೆದರಿಸಲು ಹೇಳುತ್ತಿದ್ದ “ಹಗ್ಗ, ಹಳ್ಳ ಪೆಟಾರಿ”  ಡೈಲಾಗನ್ನು ನೆನಪಿಸುವಂತೆ. ಅದರಲ್ಲಿ ನಾನು ಆರಾಮಾಗಿ ಮೊಣಕಾಲು ಚೂರು ಮುದುರಿ ಮಲಗಿದರೂ ಮುಚ್ಚಿ ಬೀಗ ಹಾಕಿ ಅಟ್ಟಕ್ಕೆ ಎತ್ತಿಡಬಹುದಾದಂಥ ಟ್ರಂಕದು.  

ಅಂಥಹ ಟ್ರಂಕನ್ನು ನಾನು ಕಾಲೇಜಿನ ಹಾಸ್ಟಲ್ ಗೆ ತೆಗೆದುಕೊಂಡು ಹೋಗಿದ್ದನ್ನು ನೋಡಿ ಇಡೀ ಹಾಸ್ಟಲ್ ವಿದ್ಯಾರ್ಥಿಗಳೇ “ಲೇ, ಇವ್ನೇನ್ ಬುಕ್ಸ್, ಬಟ್ಟಿ, ಅಷ್ಟಾ ಇಟ್ಗಳ್ಳಾಕ ತಂದಾನೋ?, ಇಲ್ಲ ರೇಷನ್ನು ತಂದ್ಹಾಕಿ ಸಂಸಾರ ಮಾಡಾಕ್ ಬಂದಾನಾ ಕೇಳ್ರಲೇ” ಅನ್ನುತ್ತಾ ಕಿಸ್ಸಿಕ್ಕೆನ್ನುತ್ತಿದ್ದರು.  ಇರಲಿ, ತಿನ್ನೋ ವಿಷಯಕ್ಕೆ ಬರ್ತೀನಿ. 

ಹಾಸ್ಟಲ್ ಮೆಸ್ ಶುರುವಾಗೋ ಮುಂಚೆ  ಸೀಮೆ ಎಣ್ಣೆ ಸ್ಟೋವ್ ತಂದು ಅನ್ನ ಮಾಡಿಕೊಂಡು ಹಾಸ್ಟಲ್ ಹತ್ತಿರದಲ್ಲೇ ಇದ್ದ ಅನಂತರಾಮ್ ಪ್ಯಾರಡೈಸ್ ಹೋಟಲ್ ಗೆ ಚೊಂಬು ಹಿಡಿದು ಹೋಗಿ ಒಂದಿಷ್ಟು ಬಿಸಿ ನೀರಿಗೆ ಹಿಟ್ಟು ಕಲೆಸಿ ನಾಲ್ಕು ಹೋಳು ಟೊಮೆಟೋ ಹಿಂಡಿ ಮಾಡಿದ ಸಾಂಬರನ್ನೇ ತಂದು ತಿನ್ನುವಾಗೆಲ್ಲಾ “ಥೋ, ಏನ್ ಪರ್ದೇಸಿ ಬದ್ಕಲೇ ಇದು” ಅನ್ನಿಸುತ್ತಿತ್ತು.  

ಮನೆಯಲ್ಲಿ ಮಾಡಿದ ಅಡುಗೆ, ಊಟ ಎಲ್ಲವೂ ನೆನಪಾಗೋದು,  “ಹೊಟ್ಟೆ ಸುಟ್ರೇನೇ ಬುದ್ಧಿ ನೆತ್ತಿಗೆ ಹತ್ತೋದಲೇ ಭಾಡ್ಯಾ” ಅನ್ನುವ ಅಜ್ಜಿ ಗದರುವಿಕೆ ಕೂಡ. ಅದಾಗಿ ಮೂರು ವರ್ಷಕ್ಕೆ ನೌಕರಿ ಸಿಕ್ಕಿತು.  

ಮತ್ತೆ ಬಳ್ಳಾರಿಯಲ್ಲಿ ಬ್ಯಾಚುಲರ್ ಬದುಕು.  ಅಲ್ಲೂ ಅಷ್ಟೇ.  ಆದರೆ, ಬ್ಯಾಚುಲರ್ ಲೈಫಲ್ಲಿ ದುರುಗಮ್ಮ ಗುಡಿ ಹತ್ತಿರದ ಈರಣ್ಣ ಮೆಸ್ಸು, ನಟರಾಜ ಥಿಯೇಟರ್ ರಸ್ತೆ ಹಾಗೂ ಎಸ್.ಆರ್.ಆರ್. ಥಿಯೇಟರ್ ಎದುರ ತಳ್ಳುಗಾಡಿಯ ತಿಮ್ಮಪ್ಪ ಅಥವಾ ಬೇರೆ ಹೆಸರೇನೋ ಇತ್ತು. 

ಅಲ್ಲಿಯ ಚಿತ್ರಾನ್ನ, ಇಡ್ಲಿಯನ್ನು ತಿನ್ನುವುದಾಗಲೇ ರೂಢಿಯಷ್ಟೇ ಅಲ್ಲ. ಎಂಜಾಯ್ ಕೂಡ ಮಾಡುತ್ತಿದ್ದೆವು.  ಎರಡು ವರ್ಷ ಅಷ್ಟೇ. ಅಪ್ಪ ಹೋಗಿ ಬಿಟ್ಟರು. ರೂಮ್ ಇದ್ದದ್ದು ಬಾಡಿಗೆ ಮನೆಯಾಯಿತು.

ಅವ್ವ ಮಾಡಿದ ಮನೆ ಅಡುಗೆ, ನಂತರ ಮದುವೆ, ಈಗ ಹೆಂಡತಿ ಮಾಡಿದ ಅಡುಗೆ.  ಮಕ್ಕಳು, ಟ್ರಾನ್ಸಫರ್ಸ್, ಊರುಗಳು, ಬಾಡಿಗೆ ಮನೆಗಳ ಅಲೆದಾಟ ಇವುಗಳಲ್ಲೇ ಸುಮಾರು ಹತ್ತೊಂಭತ್ತು ವರ್ಷ ಕಳೆದು ಬಿಟ್ಟವು. 

ಒಂದು ಕಾಲವಿತ್ತು.  ಸೂರಿದ್ದವರ ಮನೆಗೆ, ಹೊಸದಾಗಿ ಕಟ್ಟಿಕೊಂಡವರ ಗೃಹ ಪ್ರವೇಶಕ್ಕೆ ಹೋಗಿ ಬಂದಾಗೊಮ್ಮೆ ನಮಗಿಲ್ಲದ ಸ್ವಂತ ಮನೆಯ ಛಾವಣಿ ಕನಸಾಗುತ್ತಿತ್ತು. ಮುಂದೆ ಸೂರಿಲ್ಲದವನ, ಅಲೆಮಾರಿ  ಈ ನೌಕರಸ್ಥನಿಗೆ ಸ್ವಂತ ಮನೆಯಾಯಿತು.

ಬಂತಲ್ಲ ಮತ್ತೊಮ್ಮೆ ವರ್ಗಾವಣೆ ಎಂಬ ಸುತ್ತಿಗೆ? ಮತ್ತೆ ಮನೆ ಬಿಟ್ಟು, ಮಕ್ಕಳ ಬಿಟ್ಟು ಹೊರಟೆ ನೋಡಿ ಯಾದಗಿರಿಗೆ. ಯಾದಗಿರಿಗೆ ಹೋದಾಗಲೇ ಮತ್ತೊಮ್ಮೆ ಮನೆ ಊಟದಿಂದ ದೂರವಾಗಿ ಹೊಟೆಲ್ಲು, ಐ.ಬಿ. ಖಾನಾವಳಿ ಅಂತೆಲ್ಲಾ ತಿರುಗಿ ಮೂರು ದಿನದಲ್ಲಿ ಎಲ್ಲವೂ ಬೇಸರವಾಗಿಯೇ “ಹಾಳಾದ್ದು ಬದುಕು” ಅನ್ನಿಸಿದ್ದು.  ವರ್ಷದ ನಂತರ ಮತ್ತೆ ಕೊಪ್ಪಳ ಸೇರಿದೆ.  ಸಧ್ಯ ಈಗ ಮನೆ ಊಟಕ್ಕೇ ನಾನು ಸಂಪನ್ನ.

ಈಗ  ಮತ್ತೆ  ಯಾದಗಿರಿಯ “ಹೊಟೆಲ್ ಹೊಯ್ಸಳ”ದ ವರ್ಷದ ಅತ್ಯುತ್ತಮ ಗ್ರಾಹಕ ಪ್ರಶಸ್ತಿ ಅನೌನ್ಸ್ ಮಾಡಿದ ಬಗ್ಗೆ ಹೇಳುತ್ತೇನೆ.  ಕುರುಚಲು ಗಡ್ಡ ಬಿಟ್ಟಿದ್ದ ಧನರಾಜನನ್ನು ನೋಡಿದರೆ ಒಂದೇಟಿಗೆ “ ಇವ್ನೇನ್ ಒಳ್ಳೇ ಪುಡಿ ರೌಡಿ ಥರಾ ಇದಾನಲ್ಲ” ಅನ್ನಿಸಬಹುದಾದರೂ ತುಂಬಾ ಆರ್ದ್ರ ಮನಸುಳ್ಳ ಹುಡುಗ ಮತ್ತು ಸಖತ್ ಹಾಸ್ಯ ಪ್ರಜ್ಞೆ ಇರುವವನು. 

 “ ಸರ್, ಪ್ರಶಸ್ತಿ ಬಂದ ಕಾರಣಕ್ಕೆ ನಿಮ್ಗೆ ತುಂಬು ಹೃದಯದ ಅಭಿನಂದನೆಗಳು, ಮತ್ತ ಯಾವಾಗ್ ಬರ್ತೀರಿ ಪ್ರಶಸ್ತಿ ತಗಂಡೋಗೋಕೆ” ಕೇಳಿದ.   “ಮೊದಲು ಪ್ರಶಸ್ತಿ ನೀಡಲು ಅಳೆದ ಮಾನದಂಡ ಯಾವ್ದು ಕಂದ”  ಹೇಳು ಅಂದೆ. 

 “ಅದೇ ಸರ್,  ನೀವು ಪ್ರತಿ ಬಾರಿ ಪೂರಿ, ರಾಗಿ ದೋಸೆ ಆರ್ಡರ್ ಮಾಡಿದಾಗ,  ತಿಂಡಿ ತಿಂದು ಮುಗಿಸುವಷ್ಟರಲ್ಲಿ ಕನಿಷ್ಟ ಒಂದು ತಟ್ಟೆಗಾಗುವಷ್ಟು ಎಕ್ಸ್ಟ್ರಾ ಗಟ್ಟಿ ಚಟ್ನಿ  ಹಾಕಿಸ್ಕೊಂಡು ತಿಂತಿದ್ರಲ್ಲ? ಈಗ ನಿಮ್ ಥರಾ ಈಗ ಯಾವ ಗಿರಾಕಿನೂ ಬರ್ತಾ ಇಲ್ವಂತೆ.   ಅದಕ್ಕೆ ಹೊಟಲ್ ಮಾಲೀಕರು, ‘ತಿಂದ್ರೆ ನಿಮ್ ಥರಾ ತಿನ್ಬೇಕು’ ಅಂತಿದ್ರು.   ಅದಕ್ಕೆ ಈ ಅವಾರ್ಡು….”  ಅಂದ ನೋಡಿ. 

ನನಗೆ ನಗು ತಡೆಯಲಾಗಲಿಲ್ಲ. ನಿಜವಾದ ಸಂಗತಿಯೆಂದರೆ, ಹೋಟಲ್ ಸರ್ವರ್ ಗಳಿಗೆ ಗದರಿದಂತೆ ಮಾತಾಡಿ ಗಟ್ಟಿ ಚಟ್ನಿ ತರಿಸಿಕೊಂಡು ತಿನ್ನುತ್ತಿದ್ದವನು ಇದೇ ಹುಡುಗ ಧನರಾಜ್.   

ಇರಲಿ ಮನೆ ಊಟ ತಿನ್ನದೇ ಅಲ್ಲಿಲ್ಲಿ ತಿಂದು ತಿರುಗಿ ಓದುವುದಾಗಲೀ  ಕೆಲಸ ಮಾಡುವ ಯಾವುದೇ ಊರಿರಲಿ, ಆ ಊರನ್ನು ಸುತ್ತುವುದನ್ನು, ಊಟವನ್ನಲ್ಲದಿದ್ದರೂ ಆ ದಿನಗಳನ್ನು  ಅಲ್ಲಿಯ ಜನರೊಂದಿಗೆ ಎಂಜಾಯ್ ಮಾಡಬೇಕುನ್ನುವವನು ನಾನು. 

ಇದ್ದ ಒಂದು ವರ್ಷದ ರಜಾ ದಿನಗಳಲ್ಲಿ ಕೋಟೆ ಕೊತ್ತಲು, ಕೆರೆ, ಬೆಟ್ಟ, ಎಲ್ಲವನ್ನೂ ಸುತ್ತಿದೆ ಫೋಟೋ ತೆಗೆದೆ.  ಹುಡುಗ ಧನರಾಜ್ ಸಲಹೆಯಂತೆ ಮಿತ್ಯಾನಂದಾಶ್ರಮ ಕಟ್ಟಿ ಕಾವಿ ಉಟ್ಟು ಗುರುವಂತೂ ಆಗಲಿಲ್ಲ, ಅಟ್ಲೀಸ್ಟ್ ಹೊಟಲ್ ಹೊಯ್ಸಳದವರು ಗಟ್ಟಿ ಚಟ್ನಿ ಪ್ರಿಯನಾದ ಧನರಾಜನಂತ ಶಿಷ್ಯನಿಗೆ ನೀಡುವ ವರ್ಷದ ಗ್ರಾಹಕ ಪ್ರಶಸ್ತಿ ಸ್ವೀಕರಿಸುವುದನ್ನು ನೋಡದಿದ್ದರೆ ಹೇಗೆ?   

‍ಲೇಖಕರು Avadhi

October 20, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. ಸವಿತಾ ಎಸ್ ಪಿ ತುಮಕೂರು

    ಬರಹ ಆಪ್ತವಾಗಿದೆ…

    ಪ್ರತಿಕ್ರಿಯೆ
  2. Basava Raju L

    ಹೊಟ್ಟೆಯ ಕುರಿತಾಗಿ ಅನುಭವಕ್ಕೆ ಬಂದ ಅಲೆಮಾರಿ ಪ್ರಸಂಗಗಳನ್ನು ಸಖತ್ ರಸವತ್ತಾಗಿ ಪ್ರಕಟಿಸಿದೀರಿ. ಧನ್ಯವಾದಗಳು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: