ಮಣಿಪಾಲದ ಅತಿಥಿಯ ಬೇಡುಗೈ…

ಊರೂರಲ್ಲಿ ಬೇಡಿ ತಿನ್ನುವವರನ್ನು ಆದರಿಸುವವರು ಯಾರು? ಕೈ ಮುಂದೆ ಚಾಚಿ ಕಾರಣಗಳೇನೇ  ಹೇಳಿದರೂ ಮೈ ಬಗ್ಗಿಸಿ ದುಡಿಯಲಿಕ್ಕಾಗುವುದಿಲ್ಲವಾ ಅಂತ ಮುಂದೆ ಕಳಿಸುವವರೇ ಹೆಚ್ಚಿನವರು.

ಬೇಡಿದವರ ಮೇಲೆ ಅತಿಯಾಗಿ  ಕರುಣೆ ಅನ್ನಿಸಿದಾಗ ಅಪರೂಪಕ್ಕೊಮ್ಮೆ ಅವರ ಕೈಯಲ್ಲಿ ದುಡ್ಡಿಟ್ಟು, ಹತ್ತಾರು ಸಾರಿ ಅವರನ್ನ ದಾಟಿಕೊಂಡು ಹೋಗುವವರೆಲ್ಲರಿಗೂ ಅವರು ಪ್ರಶ್ನೆಗಳಾಗಿಯೇ ಕಾಣುವುದು.

ಅವರ ಕಥೆಗಳಲ್ಲಿ ಎಷ್ಟು ಸತ್ಯ ಎಷ್ಟು ಸುಳ್ಳು? ಅವರಿಗೆ ದುಡಿದು ತಿನ್ನುವದರಲ್ಲಿ ಏನು ದಾಡಿ ಎಂಬೆಲ್ಲ ಮಾತುಗಳನ್ನ ನಾವೂ ಆಡಿಕೊಂಡಿರುತ್ತೇವೆ.

ಉಡುಪಿ-ಮಣಿಪಾಲ ಸೇರಿದಂತೆ ಮಹಾನಗರಗಳಲ್ಲಿ ಭಿಕ್ಷಾಟನೆಯ ಒಂದು ದಂದೆಯೇ ಇದೆ. ಇವೆಲ್ಲ ತರ್ಕಗಳನ್ನು ಒಳಗೂಡಿಯೇ ಎಲ್ಲಾ ವಯಸ್ಸಿನ ಮಕ್ಕಳು, ಹುಡುಗರು, ಮಕ್ಕಳನ್ನು ಜೋಳಿಗೆಯಲ್ಲಿ ಕಟ್ಟಿಕೊಂಡವರು, ಅಂಗವಿಕಲರು, ವಯಸ್ಸಾದವರು, ಹೀಗೆ ನೂರಾರು ಜನ ಏನಾದರೂ ಕೊಟ್ಟಾರು ಎಂಬ ನಿರೀಕ್ಷೆಯ ಕಣ್ಣುಗಳೊಂದಿಗೆ ಮಣಿಪಾಲ ಉಡುಪಿಯ ಮೂಲೆ ಮೂಲೆಗಳಲ್ಲಿ ನನ್ನನ್ನು ಇದಿರುಗೊಂಡಿದ್ದಾರೆ.

ಇವರೆಲ್ಲ ಈ ಉದ್ಯೋಗವನ್ನು ಆರಿಸಿಕೊಳ್ಳುವುದಕ್ಕೂ ಅವರದ್ದೇ ಆದ ಹತ್ತಾರು ಕಾರಣಗಳಿವೆ. ಇಂತಹ ಸಾವಿರ ಕಥೆಗಳಿಗಿಂತ ‘ಪೂಸುವೈ’ ಕಥೆ ಏನೂ ಭಿನ್ನವಲ್ಲ. ಇವಳ ಕಾಯಕವೂ ಊರೂರು ತಿರುಗಿ ಹೊಟ್ಟೆ ಹೊರೆದುಕೊಳ್ಳುವುದು. ಈ ತಿರುಗಾಟದ ಮದ್ಯದಲ್ಲಿ ಅವಳು ಮಣಿಪಾಲಕ್ಕೆ ಮಾತ್ರ ಒಂದೇ ದಿನದ ಅತಿಥಿಯಾಗಿ ಬಂದವಳು.

ಅವಳು ಮಣಿಪಾಲಕ್ಕೆ ಬಂದ ದಿನ, ಒಂದು ಅಂಗಡಿಯಿಂದ ಇನ್ನೊಂದು ಅಂಗಡಿಗೆ, ಅಲ್ಲಿಂದ ರಿಕ್ಷಾ, ಟ್ರಕ್ ಚಾಲಕರ ಬಳಿಗೆ ಕೈ ನೀಡುತ್ತಾ ಏನೋ ಕಥೆ ಹೇಳುತ್ತಾ ಅತ್ತಿಂದ ಇತ್ತ ಇತ್ತಿಂದ ಓಡಾಡುತ್ತಿದ್ದವಳು ಸ್ವಲ್ಪ ಅತೀಯಾಗಿಯೇ ಕುತೂಹಲ ಹುಟ್ಟಿಸಿದಳು.

ನೀಟಾಗಿಯೇ ಇರುವ ಬಟ್ಟೆ, ಜೋಳಿಗೆ ಚೀಲ, ಕೈಯಲ್ಲೊಂದು ನೆಲಕ್ಕೆ ತಾಗುವಷ್ಟು ಉದ್ದದ ಕೋಲು, ಅಲ್ಲಿರುವ ಯಾರು ಎಷ್ಟೇ ಬೈದು ದೂರ ಅಟ್ಟಿದರೂ ಯಾವ ಭಾವನೆಯನ್ನೂ ತೋರಿಸದ ನಿರ್ಭಾವುಕ ಮುಖ, ಯಾವುದೋ ಕೆಲಸಕ್ಕೆ ಅದೇ ದಾರಿಯಲ್ಲಿ ಹೊರಟಿದ್ದ ನನ್ನ ನಿಲ್ಲಿಸಿತು.

ಈಗಿನ ಮಾಸ್ಕ್ ಮುಖದ ಹಿಂದೆ ನಾವು ನಕ್ಕದ್ದು , ಕರೆದದ್ದು ಎಲ್ಲ ಎಲ್ಲಿ ಗೊತ್ತಾಗುತ್ತದೆ? ಆದರೂ ನಿಂತ ನನ್ನನ್ನು ನೋಡಿ ನನ್ನತ್ತಲೇ ಬಂದವಳು ನಾನೇ ಮಾತಾಡಸಲಿ ಅನ್ನೋ ಹಾಗೆ ಅಲ್ಲಿಯೇ ನಿಂತು ಬಿಟ್ಟಳು.

ನಾನೂ ಏನು ಮಾತಾಡುವುದು ಅಂತ ತಿಳಿಯದೆ ಹೆಸರು ಹೇಗೆ ಅಂದೇ. ಕಣ್ಣಲ್ಲಿ ಹೊಳಪು ತುಂಬಿಕೊಂಡು ‘ಪೂಸುವೈ’ ಎಂದಳು. ಎಲ್ಲೂ ಕೇಳದ ಹೆಸರು ಅನ್ನಿಸಿದ್ದಕ್ಕೆ ಊರು ಯಾವುದು? ಏನು ಇಲ್ಲಿ? ಅಂತೆಲ್ಲ ಮಾತು ಮುಂದುವರೆಸಿದೆ. ಅವಳ ಹೆಸರಿಗೆ ತಮಿಳಿನಲ್ಲಿ ಹೂವಿನಂತವಳು ಎಂಬ ಅರ್ಥವಂತೆ. ಆದರೆ ಅವಳ ಯಾವ ರೂಪು ರೇಷೆಯೂ ಅವಳ ಹೆಸರಿಗೆ ಹೊಂದುತ್ತಲೇ ಇರಲಿಲ್ಲ.

ತಮಿಳುನಾಡಿನಿಂದ ದಶಕಗಳ ಹಿಂದೆ ಕೂಲಿ ಕೆಲಸವನ್ನು ನಂಬಿ ಗಂಡನೊಂದಿಗೆ ಹುಬ್ಬಳ್ಳಿ ಧಾರವಾಡವನ್ನು ಸೇರಿದವಳು, ಗಂಡ ಹೋದ ಮೇಲೆ, ಕೂಲಿ ಮಾಡುವ ಶಕ್ತಿ ಕುಗ್ಗಿದ ಮೇಲೆ ಊರೂರು ತಿರುಗಿ ಬದುಕುತ್ತಿದ್ದಾಳೆ. ಅವತ್ತಿನ ಬೆಳಿಗ್ಗೆ ಅವಳು ಮಣಿಪಾಲಕ್ಕೆ ಅಥಿತಿಯಾಗಿ ಬಂದದ್ದರ ಹಿಂದೆಯೂ ಕಾರಣವಿದೆ.

ಅತೀ ಕಾಡುವ ಕಾಲು ನೋವು ಮಣಿಪಾಲದ ಆಸ್ಪತ್ರೆಯಲ್ಲಿ ತೋರಿಸಿದರೆ ಗುಣ ಆಗುತ್ತದೆ ಎಂದು ಯಾರೋ ಹೇಳಿದರಂತೆ, ಅದಕ್ಕೆ ಮುಂಚಿನ ರಾತ್ರಿ ಹುಬ್ಬಳ್ಳಿ- ಮಣಿಪಾಲದ ಬಸ್ಸು ಹತ್ತಿ ಬೆಳಗಾಗುವುದರ ಒಳಗೆ ಇಲ್ಲಿಗೆ ಬಂದು ಮುಟ್ಟಿದ್ದಳು.ಬಸ್ ಹತ್ತುವಾಗ ಕೈಯಲ್ಲಿ ಬಸ್ ಖರ್ಚಿಗೆ ಆಗುವಷ್ಟೇ ಇದ್ದದ್ದು,.

ಆಸ್ಪತ್ರೆ ಖರ್ಚು, ವಾಪಸ್ಸು ಹೋಗಲು ಹಣ ಯಾವ ಆಲೋಚನೆಯೂ ಇಲ್ಲದೆ ಬಂದವಳಿಗೆ ಆಸ್ಪತ್ರೆ ಹೊಗ್ಗಲು ಅವಕಾಶ ಸಿಗದೇ ನಿರಾಶೆಯಾಗಿ , ಆ ನಡು ಮದ್ಯಾಹ್ನದ ಹೊತ್ತು ವಾಪಸ್ಸು ಹೋಗುವ ಖರ್ಚಿಗೆ ಹಣ ಹೊಂದಿಸಲು ಮಣಿಪಾಲದ ಬೀದಿಗಳಲ್ಲಿ ಅತ್ತಿಂದಿತ್ತ ಇತ್ತಿಂದತ್ತ, ಕಂಡ ಕಂಡವರ ಎದುರು ತನ್ನ ಕಥೆ ಹೇಳುತ್ತಾ ನಡೆದೇ ಇದ್ದಳು.

ಎದುರಿನವರಿಗೆ ಒಪ್ಪಿಗೆಯಾಗುವಂತೆ ತನ್ನ ಕಥೆಯನ್ನು ವಿಸ್ತಾರವಾಗಿಯೋ ಇಲ್ಲ ಸಂಕ್ಷಿಪ್ತವಾಗಿಯೋ ಮುಗಿಸಿ ಅವರು ಏನು ಕೊಟ್ಟಾರು ಎಂದು ಕೈ ಬಾಯಿ ನೋಡುತ್ತಾ ಕುಳಿತು ಬಿಡುತ್ತಿದ್ದಳು.

ಪೂಸುವೈ ಸಿಕ್ಕರೆ ಕೂಲಿ ಮಾಡಿ ಬದುಕುವವಳೇ, ಸಿಗದೇ ಹೋದರೆ ಬೇಡಿ ಬದುಕುವವಳು. ವಯಸ್ಸು ಮತ್ತು ಅನಾರೋಗ್ಯ ಸದ್ಯಕ್ಕೆ ಅವಳನ್ನ ಈ ಉದ್ಯೋಗಕ್ಕೆ ಹೊಂದಿಕೊಳ್ಳುವಂತೆ ಮಾಡಿದೆ. ಏನು ಮಾಡಿದರೇನು ಹೊಟ್ಟೆ ಅಂತ ಇದ್ದ ಮೇಲೆ ಬದುಕುವುದೊಂದೇ ಚಿಂತೆ. 

“ಹುಬ್ಬಳ್ಳಿ ಧಾರವಾಡದ ಮೂಲೆ ಮೂಲೆಯಲ್ಲೂ ನಾನು ಹೀಗೆಯೇ ಬೇಡುವುದು. ಬೆಳಗ್ಗಿನಿಂದ ಸಂಜೆವರೆಗೆ ಮನೆ ಮನೆ ಅಂಗಡಿ ಅಂಗಡಿಗಳ ತಿರುಗಿದರೆ ಅವತ್ತಿನ ಊಟಕ್ಕಂತೂ ತೊಂದರೆ ಇಲ್ಲ. ಇನ್ನು ರಾತ್ರಿ ಮಲಗುವುದಕ್ಕೆ ಮನೆಯ ಅವಶ್ಯಕತೆ ಇಲ್ಲಿಯವರೆಗೂ ಕಾಣಲಿಲ್ಲ. ದುಡ್ಡು ಇರಲಿಲ್ಲ ಅದಕ್ಕೆ ಇದ್ದೊಬ್ಬ ಮಗಳಿಗೂ ಮದುವೆ ಆಗಲಿಲ್ಲ. ಅಲ್ಲೆಲ್ಲೋ ಒಂದು ಕಡೆ ಸರ್ಕಾರಿ ಜಾಗದಲ್ಲಿ ಹಾಕಿರೋ ಜೋಪಡಿ ಒಂದರಲ್ಲಿ ಮಗಳು ಕಾಲಿಯಮ್ಮ ಮಲಗುತ್ತಾಳೆ. ಹತ್ತಿರದಲ್ಲೆಲ್ಲೋ ಕೂಲಿ ಮಾಡುತ್ತಾಳೆ. ಅಷ್ಟು ಅವಳ ಬದುಕಿಗೆ ಸಾಕು. ನಮ್ಮ ಬದುಕಿಗೆ ಇನ್ನೆಂತ ವೈಭೋಗ?” ಎಂದಳು.

“ವಯಸ್ಸಾಯಿತು. ಜೊತೆಗೆ ಬಿಡದೆ ಕಾಡುವ ಕಾಲು ನೋವು ಬೇಡಿ ತಿನ್ನುವುದೇ ಸಲೀಸು ಎನ್ನುವ ಹಂತಕ್ಕೆ ತಂದು ನಿಲ್ಲಿಸಿದೆ” ಎಂದೆಲ್ಲ ಮಾತನಾಡಿದವಳ ಮುಖದಲ್ಲಿ ಯಾವ ಭಾವುಕತೆಯ ಗೆರೆಯೂ ಕಾಣಲಿಲ್ಲ. ಅಷ್ಟೂ ಹೊತ್ತು ಅವಳ ಹತ್ತಿರ ‘ಕೊಡುವವ’ರನ್ನು ಮೆಚ್ಚಿಸಲು ಬೇಕಾದ ಸೌಮ್ಯ ಮುಖ ಮತ್ತು ಬೇಕಷ್ಟೆ ಹೇಳಿ ಮುಗಿಸುವ ಅವಳ ಕಥೆ ಮಾತ್ರ ಇದ್ದದ್ದು.

ನಾನು ಚಿಕ್ಕವಳಿದ್ದಾಗ ‘ಪೂಸುವೈ’ ಹಾಗೆಯೇ ಊಟಕ್ಕೆ ಕೈನೀಡಿ ಊರೂರು ತಿರುಗುತ್ತಿದ್ದ ನಮ್ಮ ಪಕ್ಕದೂರು ಬಡಾಕೆರೆಯ ‘ಸೀತು’ ವನ್ನ ಮಕ್ಕಳು ಹಠ ಮಾಡಿದರೆ ಹೆದರಿಸುವ ಆಕೃತಿಯಾಗಿ ಉಪಯೋಗಿಸುತ್ತಿದ್ದದ್ದು  ನೆನಪಾಯಿತು.

ಹೀಗೆ ನಾವು ಅವರ ಬಗ್ಗೆ ಏನು ಯೋಚಿಸುತ್ತೇವೆ ಎಂಬುದೆಲ್ಲ ಅವರಿಗೆ ಅನವಶ್ಯಕ. ಖಾಲಿ ಹೊಟ್ಟೆಯನ್ನು ಹೊತ್ತು ಊರೂರು ತಿರುಗುವ ಇವರೆಲ್ಲರಿಗೆ ಅವರ ನಡೆದ ಜಾಗಗಳ ಕಥೆಗಳು ಗೊತ್ತು.

ಅವರೂ ಸಂಚಾರಿಗಳೇ ಆದರೆ ನಮ್ಮಂತ ಸ್ಥಿತಿವಂತರಿಗಿಂತ ಭಿನ್ನ ಸಂಚಾರಿಗಳಷ್ಟೇ. ಅವರಿಗೆ ಹೋದ ಊರಲ್ಲಿ ಸ್ವಾಗತಿಸುವ ಸ್ನೇಹಿತರಿರುವುದಿಲ್ಲ. ಉಳಿಯಲು ಹೋಟೆಲ್ ಕೋಣೆಗಳಿರುವುದಿಲ್ಲ, ಮತ್ತು ನೋಡಲು ಇಂತಹದೇ ತಾಣಗಳಂತಿರುವುದಿಲ್ಲ. ಹೊಟ್ಟೆ ತುಂಬಿಸಿಕೊಳ್ಳುವುದಕ್ಕೆ ತಿರುಗುವವರಷ್ಟೇ.

ರಾತ್ರಿ ಹಗಲೆನ್ನದೆ ಊರಿಡೀ ತಿರುಗುವಾಗ, ಯಾವುದೋ ಮೂಲೆಗಳಲ್ಲಿ ರಾತ್ರಿ ಮಲಗುವಾಗ ಭಯವಾಗುವುದಿಲ್ಲವಾ ಎಂದರೆ, ಎಂತ ಭಯ? ಇಲ್ಲಿ ಹುಟ್ಟಿದ ಮೇಲೆ ಹೇಗೆ ಬದುಕು ಎಂಬುದೇ ಹೆಚ್ಚು. ಬದುಕಬೇಕೆಂಬ ಭಯಕ್ಕಿಂತ ದೊಡ್ಡದು ಏನುಂಟು ಅಂತ ಜ್ಞಾನಿಯಂತೆ ನುಡಿದು ಬಿಟ್ಟಳು.

ನನ್ನ ಹಿಂಗೇ ನೋಡಿ ಹುಚ್ಚಿ ಅಂತೆಲ್ಲ ಆಡಿಕೊಳ್ಳೋರು ಇದ್ದಾರೆ . ನನ್ನ ಕಂಡು ದೂರ ಓಡೋರು ಇದ್ದಾರೆ. ಆದರೆ ನಾನು ಸರಿಯಾಗೆ ಇದ್ದೀನಿ. ಅವಶ್ಯಕತೆ, ಅದಕ್ಕೆ ಬೇಡಿ ತಿನ್ನುತ್ತೇನೆ ಅಷ್ಟೇ. ಕೊಡುವವರು ಕೊಟ್ಟಾರು, ಮನಸ್ಸಿಲ್ಲದವರು ಮುಂದೆ ನಡೆ ಅನ್ನುವರು ಅಷ್ಟೇ. ಬದುಕು ಹೀಗೇ ನಡೆಯುವುದು ಎಂದಳು.

ಮಣಿಪಾಲಕ್ಕೆ ಇವಳಂತೆ ಅತಿಥಿಗಳಾಗಿ ಬರುವವರ ಸಂಖ್ಯೆಯೇನು ಕಡಿಮೆ ಇಲ್ಲ. ಅನೇಕ ಕಾರಣಗಳಿಗೆ ಬರುವವರು ಇಲ್ಲಿ ಅನೇಕ ಪ್ರಶ್ನೆಗಳನ್ನು ಉಳಿಸಿ ಹೋಗುತ್ತಾರೆ. ಪೂಸುವೈ ಹೇಳಿದುದರಲ್ಲಿ ಎಷ್ಟು ಪೋಣಿಸಿದ ಕಥೆಗಳೋ ಎಂದು ಲೆಕ್ಕಾಚಾರ ಮಾಡುವ ಮದ್ಯೆ ಅಲ್ಲಿ ಬದುಕುವ ಅವಶ್ಯಕತೆಯ ಸತ್ಯದೆಳೆ ಇರುವುದನ್ನು ಮರೆಯಬಾರದು.

ಇಲ್ಲಿ ಸತ್ಯ ಸುಳ್ಳುಗಳೆಲ್ಲವೂ ಹರಿವ ಪದರಗಳಷ್ಟೇ

ಹೊಟ್ಟೆಯ ದಾಟಿದ ಮೇಲಷ್ಟೇ ಬದುಕು ಎಂಬ ಸತ್ಯಕ್ಕಿಂತ ಮಿಗಿಲೇನು?

October 20, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: