ಅಂತೂ ಕ್ರಾಕೋವ್‌ನಲ್ಲಿ ಬೆಳಗಾಗಿತ್ತು!

ಬಿ ವಿ ಭಾರತಿ ಅವರ ʼಶೋವಾ ಎನ್ನುವ ಶೋಕ ಗೀತೆʼ ಅಂಕಣದಲ್ಲಿ ಪೋಲೆಂಡ್ ನಲ್ಲಿ ನಿಟ್ಟುಸಿರ ಪಯಣ ಕುರಿತ ಅನುಭವಗಳನ್ನು ಹಂಚಿಕೊಂಡಿದ್ದಾರೆ

। ಕಳೆದ ವಾರದಿಂದ ।

ಅವನು ಅದೇನೋ ಫೋನ್ ಮಾಡಿದ, ರಿಜಿಸ್ಟರ್ ತೆಗೆದು ಬರೆದ, ಮತ್ತೆ ಕರೆ ಮಾಡಿದ, ಮತ್ತೇನೋ ಬರೆದ…

ಅವನ ಗಡಿಬಿಡಿಯ ಕೆಲಸಗಳನ್ನು ನೋಡುತ್ತಾ ಕುಳಿತ ನಾನು ‘ಹೆಂಗ್ ಆವಾಜ಼್ ಹಾಕ್ದೆ ನೋಡು! ನನ್ಮಗ ಥರ ಥರ ನಡುಗಿ ಈಗ ಎಲ್ರಿಗೂ ಕಾಲ್ ಮಾಡ್ತಿದಾನೆ! ಮ್ಯಾನೇಜರ್ ಊರಲ್ಲಿಲ್ಲ ಅಂದುಬಿಟ್ಟರೆ ನಂಬಿಬಿಡ್ತೀನಾ ನಾನು? ಅಲ್ಲೇ ಮನೆಯಲ್ಲಿ ಇರ್ತಾನೆ.

ಇವನು ಬೊಗಳೆರಾಯ ಕಥೆ ಕಟ್ತಾನೆ. ಈಗ ಅವನ ಜೊತೆ ಮಾತಾಡಿ ರೂಮ್ ಅಪ್‌ಗ್ರೇಡ್ ಮಾಡಿಕೊಡ್ತಾನೆ ನೋಡು’ ಎಂದುಕೊಂಡು ಬೀಗಿದೆ.ಸುಮಾರು ಹೊತ್ತು ಕಳೆಯಿತು. ಅಷ್ಟರಲ್ಲಿ ಸಮಯ ಹತ್ತೂವರೆ ಆಗಿತ್ತು. ಅವನು ಅದೇನೋ ಕೆಲಸಗಳನ್ನು ಮಾಡುತ್ತಲೇ ಇದ್ದಾನೆ, ನಮ್ಮ ಕಡೆಗೆ ತಿರುಗಿಯೂ ನೋಡದೆ.

ಏನಾದರೂ ಹೇಳುತ್ತಾನೆ ಅಂತ ಕಾದು ಕಾದು ಸಾಕಾಗಿ ಕೊನೆಗೆ ನಾನೇ ಎದ್ದು ‘ಏನಾಯ್ತು?’ ಎಂದೆ. ಅವ ಬರೆಯುತ್ತಿದ್ದವನು ಆಗ ನನ್ನ ಇರುವು ಅರಿವಿಗೆ ಬಂದಂತೆ ‘ಹೋ ಹೇಳುವುದು ಮರೆತೆ’ ಎಂದವನೇ ತಡಕಾಡಿ ಡ್ರಾ ಇಂದ ಒಂದು ಕಾರ್ಡ್ ತೆಗೆದು ನನ್ನ ಕೈಗಿತ್ತು ‘ನಾಳೆಯ ನಿಮ್ಮ ಸಿಟಿ ಟೂರ್ ಸಮಯ ಬದಲಾಗಿದೆ.

ಎಂಟೂವರೆಯ ಬದಲು ಎಂಟಕ್ಕೆ ನೀವು ಈ ಕಾರ್ಡ್‌ನಲ್ಲಿರುವ ಹೋಟೆಲ್ಲಿನ ಬಳಿ ಹೋಗಬೇಕು. ಸಾಕಷ್ಟು ದೂರವಿದೆ. ಟ್ಯಾಕ್ಸಿ ಮಾಡಬೇಕಾಗುತ್ತದೆ. ನೀವೇ ಟ್ಯಾಕ್ಸಿ ವ್ಯವಸ್ಥೆ ಮಾಡಿಕೊಳ್ಳುವಂತಿದ್ದರೆ ಸರಿ. ಇಲ್ಲವಾದರೆ ನಾನು ಬೇಕಿದ್ದರೆ ಅರೇಂಜ್ ಮಾಡುತ್ತೇನೆ’ ಎಂದು ಬಡಬಡ ಹೇಳಿದ.

ನಾನು ಕಕ್ಕಾಬಿಕ್ಕಿಯಾಗಿ ‘ಓಯೆ ನಾನು ಹೇಳಿದ್ದೇನಾಯಿತು! ಬೇರೆ ರೂಮ್ ವಿಷ್ಯ’ ಎಂದೆ. ಅವನು ಮತ್ತೆ ಅಷ್ಟೇ ಶಾಂತ ದನಿಯಲ್ಲಿ ‘ಹೇಳಿದೆನಲ್ಲ ಆಗಲೇ… ಬೇರೆ ರೂಮ್ ಇಲ್ಲ. ಮ್ಯಾನೇಜರ್ ಊರಿನಲ್ಲಿಲ್ಲ. ಬೇರೆ ರೂಮ್ ಖಾಲಿ ಇಲ್ಲ. ನೀವು ಅಲ್ಲಿಯೇ ಇರಬೇಕು. ಬೇಡ ಅಂದರೆ ಬೇರೆ ಹೋಟೆಲ್ಲಿಗೆ ಹೋಗಿ. ಆದರೆ ಹಣ ವಾಪಸ್ ಕೊಡಲಾಗುವುದಿಲ್ಲ. ನಾಳೆ ಬೇರೆ ರೂಮ್ ಖಾಲಿಯಾದರೆ ನಿಮಗೇ ಕೊಡ್ತೀನಿ ಅಂತಷ್ಟು ಮಾತ್ರ ಹೇಳಬಲ್ಲೆ’ ಎಂದು ಗಿಣಿ ಪಾಠ ಒಪ್ಪಿಸಿದ.

ಅಂದರೆ ಅವನು ಅಷ್ಟು ಹೊತ್ತೂ ಅವನ ಕೆಲಸ ಮಾಡಿಕೊಳ್ಳುತ್ತ ಅವನ ಪಾಡಿಗಿದ್ದ… ನಾನು ನಮ್ಮದೇ ಕೆಲಸ ಮಾಡ್ತಿದ್ದಾನೆ ಎಂದುಕೊಂಡಿದ್ದೆ ಮೂರ್ಖಳ ಥರ!!

ಅವನು ಅಷ್ಟು ಖಡಾಖಂಡಿತವಾಗಿ ಹೇಳಿದ ನಂತರ ನಾನು ಉಳಿದ ಕಾರ್ಡ್‌ಗಳನ್ನೂ ಆಡಿಯೇ ಬಿಡ್ತೀನಿ ಎಂದು ನಿರ್ಧರಿಸಿ ದನಿ ಎತ್ತರಿಸಿ ಕೂಗಾಡಲಾರಂಭಿಸಿದೆ. ಸಾಧಾರಣವಾಗಿ ಅದು ಎಲ್ಲ ಕಡೆಯೂ ವರ್ಕ್ ಆಗಿದೆ.

ಹಾಗೆಯೇ ಇಲ್ಲೂ ಆಗುತ್ತದೆ ಎಂದು ಭ್ರಮಿಸಿ ‘ನಾನು ಮಾತ್ರ ಆ ರೂಮಿನೊಳಗೆ ಹೋಗಲ್ಲ ಗುರೂ. ಇಲ್ಲೇ ಮಲಕ್ಕೊತೀನಿ ಸೋಫಾ ಮೇಲೆ. ನನಗೆ ಜ್ವರ ಬೇರೆ ಇದೆ. ಥಂಡಿ ಹತ್ತಿ ನಾನು ಸತ್ತರೆ ನೀನೇ ಜವಾಬ್ದಾರಿ. ನೆನಪಿರಲಿ’ ಏನೇ ಅಂದರೂ ಅವನು ಅದೇ ಗಿಣಿಪಾಠ ‘ರೂಮಿಲ್ಲ, ಹಣ ವಾಪಸ್ ಕೊಡಲ್ಲ. ಬೇರೆ ರೂಮ್ ನಾಳೆ ನೋಡ್ತೀನಿ…’ ಹತಾಶಳಾದೆ.

ಅಷ್ಟರಲ್ಲಾಗಲೇ ಹನ್ನೊಂದು ಘಂಟೆ. ಸುಸ್ತಾಗಿ ಹೋಗಿತ್ತು, ಆ ಊರಿನಲ್ಲಿ ಬೇರೆ ಕಡೆ ರೂಮ್ ಹುಡುಕಿ ಹೋಗಲಾಗುತ್ತದಾ? ಎಲ್ಲ ಬುಕ್ ಆಗಿದ್ದರೆ? ಟ್ಯಾಕ್ಸಿ ಸಿಗುತ್ತದಾ? ಇದೇನು ಕರ್ಮವಪ್ಪಾ ಎಂದೆಲ್ಲ ಯೋಚಿಸಿ ಕೊನೆಗೆ ಸೋತು ಶರಣಾಗತಳಾಗಿ ಅದೇ ರೂಮಿಗೆ ಮತ್ತೆ ಲಗೇಜ್ ಹೊತ್ತು ಹೊರಟೆ.

ನಮ್ಮ ಇಬ್ಬರ ಸೂಟ್‌ಕೇಸ್ ಇಡಲೂ ಜಾಗ ಇಲ್ಲದಾದಾಗ ನನ್ನದನ್ನು ಬಾತ್ ರೂಮಿನಲ್ಲಿಟ್ಟು ಹೇಗೋ ಒಂದು ವ್ಯವಸ್ಥೆ ಮಾಡಿ, ಬಿಸಿಬೇಳೆ ಬಾತ್ ಬಿಸಿ ಮಾಡಿ ಏನೋ ಯಾರೋ ನನ್ನ ಪಾಡು ನೋಡಿ ಬೇರೆ ರೂಮ್ ಕೊಟ್ಟೇ ಬಿಡುತ್ತಾರೋ ಅನ್ನುವಂತೆ ನೆಲದ ಒಂದು ಮೂಲೆಯಲ್ಲಿ ಕುಳಿತು ತಿಂದೆ ಅತ್ಯಂತ ಮೆಲೋಡ್ರಾಮಾಟಿಕ್ ಆಗಿ! ಯಾವನು ನೋಡಬೇಕು ಅಲ್ಲಿ ನನ್ನ ಮಗನನ್ನು ಬಿಟ್ಟರೆ?

ಆ ನಂತರ ಬೊಗಸೆ ಮಾತ್ರೆ ನುಂಗಿ ಮಂಚದ ಪಕ್ಕ ಅರ್ಧ ದೇಹ ಬಾಗಿಸಿಕೊಂಡು ಹೋಗಿ ಮಂಚದ ಮೇಲೆ ಬಿದ್ದುಕೊಂಡೆ. ಒಂದಿಷ್ಟು ಹೊತ್ತು ಕಳೆದಿರಬೇಕು, ಹೇಗೋ ನಿದ್ರೆ ಹತ್ತಿತು ಅನ್ನುವುದರಲ್ಲಿ ಕೆಮ್ಮು ಶುರುವಾಯಿತು. ಸಮಯ ನೋಡಿಕೊಂಡರೆ ಇನ್ನೂ ಹನ್ನೆರಡೂವರೆ! ಅಯ್ಯೋ ಇನ್ನೂ ಬೆಳಕಾಗಲು ಅದೆಷ್ಟು ಹೊತ್ತು ಕಾಯಬೇಕು ಎಂದು ಭಯವಾಗಿ ಹೋಯಿತು.

ಗೋಡೆಗೆ ದಿಂಬು ಒರಗಿಸಿ ಕುಳಿತುಕೊಂಡೇ ಮಲಗೋಣ ಎಂದು ಎದ್ದಾಗ ತಲೆಗೆ ದಢ್ ಎಂದು ಬಡಿಯಿತು ಆ ಇಳಿಜಾರಿನ ತಾರಸಿ. ಅಯ್ಯೋ ಕರ್ಮವೇ ಗೋಡೆಗೂ ಒರಗಲಾಗುತ್ತಿಲ್ಲವಲ್ಲ ಅಂತ ದುಃಖ ಚಾಚಿ ಬಂತು. ಮಲಗಿದ್ದ ಮಗ ಧಡಕ್ಕನೆ ಎದ್ದು ‘ಏನಾಯ್ತು’ ಅಂದ, ಹೇಳಿದೆ. ‘ನನ್ನ ಜಾಗಕ್ಕೆ ಬಾ. ಇಲ್ಲಿ ಸ್ವಲ್ಪ ವಾಸಿ ಇದೆ’ ಎಂದ.

ಅತ್ತ ಕಡೆಗೆ ಜಾಗ ಬದಲಿಸಿ ಒರಗಿ ಕುಳಿತೆ… ಅದರೂ ಒಂದೇ ಕ್ಲಾಸ್ಟ್ರೋಫೋಬಿಯಾ. ಹೇಗೋ ನರಳಾಡುತ್ತ ಒರಗಿಯೇ ಕಣ್ಣಿಗೆ ಜೊಂಪು ಹತ್ತಿತು ಅನ್ನುವುದರಲ್ಲಿ ಜೋರು ಸದ್ದು! ಬೆಚ್ಚಿ ಕಣ್ತೆರೆದರೆ ಇಂಗೀಷ್ ಸಿನೆಮಾಗಳಂತೆ ಮೇಲಿಂದ ನೀರು ದಭದಭ ಮೈಮೇಲೆ ಸುರಿಯುತ್ತಿದೆ! ಕಿರುಚಿದೆ ನಿದ್ರೆಗಣ್ಣಲ್ಲಿ.

ಮಗ ಮತ್ತೆ ಗಾಭರಿಯಲ್ಲಿ ‘ಏನಾಯ್ತು’ ಎಂದು ಎದ್ದ, ‘ನೀರು ಮೇಲಿಂದ ತಲೆ ಮೇಲೆ ಬೀಳ್ತಿದೆ’ ಎಂದೆ. ಅವನಿಗೆ ಗಾಭರಿಯಾಗಿರಬೇಕು ಇವಳಿಗೆ ಇದೊಂದು ಖಾಯಿಲೆ ಬಾಕಿ ಇತ್ತು ಶಿವಾ ಅಂತ!

ಅರ್ಥವಾಗದೇ ನಿದ್ದೆಗಣ್ಣಿನಲ್ಲಿ ನನ್ನ ತಲೆಯತ್ತ ನೋಡಿದವನಿಗೆ ಆಗ ನನ್ನ ಸಮಸ್ಯೆ ಅರ್ಥವಾಗಿ ಸದ್ಯ ಇವಳಿಗೆ ಮತ್ತೇನೂ ಮಾನಸಿಕ ಖಾಯಿಲೆ ಇಲ್ಲ ಎಂದು ಸಮಾಧಾನಗೊಂಡು ‘ತಲೆ ಮೇಲೆ ಒಂದು ಇಳಿಜಾರಿನ ಕಿಟಕಿ ಇಟ್ಟಿದ್ದಾರೆ ಅಷ್ಟೇ. ಹೊರಗೆ ಮಳೆ ಬರ್ತಿದೆ.

ನನಗೆ ನಿನ್ನ ಮೇಲೇ ಬಿದ್ದ ಹಾಗೆ ಅನ್ನಿಸ್ತಿದೆ, ಮಲಕ್ಕೋ ಏನಾಗಲ್ಲ’ ಎಂದ. ಕೆಮ್ಮಿನ ಕಾರಣದಿಂದ ನಾನು ಗೋಡೆಗೆ ಒರಗಿಯೇ ಕುಳಿತೆ.

ಗಾಜಿನ ಮೇಲೆ ಮಳೆ ಸುರಿವ ಧೋ ಸದ್ದು

ಸುಳಿಯದ ನಿದ್ದೆ

ಮುಗಿಯದ ಆ ಸುದೀರ್ಘ ದಣಿವಿನ ರಾತ್ರಿ ತಲ್ಲಣದಲ್ಲಿ ಭ್ರಮಾಲೋಕದಂತಿತ್ತು!

ಅರೆ ಜೊಂಪು, ಅರೆ ಎಚ್ಚರ, ಜೊತೆಗಿಷ್ಟು ಕೆಮ್ಮು…

ಅಂತೂ ಕ್ರಾಕೋವ್‌ನಲ್ಲಿ ಬೆಳಗಾಗಿತ್ತು!

ಆ ರೂಮ್‌ನಿಂದ ಆಚೆ ಬಿದ್ದರೆ ಸಾಕು ಎನಿಸುತ್ತಿತ್ತಲ್ಲ, ಹಾಗಾಗಿ ಸರಸರನೆ ಸಿದ್ಧವಾದೆವು. ಚಿಕ್ಕ ಬೇಸ್‌ಮೆಂಟ್‌ನಲ್ಲಿ ಡೈನಿಂಗ್ ಹಾಲ್. ಬೇರೆ ದೇಶಗಳಿಗೆ ಹೋದರೆ ಸಸ್ಯಾಹಾರಿಗಳಿಗೆ ಮೊದಲೇ ತಿನ್ನಲು ಹೆಚ್ಚೇನೂ ಇರುವುದಿಲ್ಲ. ಆದರೆ ಯಥೇಚ್ಛವಾಗಿ ಹಣ್ಣು, ತರಕಾರಿ, ಹಾಲು, ಬ್ರೆಡ್, ಕ್ರೊಸಾಂಟ್, ಸಲಾಡ್, ಜಾಮ್‌ಗಳು ಇಟ್ಟಿರುತ್ತಾರೆ.

ಆದರೆ ಇಲ್ಲಿ ಒಂದಿಷ್ಟು ಹಸಿ ತರಕಾರಿಗಳು, ಕಾರ್ನ್ ಫ್ಲೇಕ್ಸ್, ಒಂದೆರಡು ಹಣ್ಣು, ಗಟ್ಟಿ ಬ್ರೆಡ್ ಅಷ್ಟೇ. ಇಲ್ಲಿಗೆ ಕಾಲಿಟ್ಟಾಗಿನಿಂದ ಒಂದಾದರೂ ನೆಟ್ಟಗಾಗಿದೆಯಾ ಎಂದು ಗೊಣಗಾಡಿಕೊಂಡು, ಸಿಕ್ಕಿದ ಏನನ್ನೋ ಬಡಿಸಿಕೊಳ್ಳುತ್ತಿರುವಾಗಲೇ ಎದುರಿಗೆ ಟಿ ಶರ್ಟ್-ಜೀನ್ಸ್ ಧರಿಸಿದ್ದ ಪುಟ್ಟ ಹುಡುಗನೊಬ್ಬ ಎದುರಾದ ಓಡು ನಡಿಗೆಯಲ್ಲಿ.

ಎಲ್ಲೋ ನೋಡಿದಂತಿದೆಯಲ್ಲ ಈ ಪುಟ್ಟ ಮರಿಯನ್ನು ಎಂದುಕೊಳ್ಳುವಾಗಲೇ ನೆನಪಾಗಿದ್ದು ಅವನೊಟ್ಟಿಗೆ ನಾನು ಹಿಂದಿನ ರಾತ್ರಿ ರೂಮ್‍ಬದಲಾವಣೆಗಾಗಿ ಶರಂಪರ ಕಿತ್ತಾಡಿದ್ದು ಎಂದು!ಹಿಂದಿನ ದಿನ ಸೂಟ್‌ನಲ್ಲಿ ಭಯಂಕರ ಗಾಂಭೀರ್ಯದಿಂದ ನಡೆದುಕೊಂಡಿದ್ದ ಹುಡುಗ ಇಷ್ಟು ಚಿಕ್ಕವನಾ ಅಂತ ಆಶ್ಚರ್ಯ ಪಡುವಂತಾಯಿತು!

ಎದುರಾದ ನಮಗೆ ಗುಡ್ ಮಾರ್ನಿಂಗ್ ಹೇಳುತ್ತಾ ‘ನನ್ನ ಡ್ಯೂಟಿ ಮುಗಿಯಿತು. ನಾನಿನ್ನು ಹೊರಡುತ್ತಿದ್ದೇನೆ. ನಿಮ್ಮ ಟ್ಯಾಕ್ಸಿ ಹೇಳಿದ್ದೇನೆ. ಇನ್ನೇನು ಬಂದು ಬಿಡುತ್ತಾರೆ. ಬೇಗ ತಿಂಡಿ ಮುಗಿಸಿ ಬನ್ನಿ’ ಎಂದು ನಗುತ್ತಲೇ ಹೇಳಿದ.

‘ಹೇ ನೀನು ಹೊರಟು ಬಿಡುತ್ತಿದ್ದೀಯಾ? ಇಲ್ಲೇನಾದರೂ ತೊಂದರೆಯಾದರೆ ಕೊ-ಆರ್ಡಿನೇಟ್ ಮಾಡುವವರು ಯಾರು! ಒಂದು ಹತ್ತು ನಿಮಿಷ ಇದ್ದು ಹೋದರಾಗುವುದಿಲ್ಲವೇ’ ಎಂದು ನಾವು ಆತಂಕ ಜೀವಿಗಳು ಹೇಳಿದಾಗ ‘ಇಲ್ಲ, ಅಲ್ಲಿ ಕೌಂಟರ್‌ನಲ್ಲಿರುವವರು ನಿಮಗೇನಾದರೂ ತೊಂದರೆಯಾದರೆ ಸಹಾಯ ಮಾಡುತ್ತಾರೆ, ಹೆದರಬೇಡಿ. ನಾನು ಈಗ ಕಾಲೇಜ್‌ಗೆ ಹೋಗಬೇಕು. ಮತ್ತೆ ಸಂಜೆ ಡ್ಯೂಟಿಗೆ ಬರುತ್ತೇನೆ’ ಎಂದ.

ಅಯ್ಯೋ ಪಾಪವೇ, ಈ ಮಗು ರಾತ್ರಿ ಪಾಳಿಯಲ್ಲಿ ಕೆಲಸ ಮಾಡಿ ಮತ್ತೆ ಈಗ ಕಾಲೇಜಿಗೆ ಬೇರೆ ಹೋಗಬೇಕಾ ಎಂದು ನನಗೆ, ನನ್ನ ಮಗನಿಗೆ ಯಾಕೋ ತುಂಬ ಮರುಕವೆನ್ನಿಸಿತು. ಹಾಗೆ ಸುಸ್ತಾಗಿ ಬಂದ ಹುಡುಗನೊಟ್ಟಿಗೆ ನಾಯಿಯಂತೆ ಕಿತ್ತಾಡಿದ್ದ ನನಗಂತೂ ಅವಮಾನವಾದಂತೆನಿಸಿತು.

ಪೆಚ್ಚು ನಗು ನಗುತ್ತಾ ಧನ್ಯವಾದ ಅರ್ಪಿಸಿ ‘ಸಂಜೆ ಬರುವುದರಲ್ಲಿ ಬೇರೆ ರೂಮ್ ಸಿದ್ದವಾದರೆ ಶಿಫ್ಟ್ ಮಾಡು ಮಾರಾಯಾ. ಆ ನರಕದಿಂದ ನಮ್ಮನ್ನು ಪಾರು ಮಾಡು’ ಎಂದು ಅಲವತ್ತುಕೊಂಡೆವು.ಅವತ್ತು ಆಗೇ ಆಗುತ್ತದೆ, ಹೆದರದಿರಿ ಎಂದು ಆಶ್ವಾಸನೆ ಕೊಟ್ಟ ಹುಡುಗ ಮೂರು ಮೂರು ಮೆಟ್ಟಿಲು ಒಟ್ಟಿಗೆ ಹಾರಿ ಹತ್ತುತ್ತ ಕಣ್ಮರೆಯಾದ.

ನಾವು ಅಲ್ಲೇನು ತಿನ್ನುವುದು ಅರ್ಥವಾಗದೇ ಗೊಣಗಾಡಿಕೊಂಡೇ ಸಿಕ್ಕಿದ್ದು ತಿಂದೆವು ಬೇರೆ ದೇಶಗಳಲ್ಲಿ ಬೆಳಗಿನ ತಿಂಡಿಯೇ ನಮ್ಮ ಜೀವಾಧಾರ. ಅದಾದ ನಂತರ ಎಲ್ಲಿ ಏನು ಸಿಗುತ್ತದೆಂದು ನಮಗೂ ಗೊತ್ತಿರುವುದಿಲ್ಲವಲ್ಲ.

 ಹಾಗಾಗಿ ಸಿಕ್ಕಿದ್ದನ್ನು ಚೆನ್ನಾಗಿ ಕಂಠಮಟ್ಟ ತಿಂದುಬಿಡುತ್ತೇವೆ. ಆದರೆ ಇಲ್ಲಿ ತಿನ್ನಲು ಏನಾದರೂ ಇದ್ದರೆ ತಾನೇ!

। ಮುಂದಿನ ವಾರಕ್ಕೆ ।

‍ಲೇಖಕರು ಬಿ ವಿ ಭಾರತಿ

October 20, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

6 ಪ್ರತಿಕ್ರಿಯೆಗಳು

  1. T S SHRAVANA KUMARI

    ಪ್ರಾಮಾಣಿಕವಾದ ಬರಹ, ಆಪ್ತವಾಯಿತು

    ಪ್ರತಿಕ್ರಿಯೆ
  2. ಭಾರತಿ ಬಿ ವಿ

    ಥ್ಯಾಂಕ್ಸ್ ಶ್ರವಣ ಕುಮಾರಿ ಮೇಡಂ

    ಪ್ರತಿಕ್ರಿಯೆ
  3. ಭಾರತಿ ಬಿ ವಿ

    ಥ್ಯಾಂಕ್ಸ್ ಕುಸುಮ ಪಟೇಲ್ ❤

    ಪ್ರತಿಕ್ರಿಯೆ
  4. ಭಾರತಿ ಬಿ ವಿ

    ಥ್ಯಾಂಕ್ಸ್ ಕೃಷ್ಣ ಪಟೇಲ್

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: