ಒಂದು ಕರಾಳ ರಾತ್ರಿ

ಪಶುವೈದ್ಯರಿಗೆ ಸರಿಯಾದ ಹೊತ್ತಿಗೆ ಮಧ್ಯಾಹ್ನದ ಊಟ ಮಾಡಕೂಡದೆಂಬ ಶಾಪವಿರುವಂತೆ ಕಾಣುತ್ತದೆ. ನಾನು ಸುಮಾರು ಮೂವತ್ತೈದು ವರ್ಷ ಪಶುವೈದ್ಯನಾಗಿ ಕೆಲಸ ಮಾಡಿದ್ದೇನೆ. ಅದರಲ್ಲಿ ಮಧ್ಯಾಹ್ನ ಸರಿಯಾದ ಹೊತ್ತಿಗೆ ಊಟ ಮಾಡಿರುವುದು ಅಪರೂಪ. ಆಸ್ಪತ್ರೆಯ ವೇಳೆಯಲ್ಲಿ ಎಷ್ಟು ಚಿಕಿತ್ಸೆ ನೀಡಿದ್ದೇನೆಯೋ ಅಷ್ಟೇ ಚಿಕಿತ್ಸೆಯನ್ನು ಅದರ ನಂತರವೂ ನೀಡಿದ್ದೇನೆ.

ಆಸ್ಪತ್ರೆಯಲ್ಲಿ ನೀಡಿರುವ ಚಿಕಿತ್ಸೆಯಷ್ಟೇ ಸಂಖ್ಯೆಯ ಚಿಕಿತ್ಸೆಯನ್ನು ರೈತರ ಮನೆ ಬಾಗಿಲಲ್ಲಿ ನೀಡಿದ್ದೇನೆ. ಹಗಲಲ್ಲಿ ನೀಡಿರುವಷ್ಟಲ್ಲದಿದ್ದರೂ ಗಣನೀಯ ಸಂಖ್ಯೆಯ ಚಿಕಿತ್ಸೆಯನ್ನು ಸೂರ್ಯಾಸ್ತದ ನಂತರವೂ ನೀಡಿದ್ದೇನೆ. ಹಗಲು ರಾತ್ರಿಗಳ ವ್ಯತ್ಯಾಸವಿಲ್ಲದಂತೆ ಅಲೆದಾಡಿದ್ದೇನೆ. ಅನೇಕ ಸಲ ನನ್ನ ಬೈಕು ಕೈ ಕೊಟ್ಟಿದೆ. ಪಂಕ್ಚರ್ ಆಗಿದೆ. ಚೈನು ಕಟ್ ಆಗಿದೆ. ಆದರೆ ಒಂದೇ ಒಂದು ಸಲವೂ ರಾತ್ರಿಯ ವೇಳೆ ತೊಂದರೆಯಾಗಿಲ್ಲವೆಂದರೆ ನನಗೇ ಆಶ್ಚರ್ಯವಾಗುತ್ತದೆ.

ಧರ್ಮಸ್ಥಳದಲ್ಲಿ ಮೂರು ವರ್ಷ ಪಶು ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗಲೂ ಮಧ್ಯರಾತ್ರಿಯ ವೇಳೆ ಒಬ್ಬನೇ ಸುರಿಯುವ ಮಳೆಯಲ್ಲಿ ರೈನ್ ಕೋಟ್ ಧರಿಸಿ ಹರಿದಾಡುವ ಹಾವುಗಳ ಮಧ್ಯೆ ಬೈಕಲ್ಲಿ ಕಾಡುಮೇಡಲ್ಲಿ ಅಲೆದಾಡುತ್ತಿದ್ದುದ ನೆನೆಸಿಕೊಂಡರೆ ಈಗ ಜೀವ ಝಲ್ ಎನ್ನುತ್ತದೆ.

೨೦೦೪ ರಲ್ಲಿ ಧರ್ಮಸ್ಥಳದಲ್ಲಿದ್ದಾಗ ಹೊಸದಾಗಿ ಮೊಬೈಲ್ ಖರೀದಿಸಿದ್ದೆ. ನಾನು ಯಾವತ್ತೂ ಮೊಬೈಲನ್ನು ಸ್ವಿಚ್ ಆಫ್ ಮಾಡಿದವನಲ್ಲ. ಚಿಕಿತ್ಸೆಗೆ ಬರುತ್ತೇನೆಂದು ಹೇಳಿದ ಮೇಲೆ ಎಷ್ಟೊತ್ತಾದರೂ ಹೋಗದೇ ಇದ್ದವನಲ್ಲ. ಅಕಸ್ಮಾತ್ ಹೋಗಲು ಸಾಧ್ಯವಿಲ್ಲದಾಗ ಲಭ್ಯವಿರುವ ಬೇರೆ ಪಶುವೈದ್ಯರ ಫೋನ್ ಸಂಖ್ಯೆ ತಿಳಿಸುತ್ತಿದ್ದೆ. ಹೀಗೆ ಒಬ್ಬ ವೈದ್ಯನಲ್ಲಿರಬೇಕಾದ ವಿಶ್ವಾಸ ಜನರಲ್ಲಿ ಬೆಳೆದುಬಿಟ್ಟಿತ್ತು.

ಧರ್ಮಸ್ಥಳದಲ್ಲಿ ಕೆಲಸ ನಿರ್ವಹಿಸುತ್ತಿದ್ದಾಗ ನಾನು ಉಜಿರೆಯಲ್ಲಿ ಮನೆ ಮಾಡಿದ್ದೆ. ಮಕ್ಕಳು ಉಜಿರೆಯ ಶಾಲಾಕಾಲೇಜುಗಳಲ್ಲಿ ಓದುತ್ತಿದ್ದರು. ಮಳೆಗಾಲದ ಒಂದು ರಾತ್ರಿ ಊಟ ಮಾಡಿ ಮಲಗುವ ಸಿದ್ಧತೆ ನಡೆಸಿದ್ದೆ. ಹೊರಗಡೆ ಸಂಜೆಯಿಂದಲೂ ಮಳೆ ಸುರಿಯುತ್ತಿತ್ತು. ಹೇಳುವವರು, ಕೇಳುವವರು ಇಲ್ಲದ ಮಕ್ಕಳಂತೆ ಮಳೆ ಹುಚ್ಚುಚ್ಚಾಗಿ ಆಡುತ್ತಿತ್ತು. ಸ್ವಲ್ಪ ಹೊತ್ತು ಜೋರಾಗಿ ಬರುತ್ತಿತ್ತು. ಸ್ವಲ್ಪ ಹೊತ್ತು ಮೆಲ್ಲಗೆ. ಸ್ವಲ್ಪ ಹೊತ್ತು ಏನೂ ಇಲ್ಲ. ಹೀಗೆ.

ಅಂದು ಎಂದಿನಂತೆ ಬೆಳಿಗ್ಗೆಯಿಂದ ಬೈಕಿನಲ್ಲಿ ಕನಿಷ್ಠ ಪಕ್ಷ ನೂರು ಕಿ.ಮೀ. ಕಾಡಿನಲ್ಲಿ ಸುರಿವ ಮಳೆಯಲ್ಲಿ ಅಲೆದು ಹತ್ತಿಪ್ಪತ್ತು ಹಸುಗಳಿಗೆ ನಾನಾ ನಮೂನೆಯ ಚಿಕಿತ್ಸೆ ನೀಡಿ (ಕೃತಕ ಗರ್ಭಧಾರಣೆಯಿಂದ ಹಿಡಿದು ಹೆರಿಗೆವರೆಗೆ ಮತ್ತು ಸಾಮಾನ್ಯ ಗಾಯಕ್ಕೆ ಮುಲಾಮು ಹಾಕುವುದರಿಂದ ಹಿಡಿದು ಗಂಭೀರವಾದ ಖಾಯಿಲೆಗಳವರೆಗೆ) ಸಂಜೆ ಎಂಟು ಗಂಟೆಗೆ ಮನೆಗೆ ಬಂದಿದ್ದೆ. ಸ್ನಾನ ಮಾಡಿ, ಊಟ ಮಾಡಿ ಮಲಗುವ ಹವಣಿಕೆಯಲ್ಲಿದ್ದೆ. ಕಣ್ಣುಗಳು ಭಾರವಾಗಿ ವಾಲಾಡುತ್ತ ಹಾಸಿಗೆ ಹಾಸುತ್ತಿದ್ದೆ. ಸಮಯ ಹತ್ತು ಗಂಟೆ ದಾಟಿತ್ತು. ಮನೆಯ ಬಾಗಿಲು ಯಾರೋ ತಟ್ಟಿದಂತಾಯಿತು.

ಮುಂಡ್ರುಪ್ಪಾಡಿಯಿಂದ ಗಿರೀಶ್ ಜೀಪಿನಲ್ಲಿ ಬಂದಿದ್ದರು. ನಮ್ಮನೆಯಿಂದ ಹದಿಮೂರು ಕಿ.ಮೀ. ದೂರ. ಅವರ ಮುಖದಲ್ಲಿ, ಮಾತಿನಲ್ಲಿ ಎಂಥ ಗಾಬರಿಯೆತ್ತೆಂದರೆ ನನ್ನ ನಿದ್ದೆಯೆಲ್ಲ ಒಂದೇ ಕ್ಷಣದಲ್ಲಿ ಮಾಯವಾಯಿತು.

ಕೆಸರುಮಯವಾಗಿದ್ದ ಕಾಲುಗಳಲ್ಲಿ ಒಳಗೆ ಬರದೆ ಹೊರ ರೂಮಿನಲ್ಲಿ ಕುಳಿತು ಗಿರೀಶ್ ಹೇಳಿದ್ದರ ಸಾರಾಂಶ : “ಮನೆಯ ಆಳು ‘ನಾಣು’ ಸಂಜೆ ಐದರ ನಂತರ ಮನೆಯ ನಾಲ್ಕು ಹಸು, ಒಂದು ಮಣಕ, ಒಂದು ೬-೭ ತಿಂಗಳ ಹೆಣ್ಣು ಕರುಗೆ ಮೈ ಮೇಲೆಲ್ಲ ಉಣ್ಣೆ (Ticks) ಆಗಿವೆಯೆಂದು ಕೊಟ್ಟಿಗೆಯ ಜಂತಿಯ ಮೇಲಿಟ್ಟಿದ್ದ ಕ್ರಿಮಿನಾಶಕ  ಔಷಧವನ್ನು ನೀರಿನಲ್ಲಿ ಬೆರೆಸಿ ದನಗಳ ಬಾಯಿ ಕಟ್ಟಿ ಮೈಮೇಲೆಲ್ಲ ಪಂಪ್‌ನಲ್ಲಿ ಸಿಂಪಡಿಸಿದ್ದಾನೆ.

ಒಂದು ಲೀಟರ್ ನೀರಿಗೆ ಒಂದು ಅಥವಾ ಎರಡು ಮಿಲಿ ಲೀಟರ್ ಔಷಧ ಹಾಕುವ ಬದಲು ಅದೆಷ್ಟೆಷ್ಟು ಔಷಧ ಬೆರೆಸಿದನೋ ಆ ದೇವರಿಗೇ ಗೊತ್ತು. ಒಟ್ಟು ಆರು ದನಗಳಿಗೂ ವಿಷವೇರಿದಂತೆ ಕಾಣುತ್ತೆ. ನಾನು ಏನೋ ಕೆಲಸದ ಮೇಲೆ ಮಂಗಳೂರಿಗೆ ಹೋಗಿದ್ದವನು ಈಗಷ್ಟೇ ಹಿಂತಿರುಗಿದ್ದೆ. ಮನೆಗೆ ಹೋಗಿ ವಿಷಯ ತಿಳಿದು ನೇರ ನಿಮ್ಮಲ್ಲಿಗೇ ಬಂದೆ. ಮೊಬೈಲ್ ಹತ್ತುವುದಿಲ್ಲ. ಕೂಡಲೇ ಬಂದು ಚಿಕಿತ್ಸೆ ನೀಡಿ” ಎಂಬುದಾಗಿತ್ತು.

ಪದವೀಧರರಾಗಿದ್ದ ಗಿರೀಶರಿಗೆ ಉಣ್ಣೆ, ಚಿಗಟ, ನುಸಿ, ಹೇನು ಮುಂತಾದ ಹೊರ ಪರೋಪಜೀವಿಗಳು ತಂದೊಡ್ಡುವ ಅಪಾಯಗಳ ಬಗ್ಗೆ ಗೊತ್ತಿತ್ತು. ಇದುವರೆಗೆ ತಾವೇ ಮುಂದೆ ನಿಂತಿದ್ದು ಉಣ್ಣೆಗೆ ಔಷಧ ಸಿಂಪಡಿಸುವ ಕಾರ್ಯಾಚರಣೆ ನಡೆಸುತ್ತಿದ್ದರಂತೆ. ಈ ಸಲ ಅವರ ಆಳು ‘ನಾಣು’ ವಿಪರೀತ ಉಣ್ಣೆ ಆಗಿವೆಯೆಂದು ತಾನೇ ಔಷಧವನ್ನು ಪಂಪಿನಲ್ಲಿ ಸಿಂಪಡಿಸಿದ್ದಾನೆ! ಅಷ್ಟಕ್ಕೇ ಸುಮ್ಮನಾಗದೆ ದನದ ಹಟ್ಟಿಯ ಗೋಡೆ ಜಾಲರಿಗೆಲ್ಲ ಮತ್ತಷ್ಟು ಔಷಧ ಬೆರೆಸಿ ಸರಿಯಾಗಿ ಪಂಪ್ ಮಾಡಿದ್ದಾನೆ.

ಆ ವಿಷಕ್ಕೆ ಸಿಕ್ಕ ಹುಳುಗಳು ಈ ಜನ್ಮದಲ್ಲಿ ಸಾಯೋದಷ್ಟೇ ಅಲ್ಲ ಮುಂದಿನ ಏಳು ಜನ್ಮದಲ್ಲಿಯೂ ವಿಷವೇರಿ ಸಾಯಬೇಕು! ನಾಣುಗೆ ಅಷ್ಟು ಸಿಟ್ಟು ಬರಲು ಕಾರಣವೂ ಇತ್ತು. ಅವರ ಮನೆಯಲ್ಲಿ ಇತ್ತೀಚೆಗಷ್ಟೆ ಒಂದೇ ಸಲ ಮೂರು ದೊಡ್ಡ ಹಸುಗಳಿಗೆ ಥೈಲೇರಿಯಾಸಿಸ್ ಎಂಬ ಖಾಯಿಲೆಯಾಗಿ ಬಚಾವಾಗಿದ್ದವು.

ಆಗ ನಾನು ಗಿರೀಶರ ಮನೆಗೆ ಐದು ದಿನ ಭೇಟಿ ಮಾಡಿ ಖಾಯಿಲೆ ಹಸುಗಳಿಗೆ ಚಿಕಿತ್ಸೆ ನೀಡಿದ್ದೆ. ಹೊರ ಪರೋಪಜೀವಿಗಳಿಂದ ಈ ರೋಗ ಬರುತ್ತದೆಂದು ತಿಳಿಸಿ ಹೇಳಿದ್ದೆ. ಆದರೆ ನಾಣು ಉಣ್ಣೆ ಮೇಲೆ ಈ ರೀತಿ ಸಿಟ್ಟು ತೀರಿಸಿಕೊಳ್ಳುತ್ತಾನೆಂದು ನನಗೆ ಅರಿವಿರಲಿಲ್ಲ.

ತಡಮಾಡದಂತೆ ಸಿದ್ಧನಾಗಿ ಮೆಡಿಸಿನ್ ಬ್ಯಾಗ್ ಅನ್ನು ಒಮ್ಮೆ ಕಣ್ಣಾಡಿಸಿ ಜೀಪಲ್ಲಿ ಹಾಕಿಕೊಂಡು ಮೆಡಿಕಲ್ ಶಾಪಿಗೆ ಹೋದೆವು. ಇಂಥ ವಿಶೇಷ ಸಂದರ್ಭಗಳಲ್ಲಿ ಬೇಕಾಗುವ ಔಷಧಗಳು ಬೇಕಾದ ಪ್ರಮಾಣದಲ್ಲಿ ಆಸ್ಪತ್ರೆಗಳಲ್ಲಿ ಇರದೇ ಹೋಗಬಹುದು. ಅಂಗಡಿ ಮುಚ್ಚಿತ್ತು. ಅಂಗಡಿ ಹಿಂದೆಯೇ ಅಂಗಡಿ ಮಾಲೀಕರ ಮನೆಯಿತ್ತು. ಅದನ್ನು ಹುಡುಕಿ ಅವರಿಗೆ ವಿಷಯ ತಿಳಿಸಿದೆವು. ಅವರು ಓಡುತ್ತೋಡುತ್ತ ಬಂದು ಕೆಲಸ ಮಾಡಿಕೊಟ್ಟರು.

ನಾನು ಬೇಕಾದ ಎಲ್ಲ ಔಷಧಗಳನ್ನೂ ಬೇಕಾದ ಪ್ರಮಾಣಕ್ಕಿಂತ ಸ್ವಲ್ಪ ಹೆಚ್ಚೇ ಪ್ಯಾಕ್ ಮಾಡಿಸಿದೆ. ಏನಕ್ಕೂ ಇರಲಿ ಎಂದು ಹತ್ತತ್ತು ಸಿರಿಂಜ್ ಹಾಗೂ ಐ.ವಿ. ಸೆಟ್‌ಗಳನ್ನು ಸಹ ತೆಗೆದುಕೊಂಡು ಹೊರಟೆವು. ಅಕಸ್ಮಾತ್ ಏನಾದರೂ ಸಾಲದೇ ಹೋಗಕೂಡದೆಂಬುದು ನನ್ನ ಇರಾದೆಯಾಗಿತ್ತು. ಉಪಯೋಗಿಸದೆ ಉಳಿದರೆ ಅಂಗಡಿಗೆ ವಾಪಸ್ ಕೊಡಬಹುದಿತ್ತು.

ನಾಲ್ಕು ಬಾಕ್ಸ್ ಔಷಧಗಳು ಜೀಪಲ್ಲಿ ಹಾಕಿಕೊಂಡು ಹೊರಟೆವು. “ಗಿರೀಶ್, ನಾಣು ಹೇಗಿದ್ದಾನೆ? ಅವನಿಗೇನೂ ತೊಂದರೆಯಿಲ್ಲವೆ?” ಎಂದೆ. “ಇಲ್ಲ ಸಾರ್ ನಾನು ಬರುವಾಗ ಚೆನ್ನಾಗಿಯೇ ಇದ್ದ”ಎಂದ. ಗಿರೀಶರನ್ನು ನಾನು ಅದುವರೆಗೆ ದೂರದಿಂದ ಮಾತಾಡಿಸಿದ್ದೆನೇ ಹೊರತು ಹತ್ತಿರದಿಂದ ಕಂಡವನಲ್ಲ.

ಜೀಪಲ್ಲಿ ಪಕ್ಕದಲ್ಲಿಯೇ ಕುಳಿತಿದ್ದ ಗಿರೀಶರು ಬಹಳ ಸಂಕೋಚ ಪ್ರವೃತ್ತಿಯವರಂತೆ ಕಂಡರು. ಬಹಳ ಮೃದು, ಕಡಿಮೆ ಮಾತು. ಔಷಧದ ಬಾಕ್ಸ್ ಗಳನ್ನು ಎತ್ತಲು ನನಗೆ ಬಿಡದೆ ತಾವೇ ಹೊತ್ತು ಜೀಪಿಗೆ ತಂದು ಇಟ್ಟಿದ್ದರು. ಅವರಿಗೆ ಸುಮಾರು ೩೫ ವರ್ಷಗಳಾಗಿರಬೇಕೆಂದು ಅಂದಾಜಿಸಿದೆ.

ಜೀಪು ಮುಂಡ್ರುಪ್ಪಾಡಿಯತ್ತ ಹೊರಟಿತು. ರಸ್ತೆಯಲ್ಲಿ ವಾಹನ ಸಂಚಾರ ಕಡಿಮೆಯಿತ್ತು. ಮಳೆಯಲ್ಲಿ ಲೋಕವೇ ಸ್ನಾನ ಮಾಡುತ್ತಿದ್ದಂತಿತ್ತು. ಜೀಪಿನ ಬೆಳಕಿನಲ್ಲಿ ಟಾರು ರೋಡು, ಅಕ್ಕಪಕ್ಕದ ಮನೆಗಳು, ಗಿಡಮರಗಳು ಫಳಫಳ ಹೊಳೆಯುತ್ತಿದ್ದವು. ಮಾರ್ಗಮಧ್ಯೆ ಮಳೆಗಾಲದ ನೇತ್ರಾವತಿ ನದಿ ಉಕ್ಕಿ ಹರಿಯುತ್ತಿತ್ತು. ಅದರ ಅಸೀಮ ಶಕ್ತಿ ನನ್ನಲ್ಲಿ ಹೊಸ ಚೈತನ್ಯವನ್ನು ಉದ್ದೀಪಿಸಿತು. ಹರಿವ ನದಿಯ ಸಂಗೀತ ದೂರದ ರಸ್ತೆಗೆ ಕೇಳಿಸುತ್ತಿತ್ತು. ಜೀಪು ಧರ್ಮಸ್ಥಳದ ಪಶು ಆಸ್ಪತ್ರೆ ಎದುರೇ ಹಾದುಹೋಯಿತು.

ದೊಡ್ಡ ಕಾಂಪೌಂಡ್ ಒಳಗಡೆ ಒಂದಷ್ಟು ದೂರದಲ್ಲಿ ಮೌನವಾಗಿ ಮಳೆಯಲ್ಲಿ ತೋಯುತ್ತ ಮಂದಬೆಳಕಲ್ಲಿ ಆಸ್ಪತ್ರೆ ಆತ್ಮೀಯ ಮಿತ್ರನಂತೆ ನಿಂತಿತ್ತು. ಆಸ್ಪತ್ರೆಯನ್ನು ಎಂದೂ ಈ ಹೊತ್ತಲ್ಲಿ ಇಂಥ ಸನ್ನಿವೇಶದಲ್ಲಿ ನೋಡಿರಲಿಲ್ಲ. ಈ ವಿದ್ಯೆ ಈ ವೃತ್ತಿ ಈ ಆಸ್ಪತ್ರೆ ನನ್ನ ಬದುಕಿಗೊಂದು ಗುರಿ ಕೊಟ್ಟಿದ್ದವು. ನನಗೊಂದು ಸ್ಥಾನಮಾನ ಕೊಟ್ಟಿದ್ದವು. ಒಂದು ಶ್ರೇಷ್ಠವಾದ ಅವಕಾಶವನ್ನು ಕೊಟ್ಟಿದ್ದವು.

ಅಷ್ಟೇ ಅಲ್ಲ ನನ್ನನ್ನೂ, ನನ್ನ ಹೆಂಡತಿ ಮಕ್ಕಳನ್ನೂ ಉದ್ದಕ್ಕೂ ಪೊರೆದಿದ್ದವು. ಇದ್ದಕ್ಕಿದ್ದಂತೆ ನನ್ನೊಳಗೆ ವಿದ್ಯುತ್ ಸಂಚಾರವಾದಂತಾಯಿತು. ಭಾವಗಳ ಮಹಾಪೂರವೊಂದು ಉಕ್ಕಿ ಹರಿದಂತಾಯಿತು. ಜೀಪಿನಿಂದಲೇ ಆಸ್ಪತ್ರೆಯತ್ತ ಕೃತಜ್ಞತಾಭಾವದಿಂದ ನೋಡಿದೆ. ತಲೆಬಾಗಿಸಿದೆ.

ಗಿರೀಶರ ಮನೆ ತೋಟದಲ್ಲಿತ್ತು. ಅಲ್ಲೇ ಹತ್ತಿರದಲ್ಲಿ ದನಗಳ ಹಟ್ಟಿ. ಜೀಪು ಸೀದಾ ಹಟ್ಟಿಯ ಬಳಿ ನಿಂತಿತು. ಅಲ್ಲಿ ಸನ್ನಿವೇಶ ಭೀಕರವಾಗಿತ್ತು. ಹಟ್ಟಿ ಮತ್ತು ಸುತ್ತಮುತ್ತ ವಿಷದ ವಾಸನೆ ಹಬ್ಬಿ ನಿಂತಿತ್ತು.

ನಾವು ಜೀಪಿನಿಂದಿಳಿದಾಗ ಆಗಲೇ ದೊಡ್ಡ ಹಸುಗಳೆರಡು ಸತ್ತು ಹೋಗಿದ್ದವು. ಅವುಗಳ ಮೃತ ದೇಹಗಳನ್ನು ನಾಣು ಮತ್ತಿತರ ನಾಲ್ಕೈದು ಜನ ಹಟ್ಟಿಯಿಂದ ಹೊರಗೆ ಸಾಗಿಸುತ್ತಿದ್ದರು. ಇನ್ನೆರಡು ಹಸುಗಳು, ಒಂದು ಮಣಕ ಮತ್ತು ಒಂದು ಕರು ಹಟ್ಟಿಯಲ್ಲಿ ಅಲ್ಲೊಂದು ಇಲ್ಲೊಂದು ವಿಷವೇರಿ ಸಂಕಟಪಡುತ್ತಿದ್ದವು.

ಮೊದಲು ನಾನು ದನಗಳಿಗೆ ಸಿಂಪಡಿಸಿದ್ದ ಔಷಧದ ಬಾಟಲು ಪರೀಕ್ಷಿಸಿದೆ. ಅದು ಆರ್ಗೆನೋಫಾಸ್ಫರಸ್ (Organophosphorous Compound) ಕ್ರಿಮಿನಾಶಕವಾಗಿತ್ತು ಮತ್ತು ಬಾಟಲು ಖಾಲಿಯಾಗಿತ್ತು.

ಬದುಕಿದ್ದ ಎರಡು ದೊಡ್ಡ ಹಸುಗಳಲ್ಲಿ ಒಂದು ಎಚ್‌ಎಫ್ ಹಸು ಮತ್ತೊಂದು ಜರ್ಸಿ ಹಸು. ಮಣಕ ಮತ್ತು ಕರು ಎರಡೂ ಎಚ್‌ಎಫ್ ತಳಿಗಳಾಗಿದ್ದವು. ಎಲ್ಲವೂ ರಾಶಿ ರಾಶಿ ಜೊಲ್ಲು ಸುರಿಸುತ್ತಿದ್ದವು. ಮೂಗಿಂದ ಸಿಂಬಳ ನೆಲದ ತನಕ ಏಕವಾಗಿ ನಿಂತಿತ್ತು. ಕೆಂಪಗಾದ ಕಣ್ಣುಗಳಿಂದ ಕಣ್ಣೀರು ಸುರಿದು ಹೋಗುತ್ತಿದ್ದವು. ಗಳಿಗೆಗೊಮ್ಮೆ ಗಂಜಲ ಹೊಯ್ಯುತ್ತಿದ್ದವು. ಸಗಣಿ ಹಾಕುತ್ತಿದ್ದವು. ಅವು ನಾಲ್ಕು ದನಗಳೂ ಕಟ್ಟುಸಿರು ಹೊಡೆಯುತ್ತಿದ್ದವು. ಅವುಗಳ ಉಸಿರಾಟದ ಶಬ್ದ ದೂರಕ್ಕೆ ಕೇಳಿಸುತ್ತಿತ್ತು.

ಬಾಯಿಂದ ಬಿಟ್ಟು ಬಿಟ್ಟು ಅವು ಒಂದು ರೀತಿಯ ಮಂದ್ರವಾದ ಶಬ್ದವನ್ನು ಹೊರಡಿಸುತ್ತಿದ್ದವು. ಅದು ದನಗಳ ನೋವನ್ನು, ಸಂಕಟವನ್ನು ತೋರಿಸುತ್ತಿದ್ದಂತಿತ್ತು. ಅದು ಅವುಗಳ ಮುಗ್ಧತನವನ್ನೂ, ಮೋಸ ಹೋದ ಬಗೆಯನ್ನೂ ವಿಧವಿಧವಾಗಿ ದೇವರೆದುರು ಹೇಳಿಕೊಂಡಂತೆ ಕೇಳಿಸಿ ನಾನು ವಿಹ್ವಲನಾಗಿ ಹೋದೆ. ಇದೆಲ್ಲಕ್ಕಿಂತ ಹೆಚ್ಚಾಗಿ ಅವುಗಳು ತೋರಿಸುತ್ತಿದ್ದ ನರಸಂಬಂಧಿ ವಿಷ ಲಕ್ಷಣಗಳು ನನ್ನನ್ನು ಅಲ್ಲಾಡಿಸಿಬಿಟ್ಟವು. ಅವುಗಳು ವಿಪರೀತ ವೇಗದಲ್ಲಿ ಕಣ್ಣು ಮಿಟುಕಿಸುತ್ತಿದ್ದವು.

ಕಿವಿಗಳನ್ನು ಪಟಪಟನೆ ಬಡಿದುಕೊಳ್ಳುತ್ತಿದ್ದವು. ಮುಖವನ್ನು ನೂರು ಜೇನುನೊಣಗಳು ಮುಕುರಿದಂತೆ ತಮಗರಿವಿಲ್ಲದಂತೆ ಅಲ್ಲಾಡಿಸುತ್ತಿದ್ದವು. ದೇಹದ ಯಾವುದೋ ಭಾಗದ ಯಾವುದೋ ಮಾಂಸಖಂಡ ಅನೈಚ್ಛಿಕವಾಗಿ ಪಟಪಟಪಟ ಸಂಕುಚನಗೊಳ್ಳುತ್ತ ಹೊಡೆದುಕೊಳ್ಳುತ್ತಿದ್ದವು (Twitch). ಅದೇನು ಬಂದನವೋ ಏನೋ, ಅದಾವ ಒಳಾಂಗದ ನೋವೋ ಏನೋ, ಇದ್ದಕ್ಕಿದ್ದಂತೆ ನಾಲ್ಕು ಕಾಲುಗಳನ್ನೂ ದಶದಿಕ್ಕಿಗೆ ಬೀಸುವುದು, ದಬಾರೆಂದು ಬೀಳುವುದು, ಏಳುವುದು……

ಇದೆಲ್ಲ ರಾದ್ಧಾಂತದ ಮಧ್ಯೆ ಬಾಲವು ಕಿತ್ತುಹೋಗುವಂತೆ ಚಾಟಿಯಂತೆ ಬೀಸುತ್ತಿದ್ದವು. ಇಡೀ ವಾತಾವರಣವೇ ದನಗಳು ಬಾಯಿಂದ ಹೊರಡಿಸುತ್ತಿದ್ದ ಶಬ್ದ, ಕಾಲು ಝಾಡಿಸುವ ಶಬ್ದ, ಬಾಲದ `ಸುಯ್ಞ್ ಸುಯ್ಞ್’ ಶಬ್ದ, ಕಾಲ್ಗೊರಸು ಹಟ್ಟಿಯ ಸಿಮೆಂಟ್ ನೆಲಕ್ಕೆ ಉಜ್ಜಿ ಉಂಟಾದ ಶಬ್ದ, ಗಂಜಲ ಉಯ್ದ ಶಬ್ದ, ಸಗಣಿ ಹಾಕಿದ ಶಬ್ದ, ಕಣ್ಣು ಕಾಣಿಸದಂತಾದ ಹಸುಗಳು ಗೋಡೆ ಗ್ವಾದಲಿ ಕಂಬಗಳನ್ನು ಡಿಕ್ಕಿ ಹೊಡೆದ ಶಬ್ದ, ಹೊರಗೆ ಬಿಟ್ಟು ಬಿಟ್ಟು ಬರುತ್ತಿದ್ದ ಧಾರಾಕಾರ ಮಳೆಯ ಶಬ್ದ.

ಇಷ್ಟರ ಮೇಲೆ ನಾಣು ಮುಂತಾದವರು ಹಟ್ಟಿಯಿಂದ ಹೊರಕ್ಕೆ ಹೊತ್ತೊಯ್ಯುತ್ತಿದ್ದ ಸತ್ತ ಹಸುವಿನ ಗುದದ್ವಾರದಿಂದ ರಕ್ತ ಸುರಿಯುತ್ತಿತ್ತೆಂದರೆ ನಿಮಗೆ ಸನ್ನಿವೇಶದ ಭೀಕರತೆ ಅರ್ಥವಾಗಬಹುದು.

ಚಿಕಿತ್ಸೆ ಪ್ರಾರಂಭ ಮಾಡಿದಾಗ ಸಮಯ ಹನ್ನೊಂದು ದಾಟಿತ್ತು. ಸಣ್ಣ ಕರುವನ್ನು ಕೆಡವಿಕೊಂಡು ಭದ್ರವಾಗಿ ಹಿಡಿದು ಕೊಡಬೇಕಾದ ಇಂಜೆಕ್ಷನ್‌ಗಳನ್ನು ಕೊಟ್ಟೆವು. ಅದು ಸುಲಭವಿತ್ತು. ಆದರೆ ಇನ್ನುಳಿದವಕ್ಕೆ ಚಿಕಿತ್ಸೆ ನೀಡುವುದೇ ಕಷ್ಟಕರವಾಗಿತ್ತು. ಅವು ನಿಂತ ಕಡೆ ನಿಲ್ಲುತ್ತಿರಲಿಲ್ಲ. ಒಂದೇ ಭಂಗಿಯಲ್ಲಿರುತ್ತಿರಲಿಲ್ಲ. ಕುಳಿತ, ನಿಂತ, ಮಲಗಿದ ಭಂಗಿಯನ್ನು ರಭಸದಿಂದ ಬದಲಾಯಿಸುತ್ತಿದ್ದವು.

ಎಲ್ಲ ಇಂಜೆಕ್ಷನ್‌ಗಳನ್ನೂ ರಕ್ತನಾಳಕ್ಕೆ ಕೊಡಬೇಕಾಗಿತ್ತು. ರಕ್ತನಾಳ ಹುಡುಕಿ ಸೂಜಿ ಚುಚ್ಚುವ ಕ್ಷಣದಲ್ಲಿ ಭಂಗಿ ಬದಲಾಯಿಸಿಬಿಡುತ್ತಿದ್ದವು. ಕುಣಿಯುತ್ತಿರುವ ಹಸುಗಳಲ್ಲಿ ರಕ್ತನಾಳ ಹುಡುಕಿ ಇಂಜೆಕ್ಷನ್ ಮಾಡುವುದು,  DNS (Dextrose Normal Saline), Atropine, Calcium ಬಾಟಲುಗಳನ್ನು ಏರಿಸುವುದು ಎಂಥ ಸವಾಲಿನ, ತಾಳ್ಮೆಯ ಕೆಲಸ ಎಂಬುದನ್ನು ನೋಡಿಯೇ ತಿಳಿಯಬೇಕು.

ಒಂದೊಂದು ಹಸು ಚಿಕಿತ್ಸೆಗೆ ಅರ್ಧದಿಂದ ಒಂದು ಗಂಟೆ ಸಮಯವಾದರೆ ಕೊನೆಯ ದನ ಚಿಕಿತ್ಸೆಗೆ ಮುಂಚೆಯೇ ಸತ್ತುಹೋಗಬಹುದು! ನನಗೆ ಸಮಯವಿರಲಿಲ್ಲ. ವಿಷವೇರಿ ಕುಣಿಯುತ್ತಿರುವ ಹಸುಗಳನ್ನು ಹೇಗಾದರೂ ಮಾಡಿ ಬದುಕಿಸಬೇಕೆಂದು ಹೋರಾಡುತ್ತಿದ್ದವನು ನಾನೊಬ್ಬನೇ ಅಲ್ಲ. ಗಿರೀಶ್, ನಾಣು, ಕರಿಯ, ಬುಗುಟ, ಐತರೆಲ್ಲ ಈ ಕಾರ್ಯದಲ್ಲಿ ಮಗ್ನರಾಗಿದ್ದರು.

ಹಟ್ಟಿಯೊಳಗೆ ಹಸುಗಳು ಗೋಡೆ ಕಂಬಗಳಿಗೆಲ್ಲ ಕಾಲು ಝಾಡಿಸಿ ಏಟು ಮಾಡಿಕೊಳ್ಳುತ್ತವೆಂದು ಹೊರಗೆ ಹಿಡಿದು ತಂದರೆ ಅಲ್ಲಿ ಅಸಾಧಾರಣ ಮಳೆ ಸುರಿಯುತ್ತಿತ್ತು. ಮತ್ತೆ ಹಸುಗಳ ಒಳಗೆ ತಂದು, ರಕ್ತನಾಳ ಹುಡುಕುತ್ತ ಚಿಕಿತ್ಸೆ ಮುಂದುವರೆಸಿದೆವು. ಒಂದೊಂದು ದನಕ್ಕೂ ಮೂರು ನಾಲ್ಕು ತರಹದ ಇಂಜೆಕ್ಷನ್ ಮಾಡಬೇಕಿತ್ತು. ಕೆಲವು ಇಂಜೆಕ್ಷನ್‌ಗಳನ್ನು ಸ್ವಲ್ಪ ಸಮಯದ ನಂತರ ಪುನರಾವರ್ತಿಸಬೇಕಾಗಿತ್ತು.

ದನಗಳನ್ನು ಹಿಡಿಯಲು ನಾಲ್ಕು ಜನರಾದರೂ ಇದ್ದರು. ಆದರೆ ಚಿಕಿತ್ಸೆ ಮಾಡಲು ನಾನೊಬ್ಬನೇ. ಯಾವ ದನಕ್ಕೆ ಯಾವ ಔಷಧ ಕೊಟ್ಟಿದೆ, ಯಾವುದಕ್ಕೆ ಮರು ಇಂಜೆಕ್ಷನ್ ಕೊಟ್ಟಿದೆ ಇತ್ಯಾದಿ ಹೇಳುತ್ತ, ನೆನಪಿಟ್ಟುಕೊಳ್ಳುತ್ತ ನಾನು ಹರಿದು ಹಂಚಿಹೋಗಿದ್ದೆ. ಯುದ್ಧಗಳು ರಣರಂಗದಲ್ಲಿ ಮಾತ್ರ ನಡೆಯುವುದಿಲ್ಲ ಮತ್ತು ಸಾವು ನೋವಾಗುವುದು ಮನುಷ್ಯರಿಗೆ ಮಾತ್ರ ಅಲ್ಲ ಎಂಬುದನ್ನು ಇಡೀ ಜಗತ್ತು ಅಂದು ಆ ಹಟ್ಟಿಯನ್ನು ನೋಡಿ ಸ್ಪಷ್ಟಪಡಿಸಿಕೊಳ್ಳಬಹುದಿತ್ತು. ಅದೊಂದು ರಾಸಾಯನಿಕ ಯುದ್ಧವಾಗಿತ್ತು.

ಆದರೆ ಒಂದೇ ಒಂದು ದನವೂ ಗುಣಮುಖವಾದಂತೆ ಕಾಣಲಿಲ್ಲ. ಅವುಗಳ ನೋವು ಸಂಕಟ, ಕುಣಿತ, ಜೊಲ್ಲು ಸುರಿತ ಮುಂತಾದವು ಹೆಚ್ಚುತ್ತಲೇ ಹೋದವು. ವಿಷ ಮೈತುಂಬ ಹಬ್ಬಿಯಾಗಿತ್ತು. ರಕ್ತಕ್ಕಂಟಿದ ವಿಷ ಯಾವ ಪ್ರತ್ಯೌಷಧಕ್ಕೂ ಕ್ಯಾರೇ ಅನ್ನುತ್ತಿರಲಿಲ್ಲ. ವಿಷದ ಅಟ್ಟಹಾಸದ ಎದುರು ಪ್ರತ್ಯೌಷಧಗಳ ಸದ್ದಡಗಿ ಹೋಗಿತ್ತು. ಸಮಯ ಎರಡು ಗಂಟೆಯಾಯ್ತು. ಮೂರು ಗಂಟೆಯಾಯ್ತು. ಎರಡೆರಡು ಸುತ್ತು ಇಂಜೆಕ್ಷನ್‌ಗಳಾದವು. ಹಸುಗಳ ಆರ್ಭಟ ಕಡಿಮೆಯಾಗಲಿಲ್ಲ.

ಹಟ್ಟಿಗೆ ನಾಲ್ಕೂ ಕಡೆ ಕಟಾಂಜನ ಮಾಡಿಸಿದ್ದರಿಂದ ಗಾಳಿ ಚೆನ್ನಾಗಿ ಆಡುತ್ತಿತ್ತು. ಮಳೆಯ ಹೊಡೆತಕ್ಕೆ ಕಟಾಂಜನಗಳಿಗೆ ಸಿಂಪಡಿಸಿದ್ದ ವಿಷ ತೊಳೆದು ಹೋಗಿತ್ತು. ಹೀಗಾಗಿ ವಿಷದ ದುರ್ನಾತದಿಂದ ನಾವು ಸ್ವಲ್ಪ ಬಚಾವಾಗಿದ್ದೆವು. ಚಿಕಿತ್ಸೆಯ ನಡುವೆ ನಾನು ನಾಣುವನ್ನು ಮಾತನಾಡಿಸಿದೆ. ನಾಣು ಮಾತನಾಡದಷ್ಟು ಕನಲಿ ಹೋಗಿದ್ದ. ತನ್ನ ಪಾಪಕ್ಕೆ ಪ್ರಾಯಶ್ಚಿತ್ತವೇ ಇಲ್ಲ ಎಂದು ನುಡಿದ.

ಎಷ್ಟು ಜನ್ಮಕ್ಕೆ ಈ ಪಾಪ ಬೆನ್ನು ಹತ್ತುತ್ತದೋ ಎಂದು ವ್ಯಸನಕ್ಕೆ ಬಿದ್ದಿದ್ದ. ಅವನ ಹೆಂಡತಿ ಸಹ ಮನೆಯಿಂದ ಹಟ್ಟಿಗೆ ಬಂದು ಗಂಡನಿಗೆ ಸಹಾಯ ಮಾಡುತ್ತಿದ್ದಳು. ಗೋಹತ್ಯೆಗೆ ಕಾರಣನಾದವನು ಏನಾದರೂ ಹೆಚ್ಚು ಕಡಿಮೆ ಮಾಡಿಕೊಂಡರೆ ಗತಿಯೇನು ಎಂಬುದು ಅವಳ ಚಿಂತೆಯಾಗಿತ್ತು.

ನಾಣುಗೆ ಏನಾದರೂ ಕೆಲಸ ಹೇಳಿ ಅವನು ಏನಾದರೂ ಕೆಲಸ ಮಾಡುತ್ತಿರುವಂತೆ ನೋಡಿಕೊಳ್ಳಬೇಕಾಗಿತ್ತು. ಒಂದರೆಗಳಿಗೆ ಕುಳಿತುಕೊಂಡರೂ ತಲೆ ಮೇಲೆ ಕೈ ಹೊತ್ತುಕೊಂಡು ಬಿಡುತ್ತಿದ್ದ. ತಲೆ ಅಲ್ಲಾಡಿಸುವುದು, ಒಬ್ಬನೇ ಮಣಮಣ ಎನ್ನುವುದು ಮಾಡುತ್ತಿದ್ದ. ಯಾರಾದರೂ ಮಾತನಾಡಿಸಿದರೆ ಎಲ್ಲೋ ಕಳೆದುಹೋದವನಂತೆ ಎಷ್ಟೋ ಹೊತ್ತಿನ ನಂತರ ಪ್ರತಿಕ್ರಿಯಿಸುತ್ತಿದ್ದ.

ಅಲ್ಲಿ ಇಲ್ಲಿ ಸ್ವಲ್ಪ ಬಿಡುವಾದ ಕೂಡಲೇ ನಾನು ನಾಣುಗೆ “ನೀನು ಬೇಕೆಂದೇ ಮಾಡಿದ ಕೆಲಸ ಅಲ್ಲ ಇದು. ಗೊತ್ತಿಲ್ಲದೇ ಮಾಡಿರುವ ಕೃತ್ಯ. ಅರಿಯದೇ ಮಾಡಿದ ತಪ್ಪಿಗೆ ಕ್ಷಮೆ ಉಂಟು” ಮುಂತಾಗಿ ಹೇಳಿದೆ. ನನ್ನ ಹತ್ತಿರ ಯಾವಾಗಲೂ ಖುಷಿಯಾಗಿ ಮಾತಾಡುತ್ತಿದ್ದ ನಾಣು ಇವತ್ತು ಯಾರೋ ಅಪರಿಚಿತ ವ್ಯಕ್ತಿಯಂತೆ ಕಾಣುತ್ತಿದ್ದ.

ಗಂಡನ ಮೇಲೆ ಕೆಲವು ದಿನ ಸದಾ ಗಮನವಿಟ್ಟಿರು ಎಂದು ಅವನ ಹೆಂಡತಿಗೆ ಹೇಳಿದೆ. ನಾಣು ಅಷ್ಟೊಂದು ವಿಷವನ್ನು ಬಹಳ ಜಾಗರೂಕತೆಯಿಂದ ನಿರ್ವಹಿಸಿದಂತೆ ಕಾಣುತ್ತಿತ್ತು. ಮನುಷ್ಯನನ್ನು ಅದೇ ತೀವ್ರತೆಯಲ್ಲಿ ಘಾಸಿಗೊಳಿಸುವ ವಿಷದ ಸಂಪರ್ಕವನ್ನು ನಾಣು ಅಷ್ಟು ಚೆನ್ನಾಗಿ ಹೇಗೆ ನಿಭಾಯಿಸಿದನೋ? ಏಕೆಂದರೆ ನಾನು ಕಂಡ ಅತ್ಯಂತ ಮುಗ್ಧನೂ, ಪೆದ್ದನೂ ಆಗಿದ್ದ ನಾಣು.

ಸ್ವಲ್ಪ ಹೆಚ್ಚು ಕಡಿಮೆಯಾಗಿದ್ದರೂ ನಾಣುಗೆ ಸಹ ವಿಷದ ಕೆಟ್ಟ ಪರಿಣಾಮವಾಗಬಹುದಿತ್ತು. ಎಷ್ಟೋ ವರ್ಷಗಳಿಂದ, ಗಿರೀಶರ ತಂದೆಯವರ ಕಾಲದಿಂದಲೂ ಅದೇ ಮನೆಯಲ್ಲಿ ಚಾಕರಿಗಿದ್ದನಂತೆ. ಅವನಿಗೆ ತುಳು ಭಾಷೆ ಚೆನ್ನಾಗಿ ಬರುತ್ತಿತ್ತು ಮತ್ತು ತಡೆದು ತಡೆದು ಕನ್ನಡವನ್ನಾಡುತ್ತಿದ್ದ. ಅವನಿಗೆ ಐವತ್ತು ವರ್ಷವಾಗಿದ್ದಿರಬಹುದು. 

ಅಂದು ರಾತ್ರಿ ಹತ್ತು ಗಂಟೆ ಸುಮಾರಿನಿಂದ ನನ್ನ ಜೊತೆಯೇ ಇದ್ದ ಗಿರೀಶರು ಬೆಳಗಿನ ಜಾವ ನಾಲ್ಕಾದರೂ ಒಂದೇ ಒಂದು ಸಲವಾದರೂ ನಾಣುವಿನ ಬಳಿ ಒರಟಾಗಿ ವರ್ತಿಸಿರಲಿಲ್ಲ. ಬೈದಿರಲಿಲ್ಲ. ಗದರಿರಲಿಲ್ಲ. ಜೋರಾಗಿ ಮಾತೂ ಸಹ ಆಡಿರಲಿಲ್ಲ. ಎಂದಿನಂತೆ, ನಾಣುವಿನಿಂದ ಏನೊಂದೂ ತಪ್ಪಾಗಿಲ್ಲವೇನೋ ಅನ್ನುವಂತೆ ಸಹಜವಾಗಿ ಮಾತಾಡುತ್ತಿದ್ದರು. ಸ್ವಲ್ಪವೂ ಸಿಟ್ಟಿರಲಿಲ್ಲ.

ಗಿರೀಶರು ಆ ಮಟ್ಟಿನ ಸಮಾಧಾನವನ್ನು ಹೇಗೆ ರೂಢಿಸಿಕೊಂಡಿದ್ದರೋ? ನಾನು ಸಾವಿರಾರು ಮನೆಗಳಲ್ಲಿ ಆಳಿನ ಜೊತೆ ಯಜಮಾನರು ವರ್ತಿಸುವ ರೀತಿಯನ್ನು ನೋಡಿದ್ದೇನೆ. ಆಳುಗಳನ್ನು ಮನುಷ್ಯರೆಂದು ಪರಿಗಣಿಸದೇ ಇರುವವರು, ಹೊಡೆದು ಬಡಿದು ಮಾಡುವವರು, ಹುರಿದು ತಿನ್ನುವವರೇ ಅಧಿಕ. ಗಿರೀಶರು ಅದಕ್ಕೆಲ್ಲಾ ಅಪವಾದದಂತಿದ್ದರು.

ಅಷ್ಟೊತ್ತಿಗೆ ಕರು ನಾವು ನೋಡುನೋಡುತ್ತಿದ್ದಂತೆಯೇ ಕೊನೆಯುಸಿರೆಳೆಯಿತು. ಅದನ್ನು ಪರೀಕ್ಷಿಸುತ್ತ ನೆಲದ ಮೇಲೆ ಕುಕ್ಕರಗಾಲಲ್ಲಿ ಕುಳಿತಿದ್ದೆ. ಅಷ್ಟರಲ್ಲೇ ನಮ್ಮೆಲ್ಲರಿಂದ ಕೊಂಚ ದೂರದಲ್ಲಿ ಸುಧಾರಿಸಿಕೊಳ್ಳುತ್ತಿದೆಯೇನೋ ಎಂಬಂತೆ ನಿಂತಿದ್ದ ದೊಡ್ಡ ಹಸುವೊಂದು ನಮ್ಮಲ್ಲಿ ಆಶಾಭಾವನೆಯನ್ನು ಹುಟ್ಟುಹಾಕಿತು.

ಗಿರೀಶ್ ಏನೋ ಹೇಳಲು ಬಂದರು. ಅವರು ಬಾಯಿ ತೆರೆಯುವಷ್ಟರಲ್ಲಿ ನೆಲಕ್ಕೆ ದಡಾರೆಂದು ಹಸು ಬಿದ್ದದ್ದೇ ಸ್ತಬ್ಧವಾಯಿತು. ಅದು ಬಾಯಿ ಕಳೆದು ಮುಚ್ಚುವುದರಲ್ಲಿ ಇಡೀ ಲೋಕದ ನೋವೇ ಅಡಗಿದಂತೆ ನನಗೆ ಭಾಸವಾಯಿತು. ಅದೂ ಸಹ ಸತ್ತು ಹೋಯಿತು. ಮೊದಲು ಕರುವನ್ನು ಹೊರಕ್ಕೆ ಸಾಗಿಸಿ ನಂತರ ಹಸುವನ್ನು ಕಷ್ಟಪಟ್ಟು ಹೊರಕ್ಕೆ ಸಾಗಿಸಿದರು. ಏಕೆಂದರೆ ಆ ಹಸು ತುಂಬುಗರ್ಭಿಣಿಯಾಗಿತ್ತು.

ಹಟ್ಟಿಯಲ್ಲೀಗ ಒಂದು ಹಸು ಮತ್ತು ಒಂದು ಮಣಕ ಉಳಿದಿದ್ದವು. ಅವೆರಡೂ ಹಟ್ಟಿಯ ಸಿಮೆಂಟ್ ನೆಲದ ಮೇಲೆ ಅಡ್ಡ ತಲೆ ಹಾಕಿ ಮಲಗಿದ್ದವು. ಅವೀಗ ದುರ್ಬಲವಾಗಿ ಬಾಲ, ಕಾಲು, ತಲೆಯನ್ನು ಆಡಿಸುತ್ತಿದ್ದವು. ಪ್ರತ್ಯೌಷಧವನ್ನು ಡಿ.ಎನ್.ಎಸ್. ಬಾಟಲಿಗೆ ಸೇರಿಸಿ ಎರಡು ದನಗಳಿಗೆ ಮತ್ತೊಮ್ಮೆ ಕೊಟ್ಟೆ. ಅದು ನನ್ನ ಕೊನೆಯ ಪ್ರಯತ್ನವಾಗಿತ್ತು. ನಮ್ಮಲ್ಲಿ ಯಾರಲ್ಲಿಯೂ ಆಸೆ ಉಳಿದಿರಲಿಲ್ಲ. ಯಾರೂ ಮಾತನ್ನೇ ಆಡದಂತೆ ಮೌನವಾಗಿದ್ದೆವು. ಹಸು ತಲೆಯೆತ್ತಿ ನಮ್ಮನ್ನೆಲ್ಲ ಒಮ್ಮೆ ನೋಡಿ ಹಾಗೆಯೇ ಮಲಗಿತು. ಒಮ್ಮೆ ಜೋರಾಗಿ ಉಸಿರೆಳೆದು ಬಿಟ್ಟಿತು. ಅದು ಅದರ ಕೊನೆಯ ಉಸಿರಾಗಿತ್ತು.

ಹಸುವನ್ನು ಹೊರಗೆಳೆಯತೊಡಗಿದರು. ಸಮಯ ಐದು ಗಂಟೆಯಾಗಿತ್ತು. ಮಣಕವು ಸತ್ತಿದೆಯೋ ಬದುಕಿದೆಯೋ ಗೊತ್ತಾಗದ ಸ್ಥಿತಿಯಲ್ಲಿತ್ತು. “ನೋಡೋಣ ಸಾರ್, ಮಣಕ ಬದುಕಿದ್ದರೆ ಯಾವುದಕ್ಕೂ ಫೋನ್ ಮಾಡುತ್ತೇನೆ. ಈಗ ಹೊರಡೋಣ” ಎಂದರು ಗಿರೀಶ್. ನನ್ನ ಬ್ಯಾಗನ್ನು ಜೋಡಿಸಿಕೊಂಡು ಹೊರಟೆ. ಅಳಿದುಳಿದ ಔಷಧಗಳನ್ನು ಒಂದು ಕಡೆ ಇಟ್ಟೆವು. ಗಿರೀಶ್ ಜೀಪ್ ಸ್ಟಾರ್ಟ್ ಮಾಡಿದರು.

ನಾನು ಮತ್ತು ನಾಣು ಜೀಪು ಹತ್ತಿ ಕುಳಿತೆವು. ಬುಗುಟ, ಕರಿಯ, ಐತರೆಲ್ಲ ಹಟ್ಟಿಯನ್ನು ಸ್ವಚ್ಛಗೊಳಿಸುತ್ತಲೂ, ಮಣಕದ ಚಿಂತಾಜನಕ ಸ್ಥಿತಿಯನ್ನು ನೋಡುತ್ತಲೂ ಅಲ್ಲಿಯೇ ಉಳಿದರು. ಗಿರೀಶರ ಕುಟುಂಬದವರೆಲ್ಲ ಮನೆಯೊಳಗೆ ಸೇರಿಕೊಂಡಿದ್ದರು. ಅವರಾರೂ ಹೊರಬರಲೇ ಇಲ್ಲ. ಅವರೆಲ್ಲ ಭಯ, ದುಃಖ ಮತ್ತು ಪಾಪಪ್ರಜ್ಞೆ ನರಳುತ್ತಿದ್ದರೆಂದು ಕಾಣುತ್ತದೆ.

ಜೀಪು ಉಜಿರೆ ಕಡೆ ಓಡತೊಡಗಿತು. ಮಾರ್ಗಮಧ್ಯದಲ್ಲಿ ಪಶು ಆಸ್ಪತ್ರೆ, ನೇತ್ರಾವತಿ ಕಾಣಿಸಿದವು. ನದಿ ಉಕ್ಕಿ ಹರಿಯುತ್ತಿತ್ತು. ನದಿಯ ರುದ್ರ ಸಂಗೀತ ರಸ್ತೆಗೆ ಕೇಳಿಸುತ್ತಿತ್ತು. ಮನೆ ಸೇರಿ ಮಲಗಿದರೆ ನಿದ್ದೆಯ ಸುಳಿವಿಲ್ಲ. ಹಿಂಡು ಸಾವನ್ನು ಕಣ್ಣೆದುರು ನೋಡಿ ತಲ್ಲಣಿಸಿ ಹೋಗಿದ್ದೆ. ಬೆಳಿಗ್ಗೆ ೮-೩೦ ಗಂಟೆಗೆ ಗಿರೀಶರ ಫೋನ್ ಬಂತು. ನಾವು ಹಟ್ಟಿ ಬಿಟ್ಟು ಬಂದ ಕೆಲವೇ ಕ್ಷಣಗಳಲ್ಲಿ ಮಣಕವೂ ಸತ್ತುಹೋಗಿತ್ತು.

ತದನಂತರ ಗಿರೀಶರು ಮತ್ತು ನಾನು ಯಾವಾಗ ಭೇಟಿಯಾದರೂ ನಮ್ಮ ಮಾತುಗಳಲ್ಲಿ  ಆ ಕರಾಳ ರಾತ್ರಿಯ ಕಪ್ಪು ಛಾಯೆ ಆವರಿಸಿಕೊಂಡಿರುತ್ತಿತ್ತು. ನಾಣು ಮತ್ತೆ ಮೊದಲಿನಂತೆ ನಕ್ಕು ಮಾತಾಡುವವನಾಗಲೇ ಇಲ್ಲ. ಮೊದಲ ನಾಣು ಅಂದು ಹಸುಗಳ ಜೊತೆಯೇ ಸತ್ತುಹೋಗಿದ್ದ.

*********

‍ಲೇಖಕರು Avadhi

October 20, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

6 ಪ್ರತಿಕ್ರಿಯೆಗಳು

  1. T S SHRAVANA KUMARI

    ಎಷ್ಟು ದೊಡ್ಡ ದುರಂತ… ಬರೆಯುತ್ತಿರುವ ಶಬ್ದಗಳು ಕಾಣದಂತಾಗಿದೆ.

    ಪ್ರತಿಕ್ರಿಯೆ
  2. Mallikarjuna Hosapalya

    ಓದುತ್ತಾ ಓದುತ್ತಾ ವಿಪರೀತ ಸಂಕಟವಾಯಿತು, ಗಿರೀಶರಂತೆಯೇ ನಿಮ್ಮ ಬರವಣಿಗೆಯೂ ನಿರುದ್ವಿಗ್ನ. ಅಷ್ಟೇ ಪರಿಣಾಮಕಾರಿ. ತೇಜಸ್ವಿಯವರ ನಿಗೂಢ ಮನುಷ್ಯರು ಓದಿದಂತಾಯ್ತು.

    ಪ್ರತಿಕ್ರಿಯೆ
  3. ಲಲಿತಾ ಸಿದ್ಧಬಸವಯ್ಯ

    ಬಹುಶಃ ಈ ಓದು ಇನ್ನೆಂದೂ ಮರೆಯಲಾರದ ಓದು ಸರ್,,, ಎಷ್ಟು ಯತ್ನಿಸಿದರೂ ಮರೆಯುವುದಿರಲಿ, ಪ್ರತಿ‌ ಮರುಕಳಿಕೆಯಲ್ಲಿ ಸಂಕಟ ಹೆಚ್ಚಾಗುತ್ತಿದೆ .

    ಪ್ರತಿಕ್ರಿಯೆ
  4. ಲಲಿತಾ ಸಿದ್ಧಬಸವಯ್ಯ

    ಈ ಓದನ್ನು ಇನ್ನೆಂದೂ ಮರೆಯಲಾರೆನು. ಎಷ್ಟು ಪ್ರಯತ್ನಿಸಿದರೂ ಕರಾಳ ರಾತ್ರಿಯ ಜೀವದನಗಳು, ನಾಣು ,ಗಿರೀಶ್ , ಪಶುವೈದ್ಯರು ಮತ್ತೆ ಮತ್ತೆ ಕಣ್ಮುಂದೆ ಜೀವಂತವಾಗುತ್ತಿದ್ದಾರೆ. ಅದ್ಭುತವಾದ ಅನುಭವ ಮಾಲಿಕೆ ಇದು. ಧನ್ಯವಾದಗಳು ಸರ್.

    ಪ್ರತಿಕ್ರಿಯೆ
  5. Dr akthar Hussain

    Experiencing the human-animal relationship n depency of each other by this series by Dr mirza Basheer. Wonderful experience n story. Love it

    ಪ್ರತಿಕ್ರಿಯೆ
  6. SUNIL CHANDRA

    THE FEELINGS….SELF….ANIMAL…..HOSPITAL….WEATHER…..LOVE….FATE…. GRIEF….. SAYS IT ALL…..ALL N ALL A WONDERFULLY CRFATED AND WRITTEN REAL EXPERIENCE.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: