ಸರೋಜಿನಿ ಪಡಸಲಗಿ
ಗುಂಡು ಎದೆ ಸೀಳಿ ಧರೆಗುರುಳಿತು
ಆತನ ದೇಹ ಆತನಲ್ಲ ಉರುಳಿದ್ದು
ಆತ ತಾಳಿರುವ ವಿರಾಟ್ ರೂಪವನು
ವ್ಯಾಪಿಸಿ ಅಖಂಡ ಬ್ರಹ್ಮಾಂಡವನು
ಹೆಜ್ಜೆ ಇಟ್ಟ ಕಡೆ ಆತನ ನೆರಳು
ಕಣ್ಣು ಹರಿಸಿದೆಡೆ ಆತನ ಮುಗ್ಧ ಸ್ನಿಗ್ಧ ನಗು
ಆತ ಸಂತ
ಅನಂತ ನೀಲನಭದಲಿ ಹರಡಿ
ಆ ಅಂಚಿನಿಂದ ಈ ಅಂಚಿನ ವರೆಗೂ
ಬಿಟ್ಟ ಕಣ್ಣು ಬಿಟ್ಟಂತೆ ನೋಡುತಿಹನಾತ
ಆ ಕನ್ನಡಕದ ಹಿಂದಿನ ಕಣ್ಣನು ಅಗಲಿಸಿ
ತನ್ನದೇ ನೆಲವನ್ನು ಅಲ್ಲಿರುವ ತನ್ನವರನು
ಯಾಕೋ ಆ ಮುಗ್ಧ ಸ್ನಿಗ್ಧ ನಗುವಲಿಣುಕಿದೆ
ಅದೇನೋ ಗೊಂದಲ ವಿಷಾದ
ತಾತನ ಕಣ್ಣು ಮಂಜು ಮಂಜು
ಆದರೂ ಆತ ಮೌನ – ಆತ ಸಂತ

ಆ ಮಂಜುಗಣ್ಣಲಿನ್ನೂ ಹರಿದಾಡುತಿದೆ
ರಾಮರಾಜ್ಯದ ಕನಸಿನ ಹೊಳಪಿನ ಮಿಂಚು
ಸುತ್ತಮುತ್ತ ಹುಡುಕುತಿಹನು ಕಂಡೀತೆ
ರಾಮರಾಜ್ಯದ ಸುಳಿವು ಎಂದು ಕಾತರದಿ
ಪಾಪ ಆತನೇನು ಬಲ್ಲ ರಾಮ ಆಗಲೇ
ರಾಜ್ಯ ಬಿಟ್ಟು ಹೋದ ವನದತ್ತ ಎಂದು
ದಣಿದ ಕಂಗಳಲಿ ಮುಗ್ಧ ನಗುವಲಿಣುಕಿದೆ
ಅದೇ ಗೊಂದಲ ಮತ್ತದೇ ವಿಷಾದ
ಆದರೂ ಆತ ಮೌನ – ಆತ ಸಂತ
ಆತ ದಂಗುಬಡಿದು ದಿಕ್ಕು ತಪ್ಪಿದಂತಿದೆ
ತನ್ನದೇ ನೆರಳಡಿಯಲಿ ನಡೆಯುತಿರುವ
ಪುಂಡರ ಭಂಡ ನಾಟಕವ ಮೆರವಣಿಗೆ
ಉರವಣಿಗೆಯ ಆಡಂಬರದಾಟವ ಕಂಡು
ಆತನಿಗೇನು ಗೊತ್ತು ಎಲ್ಲಿದರ ಅಂತ ಎಂದು
ಕನಸಲೂ ಎಣಿಸಿರದ ಈ ವಿಕಾರ ವಿಕೃತಿಗಳ ಕಂಡು
ನಡುಗುತಿರುವ ತನ್ನ ತಾ ಸಾವರಿಸಿಕೊಳ್ಳಲು
ಅರಸುತಿಹನು ಆಸರೆಗೆ ಎಲ್ಲಿ ತನ್ನ ಬೆತ್ತ ಎಂದು
ಆ ಮುಗ್ಧನಗುವಲಿಣುಕಿದೆ ಅದೇ ಗೊಂದಲ ವಿಷಾದ
ಆದರೂ ಆತ ಮೌನ -ಆತ ಸಂತ

ಎಲ್ಲಿಂದಲೋ ಬಂದ ಕೂಗಿಗೆ ಕಿವಿ ನಿಮಿರಿ
ಯಾರೋ ಕರೆವಂತಿದೆಯಲ್ಲ ನನ್ನೆಂದು ಆಲಿಸಿದ
ಬೇಗ ಬರಬಾರದೇ ಗಾಂಧಿ ತಾತ ನೋಡಲು
ನಿನ್ನವರ ನಿನ್ನ ನಾಡವರ ತೆರೆ ಎಳೆಯಲೀ ಯುಗಕೆ
ನಾಂದಿ ಹಾಡಲು ಹೊಸ ಯುಗಕೆ
ಧ್ವನಿಗೂಡಿಸುವೆವು ನಾವೂ ಎಂಬ ಗುಂಜನ
ಆತನಿಹನು ಆ ಕ್ಷಿತಿಜದಂಚಿನಲಿ
ನೀಲ ನಭದಲಿ ನೀಲವಾಗಿ ವ್ಯಾಪಿಸಿ
ವಿರಾಟ್ ರೂಪದಲಿ ಅಖಂಡ ಬ್ರಹ್ಮಾಂಡದಲಿ
ಹಿಂದೆ ಬರಲಾಗದ ದಾರಿಯಲ್ಲಿ
ಆ ಮುಗ್ಧ ನಗುವಿನಲಿ ಮತ್ತದೇ ವಿಷಾದ
ಮತ್ತದೇ ಮೌನ – ಆತ ಸಂತ






0 Comments