
ಮಲ್ಲಿಕಾರ್ಜುನ ಮಹಾಮನೆ ಎಂದರೆ ಲವಲವಿಕೆಯ ಬುಗ್ಗೆ. ಸದಾ ಮುಖದಲ್ಲಿ ಮಂದಹಾಸ. ಜೊತೆಯಲ್ಲಿದ್ದವರೊಂದಿಗೆ ಜೋಶ್ ಮಾತು. ಒಟ್ಟಿನಲ್ಲಿ ಅವರ ಜೊತೆ ಇದ್ದರೆ ಬರೀ ‘ಪಾಸಿಟಿವ್ ವೈಬ್ಸ್’. ರಂಗಭೂಮಿಯ ಒಡನಾಡಿ ಮಹಾಮನೆ ಒಳ್ಳೆಯ ಬರಹಗಾರ. ಕವಿ. ಇವರ ಅಂಕಣ ಬರಹಗಳ ಸಂಕಲನ ‘ಬುಡ್ಡಿ ದೀಪದ ಬೆಳಕು’ ಎಲ್ಲರಿಂದಲೂ ಶಹಬಾಷ್ ಗಿರಿ ಪಡೆದಿದೆ.
ಮಲ್ಲಿಕಾರ್ಜುನ ಮಹಾಮನೆ ತಮ್ಮ ಬದುಕಿನ ಘಟನೆಗಳನ್ನು ನಮ್ಮ ಮುಂದಿಡುತ್ತಿದ್ದಾರೆ.
18
‘ನಿಮ್ದು ಯಾವ ಪಂಗ್ಡ’… ಸರೋಜಮ್ಮನವರ ಪ್ರಶ್ನೆ… ‘ಹ್ಞಾಂ… ಹೂಂ… ಅದೂ…’ ನನ್ನ ಮಾತಿಗೂ ಕಾಯದೆ ಆಯಮ್ಮನದು ಮತ್ತೊಂದು ಮರುಪ್ರಶ್ನೆ…
‘ಅಲ್ಲಾ… ನಿಮ್ ಪೀಠ ಯಾವ್ದು…’
‘ಅದು… ಅದೂ… ಶ್ರೀ…’ ನಾನು ಇನ್ನೂ ದನಿ ತೆಗೆಯುವುದಕ್ಕೆ ಮೊದಲೇ… ಆಯಮ್ಮ ಮತ್ತೇ…
‘ಅಲ್ಲಾ… ಸುಮ್ನೆ ತಿಳ್ಕಿಳಕ್ಕೆ ಕೇಳ್ದೆ…’ ಅಂದ್ರು ಅವರು. ಮತ್ತೆ ಮುಂದುವರೆದು ಅಣ್ಣಾ… ಮುಂದುವರೆದು… ‘ನೀವು ಆರಾಧ್ಯರಲ್ವೇನ್ನಣ್ಣಾ’ ಎಂದು ನಮ್ಮ ಭಾವಿ ಮಾವನವರ ಕಡೆ ತಿರುಗಿದರು….
‘ಹೂಂ… ಏನಿಗಾ’ ಎಂದರು ಯಜಮಾನರು.
‘ಅದೆಲ್ಲಾ ಯಾಕೀಗಾ… ಅವರು ಯಾವ ಪಂಗ್ಡ ಆದ್ರೇನು… ಯಾವ ಪೀಠ ಆದ್ರೆ ನಿಮಗೇನು ಸರೋಜಮ್ಮನವರೇ…’ ಎಂದರು. ನಮ್ಮ ಭಾವಿ ಮಾವನವರ ಸ್ನೇಹಿತರಾದ ಸಿದ್ದಪ್ಪನವರು…
‘ಅಲ್ಲಾ… ಇದೇನಣ್ಣಾ ಹಿಂಗಂತೀ… ನೀನು… ಈರಸೈವರಲ್ಲೇ ಹತ್ತಾರು ಪಂಗ್ಡ ಅವೇ.’ ಸರೋಜಮ್ಮನ ಮಾತು.
‘ಸರಿ ಕಣಮ್ಮ… ಹಂಗಾರೆ ನಿಮ್ದು ಯಾವ್ ಪಂಗ್ಡ ಅಂತೀನಿ…’ ಅಂದರು ಹಾಲಮ್ಮನವರು.
‘ಅಲ್ಲಾ… ಅದು ನಿಮ್ಗೆ ಗೊತ್ತಾಕಿಲ್ಲ ಬುಡಿ…’ ಅಂದರು ಸರೋಜಮ್ಮ.
‘ಅದ್ಕೇ ಕೇಳ್ದೆ ಕನ ಯೇಳಿ’ ಪ್ರಶ್ನೆ ಎಸೆದರು ಹಾಲಮ್ಮ.
‘ಅಲ್ಲಾ… ನಾವು ಲಿಂಗಾಯತ್ರಲ್ಲಿ ಗೌಡ್ಮನೆಯವರು… ಇವರು ಆರಾದ್ರು. ಸಿದ್ದಪ್ಪಣ್ಣ ನಿಮ್ಮ ಪಂಗ್ಡ ಯಾವುದಾಯ್ತು…’ ಸರೋಜಮ್ಮನವರ ಪಂಗ್ಡದ ಅನ್ವೇಷಣೆ ಮುಂದುವರಿಯಿತು.

‘ಅಗಾರೆ… ನೀವೂ… ನಮ್ಮೊರೆ… ಮಾದ್ಲಿಗೆ ನೀವೂ ಗೌಡ್ರೆಯಾ ಆಮಾಕ್ಕೇ ಶಿವಾಚರ‍್ದೋರಾಗ್ಬುಟ್ರೀ ಅನ್ನಿ…’ ಎಂದು ಒಂದು ಬಾಂಬ್ ಹಾಕಿದರು ಹಾಲಮ್ಮನವರು…
‘ಅಯ್ಯೋ… ಯಾವ್ ಪಂಗ್ಡುವೊ… ಯಾವ್ ಜಾತಿಯೋ… ಯಾವ್ ಕುಲವೋ… ಬುಡು ಸರೋಜ… ಈ ನಾಗಲೀಕ ಕಾಲದಲ್ಲಿ ಅದೆಲ್ಲಾ ನೋಡಬರ‍್ದು… ಎಲ್ಲರೂ ಮನುಸ್ಯರೇ ಕನ…’ ನಮ್ಮ ಭಾವಿ ಅತ್ತೆಯವರಿಂದ ನಡುವೆ ಮಾತು ಬಂತು.
‘ಅಂಗಲ್ಲಾ ಕಣ ನಿಂಗಮ್ಮ… ಕೊಡೋದು ತರೋದು ಮಾಡ್ದಾಗ ಅವೆಲ್ಲಾ ನೋಡ್ಲೇಬೇಕು… ನೋಡು… ನಮ್ಮ ಗೌಡ್ಮನೆಯವರು ನೋಣಬ್ರು… ಸಾದ್ರೂ ಅಂತಿಂತಾವರ ಮನೆಯಿಂದ ಹೆಣ್ಣಾ ತರದೂ ಇಲ್ಲ… ಹೆಣ್ಣಾ ಕೂಡೋದು ಇಲ್ಲ ಕಣ್ರೀ… ಅದಕ್ಕೆ ಕೇಳ್ದೇ…ʼ ಸರೋಜಮ್ಮ ಅಂದರು.
‘ಏಯೇ… ಈ ಪ್ರಪಂಚದಲ್ಲಿ ಗಂಡ-ಹೆಣ್ಣು ಎರಡೇ ಜಾತಿ ಕಣ್ರೀ ಇರೋದೋ ಎಲ್ಲರ ಮೈಯಲ್ಲೂ ರಕ್ತಾನೇ ಹರಿಯೋದು… ಒಂದೊಂದು ಜಾತಿಯವರ ಮೈಯಲ್ಲೂ ಬರ‍್ಬೇರೆ ಬಣ್ಣದ ರಕ್ತ ರ‍್ದತ್ತೇನಮ್ಮೂರೆ… ಆದೆಲ್ಲಾ ಯಾಕೆ ತಗೀರಿ… ಸ್ವಲ್ಪ ಏರುದನಿಯಲ್ಲೇ ಹೇಳಿದರು. ಯಜಮಾನರ ಮನೆಯ ಪಕ್ಕದ ಮನೆಯ ನಾಗರಾಜು…
‘ಅಂಗಲ್ಲಾ ಕಣಯ್ಯಾ… ಈಗ ಇವರು ಆರಾದ್ರೂ… ಇವರ ಮನೆಗೆ ಆರಾದ್ರು ಪಂಗ್ಡದಿಂದನೇ.’ ಹೆಣ್ಣ ರ‍್ಬೇಕು… ಮತ್ತೆ ಹೆಣ್ಣ ಕೊಡ್ಬೇಕು… ಇವರು ಈರಸೈವರಲ್ಲಿ ಸ್ಯಾಮ್ಗುಳು… ಸ್ಯಾಮ್ಗುಳ ಮನೆಯಿಂದ ಹೆಣ್ಣಾ ಮಾಡ್ಕೋಬಾರದು… ಅಂಗೇನಾರ ಮಾಡ್ಕೊಂಡರೆ ಆ ಮನೆಗೆ ಒಳ್ಳೆದಾಗಕ್ಕಿಲ್ವಂತೆ… ಅಂಗಂತರೆ… ಅದ್ಕೇ ಕೇಳ್ದೆ… ನಿಮ್ದು ಯಾವ ಪಂಗ್ಡ ಅಂತ ಅಷ್ಟೇಯಾ.’ ಎಂದು ಸರೋಜಮ್ಮ ಸಮಜಾಯಿಸಿ ಕೊಟ್ಟಳು.
ಇದೊಳ್ಳೆ ಪಂಗ್ಡದ ಜಿಜ್ಞಾಸೆ ಆಯ್ತಾಲ್ಲಾ ಈ ಯಮ್ಮನದು… ಆಗಲಿಂದಲೂ ಪಂಗ್ಡ ಅಂತ ಕುಂತವಳೆಲ್ಲಾ ಈ ‘ಅಲ್ಲಾ’ ಗಿರಾಕಿ ಸರೋಜಮ್ಮ… ಈ ಸರೋಜಮ್ಮ ಯಾರು… ನನ್ನ ಪಂಗ್ಡದ ವಿಚಾರ್ ಈಯಮ್ಮನಿಗ್ಯಾಕೆ… ಅದನ್ನು ಕಟ್ಕೊಂಡು ಈಕೆಗೇನಾಗಬೇಕು… ನನ್ನಲ್ಲಿ ಇಂತಹ ಹಲವಾರು ಪ್ರಶ್ನೆಗಳೆದ್ದವು.
‘ರೀ ಸರೋಜಮ್ಮ… ನಿನಗ್ಯಾಕೆ ಅದಲ್ಲೇ ಯಾವಾಗ ಬಂದ್ರೂ ಇದೇ ಬುದ್ಧಿ… ಎಲ್ಲೋದರೂ ಇಂತಾ ಕಿತಾಪತಿನೇ ನಿಂದು… ಅವರ ಪಂಗ್ಡ ತಗೊಂಡು ರ‍್ಕೊಂಡು ಕುಡ್ದಿಯಾ ನೀನು… ಆಹಾ… ಪಂಗ್ಡ ಅಂತೇ ಪಂಗ್ಡ… ಆಗ್ಲಿಂದಲೂ ನೋಡ್ತಾನೇ ಇದ್ದೀನಿ. ಆರಾದ್ರಂತೆ… ಗೌಡ್ರಂತೆ… ಸಾದ್ರಂತೆ… ನೋಣಬ್ರಂತೆ… ಬಣಜಿಗ್ರಂತೆ… ಶೆಟ್ರಂತೆ… ಇದೇ ಆಡ್ತಾ ಕುತಿದ್ದೀಯಾ… ಬೇರೆಯವರ ಮನೆಗೆ ಬಂದಾಗ ಏನ್ ಮಾತಾಡ್ಬೇಕು… ಏನ್ ಮಾತಾಡ್ಬಾರದ್ರೂ… ಮದುವೆ ಆಗುವ ಹುಡ್ಗನ ಮುಂದೆ ನಿಂದೇನಮ್ಮ ಪಂಗ್ಡದ ಪುರಾಣ… ನಿನ್ನ ಮನೆ ಮಕ್ಳ ಮದ್ವೆ ಮಾಡ್ತಾ ಇದ್ದೀಯಾ ಈಗ… ನಿನ್ನ ಮನೇಲಿ ಮದ್ವೇಗಿದ್ವೆ ಮಾಡುವಾಗ ಅದೆಲ್ಲಾ ನೋಡು… ಮೊನ್ನೆ ನನ್ನ ಮನೆಗೆ ಬಂದೇ… ನನ್ನ ಮನೆಯವಳ ಹತ್ತಿರ ಏನೋ ಹೇಳಿ… ಏನೋ ಕಿತಾಪತಿ ಮಾಡಿ ಬಂದಿದ್ದೀಯಾ… ಹೋದ್ವಾರ… ಯಾರೂ ಇಲ್ದೆ ಇದ್ದಾಗ ಆ ಛತ್ರದ ನಾಗರಾಜಪ್ಪನ ಮನೆಗೆ ಹೋಗಿ ಅವರ ಸೊಸೆ ಹತ್ರ… ನಿಮ್ದು ಯಾವ ಪಂಗ್ಡ… ನಿಮ್ಮನೆಗೆ ಯಾವ ಸ್ವಾಮಿನಾ ಕರೆಸ್ತಿದ್ರಿ… ಅದೂ ಇದೂ ಕೇಳಿ ಇಲ್ಲದ ರ‍್ಲೆ ಮಾಡಿ ಬಂದಿದ್ದೀಯಾ… ಅದೇನಮ್ಮ ನಿನಗೆ ಪಂಗ್ಡದ ರೋಗ ಅಂಟ್ಕೊಂಡದೆ… ನಿನ್ನ ಗಂಡ ಯಾವ ಪಂಗ್ಡ ಅಂತಾ ಗೊತ್ತು ನಿನಗೆ… ಅವನು ಕವಾಡಿಗರೋನು… ನಿನ್ನ ಅಕ್ಕ್ಕನ ಬೀಗರು ಯಾರ್ ಗೊತ್ತಾ… ಅವರು ಗಾಣಿಗ್ರೂ… ಆಗ್ಲಿಂದ್ಲೂ ನೋಡ್ತಾನೇ ಇದ್ದೀನಿ… ಅಂಗೆಲ್ಲ ಯಾರನು ನಿನ್ನ ಪಂಗ್ಡ ಯಾವ್ದು – ನಿನ್ನ ಜಾತಿ ಯಾವ್ದು ಅಂತ ಕೇಳ್ಬರ‍್ದು ಕಣಮ್ಮಾ…’ ಎಂದು ಸ್ವಲ್ಪ ಏರು ದನಿಯಲ್ಲೇ ಆ `ಪಂಗ್ಡ’ ಗಿರಾಕಿ ಸರೋಜಮ್ಮನವರಿಗೆ ಹಿರಿಯರಾದ ಸಿದ್ದಪ್ಪನವರು ಜಾಡಿಸಿದರು…
`ಹೂಂ ಕಣ್ಣಮ್ಮ… ನಮ್ಮಪ್ಪನಿಗೆ ಸುಳ್ಳೇಳಿ… ನನ್ನ ಮದ್ವೆ ಮಾಡ್ಕೊಂಡು ಬಂದ್ಬುಟ್ಟು ಇವರು… ಇವರು ಕವಾಡಿಗ್ ಪಂಗ್ಡದೋರು ಅಂತ ಹೇಳಿದ್ರೇ ನಮ್ಮಪ್ಪ ನನ್ನ ಇವರಿಗೆ ಕೊಡ್ತೇನೆ ಇರಲಿಲ್ಲ… ಅಲ್ಲಾ ಸಿದ್ದಲಿಂಗಪ್ಪ ನಾ ಕೇಳಿದ್ದು ತಪ್ಪೇ ಹೇಳಿ ನೀವೆಯಾ’ ಎಂದು ಪ್ರಶ್ನೆ ನನ್ನ ಮಾವನವರಿಗೆ ಪ್ರಶ್ನೆ ಹಾಕಿದರು `ಆ ಪಂಗ್ಡ ಪುಂಗಿ’ ಸರೋಜಮ್ಮ.
ಜಾತಿ ಭೇದವನ್ನು ಧಿಕ್ಕರಿಸಿದ್ದಂತಾ ವಚನಕಾರರು… ಬಸವಾದಿ ಶರಣರು ಜಾತೀಯತೆಯ ಈ ಕ್ರೂರ ವ್ಯವಸ್ಥೆಯನ್ನು… ಅಮಾನುಷ ಪದ್ಧತಿಯನ್ನು ಪ್ರಶ್ನಿಸಿದ… ಬುಡಮೇಲು ಮಾಡಲು ಸಂಕಲ್ಪ ತೊಟ್ಟ… ಸಾಮಾಜಿಕವಾದ ತರತಮದ ತಾರತಮ್ಯದ ಭದ್ರಬುನಾದಿಯನ್ನು ಅಲುಗಾಡಿಸಿದ… ಶತಮಾನಗಳಿಂದ ಬೇರೂರಿದ್ದ ಜಾತಿಯ ಈ ಅನಿಷ್ಟವನ್ನು ಕಿತ್ತೊಗೆದು ಸಮಸಮಾಜದ ಸಮಾನತೆಯ ಮಹಾಕ್ರಾಂತಿಯನ್ನು ಜಗಕ್ಕೆ ಸಾರಿದ ಶರಣರ ತತ್ವಗಳು ಎಲ್ಲಿ… ಅವರ ಮಾತುಗಳು ಪರಿಪಾಲಿಸುತ್ತೇನೆಂದು ಒಪ್ಪಿ ಬಂದ ಈ ಸಮುದಾಯ ಎಲ್ಲಿ… ಯಾವಾಗ ಕಂದರ ಏರ್ಪಟ್ಟಿತು… ಎಲ್ಲಿ ಆ ಕೊಂಡಿ ಕಳಚಿತು… ಎಲ್ಲಿ ಆ ನಡೆ ನುಡಿಗಳು ಮಾಯವಾಗಿ ಮತ್ತೇ ಅದೇ ಜಾತಿಯಾದೆ… ಅದೇ ಸಾಮಾಜಿಕ ಅಂತರ… ಅದೇ ವಿಷ ಮತ್ತೆ ಪಸರಿಸಿತು… ಮತ್ತೀಗ ಅದು ಎಲ್ಲರ ಮನ ಮನದೊಳಗೇ ನುಸುಳಿತು.

ಬಸವ ಒಂದು ಕಡೆ ಹೇಳುತ್ತಾನೆ.
ವ್ಯಾಸ ಬೋಯಿತಿಯ ಮಗ, ಮಾರ್ಕೆಂಡೇಯ ಮಾತಂಗಿಯ ಮಗ
ಮಂಡೋದರಿ ಕಪ್ಪಯ ಮಗಳು…
ಕುಲವನರಸದಿರಿಂ ಭೋ, ಕುಲದಿಂದ ಮುನ್ನೇನಾದಿರಿಂ ಭೋ!
ಸಾಕ್ಷಾತ್ ಅಣಸ್ತ್ಯ ಕಬ್ಬಿಲ, ದೂರ್ವಾಸ ಮಚ್ಚಿಗ,
ಕಶ್ಯಪ, ಕಮ್ಮಾರ, ಕೌಂಡಿನ್ಯನೆಂಬ ಋಷಿ
ಮೂರು ಭುವನವನರಿಯೇ ಸಾವಿನ ಕಾಣಭೋ!
ನಮ್ಮ ಕೂಡಲಸಂಗನ ವಚನವಿಂತೆಂದುದು
ಶ್ವಪಚೋಪಿಯಾದರೇನು, ಶಿವಭಕ್ತನೇ ಕುಲಜನು
ಈ ಕುಲದ… ಈ ಜಾತಿಯ ಭೂತ-ಜನಸಮುದಾಯದಲ್ಲಿ… ಈ ಸಮಾಜದಲ್ಲಿ ಎಬ್ಬಿಸಿರುವ ಹಲಾಹಲ ಒಂದೆರಡಲ್ಲ ಕಣ್ರೀ… ಈ ಜಗದ ಮಹಾಮಹಿಮರು… ಮಹಾಪುರುಷರು ಆಗಿದ್ದು ಅವರ ಹುಟ್ಟಿನಿಂದಲ್ಲ ಕಣ್ರಪ್ಪಾ… ಅವರವರ ಸಾಧನೆ ಸಿದ್ಧಿ ಸಾಮರ್ಥ್ಯಗಳಿಂದ… ಇಂತಹ ಸಿದ್ಧಿ ಪುರುರ‍್ಯಾರಲ್ಲೂ ಜಾತಿ-ಕುಲ ಧರ್ಮಗಳನ್ನು ಹುಡುಕುವುದು ಮೂರ್ಖತನವಷ್ಟೇ ಎಂದು ಒಂಬೈನೂರೂ ವರ್ಷಗಳ ಹಿಂದೆಯೇ ಸಾರಿದ ಬಸವನ ಮಾತುಗಳೆಲ್ಲಿ ಹೋದೆವು… ಈ ಯಮ್ಮ… ಈ ಸರೋಜಮ್ಮ… ಇಂತಹ ಅನೇಕರು ಆಡುವ ಮಾತುಗಳು… ನಡೆದುಕೊಳ್ಳುವ ರೀತಿಯನ್ನು ಕಂಡರೆ ಅಸಹ್ಯ ಅನ್ನಿಸುತ್ತದೆ.
ಬೊಂತವ್ವೆ ಎಂಬ ಹೆಣ್ಣು ಮಗಳು ಹೇಳುವ ಮಾತುಗಳನ್ನು ಕೇಳಿ ಗೆಳೆಯರೇ…
ಊರ ಒಳಗಣ ಬಯಲು
ಊರ ಹೊರಗಣ ಬಯಲು ಎಂದುಂಟೆ?
ಊರೊಳಗೆ ಬ್ರಾಹ್ಮಣ,
ಊರ ಹೊರಗೆ ಹೊಲೆ ಬಯಲೆಂದುಂಟೆ?
ಎಲ್ಲಿ ನೋಡಿದರು ಬಯಲೊಂದೆ
ಭಿತ್ತಿಯಿಂದ ಒಳಹೊರಗೆಂಬ ನಾಮವೈಸೆ
ಎಲ್ಲಿ ನೋಡಿದಡೆ ಕರೆದೊಡೆ
ಓ ಎಂಬಾತನೆ ಬಿಡಾಡಿ.
ನೋಡಿ… ಎಂಥ ಮಾತಾಡಿದ್ದಾರೆ ಆ ತಾಯಿ
ಬಯಲೊಳಗೆ ಒಳಹೊರಗೆಂಬುದಿಲ್ಲ
ಬಯಲ ನಡುವೆಗೋಡ ಎಂಬುದಿಲ್ಲ
ಬಯಲಿಗೆ ಜಾತಿಗಳ ಬೇಲಿ ಹಾಕಿ ಭಾಗ ಮಾಡದಿರಿ
ಮನುಜ ಕುಲವೆಲ್ಲ ಒಂದೇ…
ಆ ಜಾತಿ ಈ ಜಾತಿ ಎನದೆ
ಆ ಕುಲ ಈ ಕುಲದ ನಡುವೆ
ಭೇದ, ಭಾವ ತೋರದೆ
ತರತಮವ ತೊರದು ಬಿಡಿ
ಎಂದು ಹೇಳುವ ಬೊಂತವ್ವೆ ಎಂಬ ವಚನಕಾರ್ತಿಯ ಮಾತುಗಳು ಎಲ್ಲಿ ಹೋದೆವು.
ಈ ಸರೋಜಮ್ಮ ಸರೋಜಮ್ಮ ಅಲ್ಲ… ಈಕೆ ‘ರೋಗಮ್ಮಾ…’ ಎನಿಸುತ್ತದೆ.
ಆ ವಚನಕಾರರೆಲ್ಲ ಜಾತಿಕುಲದ ವಿರುದ್ಧ ಎದ್ದು ನಿಂತರೆ. ಈ ‘ರೋಗಮ್ಮ’ ‘ಪಂಗ್ಡ’ ಹಿಡ್ಕೊಂಡು ಕುಂತವಳಲ್ಲಾ ಏನನ್ನೆಬೇಕು ಹೇಳಿ ಮಿತ್ರರೇ. ಹ್ಞಾಂ… ಆದಿ ಕವಿ ಪಂಪನ ಒಂದು ಮಾತನ್ನು ನೆನಪಿಸಿ ನಾನು ಮುಂದು ಹೋಗುತ್ತೇನೆ ಆಗಬಹುದಲ್ಲವೇ?
ಕುರುಕ್ಷೇತ್ರ ಯುದ್ಧದ ಸಮಯ.
ಭೀಷ್ಮನಿಗೆ ಮಹಾಸೇನಾನಿಯ ಪಟ್ಟಬೇಕೆಂದು ಹೊರಟಾಗ ಕರ್ಣನು, ಭೀಷ್ಮನು, ಪಾಂಡವರ ಪಕ್ಷಪಾತಿ ಮೇಲಾಗಿ ವಯೋವೃದ್ಧರು ಆದ ಕಾರಣ ನನಗೆ ಪಟ್ಟ ಕಟ್ಟಿ ಎಂದಾಗ ದುರ್ಯೋಧನನು ತನ್ನ ಆಪ್ತ ಸಖ ಕರ್ಣನಿಗೆ ಮಹಾಸೇನಾಧಿಪತಿಯ ಪಟ್ಟವನ್ನು ಕಟ್ಟುವ ಸಂದರ್ಭದಲ್ಲಿ ದ್ರೋಣಚಾರ್ಯರು ಕರ್ಣನ ಕುಲದ ಕುರಿತು ಅಂಗಿಸುತ್ತಾರೆ. ಆಗ ಪಂಪನು ಕರ್ಣನ ಬಾಯಿಂದ ಆಡಿಸುವ ಮಾತುಗಳನ್ನು ತಾವು ಕೇಳಬೇಕು ಕಣ್ರೀ.
ಕುಲಮನೆ ಮುನ್ನಮುಗ್ಗಡಿಪಿರೇಂ ಗಳ ನಿಮ್ಮ ಕುಲಂಗಳಾಂತು ಮಾ
ರ್ಮಲೆವನನಟ್ಟಿ ತಿಂಬುವೆ ಕುಲಂ ಕುಲಮಲ್ತು ಚಲಂ ಕುಲಂ ಗುಣಂ |
ಕುಲಮ ಅಭಿಮಾನಮೊಂದೆ ಕುಲಮ ಅಣ್ಮು ಕುಲಂ ಬಗೆವಾಗಳೀಗಳೀ
ಕಲಹದೊಳಣ್ಣ ನಿಮ್ಮ ಕುಲವಾ ಆಕುಲಮಂ ನಿಮಗುಂಟು ಮಾಡುಗುಂ ||
ಯಾವುದು ಕುಲ…? ಚಲವೇ ಕುಲ… ಅಭಿಮಾನೇ ಕುಲ… ಪರಾಕ್ರಮವೇ ಕುಲ… ಗುಣವೇ ಕುಲವೆಂದು ಹೇಳುತ್ತಾ… ಸೇನಾನಿಗಳಿಗೆ ಬೇರಾವುದೇ ಕುಲವಿಲ್ಲ ಕ್ಷಾತ್ರಗುಣವೇ ಅವರ ಕುಲ ಎಂದು ಹೇಳುತ್ತಾ ಜಾತಿ, ಕುಲಗಳ ವಿಚಾರವಾಗಿ ಕರ್ಣನ ಮೂಲಕ ಪಂಪ ಜಾತಿಗಳ ವ್ಯಸನವನ್ನು ಧಿಕ್ಕರಿಸುತ್ತಾನೆ.
ಮದುವೆ ಆಗುವ… ಸಂಸಾರ ಮಾಡುವ… ಪ್ರೀತಿ ಸಹಬಾಳ್ವೆ ಮಾಡುವವರಿಗೆ ಯಾವ ಜಾತಿ, ಯಾವ ಕುಲ, ಯಾವ ಧರ್ಮ, ಯಾವ ಮತ, ಯಾವ ಪಂಗಡ ಕಟ್ಕೊಂಡು ಏನ್ರೀ ಆಗಬೇಕು…?
ಸ್ನೇಹಿತರೇ ನಾವೆಲ್ಲಿದ್ದೆವು ಎಂಬುದು ನಿಮಗೆ ನೆನಪಿದೆಯಲ್ಲವೇ…
ನಾನು ಸ್ವಲ್ಪ ಹೀಗೆಯೇ… ಏನೋ ಹೇಳುತ್ತಿದ್ದವನ್ನು ಅದನ್ನು ಅಲ್ಲಿಯೇ ಕೈಬಿಟ್ಟು… ಅದರ ಸಂಬಂಧಿಸಿದ ಮತ್ತೊಂದು ಎಳೆಯನ್ನು ಹಿಡಿದು ನಿಮ್ಮನ್ನೆಲ್ಲಾ ಆ ಲೋಕಕ್ಕೆ ಕರೆದೊಯ್ದದು… ಮತ್ತೆ ನಿಮ್ಮನ್ನು ನನ್ನ ಪೂರ್ವಾಯಾನಕ್ಕೆ ಮರಳಿ ತರುವುದು ನನ್ನ ಒಲುವು… ಇದನ್ನು ನನ್ನ ಶೈಲಿ ಎಂದಾದರು ಅನ್ನಿ… ಸ್ವಭಾವ ಎಂದಾದರೂ ತಿಳಿದುಕೊಳ್ಳಿ ಗೆಳೆಯರೇ.
ನಾವು ನನ್ನ ಭಾವಿ ಮಾವನ ಮನೆಯಲ್ಲಿದ್ದೆವು… ನೆನಪಾಯಿತೇ?
ನಾನು… ನನ್ನ ಭಾವಿ ಮಾವ… ಸಿದ್ಧಪ್ಪನವರು… ಹಾಲಮ್ಮ… ನಾಗರಾಜು… ‘ಆ ಪಂಗ್ಡದ ಸರೋಜಮ್ಮನ’ ಇವರ ನಡುವೆ ಕುಳಿತಿದ್ದೇ.
ಆ ಸರೋಜಮ್ಮನ ‘ನಿಮ್ದು ಯಾವ ಪಂಗ್ಡ’ ಎಂಬ ಪ್ರಶ್ನೆಗೆ…. ಮೌನ ಧರಿಸಿ’ ಕುಳಿತಿದ್ದೆ… ಆ ಜನರೆಲ್ಲ ಆ ಆಡುತ್ತಿದ್ದ ಮಾತುಗಳನ್ನೆಲ್ಲ ಆಲಿಸುತ್ತಾ ಕುಳಿತಿದ್ದೆ… ಅಷ್ಟರಲ್ಲೇ ಇಂಜಿನೀಯರಿಗ್ ಓದುತ್ತಿದ್ದ ನನ್ನ ಮತ್ತೊಬ್ಬಳು ನಾದಿನಿ ಮಂಗಳಮ್ಮ ಮನೆ ಪ್ರವೇಶಿಸಿದಳು. ಅವಳು ಈ ಸರೋಜಮ್ಮನನ್ನು ನೋಡಿ ‘ರೀ ಸರೋಜಮ್ಮನವರೇ… ನಿಮಗೆ ಎಷ್ಟು ಸರ್ತಿ ಹೇಳೋದು… ನಮ್ಮ ಮನೆ ಒಳಗೆ ಬರಬೇಡಿ ಅಂತ’ ಎಂದು ಹೇಳುತ್ತಿದ್ದಂತೆಯೇ… ಆ ಯಮ್ಮ ಅಲ್ಲಿಂದು ಹೊರಡುತ್ತಾ’ ಏನೋ ಗಂಗನನ್ನೂ ಮದುವೆ ಆಗುವ ಹುಡುಗನನ್ನು ನೋಡಿ ಮಾತಾಡಿಸಿಕೊಂಡು ಹೋಗನಾ ಅಂತ ಬಂದೆ ಅಷ್ಟೇಯಾ.
‘ಅಲ್ಲಾ… ನಿಮ್ಮ ಭಾವನನ್ನ ನಾನೇನು ಮಾಡೇನಾ’ ಎನ್ನುತ್ತಾ ಜಾಗ ಖಾಲಿ ಮಾಡಿದಳು.
‘ಹೋಗ್ಲಿ ಬಿಡಮ್ಮ ಮಂಗಳಮ್ಮ’ ಎಂದು ನಾನು ಸಮಾಧಾನ ಮಾಡಲು ಹೊರಟಾಗ ಇಲ್ಲ ಭಾವ ‘ಅವಳು ಸ್ವಲ್ಪ ಕಿತಾಪತಿ…. ಅದಕ್ಕೆ ಅಂಗೇಳಿದ್ದು’ ಎಂದು ‘ಯಾಕಪ್ಪ ಅವಳನ್ನು ಮನೆಯೊಳಗೆ ಬಿಟ್ಟೆ’ ಎನ್ನುತ್ತಾ ಅಡಿಗೆ ಮನೆ ಸೇರಿದಳು… ಮಂಗಳಮ್ಮ
ಬಂದವರು…. ಒಬ್ಬೊಬ್ಬರೂ…
ಸಾ… ಆಯಮ್ಮನ ಮಾತಾ ತಲೇಗೆ ಹಾಕ್ಕೋಬೇಡಿ
ಏನೋ… ಸುಖವಾಗಿ ಬಾಳ್ರಪ್ಪಾ…
ಅವಳು ತಲೆ ಕೆಡ್ಸಿಬಿಡ್ತಾಳೆ…
ಅವಳು ಹಂಗೇಯಾ… ಈ ರೋಡ್ನೂರತ್ರಾಯಲ್ಲಾ ಜಗಳ ಅವಳ್ದೂ…
ಸಿದ್ಲಿಂಗಣ್ಣ ಯಾವ ಲಗ್ನ…
ಸಾ… ನಮ್ ಗಂಗ ಬಾಳ ಒಳ್ಳೇ ಹುಡ್ಗಿ… ಅವಳದು ಪುಣ್ಯ ನಿಮ್ಮಾಂತರ ಕೈ ಹಿಡಿಯೋದು…
ನಿಮ್ಮನ್ನು ನೋಡಿದ್ರೆ ಹೇಳ್ಬೌದು ನೀವು ಒಳ್ಳೆಯವರೂ ಅಂತ.
ಹೀಗೆಲ್ಲಾ ಮಾತಾಡಿ… ತಮ್ಮ ತಮ್ಮ ಮನೆಯ ಕಡೆಗೆ ಹೊರಟರು…
ಅಡಿಗೆ ಮನೆಯ ಒಳಗೆ ಅಡಿಗೆ ತಯಾರಿ ಮುಗಿದಿತ್ತು ಎಂದು ಕಾಣುತ್ತದೆ…
‘ನಮ್ಮ ಭಾವಿ ಅತ್ತೆಯವರು…. ನಗುತ್ತಾ ಬಂದವರು… ಏನ್ ಮಾಡೋದು… ಒಂದೊಂದು ಜನ ಒಂದೊಂದು ತರ… ನಾವು ಎಲ್ರ‍್ರೂ ಸೌರಸ್ಕೊಂಡು ಹೋಗ್ಬೇಕ್ ಕಣೇಳಿ… ಆ ಯಮ್ಮ ಅಂಗೇ ಸ್ವಲ್ಪ… ನೀವೇನೂ ಬೇಜಾರು ಮಾಡ್ಕೋಬೇಡಿ’ ಎನ್ನುತ್ತಾ ‘ಲೇ ರೇಣು… ಸ್ವಾಮಿಯೋರಿಗೆ ಬಿಸಿನೀರು ಕೊಡೇಳು’ ಎಂದು… ‘ಹೋಗಿ ಕೈ ಕಾಲು ತೊಳೆದು ಬರೋಗಿ… ಬಿಸ್ಬಿಸಿ ಮುದ್ದೆ ಆಗದೆ ಕಣ’ ಎಂದರು.
ನಾನು ಊಟಕ್ಕೆ ಸಿದ್ಧನಾಗಿ ಬಂದೆ…
ನನಗೆ ಊಟ ಬಡಿಸಲು ಅಕ್ಕ ತಂಗಿಯರಲ್ಲಿ ಸ್ಪರ್ಧೆಯೇಯಿತ್ತ್ತು… ಒಬ್ಬಳು ನೀರು ತಂದಳು… ತಟ್ಟೆ ತಂದಳು… ಮತ್ತೊಬ್ಬಳು ಬಿಸಿಬಿಸಿ ಮುದ್ದೆ ಮಳೆಹುಳ್ಳಿ ಸಾರು ತಂದಳು… ಅದರ ಮೇಲೆಹಾಕಲು ಮತ್ತೊಬ್ಬಳು ಹಸುವಿನ ಬೆಣ್ಣೆಯನ್ನು ತಂದಳು.
ಆಹಾ ಸೊಗಸಾಗಿತ್ತು…. ಮತ್ತಷ್ಟು ಮುದ್ದೆ ತಂದರು… `ಅಯ್ಯೋ ಬೇಡಿ ಬೇಡಿ’ ಎನ್ನುವಷ್ಟೊತ್ತಿಗೆ ತಟ್ಟೆಯಲ್ಲಿ ಮುದ್ದೆ ಇತ್ತೇ… ಅದರ ಮೇಲೆ ಬೆಣ್ಣೆನೂ ಬಿತ್ತು… ಅದನ್ನು ಮುಗಿಸುವಷ್ಟೊತ್ತಿಗೆ ಬಿಸಿ ಬಿಸಿ ಅನ್ನ ಬಂದಿತು… ಸ್ವಲ್ಪ ಸ್ವಲ್ಪ ಎನ್ನುವಷ್ಟರಲ್ಲಿ ಸ್ವಲ್ಪ ಹೆಚ್ಚೇ ಅನ್ನ ತಟ್ಟೆಗೆ ಬಂದಾಗಿತ್ತು… ಮತ್ತೆ ಹುಳ್ಳಿಸಾರು… ಮತ್ತೆ ತುಪ್ಪ… ಹಾಗೂ ಹೀಗೂ ಮಾಡಿ ನನ್ನ ನಾದಿನಿಯರು ಸ್ಪರ್ಧೆಯಲ್ಲಿ ಬಳಿಚಿದ ಊಟವನ್ನು ಮುಗಿಸಿದ್ದೆ… ಹೊಟ್ಟೆ ಬಿರಿಯುತ್ತಿತ್ತು… ಮೇಲೇಳಲು ಸ್ವಲ್ಪ ಕಷ್ಟವೇ ಆಯಿತು.
ಊಟ ಚೆನ್ನಾಗಿತ್ತಾ ಭಾವ…. ಎಂದಳು ಪ್ರೇಮ.
ಗಂಗನೂ ತುಂಬಾ ಚೆನ್ನಾಗಿ ಅಡುಗೆ ಮಾಡ್ತಾಳೆ ಎಂದಳು ರೇಣು.
‘ಹೂಂ ಕಣವ್ವಾ ತಾಯ್ಪರಿ’ ಎಂದು ಮನದಲ್ಲೇ ಅಂದುಕೊಂಡು ಹೊರಡಲು ಮನೆಯಿಂದ ಹೊರಬಂದೆ.
‘ಮತ್ಯಾವಾಗ ಬತ್ತೀರಿ ಭಾವ’ ಎಂದಳು ಮಂಗಳ.
ನಾನು ನಗು ನಗುತ್ತಾ… ಚಪ್ಪಲಿ ಬಿಟ್ಟಿರುವ ಜಾಗದ ಬಳಿ ಬಂದೆ…

ಹ್ಞಾಂ…. ಅಲ್ಲಿದ್ದದ್ದು… ಒಂದೇ ಚಪ್ಲಿ… ಎಡಗಾಲಿನದು… ಬಲಗಾಲಿನದು ಎಲ್ಲೋಯ್ತು…. ಆ ಹುಡುಗಿಯರ ಎದುರು ನನ್ನ ಪಜೀತಿ ತೋರಿಸಿಕೊಳ್ಳಬಾರದೆಂದು ಓರೆಗಣ್ಣಿನಿಂದಲೇ ನನ್ನ ಮತ್ತೊಂದು ಚಪ್ಪಲಿಯನ್ನು ಹುಡುಕತೊಡಗಿದೆ…
ನನ್ನ ಹುಡುಕಾಟ… ನನ್ನ ಪಜೀತಿ ಎಲ್ಲಾ ನನ್ನ ಭಾವಿ ಮಾವನವರಿಗೆ ಗೊತ್ತಾಗಿ ಹೋಯಿತು… ಅವರು ‘ಇನ್ನೊಂದು ಎಕ್ಡಾ… ಏನಾಯ್ತು… ಎಲ್ಲಿ ಬಿಟ್ಟಿದ್ರಿ…’ ಎಂದು ನನ್ನನ್ನೇ ಕೇಳಿದರು.
ಎಕ್ಡಾ ರೇ ಮೇರ್ ಎಕ್ಡಾ…?
ಆ ಶ್ವಾನ ಸ್ವಾಮಿಗಳು… ಆ ಡಾಲಿ ಡಾರ್ಲಿಂಗೂ…. ಆ ನಾಯಿ ಮಹಾರಾಜರೂ… ಕೊನೆಗೂ ನನ್ನ ಮೇಲೆ ತನ್ನ ಹಗೆ ತೀರಿಸಿಕೊಂಡಿದರು…
ನನ್ನ ಬಲಗಾಲಿನ ಚಪ್ಪಲಿಯನ್ನು ಆ ಡಾಲಿಯು ಕಚ್ಚಿಕೊಂಡ್ಹೋಗಿ ಅದೆಲ್ಲಿ ಬಿಸಾಕಿತ್ತೋ… ಮನೆಯವರೆಲ್ಲರೂ ಸೇರಿ ಹುಡುಕಿದರೂ ಚಪ್ಪಲಿ ಸಿಗಲಿಲ್ಲ…
ಅಲ್ಲಾರೀ… ಭರತನೇನೋ ಅಣ್ಣನ ಮೇಲಿನ ಗೌರವದಿಂದ ಶ್ರೀರಾಮಚಂದ್ರನ ಪಾದುಕೆಗಳನ್ನು ತೆಗೆದುಕೊಂಡ್ಹೋದ… ಸರಿನಪ್ಪ… ಆದರೆ ಪಟ್ಟಾಭಿಷೇಕವನ್ನು ಕಳೆದುಕೊಂಡಿದ್ದ ರಾಮನು ಈಗ ಚಪ್ಪಲಿಯನ್ನು ಕಳೆದುಕೊಂಡು ಚಪ್ಪಲಿಯೂ ಇಲ್ಲದೇ ಬರಿಗಾಲಲ್ಲಿ ಆ ಕಾಡು ಮೇಡುಗಳಲ್ಲಿ ಹೇಗಿರಿ ನಡೆದಾ…? ಯೋಚನೆ ಮಾಡಿದ್ದೀರಾ…?
ಈಗ ನನ್ನ ಕಥೆ ಹೇಳ್ರಪ್ಪ… ಶ್ರೀನಿವಾಸನಗರದವರೆಗೂ ಬರಿಗಾಲಿನಲ್ಲಿ ನಾನ್ಹೇಗ್ರಿ ಹೋಗ್ಲಿ… ನಾಳೆ ಬೆಳಗ್ಗೆ ಬರಿಗಾಲಲ್ಲಿ ಆಫೀಸ್‌ಗೆ ಹೇಗ್ರೀ ಹೋಗ್ಲಿ… ಒಳ್ಳೇ ಪಜೀತಿ ಆಯ್ತೆಲ್ಲಾ ಇದು…
ನೀವು ನನ್ನ ಸ್ಥಿತಿಯನ್ನೊಮ್ಮೆ ಕಲ್ಪಿಸಿಕೊಳ್ಳಿ… ನಗುಬರುತ್ತಾ… ಅಥವಾ ನೋವಾಗುತ್ತಾ ನಿಮಗೆ?
| ಇನ್ನು ಮುಂದಿನ ವಾರಕ್ಕೆ |






0 Comments