ದಾಕ್ಷಾಯಣಿ ಮಸೂತಿ
ಆಂ,, ಹು,, ಗಳ
ಮಧ್ಯೆ ಕಳೆದುಹೋಗಿವೆ
ನನ್ನ ನಿನ್ನ ದನಿಗಳು
ಗಂಟಲುಬ್ಬಿ, ಅರೆಕ್ಷಣ
ನಿಂತ ಉಸಿರಿನಲಿ
ಏಕೆ ನಿನ್ನದೇ ಹೆಸರಿದೆ?

ಉತ್ತರ ಸಿಗದ
ನೂರು ಪ್ರಶ್ನೆಗಳು
ಉತ್ತರ ಹುಡುಕುವ
ಹುಕಿ ಇಲ್ಲ ಈಗೀಗ;
ಪ್ರತಿ ಮುಂಜಾವಿನಲಿ
ಯಾವುದೋ ನೆಪದಲ್ಲಿ
ನೀನಂತೂ ಇರುತ್ತಿಯಾ
ಚಹಾದ ಬುರುಗಿನಲಿ
ಹಳೆಯ ಬಳೆಗಳ ಸದ್ದಿನಲ್ಲಿ
ಬಣ್ಣ ಕಳೆದುಕೊಂಡ
ಪತ್ರಗಳ ಅಕ್ಷರಗಳಲ್ಲಿ
ಒಡೆದ ಗಾಜಿನ ಗೊಂಬೆಯ
ತುಂಡುಗಳಲ್ಲಿ
ಹಸಿಕೂದಲಿಗೆ ಸಿಲುಕಿದ
ಬೆರಳಗಳ ತುದಿಯಲ್ಲಿ

ಉಫ್ ನೀನು ಇಲ್ಲವೆನ್ನುವ
ಗಳಿಗೆಗಳು ಇವೆಯಾ!
ಜೊತೆಯಿದ್ದರಷ್ಟೇ ಪ್ರೇಮವೇ?
ಸದ್ದಿರದ ಪ್ರೇಮದ
ದನಿಗೇಕೆ ಮಾತುಗಳು?






0 Comments