ವಿಭಾ ಪುರೋಹಿತ
ಮುಗಿದೆದ್ದು
ಮುಖ ಗಲಬರಿಸಿ
ಸೀದಾ ಅಂಕಣಕ್ಕೆ
ಮುಕ್ಕಣ್ಣನ ಮುಂದೆ
ಅರೆ ! ನನ್ನ ಶಿವ
ಗ್ಯಾಸೊಲೆಯ ಮುಂದೆ
ದಿನದ ಪ್ರಾರ್ಥನೆ ಶುರು
ಬಿಸಿನೀರು ಕಾಯಿಸಿ ಕುಡಿದು
ತಿಂಡಿ ಅಡುಗೆಗಳ ಲೇಖಾಲೇಖಿ
ನೀಲನಕ್ಷೆ ತಯಾರಾಗುತ್ತದೆ

ಅಂದಿನ ತರಕಾರಿಹೋಳು ಕಾಳುಗಳು
ಕುಕ್ಕರೆಂಬ ಹಬೆಯಬಾವಿಗೆ ಬೀಳುತ್ತವೆ
ಹದವಾಗಿ ಹುರಿದ ಮಸಾಲೆ
ನಾಮುಂದು ತಾಮುಂದು ಎಂದು
ಚಟಪಟನೆ ಎಗರಾಡುವ
ಸ್ವಾಭಿಮಾನದ ಸಾಸಿವೆಗಳು
ಒಂದೇಕ್ಷಣ ಸಿಡಿದು ಜೀರಿಗೆಯೊಂದಿಗೆ
ತಂಪು ತಂಪಾಗಿ ಪ್ರೇಮಘಮ ಹರಡುತ್ತವೆ
ಹೊಂದಾಣಿಕೆಯೆಂಬ ಹೂವರಳಿ …….
ಮನೆಮಂದಿಯನ್ನೆಲ್ಲ ನನ್ನೆಡೆ ಸೆಳೆಯುತ್ತದೆ
ವಗ್ಗರಣೆಯೆಂಬ ಮಳೆಬಿಲ್ಲು
ಅಡುಗೆ ಮಾತ್ರವಲ್ಲ ……
ಬದುಕಿನ ಪದಾರ್ಥಗಳೂ ಕಳೆಕಟ್ಟುತ್ತದೆ
ರುಚಿ ಹೆಚ್ಚಿಸುತ್ತದೆ
ನನ್ನೊಳಗೆ ಒಂಥರ ಲೌಕಿಕ ಸಮಾಧಿ
ಈ ಕಾಲದ ಆಕ್ಸಿಮೀಟರಿನಂತೆ
ಖುಷಿಮೀಟರ್ ತೃಪ್ತಿಮೀಟರ್ ನಲ್ಲಿ
ಎಲ್ಲರದೂ ತೊಂಭತ್ತರ ಮೇಲೆ
ಮನಸ್ಸಿನ ಆಹ್ಲಾದ ಆಮೋದ
ಸ್ವಾಸ್ಥ್ಯ ನನ್ನ ಮೂರಂಕಣದ ಅಂಕಣದಲ್ಲೇ !






0 Comments