
‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ.
‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು ಕಥಾ ಸಂಕಲನ, ಕಾದಂಬರಿ ಚಂದ್ರಿಕಾ ಅವರ ಹಿರಿಮೆಯನ್ನು ಸಾರಿವೆ.
ಸದಾ ಚಟುವಟಿಕೆಯ ಚಂದ್ರಿಕಾಗೆ ಕೃಷಿಯಲ್ಲೂ ಆಸಕ್ತಿ. ಕನ್ನಡದ ಹೆಮ್ಮೆಯ ಪ್ರಕಟಣಾ ಸಂಸ್ಥೆ ‘ಅಭಿನವ’ದ ರೂವಾರಿಗಳಲ್ಲೊಬ್ಬರು.
ಇಂದಿನಿಂದ ಅವರ ಹೊಸ ರೀತಿಯ ಅಂಕಣ ಆರಂಭ. ಇದನ್ನು ಕಾದಂಬರಿ ಎಂದು ಕರೆಯಿರಿ, ಇಲ್ಲಾ ಅನುಭವ ಕಥನ ಎನ್ನಿ. ಚಂದ್ರಿಕಾ ನಡೆಸುವ ಪ್ರಯೋಗ ಮಾತ್ರ ಸದ್ದಿಲ್ಲದೇ ಹೊಸ ಅಲೆಯನ್ನು ಸೃಷ್ಟಿಸುತ್ತಲೇ ಇರುತ್ತದೆ.
15
ಇನ್ನೆರಡು ದಿನ ಶೂಟಿಂಗ್ ಶುರು ಎನ್ನುವಾಗ ಸಲಾಂ ಸಾಬ್, ಪಾತುಮ್ಮಳ ಮನೆಯನ್ನು ಕಟ್ಟಿಕೊಟ್ಟಿದ್ದ. ಒಳಗೆ ಹೊರಗೆ ಏನೇನು ಇರಬೇಕು ಎಂದು ತೀರ್ಮಾನ ಮಾಡಬೇಕಿದ್ದಿದ್ದು ನಾವೇ. ಆದ್ದರಿಂದ ಪುನೀತ ಮತ್ತು ಪುಟ್ಟರಾಜುವಿನ ಜೊತೆ ನನ್ನ ಸರ್ಕಸ್ ಶುರುವಾಗಿತ್ತು. ತನ್ನ ಕೆಲಸ ಅಲ್ಲದಿದ್ದರೂ ಚಂಚಲಾ ನಮ್ಮ ಜೊತೆಗೆ ಕೈ ಜೋಡಿಸಿದ್ದರು. ಮುಕ್ಕಚೇರಿಯ ಜಕ್ಕು ಮಹಮದ್‌ರ ಮನೆಯ ಅಕ್ಕ ಪಕ್ಕದ ಹೆಣ್ಣುಮಕ್ಕಳನ್ನು ಕರೆತಂದು ಯಾವ ವಸ್ತುಗಳು ಎಲ್ಲೆಲ್ಲಿ ಇರಬೇಕು ಎಂದು ತೀರ್ಮಾನಿಸತೊಡಗಿದೆವು.
ಕೆಲವರು ಹಳೆಯ ಬುರ್ಕಾವನ್ನು ಕೊಟ್ಟು ಗೋಡೆಗೆ ಫಿಕ್ಸ್ ಆಗಿದ್ದ ಮರದ ತುಂಡನ್ನು ತೋರಿಸಿ ಇದನ್ನು ಇಲ್ಲಿ ಹಾಕಿ ಎಂದರೆ, ತಮ್ಮ ಮನೆಯಲ್ಲಿದ್ದ ಹಳೆಯ ಕಾಬಾದ ಫೋಟೋವನ್ನು ನೆಲಕ್ಕೆ ತಾಕಿಸಬಾರದು ಎನ್ನುವ ಎಚ್ಚರಿಕೆಯ ಜೊತೆ ಕೊಟ್ಟರು. ಬೇಡವಾಗಿ ಒಟ್ಟಿದ್ದ ವಸ್ತುಗಳನ್ನು, ಮೂಟೆ ಕಟ್ಟಿದ್ದನ್ನ ತೆಗೆದು ರಾಶಿ ಹಾಕಿದರು. ಮುರಿದು ಹೋಗಿದ್ದ ಪಾತ್ರೆಗಳು, ಅಲ್ಯುಮಿನಿಯಮ್ ತಟ್ಟೆಗಳು, ಹಳೆಯ ವೈರ್ ಬುಟ್ಟಿಗಳು, ಬುರ್ಕಾಗಳು, ಮಕ್ಕಳ ಬಟ್ಟೆಗಳು… ಹೀಗೆ ಬಗೆಬಗೆಯ ವಸ್ತುಗಳು ಮನೆ ತುಂಬಿಬಿಟ್ಟವು. ಕಟ್ಟೆಯ ಮೇಲೆ ಹಾಸಿಗೆಯೊಂದು ಬೇಕಲ್ಲ ಅದನ್ನು ಹೇಗೆ ಮಾಡುವುದು ಎಂದು ಯೋಚನೆಗೆ ಬಿದ್ದಾಗ ಹರಿದ ಸೀರೆಗಳನ್ನೆಲ್ಲಾ ಒಟ್ಟುಮಾಡಿ ಅವರೇ ಹಾಸಿಗೆಯಾಗಿ ಮಾಡಿಬಿಟ್ಟಿದ್ದರು.
ಬಾವಿಯ ಓಣಿಯನ್ನು ದಾಟಿ ಹೋದರೆ ಬೀಡಿಕಟ್ಟುತ್ತಾ ಕುಳಿತಿದ್ದ ಹೆಂಗಸರ ಮನೆಯ ಪಕ್ಕದಲ್ಲಿ ಒಂದು ಮರದ ಶಲ್ಫ್ ಇತ್ತು. ಅದರ ತುಂಬಾ ಬೇಡವಾದ ಏನೇನನ್ನೋ ತುಂಬಿದ್ದರು. ‘ಸ್ವಲ್ಪ ದಿನದಮಟ್ಟಿಗೆ ಕೊಡಿ’ ಎಂದಾಗ ಎರಡನೆಯ ಮಾತಿಲ್ಲದೆ ʻತೆಗೆದುಕೊಳ್ಳಿ’ ಎಂದಿದ್ದರು. ಒಳ್ಳೆಯ ಮರದ ಶಲ್ಫೇ ಆಗಿದ್ದರಿಂದ ಉಪ್ಪುಗಾಳಿಗೆ ಹಾಳಾಗದೆ ಉಳಿದಿತ್ತು. ಅದನ್ನು ತೆಗೆಯಲು ನೋಡಿದೆವು. ಸುಮಾರು ಒಳಗೆ ಹೂತಿದ್ದರಿಂದ ಅಲುಗಾಡಿಸಲು ಆಗಲಿಲ್ಲ. ಊಟಕ್ಕೆ ಬಂದ ಮಗನಿಗೆ ಆ ಮನೆಯ ತಾಯಿ ಸಹಾಯ ಮಾಡುವಂತೆ ಹೇಳಿದರು. ಸಲಾಂ ಸಾಬ್, ಆತ ಹಾಗೂ ನಾವೆಲ್ಲಾ ಸೇರಿ ಶೆಲ್ಫ್ ನ್ನು ಕಷ್ಟಪಟ್ಟು ತೆಗೆದು ಮನೆಯೊಳಗೆ ಇಟ್ಟೆವು. ಅಷ್ಟರಲ್ಲಿ ಅಲ್ಲೇ ಆಡುತ್ತಿದ್ದ ಹುಡುಗಿಯೊಬ್ಬಳು ಉಲ್ಲಾಳ ದರ್ಗಾದ ಹಳೆಯ ಕ್ಯಾಲೆಂಡರ್‌ನ್ನು ತಂದುಕೊಟ್ಟಳು. ಅದನ್ನು ನೋಡಿ ನನಗೆ ಬಹಳ ಸಂತೋಷವಾಯಿತು.

ಅಲೀಮಮ್ಮ ಬಿಳಿಯ, ಅಲ್ಲಲ್ಲಿ ತಿಳಿ ನೀಲಿ ದಾರದ ಎಂಬ್ರಯಾಡ್ರಿ ಇರುವ ಹಳೆಯ ಕರ್ಟನನ್ನೂ, ಹಸೀನಮ್ಮ ಧೂಪ ಹಾಕುವ ಮಣ್ಣಿನ ಬಟ್ಟಲನ್ನೂ ಕಳಿಸಿದಳು. ಅವರಿವರಿಗೆ ತೋಚಿದ್ದನ್ನು ಕಳಿಸಿದ್ದರಿಂದ ಖಾಲಿಯಿದ್ದ ಮನೆ ತುಂಬಿದ ಮನೆಯಾಗಿಬಿಟ್ಟಿತ್ತು. ಆ ಕೇರಿಯನ್ನೆಲ್ಲಾ ಸುತ್ತಿದ್ದರ ಫಲ ಸಲಾಂ ಸಾಬ್‌ನ ಮನೆಯಿಂದ ಸಿಮೆಂಟಿನ ಒಲೆ ಬಂತು, ಅದಕ್ಕೆ ಮಣ್ಣನ್ನು ಮೆತ್ತಿ ಮಣ್ಣಿನ ಒಲೆಯ ಹಾಗೆ ಕಾಣುವಂತೆ ಮಾಡಿದೆವು. ಅದನ್ನಿರಿಸಿದ ಜಾಗಕ್ಕೆ ಉರಿಯಲಿಕ್ಕೆ ಬಳಸುವ ಗಮ್ಮನ್ನು ಸವರಿ ಬೆಂಕಿ ಹಚ್ಚಿ ಬಳಸಿದ ಹಾಗೆ ಕಾಣುವಂತೆ ಕಪ್ಪಾಗಿಸಿದೆವು.
ಹಿಂದಿನ ದಿನ ಇಲ್ಲದ ಮನೆ ಎಷ್ಟೋ ವರ್ಷಗಳಿಂದ ಇದೆ ಎನ್ನುವ ಹಾಗೆ ಎದ್ದು ನಿಂತಿತ್ತು. ಸಮುದ್ರದ ಮೇಲಿನ ಗಾಳಿ ಗರಿಗಳನ್ನು ಹಾರಿಸದಂತೆ ಬಂದೋಬಸ್ತಾಗಿ ಆ ಹುಡುಗ ಸಲಾಂ ವೈರುಗಳಿಂದ ಕಟ್ಟಿಕೊಟ್ಟಿದ್ದ. ಕುರಾನ್‌ನ ಹಳೆಯ ಪುಸ್ತಕವನ್ನೂ ಅದನ್ನಿರಿಸಲು ಮಣೆಯನ್ನೂ ಬೆಂಗಳೂರಿಂದಲೇ ತೆಗೆದುಕೊಂಡು ಹೋಗಿದ್ದರಿಂದ ಹುಡುಕುವ ಗೋಜಿರಲಿಲ್ಲ. ಎಲ್ಲರಿಗೂ, ʻನಿಮ್ಮ ವಸ್ತುಗಳನ್ನು ಜೋಪಾನವಾಗಿ ಹಿಂದಿರುಗಿಸುತ್ತೇವೆʼ ಎಂದು ಹೇಳಿದ್ದೆವು.
ಜಕ್ಕು ಮಹಮದ್ ದಿನಾ ಬೆಳಗ್ಗೆ ಮೀನು ಮಾರಿಯಾದ ಮೇಲೆ ನಮ್ಮ ಚಟುವಟಿಕೆಗಳನ್ನು ಗಮನಿಸಲು ಬರುತ್ತಿದ್ದರು. ʻಅರೆ ಕಾಕ ಯಾವತ್ತೂ ಬರದೇ ಇರೋನು ಇವತ್ತೇನು?’ ಎಂದು ಹಸೀನಮ್ಮಾ ಏನೂ ಆಗೇ ಇಲ್ಲ ಎನ್ನುವ ಹಾಗೆ ಚುಡಾಯಿಸಿದರೆ, ʻಏನಿಲ್ಲ, ಇಲ್ಲೇ ಮೀನು ಮಾರಲು ಬಂದಿದ್ದೆ, ಒಳ್ಳೆ ಮೀನುಂಟು ತೆಗೆದುಕೋ’ ಎಂದು ಸಬೂಬು ಹೇಳುತ್ತಿದ್ದ. ‘ಕಾಕಾ ನನಗೆ ನೀನು ಮೀನು ಮಾರುವುದಾ? ನನ್ನ ಗಂಡ ಎಂಥೆಂಥಾ ಮೀನು ತರುತ್ತಾರೆ ಗೊತ್ತಲ್ಲ? ನನಗೆ ಎಲ್ಲ ಗೊತ್ತುಂಟು. ನಿನ್ನ ಮನೆ ಕಾಗೆ ಕಚ್ಚಿಕೊಂಡು ಹೋಗೋದಿಲ್ಲ. ಅರಾಮಾಗಿರು’ ಎಂದು ಹಸೀನಮ್ಮ ರೇಗಿಸಿದ್ದಳು. ನಾಚಿಕೊಂಡವರಂತೆ ಹಿಂದೆ ಸರಿದು ನಿಂತು, `ನನ್ನ ಮನೆ ಕಾಗೆ ಕಚ್ಚಿಕೊಂಡು ಹೋಗುವಷ್ಟು ಸಡಿಲ ಇಲ್ಲʼ ಎಂದು ಹೇಳಿದ್ದರು. ನಾವೆಲ್ಲಾ ನಕ್ಕಿದ್ದೆವು. ಒಮ್ಮೆ ಪುನೀತನನ್ನು ಪಕ್ಕಕ್ಕೆ ಕರೆದು ʼಈ ಸಿನಿಮಾದಲ್ಲಿ ನನಗೂ ಪಾರ್ಟು ಸಿಗಬಹುದಾ?’ ಎಂದು ಕೇಳಿದ್ದರಂತೆ. ಅವನು ಬಂದು ಹೇಳಿದಾಗ ಕೇರಿಯ ಹೆಂಗಸರು ಬೀಡಿ ಕಟ್ಟುತ್ತಾ ಕೂತವರು ತಿರುಗಿ, ʻನಮ್ಮ ಜಕ್ಕು ಮಹಮದ್ ಒಳ್ಳೆ ಕಲಾಕಾರನೇ. ಅವನೊಳಗೆ ಇಂಥದ್ದೊಂದು ಆಸೆ ಇದೆ ಅಂತ ಗೊತ್ತೇ ಇರಲಿಲ್ಲ’ ಎಂದು ನಕ್ಕಿದ್ದರು.
ಜಕ್ಕು ಮಹಮದ್ ನಮಗೆ ಗೊತ್ತಿಲ್ಲದಂತೆ ಯಾವಾಗಲೋ ಮನೆಯೊಳಗೆ ಹೊಕ್ಕು ಬಂದುಬಿಡುತ್ತಿದ್ದರು. ಗೋಡೆಗೆ ಮೊಳೆ ಹೊಡೆದಿದ್ದರೆ ʻಯಾಕೆ ಹೊಡಿದಿರಿ?’ ಎಂದು ಪುನೀತನನ್ನೋ, ಪುಟ್ಟಣ್ಣನನ್ನೋ ಕೇಳುತ್ತಿದ್ದರಂತೆ. ನನ್ನ ಹತ್ತಿರ ಮಾತ್ರ ‘ನಿಮ್ಮ ಡೈರೆಕ್ಟರ್‌ಗೆ ಹೇಳಿ ಸ್ವಲ್ಪ ಜಾಸ್ತಿ ದುಡ್ಡನ್ನು ಕೊಡಿಸಿʼ ಎಂದು ಕೇಳುತ್ತಿದ್ದರು. ನಾನು ‘ಹಾಂ ಕೊಡಿಸೋಣ’ ಎಂದು ಸಮಾಧಾನ ಪಡಿಸುತ್ತಿದ್ದೆ. ಆ ಮಾತನ್ನು ಮರೆಸುವಂತೆ ‘ನೀವೂ ಒಂದು ಪಾತ್ರ ಮಾಡಿಬಿಡಿ, ನಮ್ಮ ಸಿನಿಮಾದಲ್ಲಿʼ ಎಂದು ನಗುತ್ತಿದ್ದೆ. ಏನೋ ನಾನೇ ಅವರಿಗೆ ಆಫರ್ ಮಾಡಿದ ಹಾಗೆ ‘ಮಾಡುವ ಬಿಡಿʼ ಎಂದು ನಗುತ್ತಿದ್ದರು. ಎಂದಾದರೂ ಬಲವಂತ ಮಾಡಿದರೆ ಟೀ ಕುಡಿಯುತ್ತಿದ್ದರು, ತಿಂಡಿಯಾಗಲೀ ಊಟ ಆಗಲಿ ಮಾಡುತ್ತಿರಲಿಲ್ಲ. ‘ನಾನು ಒಳ್ಳೆ ಕುಕ್ಕು ಗೊತ್ತುಂಟಾ. ಪದಾರ್ಥ ಮಾಡಿದ್ರೆ ನನ್ನ ಮಕ್ಕಳು ನನಗೆ ಉಳಿಸುವುದಿಲ್ಲ. ಅದರಲ್ಲೂ ಮೀನು! ಬಿಡಿ ಮಹರಾಯರೇ, ಆ ಮೀನೇ ಪುಣ್ಯ ಮಾಡಿರಬೇಕು ಹಾಗಾಗುತ್ತದೆ ಪದಾರ್ಥ’ ಎಂದು ಹಲ್ಲು ಕಾಣಿಸುತ್ತಿದ್ದರು. ಅವರ ವರ್ಣನೆಗೆ ಮೀನು ತಿನ್ನದ ನನಗೂ ಒಂದು ಸಣ್ಣ ಆಸೆ ಬಂದುಬಿಟ್ಟಿತ್ತು.

ನಮ್ಮ ಮನೆಯ ಅರೇಂಜ್‌ಮೆಂಟೆಲ್ಲಾ ನೋಡಿದಮೇಲೆ ಕಣ್ಣು ತುಂಬಿಕೊಂಡು, ʼನನ್ನ ಅಬ್ಬು ಹಸನಬ್ಬ ಅಮ್ಮಿ ಪಾತುಮ್ಮಬಿ ಇದ್ದಾಗ ಮನೆ ಹಿಂಗಿತ್ತು’ ಎಂದಿದ್ದರು. ʼಎಲ್ಲಕ್ಕೂ ಕಾಲ ಬರುತ್ತೆ ಬಿಡಿ, ಮುಂದೆ ಈ ಮನೆ ಹೀಗೆ ತುಂಬಿರುತ್ತೆ’ ಎಂದು ಅವರನ್ನು ಉಬ್ಬಿಸುವ ಮಾತುಗಳನ್ನಾಡಿದ್ದೆ. ಅಲ್ಲೇ ಗೋಡೆಗೆ ಒರಗಿಸಿದ ಸೈಕಲ್ ತಳ್ಳಿಕೊಂಡು ಹೋಗುವಾಗ, ಮತ್ತೆ ನಿಂತು ಮನೆಯನ್ನು ಕಣ್ಣಲ್ಲಿ ತುಂಬಿಕೊಳ್ಳುತ್ತಿದ್ದರು. ಆಯಾಸಗೊಂಡಿದ್ದ ಅವರ ಕಣ್ಣುಗಳು ಆಸೆಯ ಹೊಳಪನ್ನು ಅರಸುತ್ತಿತ್ತು. ಈಗಲೋ, ಆಗಲೋ ಸಮುದ್ರದ ಕೊರೆತಕ್ಕೆ ಸಿಕ್ಕು ಬೀಳುವಂತಿದ್ದ ಮನೆಯ ಮೇಲೆ ಇಷ್ಟು ಆಸೆಯನ್ನು ಉಳಿಸಿಕೊಂಡಿದ್ದರು ಎಂದರೆ ಆ ಮನೆಯ ಕಡೆಗೆ ಅವರಿಗೆ ಎಂಥಾ ದೊಡ್ಡ ಸೆಳೆತ ಇದ್ದಿರಬೇಕು? ಎಷ್ಟು ಕನಸುಗಳು, ನೆನಪುಗಳು ಇದ್ದಿರಬೇಕು? ಅದನ್ನೆಲ್ಲಾ ಕೇಳೋಣ ಅಂದುಕೊಂಡರೆ ಆಗಲೇ ಇಲ್ಲ. ಪಾತ್ರಕೊಡಲಿಕ್ಕೆ ಒಪ್ಪದ್ದರಿಂದ, ಅವರ ಒಂದು ಪಾಸಿಂಗ್ ಷಾಟ್ ಆದ್ರೂ ಮಾಡಿ ಎಂದು ಪಂಚಾಕ್ಷರಿಯನ್ನು ಗೋಗರೆದೆ.
ನನ್ನ ಕಾಟ ತಡೆಯಲಾರದೆ ಪಂಚಾಕ್ಷರಿ ಒಪ್ಪಿಕೊಂಡರು. ಅವತ್ತು ಅವರನ್ನು ನೋಡಬೇಕಿತ್ತು, ನೀಟಾಗಿ ಬಟ್ಟೆ ಹಾಕಿಕೊಂಡು ಬೋಳಾಗುತ್ತಿದ್ದ ಮುಂದಲೆಯನ್ನು ಬಾಚಿಕೊಂಡು ಬಂದಿದ್ದರು. ನಮ್ಮ ಪುಟ್ರಾಜು ಪುನೀತ ಇಬ್ಬರೂ ಅವರನ್ನು ರೇಗಿಸುತ್ತಿದ್ದರು. ʻಎಂಥಾದ್ದು ನೀವು ಹೀಗೆಲ್ಲಾ ಹೇಳುವುದಾ?’ ಎಂದು ನಾಚಿಕೊಳ್ಳುತ್ತಿದ್ದರು. ಇಷ್ಟಾಗಿಯೂ ಅವರ ಜಕ್ಕು ಸೈಕಲ್‌ನ್ನು ತಳ್ಳಿಕೊಂಡು ಹೋಗುವ ಬ್ಯಾಕ್ ಷಾಟ್ ಮಾತ್ರ ತೆಗೆದರು. (ಅದು ಆ ಸಿನಿಮಾದಲ್ಲಿ ಇದೆ.)
| ಇನ್ನು ಮುಂದಿನ ವಾರಕ್ಕೆ |






0 Comments