ವರ್ತಮಾನದ ಯುವ ಜನತೆಗೆ ದರ್ಶನವಾಗಬೇಕಾದ ಗಾಂಧಿ ಜೀವನ ತತ್ವ
ಜ್ಯೋತಿ
ಅಕ್ಟೋಬರ್ 2 ಬಂತೆಂದರೆ, ಸಮಸ್ತ ಭಾರತೀಯರಿಗೆ ಒಮ್ಮೆ ಗಾಂಧಿಯ ನೆನಪಾಗುತ್ತದೆ. ಯಾಕೆಂದರೆ, ಅದೊಂದು ಸಾರ್ವಜನಿಕ ರಜಾದಿನ ಮಾತ್ರವಲ್ಲ, ಸಾಂಕೇತಿಕವಾಗಿ ಮದ್ಯ ಹಾಗು ಮಾಂಸ ನಿಷೇಧದ ದಿನ. ಅಂದು, ಗಾಂಧಿ ತತ್ವವನ್ನು ಒಂದಿಷ್ಟೂ ಅರ್ಥೈಸಿಕೊಳ್ಳದ ನಮ್ಮ ಮುಖಂಡರುಗಳು, ಸಾರ್ವಜನಿಕ ವೇದಿಕೆಗಳಲ್ಲಿ ಗಾಂಧಿಯ ಕುರಿತು ಸುದೀರ್ಘ ಭಾಷಣ ಮಾಡುವುದನ್ನು ನೋಡುತ್ತೇವೆ.
ಈ ಸಂದರ್ಭದಲ್ಲಿನ ಮುಖ್ಯ ಪ್ರಶ್ನೆ, ವರ್ತಮಾನದ ಜಗತ್ತು ತಿಳಿದುಕೊಂಡಿರುವಂತೆ, ಗಾಂಧಿಯೆಂದರೆ ಕೇವಲ ಸತ್ಯ, ಅಹಿಂಸೆ ಹಾಗು ಸ್ವಚ್ಛತೆಯ ಪ್ರತೀಕ, ಅಥವಾ ದೇಶದ ಸ್ವಾತಂತ್ರ್ಯ ಚಳುವಳಿಯ ಮುಂಚೂಣಿಯಲ್ಲಿದ್ದ ಮಹಾನ್ ನಾಯಕ ಎಂದಷ್ಟೇ ಅರಿತುಕೊಂಡರೆ ಸಾಕೆ? ಅಥವಾ ಮೋಹನ್ ದಾಸ್ ಕರಮಚಂದ್ ಗಾಂಧಿಯ ಜೀವನ ತತ್ವದ ಸಮಗ್ರ ದರ್ಶನದ ಮೂಲಕ, ಪರಿಪೂರ್ಣವಾಗಿ ಬದುಕುವ ಮಾದರಿಯೊಂದನ್ನು ಪರಿಚಯಿಸುವ ಅಗತ್ಯವಿದೆಯೇ?
ಪ್ರಾಸ್ತಾವಿಕವಾಗಿ ಹೇಳುವುದಾದರೆ, ಈ ಕಾಲಘಟ್ಟದ ಯುವಜನತೆಗೆ ಗಾಂಧಿ ತತ್ವ, ಪಠ್ಯದ ರೂಪದಲ್ಲಿ ಕಡ್ಡಾಯವಾಗಿ ದೊರಕಬೇಕಾದ ಅಗತ್ಯವಿದೆಯೆನಿಸುತ್ತದೆ. ಯಾಕೆಂದರೆ, ಇಂದಿನ ಯುವಜನತೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ, ಬದುಕಿನ ಅರ್ಥದ ಕುರಿತಂತೆ ಸಾಕಷ್ಟು ಗೊಂದಲದಲ್ಲಿರುವಂತೆ ಕಾಣಿಸುತ್ತಾರೆ.
ವಿಸ್ಮಯವೆಂದರೆ, ಹಿಂದಿನ ಪೀಳಿಗೆಗಳಿಗೆ ಹೋಲಿಸಿದರೆ, ಇವರಿಗೆ ಹೆತ್ತವರ ಪ್ರೀತಿ ಹಾಗು ಕಾಳಜಿ ಜಾಸ್ತಿನೇ ಸಿಗುತ್ತಿದೆ. ಸೌಲಭ್ಯಗಳೂ ಹಾಗು ಕನಸುಗಳ ಮುಟ್ಟುವ ಅವಕಾಶಗಳೂ ಹೆಚ್ಚಾಗಿವೆ. ಜೊತೆಗೆ, ಇದೊಂದು ಮಾಹಿತಿ ಯುಗ. ಹಾಗಾಗಿ, ಮನಸ್ಸಿನಲ್ಲಿ ಮೂಡುವ ಪ್ರಶ್ನೆಗಳಿಗೆ ಉತ್ತರ ಕಂಡುಹಿಡಿಯುವುದೂ ಸುಲಭ. ಇಷ್ಟೆಲ್ಲಾ ಸವಲತ್ತುಗಳ ನಡುವೆ, ನಮ್ಮ ಯುವಜನತೆ ಬದುಕನ್ನು ಪರಿಪೂರ್ಣವಾಗಿ ಅನುಭವಿಸುವುದನ್ನು ಅರ್ಥೈಸಿಕೊಂಡಿಲ್ಲ. ಅವರಲ್ಲಿ, ಒಂಟಿತನ, ಹತಾಶೆ, ಮಾನಸಿಕ ಖಿನ್ನತೆ, ಆತ್ಮಹತ್ಯೆಯ ಪ್ರವೃತ್ತಿ ಹೆಚ್ಚಾಗುತ್ತಿದೆ.

ಇದಕ್ಕೆ ಮುಖ್ಯ ಕಾರಣವೆಂದರೆ, ವರ್ತಮಾನದ ಜಗತ್ತು ಅತ್ಯಾಕರ್ಷಕವಾಗಿ ಸಿದ್ಧಪಡಿಸಿ, ಬದುಕಿನ ಧ್ಯೇಯವೆಂಬಂತೆ ಯಶಸ್ವಿಯಾಗಿ ಬಿಂಬಿಸಿರುವ ವಸ್ತುನಿಷ್ಠ, ಯಾಂತ್ರಿಕ ಹಾಗು ಸ್ಪರ್ಧಾತ್ಮಕ ಜೀವನ ದೃಷ್ಟಿಕೋನ. ಇಲ್ಲಿ ಪ್ರತಿಯೊಂದು ಹಂತದಲ್ಲಿಯೂ ಯಶಸ್ಸು ಗಳಿಸಲೇಬೇಕಾದ ಬಾಹ್ಯ ಹಾಗು ಆಂತರಿಕ ಒತ್ತಡವಿದೆ. ಇದರ ಫಲವಾಗಿ, ವೈಯಕ್ತಿಕ ಯಶಸ್ಸಿನ ಮಾನದಂಡವಾದ ಅಪಾರ ಹಣ, ಉನ್ನತ ಉದ್ಯೋಗ, ಭವ್ಯ ಮನೆ, ಅಪರಿಮಿತ ಆಸ್ತಿ, ಇತ್ಯಾದಿಗಳನ್ನು ಹರಸಾಹಸಮಾಡಿ ಸಿದ್ದಿಸುವುದೊಂದೇ ನಮ್ಮ ಜೀವನದ ಗುರಿಯೆಂಬಂತೆ ಜೀವನ ಸೆವೆಸುತ್ತಾ, ಒಳಗೊಳಗೇ ಖಾಲಿತನ ಅನುಭವಿಸುತ್ತಾ, ಈ ಪರಿಧಿಯೊಳಗೆ ದಿನಗಳನ್ನು ಕಳೆಯುತ್ತೇವೆಯೇ ಹೊರತು, ಇದರಿಂದ ಬಿಡಿಸಿಕೊಂಡು, ಪರ್ಯಾಯ ಬದುಕು ಕಟ್ಟುವ ಪ್ರಯತ್ನ ಮಾಡುವುದಿಲ್ಲವೆನ್ನಬಹುದು.
ಆದರೆ, ಗಾಂಧಿ ತನ್ನ ಸ್ವಅನುಭವದಿಂದ ಪ್ರಾಯೋಗಿಕವಾಗಿ ಕಟ್ಟಿಕೊಂಡಿರುವ ಜೀವನ ಮಾರ್ಗದಲ್ಲಿ, ವರ್ತಮಾನ ಜಗತ್ತಿನ ಇಂತಹ ಹಲವಾರು ಮಾನವ ನಿರ್ಮಿತ ಭ್ರಮೆಗಳಿಂದ ಮುಕ್ತಿ ಕಾಣಬಹುದು. ಈ ಭ್ರಮೆಗಳ ಆಯಾಮ, ರಾಜಕೀಯ, ಸಾಂಸ್ಕ್ರತಿಕ, ಆರ್ಥಿಕ ಅಥವಾ ಸಾಮಾಜಿಕ ನೆಲೆಗಳಲ್ಲಿರಲಿ, ಗಾಂಧೀತತ್ವವನ್ನು ಸೂಕ್ಷ್ಮವಾಗಿ ಅರ್ಥೈಸಿಕೊಂಡಲ್ಲಿ, ಇವುಗಳಿಗೆ ಸರಳ ಪರಿಹಾರವನ್ನು ಕಾಣಬಹುದು. ದುರಾದೃಷ್ಟವಶಾತ್, ನಾವು ಗಾಂಧಿಯನ್ನು ಅವರ ರಾಜಕೀಯ ಚಳುವಳಿಗಳ ಪರಿಮಿತಿಯಲ್ಲಷ್ಟೇ ಓದುತ್ತಿದ್ದೇವೆ. ಇದರಿಂದ, ಗಾಂಧಿ ಕಂಡುಕೊಂಡ ಜೀವನದ ಸತ್ಯದರ್ಶನವಾಗುವುದಿಲ್ಲ. ಇದನ್ನರಿಯಲು, ಗಾಂಧಿಯ ಸಮಗ್ರ ಜೀವನವನ್ನು ಕಾಲಕಾಲಕ್ಕೆ ಪುನರ್ ವಿಮರ್ಶೆಗೆ ಒಡ್ಡಬೇಕಾದ ಅಗತ್ಯವಿದೆ. ಹೀಗಾದಲ್ಲಿ ಮಾತ್ರ, ಅನನ್ಯ ದೂರದೃಷ್ಟಿ ಹೊಂದಿದ್ದ ಗಾಂಧಿಯ ಜೀವನತತ್ವ, ವರ್ತಮಾನದ ಜಗತ್ತನ್ನು ಸಂಪೂರ್ಣವಾಗಿ ಆವರಿಸಿರುವ ಗ್ರಾಹಕ ಸಂಸ್ಕೃತಿಯಿಂದ, ನಮ್ಮನ್ನು ಸ್ವವಿಮರ್ಶೆಗೆ ಹಚ್ಚಿ, ಸ್ವಲ್ಪ ಬಿಡುಗಡೆಗೊಳಿಸಬಹುದು.
ಈ ಹಿನ್ನೆಲೆಯಲ್ಲಿ, ವರ್ತಮಾನದ ಜಗತ್ತಿಗೆ ಗಾಂಧಿತತ್ವಕ್ಕೆ ಮರುಪ್ರವೇಶ ಮಾಡುವುದು ಅನಿವಾರ್ಯವೆನ್ನಬಹುದು. ಮೂಲತಃ ಇತಿಹಾಸದ ಅವಲೋಕನದಿಂದ, ವರ್ತಮಾನ ಜಗತ್ತಿನ ಬೆಳವಣಿಗೆಗಳನ್ನು ಅರ್ಥಮಾಡಿಕೊಂಡು, ಭವಿಷ್ಯದತ್ತ ದೃಢ ಹೆಜ್ಜೆ ಹಾಕಲು ಸಹಾಯಕ. ಈ ನಿಟ್ಟಿನಲ್ಲಿ, ಗಾಂಧಿತತ್ವವನ್ನು ಪ್ರವೇಶಿಸುವುದೆಂದರೆ, ಜಗತ್ತಿನ ಶ್ರೇಷ್ಠ ಧರ್ಮಗಳ ಹಾಗು ದಾರ್ಶನಿಕರ ತತ್ವಗಳನ್ನು, ಸಮ್ಮೇಳಿಸಿ ಅರಿತುಕೊಂಡಂತೆ. ಅಂದರೆ, ಜಗತ್ತಿನ ಇತಿಹಾಸದಲ್ಲಿ ಲಭ್ಯವಿರುವ ದಾರ್ಶನಿಕತೆಯನ್ನು ಒಟ್ಟುಗೂಡಿಸಿ, ಒಂದು ಮೂರ್ತ ರೂಪದಲ್ಲಿ ಮುಖಾಮುಖಿಯಾದಂತೆ. ಯಾಕೆಂದರೆ, ಗಾಂಧಿ ತನ್ನ ಮೇಲೆ ಪ್ರಯೋಗಿಸಿಕೊಂಡ ಜೀವನ ಮಾರ್ಗದ ಹಿಂದಿನ ಪ್ರೇರಣೆಯೆಂದರೆ, ಜೈನ ಧರ್ಮ, ವೇದ, ಉಪನಿಷತ್, ಭಗವದ್ಗೀತೆ, ಕ್ರೈಸ್ತ ಧರ್ಮ ಮಾತ್ರವಲ್ಲದೆ, ಟಾಲ್ ಸ್ಟಾಯ್, ಥೋರೋ, ರಸ್ಕಿನ್ ಇತ್ಯಾದಿ ಜಾಗತಿಕ ಲೇಖಕರ ಬರಹಗಳು.
ಹೀಗೆ, ತಾನು ಓದಿದ ಜಗತ್ತಿನ ಶ್ರೇಷ್ಠ ಗ್ರಂಥಗಳ ಉದಾತ್ತ ಚಿಂತನೆಗಳನ್ನು ತನ್ನ ಜೀವನದಲ್ಲಿ ಪ್ರಾಯೋಗಿಕವಾಗಿ ಅಳವಡಿಸಿಕೊಳ್ಳುತ್ತಾ, ಗಾಂಧಿ ಪರಿಪೂರ್ಣ ವ್ಯಕ್ತಿತ್ವ ಗಿಟ್ಟಿಸಿಕೊಳ್ಳುವತ್ತ ಮುನ್ನಡೆದರು. ಗಾಂಧಿಯ ಕುರಿತಾಗಿ, ವಿಜ್ಞಾನಿ ಆಲ್ಬರ್ಟ್ ಐನ್‍ಸ್ಟೈನ್ ಹೇಳಿದಂತೆ, ‘ಗಾಂಧಿಯಂತಹ ಸಂತ ಈ ಭೂಮಿಯ ಮೇಲೆ ನಡೆದಾಡಿದ್ದನೆಂದರೆ, ಮುಂದಿನ ಜನಾಂಗಗಳು ಖಂಡಿತ ನಂಬುವುದಿಲ್ಲ.’ ಹೀಗೆ, ವಿಸ್ಮಯದ ಪರಿಯಲ್ಲಿ ಗಾಂಧಿ ತನ್ನ ಜೀವನವನ್ನು ಅನುಭವಿಸಿ, ಅದರ ಹೆಜ್ಜೆಗುರುತುಗಳನ್ನು ಬಹಳ ಪಾರದರ್ಶಕವಾಗಿ ಮುಂದಿನ ಜನಾಂಗಗಳ ಮಾರ್ಗದರ್ಶನಕ್ಕೆ ಬಿಟ್ಟು ಹೋಗಿದ್ದಾರೆ ಎನ್ನಬಹುದು.
ಹಾಗಾಗಿ, ಇಲ್ಲಿನ ಮುಖ್ಯ ಪ್ರಶ್ನೆಗಳೆಂದರೆ, ಕಾಲಾತೀತ ಉದಾತ್ತ ಚಿಂತನೆಯ ಗಾಂಧಿಯನ್ನು ನಾವು ಯಾಕೆ ಕೇವಲ ಅಕ್ಟೋಬರ್ 2 ರಂದು ಮಾತ್ರ ನೆನಪಿಸಿಕೊಳ್ಳುತ್ತೇವೆ? ಅವರ ಜೀವನ ತತ್ವಗಳನ್ನು ಪುನರ್ ವಿಮರ್ಶೆಗೆ ಒಡ್ಡುತ್ತಾ, ಸಾರ್ವಜನಿಕ ಚರ್ಚೆಗೆ ತರುತ್ತಿಲ್ಲವೇಕೆ? ವಿಶೇಷವಾಗಿ, ಅವರ ಸರ್ವಧರ್ಮ ಸಮನ್ವಯ, ಅಹಿಂಸೆ, ಸತ್ಯಾಗ್ರಹ, ಶಾಂತಿ, ಪ್ರಕೃತಿಯ ಮಹತ್ವ, ಸಕಲ ಜೀವಿಗಳಲ್ಲಿ ಪ್ರೀತಿ, ಗ್ರಾಮಗಳ ಪುನರುಜ್ಜೀವನ, ಸರಳ ಜೀವನಶೈಲಿ, ಇತ್ಯಾದಿಗಳನ್ನು ನಿತ್ಯ ಜೀವನದಲ್ಲಿ ನಮಗೇಕೆ ಅಳವಡಿಸಿಕೊಳ್ಳಬೇಕೆನಿಸುತ್ತಿಲ್ಲ? ನಮ್ಮನ್ನಾಳುವ ವ್ಯವಸ್ಥೆಗಳು ಗಾಂಧಿತತ್ವದ ಆಧಾರದ ಮೇಲೆ ಯೋಜನೆಗಳನ್ನು ಯಾಕೆ ರೂಪಿಸುತ್ತಿಲ್ಲ? ಅಥವಾ, ನಮ್ಮ ಸಿದ್ದಾಂತಗಳ ಕನ್ನಡಕದ ಮೂಲಕ ಗಾಂಧಿಯನ್ನು ಯಾಕೆ ತಪ್ಪಾಗಿ ಚಿತ್ರಿಸುತ್ತಿದ್ದೇವೆ? ಒಟ್ಟಿನಲ್ಲಿ, ಗಾಂಧಿಯನ್ನು ಅಪ್ರಸ್ತುತವಾಗಿಸುವುದರಿಂದ ಯಾರಿಗೆ ಹೆಚ್ಚಿನ ಲಾಭ? ಇಂತಹ ಪ್ರಶ್ನೆಗಳು, ಗಾಂಧಿಯ ಕುರಿತಾದ ಚರ್ಚೆಯಲ್ಲಿ ಬಹಳ ವಿಶಿಷ್ಟವೆನಿಸುತ್ತವೆ.

ಮೊದಲನೆಯದಾಗಿ, ಬೃಹತ್ ಕೈಗಾರಿಕಾರಣದ ಫಲಶ್ರುತಿಯಾದ ಗ್ರಾಹಕ ಸಂಸ್ಕೃತಿಯ ಪ್ರಾಯೋಜಕರಿಗೆ, ಗಾಂಧಿತತ್ವ ಬಹಳ ದೊಡ್ಡ ತೊಡಕಿನಂತೆ ಕಾಣಿಸುತ್ತದೆ. ಈ ಬಾಹ್ಯ ಆಡಂಬರ ಹಾಗು ಪಕ್ಕಾ ವ್ಯವಹಾರ ದೃಷ್ಟಿಕೋನವನ್ನು ಬಹಳ ಕಾಳಜಿಯಿಂದ ಜನಸಾಮಾನ್ಯರಲ್ಲಿ ಬೆಳೆಸುತ್ತಿರುವವರೆಂದರೆ, ತಮ್ಮ ಅಧಿಕಾರ ಹಾಗು ಹಣದ ಬಲದಿಂದ ಸ್ವಹಿತಾಸಕ್ತಿ ಕಾಪಾಡಲು, ಪೂರಕ ಜನಾಭಿಪ್ರಾಯ ರೂಪಿಸುತ್ತಿರುವ ಬೃಹತ್ ಉದ್ಯಮಿಗಳು ಹಾಗು ಅವರೊಂದಿಗೆ ವ್ಯವಹರಿಸುವ ರಾಜಕೀಯ ವ್ಯವಸ್ಥೆಯ ಉಸ್ತುವಾರಿಗಳು. ಗಾಂಧಿಯ ಸರಳ ಜೀವನ ವಿಧಾನ ಪ್ರಚಾರಗೊಂಡಷ್ಟೂ, ತಮ್ಮ ವಸ್ತುಗಳನ್ನು ವರ್ಣಮಯ ಜಾಹಿರಾತುಗಳ ಮೂಲಕ ಆಕರ್ಷಕವಾಗಿ ಜನಸಾಮಾನ್ಯರ ಮುಂದಿಟ್ಟು, ಅವರನ್ನು ಗ್ರಾಹಕರನ್ನಾಗಿ ಮಾರ್ಪಡಿಸುವ ಉದ್ಯಮಿಗಳಿಗೆ ಮೊದಲ ಹೊಡೆತ ಬೀಳುತ್ತದೆ. ಹಾಗಾಗಿ, ಗಾಂಧಿಯ ವಿಚಾರಧಾರೆಗಳು ಮೂಲೆ ಸರಿಯುವುದು ಅವರಿಗೆ ಅವಶ್ಯಕ.
ಪ್ರಸಕ್ತದ ಮಾಹಿತಿ ಯುಗದಲ್ಲಿ, ಯಾವ ಮಾಹಿತಿ, ಯಾವ ರೂಪದಲ್ಲಿ ಸಾರ್ವಜನಿಕರಿಗೆ ಲಭಿಸಬೇಕೆನ್ನುವುದನ್ನು ಕೂಡ ಕಾರ್ಪೊರೇಟ್ ಜಗತ್ತು ನಿರ್ಧರಿಸುತ್ತದೆ. ಅಂದರೆ, ಜನಸಾಮಾನ್ಯರ ಪ್ರಾಪಂಚಿಕ ದೃಷ್ಟಿಕೋನ ಹೇಗಿರಬೇಕು, ಯಾವುದನ್ನು ಇಷ್ಟ ಪಡಬೇಕು, ಯಾವುದನ್ನು ತಿರಸ್ಕರಿಸಬೇಕು ಎನ್ನುವುದನ್ನು ವಿನ್ಯಾಸಗೊಳಿಸಿ, ತಮ್ಮ ಹತೋಟಿಯಲ್ಲಿರುವ ಮಾಧ್ಯಮಗಳ ಮೂಲಕ ಬಿಂಬಿಸಿ, ಸಾರ್ವಜನಿಕ ವಲಯದಲ್ಲಿ, ಈ ವಿಚಾರಗಳನ್ನು ಜನಪ್ರಿಯಗೊಳಿಸುತ್ತಾರೆ. ಹಾಗಾಗಿ, ಜನಸಾಮಾನ್ಯರು ನಿಷ್ಟುರ ಆತ್ಮವಿಮರ್ಶೆ ಮಾಡುವುದನ್ನು ಬಿಟ್ಟು, ಆಕರ್ಷಕ ವಸ್ತು ಖರೀದಿಯಲ್ಲಿಯೇ ಜೀವನ ಸಾಗಿಸುತ್ತಾರೆ. ಇಂತಹ ಶೋಕಿ ಜೀವನ ಶೈಲಿ ಅಳವಡಿಸಿಕೊಂಡವರಿಗೆ, ತುಂಡು ಬಟ್ಟೆಯುಟ್ಟು ಅತ್ಯಂತ ಸರಳವಾಗಿ ಬದುಕಿದ ಗಾಂಧಿ, ಹಳೆಯ ಕಾಲದ ಅಪ್ರಸ್ತುತ ವ್ಯಕ್ತಿಯಂತೆ ಕಾಣಿಸುತ್ತಾರೆ.
ಆದರೂ ಕೂಡ, ಈ ವ್ಯವಸ್ಥೆಯ ಚೌಕಟ್ಟಿನಿಂದ ಪ್ರಯಾಸವಾಗಿ ಬಿಡಿಸಿಕೊಂಡು ಭಿನ್ನವಾಗಿ ಬದುಕಬೇಕೆನ್ನುವವರಿಗೆ, ಗಾಂಧಿಯ ಪಾರದರ್ಶಕ ಜೀವನ ವಿಧಾನ, ಬಹಳ ಉಪಯುಕ್ತ ಮಾರ್ಗಸೂಚಿಯೆನ್ನಬಹುದು. ಯಾಕೆಂದರೆ, ಸಮಕಾಲೀನ ಜಗತ್ತನ್ನು ಸಂಪೂರ್ಣವಾಗಿ ಆವರಿಸಿರುವ ಜಾಗತೀಕರಣದ ಆರಂಭಿಕ ದಿನಗಳಲ್ಲಿ ಗಾಂಧಿ ಅದನ್ನು ಬಹಳ ಹತ್ತಿರದಿಂದ ಸೂಕ್ಷ್ಮವಾಗಿ ಗಮನಿಸಿ, ದೂರದೃಷ್ಟಿಯಿಂದ ಸೂಕ್ತವಾಗಿ ಪ್ರತಿಕ್ರಿಯಿಸಿದ್ದರು ಕೂಡ. ಹಾಗಾಗಿ, ಗಾಂಧಿ ಮಾರ್ಗದಲ್ಲಿ, ವರ್ತಮಾನ ಜಗತ್ತಿನ ಹಲವಾರು ಗೊಂದಲಗಳಿಗೆ ಸರಳ ಪರಿಹಾರವನ್ನು ನಾವು ಕಾಣಬಹುದು. ವಿಶೇಷವಾಗಿ, ಗಾಂಧಿಯ ಪರಿಚಯವಿಲ್ಲದ ಇಂದಿನ ಯುವಜನತೆ, ಗಾಂಧಿ ತತ್ವವನ್ನು ಅರಿತುಕೊಂಡಲ್ಲಿ, ಅವರ ಬದುಕನ್ನು ಅರ್ಥಪೂರ್ಣವಾಗಿಸಬಹುದು. ಅವರಿಲ್ಲಿ ಸೂಚ್ಯವಾಗಿ ಅರ್ಥಮಾಡಿಕೊಳ್ಳಬೇಕಾದುದು, ಗಾಂಧಿಯ ಸಾರ್ಥಕ ಬದುಕು ಅಂತ್ಯಗೊಂಡಾಗ ಅವರಲ್ಲಿದ್ದ ಆಸ್ತಿಯೆಂದರೆ; ಭಗವದ್ಗೀತೆಯ ಪ್ರತಿ, ಚಪ್ಪಲಿ, ಕನ್ನಡಕ, ಉಗುಳುವ ಪಾತ್ರೆ, ಊಟದ ತಟ್ಟೆ, ಮೂರು ಮಂಗಗಳ ಪ್ರತಿಮೆ, ಅಷ್ಟೇ.
ಸಾಮಾನ್ಯ ಗ್ರಹಿಕೆಯಂತೆ, ವರ್ತಮಾನದ ಯುವಜನತೆಗೆ ಸೂಕ್ತ ಮಾರ್ಗದರ್ಶನದ ಕೊರತೆಯಿದೆ. ಇವರು ತಿಳಿದೋ ತಿಳಿಯದೆಯೋ ಮಾಡುವ ತಪ್ಪುಗಳಿಗೆ, ಪಾಪಪ್ರಜ್ಞೆಯಿಂದ ಒಳಗೊಳಗೇ ಕೊರಗುತ್ತಾ, ಮಾನಸಿಕ ಖಿನ್ನತೆ ಅನುಭವಿಸುತ್ತಾ, ಜೀವನ ಮುಗಿದು ಹೋಯಿತೆನ್ನುವಂತೆ ಹತಾಶೆ ವ್ಯಕ್ತಪಡಿಸುವುದನ್ನು ನಾವು ನೋಡುತ್ತಿರುತ್ತೇವೆ. ಇಂತವರಿಗೆ, ಗಾಂಧಿ ಬಹಳ ನಿಸ್ಸಂಕೋಚವಾಗಿ, ಪಾರದರ್ಶಕವಾಗಿ ತೆರೆದಿಟ್ಟ ಅವರ ಜೀವನ ವೃತ್ತಾಂತ, ಒಂದು ಮಾದರಿ ಉಲ್ಲೇಖದಂತಿದೆ. ಅಂದರೆ, ಗಾಂಧಿ ತಮ್ಮ ಆತ್ಮಚರಿತ್ರೆಯಲ್ಲಿ, ಮರಳಿ ಬದುಕು ಕಟ್ಟಿಕೊಳ್ಳುವ, ಮಾಡಿದ ತಪ್ಪನ್ನು ತಿದ್ದಿಕೊಳ್ಳುವ ಹಾಗು ಹೆಚ್ಚು ಅರ್ಥಪೂರ್ಣವಾಗಿ ಜೀವನ ಸಾಗಿಸುವ ಸಾಧ್ಯತೆಗಳನ್ನು ಪರಿಚಯಿಸುತ್ತಾರೆ. ಹೀಗೆ, ನಿರಂತರವಾಗಿ ಹೊಸ ಅರಿವಿಗೆ ತನ್ನನ್ನು ಪ್ರಾಯೋಗಿಕವಾಗಿ ಒಡ್ಡಿಕೊಂಡ ಗಾಂಧಿಯ ಜೀವನ ಪಯಣ, ಮನುಷ್ಯ ತನ್ನೆಲ್ಲಾ ದೌರ್ಬಲ್ಯಗಳನ್ನು ಮೀರಿ ಹೇಗೆ ಮೇರು ವ್ಯಕ್ತಿತ್ವ ಬೆಳೆಸಿಕೊಳ್ಳಲು ಸಾಧ್ಯವೆನ್ನುವುದನ್ನು ನಿರೂಪಿಸಿದ, ಸಾಮಾನ್ಯ ಜನರೂ ಕೂಡ ತಮ್ಮ ಜೀವನಕ್ಕೆ ಅನ್ವಯಿಸಿಕೊಳ್ಳಬಹುದಾದ, ಸರಳವಾಗಿ ನಿಲುಕುವ ಆತ್ಮೀಯ ಸಾನಿಧ್ಯವೆನ್ನಬಹುದು.
ಮುಂದುವರಿದಂತೆ, ಗಾಂಧಿಯಿಂದ ಅಳವಡಿಸಿಕೊಳ್ಳಬಹುದಾದ ಮುಖ್ಯ ಜೀವನ ಪಾಠವೆಂದರೆ-ನಿರಂತರ ಕಲಿಕೆ, ಬದಲಾವಣೆಗಳಿಗೆ ಮುಕ್ತವಾಗಿ ತೆರೆದುಕೊಳ್ಳುವುದು ಹಾಗು ಉತ್ತಮ ವಿಚಾರಗಳು ಪ್ರಪಂಚದ ಯಾವುದೇ ಮೂಲೆಯಿಂದ ಬಂದಿದ್ದರೂ, ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಮನಸಾರೆ ಪ್ರಯತ್ನ ಮಾಡುವುದು. ಗಾಂಧಿಯೇ ಹೇಳಿದಂತೆ, ‘ನಾಳೆಯೇ ಸಾವು ಬರುವ ಹಾಗೆ ಜೀವಿಸಿ, ಆದರೆ, ಬದುಕು ಶಾಶ್ವತವೆಂಬಂತೆ ನಿರಂತರವಾಗಿ ಕಲಿಯುತ್ತಿರಿ.’ ಹೀಗೆ, ಗಾಂಧಿ ‘ಬದಲಾವಣೆಯೊಂದೇ ಜಗದಲ್ಲಿ ಶಾಶ್ವತ’ ಎಂಬಂತೆ ತನ್ನನ್ನು ಹೊಸ ಅಲೆಗಳಿಗೆ ತೆರೆದುಕೊಳ್ಳುತ್ತಾ, ಒಳ್ಳೆಯದನ್ನು ಸ್ವೀಕರಿಸುತ್ತಾ, ಅನಗತ್ಯವಾದುದನ್ನು ದೂರವಿಡುತ್ತಾ, ಜೀವನದ ಏಳುಬೀಳುಗಳಿಗೆ ನಿರ್ಲಿಪ್ತ ಮನೋಭಾವ ಬೆಳೆಸಿಕೊಳ್ಳುತ್ತಾ, ಪರಿಪೂರ್ಣ ವ್ಯಕ್ತಿತ್ವ ಪಡೆಯುವತ್ತ ಜೀವನ ಪಯಣ ಬೆಳೆಸಿದರು.

ಈ ದೆಸೆಯಲ್ಲಿ, ಗಾಂಧಿಯ ಜೀವನತತ್ವದ ಮೂಲವನ್ನು ಅರಸುತ್ತಾ ಹೋದರೆ, ಅವರು ದಕ್ಷಿಣ ಆಫ್ರಿಕಾದಲ್ಲಿ ಕಳೆದ 21 ವರ್ಷಗಳಲ್ಲಿಯೇ, ಅವರ ಈ ವಿಭಿನ್ನ ಹಾಗು ವಿಶಿಷ್ಟ ಬದುಕಿನ ಪರಿಕಲ್ಪನೆ, ಬಹುತೇಕವಾಗಿ ತನ್ನ ಅಂತಿಮ ರೂಪ ಪಡೆದಿತ್ತೆನ್ನಬಹುದು. 1910ರಲ್ಲಿ ಗಾಂಧಿ ಸ್ಥಾಪಿಸಿದ ಟಾಲ್ಸ್ಟಾಯ್ ಫಾರ್ಮ್ ನಲ್ಲಿ, ಸರಳ ಜೀವನ, ಸತ್ಯಾಗ್ರಹ ಹಾಗು ಶಾಂತಿಯುತ ಪ್ರತಿಭಟನೆಯನ್ನು ಪ್ರಾಯೋಗಿಕವಾಗಿ, ಮಾತ್ರವಲ್ಲ, ಯಶಸ್ವಿಯಾಗಿ ಒಂದು ಮಾದರಿ ಜೀವನ ಕ್ರಮವಾಗಿ ಜಾರಿಗೆ ತರಲಾಗಿತ್ತು. ಪರಿಣಾಮವಾಗಿ, ಗಾಂಧಿ ಭಾರತಕ್ಕೆ ಬಂದಾಗ, ತಾನು ಕಂಡುಕೊಂಡ ಈ ಜೀವನ ಸತ್ಯಗಳನ್ನು ದೇಶದ ಸ್ವಾತಂತ್ರ್ಯ ಚಳುವಳಿಯಲ್ಲಿ ಅಳವಡಿಸುವ ಮೊದಲು, ಇಲ್ಲಿನ ವಿಭಿನ್ನ ಜನಸಮೂಹವನ್ನು ಸಂಪೂರ್ಣವಾಗಿ ಅರಿತುಕೊಳ್ಳುವುದಷ್ಟೇ ಬಾಕಿಯಿತ್ತು. ಅದಕ್ಕಾಗಿ, ಗಾಂಧಿ ದೇಶದ ಮೂಲೆ ಮೂಲೆಗೂ ಸುತ್ತಿ, ಜನಸಾಮನ್ಯರ ಜೀವನವನ್ನು ಅರ್ಥಮಾಡಿಕೊಂಡರು. ತನ್ನ ಸರಳ ಜೀವನ ಶೈಲಿಯ ಮೂಲಕ ಅವರಲ್ಲಿ ಒಬ್ಬರಾಗಿ ಗುರುತಿಸಿಕೊಂಡರು.
ಜನಸಾಮಾನ್ಯರೊಂದಿಗೆ ಸಾಧಿಸಿದ ಈ ಬಾಂಧವ್ಯ ಹಾಗು ಸಮಾನತೆಯಿಂದಾಗಿಯೇ, ಗಾಂಧಿಯ ಸ್ವಾತಂತ್ರ್ಯ ಚಳುವಳಿಗೆ ಉತ್ತಮ ಜನಸ್ಪಂದನೆ ಸಿಕ್ಕಿತೆನ್ನಬಹುದು. ಈ ಮೂಲಕ, ಸಮಾಜದ ಅತಿ ಕಡಿಮೆ ಆದಾಯದ ಜನರೂ ಕೂಡ, ತಮ್ಮ ಹೊಟ್ಟೆಪಾಡಿನ ದುಡಿಮೆಯೊಂದಿಗೆ, ದೇಶದ ಸ್ವಾತಂತ್ರ್ಯ ಚಳುವಳಿಯಲ್ಲಿ ಪಾಲ್ಗೊಳ್ಳಬಹುದು ಹಾಗು ನೆಮ್ಮದಿಯಿಂದ ಬದುಕಬಹುದೆಂದು ತೋರಿಸಿಕೊಟ್ಟರು. ಗಾಂಧಿಯ ಮಾತಿನಂತೆ, ‘ಮನುಷ್ಯ, ಅವನ ಆಲೋಚನೆಗಳ ಉತ್ಪನ್ನ. ಅವನು ಏನು ಯೋಚಿಸುತ್ತಾನೋ, ಅದೇ ಆಗುತ್ತಾನೆ.’ ಈ ರೀತಿ, ತನ್ನ ಚಿಂತನೆಯನ್ನು ಪ್ರಾತ್ಯಕ್ಷತೆಯ ಮೂಲಕ ಸಾಮುದಾಯಿಕ ಚಿಂತನೆಯಾಗಿ ಪಸರಿಸಿ, ಅದರಿಂದ ದೇಶದ ರಾಜಕೀಯ ಸ್ವಾತಂತ್ರ್ಯ ಪಡೆಯುವುದು ಮಾತ್ರವಲ್ಲ, ಆರ್ಥಿಕ ಸುಸ್ಥಿರತೆ, ಸಾಮಾಜಿಕ ಪರಿವರ್ತನೆ, ಸಾಂಸ್ಕ್ರತಿಕ ಪುನರುಜ್ಜೀವನ ಹಾಗು ವಿಶ್ವ ಮಾನವ ದೃಷ್ಟಿಕೋನ ಬೆಳೆಸಿಕೊಳ್ಳುವುದು ಕೂಡ ಸಾಧ್ಯವೆಂಬ ದೃಢವಿಶ್ವಾಸ ಗಾಂಧಿ ಹೊಂದಿದ್ದರು.
ವರ್ತಮಾನ ಕಾಲದ ಅಗತ್ಯಕ್ಕೆ ತಕ್ಕಂತೆ, ಗಾಂಧಿಯ ಕೆಲವು ವಿಚಾರಧಾರೆಗಳನ್ನು ಚರ್ಚಿಸುವುದಾದರೆ, ಪ್ರಕೃತಿಯನ್ನು ಸಂರಕ್ಷಿಸುವುದರಲ್ಲಿ ಅಪಾರ ನಂಬಿಕೆಯಿಟ್ಟಿದ್ದ ಗಾಂಧಿ, ಅಭಿವೃದ್ಧಿಯ ಹೆಸರಲ್ಲಿ ಪರಿಸರ ನಾಶವನ್ನು ಬಲವಾಗಿ ವಿರೋಧಿಸಿದ್ದರು. ‘ಭೂಮಿ, ಮನುಷ್ಯನ ಅಗತ್ಯಗಳನ್ನು ಪೂರೈಸಲು ಶಕ್ತವಾಗಿದೆ, ಆದರೆ, ಮನುಷ್ಯನ ದುರಾಸೆಯನ್ನಲ್ಲ’, ಎಂದ ಗಾಂಧಿ, ಬೃಹತ್ ಕೈಗಾರೀಕರಣವೆನ್ನುವುದು, ಕೆಲವೇ ಉದ್ಯಮಿಗಳನ್ನು ಇನ್ನಷ್ಟು ಶ್ರೀಮಂತವಾಗೊಳಿಸುವ ಯೋಜನೆಯ ಹೊರತು ಸರ್ವಜನ ಕಲ್ಯಾಣ ಯೋಜನೆಯಲ್ಲವೆಂದು ಸ್ಪಷ್ಟವಾಗಿ ಗ್ರಹಿಸಿದ್ದರು.
ಇನ್ನು, ಪರಿಪೂರ್ಣವಾಗಿ ಜೀವನವನ್ನು ಅನುಭವಿಸಲು ಗಾಂಧಿಯ ಹಿತವಚನಗಳೆಂದರೆ; ‘ಮನುಷ್ಯನಿಗೆ ನಿಜವಾದ ಸಂತೋಷ ಸಿಗುವುದು, ತನ್ನ ಯೋಚನೆ, ಮಾತು ಹಾಗು ಕಾಯಕದಲ್ಲಿ ಸಾಮರಸ್ಯ ಹೊಂದಿದಾಗ ಮಾತ್ರ’. ಅಹಿಂಸೆಯೆನ್ನುವುದು ಕೇವಲ ಬಾಹ್ಯ ಕ್ರೌರ್ಯಗಳಿಗೆ ಮಾತ್ರ ಸೀಮಿತವಾಗಿಲ್ಲ ಬದಲಾಗಿ, ನಮ್ಮ ಮಾತು ಹಾಗು ಆಲೋಚನೆಯನ್ನು ಕೂಡ ಒಳಗೊಂಡಿದೆ. ಒಂದುವೇಳೆ, ಪರಿಪೂರ್ಣ ಅಹಿಂಸೆ ಸಾಧ್ಯವಾಗದಿದ್ದರೂ, ಅದನ್ನು ನಮ್ಮ ಗುರಿಯಾಗಿಸಿಕೊಂಡಿರಬೇಕು ಹಾಗು ಆ ದಾರಿಯಲ್ಲಿ ನಿರಂತರವಾಗಿ ಪ್ರಗತಿ ಸಾಧಿಸಬೇಕು ಎನ್ನುವುದು ಗಾಂಧಿಯ ನಿಲುವಾಗಿತ್ತು. ಗಾಂಧಿ ಜನರ ತಪ್ಪುಗಳನ್ನು ಹೃದಯಪೂರ್ವಕವಾಗಿ ಕ್ಷಮಿಸುವುದರಲ್ಲಿ ನಂಬಿಕೆಯಿಟ್ಟಿದ್ದರು. ಅವರ ಮಾತಿನಂತೆ, ‘ದುರ್ಬಲ ವ್ಯಕ್ತಿಗಳು ಎಂದಿಗೂ ಕ್ಷಮಿಸಲು ಸಾಧ್ಯವಿಲ್ಲ. ಕ್ಷಮೆ ಏನಿದ್ದರೂ ಬಲಶಾಲಿಗಳ ಲಕ್ಷಣವಾಗಿದೆ.’
ಜೀವನದ ಕಷ್ಟನಷ್ಟಗಳನ್ನು ಎದುರಿಸಲಾಗದೆ ಹತಾಶರಾಗುವ ಮನಸ್ಸುಗಳಿಗೆ ಗಾಂಧಿಯ ಉಪದೇಶವೆಂದರೆ, ‘ಕಡುಕತ್ತಲಿನಲ್ಲಿಯೇ ನನ್ನ ಆತ್ಮವಿಶ್ವಾಸ ಅತ್ಯಂತ ಪ್ರಕಾಶಮಾನವಾಗಿ ಹೊಳೆಯುತ್ತದೆ ಹಾಗು ಮುನ್ನೆಡೆಯುವ ಇಚ್ಚಾಶಕ್ತಿ ನೀಡುತ್ತದೆ. ಒಂದು ವೇಳೆ ನನಗೆ ಹಾಸ್ಯ ಪ್ರಜ್ಞೆ ಇಲ್ಲದಿದ್ದರೆ, ನಾನು ಬಹಳ ಹಿಂದೆಯೇ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೆ’. ಎನ್ನುವ ಗಾಂಧಿಯ ಮಾತಿನಲ್ಲಿ ಜೀವನವನ್ನು ಅಷ್ಟೊಂದು ಗಂಭೀರವಾಗಿ ತೆಗೆದುಕೊಳ್ಳದೆ, ಮಂದಸ್ಮಿತರಾಗಿ ಏಳುಬೀಳುಗಳನ್ನು ಎದುರಿಸಬೇಕೆನ್ನುವ ತಾತ್ಪರ್ಯವಿದೆ. ಹಾಗೆಯೇ, ಮಾನವೀಯತೆಯಲ್ಲಿ ನಂಬಿಕೆ ಕಳೆದುಕೊಳ್ಳದ ಗಾಂಧಿ, ‘ಮಾನವೀಯತೆ ಒಂದು ಸಾಗರದಂತೆ ವಿಶಾಲವಾದುದು. ಅದರ ಕೆಲವು ಹನಿಗಳು ಕೊಳಕಾದ ಮಾತ್ರಕ್ಕೆ, ಇಡೀ ಸಾಗರವೇ ಕೊಳಕಾಗಿದೆಯೆನ್ನಲಾಗದು. ಒಂದು ಸ್ವಸ್ಥ ಸಮಾಜದ ಮಾನವೀಯತೆಯ ಅಳತೆಯ ಮಾಪನವೆಂದರೆ, ಅದು ಸಮಾಜದ ತಳಸಮುದಾಯದವರನ್ನು ಹಾಗು ಉಳಿದ ಜೀವರಾಶಿಗಳನ್ನು ಹೇಗೆ ನಡೆಸಿಕೊಳ್ಳುತ್ತದೆ ಎನ್ನುವುದರಲ್ಲಿ ಕಾಣಬಹುದು’ ಎಂದು ನಂಬಿದ್ದರು.

ಗಾಂಧಿ, ವರ್ತಮಾನದಲ್ಲಿ ತನ್ನನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳುವುದರಲ್ಲಿ ಬಹಳ ವಿಶ್ವಾಸ ಇಟ್ಟಿದ್ದರು. ಅವರೆಂದಂತೆ, ‘ನಮ್ಮ ಭವಿಷ್ಯವು ವರ್ತಮಾನದಲ್ಲಿ ನಾವು ಏನು ಮಾಡುತ್ತಿದ್ದೇವೆ ಎಂಬುದರ ಮೇಲೆ ಅವಲಂಬಿತವಾಗಿದೆ. ಮನುಷ್ಯನಿಗೆ ಜೀವನದಲ್ಲಿ ಕೇವಲ ಎರಡೇ ದಿನ ಏನೂ ಮಾಡಲಾಗುವುದಿಲ್ಲ: ಅದು ನಿನ್ನೆ ಮತ್ತು ನಾಳೆ.’ ವರಕವಿ ಬೇಂದ್ರೆಯ ಸಾಲಿನಂತೆ, ‘ನಿದ್ದೆಗೊಮ್ಮೆ ನಿತ್ಯ ಮರಣ, ಎದ್ದ ಸಲ ನವೀನ ಜನನ’, ಗಾಂಧಿ ಕೂಡ ‘ಜೀವನವನ್ನು ಪ್ರತಿನಿತ್ಯ ಅನುಭವಿಸಬೇಕು, ನಿನ್ನೆ ನಾಳೆಗಳನ್ನು ಮರೆತು’, ಎನ್ನುತ್ತಾರೆ. ಪ್ರತಿ ರಾತ್ರಿಯನ್ನು ಸಾವಿನಂತೆ ಹಾಗು ದಿನದ ಆರಂಭವನ್ನು ಮರುಹುಟ್ಟಿನಂತೆ ಪರಿಗಣಿಸುತ್ತಾ ಜೀವಿಸಿದರೆ, ಬಹುತೇಕ ಚಿಂತೆಗಳು ಕಣ್ಮರೆಯಾಗುತ್ತವೆ. ಇದು ಪ್ರಕೃತಿಯ ನಿಯಮ ಕೂಡ ಹೌದು ಹಾಗು ಉಳಿದೆಲ್ಲಾ ಜೀವರಾಶಿಗಳು ಹಾಗೆಯೇ ತಾತ್ವಿಕವಾಗಿ ಬದುಕುತ್ತವೆ.
ಹೀಗೆ, ಗಾಂಧಿತತ್ವದಲ್ಲಿ ವರ್ತಮಾನ ಜಗತ್ತಿನ ಗ್ರಾಹಕ ಸಂಸ್ಕೃತಿಗೆ ಬದಲಾಗಿ, ಕಡಿಮೆ ಖರ್ಚುವೆಚ್ಚದ ಸರಳ ಬದುಕಿನ ಆಮಂತ್ರಣವಿದೆ. ಬಡತನ ಮನುಷ್ಯನಲ್ಲಿ ಕೀಳರಿಮೆ ತರಿಸಬಾರದು, ಎಂದ ಗಾಂಧಿ, ಹಣದ ಅಗತ್ಯವಿಲ್ಲದೆ ಘನತೆಯಿಂದ ಬದುಕಲು ಸಾಧ್ಯವಿದೆ ಎನ್ನುವುದನ್ನು ಪ್ರಾಯೋಗಿಕವಾಗಿ ಬದುಕಿ ತೋರಿಸಿಕೊಟ್ಟಿದ್ದಾರೆ. ಸರಳವಾಗಿ ಜೀವಿಸುವುದರಲ್ಲಿ ಸಿಗುವ ಸುಖ, ನೆಮ್ಮದಿ ಅಥವಾ ಶಾಂತಿ, ಭೌತಿಕ ವಸ್ತು ಸಂಗ್ರಹದಲ್ಲಿ ಖಂಡಿತವಾಗಿ ದಕ್ಕುವುದಿಲ್ಲ.
ಗಾಂಧಿಗೆ ಸ್ವಪ್ರಯತ್ನದಲ್ಲಿ ಅಪಾರ ವಿಶ್ವಾಸವಿತ್ತು. ಅವರ ಮಾತಿನಂತೆ, ‘ನಿಜವಾದ ಸಾಧನೆ, ಅದಕ್ಕಾಗಿ ಮಾಡುವ ಪ್ರಯತ್ನದಲ್ಲಿದೆಯೇ ಹೊರತು ಅದರ ಯಶಸ್ಸಿನಲ್ಲಿಲ್ಲ. ಮನುಷ್ಯನ ಶಕ್ತಿ, ಅವನ ದೈಹಿಕ ಸಾಮರ್ಥ್ಯದಲ್ಲಿಲ್ಲ, ಬದಲಾಗಿ ಅದಮ್ಯ ಇಚ್ಚಾಶಕ್ತಿಯಲ್ಲಿದೆ.’ ಹಾಗೆಯೇ, ಗಾಂಧಿ ಸ್ವಕಲಿಕೆಯಲ್ಲಿ ನಂಬಿಕೆಯಿಟ್ಟಿದ್ದರು. ಗಾಂಧಿಯ ಅನುಭವದ ನುಡಿಯಂತೆ, ‘ಜೀವನಾನುಭವದಿಂದ ಗಳಿಸಿದ ಜ್ಞಾನ, ಪುಸ್ತಕದಲ್ಲಿ ದೊರೆಯುವ ಜ್ಞಾನದಿಂದ ಉಪಯುಕ್ತ ಹಾಗು ಶ್ರೇಷ್ಠವಾದುದು. ಮನುಷ್ಯ ವಿಮರ್ಶಾತ್ಮಕವಾಗಿ ಆಲೋಚಿಸುವುದನ್ನು ಹಾಗು ಪ್ರಶ್ನಿಸುವುದನ್ನು ಕಲಿತ ಮೇಲೆ, ಗುರುವಿನ ಅಗತ್ಯ ಕಂಡುಬರುವುದಿಲ್ಲ.’
ಪ್ರೀತಿಯಲ್ಲಿ ಅಪಾರ ವಿಶ್ವಾಸವಿಟ್ಟಿದ್ದ ಗಾಂಧಿ, ಯಾವುದೇ ಕೆಲಸವನ್ನಾದರೂ, ಪ್ರೀತಿಯಿಂದ ಮಾಡಬೇಕೆನ್ನುತ್ತಿದ್ದರು. ಪ್ರೀತಿಯಿಂದ ಗೆಲ್ಲಲಾಗದ್ದನ್ನು, ಇನ್ಯಾವುದರಿಂದ ಗೆಲ್ಲಬಹುದು? ಸರ್ವಧರ್ಮ ಸಮನ್ವಯದಲ್ಲಿ ನಂಬಿಕೆಯಿಟ್ಟಿದ್ದ ಗಾಂಧಿಯ ರಾಷ್ಟ್ರ ಪರಿಕಲ್ಪನೆಯೆಂದರೆ, ‘ಭಾರತವೆನ್ನುವುದು, ಹಲವಾರು ಧರ್ಮಗಳ ಒಂದು ಉದ್ಯಾನದಂತೆ, ಹಾಗು ವಿವಿಧ ಧರ್ಮಗಳು ಅಲ್ಲಿ ಅರಳಿರುವ ಸುಂದರ ಹೂವುಗಳಂತೆ’.
ಇನ್ನು ಮಾತಿನ ಅಗತ್ಯದ ಕುರಿತಂತೆ, ಗಾಂಧಿಯ ಅನಿಸಿಕೆಯೆಂದರೆ, ಮಾತಿಗಿಂತ, ನಾವು ನಡೆಸುವ ಜೀವನ ನಮ್ಮ ಬಗ್ಗೆ ಹೆಚ್ಚು ತಿಳಿಸುತ್ತದೆ. ಅತಿಯಾದ ಮಾತಿನಲ್ಲಿ ಸಮಯ ವ್ಯರ್ಥಮಾಡುವುದನ್ನು ಗಾಂಧಿ ಇಷ್ಟಪಡುತ್ತಿರಲಿಲ್ಲ. ಈ ವಿಚಾರವಾಗಿ, ಗಾಂಧಿಯ ಹಿತವಚನವೆಂದರೆ, ಅಗತ್ಯವಿದ್ದರೆ ಮಾತ್ರ ಮಾತಾಡಿ. ಅದೂ ಕೂಡ, ಮೌನಕ್ಕಿಂತ ನಿಮ್ಮ ಮಾತಿಗೆ ಹೆಚ್ಚು ಬೆಲೆಯಿದೆಯೆಂದು ಅನ್ನಿಸಿದರೆ ಮಾತ್ರ.

ಕೊನೆಯದಾಗಿ, ತನ್ನ ಕಾಲಘಟ್ಟದಲ್ಲಿಯೂ ಗಾಂಧಿ ಜನರಿಗೆ ಸರಿಯಾಗಿ ಅರ್ಥವಾಗಿರಲಿಲ್ಲ: ಹಿಂದುಗಳಿಗೆ, ಅವರೊಬ್ಬ ಹಿಂದೂ ವಿರೋಧಿಯಂತೆ ಕಂಡಿದ್ದರೆ; ಮುಸ್ಲಿಮರಿಗೆ, ಅವರೊಬ್ಬ ಹಿಂದೂ ನಾಯಕನಂತೆ ಕಂಡಿದ್ದರು. ಮೇಲ್ಜಾತಿಯವರಿಗೆ, ಅವರೊಬ್ಬ ಸಮಾಜದ ಕೆಳಸ್ಥರದವರನ್ನು ಓಲೈಸುವವರಂತೆ ಕಂಡರೆ; ಕೆಳ ಜಾತಿಯವರಿಗೆ, ಅವರೊಬ್ಬ ಜಾತಿವ್ಯವಸ್ಥೆಯೇ ಪ್ರತಿಪಾದಕರಂತೆ ಕಂಡರು. ಸ್ತ್ರಿವಾದಿಗಳಿಗೆ, ಅವರೊಬ್ಬ ಸಾಂಪ್ರದಾಯಕ ಮನಸ್ಥಿತಿಯ ಪತ್ನಿಪೀಡಕನಂತೆ ಕಂಡರೆ; ಉಳಿದವರಿಗೆ, ‘ಯಾವಾಗ ಮಧ್ಯರಾತ್ರಿಯ ವೇಳೆಗೆ ದೇಶದ ಮಹಿಳೆ ನಿರ್ಭೀತಿಯಿಂದ ಓಡಾಡುವಂತಹ ಸಮಾಜ ನಿರ್ಮಾಣವಾಗುತ್ತದೋ, ಆಗಲೇ ನಿಜವಾದ ಸ್ವಾತಂತ್ರ್ಯವೆಂದು,’ ಎಂದು ಸಾರಿದ್ದ ಗಾಂಧಿ, ದೇಶದ ಮಹಿಳೆಯರು ಪ್ರಥಮ ಬಾರಿಗೆ ಹೊಸ್ತಿಲು ದಾಟಿ ಸಾರ್ವಜನಿಕವಾಗಿ ತಲೆಯೆತ್ತಿ ಓಡಾಡುವಂತೆ ಮಾಡಿದ ಕ್ರಾಂತಿಕಾರಿಯಂತೆ ಕಂಡರು.
ಹೀಗೆ, ತಂತಮ್ಮ ಲೋಕಾನುಭವ ಹಾಗು ಸಿದ್ದಾಂತಗಳ ಮೂಲಕ ಗಾಂಧಿಯನ್ನು ಅರಿತು ಕೊಳ್ಳುವ ಪ್ರಯತ್ನಗಳು ಆಗಿದ್ದಾವೆಯೇ ಹೊರತು, ಗಾಂಧಿಯ ಪರಿಪೂರ್ಣ ವ್ಯಕ್ತಿತ್ವ ಜನರಿಗೆ ಇನ್ನೂ ದಕ್ಕಿಲ್ಲವೆನ್ನಬಹುದು. ಈ ಕೊರತೆಯಿಂದಾಗಿಯೇ, ಗಾಂಧಿಮಾರ್ಗದಲ್ಲಿ ಮುಖಾಮುಖಿಯಾಗುವ ಅಮೂಲ್ಯ ವಿಚಾರಧಾರೆಗಳಾದ ಅಹಿಂಸೆ, ಶಾಂತಿ, ಸಾಮರಸ್ಯ, ಸಮನ್ವಯ, ಸರಳತೆ, ಪ್ರೀತಿ, ಸಹನೆ ಹಾಗು ಕ್ಷಮೆ, ಎಲ್ಲವನ್ನೂ ನಾವು ಹಿಂದಕ್ಕೆ ಬಿಟ್ಟು, ಗೊತ್ತುಗುರಿಯಿಲ್ಲದೆ ಮುನ್ನೆಡೆಯುತ್ತಿದ್ದೇವೆ. ಈ ನಡುವೆ ಒಂದು ಮಾತೆಂದರೆ, ಪ್ರೀತಿಯ ಪ್ರತೀಕವಾದ ಗಾಂಧಿಯನ್ನು ದ್ವೇಷಿಸುವುದು ನಮ್ಮ ಬೌದ್ಧಿಕ ದಿವಾಳಿತನವನ್ನು ತೋರಿಸುತ್ತದೆಯೇ ಹೊರತು, ಇದರಿಂದ ಗಾಂಧಿಯ ಘನತೆಯೇನೂ ಕಡಿಮೆಯಾಗುವುದಿಲ್ಲ.






Mam its too inspiring.