ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಮಾಧಾನ ಮಾಡಿಕೊಳ್ಳಿ…

ರೇವಣಸಿದ್ದಪ್ಪ ಜಿ ಆರ್

ಸಾವಿನ ಮನೆಯಲ್ಲಿ
ಸುಮ್ಮನೆ ಕೂತು
ಎದ್ದು ಬರಲಾಗುವುದಿಲ್ಲ.
ಬೆನ್ನ ಸವರಿ,
ತಲೆ ನೇವರಿಸಿ,
ತೀರ ಹತ್ತಿರದವರಾದರೆ
ಆಲಂಗಿಸಿ,
ಸಮಾಧಾನ ಮಾಡಿಕೊಳ್ಳಿ
ಎಂದು ಹೇಳುತ್ತೇವೆ.
ಹೇಳಿದವನಿಗೂ
ಹೇಳಿಸಿಕೊಂಡವನಿಗೂ
ಗೊತ್ತಿರುತ್ತದೆ-
ಯಾರೋ ಹೇಳಿದ ಮಾತ್ರಕ್ಕೆ
ನಿರ್ಗಮಿತ ಜೀವ
ದೇಹ ಸೇರುವುದಿಲ್ಲ;
ಸಮಾಧಾನವಾಗುವುದಿಲ್ಲ.

ಹೋದವನ
ತದ್ರೂಪಿ ಜೀವಂತ ಆಕೃತಿಯ
ತಂದು ನಿಲ್ಲಿಸಿದರೂ
ಅವನು ಇವನಾಗುವುದಿಲ್ಲ;
ಇವನು ಅವನಾಗುವುದಿಲ್ಲ.
ಇನ್ನೂ ಬದುಕಬೇಕಿರುವ
ಬದುಕಿನಲ್ಲಿ
ಇನ್ನೂ ಬಾಳಬೇಕಿರುವವರಿಗೆ
ಮಿಡಿಯುವ ಮನಗಳಿರುವುದು
ಸಮಾಧಾನ.
ಒಬ್ಬರ ಕಣ್ಣೀರಿಗೆ ಕರಗಿ,
ಒಬ್ಬರ ನಗುವಲ್ಲಿ ನಕ್ಕು,
ಒಬ್ಬರನ್ನೊಬ್ಬರು ಅನುಸರಿಸಿ,
ಮಾಮೂಲು ಜಾಡು
ಹಿಡಿಯುತ್ತೇವೆ.

ನಿನ್ನೆಗಳು ಇಂದುಗಳಲ್ಲಿ,
ಇಂದುಗಳು ನಾಳೆಗಳಲ್ಲಿ,
ನಾಳೆಗಳು ನಾಳಿದ್ದುಗಳಲ್ಲಿ
ಅಸ್ತಂಗತವಾಗಿ
ಮರುಹುಟ್ಟು ಪಡೆಯುವಾಗ
ಯಾರೋ ಯಾರಿಗೋ
ಸಮಾಧಾನ ಮಾಡಿಕೊಳ್ಳಿ
ಎಂದು ಹೇಳುತ್ತಲೇ ಇರುತ್ತಾರೆ.

‍ಲೇಖಕರು Admin

14 December, 2021

1 Comment

  1. ಸರೋಜ ಪ್ರಶಾಂತಸ್ವಾಮಿ

    ಚೆನ್ನಾಗಿದೆ ಸರ್.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading