ಸುರಿಯಬೇಕು ಮಳೆ
ಮಮತಾ ಸಾಗರ
*
ಸುರಿಯಬೇಕು ಮಳೆ ಪ್ಯಾಲೆಸ್ಟೇನ್ ನಲ್ಲಿ,
ಗಾಝದ ಕಣಿವೆಗಳ ಮಕ್ಕಳ ಆತ್ಮಗಳು
ಮಳೆಯ ಎಳೆ ಎಳೆಯನ್ನು ಜಗ್ಗಿ ಹಿಡಿದು
ಆಕಾಶದಂಗಳಕ್ಕಿಳಿದು, ಮೋಡದ ಮೇಲೆ ನಡೆದು,
ಗಾಳಿ ಜೊತೆ ಜೀಕು ಹಾಕುತ್ತಾ
ನೋವಿನ ನೆಲದ ನೆನಪುಗಳ ನಕ್ಷತ್ರಗಳಾಗಿಸಿ
ಕಪ್ಪು ಆಕಾಶದ ತುಂಬಾ ಹರಡಿಬಿಡಬೇಕು.
ಮಾತೇ ಆಡದೆ ನೆಮ್ಮದಿಯಲ್ಲಿ ಬಿದ್ದುಕೊಂಡ
ನಮ್ಮ ಕನಸುಗಳಲ್ಲಿ ಬರಬೇಕು ಅವರು
ಮಲಗಲು ಬಿಡದೆ ತಮ್ಮ ದುರಂತ ಕತೆಗಳ ರೀಲುಗಳನ್ನು
ಮೇಲಿಂದ ಮೇಲೆ ಕಣ್ಣ ಪರದೆಯಲ್ಲಿ ಕಾಣಿಸಬೇಕು.
ಅವರಿಗೆ ಗುರಿಯಿಟ್ಟ ಗುಂಡು ಸ್ಪೋಟವಾಗಿ
ಕನಸಲ್ಲಾದರೂ ಛಿದ್ರಗೊಳಿಸಬೇಕು ನಮ್ಮನ್ನು
ತಲೆಯೊಡೆದು, ಕೈಕಾಲು ಹರಿದು, ಹಸಿವನ್ನೇ
ತಟ್ಟೆತುಂಬಾ ತುಂಬಿಕೊಂಡು,
ಬಾರದ ಅನ್ನ ನೀರುಗಳಿಗೆ ಕಾದುಕೂರುವುದು
ಹೀಗಾದರೂ ನಮ್ಮರಿವಿಗೆ ಬರಬೇಕು
ನೋವಲ್ಲೂ ಮಕ್ಕಳು ನಗುತ್ತಾರೆ, ಆಟವಾಡುತ್ತಾರೆ, ಹಾಡುತ್ತಾರೆ,
ಸಾವ ತೊಡೆಯೇರಿಯೂ ಬದುಕ ಬಯಸುವ ಉಮೇದಿ ತೋರುತ್ತಾರೆ
ಕರುಣೆ ಕಳೆದು, ತಣ್ಣಗೆ ಮಲಗಿದ ನಮ್ಮಂಥವರನ್ನು ಬೇಡುತ್ತಾರೆ,
ಕನಸ ಕಾಣುವ ಇನ್ನೊಂದು ಅವಕಾಶಕ್ಕಾಗಿ
ಒಂದೇಸಮನೆ ಸುರಿವ ಈ ರಕ್ತದ ಮಳೆಯಲ್ಲಿ
ನರಮೇಧೇಯ ಛತ್ರಿಯಡಿ ಊರ ಕನಸ ಮಾರಿ,
‘ಹಾಹಾ ಹೀಹೀ’ ಅನ್ನುತ್ತಾ, ತಾ ಮಡಿದ ಕೊಲೆಯ ರಕ್ತದ ಕಲೆಯನ್ನು
ಗಾಝದ ಮಕ್ಕಳ ರಕ್ತದಲ್ಲಿ ತೊಳೆದುಕೊಳ್ಳಲು ಹೊರಟವರ
ನಿದ್ದೆ ತುಂಬಾ ಭಾರೀ ಮಳೆ ಸುರಿದು, ಪ್ರವಾಹದಲ್ಲಿ ನೆಮ್ಮದಿ ಕೊಚ್ಚಿಹೋಗಿ
ಇನ್ನೆಂದೂ ಕನಸೇ ಕಾಣಲಾಗದ ಸ್ಥಿತಿ ಬಂದೊದಗಬೇಕು!
ಆಗಲಾದರೂ ಕನಸುಗಳಲ್ಲಿ ಕಾಲಿಟ್ಟ ಮಕ್ಕಳು ಕಂಡಾರು ನಮಗೆ
ತಬ್ಬಿಕೊಂಡೇವು ಅವರನ್ನು, ತಿನ್ನುವ ಅನ್ನ ಇಳಿದೀತು ಗಂಟಲಲ್ಲಿ
ಅಳಿದೀತು ‘ನಮ್ಮ ನಲ್ಲಿಗಳಲ್ಲಿ ನೀರು ಬಂದರೆ ಸಾಕು’ ಎಂಬ ಧರ್ಮಾಂಧತೆ
Vanagam Writers’ Residency Camp, Aanaikatti, Tamil Naadu






0 Comments