ಪಾರ್ವತಿ ಜಿ ಐತಾಳ್ ಓದಿದ ‘ಆನಂದಾನುಭೂತಿ’

ಆನಂದದ ಹುಡುಕಾಟದಲ್ಲಿ ಹಯವದನ ಉಪಾಧ್ಯರ ‘ಆನಂದಾನುಭೂತಿ’

ಡಾ ಪಾರ್ವತಿ ಜಿ ಐತಾಳ್

 ಈಗಾಗಲೇ ತಮ್ಮ ಕನ್ನಡ ಮತ್ರು ಇಂಗ್ಲಿಷ್ ವಿಮರ್ಶಾ ಕೃತಿಗಳ ಮೂಲಕ ಸಾಹಿತ್ಯಕ್ಷೇತ್ರಕ್ಕೆ ಸಾಕಷ್ಟು ಕೊಡುಗೆಗಳನ್ನು ನೀಡಿರುವ ಡಾ.ಹಯವದನ ಉಪಾಧ್ಯರು ಆನಂದಾನುಭೂತಿಯ ಕುರಿತಾದ ತಮ್ಮ ಪಿ.ಹೆಚ್.ಡಿ. ಮಹಾಪ್ರಬಂಧವನ್ನು ಇಂಗ್ಲಿಷ್ ನಿಂದ ಕನ್ನಡಕ್ಕೆ ತಂದು ಪ್ರಕಟಿಸಿದ್ದಾರೆ. ಸಾಮಾನ್ಯ ಓದುಗರ ಅನುಕೂಲಕ್ಕಾಗಿ ಅಕಡೆಮಿಕ್ ಶೈಲಿಯನ್ನು ತುಸು ಬದಲಾಯಿಸಿ ವಿಷಯಗಳನ್ನು ಸರಳವಾಗಿ
ನಿರೂಪಿಸಿದ್ದಾರೆ.

ವೈಯಕ್ತಿಕ ಬದುಕಿನಲ್ಲಿ ಎದುರಿಸಿದ ಕೆಲವು ಸಂದರ್ಭಗಳಿಂದಾಗಿ ದೇವರ ಇರುವಿಕೆಯ ಬಗ್ಗೆ ಸದಾ ಅನುಮಾನಗಳನ್ನು ಬೆಳೆಸಿಕೊಂಡು ಬಂದ ಲೇಖಕರು ಆತ್ಮಕ್ಕೆ ಲಭಿಸುವ ಅಪರಿಮಿತ ಹಾಗೂ ಅಂತ್ಯವಿಲ್ಲದ ಆನಂದಾನುಭೂತಿಯೇ ದೇವರು ಎಂಬ ತೀರ್ಮಾನಕ್ಕೆ ಬಂದು ಆ ‘ದೇವರಿಗಾಗಿ ನನ್ನ ಹುಡುಕಾಟ’ವೇ ಈ ಸಂಶೋಧನೆಯ ಹಿಂದಿನ ಪ್ರೇರಣೆ ಅನ್ನುತ್ತಾರೆ. ಅವರ ಅಧ್ಯಯನದ ವ್ಯಾಪ್ತಿ ಎಷ್ಟು ವಿಶಾಲವಾಗಿದೆಯೆಂದರೆ ಇಲ್ಲಿ ಭಾರತೀಯ ಪ್ರಾಚೀನ ಸಾಹಿತ್ಯ ಮತ್ತು ಆಧುನಿಕ ಸಾಹಿತ್ಯ ಹಾಗೂ ಪಾಶ್ಚಾತ್ಯ ಪ್ರಾಚೀನ ಮತ್ತು ಆಧುನಿಕ ಸಾಹಿತ್ಯಗಳಿಂದ ಆಯ್ದ ನೂರಾರು ಕೃತಿಗಳನ್ನೂ ಆನಂದಾನುಭವಿಗಳ ಸಂಕ್ಷಿಪ್ತ ಜೀವನ ಚರಿತ್ರೆಗಳನ್ನೂ ಆನಂದಾನುಭೂತಿಯ ಪರಿಕಲ್ಪನೆಯ ಸ್ಪಷ್ಟೀಕರಣಕ್ಕಾಗಿ ಅವರು ಬಳಸುತ್ತಾರೆ. 

ಅಮರಕೋಶ, ಭಗವದ್ಗೀತೆ, ವೇದ, ಉಪನಿಷತ್ತುಗಳು, ಬೌದ್ಧಗ್ರಂಥಗಳನ್ನು ಉಲ್ಲೇಖಿಸುತ್ತಾರೆ., ಒಮರ್ ಖಯ್ಯಾಮ್, ಓಶೋ ರಜನೀಶ್, ಒರಿಸ್ಸಾದ ಆದಿವಾಸಿ ಸಂತ ಭೀಮ ಬೋತಿ, ಕಾಶ್ಮೀರದ ಲಲ್ಲೇಶ್ವರಿ, ಜಿಡ್ಡು ಕೃಷ್ಣಮೂರ್ತಿ, ಕನಕದಾಸರು, ಗಾಗಾ ಭಟ್ಟ, ಸೋಮೇಶ್ವರ, ಚಾರ್ವಾಕರ ಲೋಕಾಯತ ದರ್ಶನ, ಭರ್ತೃಹರಿ, ಕಮೂ, ಕಾಫ್ಕಾ, ಸಾರ್ತೃ, ಬ್ಲೇಕ್‌ ಮೊದಲಾದವರ ಸಿದ್ಧಾಂತಗಳನ್ನು ಉದಾಹರಣೆಯಾಗಿ ಕೊಡುತ್ತ ಹೋಗುತ್ತಾರೆ.

ಆನಂದಾನುಭೂತಿಯನ್ನು ಈ ಕೃತಿ ಮೂರು ಹಂತಗಳಲ್ಲಿ ಚರ್ಚಿಸುತ್ತದೆ. ಮೊದಲನೆಯದು ವಿಷಯಾನಂದ. ಇದು ನಮ್ಮ ಇಂದ್ರಿಯಗಳಿಂದ ಸಿಗುವ ಅಸ್ಥಿರವೂ ನಶ್ವರವೂ ಆದ ಸುಖ. ಇದು ಸುಖವೇ ಆದರೂ ಲೌಕಿಕ ಜಗತ್ತಿನ ಅತ್ಯಂತ ಕೆಳ ಹಂತದ ಕ್ಷಣಿಕ ಸುಖ. ಆತ್ಮ ಮತ್ತು ದೇವರ ಅಸ್ತಿತ್ವದಲ್ಲಿ ನಂಬಿಕೆಯಿಲ್ಲದ ಚಾರ್ವಾಕರಂಥವರು ಬದುಕಿರುವಾಗಲೇ ಈ ದೇಹದಿಂದ ಸಾಧ್ಯವಾಗುವಷ್ಟು ಮಟ್ಟಿಗೆ ಎಲ್ಲ ಸುಖವನ್ನೂ ಅನುಭವಿಸಿ ಬಿಡಬೇಕು ಅನ್ನುವ ಸಿದ್ಧಾಂತವನ್ನು ಪ್ರತಿಪಾದಿಸಿದವರು. ವಿಷಯಾನಂದದ ಇನ್ನೊಂದು ಮಗ್ಗುಲು ದುಃಖವೆಂದು ನಂಬುವ ಒಮರ್ ಖಯ್ಯಾಮ್, ಓಶೋ ರಜನೀಶ್, ಕಮೂ, ಸಾರ್ತೃ, ಕಾಪ್ಕಾ   ಟಾಲ್ ಸ್ಟಾಯ್, ಚೀನಾದ ಗಾವೋ ಕ್ಸಿಂಗಿಜಿಯಾನ್ ಮೊದಲಾದವರು ಕೂಡಾ ಇದೇ ಸಾಲಿಗೆ ಸೇರಿದವರು.

ಮುಂದಿನದ್ದು ಕಾವ್ಯಾನಂದ. ಅಂದರೆ ಕಾವ್ಯವಾಚನದ ಮೂಲಕ ಸಿಗುವ ಆನಂದ ಮಾತ್ರವಲ್ಲ. ಇದು ಸಾಹಿತ್ಯ, ನಾಟಕ, ಸಂಗೀತ, ನೃತ್ಯ, ಶಿಲ್ಪ, ವಾಸ್ತು, ಚಿತ್ರಕಲೆ- ಎಲ್ಲವನ್ನೂ ಒಳಗೊಂಡಿದೆ. ಸಾಹಿತಿ ಮತ್ತು ಕಲಾವಿದರು ತಮ್ಮ ರಚನೆಯ ಮೂಲಕ ಆನಂದವನ್ನು ಅನುಭವಿಸಿದರೆ ಪ್ರೇಕ್ಷಕರು, ವೀಕ್ಷಕರು ಮತ್ತು ಶ್ರೋತೃಗಳು ಅವುಗಳನ್ನು ಓದುತ್ತಾ, ನೋಡುತ್ತಾ, ಕೇಳುತ್ತಾ ಆನಂದ ಪಡುತ್ತಾರೆ. ಇಲ್ಲಿ ಲೇಖಕರು ಭಾರತೀಯ ಕಾವ್ಯ ಮೀಮಾಂಸೆಯ ಪ್ರಕಾರ ಕಾವ್ಯಾನಂದ ಉಂಟು ಮಾಡುವ ರಸನಿಷ್ಪತ್ತಿಯ ಬಗೆಗೂ ದೀರ್ಘವಾಗಿ ಮಾತನಾಡುತ್ತಾರೆ. ಎಲ್ಲ ರಸಗಳಿಗಿಂತ ‘ಶಾಂತರಸ’ವೇ ನಿಜವಾದ ಆನಂದವನ್ನು ಕೊಡಬಲ್ಲದು ಎನ್ನುತ್ತಾರೆ.

‘ಒಂದು ಕಲಾಕೃತಿಯನ್ನು ಬಯಕೆಗಳ ಉಪಶಮನಕ್ಕಾಗಿ ನಿರ್ಮಿಸಬೇಕೇ ಹೊರತು ಬಯಕೆಗಳ ಹಡಚ್ಚಳಕ್ಕಾಗಿ ಅಲ್ಲ. ಯಾಕಡಂದೆ ಅಂಇಮ ಬಿಡುಗಡೆಯೇ ಕಲೆಯ ಗುರಿ’ ಅನ್ನುತ್ತಾರೆ. ಭರತಮುನಿ, ಆನಂದವರ್ಧನ, ಅಭಿನವಗುಪ್ತ ಮತ್ತು ಅಶ್ವಘೋಷರು ಹೇಳಿದ್ದೂ ಇದನ್ನೇ.‌ ಗ್ರೀಕ್ ತತ್ವಜ್ಞಾನಿ ಅರಿಸ್ಟಾಟಲ್ ತನ್ನ ‘ಪೋಯಟಿಕ್ಸ್’ನಲ್ಲಿ ಹೇಳು ‘ಪರ್ಗೇಶನ್’ನ ಹಿಂದಿನ ತತ್ವವೂ ಇದೇ ಅನ್ನುತ್ತಾರೆ. ಕಾವ್ಯಾನಂದವು ವ್ಯಕ್ತಿಗೆ ಸ್ವಾರ್ಥವನ್ನು ಬಿಡಲು ಪ್ರೇರಣೆ ನೀಡಿ ಸಮಾಧಿ ಸುಖವನ್ನು ಪಡೆಯುವಂತೆ ಮಾಡುತ್ತದೆ. ಆದ್ದರಿಂದಲೇ ಕಾವ್ಯಾನಂದವನ್ನು ವೇದಾಂತದಲ್ಲಿ ‘ಬ್ರಹ್ಮಾನಂದ ಸಹೋದರ’ಎಂದು ಕರೆಯಲಾಗಿದೆ ಅನ್ನುತ್ತಾರೆ.

ಮುಂದೆ ಅಧ್ಯಾಯ ೪ರಲ್ಲಿ ಬ್ರಹ್ಮಾನಂದದ ಕುರಿತು ಚರ್ಚೆಯಿದೆ. ಪೌಲ್ ಬ್ರಂಟನ್ ತನ್ನ ‘A Search in Sacred India’ ಕೃತಿಯಲ್ಲಿ ಹೇಳುವ ‘Sacred Trance’ ಎಂಬ ಆಧ್ಯಾತ್ಮಿಕ ಅನುಭವದೊಂದಿಗೆ ಆರಂಭವಾಗುವ ಈ ವಿಶ್ಲೇಷಣೆಯು ವೈದಿಕ ಸಾಹಿತ್ಯದ ಬ್ರಹ್ಮಾನಂದದ ಪರಿಕಲ್ಪನೆಯ ಮೂಲಕ ಮುಂದೆ ಸಾಗುತ್ತದೆ. ಓಂ ಎನ್ನುವ ಪವಿತ್ರ ಬೀಜಾಕ್ಷರದ ಬಗ್ಗೆ ಮಾಂಡೂಕ್ಯೋಪನಿಷತ್ತಿನಲ್ಲಿ ಉಲ್ಲೇಖಿಸಿರುವ ಜಾಗೃತಾವಸ್ಥೆ, ಸ್ವಪ್ನಾವಸ್ಥೆ, ಸುಷುಪ್ತ್ಯಾವಸ್ಥೆ ಮತ್ತು ತುರೀಯಾವಸ್ಥೆಗಳಲ್ಲಿ ಮೊದಲ ಮೂರು ಅವಸ್ಥೆಗಳು ಸಾಮಾನ್ಯರಿಗೂ ಅನುಭವಕ್ಕೆ ಬರುವುದಾದರೂ ಕೊನೆಯದ್ದು ಪಂಚೇಂದ್ರಿಯಗಳು, ಮನಸ್ಸು, ಬುದ್ಧಿಗಳೆಲ್ಲವೂ ನಿಶ್ಚಲವಾದಾಗ ಮಾತ್ರ ಅನುಭವಕ್ಕೆ ಬರುವಂಥದ್ದು. 

ಇದುವೇ ಪರಮಗತಿಯಾದ ಆನಂದಾನುಭೂತಿ. ಈ ಅವಸ್ಥೆಯನ್ನು ಪ್ರವೇಶಿಸುವುದು ಸುಲಭವಲ್ಲ. ಪತಂಜಲಿಯ ಯೋಗಶಾಸ್ತ್ರದ ಪ್ರಕಾರ ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ ಮತ್ರು ಧ್ಯಾನಗಳ ಮೂಲಕ ಸಮಾಧಿ ಸ್ಥಿತಿಯನ್ನು ತಲುಪಬೇಕಾಗುತ್ತದೆ. ಉಪನಿಷತ್ ಋಷಿಗಳು, ರಮಣ ಮಹರ್ಷಿ, ರಾಮಕೃಷ್ಣ ಪರಮಹಂಸರು, ದಾಸವರೇಣ್ಯರೇ ಮೊದಲಾದ ಸಾಧಕರು ಈ ಆನಂದವನ್ನು ಅನುಭವಿಸಿದ್ದಾರೆ.

ವೇದಮಂತ್ರದಲ್ಲಿರುವ ಗಾಯತ್ರಿ ಮಂತ್ರವು ಅತಿಶ್ರೇಷ್ಠವೆನ್ನಲು ಕಾರಣ ಅದರಲ್ಲಿ ಏಳು ಬೀಜಮಂತ್ರಗಳಿದ್ದು ಪ್ರತಿ ಬೀಜಮಂತ್ರದ ಜತೆಗೆ ಓಂ ಎಂದು ಪಠಿಸುವಾಗ ಸಾಧಕನು ತನ್ನ ದೇಹದ ಬೇರೆ ಬೇರೆ ಭಾಗಗಳಲ್ಲಿರುವ ಏಳುಲೋಕಗಳನ್ನು ಕಲ್ಪಿಸಿಕೊಳ್ಳುತ್ತಾನೆ. ಕೊನೆಯದಾಗಿ ಸತ್ಯಲೋಕವನ್ನು ಕಲ್ಪಿಸಿಕೊಂಡಾಗ ಅಲ್ಲಿರುವ ಸೂರ್ಯನನ್ನು ಧ್ಯಾನಿಸಿ ಅವನು ಆನಂದ ರಸವನ್ನು ಪಡೆಯುತ್ತಾನೆ.

ಆನಂದ ಮತ್ತು ಇಂದ್ರಿಯ ಸುಖಗಳ ಕಡೆಗಿನ ತಡೆಯಲಾಗದ ಆಕರ್ಷಣೆಯಾದ ಮಾಯೆ ಪರಸ್ಪರ ವಿರುದ್ಧ ಅನುಭವಗಳೆಂದು ಹೇಳುತ್ತ ಲೇಖಕರು  ಮಾಯೆ ಯನ್ನು ಮೀರಲು ಸಾಧಕರು ಪಡುವ ಪ್ರಯತ್ನಗಳ ಬಗ್ಗೆ ಮಾತನಾಡುತ್ತಾರೆ. ಮುಂದೆ ಮನಶ್ಶಾಸ್ತ, ರೇಖಾಗಣಿತ, ಶರೀರಶಾಸ್ತ್ರ, ಗಣಿತಶಾಸ್ತ್ರಗಳ ನೆಲೆಯಿಂದ ಆನಂದಾನುಭೂತಿಯನ್ನು ನಿರೂಪಿಸುತ್ತ ಆದಿಶಂಕರಾಚಾರ್ಯರ ಸೌಂದರ್ಯಲಹರಿ, ಭಾರತೀಯ ಶಾಸ್ತ್ರೀಯ ವರ್ಣಚಿತ್ರಗಳಲ್ಲಿ ಆನಮಂದಾನುಭೂತಿ ವ್ಯಕ್ತವಾದ ಬಗೆಯನ್ನು ವಿವರಿಸುತ್ತ ವಿದೇಶಿಯರ ಬರಹ ಮತ್ತು ಮಾತುಗಳಲ್ಲೂ ಆನಂದಾನುಭೂತಿಯ ಪರಿಕಲ್ಪನೆ ಪ್ರಕಟವಾಗಿದ್ದನ್ನು ಉಲ್ಲೇಖಿಸುತ್ತಾರೆ.

ಆಳವಾದ ಅಧ್ಯಯನದ ಮೂಲಕ ಬರೆದಿರುವ ಈ ಕೃತಿಯ ವಸ್ತು ಸಂಕೀರ್ಣವಾದರೂ ಸುಲಭ ಗ್ರಾಹ್ಯ ಭಾಷೆಯಲ್ಲಿರುವುದದರಿಂದ ಓದುಗ ಸ್ನೇಹಿಯಾಗಿದೆ. ತರಗತಿಯಲ್ಲಿ ಪಾಠ ಮಾಡುವ ರೀತಿಯಲ್ಲಿ ಉಪಾಧ್ಯರು ಒಮ್ಮೆ ಹೇಳಿದ್ದನ್ನು ಪುನಃ ಇನ್ನಷ್ಟು ಸರಳವಾಗಿ ಹೇಳಿದ್ದಾರೆ.

‍ಲೇಖಕರು Admin

December 14, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: