ಮುಕ್ಕಾಲ್ ಕೆಜಿ ಲವ್, ರಾಜೇಶ್ವರಿ ಅಮ್ಮ ಕೊಟ್ಟ ಸ್ಟೀಲ್ ಲೋಟದ ಕಾಫಿ…

ಜಯರಾಮಾಚಾರಿ

ಐದು ವರುಷದ ಹಿಂದೆ, ನಾನು ಮತ್ತು ನನ್ನ ಮೂವರು ಗೆಳೆಯರು ಚಿಕ್ಕಮಗಳೂರಿನ ಹೋಂ ಸ್ಟೇ ಲೀ ಉಳಿದುಕೊಂಡು ಚೆನ್ನಾಗಿ ವೈನು ಚಪ್ಪರಿಸಿ ಅಡ್ಡಾಡುವ ಅಂದುಕೊಂಡು ಹೋಂ ಸ್ಟೇ ಬುಕ್ ಮಾಡಿ ಹೊರಟಿದ್ವಿ. ಹೋಂ ಸ್ಟೇ ಬುಕ್ ಮಾಡಿದ್ದ ಗೆಳೆಯ ಆ ಹೋಂ ಸ್ಟೇಯ ಓನರ್ ಸದಾ ಮತ್ತಿನಲ್ಲಿದ್ದು ಕಣ್ ಕೆಂಪಗಿರುತ್ತದೆಂದು ಹೇಳಿದಾಗ ಯಾವುದೋ ಜನುಮದಲ್ಲಿ ಸಂತೆಯಲ್ಲಿ ಕಳೆದು ಹೋದ ಗೆಳೆಯ ಮತ್ತೆ ಸಿಕ್ಕಿದ ಪುಳಕ.

ಹಾಗೇ ಹೋಗುವಾಗ ಮೂಡಿಗೆರೆ ಇನ್ನೆನೋ ಹತ್ತು ಹದಿನೈದು ಕಿ ಮೀ ಇರುವಾಗ ಸಡನ್ನಾಗಿ ತೇಜಸ್ವಿ ಅವರ ಮನೆ ಇತ್ತ ಕಡೆ ಅಲ್ವ ಹೋಗೋಣ ಅಂತ ಹೇಳಿದೆ ಕಾರಲ್ಲಿದ್ದ ನಮ್ಮ ನಾಲ್ವರಲ್ಲಿ ಹಿಂದೆ ಸೀಟಲ್ಲಿದ್ದ ನಾನು ಮತ್ತು ರಘು ಜಾಣಗೆರೆ ತೇಜಸ್ವಿಯನ್ನು ಓದಿಕೊಂಡಿದ್ವಿ ಮುಂದಿದ್ದ ಚೇತನ್ ಮಂಜ ಸಾಹಿತ್ಯ ಅಂದ್ರೆ ತುಳಿದು ಸಾಯಿಸ್ತ ಇದ್ರೂ. ಆದರೂ ಒಪ್ಪಿದ್ರು.

ಯಾರಿಗೂ ತೇಜಸ್ವಿ ಮನೆ ಗೊತ್ತಿರಲಿಲ್ಲ. ತುಂಬ ಹಿಂದೆ ನಾನು ಸ್ಕೂಲು ಓದುವಾಗ ನಮ್ಮ ಸೋಷಿಯಲ್ ಮೇಡಂ ನೀವೆಲ್ಲ ಇವತ್ತು ಚಿತ್ರಕಲಾ ಪರಿಷತ್ ಗೆ ಹೋಗಿ ತೇಜಸ್ವಿ ಇರ್ತಾರೆ ಅಂದಿದ್ರು ಅವತ್ತಿಗೆ ತೇಜಸ್ವಿ ಯಾರೆಂಬುದೇ ಗೊತ್ತಿರಲಿಲ್ಲ ಅವರ ಅಂಡಮಾನ್ ಬಗ್ಗೆ ಬರೆದ ಒಂದು ಪ್ರವಾಸ ಕತನ ಯಾವುದೋ ತರಗತಿಯಲ್ಲಿ ಓದಿದ್ದಷ್ಟೇ ನೆನಪು. ಆಮೇಲೆ ಮೇಡಂ ಅವರ ಬಗ್ಗೆ ಹೇಳಿ ಹೋಗಿ ಬನ್ನಿ ಅಂದ್ರೂ ಆ ಸಂಜೆ ನಾವು ನಾಲ್ಕೈದು ಹುಡುಗರು ಹೋಗಿದ್ವಿ ಅದು ಬೆಂಗಳೂರಲ್ಲಿ ನಡೆದ ತೇಜಸ್ವಿ ತೆಗೆದ ಹಕ್ಕಿಗಳ ಪೋಟೋದ ಪ್ರದರ್ಶನ. ಹೋಗಿ ಅವೆಲ್ಲ ಪೋಟೋ ನೋಡಿ ಬರುವಾಗ ತೇಜಸ್ವಿ ಅಲ್ಲಿ ನಿಂತಿದ್ರು ಅವತ್ತು ನಾವು ಹೋಗಿ ಮಾತಾಡಿಸಿದ್ವಿ ಕೂಡ.

ಪುಸ್ತಕದ ಹುಚ್ಚು ಹತ್ತಿದ ಮೇಲೆಯೇ ತೇಜಸ್ವಿ ಅರ್ಥವಾದದ್ದು ಆಮೇಲೆ ಭೇಟಿ ಮಾಡಲೇ ಇಲ್ಲ. ಇಂತ ತೇಜಸ್ವಿ ಮನೆ ಹುಡುಕಲು ಹೊರಟಾಗ ಕಾರಿಂದ ಮೊದಲು ಇಳಿದದ್ದು ರಘು, ಎಲ್ಲ ಅಪರಿತರನ್ನೂ ಏ ಗುರು ಎಂದು ಕರಿವ ರಘು ಅಲ್ಯಾರೋ ದಾರಿ ಹೋಕನನ್ನು ಏ ಗುರು ಇಲ್ಲಿ ತೇಜಸ್ವಿ ಮನೆ ಎಲ್ಲಿ ಎಂದು ಕೇಳಿದ ನಾನು ಅದನ್ನ ಮೊಬೈಲಿನಲ್ಲಿ ಸೆರೆ ಹಿಡಿಯುತ್ತಿದ್ದೆ, ತೇಜಸ್ವಿ ಹೆಸರನ್ನು ಆ ದಾರಿಹೋಕ ಕೇಳಿರಲಿಲ್ಲ, ಯಾವ ತೇಜಸ್ವಿ ಅಂದಾಗ ರಘು ಪೂರ್ತಿ ಹೆಸರು ಪೂರ್ಣ ಚಂದ್ರ ತೇಜಸ್ವಿ ಅಂದ ಯಾರೋ ಗೊತ್ತಿಲ್ಲ ಎಂದು ದಾರಿಹೋಕ ದಾರಿ ಹಿಡಿದ.

ರಘು ವಾಪಾಸು ಕಾರಿಗೆ ಬಂದಾಗ ಆ ವಿಡಿಯೋ ತೋರಿಸುತ್ತ ನಗಾಡುವಾಗಲೇ ನಮ್ಮ ಚೇತನನ ತಲೆಯಲ್ಲಿ ಈ ಹುಡುಕುವಿಕೆಯನ್ನು ಡಾಕುಮೆಂಟ್ ಮಾಡುವ ಐಡಿಯ ಬಂದದ್ದು ಬಂದದ್ದೇ ತಡ ಕಾರಿನ ಕಿಟಕಿಗೆ ಗೋಪ್ರೊ ಕ್ಯಾಮೆರ ಅಂಟಿಸಿಬಿಟ್ಟ. ಹೀಗೆ ಶುರುವಾಯ್ತು ಕೊನೆಗೆ ಯಾರೋ ಪುಣ್ಯಾತ್ಮ ತೇಜಸ್ವಿ ಮನೆಯ ವಿಳಾಸ ತಿಳಿಸಿ ಪುಣ್ಯ ಕಟ್ಟಿಕೊಂಡ.

ಸರಿ ನಾವು ತೇಜಸ್ವಿಯವರ ನಿರುತ್ತರ ತಲುಪಿದಾಗ ಮಧ್ಯಾಹ್ನ ಆಗಿತ್ತು. ಹಳದಿ ಗೇಟಿಗೆ ಬೀಗ ಹಾಕಿರಲಿಲ್ಲ. ತೆರೆದುಕೊಂಡು ಹೋದೆವು ಒಳಗೆ ಸ್ವಲ್ಪ ದೂರದಿ ಮನೆ, ವರಾಂಡ, ವರಾಂಡದಲ್ಲಿ ತೇಜಸ್ವಿಯವರ ಪೋಟೋ, ಅವರ ಸ್ಕೂಟರ್ ಒಂದು ಕಡೆ ಪೋಟೋಗ್ರಫಿ ಹುಚ್ಚಿದ್ದ ಚೇತನ್ ಕೆಮೆರಾದಲ್ಲಿ ಯಾವ ಯಾವುದೋ ನಗು ಬರಿಸೋ ಆಂಗಲಿನಲ್ಲಿ ಕೂತು ನಿಂತು ಎಲ್ಲವನ್ನು ಸೆರೆ ಹಿಡಿತಿದ್ದ. ತೇಜಸ್ವಿ ಓದಿಕೊಂಡ ನಮಗೆ ಒಂತರ ಥ್ರಿಲ್.

ರಾಜೇಶ್ವರಿ ಮೇಡಂ ಒಳಗಿದ್ರೂ ಅನ್ಸುತ್ತೆ ನಮ್ಮ ನಗು ಕೇಳಿ ಬಂದರು. ನಾವು ಹಿಂಗಿಂಗೆ ಅಂತ ಪರಿಚಯಿಸಿಕೊಂಡೆವು. ಆ ನಂತರ ಅವರ ಮನೆ ನೋಡಿದೆವು ಹಿಂದೆ ತೇಜಸ್ವಿಯವರೇ ನಿರ್ಮಿಸಿದ ಕೆರೆ ಬಗ್ಗೆ ಹೇಳಿದರು. ನಮಗಾಗುತ್ತಿರುವ ಥ್ರಿಲ್ ಅವರಿಗೆ ಗೊತ್ತಾಗಿರಬೇಕು ನಮ್ಮನ್ನ ನೋಡಿ ನಗುತ್ತ ಮಾತಾಡಿಸುತ್ತಿದ್ದರು. ಆಮೇಲೆ ಸ್ಟೀಲ್ ಲೋಟದಲ್ಲಿ ಕಾಫಿ ಕೊಟ್ಟ ವರಾಂಡದಲ್ಲಿ ಕೂತು ಮಾತಾನಾಡಲು ಸುರು ಮಾಡಿದರು, ಇತ್ತೀಚೆಗೆ ತೇಜಸ್ವಿಯವರನ್ನು ಹುಡುಕಿ ಬರುವ ಅಭಿಮಾನಿಗಳ ಸಂಖ್ಯೆ ಹೆಚ್ಚುತ್ತಿರುವ ಬಗ್ಗೆ, ತೇಜಸ್ವಿಯವರನ್ನ ಕಾಡು ಆವರಿಸಿದ್ದ ಬಗ್ಗೆ, ತಮ್ಮ ಮದುವೆ ಬಗ್ಗೆ, ಅವರ ಜುಗಾರಿಕ್ರಾಸ್ ಯಾಕೆ ಇನ್ನೂ ಸಿನಿಮಾ ಆಗಿಲ್ಲ ಎಂದು ಕೇಳಿದಾಗ ಅದರ ರೈಟ್ಸ್ ಕೇಳಲು ಅಲ್ಲಿವರೆಗೂ ಬಂದ 74 ಜನರ ಬಗ್ಗೆ ಯಾರೂ ಸಿನಿಮಾ ಮಾಡಲೇ ಇಲ್ಲ ಇನ್ಮೇಲೆ ರೈಟ್ಸ್ ಕೊಡೋದು ನಿಲ್ಲಿಸಿಬಿಡಬೇಕು ಎನ್ನುತ್ತ ಮೊನ್ನೆ ಕಳಸದಲ್ಲಿ ಯಾವುದೋ ಸಿನಿಮಾ ಮಹೂರ್ತಕ್ಕೆ ಅವರು ಹೋಗಿ ಟೈಟಲ್ ಕೇಳಿದಾಗ ಮುಕ್ಕಾಲ್ ಕೇಜಿ ಲವ್ ಅನ್ನೊ ಟೈಟಲ್ ಕೇಳಿ ಆ ಘಟನೆ ಬಗ್ಗೆ ಹೇಳುವಾಗ ನಾವೆಲ್ಲ ಬಿದ್ದು ಬಿದ್ದು ನಕ್ಕಿದ್ದೆವು. ನಮಗೆಲ್ಲ ಬರೋಬ್ಬರಿ ಕೇಜಿ ಪ್ರೀತಿ ಮಾಡಿ ರೂಢಿ ಇದ್ಯಾವುದೋ ಮುಕ್ಕಾಲ್ ಕೇಜಿ ಅನುಭವವಿಲ್ಲ ಅಂತಿದ್ರು. ತೇಜಸ್ವಿ ಇಲ್ದೇ ಹೇಗಿದ್ದೀರ ಅಂದಾಗ ತೇಜಸ್ವಿ ಎಲ್ಲ ಕಡೆ ಇದ್ದಾರೆ ಅವರನ್ನು ಹುಡುಕಿ ಬರೋರಲ್ಲಿ ಇದ್ದಾರೆ ಅಂತ ಇರ್ತೀನಿ ಹಿಂಗೆ ಅಂದು ನಕ್ಕರು. ಸುಮಾರು ಒಂದೂವರೆ ಗಂಟೆ ಆರಾಮಾಗಿ ನಗುತ್ತ ಮಾತಾಡಿದರು.

ಆ ನಗು ಇನ್ನೂ ಹಾಗೇ ಇದೆ.
ಅವರು ಕೊಟ್ಟ ಕಾಫಿಯ ಗಮಲು ಹಾಗೆ ಇದೆ.

ತುಂಬು ಜೀವನ.

ರಾಜೇಶ್ವರಿ ಮೇಡಂ ಹೋಗಿ ಬನ್ನಿ. ನಿರುತ್ತರ ನಿಜಕ್ಕೂ ನಿರುತ್ತರವಾಗಿದೆ.

‍ಲೇಖಕರು Admin

December 14, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: