ಭುವನೇಶ್ವರಿ ಹೆಗಡೆ ಅಂಕಣ- ಕೋಟಲೆ ಮರೆಸುವ ಕೀಟಲೆಗಳು…

23

ಕಿತಾಪತಿ ಕಾಲೇಜು ಮಕ್ಕಳನ್ನು ಸಂಭಾಳಿಸುವುದು ಅವರನ್ನು ಸುಧಾರಿಸಲು ಯತ್ನಿಸುವುದು ನನ್ನ ಶಿಕ್ಷಕ ವೃತ್ತಿಯ ಪ್ರಮುಖ ಚಾಲೆಂಜ್ ಆಗಿತ್ತು. ಹದಿಹರೆಯದ ಮಕ್ಕಳನ್ನು ಎದುರಿಟ್ಟುಕೊಂಡು ನೂತನ ಪ್ರಯೋಗಗಳನ್ನು ಮಾಡುವುದರಲ್ಲಿ ಆಸಕ್ತಳಾದ ನಾನು ಮಕ್ಕಳ ಕಿಡಿಗೇಡಿತನವನ್ನು ಸಹಿಸುತ್ತೇನೆ, ದುರಹಂಕಾರದ ದುಷ್ಟತನವನ್ನು ಅಲ್ಲ ಎಂಬುದನ್ನು ಆಗೀಗ ಮಾತು ಕೃತಿಗಳ ಮೂಲಕ ತಿಳಿಸುತ್ತಲೇ ಇದ್ದೆ ಅದನ್ನು ನೇರವಾಗಿ ತೆಗೆದುಕೊಂಡ ವಿದ್ಯಾರ್ಥಿಗಳು ನನ್ನೊಂದಿಗೆ ಮುಕ್ತವಾಗಿ ತಮ್ಮ ಭಾವನೆಗಳನ್ನು ವ್ಯಕ್ತ ಪಡಿಸುತ್ತಿದ್ದರು. ಭಿನ್ನಾಭಿಪ್ರಾಯಗಳನ್ನು ಚರ್ಚಿಸುತ್ತಿದ್ದೆವು. ಹುಡುಗ ಹುಡುಗಿ ಎಂಬ ಬೇಧವಿಲ್ಲದೆ ಚರ್ಚೆಗೆ ಇಳಿಯುತ್ತಿದ್ದರು. 

ಒಂದೊಂದು ತರಗತಿಯಲ್ಲಿ ಒಂದೊಂದು ಅನುಭವ. ತುಂಟ ವಿದ್ಯಾರ್ಥಿಯೊಬ್ಬ ಕ್ಲಾಸಿನಲ್ಲಿ ಜನಪ್ರಿಯನೂ ಆಗಿರುತ್ತಿದ್ದ. ಇದು ನಮಗೆ ಸ್ವಲ್ಪ ಕಷ್ಟಕ್ಕೆ ತಂದಿಡುವ ವಿಚಾರ ಕ್ಲಾಸಿನಲ್ಲಿ ಬೋರ್ಡಿನ ಮೇಲೆ ಏನೋ ಬರೆದಿಡುವುದು ಕುರ್ಚಿ ಮೇಜುಗಳನ್ನು ತಿರುಗಿಸಿಡುವುದು ಇಂಥ  ಚಿಕ್ಕಪುಟ್ಟ ಚೇಷ್ಠೆಗಳನ್ನು ಮಾಡಿದ್ದು ಇಂತಹ ವಿದ್ಯಾರ್ಥಿಯೇ ಎಂಬುದು ಗೊತ್ತಿದ್ದರೂ ಅದಕ್ಕೆ ಪ್ರೂಫ್ ಕೊಡುವ ಯಾರು ಸಹ  ಕ್ಲಾಸಿನಲ್ಲಿ ಇರುತ್ತಿರಲಿಲ್ಲ ಹೆಚ್ಚಿನ ಕ್ಲಾಸುಗಳಲ್ಲಿ ಇಂಥ ಉಡಾಫೆ ವಿದ್ಯಾರ್ಥಿಗಳನ್ನು ಹುಡುಗಿಯರು ಸಹಿಸುತ್ತಿರಲಿಲ್ಲ ಯಾರೂ ಇಲ್ಲದ ಸಮಯದಲ್ಲಿ ನನ್ನ ಚೇಂಬರಿನೊಳಗೆ ಬಂದು ‘ಮೇಡಂ  ನಾನು ಹೇಳಿದ್ದು ಎಂದು ಹೇಳಬಾರದು ಆ ಕೆಲಸ ಮಾಡಿದವನು ಇಂಥವನು ಎಂದು ಹೇಳಿ ಹೋಗಿಬಿಡುತ್ತಿದ್ದಳು. ಸರಿ ಮರುದಿನ ಅರ್ಧಗಂಟೆ ಅರ್ಥಶಾಸ್ತ್ರ ಕೈಬಿಟ್ಟು ಅನರ್ಥಶಾಸ್ತ್ರದ ಕುರಿತೇ ಉಪನ್ಯಾಸ. ಸಾಮೂಹಿಕವಾಗಿ ಹಿತೋಪದೇಶ. ಮಕ್ಕಳಿಗೆ ಸಾಕೆನಿಸುವಷ್ಟು ಇರುತ್ತದೆ ಎಂಬುದು ಗೊತ್ತಿದ್ದ ವಿದ್ಯಾರ್ಥಿಗಳು ಗುಂಪು ಗುಂಪಾಗಿ ಬಂದು ಕ್ಷಮೆ ಕೇಳುವುದು ಇತ್ತು. ಮಾತೆತ್ತಿದರೆ ನಿಮ್ಮ ಪೇರೆಂಟ್ಸ್  ನ ಕರೆಸುತ್ತೇವೆ’ ಎಂಬ ಮಾತೊಂದು ದಂಡಾಸ್ತ್ರ ವಾಗಿ ಕೆಲಸ ಮಾಡುತ್ತಿತ್ತು ಪ್ಲೀಸ್ ಮೇಡಂ ತಂದೆತಾಯಿಗಳಿಗೆ ತಿಳಿಸಬೇಡಿ’ ಎಂಬುದು ಸಾಮಾನ್ಯ ತುಂಟ ವಿದ್ಯಾರ್ಥಿಯು ನಮ್ಮಲ್ಲಿ ಗೋಗರೆಯುವ ಮಾತು.  

ಇತ್ತೀಚಿನ ವರ್ಷಗಳಲ್ಲಿ ವಿದ್ಯಾರ್ಥಿಗಳ ಗಾತ್ರ ಚಿಕ್ಕದಾಗುತ್ತ ಬಂದಿದೆಯಾದರೂ ನಾನು ವೃತ್ತಿಗೆ ಸೇರಿದ ಪ್ರಾರಂಭದ ದಿನಗಳಲ್ಲಿ ದೈಹಿಕವಾಗಿ ಬಲಾಢ್ಯರಾದ ಗರಡಿ ಗಳಲ್ಲಿಯೂ ಪಳಗಿದ ಪೈಲ್ವಾನನಂತಿರುವ ವಿದ್ಯಾರ್ಥಿಗಳು ಕ್ಲಾಸಲ್ಲಿ ಅಂಥವರನ್ನು ಎದ್ದುನಿಲ್ಲಿಸಿ ಪ್ರಶ್ನಿಸಿ ಕೂಡಿಸುವುದು ನಾಳೆಯಿಂದ ಇತರ ಮಾಡಿದರೆ ನೋಡಿ ನಿಮ್ಮ ಪೆರಿಂಜೆ ಕರೆಸುತ್ತೇವೆ ಎನ್ನುವುದಕ್ಕೂ ಎಂಟೆದೆ ಬೇಕಾಗುತ್ತಿತ್ತು ಆದರೂ ನಿಮ್ಮ ಪೇರೆಂಟ್ಸ್ ಕರೆಸುತ್ತೇನೆ ಎನ್ನುವುದಕ್ಕೆ ಎಂದೂ ಅಂಜುತ್ತಿರಲಿಲ್ಲ. 

1ಬಾರಿ ವಿದ್ಯಾರ್ಥಿಯೊಬ್ಬ ತುಂಬಾ ತಂಟೆ ಮಾಡಿ ಇಡೀ ಕ್ಲಾಸಿನವರ ತಲೆ ನೋವಿಗೆ ಕಾರಣನಾಗಿದ್ದ. ನಿತ್ಯವೂ ಅವನ ಕುರಿತು ಸಹಪಾಠಿಗಳ ದೂರು ಸಹೋದ್ಯೋಗಿಗಳ ದೂರು ಇದ್ದೇ ಇರುತ್ತಿತ್ತು. ಸರಿ ನಾಳೆ ತಂದೆ ತಾಯಿ ಇಬ್ಬರೂ  ಬರಬೇಕು. ತಪ್ಪಿದರೆ ತಂದೆಯಾಗಲೀ ತಾಯಿಯಾಗಲೀ ಇಬ್ಬರಲ್ಲಿ ಒಬ್ಬರು ಬಂದರೆ ಮಾತ್ರ ನಿನಗೆ ಕ್ಲಾಸಿನಲ್ಲಿ ಕೂಡಲು ಅನುಮತಿ ಕೊಡುತ್ತೇವೆ ಎಂದು ತಾಕೀತು ಮಾಡಿ ಬಂದು ಪ್ರಾಂಶುಪಾಲರ ಬಳಿ ಸಾರ್ ಇಂಥ ವಿದ್ಯಾರ್ಥಿಯ ಪೇರೆಂಟ್ಸ್ ನಾಳೆ ಬರುತ್ತಾರೆ ನಿಮ್ಮಲ್ಲಿ ಕರೆ ತರುತ್ತೇನೆ ಎಂದು ಹೇಳಿ ಬಂದೆ.

ಮರುದಿನ ಬೆಳಿಗ್ಗೆ ಕಾಲೇಜಿಗೆ ಹೋಗುವಷ್ಟರಲ್ಲಿಯೇ ಪ್ರಿನ್ಸಿಪಾಲರ ಛೇಂಬರಿನಿಂದ ಕರೆ ಬಂತು ನೋಡಿ ನಿಮ್ಮ ತಂಟೆಕೋರ ವಿದ್ಯಾರ್ಥಿ ತಂದೆಯನ್ನು ಕರೆತಂದಿದ್ದಾನೆ .ಅವನದೇನು ವಿಚಾರ ಎಂದು ಅವರ ತಂದೆಯ ಬಳಿ ಹೇಳಿ 1ಮುಚ್ಚಳಿಕೆ ಪತ್ರ ಬರೆಸಿ ಸರಿಯಾಗಿ ಬಳಸಿಕೊಳ್ಳಿ ಎಂದು ಪ್ರಿನ್ಸಿಪಾಲರು ನನಗೆ ಹೇಳಿದರು. ತಲೆಯೆತ್ತಿ ನೋಡಿದೆ ಅಪ್ಪ ಎನಿಸಿಕೊಂಡವನಿಗೆ ಬಿಳಿ ಮುಂಡು ತಲೆಗೆ ಕೊಬ್ಬರಿ ಎಣ್ಣೆ ಹಾಕಿ ಕುಡಿಯಲು ಸ್ವಲ್ಪ ಎಣ್ಣೆ ಕೊಟ್ಟಿರಬೇಕು ತೇಲುಗಣ್ಣು ಮೇಲುಗಣ್ಣು ಮಾಡುತ್ತಾ ಕುಳಿತಿದ್ದಾನೆ ಪ್ರಿನ್ಸಿಪಾಲರ ಎದುರಿನ ಟೇಬಲಿನಲ್ಲಿ ಕೂಡಿಸಿಕೊಂಡು ನಿಮ್ಮ ಹೆಸರೇನು ಎಂದು ಕೇಳಿದಾಗ ಯಾವುದೋ ಒಬ್ಬ ಮಲೆಯಾಳಿ ಹೆಸರನ್ನು ಹೇಳಿದ. ಆ ಹುಡುಗ ಮಲೆಯಾಳಿ ಅಲ್ಲ ಎಂಬುದು ನನಗೆ ಚೆನ್ನಾಗಿ ಗೊತ್ತು. ಸರಿ ವಿಳಾಸ ಕೇಳಿದಾಗ ಬಾಯಿಗೆ ಬಂದಿದ್ದು ಹೇಳಿದ. ವಿದ್ಯಾರ್ಥಿ ನಡು ನಡುವೆ ಅವನನ್ನು ತಿವಿಯುತ್ತಾ ಏನೋ ಸನ್ನೆ ಮಾಡತೊಡಗಿದ್ದ. ಅಷ್ಟರಲ್ಲಾಗಲೇ ನಿಮ್ಮ ವಯಸ್ಸೆಷ್ಟು ಎಂದು ಕೇಳಿದೆ ಆತ ಮಗನ ಬಳಿಯೇ ಮಗಾ ನನ್ನ ವಯಸ್ಸೆಷ್ಟು? ಎಂದು ಕೇಳಬೇಕೆ? ಆತ ತನ್ನ ವಯಸ್ಸಿಗೆ ಇನ್ನೂ ಹತ್ತು ಸೇರಿಸಿ ಹೇಳಿಬಿಟ್ಟ.

ಒಂದಕ್ಕೊಂದು ಹೊಂದಿಕೆಯಾಗುತ್ತಿಲ್ಲ. ಪುಣ್ಯ ನಿಮ್ಮ ಮಗ ನಿಮಗಿಂತ ವಯಸ್ಸಿನಲ್ಲಿ ದೊಡ್ಡವನೆಂದು ಹೇಳಿಕೊಳ್ಳಲಿಲ್ಲ. ಈತ ಮಾಡಿರುವ ಘನಂದಾರಿ ಕೆಲಸ ಏನೂ ಗೊತ್ತೇ? ಎಲ್ಲ ವಿದ್ಯಾರ್ಥಿನಿಯರ ಡೆಸ್ಕುಗಳ ಮೇಲೆಯೂ ಐ ಲವ್ ಯೂ ಎಂದು ಬರೆದು ಹೃದಯದ ಚಿಹ್ನೆ ಕೆತ್ತಿಟ್ಟಿದ್ದಾನೆ. ಅದು ಚಾಕ್ ಪೀಸಿನಲ್ಲಿ ಅಲ್ಲ ಚಾಕುವಿನಲ್ಲಿ ಕೊರೆದು ಬಿಟ್ಟಿದ್ದಾನೆ ಒರೆಸಲು ಬರುವುದಿಲ್ಲ ಹುಡುಗಿಯರ ಹೆಸರು ಸಹ ಬರೆದಿರುವುದರಿಂದ ಅವರಿನ್ನು ಆ ಕ್ಲಾಸಿಗೆ ಬರುವುದೇ ಇಲ್ಲ ಎನ್ನತೊಡಗಿದ್ದಾರೆ. ಏನು ಮಾಡುತ್ತೀರಿ? ಎಂದು ಕೇಳಿದಾಗ ಆತ ತನ್ನ ಕಣ್ಣುಗಳನ್ನು ಇನ್ನಷ್ಟು ಕೆಂಪಾಗಿಸಿಕೊಂಡು ‘ಈ ನನ್ನ ಮಗನಿಗೆ ಮೆಟ್ಟಿನಲ್ಲಿ ಹೊಡೆಯಿರಿ. ನಾನೇನು ಬೇಡ ಎನ್ನುವುದಿಲ್ಲ. ನನ್ನ ಹಳೆ ಮೆಟ್ಟು ಕಳಚಿ ಕೊಡುತ್ತೇನೆ. ಈಗಲೇ ಬೇಕಾದರೆ ನಿಮ್ಮೆದುರೇ ನಾನೇ  ನಾಲ್ಕು ಬಾರಿಸಲೇನು? ಎಂದು ಕೇಳಿದ.          

ಇಬ್ಬರೂ ಸೇರಿ ಆಡುತ್ತಿರುವ ನಾಟಕ ನನಗೆ ಅರ್ಥವಾಗಿ ಹೋಯಿತು. ಏನೂ ಬಾರಿಸುವುದು ಬೇಡ ಸುಮ್ಮನಿರಿ ಎನ್ನುತ್ತಾ ಸಣ್ಣ ದೊಂದು ಚೀಟಿಯಲ್ಲಿ ‘ಸರ್ ಇವನು ಈ ಹುಡುಗನ ಅಪ್ಪನೇ ಅಲ್ಲ. ಬಾಯಿಗೆ ಬಂದಂತೆ ಮಾತಾಡುತ್ತಿದ್ದಾನೆ. ಪರಿಸ್ಥಿತಿ ಸ್ವಲ್ಪ ಗಂಭೀರವಿದೆ ನೀವು ಏನು ಮಾಡುತ್ತೀರೋ ನೋಡಿ’ ಎಂದು ಬರೆದು ಪ್ರಾಂಶುಪಾಲರಿಗೆ ನೀಡಿ ಪುನಃ ಅಪ್ಪನನ್ನು ಪ್ರಶ್ನಿಸತೊಡಗಿದೆ. ಪ್ರಾಂಶುಪಾಲರ ಗಮನಕ್ಕೆ ವಿಷಯ ನನ್ನ ಚೀಟಿಯಿಂದಾಗಿ ಹೋಗಿದ್ದು ಗಮನಕ್ಕೆ ಬಾರದ ಅಪ್ಪಮಗ ತಲೆಹರಟೆ ಉತ್ತರ ಕೊಡುತ್ತಲೇ ಇದ್ದರು.

ಪ್ರಿನ್ಸಿಪಾಲರು ವಯಸ್ಸಾದವರು. ಇದರಿಂದ ಕೆರಳಿ ಕೆಂಡಾಮಂಡಲರಾಗಿ ಇಂಗ್ಲಿಷಿನಲ್ಲಿ ‘ಶಟಪ್ ನಿಮ್ಮಿಬ್ಬರ ಮೇಲೂ ಪೋಲಿಸ್ ಕಂಪ್ಲೇಂಟ್ ಕೊಡುತ್ತೇನೆ ಏನೆಂದುಕೊಂಡಿದ್ದೀರಿ? ಯಾರ್ಯಾರನ್ನೋ ಅಪ್ಪ ಎಂದು ಕರೆದುಕೊಂಡು ಬಂದು ನಮ್ಮನ್ನೇ ಮಂಗ ಮಾಡಲು ನೋಡುತ್ತಿದ್ದೀಯಾ ಟಿಸಿ ಕೊಟ್ಟು ಕಳಿಸುತ್ತೇನೆ’ ಎಂದು ಅಬ್ಬರಿಸಿದ  ಹೊಡೆತಕ್ಕೆ ಹುಡುಗನ ಸಮವಯಸ್ಕ ಮಲೆಯಾಳಿ ಅಪ್ಪ ಎದ್ದು ನಿಂತು ಪ್ರಿನ್ಸಿಪಾಲರ ಕಾಲು ಹಿಡಿದು ‘ಸಾರ್ ನಾನು ರೇಲ್ವೇ ಸ್ಟೇಶನ್ನಿನ ಎದುರಿರುವ ಎಳನೀರು ಅಂಗಡಿಯವನು. ಈ ವಿದ್ಯಾರ್ಥಿಗಳು ಬಂದು ಅರ್ಧ ಗಂಟೆ ಅಪ್ಪನ ಪಾತ್ರ ವಹಿಸಿ ನನಗಿಷ್ಟು ಬೈದಂತೆ ಮಾಡು ಹಣ ಕೊಡುತ್ತೇವೆ ಎಂದು ಒತ್ತಾಯಪೂರ್ವಕವಾಗಿ ಕರೆದುಕೊಂಡು ಬಂದಿದ್ದಾರೆ’ ಎಂದು ಇದ್ದ ವಿಷಯ ಇದ್ದ ಹಾಗೆ ಹೇಳಿ ಬಿಟ್ಟ. ವಿದ್ಯಾರ್ಥಿಯು ಪ್ರಾಂಶುಪಾಲರ ಕಾಲು ಹಿಡಿದು ಸಾರ್ ಇದೊಂದು ಬಾರಿ ಕ್ಷಮಿಸಿ ಬಿಡಿ ಮುಂದೆ ಮತ್ತಿಂಥ ಅಪರಾಧ ಮಾಡುವುದಿಲ್ಲ ಎಂದು ಹೇಳಿದಾಗ ಪ್ರಿನ್ಸಿಪಾಲರು ನನ್ನತ್ತ ನೋಡಿದರು. ‘ಇದೊಂದು ಬಾರಿ ಕ್ಷಮಿಸೋಣ ಸಾರ್ ಇದೇ ವಿದ್ಯಾರ್ಥಿಯ ಮೇಲೆ ಮತ್ತಿನ್ಯಾವ ಕಂಪ್ಲೇಂಟನ್ನು ಯಾರೇ ತಂದರು ಆಗ ಕ್ಷಮಿಸುವುದು ಬೇಡ’ ಎಂದು ಹೇಳಿ ಅವನನ್ನು ಕ್ಲಾಸಿಗೆ ಅಟ್ಟಿದ್ದಾಯ್ತು.         

ಇನ್ನೊಂದು ತರಗತಿ ನನ್ನ ಡಿಪಾರ್ಟ್ಮೆಂಟಿಗೆ ತಾಗಿಯೇ ಹಿಂಭಾಗದಲ್ಲಿದ್ದು ಸದಾ ಕಾಲ ಹುಡುಗ ಹುಡುಗಿಯರ ಕಲರವದಿಂದ ತುಂಬಿರುತ್ತಿತ್ತು. ಲಂಚ್ ಅವರ್ ನಲ್ಲಿ ಹುಡುಗಿಯರಲ್ಲಿ ಕೆಲವರು ಬಂದು ಮೇಡಂ ನಮ್ಮ ಕ್ಲಾಸಿನ  ದಿನ್ನಿ ಎಂದು ಕರೆಯಲ್ಪಡುವ ದಿನೇಶನು ಅತಿಯಾಗಿ ಆಡುತ್ತಿದ್ದಾನೆ ಲಂಚ್ ಅವರಿನಲ್ಲಿ ನಮ್ಮ ಬೆಂಚುಗಳ ಮೇಲೆ ಡೆಸ್ಕಿನ ಮೇಲೆ ಶೂ ಕಾಲಿನಲ್ಲಿ  ಓಡಾಡುತ್ತಿರುತ್ತಾನೆ. ಹೇಳಿದ್ದು ಕೇಳುವುದಿಲ್ಲ.  ಕಂಪ್ಲೇಂಟ್ ಕೊಡುತ್ತೇವೆ ಎಂದರೆ ಹೋಗ್ ಹೋಗ್ರಲೇ ಐ ಡೋಂಟ್ ಕೇರ್ ಎಂದು ಅಬ್ಬರಿಸುತ್ತಾನೆ. ಅವನ ಪಾದ ಧೂಳಿಯಿಂದ ತುಂಬಿರುವ ಡೆಸ್ಕಿನ ಮೇಲೆ ನಾವು ಊಟದ ಡಬ್ಬಿ ಇಟ್ಟು ಊಟ ಮಾಡುವುದಾದರೂ ಹೇಗೆ  ?ಎಂದೆಲ್ಲಾ ಅಲವತ್ತುಕೊಂಡರು.

ಮರುದಿನ ಕ್ಲಾಸಿನಲ್ಲಿ ‘ನಿಮ್ಮ ತರಗತಿಯ ಓರ್ವ ಹುಡುಗನ ಮೇಲೆ ಕಂಪ್ಲೇಂಟ್ ಬಂದಿದೆ. ನೆಲದ ಮೇಲೆ ನಡೆಯುವುದನ್ನು ಬಿಟ್ಟು  ಬೆಂಚುಗಳ ಮೇಲೆ ಡೆಸ್ಕಿನ ಮೇಲೆ ಓಡಾಡುವ ಒಬ್ಬ ಹುಡುಗ ಈ ಕ್ಲಾಸಿನಲ್ಲಿ ಇದ್ದಾನಂತೆ. ಯಾರೆಂದು ನೀವಾಗಿಯೇ ಒಪ್ಪಿಕೊಂಡು ಬಿಡಿ. ಕೇಸು ಪ್ರಾಂಶುಪಾಲರ ಬಳಿ ಹೋಗುವುದಿಲ್ಲ’ ಎಂದು ಅನುನಯಿಸಿ ಕೇಳಿದೆ. ಹುಡುಗರಾರೂ ಬಾಯ್ಬಿಡಲಿಲ್ಲ ಹುಡುಗಿಯರು ಭಯದಿಂದ ತಲೆತಗ್ಗಿಸಿಯೇ ಕೂತಿದ್ದರು.

ಮರುದಿನ ನನ್ನ ಬಾಕ್ಸ್ ಊಟವನ್ನು ಬೇಗ ಮುಗಿಸಿಕೊಂಡು ಲಂಚ್ ಅವರ್ ಬರುವುದನ್ನೇ ಕಾಯುತ್ತಿದ್ದೆ. ದಿಢೀರ್ ಎಂದು ಆ ತರಗತಿಯೊಳಗೆ ನುಗ್ಗಿದೆ. ದಿಣ್ಣೆಯು ಡಿಸ್ಕೋ ಮಾಡುತ್ತ ಡೆಸ್ಕಿಂದ ಡೆಸ್ಕಿಗೆ ಜಿಗಿದಾಡುತ್ತಾ ಭರತ ನಾಟ್ಯ ಭಂಗಿಯಲ್ಲಿ ಹುಡುಗಿಯರನ್ನು ಅಣಕಿಸುತ್ತಾ ಕೋಲಾಹಲ ಎಬ್ಬಿಸಿದ್ದ. ಹತ್ತಿರ ಹೋಗಿ ಸೀದಾ ಅವನ ಕುತ್ತಿಗೆ ಪಟ್ಟಿ ಹಿಡಿದು ‘ನಿನಗೆ ಪ್ರಾಂಶುಪಾಲರ ಚೇಂಬರ್ ನಲ್ಲಿಯೇ ಬಿಸಿ ಬಿಸಿ ವಿಚಾರಣೆಯಾಗಬೇಕು’ ಎಂದು ಎಳೆದುಕೊಂಡು ಹೊರಟೆ.

ಆತ ಸ್ವಲ್ಪವೂ ಅಂಜದೆ ಅಳುಕದೆ ‘ನನ್ನನ್ನು ಬಿಟ್ಟು ಬಿಡುವುದೊಳ್ಳೆಯದು ಮೇಡಂ. ನನಗೆ ಸ್ವಲ್ಪ ನಾಗದೋಷವಿದೆ ಅದು ಹೀಗೆಲ್ಲಾ ಮಾಡಿಸುತ್ತದೆ’ ಎನ್ನಬೇಕೆ? ಇವನಿಗೆ ನೇರ ನೆಟ್ಟನ ಭಾಷೆ ನಡೆಯುವುದಿಲ್ಲ. ತನ್ನ ಒಳ ಕೀಟಲೆಯ ಧಾಟಿ ಅರ್ಥವಾಗುವುದಿಲ್ಲ ಎಂದುಕೊಂಡಿದ್ದಾನೆ ಎಂಬುದು ನನಗೆ ತಿಳಿದು ಹೋಯಿತು.’ ‘ಸರಿಯಪ್ಪ ನಿನಗೆ ನಾಗದೋಷ ಇದೆ ಅಲ್ಲವೆ? ಏನು ಮಾಡುವುದು ನನಗೂ ಗರುಡ ದೋಷವಿದೆಯೆಂದು ಹೇಳಿದ್ದಾರೆ ನಾಗನದ್ದು ಸರಿಯೋ ಗರುಡನನ್ನು ಸರಿಯೋ ತೀರ್ಮಾನವಾಗಿ ಹೋಗಲಿ ನಡಿ ಪ್ರಾಂಶುಪಾಲರ ಚೇಂಬರಿಗೆ’ ಎಂದು ಎಳೆದೊಯ್ದು ಆಗ ತಾನೇ ಊಟ ಮುಗಿಸಿ ಕುಳಿತಿದ್ದ ಪ್ರಿನ್ಸಿಪಾಲರು ಏನು ಮೇಡಂ ಎಂದು ಕೇಳಿದ್ದೇ ನಾನು ಹೇಳಿದೆ ‘ಸರ್ ಈ ಹುಡುಗನಿಗೆ ನಾಗದೋಷವಿದೆ ಎನ್ನುತ್ತಾನೆ ಹುಡುಗಿಯರ ಡೆಸ್ಕು ಬೆಂಚುಗಳ ಮೇಲೆ ಶೂ ಕಾಲಿನಲ್ಲಿ ಜಿಗಿಯುತ್ತಾ ಪಾದ ಧೂಳಿ ಉದುರಿಸುತ್ತಾ ಎಲ್ಲರನ್ನು ಅಣಕಿಸುತ್ತಾ ಹೆದರಿಸುತ್ತಾ ಇರುತ್ತಾನೆ. ಏನು ಮಾಡುವುದು ಸರ್ ನನಗೂ ಗರುಡ ದೋಷವಿರುವುದರಿಂದ ಇಂದು ಆತನನ್ನು ಹೋಗಿ ಹಿಡಿದು ತಂದಿದ್ದೇನೆ ಅದೇನು ಮಾಡುತ್ತೀರೋ ನೋಡಿ’ ಎಂದೆ. 

ಪ್ರಿನ್ಸಿಪಾಲರು ಮನೆಯ ಹಿರಿಯರ ಧಾಟಿಯಲ್ಲಿ ನೋಡಪ್ಪ ಇಲ್ಲಿಗೇ ಈ ‘ನಾಗ ಗರುಡ ಪ್ರಕರಣ’ ಮುಗಿಸುವುದು ಒಳ್ಳೆಯದೋ ನಿನ್ನ ತಂದೆ ತಾಯಿಯರನ್ನು ಕರಸಿ ಅವರ ಸಮಕ್ಷಮದಲ್ಲಿಯೇ ನಾಗ ದೋಷ ಪರಿಹಾರಾರ್ಥ ಪ್ರಾಯಶ್ಚಿತ್ತ ಶಾಂತಿ ಮಾಡಿಸುವುದು ಒಳ್ಳೆಯದೋ ನೀನೇ ಹೇಳು’ ಎಂದು ಮುಗುಮ್ಮಾಗಿ ಕೇಳಿದರು. 

ಆತನ ಅಡ್ಮಿಷನ್ ವಿವರ ವಿಳಾಸ ತರುವಂತೆ ಆಫೀಸಿನವರೆಗೆ ಕರೆದು ಹೇಳಿದರು ಪರಿಸ್ಥಿತಿಯ ಗಾಂಭೀರ್ಯ ತಿಳಿದ ನಾಗದೋಷದಾತ ‘ಸಾರ್ ನನ್ನಿಂದ ತಪ್ಪಾಗಿದೆ ಏನೋ ಕಿಡಿಗೇಡಿತನದಿಂದ ಹುಡುಗಿಯರನ್ನು ಕೀಟಲೆ ಮಾಡಲು ನೋಡಿದೆ. ಮೇಡಂ ಅವರು ಹಿಡಿದುಬಿಟ್ಟರು. ಇನ್ನು ಮುಂದೆ ಇಂತಹ ಕಿಡಿಗೇಡಿತನ ಮಾಡುವುದಿಲ್ಲ ಎಂದ ಅಪರಾಧ ಮನ್ನಿಸೋ ಎಂಬರ್ಥದಲ್ಲಿ ಗೊಗ್ಗರಿಸಿದ. ಒಂದು ಮುಚ್ಚಳಿಕೆಯನ್ನು ನಾನೇ ಬರೆದು ಇದೊಂದೇ ಅಲ್ಲದೆ ಇನ್ನು ಮುಂದೆ ಸಹ ಯಾವುದೇ ಹೊಸ ಕಿಡಿಗೇಡಿತನವನ್ನು ಮಾಡದೆ ಓದಿನಲ್ಲಿ ಮನಸ್ಸನ್ನು ಕೇಂದ್ರೀಕರಿಸುತ್ತೇನೆ ಎಂದೆಲ್ಲ ಬರೆದು ಸಹಿ ತೆಗೆದುಕೊಂಡೆ. 

ಒಂದು ಕಾಪಿ ತೆಗೆದು ಕೊಟ್ಟು ನಿನ್ನ ತಂದೆಗೆ ಕೊಟ್ಟು ಸಹಿ ಹಾಕಿಸಿ ತೆಗೆದುಕೊಂಡು ಬಾ ಎಂದು ನೀಡಿದೆವು. ಹೀಗೆ ಮುಚ್ಚಳಿಕೆ ಬರೆಸಿ ಕೊಡುವ ಸಂದರ್ಭ ಬಂದಾಗಲೆಲ್ಲಾ ನಾನೊಂದು ಪ್ರಾಧ್ಯಾಪಿಕೆಯಾಗಿ ರುವೆನೋ ಪೊಲೀಸ್ ಪೇದೆಯೋ ಎಂದು ಅನುಮಾನ ಬರುತ್ತಿತ್ತು. ಸುದೈವದಿಂದ ಈ ಕಿಡಿಗೇಡಿ ಗಳೆಲ್ಲ  ಹೀಗೆ ಮುಚ್ಚಳಿಕೆ ಬರೆದುಕೊಟ್ಟ ಬಳಿಕ ಪ್ರಾಮಾಣಿಕ ವಿದ್ಯಾರ್ಥಿಗಳಾಗಿ ಓದಿಕೊಂಡು ಒಳ್ಳೊಳ್ಳೆಯ ಉದ್ಯೋಗ ಹಿಡಿದು ಈಗಲೂ ಬಂದು ತಮ್ಮ ಅಂದಿನ ನಡವಳಿಕೆಯನ್ನು ಹೇಳಿಕೊಂಡು ತಪ್ಪಿತಸ್ಥ ಮನೋಭಾವನೆ ವ್ಯಕ್ತಪಡಿಸಿದಾಗೆಲ್ಲ ನಾನು ಅದನ್ನು ತಮಾಷೆಯಲ್ಲಿ ತೇಲಿಸಿ ‘ಸರಿ ಇದನ್ನು ನಿನ್ನ ಮಕ್ಕಳ ಮುಂದೆ ಹೇಳಬೇಕಲ್ಲ’ ಎನ್ನುತ್ತೇನೆ.

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

December 14, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: