-ಕೇಶವ ಶರ್ಮ ಕೆ
“ಸ್ವಾತಂತ್ರ್ಯದ ಓಟ” ಬೊಳುವಾರು ಅವರ ಮಹತ್ವದ ಕಾದಂಬರಿ. ತುಂಬಾ ದೊಡ್ಡ ಕೃತಿ. ದೇಶ ವಿಭಜನೆಯಿಂದ ಈ ಕಾದಂಬರಿಯು ಶುರುವಾಗಿ ಮುತ್ತುಪ್ಪಾಡಿಯ ವರೆಗೆ ಬರುತ್ತದೆ. ಇದು ಚರ್ಚೆಯಾಗಬೇಕಾದಷ್ಟು ಚರ್ಚೆಯಾಗಿಲ್ಲ. ಹಾಗೆ ನೋಡಿದರೆ ‘ಸ್ವಪ್ನ ಸಾರಸ್ವತ, ‘ಮಂಗನ ಬ್ಯಾಟೆ’. ‘ದೊಡ್ಡವ್ವ,’ ‘ಅಜ್ಞಾತನೊಬ್ಬನ ಆತ್ಮ ಚರಿತ್ರೆ,’ ‘ತೇಜೋ ತುಂಗ ಭದ್ರ’ , ಕುಂವೀ ಅವರ ‘ಅರಮನೆ’, ‘ಶಾಮಣ್ಣ’ ಕಾದಂಬರಿಗಳೂ ವಿಮರ್ಶೆಗೆ ಹೆಚ್ಚು ಒಳಪಟ್ಟಿಲ್ಲ. ಇದಕ್ಕೆ ಕಾರಣವು ಗೊತ್ತಿಲ್ಲ.
ಸ್ವಾತಂತ್ರ್ಯದ ಓಟ ಕಾದಂಬರಿಯ ಮೊದಲ ಪುಟವನ್ನು ಓದಲು ಶುರುಮಾಡಿದರೆ ಅದನ್ನು ಓದಿ ಮುಗಿಸುವ ತನಕ ತೃಪ್ತಿಯು ಸಿಗುವುದಿಲ್ಲ. ಕೈಗೆತ್ತಿಕೊಂಡರೆ ಅದನ್ನು ಮುಗಿಸದೆ ನಾವು ಬೇರೆ ಕೆಲಸ ಮಾಡಲು ಸಾಧ್ಯವೇ ಇಲ್ಲ. ಕಾದಂಬರಿಯ ವಸ್ತು ಮತ್ತು ಅದರ ನಿರೂಪಣೆಯೇ ಹಾಗಿದೆ. ಸಾವಿರ ಪುಟಕ್ಕಿಂತಲೂ ಹೆಚ್ಚು ಪುಟಗಳು ಇರುವ ಈ ಕಾದಂಬರಿಯನ್ನು ಸಂಕ್ಷಿಪ್ತ ಮಾಡಿ ರಂಗರೂಪಕ್ಕೆ ತರುವುದು ನಿಜಾಗಿಯೂ ದೊಡ್ಡ ಸವಾಲು. ಈ ಸವಾಲನ್ನು ಶಿವಮೊಗ್ಗದ ರಂಗಾಯಣ ಸ್ವೀಕಾರ ಮಾಡಿದೆ. ಅದಕ್ಕೆ ಶಿವಮೊಗ್ಗದ ರಂಗಾಯಣವನ್ನು ಅಭಿನಂದಿಸಲೇಬೇಕು. ಬಹಳ ದೊಡ್ಡ ಜವಾಬ್ದಾರಿಯನ್ನು ಶಿವಮೊಗ್ಗದ ರಂಗಾಯಣದ ನಿರ್ದೇಶಕರಾದ ಪ್ರಸನ್ನ ಸರಿಯಾಗಿಯೇ ನಿಭಾಯಿಸಿದ್ದಾರೆ.

ಈ ನಾಟಕವನ್ನು ನಿರ್ದೇಶನ ಮಾಡಿದವರು ನಟರಾಜ ಹೊನ್ನವಳ್ಳಿ. ನಮ್ಮ ನಾಟಕದ ನಿರ್ದೇಶಕರಲ್ಲಿ ತಮ್ಮದೇ ಛಾಪನ್ನು ಮೂಡಿಸಿಕೊಂಡ ನಟರಾಜ ಹೊನ್ನವಳ್ಳಿಯವರ ಗುಣ ಮುಖವನ್ನು ನಾವು ಮರೆಯುವಂತಿಲ್ಲ. ಅದು ನಮ್ಮನ್ನು ಸದಾ ಕಾಡುತ್ತದೆ. ಅದರ ಮೊದಲ ದೃಶ್ಯವಂತೂ ನನಗೆ ಕಣ್ಣಿಗೆ ಕಟ್ಟಿದಂತಿದೆ. ಈಗ ಮತ್ತೆ ಅವರು ಸ್ವಾತಂತ್ರ್ಯದ ಓಟವನ್ನು ನಿರ್ದೇಶನ ಮಾಡಿದ್ದಾರೆ. ಇದು ಕೂಡಾ ಸದಾ ನೆನಪಲ್ಲಿ ಉಳಿಯುವಂತಬಹುದು. ಮೊದಲ ದೃಶ್ಯವನ್ನು ನೋಡಿದವರು ಮತ್ತೆ ನಾಟಕವನ್ನು ಬಿಟ್ಟು ಎದ್ದು ಹೋಗಲಾರರು. ದೇಶವಿಭಜನೆಯಿಂದ ನಾಟಕ ಶುರುವಾಗುತ್ತದೆ. ಮೊದಲ ಭಾಗವು ಅದನ್ನು ಹೇಳುತ್ತದೆ. ಅಲ್ಲಿ ಬರುವ ಹಾಡುಗಳೂ ನಮಗೆ ನಾಟಕಕ್ಕೆ ಪೂರಕವಾಗಿದೆ. ಸಂಗೀತ ನಿರ್ದೇಶನ ಚೆನ್ನಾಗಿದೆ. ಹಾಡನ್ನು ಹೇಳಿದವರು ಅಬಿನಂಧನಾರ್ಹರು.
ನಾಟಕದ ಮೊದಲ ಭಾಗವು ದೇಶ ವಿಭಜನೆ ಮತ್ತು ಅದರ ಪರಿಣಾಮವನ್ನು ಚೆನ್ನಾಗಿ ಎತ್ತಿಹಿಡಿಯುತ್ತದೆ. ಎರಡನೆಯ ಭಾಗವು ಮುತ್ತುಪ್ಪಾಡಿಯ ಕತೆಯನ್ನು ಹೇಳುತ್ತದೆ. ಬೊಳುವಾರರ ಜೊತೆಗೆ ನನ್ನ ಸಂಪರ್ಕ ಇಂದು ನಿನ್ನೆಯದಲ್ಲ. ಆದ್ದರಿಂದ ಅವರು ಯಾವುದನ್ನು ಮುತ್ತುಪ್ಪಾಡಿ ಎಂದು ಕರೆಯುತ್ತಿದ್ದಾರೆಯೋ ಆ ಸ್ಥಳ ನನಗೆ ಅಪರಿಚಿತವಲ್ಲ. ನಾನೂ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಹತ್ತಿರದವನು. ಆದ್ದರಿಂದ ನಾಟಕದ ಎರಡನೆಯ ಭಾಗವು ನನಗೆ ಬೇಗನೆ ತಟ್ಟಿತು. ಎರಡನೆಯ ಭಾಗದಲ್ಲಿ ಅಪೂರ್ವವಾದ ಒಂದು ಲವಲವಿಕೆ ಇದೆ. ನಮ್ಮ ನಿತ್ಯದ ಜೀವನವು ಹೇಗಿದೆ ಎಂದು ಈ ಬಾಗವು ಹೇಳುತ್ತದೆ. ಇದರಲ್ಲಿ ಬರುವ ಅನಂತಣ್ಣ ಒಂದು ಸಂಕೇತವೂ ಆಗಿದ್ದಾನೆ. ಮುತ್ತುಪ್ಪಾಡಿಯ ಜನರು ಕೂಡಾ ಸಾಮಾನ್ಯರು. ಈ ಸಾಮಾನ್ಯರ ಜೀವನದ ಸ್ಥಿತಿಗತಿಯನ್ನು ನಾಟಿಕವು ಚೆನ್ನಾಗಿಯೇ ನಿರೂಪಿಸಿದೆ. ಎಲ್ಲಿಯೂ ನಾಟಕದ ಓಘಕ್ಕೆ ಬಿರುಕು ಕಂಡು ಬರುವುದಿಲ್ಲ.
ನಾಟಕದ ಕಲಾವಿದರು ತಲ್ಲೀನವಾಗಿ ನಟಿಸಿದ್ದಾರೆ. ಅವರ ಅಬಿನಯ ನನಗೆ ತುಂಬಾ ಇಷ್ಟವಾಯಿತು. ಇತ್ತೀಚಿಗೆ ನಾಟಕವನ್ನು ನೋಡುವುದನ್ನು ಕಡಿಮೆ ಮಾಡಿದ್ದೇನೆ. ನಾಟಕಗಳು ಒಂದು ಬಲೆಗೆ ಸಿಕ್ಕಿ ಹಾಕಿಕೊಂಡ ಹಾಗೆ ಭಾಸವಾಗುತ್ತದೆ. ನನ್ನ ಮಾತು ತಪ್ಪಿರಲೂ ಬಹುದು. ನಾಟಕಗಳು ಒಂದೇ ಮಾದರಿಯನ್ನು ಇಟ್ಟುಕೊಂಡ ಹಾಗೆ ಕಾಣಿಸುತ್ತದೆ. ಅದನ್ನು ಈ ನಾಟಕವು ಬ್ರೇಕ್ ಮಾಡಿದೆ. ವಾಸ್ತವವಾದಿ ನಾಟಕವನ್ನು ಮಾಡುವುದು ನಿಜವಾಗಿಯೂ ಕಷ್ಟ. ಅದು ಸವಾಲು. “ಗತವನ್ನು” ವೈಭವೀಕರಿಸುವ ನಾಟಕಗಳು ಹೆಚ್ಚಾಗಿವೆ. ಅದರ ಮಧ್ಯೆ ಈ ನಾಟಕವು ಪ್ರದರ್ಶನವಾಗುತ್ತಿದೆ. ಅನೇಕ ಕಡೆಗೆ ಈ ನಾಟಕವು ಪ್ರಶ್ನೆಗಳನ್ನು ಕೇಳುತ್ತದೆ. ನಾಟಕವನ್ನು ನೋಡಿ ಮನೆಗೆ ಬರುವಾಗ ನಾವು ಅನೇಕ ವಿಚಾರಗಳನ್ನು ಯೋಚನೆ ಮಾಡುವಂತೆ ಮಾಡುತ್ತದೆ. ಅದುವೇ ಈ ನಾಟಕದ ಶಕ್ತಿ. ಬ್ರೆಕ್ಟ್ ಹೇಳಿದ್ದ “ನಾಟಕವನ್ನು ನೋಡಿದ ಮೇಲೆ ನೀವು ಆ ನಾಟಕದ ಕುರಿತು ಯೋಚನೆ ಮಾಡುವಂತೆ ಇರಬೇಕು” ಈ ಮಾತು ಈ ನಾಟಕಕ್ಕೂ ಅನ್ವಯವಾಗುತ್ತದೆ. ಅದಕ್ಕೆ ನಾಟಕದ ನಿರ್ದೇಶಕರನ್ನು, ಶಿವಮೊಗ್ಗದ ರಂಗಾಯಣದ ನಿರ್ದೇಶಕರನ್ನು ಮತ್ತು ಕಲಾವಿದರನ್ನು ಅಭಿನಂದಿಸುತ್ತೇನೆ.






0 Comments