ಡಾ ಸದಾಶಿವ ದೊಡಮನಿ
ಎದೆಗೆ ಎದೆಯ ಒತ್ತಿ ಒಳಗೆ ಬೆಂಕಿ ಹಚ್ಚಿ
ಸರಿ ರಾತ್ರಿಯವರೆಗೆ ತುಟಿಯ ಜೇನು ಹೀರಿ ಬೆಳಗಾಗುತ್ತಲೇ ಹೋದನಲ್ಲ!
ಎಲ್ಲಿ ಹೋದನೆ ಅವನು?
ಇದು ಬಂದ ಹೆಜ್ಜೆಯ ಗುರುತು!
ಹೋದ ಹೆಜ್ಜೆಯ ಗುರುತು ಎಲ್ಲೇ?
ಹೋದ ಹೆಜ್ಜೆಯ ಗುರುತೂ ಕದ್ದು ವಯ್ದನೇ?
ಎಲ್ಲಿ ಹೋದನೇ ಅವನು?

ಕಪ್ಪುಗುರುಳ ವಾಸನೆ ಜನುಮ ಮರೆಸುತ್ತಿದೆ ಎಂದವನು
ಬಾಹು ಬಂದನದಲಿ ಎಲುವನು ಪುಡಿಪುಡಿ ಮಾಡಿ
ನರನಾಡಿಯಲಿ ಬಿಸಿನೆತ್ತರ ಹರಿಸಿ ಕತ್ತಲು ಬೆಳಗು ಮಾಡಿದವನು
ಎಲ್ಲಿ ಹೋದನೇ ಅವನು?
ಸುಡುವ ಎದೆ, ಹರಿವ ಬಿಸಿ ರಕುತ ಅವನನ್ನೇ ಧ್ಯಾನಿಸುತ್ತಿದೆ
ನದಿ, ಮರ, ಗಿಳಿವಿಂಡು, ಕೋಗಿಲೆ ನಿಮ್ಮಲಿ ಒಂದು ಕೇಳುವೆ ಕಂಡಿರೇನೇ ಅವನ?
ಜನುಮ ಜನುಮಕೂ ಸಖನಾಗಿ ಇರುವೆನೆಂದವನು
ತೀರದ ಒಲವ ಉಣಬಡಿಸಿದವನು
ಕಣ್ಣ ಮುಂದೆಯೇ ಕಾಣನಾದನಲ್ಲೇ
ಎಲ್ಲಿ ಹೋದನೇ ಅವನು?
ನನ್ನ ಎದೆಗಾರನನು!!






0 Comments