ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಮೃತಾ ಹೆಗಡೆ ಅಂಕಣ- ಆ ಪರಿಸ್ಥಿತಿಯಲ್ಲಿಯೂ ಆತ, ಕೊಟ್ಟ ಮಾತು ಉಳಿಸಿಕೊಂಡಿದ್ದ !

ನ್ಯೂಸ್ ರೂಮ್ ಅನ್ನುವುದೊಂದು ಗದ್ದಲದ ಸಂತೆ. ಅಂತಹದ್ದರ ನಡುವೆಯೂ ಒಂದು ಮೆಲು ದನಿ ಇದೆ ಎಂದರೆ ನೀವು ನಂಬಬೇಕು. ಅವರು ಅಮೃತಾ ಹೆಗಡೆ.

ಟಿ ವಿ ಚಾನಲ್ ನಲ್ಲಿ ಮಾಡುವ ಕೆಲಸದಲ್ಲಾಗಲೀ, ವ್ಯಕ್ತಿತ್ವದಲ್ಲಾಗಲೀ ಒಂದಿಷ್ಟೂ ಅಬ್ಬರ ಇಲ್ಲದಂತೆ ಬದುಕಿದವರು. ಸಾಹಿತ್ಯದ ಘಮವಿದ್ದ ಮನೆಯಿಂದ ಬಂದ ಅಮೃತಾ ಹೆಗಡೆ ಹಾಡುವುದರಲ್ಲೂ ಎತ್ತಿದ ಕೈ.

ತಂದೆ ಸಾಹಿತಿ ಮತ್ತೀಹಳ್ಳಿ ಸುಬ್ಬರಾಯರು. ಶಿರಸಿಯ ಈ ಎಕ್ಸ್ ಪ್ರೆಸ್ ಸಿದ್ಧಾಪುರದಲ್ಲಿ ಪದವಿ ಮುಗಿಸಿ ಮೈಸೂರಿನ ಕೆ ಎಸ್ ಓ ಯು ನಿಂದ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಸಮಯ ಹಾಗೂ ಸುವರ್ಣ ಇವರು ಕೆಲಸ ಮಾಡಿದ ಚಾನಲ್ ಗಳು.

‘ಅತ್ತಾರ ಅಳಲವ್ವ ಈ ಕೂಸು ನನಗಿರಲಿ, ಕೆಟ್ಟರೇ ಕೆಡಲಿ ಮನೆಗೆಲಸ’ ಎನ್ನುವಂತೆ ಇಲ್ಲಿ ತಮ್ಮ ಮಗುವಿನ ಕಥೆಯನ್ನು ಹೇಳುತ್ತಾರೆ.

19

ಆವತ್ತು ಸೋಮವಾರ ಬೆಳಗ್ಗೆ ಸೂರ್ಯ ಹುಟ್ಟುವುದಕ್ಕೂ ಮುಂಚೆಯೇ ವಿನಯ್​ ಮನೆಬಿಟ್ಟ. ಸರಿಯಾಗಿ ಆರು ಗಂಟೆಗೆ ಮೈಸೂರಿನಿಂದ ಹೊರಡಲಿರುವ ಟ್ರೈನ್​ಗೆ ಆತ ಬೆಂಗಳೂರಿಗೆ ಹೋಗಲೇ ಬೇಕಿತ್ತು. ಕಚೇರಿಯಲ್ಲಿ ಅತ್ಯಂತ ಮುಖ್ಯವಾದ ಕೆಲಸವಿದ್ದ ಕಾರಣ, ಆರುಗಂಟೆಯ ಟ್ರೈನ್ ಹಿಡಿಯುವುದು ಅವಶ್ಯವಿತ್ತು. 

ಬೆಳಗ್ಗೆ ಎದ್ದಿದ್ದೇ ಟೀ ಕೂಡ ಕುಡಿಯದೇ ಗಡಿಬಿಡಿಯಲ್ಲೇ ಹೊರಟಿದ್ದ. ಅವನು ಹೋಗಿ ಇನ್ನೂ ಹದಿನೈದು ನಿಮಿಷ ಕಳೆದಿರಲಿಲ್ಲ, ವಿನಯ್​ನಿಂದ ಕರೆ ಬಂತು. ಏನೋ ಮರೆತು ಹೋಗಿರಬಹುದು ಎಂದು ಅಂದಾಜಿಸುತ್ತಲೇ, ‘ಹಲೋ..ಏನು ಮರೆತೆ..? ಎಂದೆ. ‘ಏನೂ ಮರೆತಿಲ್ಲ ಕಣೇ, ಆಟೋ ಪಲ್ಟಿಯಾಗಿ ರೋಡ್​ಮೇಲೆ ಬಿದ್ದುಬಿಟ್ಟೆ. ಆಟೋ ಡ್ರೈವರ್​ಗೆ ತುಂಬಾ ಪೆಟ್ಟಾಗಿದೆ. ಅವನನ್ನ ಬೇರೇ ಆಟೋದವರು ಹಾಸ್ಪಿಟಲ್​ಗೆ ಕರೆದುಕೊಂಡು ಹೋದರು’ ಅಂದ. ನೋವಿನಿಂದ ಮಾತನಾಡುತ್ತಿದ್ದ ಅವನು ಹೇಳಿದ್ದನ್ನೆಲ್ಲ ಅರ್ಥೈಸಿಕೊಳ್ಳಲು ಎರಡು ಸೆಕೆಂಡ್ ಹಿಡಿಯಿತು ನನಗೆ.

‘ಅಯ್ಯಯ್ಯೋ.. ನೀನು ಹೇಗಿದ್ದೀಯಾ..? ನಿಂಗೆ ಏನಾದ್ರೂ ಪೆಟ್ಟಾಯ್ತಾ..?’ ಗಾಬರಿಯಲ್ಲೇ ಕೇಳಿದೆ. ‘ಹಾಂ. ಹೌದು. ಮೊಣಕಾಲ ಬಳಿ ಪ್ಯಾಂಟ್ ಹರಿದುಹೋಗಿ, ತರಚಿದೆ. ಮೊಣಕೈಗೂ ಸ್ವಲ್ಪ ಗಾಯಗಳಾಗಿವೆ. ಮತ್ತೇನೂ ಆಗಿಲ್ಲ. ನೀ ಹೆದರಬೇಡ.’ ಅಂದ. ‘ನಾನು ಬರ್ಲಾ ಅಲ್ಲಿಗೆ..? ಎಲ್ಲಿದಿಯಾ..? ವಾಪಾಸ್​ ಬಂದುಬಿಡು’ ಅಂದೆ. ‘ಆಫೀಸ್​ನಲ್ಲಿ ಇಂಪಾರ್ಟೆಂಟ್​ ಕೆಲಸವಿದೆ. ನಾನು ಬೆಂಗಳೂರಿಗೆ ಹೋಗಲೇ ಬೇಕು.  ಲ್ಯಾಪ್​ಟಾಪ್​ ಕೂಡ ತಂದಿಲ್ಲವಲ್ಲ. ಗಾಯಗಳಾಗಿದೆಯಷ್ಟೆ. ಮತ್ತೇನೂ ಆಗಿಲ್ಲವಲ್ಲ. ಹೊರಟಿದ್ದೀನಿ. ಬೆಂಗಳೂರಿಗೆ ಹೋಗಿಬಿಡ್ತಿನಿ.’ ಅಂದುಬಿಟ್ಟ.  ‘ಹಾಗಾದರೆ ನಾನು ಅಥರ್ವನ್ನ ಎತ್ತಿಕೊಂಡು ಬಂದುಬಿಡ್ತೀನಿ ಬೆಂಗಳೂರಿಗೆ. ಟ್ರೈನ್​ನಲ್ಲಿ ಹೋಗೋದು ಬೇಡ. ಬಸ್​ನಲ್ಲಿ ಹೋಗೋಣ. ಮೈಸೂರು ಬಸ್​ನಿಲ್ದಾಣದಲ್ಲಿ ಸ್ವಲ್ಪ ಹೊತ್ತು ಕುಳಿತುಕೊ. ಅರ್ಧಗಂಟೆಯೊಳಗೆ ಬರ್ತೀವಿ’ ಆವೇಗದಲ್ಲಿಯೇ ಬಡಬಡಾಯಿಸಿದೆ. ‘ಬೇಡ. ಬೇಡ. ಈಗಷ್ಟೇ ಅಥರ್ವ ಸ್ಕೂಲ್​ಗೆ ಹೊಂದಿಕೊಂಡಿದ್ದಾನೆ. ನೀವು ಬರೋದು ಬೇಡ. ನಾಲ್ಕು ದಿನ ರಜಾ ಹಾಕ್ತಿನಿ.’ ಅನ್ನುತ್ತಲೇ ತನ್ನ ಧ್ವನಿಯನ್ನು ಸಹಜ ಸ್ಥಿತಿಗೆ ತಂದುಕೊಂಡು ಮಾತನಾಡಲು ಪ್ರಯತ್ನಿಸುತ್ತಿದ್ದ. ವಾಪಾಸ್ ​ಬಂದುಬಿಡು ಎಂದು ಎಷ್ಟು ಹೇಳಿದರೂ ಕೇಳಲಿಲ್ಲ.

ಹಿಂದಿನ ದಿನ, ಭಾನುವಾರವೇ ವಿನಯ್​ ಬೆಂಗಳೂರಿಗೆ ಹೊರಡಬೇಕಿತ್ತು. ಯಾಕೋ ಅಥರ್ವ ಆವತ್ತು ಮಧ್ಯಾಹ್ನ ಊಟದ ನಂತರ ಮಲಗಲೇ ಇಲ್ಲ. ತಾನು ಮಲಗಿದರೆ ಅಪ್ಪ ಹೊರಟುಬಿಡ್ತಾರೆ ಎಂಬುದನ್ನ ಅಂದಾಜಿಸಿದ್ದನೋ ಏನೋ. ಎಷ್ಟೇ ಪ್ರಯತ್ನಪಟ್ಟರೂ ಆತ ಮಲಗದಿದ್ದ ಕಾರಣ, ನಾನೇ ಹೇಳಿದ್ದೆ. ‘ನಾಳೆ ಬೆಳಗ್ಗೆ ಬೇಗ ಹೊರಟರೆ ಆಗದೇ..? ಈಗ ಹೋಗೋದು ಬೇಡ’ ಅಂತ. ಅಥರ್ವನ ಕಣ್ಣೆದುರಿಗೆ ವಿನಯ್​ ಬ್ಯಾಗ್​ಎತ್ತಿಕೊಂಡು ಹೊರಟರೆ, ತುಂಬಾ ಅಳುತ್ತಿದ್ದ. ಹಾಲು ಕುಡಿಯದೇ, ತಿಂಡಿ ತಿನ್ನದೇ ತಾನೂ ಗೋಳಾಡಿ, ನನ್ನನ್ನೂ ಗೋಳಾಡಿಸುತ್ತಿದ್ದ. ಹೀಗಾಗಿ ಅವನು ಎಚ್ಚರವಿದ್ದಾಗ ವಿನಯ್​ ಬೆಂಗಳೂರಿಗೆ ಹೊರಡುವುದು ಬೇಡ ಅಂದುಕೊಂಡೆ ನಾನು. ನನ್ನ ಮಾತಿಗೆ ಒಪ್ಪಿಕೊಂಡು ಉಳಿದಿದ್ದ ವಿನಯ್​ಗೆ ಬೆಳಗ್ಗೆ  ಈ ಅನಾಹುತವಾಗಿತ್ತು. ನಿನ್ನೆ ಸಾಯಂಕಾಲವೇ ಹೊರಟಿದ್ದರೆ ಸುರುಕ್ಷಿತವಾಗಿ ತಲುಪುತ್ತಿದ್ದನೋ ಏನೋ ಅನ್ನಿಸಿ, ಪಶ್ಚಾತ್ತಾಪವಾಯಿತು.

ಹಿಂದಿನ ರಾತ್ರಿಯೆಲ್ಲ, ಅಥರ್ವನೊಂದಿಗೆ ನಾವಿಬ್ಬರೂ ಕುಳಿತು, ‘ಅಥರ್ವನನ್ನು ತೋರಿಸು, ಅಮ್ಮನನ್ನು ತೋರಿಸು, ಅಪ್ಪನನ್ನು ತೋರಿಸು” ಎಂಬ ಚಟುವಟಿಕೆ ಮಾಡಿಸಿದ್ದೆವು. ನಾವು ಯಾರನ್ನು ತೋರಿಸಲು ಹೇಳುತ್ತೇವೋ ಅವರನ್ನ ಅವನು ತೋರಿಸಬೇಕು. ಅಥರ್ವನನ್ನು ತೋರಿಸು ಅಂದಾಗ, ತುಟಿ ಚಲನೆಯ ವ್ಯತ್ಯಾಸ ಗುರುತಿಸಿ, ತನ್ನನ್ನು ತಾನು ತೋರಿಸಿಕೊಳ್ಳುತ್ತಿದ್ದ. ಆದರೆ ಅಪ್ಪ, ಅಮ್ಮ ಈ ಎರಡೂ ಶಬ್ಧಗಳಿಗೂ ನಮ್ಮ ಬಾಯಿ, ತುಟಿ ಎರಡೂ ಒಂದೇ ರೀತಿಯಲ್ಲಿಯೇ ಚಲಿಸುವುದರಿಂದ, ಅವನಿಗೆ ಆ ಎರಡೂ ಪದಗಳ ವ್ಯತ್ಯಾಸ ತಿಳಿಯುತ್ತಿರಲೇ ಇಲ್ಲ. ಎಷ್ಟು ಬಾರಿ ಹೇಳಿಕೊಟ್ಟರೂ, ನಮ್ಮ ತುಟಿ ನೋಡಿ ಅಂದಾಜಿಸಿ, ಅಪ್ಪ ಅಂದಾಗ ಅಮ್ಮನನ್ನು ಅಮ್ಮ ಅಂದಾಗ ಅಪ್ಪನನ್ನೂ ತೋರಿಸುತ್ತಿದ್ದ.

ಒಂದು ನಾರ್ಮಲ್​ಮಗುವಿಗೆ 8 ತಿಂಗಳು ತುಂಬುತ್ತಿದ್ದಂತೆ ಅದಕ್ಕೆ ಸಮಾನ್ಯವಾಗಿ ಅದರ ಅಮ್ಮನೋ, ಅಪ್ಪನೋ, ಅಜ್ಜಿಯೋ, ದೇಹದ ಭಾಗಗಳ ಪರಿಚಯ ಮಾಡಿಸಲು ಆರಂಭಿಸಿಬಿಡುತ್ತಾರೆ ಅಲ್ಲವೇ..? ನಿನ್ನ ತಲೆ ಎಲ್ಲಿದೆ..? ಅಂದರೆ ಸಾಕು ಆ ಮಗು ತನ್ನ ತಲೆ ತಟ್ಟಿಕೊಳ್ಳುತ್ತೆ.  ಹೊಟ್ಟೆ ಎಲ್ಲಿದೆ ಕೇಳಿದರೆ ಸಾಕು ಹೊಟ್ಟೆ ಸವರಿಕೊಳ್ಳುತ್ತದೆ. ಆದರೆ ಕಿವುಡು ಮಗುವಿಗೆ ಅದರ ದೇಹದ ಭಾಗಗಳ ಹೆಸರುಗಳನ್ನು ಪರಿಚಯಿಸುವುದೂ ಕೂಡ ಅತ್ಯಂತ ಕಷ್ಟ ಅನಿಸಿಬಿಟ್ಟಿತ್ತು ನನಗೆ. ನನ್ನ ಬಾಯಿಯ ಚಲನೆ ತೋರಿಸುತ್ತಾ, ಅಥರ್ವನ ಕೈಯ್ಯನ್ನ ಅವನ ತಲೆಯ ಮೇಲೆಯೇ ಇಟ್ಟು ‘ಇದು ತಲೆ’ ಎಂದು ಹತ್ತು ಬಾರಿ ಮಾಡಿಸಿದ್ದೆ.  ವಿನಯ್​ಕೂಡ ಇದ್ದನಲ್ಲ. ಅವನೂ ನಮ್ಮೊಂದಿಗೆ ಸೇರಿಕೊಂಡಿದ್ದರಿಂದ, ತಲೆ, ಹೊಟ್ಟೆ, ಈ ಎರಡನ್ನು ಅಭಿನಯಿಸುತ್ತಾ, ಬಾಯಿಯ ಚಲನೆ ತೋರಿಸುತ್ತಾ ಕಲಿಸಿದ್ದೆವು. ಅಪ್ಪನೂ ಜತೆಯಲ್ಲಿದ್ದಿದ್ದಕ್ಕೋ ಏನೋ ಅಥರ್ವ ತುಂಬಾ ಖುಷಿಯಿಂದ ಕಲಿತಿದ್ದ. ‘ನೀನು ಉಳಿದಿದ್ದು ಒಳ್ಳೇದೇ ಆಯಿತು. ಎಷ್ಟೆಲ್ಲ ಕಲಿಸಿದ್ವಿ ನೋಡು ನಾವು’ ಎಂದು ಹೇಳಿ ನಾನೂ ಖುಷಿಪಟ್ಟಿದ್ದೆ. ಆದರೆ, ಉಳಿದಿದ್ದೇ ತಪ್ಪಾಯ್ತು ಎಂಬಂತೆ ಈ ಘಟನೆ ನಡೆದಿತ್ತು.

ಆವತ್ತಿನ ದಿನ ಪೂರ್ತಿ, ತಳಮಳವಾಗುತ್ತಲೇ ಇತ್ತು. ಆವತ್ತು ಮನಸ್ಸಿಲ್ಲದ ಮನಸ್ಸಿನಲ್ಲಿಯೇ ಸ್ಕೂಲ್​ಗೂ ಹೋಗಿ ಬಂದೆ. ರಸ್ತೆಯ ಮೇಲೆ ಬಿದ್ದು, ಟಾರ್​ರಸ್ತೆಯಿಂದ ತರಚಿ ಪ್ಯಾಂಟ್ ಕೂಡ ಹರಿದು ಗಾಯಗಳಾಗಿವೆ ಅಂದರೆ, ದೊಡ್ಡ ಪ್ರಮಾಣದಲ್ಲಿಯೇ ಆಗಿರಬೇಕು ಎಂಬ ಅನುಮಾನಗಳಿದ್ದವು. ಆವತ್ತು ಸಂಜೆ ನನ್ನ ತಂಗಿ ಪಿ.ಜಿಯಿಂದ ನಮ್ಮ ಮನೆಗೆ ಹೋಗಿ, ವಿನಯ್​ಗೆ ಆದ ಗಾಯದ ಫೋಟೋ ತೆಗೆದು ನನಗೆ ಕಳಿಸಿದಾಗಲೇ ನನಗೆ ತಿಳಿದಿದ್ದು ನನ್ನ ಅಂದಾಜು ನಿಜ ಎಂಬುದು. ಎರಡೂ ಮೊಣಕಾಲಗಳ ಮೇಲೆಯೂ ಅಂಗೈನಷ್ಟು ದೊಡ್ಡ ಗಾಯಗಳಾಗಿದ್ದವು.

ಎರಡೂ ಮೊಣಕಾಲುಗಳೂ ಕೆತ್ತಿದ ಜಾಗದಲ್ಲಿ ದೊಡ್ಡ ದೊಡ್ಡ ಬ್ಯಾಂಡೇಜ್​ ಹಾಕಿಸಿಕೊಂಡಿದ್ದ. ಒಂದು ಮೊಣಕೈಗೂ ಬ್ಯಾಂಡೇಜ್​ ಸುತ್ತಿಕೊಂಡು, ಲ್ಯಾಪ್​ಟಾಪ್ ಮುಂದೆ ಕುಳಿತಿದ್ದ ಫೋಟೋ ಅದಾಗಿತ್ತು. ಫೋಟೋ ನೋಡಿಯೇ ಗಾಬರಿಯಾಗಿತ್ತು ನನಗೆ. ‘ಕೈಕಾಲು ಮುರಿದಿಲ್ಲವಲ್ಲ ಅಮೃತಾ, ಗಾಯಗಳಷ್ಟೇ ಆಗಿರೋದು. ಐ ಕ್ಯಾನ್​ ಮ್ಯಾನೇಜ್​. ನೀವು ಬರೋದು ಬೇಡ’ ಅಂದುಬಿಟ್ಟ. ಅವನು ಹೇಳಿದಂತೆ,  ಅವನೊಬ್ಬನೇ ಮ್ಯಾನೇಜ್​ ಮಾಡಿಕೊಂಡಿದ್ದ. ತಾಯಿ ಮಗನ ಶ್ರದ್ಧೆಗೆ ಭಂಗ ಬರಬಾರದೆಂಬ ಕಾರಣಕ್ಕೆ, ಎಲ್ಲವನ್ನೂ ಸಹಿಸಿಕೊಂಡು, ಅಂದು ತನಗಾಗುತ್ತಿದ್ದ ಯಾವ ಅಡಚಣೆಯನ್ನೂ ನನಗೆ ತೋರಗೊಡದೆ ಸದಾ ಹಸನ್ಮುಖಿಯಾಗಿರುತ್ತಿದ್ದ ಆತ, ನಿಜಕ್ಕೂ ಸಹನಾಮೂರ್ತಿಯೇ. ಇಂಥ ಪರಿಸ್ಥಿತಿಯಲ್ಲಿಯೂ ವಿನಯ್​, ದೀಪಾ ಅಕ್ಕಂಗೆ ಕೊಟ್ಟಿದ್ದ ಮಾತು ಉಳಿಸಿಕೊಂಡಿದ್ದ.

ಈ ಘಟನೆ ನಡೆದು ವಾರದ ನಂತರ, ನನ್ನ ಗಂಟಲಿನಲ್ಲಿ ಅಸಾಧ್ಯ ನೋವು ಕಾಣಿಸಿಕೊಂಡ್ತು. ಆಹಾರ ನುಂಗುವಾಗ ಗಂಟಲಿನ ಒಳಭಾಗದಲ್ಲಿ ನೋವಾಗುವಂಥ ಟಾನ್ಸಿಲ್​ನ ನೋವಲ್ಲ ಇದು ಎಂಬುದು ಗೊತ್ತಾಯ್ತಾದರೂ, ನುಂಗುವಾಗಲೊಂದೇ ಅಲ್ಲ ಕತ್ತು ಆಕಡೆ ಈಕಡೆ ತಿರುಗಿಸಿದರೂ ಗಂಟಲಿನ ಹೊರ ಸ್ನಾಯುಗಳು ಚುಳುಕ್​ ಅನ್ನುತ್ತಿದ್ದವು. ಅಲ್ಲೇ ಹತ್ತಿರವಿರೋ ಒಬ್ಬರು ಡಾಕ್ಟರ್​ ಬಳಿ ಹೋಗಿ ಕೇಳಿದಾಗ ‘ಇದು ನಿಮ್ಮ ಶಾಲೆಯ ಹೊಸ ತಾಯಿಯರ ಕಾಮನ್​ ಸಮಸ್ಯೆ ಕಣಮ್ಮ, ಸರಿಹೋಗುತ್ತೆ ಹೆದ್ರಬೇಡ. ನಿಂಗೆ ಮಾತಾಡೋದು ಅಭ್ಯಾಸವಾಗ್ತಾ ಹೋದಹಾಗೆ ಈ ಸ್ನಾಯು ನೋವು ಕಡಿಮೆಯಾಗುತ್ತೆ. ತುಂಬಾ ನೋವಿದ್ದಾಗ ಪೇನ್​ ಕಿಲ್ಲರ್​ ತಗೋ ಸಾಕು, ಸ್ವಲ್ಪ ಕತ್ತಿನ ವ್ಯಾಯಾಮ ಮಾಡು’ ಅಂದುಬಿಟ್ಟರು.  ಅವರು ಕೂಡ ‘ಮಾತು ಕಡಿಮೆ ಮಾಡು’ ಅನ್ನಲೇ ಇಲ್ಲ. ಅಷ್ಟರಮಟ್ಟಿಗೆ ನಾವು ಮಕ್ಕಳ ಬಳಿ ಮಾತನಾಡುತ್ತೇವೆ, ಮಾತನಾಡಲೇ ಬೇಕು ಎಂಬ ಮಾತಿನ ಮೌಲ್ಯ ಅವರಿಗೂ ತಿಳಿದಿತ್ತು ಅನ್ನಿಸುತ್ತೆ.  ಗಂಟಲು ಸ್ನಾಯುವಿನ ನೋವಿನ ಬಗ್ಗೆ ವಿಚಾರಿಸಿದಾಗ, ಕೆಲವು ತಾಯಂದಿರಿಗೆ ಈ ನೋವು ಕಾಣಿಸಿಕೊಂಡಿದ್ದು ಹೌದು ಅನ್ನೋದು ತಿಳಿಯಿತು.

ಅದಲ್ಲದೇ, ಹೊಸತರಲ್ಲಿ ಶಾಲೆಗೆ ಹೊಸಬರಾಗಿರುವ ಕೆಲವು ತಾಯಿಯರಿಗೆ ಧ್ವನಿ ಬಿದ್ದುಹೋಗಿದ್ದನ್ನ ಗಮನಿಸಿದೆ. ನನಗೂ ಮೊದ ಮೊದಲು ಧ್ವನಿ ಬಿದ್ದುಹೋಗಿ ಸರಿಹೋಗಿತ್ತು. ಆಮೇಲೆ ಶುರುವಾಗಿತ್ತು ಗಂಟಲು ನೋವು. ನ್ಯೂಸ್​ ಚಾನಲ್​ನ ಆಂಕರ್​ಗಳೂ, ಶಾಲಾ ಶಿಕ್ಷಕರು, ದಿನಪೂರ್ತಿ ಮಾತನಾಡುತ್ತಲೇ ಇರುತ್ತಾರಲ್ಲ, ಅಂದ್ಕೋಬಹುದು ನೀವು. ಆದರೆ ಅದಕ್ಕಿಂತಲೂ ಹೆಚ್ಚಿನ ಶ್ರಮ ನಮ್ಮದು. ಏಕೆಂದರೆ, ಸಹಜವಾಗಿ ಮಾತನಾಡೋದಲ್ಲವಲ್ಲ ಇದು.  ಬಾಯಿ ತೆರೆದು, ಪ್ರತಿ ಅಕ್ಷರಕ್ಕೂ ನಾಲಿಗೆ ಎಲ್ಲಿ ತಗಲುತ್ತದೆ ಎಂದು ತೋರಿಸುತ್ತಾ, ಎಲ್ಲಿ ವೈಬ್ರೇಶನ್​ಬರುತ್ತದೆ ಎಂಬುದನ್ನೂ ಮಗುವಿಗೆ ಅನುಭವ ಮಾಡಿಸುತ್ತಾ, ಮಗುವಿಗೆ ಅರ್ಥವಾಗುವ ತನಕ ಪುನಃ ಪುನಃ ಅದನ್ನೇ ಹೇಳುತ್ತಾ, ಮಾತನಾಡುವ ನಮಗೆ ಅಭ್ಯಾಸವಾಗುವವರೆಗೆ ಗಂಟಲಿನ ಸುಸ್ತು ಸರ್ವೇಸಾಮಾನ್ಯ. ಅಥರ್ವನಿಗೆ ಅಭ್ಯಾಸ ಮಾಡಿ ದಣಿದಿದ್ದಾಗ, ಅತ್ತೆ, ಅಮ್ಮ ಫೋನ್​ಮಾಡಿದ್ದರೂ ಮಾತನಾಡಲು ತ್ರಾಣವಿಲ್ಲದಷ್ಟು ಗಂಟಲು ಸುಸ್ತಾಗಿರುತ್ತಿತ್ತು ನನಗೆ.

ಗಾಯಗಳಾಗಿರುವ ಕಾರಣ, ಆ ವಾರಾಂತ್ಯದಲ್ಲಿ ವಿನಯ್​ ಬೆಂಗಳೂರಿನಿಂದ ಬಂದಿರಲಿಲ್ಲ. ಅಥರ್ವನಿಗೆ ಮನೆಯಲ್ಲಿ ಬೇಜಾರಾಗುತ್ತಿದೆ ಎಂಬ ಕಾರಣಕ್ಕೆ ಅವನನ್ನ ಎತ್ತಿಕೊಂಡು ಒಂದು ರೌಂಡ್​ ವಾಕಿಂಗ್​ ಹೊರಟೆ. ನಾವು ವಾಸವಿದ್ದ ‘ಜನತಾನಗರ’ ಪ್ರದೇಶ, ಅತ್ತ ಸಿಟಿಯೂ ಅಲ್ಲದ, ಇತ್ತ ಹಳ್ಳಿಯೂ ಅಲ್ಲದ ಬಡಾವಣೆ. ಇಲ್ಲಿ ಕುರಿಹಿಂಡು, ಹಸು, ನಾಯಿ, ಬೆಕ್ಕು, ಕೊಕ್ಕರೆ, ಗಿಳಿ ಎಲ್ಲವೂ ದಿನನಿತ್ಯ ಕಣ್ಣಿಗೆ ಬೀಳುತ್ತವೆ. ರೈಲು ಮತ್ತು ವಿಮಾನು ಈ ಎರಡು ವಾಹನಗಳನ್ನು ಬಿಟ್ಟು ಬುಲ್ಡೋಸರ್​, ಟ್ರ್ಯಾಕ್ಟರ್​ನಿಂದ  ಹಿಡಿದು ತಳ್ಳುಗಾಡಿಯ ತನಕ ಎಲ್ಲ ಥರಹದ ವಾಹನಗಳನ್ನೂ ನೋಡಬಹುದು ಅಲ್ಲಿ. ಅದೆಲ್ಲವನ್ನು ತೋರಿಸಿಕೊಂಡು ಬಂದರಾಯಿತು ಎಂದು ಆಲೋಚಿಸಿ ಮನೆಬಿಟ್ಟೆ.

ಅಲ್ಲೇ ಒಂದು ಕಡೆ ಕಸದ ರಾಶಿಗೆ ಬೆಂಕಿಕೊಟ್ಟಿದ್ದನ್ನ ಕಂಡೆ. ಆ ಬೆಂಕಿಯನ್ನ ಅಥರ್ವನಿಗೆ ತೋರಿಸಬೇಕಲ್ಲ, ಅಲ್ಲಿಗೆ ಅವನನ್ನ ಕರೆದೊಯ್ದೆ.  ಅವನಿಗೋ ಅಷ್ಟು ದೊಡ್ಡ ಪ್ರಮಾಣದಲ್ಲಿ ಬೆಂಕಿಯ ಕೆನ್ನಾಲಿಗೆ ಕಂಡಿದ್ದು ಅದೇ ಮೊದಲಬಾರಿ. ಬೆಂಕಿಯ ಶಾಖ, ಹೊಗೆಗೆ ಕಣ್ಣು ಉರಿಯುತ್ತಿದ್ದರೂ  ಅಲ್ಲಿಂದ ಮತ್ತೆಲ್ಲಿಗೂ ಹೋಗಕೊಡದೇ  ಅರ್ಧಗಂಟೆ  ಅಲ್ಲೇ ನಿಂತು  ಕಣ್ತುಂಬಾ ಬೆಂಕಿ ನೋಡತೊಡಗಿದ. ‘ಇದು ಬೆಂಕಿ.  ಬಿಸಿ ಇದೆ. ಮುಟ್ಟಿದರೆ ಕೈ ಸುಟ್ಟು ಹೋಗುತ್ತದೆ. ಬೆಂಕಿ ಯಾವ ಬಣ್ಣ..? ಕೇಸರಿ ಬಣ್ಣ. ನೋಡು ಹೊಗೆ ಬರುತ್ತಿದೆ. ಹೊಗೆ ಕಪ್ಪುಬಣ್ಣ’ ಅನ್ನುತ್ತಾ ನಾನು ಸಾಧ್ಯವಾದಷ್ಟು ಬೆಂಕಿಯ ಬಗ್ಗೆ ಮಾತನಾಡಿದೆ. ಅವನನ್ನ ಅಲ್ಲಿಂದ ಮನೆಗೆ ಕರೆತರಲು ಹರಸಾಹಸ ಪಡಬೇಕಾಯಿತು. ಅಷ್ಟು ಬೆರಗಾಗಿ ಬೆಂಕಿ ನೋಡುತ್ತಿದ್ದನಲ್ಲ.. ಹೀಗಾಗಿ ಮನೆಗೆ ಬಂದ ತಕ್ಷಣ ಒಂದು ಪೇಪರ್​ನ ಮೇಲೆ ಬೆಂಕಿಯ ಚಿತ್ರ ಬಿಡಿಸಿ, ಅವನಿಗೆ ತೋರಿಸಿ ಕ್ರಯಾನ್ಸ್​ ಹರಡಿಟ್ಟು ಬಣ್ಣ ಹಚ್ಚು ಅಂದೆ. ಆ ಎಲ್ಲ ಕ್ರಯಾನ್​ಗಳನ್ನೂ ಒಮ್ಮೆ ನೋಡಿ, ಕೇಸರಿ ಬಣ್ಣವನ್ನೇ ಎತ್ತಿಕೊಂಡು ಆ ಬೆಂಕಿಯ ಚಿತ್ರದ ಮೇಲೆ ಗೀಚತೊಡಗಿದ. ನನ್ನ ಖುಷಿಗೆ ಪಾರವೇ ಇರಲಿಲ್ಲ. ಆ ಬೆಂಕಿಯ ಬಣ್ಣವನ್ನ ಗುರುತಿಸಿ, ಚಿತ್ರಕ್ಕೆ ಅದೇ ಬಣ್ಣ ಹಚ್ಚುತ್ತಿದ್ದಾನೆ ಎಂಬ ವಿಷಯ ನನಗೆ ಅತೀವ ಸಂತೋಷ ಕೊಟ್ಟುಬಿಡ್ತು.

ಆವತ್ತಿನಿಂದ ವಾಕಿಂಗ್​ಅನ್ನೋದು ನಮ್ಮ ದಿನನಿತ್ಯದ ಚಟುವಿಟಿಕೆಯಾಗಿತ್ತು.  ಸ್ಕೂಲ್​ನಿಂದ ಮನೆಗೆ ಬಂದ ತಕ್ಷಣ ಮಲಗಿಬಿಡುತ್ತಿದ್ದ ಅಥರ್ವನನ್ನ ನಾಲ್ಕುಗಂಟೆಗೆ ಎಬ್ಬಿಸಿ, ಸ್ವಲ್ಪ ತಿಂಡಿ ಹಾಲು ಕೊಟ್ಟು, ಒಂದರ್ಧ ಗಂಟೆ ಹೊರಗೆಲ್ಲ ಸುತ್ತಿಸುತ್ತಿದ್ದೆ.  ಪ್ರತಿ ದಿನವೂ ರಸ್ತೆಯಲ್ಲಿ ಓಡಾಡುವ ವಾಹನಗಳನ್ನ, ಅಂಗಡಿ, ರಸ್ತೆ, ಮರ ಗಿಡ, ಕುರಿ ಕೋಳಿ, ಹಸು ಎಲ್ಲವನ್ನೂ ಅಥರ್ವನಿಗೆ ತೋರಿಸುತ್ತಾ ಮಾತನಾಡುತ್ತಿದ್ದೆ. ಪ್ರತಿಯೊಂದು ವಸ್ತುವನ್ನು ಅಥರ್ವ ನೋಡುವಾಗಲೂ ಅದನ್ನವನಿಗೆ ವಿವರಿಸುತ್ತಿದ್ದೆ. ಆವತ್ತು ನಾವು ಏನು ವಿಶೇಷವಾಗಿ ನೋಡಿದ್ದೀವೋ, ಆ ಚಿತ್ರವನ್ನ ಬಿಡಿಸಿ ಬಣ್ಣ ಹಚ್ಚಿಸುತ್ತಿದ್ದೆ.

ಬೆಂಕಿ ಚಿತ್ರಕ್ಕೆ ಬಣ್ಣ ಹಚ್ಚಿದ ವಿಷಯವನ್ನು ವಿನಯ್​ಗೆ ಹೇಳಿದೆ. ಅವನೂ ಖುಷಿಪಟ್ಟ. ‘ಆದರೆ, ಇದೆಲ್ಲ ಹೌದು ಅಮೃತಾ.. ಅವನಿಗೆ ಹಿಯರಿಂಗ್​ಏಡ್​ ಉಪಯೋಗವಾಗ್ತಿಲ್ಲ ಅನ್ನಿಸಿತ್ತಲ್ಲ ನಮಗೆ..? ಮುಂದೇನು ಮಾಡುವುದು ಅಂತ ಪ್ರವೀಣ್​ಸರ್​ ನ್ನ ಒಮ್ಮೆ ಕೇಳಿ ನೋಡು ಅಂದಿದ್ನಲ್ಲ ನಾನು..? ಕೇಳಿದೆಯಾ..?’ ಮತ್ತೊಮ್ಮೆ ನೆನಪಿಸಿದ್ದ. ಇನ್ನೂ ಸ್ವಲ್ಪ ದಿನ ಕಾಯೋಣ, ಹಿಯರಿಂಗ್​ ಏಡ್​ನಲ್ಲಿಯೇ ಕೇಳಿಸಿಕೊಂಡು ಪ್ರತಿಕ್ರಿಯಿಸುತ್ತಾನೋ ಏನೋ ಎಂಬ ನಿರೀಕ್ಷೆ ಇಟ್ಟುಕೊಂಡ ನಾನು ಕಾಯುತ್ತಲೇ ಇದ್ದೆ. ಇನ್ನೂ ಅಥರ್ವ ಕೇಳಸಿಕೊಳ್ಳುತ್ತಿದ್ದಾನಾ..? ಅಥವಾ ತುಟಿ ಚಲನೆಯಲ್ಲಿಯೇ ಕಲಿಯುತ್ತಿದ್ದಾನಾ..? ಎಂಬುದಿನ್ನೂ ಸ್ಪಷ್ಟವಾಗಿರಲಿಲ್ಲ ನನಗೆ. ಕೆಲವು ಬಾರಿ ಶಬ್ಧ ಕೇಳಿಸಿಕೊಳ್ಳುತ್ತಿದ್ದಾನೆ ಅನ್ನಿಸಿದರೆ, ಇನ್ಕೆಲವು ಬಾರಿ ಅವನಿಗೆ ಹಿಯರಿಂಗ್​ ಏಡ್​ನಲ್ಲಿಯೂ ಯಾವ ಶಬ್ಧಗಳೂ ಕೇಳುತ್ತಿಲ್ಲವೇನೋ ಅನ್ನಿಸುತ್ತಿತ್ತು.

ಅಂತೂ ಒಂದು ದಿನ ಈ ನನ್ನ ಗೊಂದಲವನ್ನ ಪ್ರವೀಣ್​ಸರ್​ ಬಳಿ ಹೇಳಿಕೊಂಡೆ. ‘ನಾನು ಆವತ್ತೇ ಹೇಳಿದ್ನಲ್ಲ. ಹಿಯರಿಂಗ್​ ಏಡ್​ನಿಂದ ನಿಮ್ಮ ಮಗುವಿಗೆ ಅಷ್ಟು ಉಪಯೋಗವಿಲ್ಲ ಅಂತ. ಕಾಕ್ಲಿಯರ್​ ಇಂಪ್ಲಾಂಟ್​ ಮಾಡಿಸೋಕೆ ಅಥರ್ವನ ವಯಸ್ಸೀಗ ಸರಿಯಾಗಿದೆ.  ಎರಡು ವರ್ಷದೊಳಗೇ ಆಪರೇಶನ್​ ಮಾಡಿಸಿದರೆ ಅತ್ಯುತ್ತಮ ಅಂತ ನಾವು ಹೇಳೋದು.’ ಅಂದರು ಅವರು. ಅಷ್ಟೇ ಅಲ್ಲದೆ ‘ಮುಂದಿನ ವಾರವೇ ನಮ್ಮ ಸ್ಕೂಲ್​ನಲ್ಲೇ  ಕಾಕ್ಲಿಯರ್​ಇಂಪ್ಲಾಂಟ್ ಬಗ್ಗೆ ಒಂದು ಕಾರ್ಯಾಗಾರವಿದೆ. ಆ ಕಾರ್ಯಕ್ರಮ ಅಟೆಂಡ್ ಮಾಡಿ. ಡಾಕ್ಟರ್​, ಆಡಿಯಾಲಾಜಿಸ್ಟ್ ಎಲ್ಲರೂ ಆ ಕಾರ್ಯಕ್ರಮಕ್ಕೆ ಬರುತ್ತಾರೆ. ಈ ಬಗ್ಗೆ ನಿಮಗೆ ಸಂಪೂರ್ಣ ಮಾಹಿತಿ ಸಿಗುತ್ತದೆ’ ಮಾಹಿತಿ ನೀಡಿದರು.

‘ಕಾಕ್ಲಿಯರ್​ಇಂಪ್ಲಾಂಟ್​.!’ ಇಷ್ಟು ದಿನ ಈ ಶಬ್ಧವನ್ನು ಮತ್ತೆ ಮತ್ತೆ ಹಲವು ಬಾರಿ ಕೇಳಿಸಿಕೊಳ್ಳುತ್ತಲೇ ಇದ್ದರೂ, ಆ ಕ್ಷಣಕ್ಕೆ ಆ ಯೋಚನೆ ನನ್ನ ತಲೆಯನ್ನ ಗಟ್ಟಿಯಾಗಿ ಆವರಿಸಿಕೊಂಡುಬಿಡ್ತು.  ಹಿಯರಿಂಗ್​ ಏಡ್​ನಲ್ಲೇ ಕೇಳಿಸಿಕೊಂಡು ಮಾತನಾಡುತ್ತಾನೆ ಎಂದಾದರೆ, ಇಷ್ಟು ಚಿಕ್ಕ ಮಗುವಿಗೆ ಅಷ್ಟುದೊಡ್ಡ ಆಪರೇಶನ್​ ಏತಕ್ಕೆ..? ಬೇಡ ಬೇಡ. ದೇವರೇ ಹಿಯರಿಂಗ್​ ಏಡ್​ನಲ್ಲೇ ನನ್ನ ಮಗ ಕೇಳಿಸಿಕೊಳ್ಳುವಂತೆ ಮಾಡಪ್ಪ ಎಂದು ಈ ಮೊದಲು ಅದೆಷ್ಟೋ ಬಾರಿ ದೇವರಿಗೂ ಮೊರೆ ಇಟ್ಟಿದ್ದೆನೋ ನನಗೇ ಗೊತ್ತಿಲ್ಲ. ಆದರೂ ದಿನನಿತ್ಯ ಶಾಲೆಯಲ್ಲಿ ಇಂಪ್ಲಾಂಟ್​ ಆದ ಮಕ್ಕಳ ಆ ಸ್ಪಷ್ಟ ಮಾತುಗಳನ್ನ ಕೇಳುತ್ತಾ ಕೇಳುತ್ತಾ ನನ್ನ ಮನಸ್ಸೂ ಕೂಡ ನನಗೇ ತಿಳಿಯದಂತೆ ಈ ಆವಿಷ್ಕಾರದ ಕಡೆ ವಾಲಿಕೊಳ್ಳುತ್ತಿತ್ತು. ಈಗ ಪ್ರವೀಣ್​ ಸರ್​ ಬಳಿ ಮಾತನಾಡಿದ್ದೇ, ನನ್ನ ಮನಸ್ಸಿನೊಳಗೆ ಆ ನಿರ್ಧಾರವೊಂದು ಬೇರೂರತೊಡಗಿತ್ತು.

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

29 September, 2021

ನಿಮಗೆ ಇವೂ ಇಷ್ಟವಾಗಬಹುದು…

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading