ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪುಸ್ತಕ ಅಂಕಣ – ಹೊಸ ಜಾಡಿನ ಹೆಜ್ಜೆಗಳು ‘ಹಾಣಾದಿ’

ಡಾ. ಶೈಲಜಾ ಎನ್ ಬಾಗೇವಾಡಿಯವರು ಮೂಲತಃ ಬಸವಣ್ಣನವರ ಜನ್ಮಸ್ಥಳ ಬಾಗೇವಾಡಿಯವರು.

ವಿಜಯಪುರದ ಬಿ.ಎಲ್.ಡಿ.ಈ. ಶಿಕ್ಷಣ ಸಂಸ್ಥೆಯ ಮಹಿಳಾ ಕಾಲೇಜಿನಲ್ಲಿ ಸ್ನಾತಕ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

ಎಸ್.ಎಲ್.ಭೈರಪ್ಪನವರ ಕಾದಂಬರಿಗಳ ವಸ್ತು ವಿನ್ಯಾಸ ಕುರಿತು ಪಿಎಚ್.ಡಿ ಅಧ್ಯಯನ ನಡೆಸಿದ್ದಾರೆ.೧೬ ಕೃತಿಗಳು ಪ್ರಕಟವಾಗಿವೆ.

ಪ್ರಸ್ತುತ ಕಲಬುರಗಿಯ ಸರಕಾರಿ ಮಹಾವಿದ್ಯಾಲಯದಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ದೀಗ ಅವಧಿಯ ಪುಸ್ತಕ ಅಂಕಣದೊಂದಿಗೆ ಬರುತ್ತಿದ್ದಾರೆ.

ಅಂಕಣ – 14

ಕೃತಿ – ಹಾಣಾದಿ
ಲೇಖಕರು –
ಕಪಿಲ ಪಿ ಹುಮನಾಬಾದೆ
ಪ್ರಕಾಶಕರು – ಕಾವ್ಯಮನೆ ಪ್ರಕಾಶನ
ಬೆಲೆ – 130

ಜೀವನ ಎಂಬುದು ಸರಳರೇಖೆಯಲ್ಲ, ಬದುಕಲ್ಲಿ ಏನೆಲ್ಲಾ ಏರಿಳಿತಗಳ ವಕ್ರ ರೇಖೆಗಳ ಆಗರ. ಹಲವು ಸಂಬಂಧಗಳ ಒಡನಾಟ, ಹುಡುಕಾಟ. ಕೆಲವು ಬಂಧಗಳು ಕೂಡುತ್ತವೆ ಕೆಲವು ಕಳಚುತ್ತವೆ, ಇನ್ನೂ ಕೆಲವು ಶಾಶ್ವತವಾಗಿ ಬೆಸೆದುಕೊಂಡು ನಮ್ಮೊಂದಿಗೆ ಅಂತ್ಯ ಕಾಣುತ್ತವೆ. ಇಂತಹ ಒಂದು ಅವಿನಾಭಾವವಾದ ಸಂಬಂಧ ಕಾಣುವುದು ಹಾಣಾದಿ ಎಂಬ ಕಾದಂಬರಿಯಲ್ಲಿ. ಬಾದಾಮು ಗಿಡ ಮತ್ತು ಅಪ್ಪ ಇಬ್ಬರ ಸಾಂಗತ್ಯ ಬಿಡಿಸದ ನಂಟು. ಇಲ್ಲಿ ಮರವೇ ಕೇಂದ್ರಬಿಂದು. ಅದರ ಸುತ್ತಲೂ ಮಿಕ್ಕ ಪಾತ್ರಗಳು ಗಿರಕಿ ಹೊಡೆಯುತ್ತವೆ. ಮರವು ಒಂದು ಪಾತ್ರವಾಗಿ ಅದರ ಅವಸಾನವೇ ಊರಿನ ಅಂತ್ಯಕ್ಕೆ ಮುನ್ನುಡಿ ಬರೆಯುತ್ತದೆ.

ಯುವ ಬರಹಗಾರರಾದ ಕಪಿಲ ರವರ ಮೊದಲ ಕಾದಂಬರಿ ಹಾಣಾದಿ 104 ಪುಟಗಳ ಕಾದಂಬರಿ. ರಮ್ಯ, ವಾಸ್ತವ, ಮಾಂತ್ರಿಕತೆ ಮತ್ತು ಅದ್ಭುತ ಕಲ್ಪನಾ ಲೋಕವನ್ನು ಹೊಂದಿರುವ ವಿನೂತನ ಕಥಾ ವಸ್ತುವನ್ನು ಒಳಗೊಂಡಿದೆ. ಓದುಗನನ್ನು ವಾಸ್ತವದಿಂದ ಬ್ರಾಹ್ಮಕ ಜಗತ್ತಿಗೆ ಕರೆದೊಯ್ದು ನಂತರ ಥಟ್ಟನೆ ವಾಸ್ತವಕ್ಕೆ ತಂದು ನಿಲ್ಲಿಸುವ ವಿಭಿನ್ನ ತಂತ್ರಗಾರಿಕೆಯನ್ನು ಹೊಂದಿದೆ. ಕೃತಿಯಲ್ಲಿ ಬರುವ ಗುಬ್ಬಿ ಆಯಿ ಕಾರಂತರ ಮೂಕಜ್ಜಿಯನ್ನು ನೆನಪಿಸುತ್ತದೆ. ಕೃತಿಯಲ್ಲಿ ಸಂಬಂಧಗಳ ಸಂಕೀರ್ಣತೆಯನ್ನು ಕಾಣುತ್ತೇವೆ. ಅಪ್ಪ-ಮಗ-ಆಯಿ- ತೊತ್ಯಾ ಮತ್ತು ಬಾದಾಮ ಗಿಡ ಇವರೆಲ್ಲರ ಜೊತೆಗಿನ ನಂಟು, ಅದನ್ನು ಮೀರಿ ಎಲ್ಲದಕ್ಕೂ ಮೂಕಸಾಕ್ಷಿಯಾಗಿ ನಿಂತ ಮರವೇ ಅಪ್ಪನಿಗೆ ಆತ್ಮ ಸಂಗಾತಿ ಆಗಿರುತ್ತದೆ.

ಅಪ್ಪನಿಗೆ ಕಳುಹಿಸಿದ ಮನಿ ಆರ್ಡರ್ ಮರಳಿ ಬಂದಾಗ, ಆತನನ್ನು ನೆನಪಿಸಿಕೊಂಡು ಮಗ ಹಳ್ಳಿಗೆ ಬರುವುದರೊಂದಿಗೆ ಕಥೆ ಆರಂಭವಾಗುತ್ತದೆ. ಊರು ಮತ್ತು ಊರಿನ ನಂಟನ್ನು ಕಳಚಿಕೊಂಡು ನಗರ ಸೇರಿದ ಕಥಾನಾಯಕ, ಹಾಗೆಂದು ನಗರದಲ್ಲಿ ಒಡ ಮೂಡಿದ ಸಂಬಂಧದಲ್ಲಿ ಕೂಡ ಬದ್ಧತೆ ಇರುವುದಿಲ್ಲ. ಇದು ಆಧುನಿಕ ಮನೋಭಾವವನ್ನು ಬಿಂಬಿಸುತ್ತದೆ. ಊರಿನ ಕಡೆ ಮುಖ ಮಾಡಿದ ನಿರೂಪಕ ಅಲ್ಲಿನ ಚಿತ್ರಣ ನೀಡುತ್ತಾನೆ. ಊರಿನ ರಾಜಕೀಯ, ಆಚರಣೆ, ನಂಬಿಕೆ ಜೊತೆಗೆ ವರ್ಗ ವರ್ಣಗಳ ಸಂಘರ್ಷ ಎಲ್ಲವನ್ನು ಪರಿಚಯಿಸುತ್ತ, ಅಪ್ಪನಿಗೆ ಮನೆಯಂಗಳದ ಗಿಡದ ಮೇಲಿನ ಮೋಹ ಹೇಳುತ್ತಾ ಹೊರಡುವನು. ಆದರೆ ಬಹುಕಾಲದ ನಂತರ ಊರಿಗೆ ಬಂದಾಗ ಅಲ್ಲಿನ ವಾತಾವರಣವೆ ಬೇರೆಯಾಗಿತ್ತು. ಊರು ಸ್ಮಶಾನ ಮೌನದಿಂದ ಕೂಡಿದ್ದು, ಅಪ್ಪನ ನೆಚ್ಚಿನ ಮರವು ಕಾಣೆಯಾಗಿತ್ತು. ಅಪ್ಪನಿಲ್ಲದ ಮನೆಯಲ್ಲಿ ಗುಬ್ಬಿ ಆಯಿ ಎಂಬ ಹೊಸ ಪಾತ್ರ ಮಾತ್ರ ಜೀವಂತವಾಗಿ ಕಂಡುಬರುತ್ತದೆ . ಈ ಎಲ್ಲಾ ಬದಲಾವಣೆ ಕುರಿತು ಕುತೂಹಲ ಮೂಡಿ ಆಯಿಗೆ ಕೇಳಿದಾಗ, ಅವಳು ಮಾತ್ರ ಶಾಂತವಾಗಿ ಊಟಕ್ಕೆ ನೀಡಿ ಮೂಗುಮ್ಮಾಗಿ ಸಂಜೆ ಹೊಲಕ್ಕೆ ಹೋಗುವಾಗ ಎಲ್ಲವನ್ನು ಹೇಳುವೆ ಎನ್ನುವಳು. ಮತ್ತೆ ತಂದೆಯ ನೆನಪನ್ನು ಮಾಡಿಕೊಳ್ಳುತ್ತಾ, ತಮ್ಮಿಬ್ಬರ ಒಡನಾಟ, ಆತನ ಸಿಟ್ಟು, ಹಠ ಜೊತೆಗೆ ಆತನ ಕಾಳಜಿ ಕಕ್ಕುಲಾತಿ, ಅಪ್ಪನ ಹೆಗಲ ಮೇಲಿನ ಸವಾರಿ ಹೀಗೆ ಎಲ್ಲವನ್ನು ನೆನಪಿಸಿಕೊಳ್ಳುತ್ತ ನೆನಪಿನ ಬುತ್ತಿ ಬಿಚ್ಚಿಡುತ್ತಾನೆ. ಸಂಜೆ ಹೊತ್ತು ಹೊಲದಲ್ಲಿರುವ ಅಪ್ಪನ ಭೇಟಿಗೆಂದು ಆಯಿಯೊಂದಿಗೆ ಹಾಣಾದಿ ಮೂಲಕ ಹೆಜ್ಜೆ ಹಾಕುತ್ತಾನೆ.

ದಾರಿ ಉದ್ದಕ್ಕೂ ಅಪ್ಪನ ಮತ್ತು ಗಿಡದ ಒಡನಾಟ, ಅದರ ಮೇಲಿದ್ದ ಮಮಕಾರ ಎಲ್ಲವನ್ನು ಹೇಳುತ್ತಾ, ಗಿಡವನ್ನು ಕತ್ತರಿಸಬೇಕೆಂಬ ಊರಿನವರ ಹುನ್ನಾರ, ಅದಕ್ಕೆ ಆತನ ಪ್ರತಿರೋಧ ಕೊನೆಗೂ ಆತನ ಅನುಪಸ್ಥಿತಿಯಲ್ಲಿ ಅದರ ಅವಸಾನವಾದಾಗ, ತನ್ನ ಬೇರನ್ನೇ ಕಳೆದುಕೊಂಡಂತೆ, ತನ್ನ ಅಸ್ತಿತ್ವವೇ ಅಳಿದಂತಾಗಿ, ಮರದೊಂದಿಗೆ ತಾನು ಸುಟ್ಟುಕೊಂಡು ಅದರೊಂದಿಗೆ ಒಂದಾಗುತ್ತಾನೆ ಎಂದು ಎಲ್ಲವನ್ನೂ ಹೇಳುತ್ತಾಳೆ. ಅನಿಷ್ಟಕ್ಕೆಲ್ಲ ಶನೀಶ್ವರನೇ ಕಾರಣ ಎನ್ನುವಂತೆ, ಊರಲ್ಲಿ ಏನೇ ಅವಘಡಗಳು ಘಟಿಸಿದರು ಅದಕ್ಕೆ ಮರವೇ ಕಾರಣ ಎಂದು , ಎಲ್ಲಾ ಸಮಸ್ಯೆಗಳು ಆ ಮರದ ಸುತ್ತಲೇ ಸುತ್ತುತ್ತಿರುತ್ತವೆ. ಮಗನಿಗಿಂತ ಹೆಚ್ಚಾಗಿ ಮರವನ್ನೇ ಪ್ರೀತಿಸುತ್ತಿದ್ದ ಅಪ್ಪ, ಮರದ ಕಾರಣಕ್ಕಾಗಿ ಹೆಂಡತಿಯನ್ನು ತವರಿನಲ್ಲಿ ಬಿಟ್ಟಿದ್ದ ಹಾಗಾಗಿ ಮರವೇ ಎಲ್ಲವೂ ಆಗಿತ್ತು.ಆದರೆ ಬಾದಾಮ ಮರದ ಜೊತೆಗಿನ ಆತನ ಒಡನಾಟ ಊರಿನ ಜನ ಅರಿಯದೆ ಇಬ್ಬರ ಅಂತ್ಯಕ್ಕೂ ಕಾರಣರಾಗುತ್ತಾರೆ. ಅಪ್ಪ ಸತ್ತ ನಂತರ ದೆವ್ವವಾಗಿದ್ದಾನೆ ಎಂಬ ವದಂತಿ ಊರಲ್ಲಿ ಹರಡಿದ ಕಾರಣ, ಎಲ್ಲರೂ ಊರನ್ನು ತೊರೆಯುತ್ತಾರೆ. ಹೀಗೆ ನಡೆದ ವೃತ್ತಾಂತವೆಲ್ಲ ಗುಬ್ಬಿ ಆಯಿ ಹೊಲದ ದಾರಿ ಉದ್ದಕ್ಕೂ ಹೇಳುತ್ತಾ ಸಾಗುವಳು.

ಆದರೆ ಕೊನೆಯಲ್ಲಿ ಅಪ್ಪನ ಜೊತೆಗಿದ್ದ ಕಂಚಿಯ ಮಗ ತೋತ್ಯಾ ಬಂದು ವಾಸ್ತವ ಚಿತ್ರಣ ಬಿಚ್ಚಿಡುತ್ತಾನೆ. ಕಥೆ ಹೇಳಲೆಂದೇ ಜೀವಂತವಾದ ಪಾತ್ರ ಗುಬ್ಬಿ ಆಯಿಯದು. ಕಾಡಿನಲ್ಲಿದ್ದ ಆಯಿಯನ್ನು ಮನೆಗೆ ಕರೆ ತಂದು ಆಶ್ರಯ ನೀಡಿದ ಅಪ್ಪನ ಉಪಕಾರವನ್ನು ತೀರಿಸಲೆಂದೆ, ಅವಳು ಊಟವಿಟ್ಟು ಕಥೆ ಹೇಳಿ ಮಾಯವಾಗವ ರೋಚಕ ಪಾತ್ರವಾಗಿ ಕಾಣುತ್ತಾಳೆ. ತೊತ್ಯಾನು ನೈಜ ಸಂಗತಿ ತಿಳಿಸುವ ಮೂಲಕ ಕಥೆ ಅಂತ್ಯವಾಗುವುದು . ಹೀಗೆ ಕಲ್ಪನೆ, ಕನಸು, ಮಾಂತ್ರಿಕತೆ, ವಾಸ್ತವಗಳ ನೆಲೆಗಟ್ಟಿನಲ್ಲಿ ಕಥೆ ಸಾಗಿದರು ಅಂತ್ಯದಲ್ಲಿ ಸಂಬಂಧಗಳ ತಾಕಲಾಟ ಕಾಣುತ್ತೇವೆ. ಇಲ್ಲಿ ರಕ್ತ ಸಂಬಂಧಕ್ಕಿಂತ ಮಿಕ್ಕ ಸಂಬಂಧಗಳೆ ಪ್ರಮುಖವಾಗಿ, ಅದರಲ್ಲೂ ಬಾದಾಮ ಗಿಡವೇ ಹೆಚ್ಚು ಆಪ್ತವಾಗಿ ಕಾಣುತ್ತದೆ. ಲೌಕಿಕ ನಂಟಿಗಿಂತ ಭಿನ್ನವಾದ ನಂಟು ಇದಾಗಿದೆ.

ಒಟ್ಟು ಕಾದಂಬರಿ ಒಂದು ರಾತ್ರಿ, ಒಂದು ಹಗಲಿ ಮತ್ತು ರಾತ್ರಿಯಲ್ಲಿ ಘಟಿಸುತ್ತದೆ. ಭಾಷೆಯ ದುಡಿತ ಹದವಾಗಿದೆ. ಕಾದಂಬರಿಯ
ಆರಂಭವು ನಗರ ಸಂಸ್ಕೃತಿಯಿಂದ ಗ್ರಾಮೀಣ ಬದುಕಿನೆಡೆಗೆ ಸಾಗಿದಂತೆ ಭಾಷೆಯ ಬಳಕೆಯೂ ಕೂಡ ಅದರಂತೆ ಸಾಗುತ್ತದೆ.
” ನಕ್ಷತ್ರಗಳು ಸುಸ್ತಾದಂತೆ ಯಾಕೋ ಡಿಮ್ಮಾಗಿ ಉರಿಯುತ್ತಿದ್ದವು “
” ರಸ್ತೆ ಮೇಲೆ ಡಾಂಬರಿನ ಅಸ್ಥಿಪಂಜರ ಮಾತ್ರ ಉಳಿದಿತ್ತು” ಹೀಗೆ ಆರಂಭದಲ್ಲಿ ಶಬ್ದ ಚಮತ್ಕಾರದ ಮಾತುಗಳು ಕಂಡರೆ ಕೊನೆಯಲ್ಲಿ ದೇಸಿ ತನವನ್ನು ಕಾಣುತ್ತೇವೆ. ಬಲ್ಯಾಕ, ತಟಕ, ಹೊಡಿಲತದ, ಬಿಸಿಲಾಗಬಿ…..

ಹೀಗೆ ಕಾದಂಬರಿಯು ಭಿನ್ನ ನಿರೂಪಣಾ ಶೈಲಿ ಮತ್ತು ವಿಭಿನ್ನ ಕಥಾ ವಸ್ತುವಿನಿಂದ ಕುತೂಹಲದಿಂದ ಓದಿಸಿಕೊಂಡು ಹೋಗುತ್ತದೆ. ಕಾದಂಬರಿಯು ಹಲವು ಮುದ್ರಣ, ಹಲವು ಪ್ರಶಸ್ತಿಗಳನ್ನು ಮುಡುಗೇರಿಸಿಕೊಂಡು, ಕಪಿಲ ಪಿ. ಹುಮನಾಬಾದೆ ಅವರು ಭರವಸೆಯ ಕಾದಂಬರಿ ಕಾರರಾಗಿ ಗುರುತಿಸಿಕೊಂಡಿದ್ದಾರೆ. ಇಂದು ಕಾದಂಬರಿಗಳು ಪ್ರವಾಹವೋಪಾದಿಯಲ್ಲಿ ಮೂಡಿ ಬರುತ್ತಿರುವಾಗ ‘ಹಾಣಾದಿ” ತನ್ನದೇ ಹೆಜ್ಜೆ ಗುರುತನ್ನು ಮೂಡಿಸಿದೆ

‍ಲೇಖಕರು Admin

12 August, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading