ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಒಂದೊಳ್ಳೆ ಅನುಭವ ಕಥನ

ಎಂ. ಆರ್. ಕಮಲ ಮತ್ತು ಆಕರ್ಷ ರಮೇಶ್ ಕಮಲ ಅವರ ಪ್ರವಾಸ ಕಥನ ‘ಅಲ್ಲೇ ಎಣಿಸಿ ಬಿಟ್ಟ ನಕ್ಷತ್ರಗಳು’

‘ಸಸಿ ಪ್ರಕಾಶನ’ ಈ ಕೃತಿಯನ್ನು ಪ್ರಕಟಿಸಿದೆ.

ಈ ಕೃತಿಯ ಕುರಿತ ವಿದ್ಯಾ ಸುಂದರ ಅವರ ಬರಹ ಇಲ್ಲಿದೆ.

-ವಿದ್ಯಾ ಸುಂದರ

ಅನುವಾದಕರಾದ ಪ್ರಬಂಧಕಾರರಾದ ಹಿರಿಯ ಲೇಖಕಿ ಎಂ ಆರ್ ಕಮಲ ಅವರು, ತಮ್ಮ ಬರಹಗಳಿಂದ ಕನ್ನಡ ಓದುಗರಿಗೆ ಪರಿಚಿತರು. ಅವರು ಜರ್ಮನಿಯಲ್ಲಿರುವ ತಮ್ಮ ಮಗನ ಮನೆಗೆ ಹೋದ ಅನುಭವಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ. ಇಂಜಿನಿಯರ್ ಆಗಿರುವ ಆಕರ್ಷ ಆರ್ ಕಮಲ ಅವರು,ಹಲವಾರು ದೇಶಗಳಲ್ಲಿ ವೃತ್ತಿಯ ನಿಮಿತ್ತ ನೆಲೆಸಿ ಈಗ ಜರ್ಮನಿಯ ನಿವಾಸಿ. ಅವರು ತಮ್ಮ ಕುಟುಂಬದೊಂದಿಗೆ ಜಪಾನ್ ಪ್ರವಾಸ ಮಾಡಿದ ಅನುಭವಗಳನ್ನು ಬರೆದಿದ್ದಾರೆ. ತಾಯಿ ಮಗ ಇಬ್ಬರು ಸೇರಿ ಪ್ರವಾಸ ಕಥನ ರಚಿಸಿರುವುದು ವಿಶೇಷವಾಗಿದೆ. ಕೆಲವು ದಿನಗಳ ಹಿಂದಷ್ಟೇ ಈ ಕೃತಿ ಆನ್ಲೈನ್ ನಲ್ಲಿ ಬಿಡುಗಡೆಯಾಗಿದೆ.

‘ಅಮ್ಮನ ಸೂಟ್ಕೇಸ್ – ಜರ್ಮನಿಯ ಪ್ರವಾಸ ಕಥನ’ದಲ್ಲಿ ಮೊದಲ ಲೇಖನ, ಒಂದು ರೈಲಿನ ಪಯಣ. ಎಲ್ಲೆಲ್ಲೂ ಶಿಸ್ತನ್ನು ಪಾಲಿಸುವ ಜರ್ಮನ್ ಜನರ ಶಿಸ್ತು, ರೈಲುಗಳಲ್ಲಿ ಎಲ್ಲಿ ಹೋಗುತ್ತದೆ ಎಂದು ಹೇಳುತ್ತಾ ಚಿಕ್ಕದಾಗಿ ಅಲ್ಲಿನ ರೈಲುಗಳ ಇತಿಹಾಸವನ್ನು ಲೇಖಕಿ ಹೇಳುತ್ತಾರೆ. ಫ್ರೆಡರಿಕ್ ಅಲೆಕ್ಸಾಂಡರ್ ವಿಶ್ವವಿದ್ಯಾಲಯದ ಆವರಣದಲ್ಲಿ ಅವರು ನೋಡಿದ ವಿದ್ಯಾರ್ಥಿಗಳ ಬಗ್ಗೆ, ವಿಶ್ವವಿದ್ಯಾಲಯದ ಆರಂಭದ ಬಗ್ಗೆ ಬರೆದಿದ್ದಾರೆ. ಮುಂದೆ ಕಾಡಿನ ಅನುಭವ, ವನಭೋಜನಗಳ ಜೊತೆಗೆ, ಅಲ್ಲೇ ಟೇಬಲ್ ನ ಮೇಲೆ ಫ್ಲಾಸ್ಕಿನಲ್ಲಿ ಇಟ್ಟಿದ್ದ ಕಾಫಿ ಬಗ್ಗಿಸಿಕೊಂಡು ಕುಡಿದ ನಂತರ, ಅಲ್ಲಿದ್ದ ತಟ್ಟೆಯಲ್ಲಿ ಹಣ ಹಾಕುವ ನಂಬಿಕೆಯ ವ್ಯವಸ್ಥೆ ಓದಿದಾಗ ಆಶ್ಚರ್ಯವಾಗುತ್ತದೆ. ಮಕ್ಕಳ ಆಟದ ಮೈದಾನದ ಸೊಗಸು, ಲೇಖಕಿ ತಮ್ಮ” ಕಾಳ ನಾಮ ಚರಿತೆ ‘ ಯನ್ನು ಓಪನ್ ಲೈಬ್ರರಿಗೆ ಸೇರಿಸಿದಾಗ, ಮರುದಿನವೇ ಓದುಗರೊಬ್ಬರು ಓದಲು ಒಯ್ದಿದ್ದನ್ನು ಖುಷಿಯಿಂದ ಬರೆದಿದ್ದಾರೆ. ಜರ್ಮನಿಯ ಸರೋವರ, ಬಸ್ಸುಗಳು, ಪಿಜ್ಜಾ, ಬ್ಯಾಡ್ಮಿಂಟನ್ ಹಾಡಿದ ಅನುಭವಗಳನ್ನು, ಅಲ್ಲಿನ ನಿತ್ಯ ಜೀವನವನ್ನು ಓದುಗರಿಗೆ ಪರಿಚಯಿಸುತ್ತಾರೆ.

ಜರ್ಮನಿಯ ಹರಟೆ ಕಟ್ಟೆಗಳ ಬಗ್ಗೆ ಬರೆದಿದ್ದನ್ನು ಓದಿದಾಗ, ಇಲ್ಲಿಯೂ ಪಾರ್ಕ್ ಗಳಲ್ಲಿ ಕುಳಿತು ಮಾತಾಡುವವರ ನೆನಪಾಯಿತು. ಜರ್ಮನಿಯವರ ಕಸ ವಿಲೇವಾರಿಯ ಶಿಸ್ತಿನ ವ್ಯವಸ್ಥೆ ನಮ್ಮಲ್ಲಿಯೂ ಬಂದರೆ ಎಷ್ಟು ಚಂದ ಎನ್ನಿಸಿತು. ಜರ್ಮನ್ನರ ಸಸ್ಯ ಪ್ರೇಮ, ಜಾತ್ರೆ, ಆಚರಣೆಗಳು, ಅಲ್ಲಿನ ಯಂತ್ರಗಳ ಜಗತ್ತು, ಪುಸ್ತಕದ ಅಂಗಡಿಗಳ ಬಗ್ಗೆ ಹೇಳುತ್ತಾ, ಜರ್ಮನಿ ಯ ತುತ್ತತುದಿಗೆ ನಮ್ಮನ್ನು ಕರೆದೊಯ್ಯುತ್ತಾರೆ, ಲೇಖಕಿ. ಜರ್ಮನಿಯ ಎರ್ಲಾಂಗನ್ ನಲ್ಲಿ ಮಗನ ಮನೆಯಲ್ಲಿದ್ದ ಲೇಖಕಿ, ಅಲ್ಲಿಂದ ನೋಡಲು ಹೋದ ಬಾಂಬರ್ಗ್, ವರ್ಟ್ಸ್ ಬರ್ಗ್, ರೊಥೆನ್ ಬರ್ಗ್ ಗಳಲ್ಲಿ ಆದ ಅನುಭವಗಳನ್ನು ನೋಡಿದ್ದನ್ನು ಹೇಳುತ್ತಾ, ಬ್ರೆಕ್ಟ್ ನ ಮನೆಯೊಳಗೆ ಹೋಗುತ್ತಾರೆ. ಜಾಗತಿಕ ಸಾಹಿತ್ಯದಲ್ಲಿ ಪ್ರಮುಖರಾದ ಜರ್ಮನ್ ಲೇಖಕರಲ್ಲಿ ಒಬ್ಬರಾದ ಬೆರ್ಟೋಲ್ಟ್ ಬ್ರೆಕ್ಟ್ ನ ಮನೆಯನ್ನು ವಸ್ತು ಸಂಗ್ರಹಾಲಯವಾಗಿಸಿ, ಅವನ ಎಲ್ಲ ವಸ್ತುಗಳನ್ನು ಅಲ್ಲಿ ಪ್ರದರ್ಶಿಸಿರುವ ರೀತಿಯನ್ನು ಲೇಖಕಿ ವರ್ಣಿಸಿರುವುದನ್ನು, ಅವರು ನಾಟಕಕಾರ ಬ್ರೆಕ್ಟ್ ನ ಪ್ರಭಾವ ಕನ್ನಡ ಸಾಹಿತ್ಯದ ಮೇಲಾದ ಬಗೆಯನ್ನು, ಸಂದರ್ಶಕರ ಪುಸ್ತಕದಲ್ಲಿ ಕನ್ನಡದಲ್ಲಿಯೇ ಬರೆದು ಬಂದಿದ್ದನ್ನು ಓದಿದಾಗ ಮನಸ್ಸು ತುಂಬಿ ಬಂತು. ಲೇಖಕಿ ಕುತೂಹಲಕರ ವಿಷಯಗಳನ್ನು ಹೇಳುತ್ತಾ, ಪರಿಚಯವನ್ನು ಮಾಡಿಸುತ್ತಾ, ನಮ್ಮನ್ನು ಇತಿಹಾಸದ ದಾರುಣ ಪುಟಗಳ ಎದುರಿಗೆ ತಂದು ನಿಲ್ಲಿಸುತ್ತಾರೆ. ಡಕಾವ್ ಯಾತನಾ ಶಿಬಿರದ ವಿವರಗಳನ್ನು ಓದುತ್ತಾ ಹೋದಾಗ ಮನಸ್ಸು ಭಾರವಾಯಿತು.

ಎರಡನೇ ಭಾಗ ಮಗನ ಬ್ಯಾಕ್ ಪ್ಯಾಕ್ – ಜಪಾನ್ ಪ್ರವಾಸ ಕಥನ. ಇದರಲ್ಲಿ ಆಕರ್ಷ ಆರ್ ಕಮಲ ತಮ್ಮ ಕುಟುಂಬದೊಂದಿಗೆ ಜಪಾನ್ ಪ್ರವಾಸ ಮಾಡಿದ ಅನುಭವಗಳ ಬಗ್ಗೆ ಹೇಳುತ್ತಾ, ಅಲ್ಲಿನ ಜಪಾನಿ ಸಂಸ್ಕೃತಿಯ ವಿಶೇಷಗಳನ್ನು ಓದುಗರ ಮುಂದೆ ಇಟ್ಟಿರುವುದು ಬಹಳ ಸೊಗಸಾಗಿದೆ.ಟೀಮ್ ಲ್ಯಾಬ್ ಪ್ಲಾನೆಟ್ಸ್ ನ ಡಿಜಿಟಲ್ ವಸ್ತು ಸಂಗ್ರಹಾಲಯದ ವಿಶೇಷ ಅನುಭವಗಳನ್ನು ಹಂಚಿಕೊಂಡಿರುವುದನ್ನು ಓದಿ, ನಾನು ಅಂತರ್ಜಾಲದಲ್ಲಿ ಹುಡುಕಿ ಇದರ ಬಗ್ಗೆ ತಿಳಿದುಕೊಂಡೆ. ಇಲ್ಲಿನ ಬುದ್ಧನ ಪ್ರತಿಮೆಯ ಒಳಹೊಕ್ಕಾಗ ಕಂಡದ್ದನ್ನು ಲೇಖಕರು ಹೇಳಿರುವುದು ಒಂದು ನಿಮಿಷ ಯೋಚಿಸುವಂತೆ ಮಾಡಿತು.ಸ್ಲಾಮ್ ಡಂಕ್ ಮಾಂಗಾ ದಲ್ಲಿ ಸಕುರಾಗಿಯ ಹಿಂದೆ ಹಾದು ಹೋಗುವ ಎನೊಡೆನ್ ರೈಲನ್ನು, ರೈಲ್ವೆ ಕ್ರಾಸಿಂಗ್ ಅನ್ನು ಲೇಖಕರು ನೋಡಲು ಹೋಗಿದ್ದನ್ನು ಓದಿ, ಮಾಂಗಾ ಪ್ರಿಯರಾದ ನನ್ನ ಮಕ್ಕಳಿಗೆ ಹೇಳಿದಾಗ, ಅವರಿಗೆ ಬಹಳ ಖುಷಿಯಾಯಿತು. ವಿಶ್ವ ಪರಂಪರೆಯ ತಾಣವಾದ ಶಿರಾಕಾವಾ – ಗೋ ಬಗ್ಗೆ ಕೇಳಿದ್ದ ಲೇಖಕರು ಅದರ ತಾತ್ವಿಕ ಹಿನ್ನೆಲೆಯನ್ನು ವಿವರಿಸುತ್ತಾ, ಪಾರಂಪರಿಕ ಪ್ರವಾಸೋದ್ಯಮವು ಆ ಸ್ಥಳದ ಪ್ರಸ್ತುತತೆಯನ್ನು ಅಳಿಸಿ ಹಾಕುತ್ತದೆ ಎಂದು ಹೇಳಿದ ಮಾತುಗಳು ಯೋಚಿಸುವಂತೆ ಮಾಡಿದವು.

ಜಪಾನಿನ ಹೋಟೆಲ್ ಗಳ ಬಗ್ಗೆ ಲೇಖಕರು ವಿವರವಾಗಿ ಪರಿಚಯ ಮಾಡಿಕೊಟ್ಟಿದ್ದಾರೆ. ಟಾಯ್ ಮ್ಯೂಸಿಯಂನಲ್ಲಿ ಮಗನೊಟ್ಟಿಗಿನ ಅನುಭವವನ್ನು ಲೇಖಕರು ವಿಶ್ಲೇಷಿಸಿರುವುದನ್ನು ಓದಿದಾಗ ಅದು ಹೇಗಿರಬಹುದು ಎಂದು ಕುತೂಹಲವಾಯಿತು.

ಈ ಭಾಗದಲ್ಲಿ ಆಕರ್ಷ ಅವರು ತಾವು ಕಂಡ ಪ್ರತಿಯೊಂದನ್ನು ವಿವರಿಸುವ ರೀತಿ, ಕೊಡುವ ತಾಂತ್ರಿಕ ವಿವರಣೆಗಳು, ತಾತ್ವಿಕ ಒಳನೋಟಗಳು ವಿಶೇಷ ಎಣನಿಸುತ್ತದೆ. ಈ ಕೃತಿಯಲ್ಲಿರುವ ಎಲ್ಲ ಲೇಖನಗಳು ಕುತೂಹಲದಿಂದ ಓದಿಸಿಕೊಂಡು ಹೋಗುತ್ತವೆ. ಲೇಖಕರಿಬ್ಬರು ತಾವು ಕಂಡಿದ್ದನ್ನು ಹೇಳಿರುವ ರೀತಿ ಸೊಗಸಾಗಿದೆ. ಆ ಸ್ಥಳಗಳ ವಿಶೇಷಗಳು, ಚರಿತ್ರೆಗಳ ಜೊತೆಗೆ ನಿತ್ಯ ಬದುಕನ್ನು ಓದುಗರಿಗೆ ಪರಿಚಯಿಸುವುವ ರೀತಿ ಎಲ್ಲವೂ ಸೊಗಸಾಗಿವೆ, ವಿಶಿಷ್ಟವಾಗಿವೆ.

ಕೃತಿಯ ಬಗ್ಗೆ ಹೇಳಲು ಬರೆಯಲು ಸಾಕಷ್ಟಿದೆ. ಆದರೆ ಓದಿದಾಗ ಆಗುವ ಚೆಂದದ ಅನುಭವವನ್ನು ಬರೆಯುವುದು ಕಷ್ಟ. ತಾಯಿ ಮಗ ಇಬ್ಬರೂ ಕೂಡಿ ಬರೆದರೂ, ಇಬ್ಬರ ಬರಹದ ಶೈಲಿಗಳು ವಿಭಿನ್ನವಾಗಿವೆ, ವಿಶಿಷ್ಟವಾಗಿವೆ. ಈ ಪುಸ್ತಕ ಓದುಗರಿಗೆ ಹೊಸ ಅನುಭವ ಕೊಡುತ್ತದೆ. ಇದು ಪ್ರವಾಸ ಕಥನ ಅಷ್ಟೇ ಅಲ್ಲ, ಅನುಭವ ಕಥನವೂ ಹೌದು.

‍ಲೇಖಕರು Admin

12 August, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading