
ಕನ್ನಡದ ಬಹು ಮುಖ್ಯ ಸಾಹಿತಿ. ಕಾವ್ಯವನ್ನು ಇನ್ನಿಲ್ಲದಷ್ಟು ಪ್ರೀತಿಸುವ ಪ್ರತಿಭಾ ಕಾವ್ಯ ಸಂಬಂಧಿಯಾಗಿ ಅನೇಕ ಪ್ರಯೋಗಗಳನ್ನು ಮಾಡಿ ಕವಿತೆಯ ಸಾಧ್ಯತೆಯನ್ನು ವಿಸ್ತರಿಸಿದ್ದಾರೆ. ಈ ನಿಟ್ಟಿನಲ್ಲಿ ಅನೇಕ ಸಾಹಿತ್ಯ ಸಂಬಂಧಿ ಫೆಲೋಶಿಪ್ ಗಳು ಇವರಿಗೆ ಸಂದಿವೆ.
ಇವರ ಇಲ್ಲಿಯವರೆಗಿನ ಸಮಗ್ರ ಕವಿತೆಗಳ ಗುಚ್ಛ ‘ಪ್ರತಿಭಾ ಕಾವ್ಯ’ ಇವರ ದಶಕಗಳ ಕಾಲದ ಉಸಿರಾಟದ ಗುರುತು. ‘ಇನ್ನು ಹತ್ತು ವರ್ಷದ ನಂತರ ಮತ್ತಿನ್ನೊಂದು ಸಮಗ್ರ ಸಂಗ್ರಹದೊಂದಿಗೆ ಬರುತ್ತೇನೆ’ ಎಂದು ಖಚಿತವಾಗಿ ಹೇಳುವ ಉತ್ಸಾಹಿ. ‘ನಾವು ಹುಡುಗಿಯರೇ ಹೀಗೆ’ಯಿಂದ ಆರಂಭಿಸಿ ‘ಕೌಬಾಯ್ಸ್ ಮತ್ತು ಕಾಮಪುರಾಣ’ವರೆಗೆ ಕನ್ನಡ ಸಾಹಿತ್ಯವನ್ನು ಆವರಿಸಿ ನಿಂತಿರುವ ಪ್ರತಿಭಾ ಪರಿ ಮಾದರಿ.
ಸಂಶೋಧನೆ ಇವರ ಇನ್ನೊಂದು ಮೋಹ. ಸಂಶೋಧನೆಯನ್ನು ಕೈಗೆತ್ತಿಕೊಂಡರೆ ಅದರ ಆಳಕ್ಕೆ ಡೈವ್ ಹೊಡೆಯುವ ಉತ್ಸಾಹ.
ಅಂತಹ ಒಂದು ಅಧ್ಯಯನವನ್ನು ‘ಅವಧಿ’ ನಿಮ್ಮ ಮುಂದಿಡುತ್ತಿದೆ. ಈ ಅಧ್ಯಯನ ಬರಹಗಳ ಈ ಅಂಕಣದಲ್ಲಿ ಬರುವ ಎಲ್ಲಾ ಅಭಿಪ್ರಾಯಕ್ಕೂ ಲೇಖಕರೇ ಜವಾಬುದಾರರು ಎಂದು ಕಾಣಿಸುತ್ತಾ ಈ ಅಂಕಣದ ಎಲ್ಲಾ ಬರಹಕ್ಕೂ ನಿಮ್ಮ ಪ್ರತಿಕ್ರಿಯೆಯನ್ನು ಸ್ವಾಗತಿಸುತ್ತೇವೆ.

ವಂಡಿವಾಸಲ್ ಎನ್ನುವ ತಮಿಳು ಹೆಸರಿನ ಊರನ್ನು ಬ್ರಿಟಿಷರು ವಂಡಿವಾಷ್ ಎಂದು ಬದಲಿಸಿ ಹೇಳುತ್ತಿದ್ದರು. ಸರ್ ಐರ್ ಕೂಟೆ ದಕ್ಷಿಣವನ್ನು ವಶಪಡಿಸಿಕೊಳ್ಳುವ ಮಹದಾಸೆಯಿಂದ ದಂಡೆತ್ತಿಬಂದಾಗ ಹೈದರನ ಸೈನ್ಯಕ್ಕೆ ಪಾಂಡಿಚೆರಿಯ ಫ್ರೆಂಚ್ ಸೈನ್ಯ ಸೇರಿಕೊಂಡು ಕಡಲೂರ್ ಮತ್ತು ಪೆರುಮಾಳ್ ಕೋಯಿಲ್ ಗಳನ್ನು ಸುಲಭವಾಗಿ ಗೆದ್ದುಕೊಂಡಿತು. ನಂತರ ಒಟ್ಟಾಗಿ ವಂದಿವಾಸಲ್ ಮೇಲೆ ಧಾಳಿ ಮಾಡಿದರು. ಕೂಟೆ ಅಲ್ಲಿ ವೀರಾವೇಶದಿಂದ ಕಾದಾಡಿದ. ಅಲ್ಲಿಂದ ಆರಣಿಯ ಕೋಟೆಯಲ್ಲಿ ಹೈದರ್ ಸಂಗ್ರಹಿಸಿಟ್ಟಿದ್ದ ಶಸ್ತ್ರಗಳನ್ನು ವಶಪಡಿಸಿಕೊಳ್ಳಲು ಬಂದ. ರೆಡ್ ಹಿಲ್ಸ್ ನಲ್ಲಿದ್ದ ಹೈದರ್ ತಕ್ಷಣ ಆರಣಿಯ ಕಡೆಗೆ ಧಾವಿಸಿ ಬಂದ.
ಜೂನ್ 2, 1782 ರ ಯುದ್ಧದಲ್ಲಿ ಹೈದರನನ್ನು ಕೋಟೆಯ ಸಮೀಪಕ್ಕೆ ಹೋಗದಂತೆ ತಡೆಮಾಡಲಾಯಿತು. ಆದರೆ ಅವನ ಅಪಾರ ಸೈನ್ಯದ ಮುಂದೆ ಕೂಟೆಗೆ ಹೈದರನನ್ನು ಸೆರೆಹಿಡಿಯುವುದು ಅಸಾಧ್ಯವಾಯಿತು. ಅಂದರೆ ಸೋಲು ಗೆಲುವುಗಳು ಸಮಸಮವಾದಂತಾಗಿ ಕೂಟೆ ಮತ್ತು ಹೈದರ್ ಪರಸ್ಪರರನ್ನು ಕಟ್ಟುಹಾಕಿ ಹಿಡಿದಿದ್ದರು. ಕೂಟೆಗಿಂತ ಹೈದರ್ ವಯಸ್ಸಿನಲ್ಲಿ ಚಿಕ್ಕವನು. ಆದರೆ ಅಂದಿನ ಸ್ಥಿತಿ ಅವನಿಗೆ ಪ್ರತಿಕೂಲವಾಗಿತ್ತು.
ದಿನೇದಿನೇ ಅದು ವಿಷಮವಾಗುತ್ತ ಹೋಗುತ್ತಿತ್ತು. ಯೂರೋಪಿನ ಫ್ರೆಂಚ್ ಮತ್ತು ಬ್ರಿಟಿಷರ ಕದನ ವಿರಾಮ ಘೋಷಣೆಯಾದ್ದರಿಂದ ಭಾರತದಲ್ಲೂ ಫ್ರೆಂಚರು ಬ್ರಿಟಿಷರನ್ನು ಎದುಹಾಕಿಕೊಳ್ಳುವುದನ್ನು ನಿಲ್ಲಿಸಿ ಹೈದರನ ಕೈ ಬಿಟ್ಟರು. ಬ್ರಿಟಿಷರಿಗೆ ಹೈದರನನ್ನು ಸೋಲಿಸದಿದ್ದರೆ ದಕ್ಷಿಣ ಭಾರತವನ್ನು ವಶಪಡಿಸಿಕೊಳ್ಳುವುದು ಅಸಾಧ್ಯ ಎಂದು ಗೊತ್ತಿತ್ತು. ಹಾಗಾಗಿ ಬಾಂಬೆ ಮತ್ತು ಕಲ್ಕತ್ತಾದ ಸಕಲ ಸೈನ್ಯವನ್ನು ಜೊತೆಗೆ ತಮ್ಮ ಪರವಾಗಿದ್ದ ರಾಜರುಗಳನ್ನೆಲ್ಲ ಒಟ್ಟಿಗೆ ಸೇರಿಸಿ ಹೈದರನ ಎದುರು ಬಿದ್ದರು.
1849ರ ದೇವನಹಳ್ಳಿಯ ಯುದ್ಧದಲ್ಲಿ ಅಣ್ಣನ ಜೊತೆಗೆ ಮೊದಲ ಬಾರಿಗೆ ಸೈನ್ಯ ಸೇರಿ ಮುನ್ನೆಲೆಗೆ ಬಂದ ಹೈದರ್ 1767ರ ಹೊತ್ತಿಗೆ – ಕೇವಲ ಹದಿನೆಂಟು ವರ್ಷಗಳಲ್ಲಿ – ಮೈಸೂರು ಸಂಸ್ಥಾನ, ಬೆಂಗಳೂರು, ಆಂಬೂರಿನಿಂದ ಮಧುರೆವರೆಗಿನ ಕರ್ನಾಟಿಕ ಪ್ರದೇಶ, ಬಾರಾಮಹಲ್, ಮಲಬಾರ್, ಸಿರಾ, ಬಳ್ಳಾಪುರ, ಕರಾವಳಿ ಪ್ರದೇಶಗಳನ್ನು ತನ್ನ ವಶಕ್ಕೆ ತೆಗೆದುಕೊಂಡಿದ್ದ. ಬ್ರಿಟಿಷರು ಲೆಕ್ಕ ಹಾಕಿದಂತೆ ಈ ಪ್ರದೇಶಗಳಲ್ಲಿ “ವಿವಿಧ ಗಾತ್ರದ ಸಾವಿರ ಕೋಟೆಗಳು ಇದ್ದವು. ಇವೆಲ್ಲವನ್ನೂ ಹೈದರ್ ಉತ್ತಮ ಸ್ಥಿತಿಯಲ್ಲಿರಿಸಿದ್ದ.”

ಅಕ್ಕಿ, ಆನೆ ಕುದುರೆ ದನ ಕುರಿ ಎಮ್ಮೆ ಆಡು ಇತ್ಯಾದಿಗಳಿಗೆ ಬರವಿಲ್ಲದಂತೆ ಇತ್ತು. ಸದಾ ಕಾಲ ಅವನ ರಿಸರ್ವ್ ನಲ್ಲಿ ಆರುನೂರು ಆನೆಗಳು ಮತ್ತು ಇಪ್ಪತ್ತು ಸಾವಿರ ಕುದುರೆಗಳು ಇದ್ದೇ ಇರುತ್ತಿದ್ದವು. ತನ್ನ ಸೈನ್ಯಕ್ಕೆ ರಾಜ್ಯದ ಎಲ್ಲಾ ಕಡೆಗಳಿಂದ ಆಹಾರ ಮತ್ತು ಇತರ ವಸ್ತುಗಳು ಸರಬರಾಜಾಗುವಂತೆ ಸುವ್ಯವಸ್ಥೆ ಮಾಡಿದ್ದ.
ಜೊತೆಗೆ ಅವನು ಸ್ವತಃ ಶೇಖರಿಸಿದ್ದ ಅಪಾರವಾದ ನಿಧಿಯಿಂದಾಗಿ ಅವನು ಅತ್ಯಂತ ದೀರ್ಘ ಮತ್ತು ದುಬಾರಿ ಖರ್ಚಿನ ಯುದ್ಧಗಳಿಗೆ ಸದಾ ಸಿದ್ಧನಾಗಿದ್ದ. 1767ರಲ್ಲಿ ಹೈದರ್ ಬಳಿ 2 ಲಕ್ಷ ಪದಾತಿಗಳು, ಇಪ್ಪತ್ತೈದು ಸಾವಿರ ಅಶ್ವರೋಹಿಗಳು ಸದಾ ಸಿದ್ಧವಾಗಿರುತ್ತಿದ್ದರು. ಇವರಲ್ಲಿ ಕೋಟೆಗಳು ಮತ್ತು ಗಡಿಪ್ರದೇಶ ಕಾವಲಿಗೆ ಬಿಟ್ಟ ಪಡೆಗಳನ್ನು ಹೊರತುಪಡಿಸಿ ಬ್ರಿಟಿಷರ ವಿರುದ್ಧ ದಂಡೆತ್ತಿ ಹೋಗುವಾಗ ಅವನ ಐವತ್ತರಿಂದ ಐವತ್ತೈದು ಸಾವಿರ ಕಾಲಾಳುಗಳು, ಅದರಲ್ಲಿ ಹದಿನೆಂಟು ಸಾವಿರ ಅಶ್ವರೋಹಿ ಪಡೆ, ಎಂಟುಸಾವಿರ ಮರಾಠರು ಪಂಡಾರಿಗಳ ಪಡೆ ಇರುತ್ತಿತ್ತು.
ಇಪ್ಪತ್ತು ಸಾವಿರ ತೋಪಾಸಿಗಳು ಹದಿನಾರು ಸಾವಿರ ಬಂಧೂಕುಗಳನ್ನು ಹೊತ್ತಿರುತ್ತಿದ್ದರು. ಉಳಿದವರು ಭರ್ಜಿ ಇತ್ಯಾದಿಗಳನ್ನು ಹೊಂದಿರುತ್ತಿದ್ದರು. ಜೊತೆಗೆ ಏಳು ನೂರಾ ಐವತ್ತು ಯುರೋಪಿಯನ್ ಸಿಪಾಯಿಗಳಾಗಿರುತ್ತಿದ್ದರು. ಅರಬರ ಒಂದು ತಂಡ ಬಿಲ್ಲುಬಾಣಗಳನ್ನಿಟ್ಟುಕೊಂಡು ಶ್ರೀರಂಗಪಟ್ಟಣಕ್ಕೆ ಬಂದಿಳಿದು ಸೈನ್ಯ ಸೇರುವ ಕೋರಿಕೆ ವ್ಯಕ್ತಪಡಿಸಿದಾಗ ಹೈದರ್ ಅವರ ಬಿಲ್ಲುಬಾಣಗಳು ಬ್ರಿಟಿಷ್ ಸೈನ್ಯದ ಎದುರು ನಿಷ್ಪ್ರಯೋಜಕ ಎಂದು ಹೇಳಿ ಅವರಲ್ಲಿ ಎರಡು ಗುಂಪು ಮಾಡಿ ಒಂದು ಗುಂಪಿಗೆ ಕೆಂಪು ಸಮವಸ್ತ್ರ ಕೊಟ್ಟು ತನ್ನ ಸವಾರಿಯ ಭಾಗವನ್ನಾಗಿ ಮಾಡಿಕೊಂಡ. ಇನ್ನೊಂದು ಗುಂಪಿಗೆ ನೀಲಿ ಸಮವಸ್ತ್ರ ಕೊಟ್ಟು ತನ್ನ ಯುರೋಪಿಯನ್ ಅಧಿಕಾರಿಗಳ ಪಡೆಯ ಮುಖ್ಯಸ್ಥನಿಗೆ ಕೊಟ್ಟ. ಅವರು ಹಕ್ಕಿಗಳನ್ನು ಇತರ ಪ್ರಾಣಿಗಳನ್ನು ಬೇಟೆಯಾಡುವುದರಲ್ಲಿ ನಿಸ್ಸೀಮರಾಗಿದ್ದರು. ಹಾಗಾಗಿ ಅವರನ್ನು ಬೇಟೆಗಾಗಿ ಬಳಸಿಕೊಳ್ಳುತ್ತಿದ್ದರು.

1782ರಲ್ಲಿ ಹೈದರ್ ಸಾಯುವ ಹೊತ್ತಿಗೆ ಎಲ್ಲವೂ ಇದರ ದುಪ್ಪಟ್ಟಿಗಿಂತ ಹೆಚ್ಚಾಗಿತ್ತು.ಹೈದರ್ ಅಕಸ್ಮಾತ್ತಾಗಿ ಬೆನ್ನು ಕೆರೆದು ಕೊಂಡಾಗ ಅದು ಹುಣ್ಣಾಗಿ ಸ್ವಲ್ಪ ಕಾಲದಿಂದ ತೊಂದರೆ ಕೊಡುತ್ತಿತ್ತು. ಕೊನೆಯ ಮೂರು ಯುದ್ಧಗಳಲ್ಲಿ ವಿಪರೀತ ದೈಹಿಕ ಆಯಾಸದ ಕಾರಣ ಅದು ಇನ್ನಷ್ಟು ಹೆಚ್ಚಾಯಿತು. ಕೊನೆಗೆ ನೋವು ತಡೆಯಲಾರದೆ ಅವನು ಆರ್ಕಾಟ್ ಗೆ ತೆರಳಿದ. ತಿರುವತ್ತೂರಿನಲ್ಲಿ ಮೊಕ್ಕಾನ್ ಮಾಡಿ ವೈದ್ಯರಿಂದ ಚಿಕಿತ್ಸೆಪಡೆಯತೊಡಗಿದ. ಆ ವೈದ್ಯರು ಅದಕ್ಕೆ ಕಾರಣ ಅಜೀರ್ಣದಿಂದ ಎಂದು ಹೇಳಿ ಪಥ್ಯ ಮಾಡಿಸಿದರು.
ಜೊತೆಗೆ ಹೊಟ್ಟೆ ಸರಿಹೋಗುವ ಔಷಧಗಳನ್ನು ಕೊಟ್ಟರು. ಆದರೆ ಅದು ಫಲಕಾರಿಯಾಗಲಿಲ್ಲ. ಹುಣ್ಣು ದಿನೇದಿನೇ ದೊಡ್ಡದಾಗುತ್ತಾ ಬಂದು ಹೈದರನ ಬಲಿಷ್ಠ ದೇಹವನ್ನು ಕುಗ್ಗಿಸಿತು. ಕೊನೆಗೆ ವೈದ್ಯರು ಅದನ್ನು ಬೆನ್ನುಫಣಿ ಎಂದು ಕರೆದರು. ಅದಕ್ಕೆ ತಕ್ಕ ಪರಿಹಾರ ರಕ್ತಶುದ್ಧಿಗಾಗಿ ಕುರಿಯ ಲಿವರ್ ಸೇವನೆ ಎಂದು ಹೇಳಿ ಅದನ್ನೂ ಪ್ರಯತ್ನಿಸಿದರು.
ಆದರೆ ಬೆನ್ನುಫಣಿ ಎನ್ನುವ ಹೆಸರು ಕೇಳಿದ ಕೂಡಲೇ ಹೈದರನಿಗೆ ತನ್ನ ಅಂತಿಮ ಕಾಲ ಹತ್ತಿರವಾಗಿದೆ ಎನ್ನುವ ಭಾವನೆ ಉಂಟಾಯಿತು.
ಹಾಗೆಂದು ಅವನು ಕೈ ಚೆಲ್ಲಿ ಕೂರಲಿಲ್ಲ, ಕುಗ್ಗಲೂ ಇಲ್ಲ. ಬದಲಿಗೆ ತನ್ನ ರಾಜ್ಯ ಮತ್ತು ಸೈನ್ಯವನ್ನು ಸುವ್ಯವಸ್ಥೆಗೊಳಿಸುವ ಕಡೆಗೆ ಗಮನ ಕೊಟ್ಟ.
ಅಷ್ಟರಲ್ಲಿ ಬೇಹುಗಾರರು ಜನರಲ್ ಕೂಟೆ ತೀರಿಕೊಂಡ ಸುದ್ಧಿ ತಂದರು. ಅದನ್ನು ಕೇಳಿ ಹೈದರ್ ನಿಟ್ಟುಸಿರು ಬಿಟ್ಟು “ಎಂತಹ ಸಮರ್ಥ ಬುದ್ಧಿವಂತ ಮನುಷ್ಯ. ಅವನ ಅನುಭವದ ಆಧಾರದ ಮೇಲೆ ನಮ್ಮ ಜೊತೆ ಸಮಾನ ಸಂಬಂಧ ಇಟ್ಟುಕೊಳ್ಳಬಹುದಿತ್ತು” ಎಂದ.

ಹೈದರ್ ಆ ಸ್ಥಿತಿಯಲ್ಲಿಯೂ ಒಂದೇ ಕಡೆ ಠಿಕಾಣಿ ಹೂಡದೇ ರಾಣೀಪಿತ್, ತಿಮರಿ ಮತ್ತು ಮಹಿಮಾಂಡಲಗರ್ ಗಳಲ್ಲಿ ಸ್ವಲ್ಪ ಕಾಲ ಇದ್ದು ಅಲ್ಲಿಂದ ಪೂನಾಗೆಂದು ಹೊರಟು, ವಿಶ್ರಾಂತಿಗಾಗಿ ಆರ್ಕಾಟಿನ ಬದಿಯಲ್ಲಿ ಡೇರೆ ಹಾಕಿಸಿದ. ಆದರೆ ಅಲ್ಲಿ ಹುಣ್ಣು ಅವನ ಶಕ್ತಿಯನ್ನೆಲ್ಲ ಕುಗ್ಗಿಸಿ ಮನಸ್ಸಿಗೂ ಬೇಸರ ಉಂಟುಮಾಡಿತು. ಕೊನೆಗೆ ಅನಿವಾರ್ಯವಾಗಿ ಅವನು ಹಾಸಿಗೆಯಲ್ಲಿ ಮಲಗಬೇಕಾಯಿತು. ಅವನ ಮಂತ್ರಿಗಳೆಲ್ಲ ಬಂದು ತಕ್ಷಣ ಟೀಪುಸುಲ್ತಾನನಿಗೆ ಹೇಳಿ ಕಳಿಸೋಣಾ ಎಂದು ಹೇಳಿದರು ಹೈದರ್ ಒಪ್ಪದೇ ‘ಯಾಕೆ ಸುಮ್ಮನೆ ನನಗೆ ತೊಂದರೆ ಕೊಡುತ್ತೀರಿ?’ ಎಂದ. ಆದರೆ ಅವರು ಒತ್ತಾಯಿಸಿದಾಗ ಕೊನೆಗೆ ಮುನ್ಷಿಗೆ ಹೇಳಿ ಕಳಿಸಿದ.
ಅವನಿಗೆ ಟೀಪೂವಿಗಾಗಿ ಒಂದು ಪತ್ರ ಬರೆಯಲು ಡಿಕ್ಟೇಟ್ ಮಾಡಿದ. ಅದರಲ್ಲಿ ಟೀಪು ತಾನಿರುವ ಕಡೆ ಎಲ್ಲಾ ಅಗತ್ಯ ವ್ಯವಸ್ಥೆಗಳನ್ನು ಮಾಡಬೇಕೆಂದೂ ನಂತರ ಆದಷ್ಟೂ ಬೇಗ ಹಿಂದಿರುಗಬೇಕೆಂದೂ ತಿಳಿಸಿ, ಸರ್ಕಾರದ ಎಲ್ಲಾ ಸಣ್ಣ ಮತ್ತು ದೊಡ್ಡ ವ್ಯವಹಾರಗಳು, ಸಂಬಂಧಗಳನ್ನು ಸರಿಯಾಗಿ ಪರಿಗಣಿಸಬೇಕು ಹಾಗೂ ಸೈನ್ಯದ ಅಗತ್ಯವಿದ್ದರೆ ತಕ್ಷಣ ಹೇಳಿ ಕಳಿಸಬೇಕು, ಆಡಳಿತಕ್ಕೆ ಸಂಬಂಧಪಟ್ಟ ಸಂಗತಿಗಳನ್ನು ನಿರ್ವಹಿಸಲು ಅವನಿಗೆ ಪೂರ್ಣ ಅಧಿಕಾರವನ್ನು ಕೊಟ್ಟಿರುವೆನೆಂದು, ಯಾವುದೇ ಕ್ಷಣಕ್ಕೂ ಅವನು ಸರ್ಕಾರಕ್ಕೆ ತನ್ನ ಕರ್ತವ್ಯವನ್ನು ಮರೆಯುವುದು ಅಥವಾ ಅಲಕ್ಷಿಸುವುದನ್ನು ಮಾಡಬಾರದೆಂದು ಸ್ಪಷ್ಟವಾಗಿ ತಿಳಿಸಿದ. ಯಾವುದೇ ಕಾರಣಕ್ಕೂ ಬ್ರಿಟಿಷರಿಗೆ ತಲೆಬಗ್ಗಿಸಬಾರದೆಂದೂ ರಾಜ್ಯದೊಳಗೆ ಅವರಿಗೆ ಪ್ರವೇಶಕ್ಕೆ ಅವಕಾಶಕೊಡಲೇ ಬಾರದೆಂದೂ ಕಳಕಳಿಯಿಂದ ಹೇಳಿದ.

ಮಾರನೆಯ ದಿನ ತನ್ನ ಬೊಕ್ಕಸವನ್ನು ತೆರೆದು ಸೈನ್ಯ ಕಚೇರಿ ಮತ್ತು ಅರಮನೆಯ ಎಲ್ಲಾ ಕೆಲಸದವರಿಗೆ ಪ್ರತಿಯೊಬ್ಬರಿಗೂ ಒಂದು ತಿಂಗಳ ಸಂಬಳವನ್ನು ಇನಾಮಾಗಿ ನೀಡಿದ. ತನ್ನ ಕೆಲವು ನಂಬಿಕೆಯ ಮುಖ್ಯಾಧಿಕಾರಿಗಳನ್ನು ಕರೆದು ಅವರ ವಿಭಾಗಗಳನ್ನು ಕಟ್ಟುನಿಟ್ಟಾಗಿ ನಡೆಸುವ ಬಗ್ಗೆ ಗಂಭೀರ ಸೂಚನೆಗಳನ್ನು ಕೊಟ್ಟು ಕಳಿಸಿದ. ಆರ್ಕಾಟಿನ ಉತ್ತರದ ಕಡೆಯ ಪಾಳೇಗಾರರನ್ನು ಅಡಗಿಸಲು ಎರಡು ಸಾವಿರ ಅಶ್ವಾರೋಹಿಗಳನ್ನು ಕಳಿಸಿದ. ಐದು ಸಾವಿರ ಅಶ್ವಾರೋಹಿ ಪಡೆಯನ್ನು ಮದ್ರಾಸಿಗೆ ಕಳಿಸಿದ.
ಹೈದರ್ ನಂತರ ತನ್ನ ಸೇವಕರಿಗೆ ಅಂದಿನ ದಿನ ಯಾವುದು ಎಂದು ಕೇಳಿದಾಗ ಅವರು ಅವತ್ತು ಮೊಹರಮ್ಮಿನ ಮೊದಲ ದಿನ ಎಂದು ತಿಳಿಸಿದರು. ಅದಕ್ಕೆ ಅವನು ತನ್ನ ಸ್ನಾನಕ್ಕೆ ನೀರು ಸಿದ್ಧಮಾಡಲು ಹೇಳಿದ. ವೈದ್ಯರು ಆ ಸ್ಥಿತಿಯಲ್ಲಿ ಅವನು ಸ್ನಾನ ಮಾಡಬಾರದೆಂದು ಕಟ್ಟುನಿಟ್ಟಾಗಿ ಹೇಳಿದರು. ಅದಕ್ಕೆ ಕಿವಿಗೊಡದ ಹೈದರ್ ಸೇವಕರ ನೆರವಿನಿಂದ ಸ್ನಾನ ಮಾಡಿ ಶುಭ್ರ ಉಡುಪು ತೊಟ್ಟುಕೊಂಡ. ನಂತರ ನಮಾಜು ಮಾಡಿದ. ನಂತರ ಸ್ವಲ್ಪ ಗಂಜಿಯನ್ನು ಸೇವಿಸಿ ಮಲಗಿದ. ಆ ರಾತ್ರಿ ಅವನ ಪ್ರಾಣಪಕ್ಷಿ ಹಾರಿಹೋಯಿತು. ಆಗ ಅವನಿಗೆ ಅರವತ್ತೆರಡು ವರ್ಷ ವಯಸ್ಸಾಗಿತ್ತು. ಪರ್ಷಿಯನ್ ಭಾಷೆಯಲ್ಲಿ ಅವನ ಮರಣವನ್ನು ‘ಅಹ್ ಸಿಂಹದ ಗುಂಡಿಗೆಯ ವೀರ ತೀರಿಕೊಂಡ’ ‘ಸಂಸ್ಥಾನದ ಆತ್ಮ ಹಾರಿಹೋಯಿತು’ ಎಂದು ಬರೆದರು.

ಹೈದರನ ಮರಣವನ್ನು ತಕ್ಷಣ ಬಹಿರಂಗಪಡಿಸಲಿಲ್ಲ. ಟೀಪು ಸುಲ್ತಾನ್ ಗೆ ತಕ್ಷಣ ಗೋಪ್ಯವಾಗಿ ಸುದ್ದಿ ತಿಳಿಸಿ ಅವನು ಬರುವವರೆಗೂ ಕಾದರು. ಈ ನಿರ್ಣಯ ತೆಗೆದುಕೊಂಡಿದ್ದು ದಿವಾನ್ ಪೂರ್ಣಯ್ಯ. ಮೊದಲು ಹೈದರನನ್ನು ಕೋಲಾರದಲ್ಲಿ ಆತನ ತಂದೆಯ ಸಮಾಧಿಯ ಪಕ್ಕದಲ್ಲೇ ಮಣ್ಣು ಮಾಡಬೇಕೆಂದು ಕೊಂಡೊಯ್ಯಲಾಗುತ್ತಿತ್ತು. ಆದರೆ ಟೀಪು ಬಂದ ಮೇಲೆ ಹೈದರನ ದೇಹವನ್ನು ಶ್ರೀರಂಗಪಟ್ಟಣಕ್ಕೆ ಕಳಿಸಿ ಅಲ್ಲಿ ಸಮಾಧಿ ಮಾಡಿದ ಮೇಲೆ ಅಲ್ಲಿ ಸುಂದರವಾದ ತೋಟವನ್ನು ನಿರ್ಮಿಸಲಾಯಿತು. ಕೊನೆಗೆ ಅವನ ಪ್ರೀತಿಯ ಪುತ್ರ ಟೀಪು ಸುಲ್ತಾನ್ ದೇಹವನ್ನೂ ಅವನ ಪಕ್ಕದಲ್ಲೇ ಸಮಾಧಿ ಮಾಡಲಾಯಿತು.
ಹೈದರ್ ಸರ್ಕಾರ ಎಂದು ಕರೆದಿದ್ದು ಅರಸರನ್ನು. ತನ್ನನ್ನು ಅವನು ಎಂದಿಗೂ ರಾಜ ಎಂದು ಕರೆದುಕೊಳ್ಳಲಿಲ್ಲ. ಆದರೆ ಟೀಪು ಸುಲ್ತಾನ್ ತನ್ನನ್ನು ಮೈಸೂರಿನ ರಾಜನೆಂದು ಘೋಷಿಸಿಕೊಂಡ. ಅದು ಬೇರೆಯೇ ಕಥೆ. ನನಗೆ ಟೀಪು ಸುಲ್ತಾನನಿಗಿಂತ ಹೈದರನ ವ್ಯಕ್ತಿತ್ವವೇ ಹೆಚ್ಚು ಆಕರ್ಷಕ ವರ್ಣರಂಜಿತ. ಜೊತೆಗೆ ಸಂಕೀರ್ಣ. ಅವನ ಬದುಕು ಮತ್ತು ವ್ಯಕ್ತಿತ್ವಕ್ಕೆ ಇದೊಂದು ಟೀಸರ್ ಮಾತ್ರ.
ಮುಂದೆ ಪೂರ್ತಿ ಪಿಚ್ಚರ್ ಬರಲಿದೆ. ಅವಧಿಗೆ ಮತ್ತು ಓದಿದವರಿಗೆ ಧನ್ಯವಾದಗಳು.







ಅದ್ಭುತವಾದ ಲೇಖನ ಮಾಲೆ ಪ್ರತಿಭಾ. ನಿಮ್ಮ ಬಗ್ಗೆ ಹೆಮ್ಮೆ ಅಧಿಕವಾಯ್ತು. ಧನ್ಯವಾದಗಳು.
Thank you Lalitha