ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಚೇತನ ಸೋಮೇಶ್ವರ ಓದಿದ ನರೇಂದ್ರ ರೈ ಕೃತಿಗಳು

ಅವರು ಕೈ ಕೆಸರು ಮಾಡದೆ ಬರೆಯುವ ಕೃಷಿ ಲೇಖಕರಲ್ಲ…

ಚೇತನ ಸೋಮೇಶ್ವರ

ವೃತ್ತಿಯಿಂದ ಕನ್ನಡ ಪ್ರಾಧ್ಯಾಪಕರೂ, ಪ್ರವೃತ್ತಿಯಿಂದ ಸಾಹಿತಿ – ಪತ್ರಕರ್ತ – ಸಂಪಾದಕ – ಅನುವಾದಕ – ಕವಿ, ಹೀಗೆ ಅನ್ಯಾನ್ಯ ನೆಲೆಗಳಲ್ಲಿ ಖ್ಯಾತಿವೆತ್ತ ಡಾ. ನರೇಂದ್ರ ರೈ ದೇರ್ಲ ಅವರ ‘ಹಳ್ಳಿಯ ಆತ್ಮಕಥೆ’, ‘ಕೊರೊನಾ ನಂತರದ ಗ್ರಾಮ ಭಾರತ’ ಮತ್ತು ‘ಬೇರು ಬದುಕು’ ಎಂಬ ತ್ರಿವಳಿ ಕೃತಿಗಳು ಕಳೆದ ವರ್ಷ ಲೋಕಾರ್ಪಣೆಗೊಂಡವು. ಕ್ರಮವಾಗಿ ಹದಿನೆಂಟು, ಇಪ್ಪತ್ತೊಂದು ಹಾಗೂ ಮೂವತ್ತು ಲೇಖನಗಳ ಸಂಚಯ ಇವಾಗಿದ್ದು ದೇರ್ಲರ ಸಮೃದ್ಧ ಗ್ರಾಮಾನುಭವ, ಕ್ಷೇತ್ರಕಾರ್ಯ, ಪರಿಸರಪ್ರಿಯತೆ ಹಾಗೂ ಕೃಷಿ ತಜ್ಞತೆಗಳಿಗೆ ಕನ್ನಡಿ ಹಿಡಿದಿದೆ.

‘ಕೃಷಿ ಲೇಖಕ’ ರೆಂದೇ ತಮ್ಮನ್ನು ಗುರುತಿಸಿಕೊಳ್ಳಬಯಸುವವರು ನರೇಂದ್ರ ರೈಯವರು. ಈಗಾಗಲೇ ಸಾವಯವ ಕೃಷಿ, ಬೊಗಸೆ ತುಂಬಾ ಬೀಜ, ನೆಲದವರು, ಕೃಷಿ ದೇಸೀ ಚಿಂತನೆ, ಹಸಿರು ಕೃಷಿಯ ನಿಟ್ಟುಸಿರುಗಳು, ಹಸಿರು-ಉಸಿರು, ನೆಲಮುಖಿ, ಬೀಜಧ್ಯಾನ ಕೃತಿಗಳ ಮೂಲಕ ಗ್ರಾಮರಾಜ್ಯದ ಅನಿವಾರ್ಯತೆಯನ್ನು ಪ್ರಬಲವಾಗಿ ಪ್ರತಿಪಾದಿಸುತ್ತಾ ಬಂದ ದೇರ್ಲರ ಹಂಬಲ, ತುಡಿತ, ಕನಸುಗಾರಿಕೆಯ ಸೆಲೆ ಬತ್ತಿಲ್ಲ ಎಂಬ ಸ್ಪಷ್ಟ ಸೂಚನೆ ಈ ಮೂರು ಕೃತಿಗಳಲ್ಲಿ ಎದ್ದು ಕಾಣುತ್ತದೆ. ೨೦೨೦ನೇ ಸಾಲಿನ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ‘ಕನ್ನಡ ಕೃಷಿ ಪುಸ್ತಕ ಪ್ರಶಸಿ’ ‘ಬೇರು ಬದುಕು’ ಕೃತಿಗೆ ಸಂದಿರುವುದು ಉಲ್ಲೇಖನೀಯ.

ನರೇಂದ್ರ ರೈಯವರ ಪ್ರಕಟಿತ ಕೃತಿಗಳು ಮೂವತ್ತು. ಇವುಗಳಲ್ಲಿ ಸರಿಯಾಗಿ ಅರ್ಧದಷ್ಟು ಕೃಷಿಗೇ ಸಂಬಂಧಿಸಿದವು ಎಂಬುದನ್ನು ಪರಿಭಾವಿಸಿದಾಗ ಅವರ ಕೃಷಿಯ ಕುರಿತಾದ ನಿಷ್ಠೆ-ಬದ್ಧತೆಗಳು ಸುವ್ಯಕ್ತ ಅವರ ಪಾಲಿಗೆ ಕೃಷಿ ಅನಿವರ‍್ಯ ಕರ್ಮವಲ್ಲ, ಸಹಜಧರ್ಮ. ಸ್ನಾತಕೋತ್ತರ ಪದವಿಯನ್ನು ದೂರದ ಚೆನ್ನೈಯಲ್ಲಿಯೂ, ಉದ್ಯೋಗ ನಿಮಿತ್ತ ಒಂದಷ್ಟು ವರ್ಷಗಳನ್ನು ಥಳಕಿನ ಮಣಿಪಾಲದಲ್ಲಿಯೂ ಕಳೆಯಬೇಕಾಗಿ ಬಂದ ದೇರ್ಲರು ನಗರದ ಬದುಕಿನ ವಿಸ್ತೃತ ಸಾಧ್ಯತೆಗಳನ್ನೂ ಮಿತಿಗಳನ್ನೂ ಸ್ವಾನುಭವ ಮುಖೇನ ಕಂಡುಂಡವರೇ ಆಗಿದ್ದಾರೆ.

ಹಳ್ಳಿಗಳ ನಕಾರಾತ್ಮಕ ಅಂಶಗಳು ಅವರ ಅರಿವಿಗೆ ಬಾರದೇ ಉಳಿದಿಲ್ಲ. ಆದರೆ ಒಂದು ಆದರ್ಶ ಗ್ರಾಮದ ಕನಸನ್ನು ಕಾಣುತ್ತ ಅದನ್ನು ಸಾಕಾರಗೊಳಿಸುವ ಆಶಯವನ್ನು ಅವರು ಒಂದು ವ್ರತದಂತೆ ನಿರಂತರ ಮಾಡುತ್ತ ಬಂದಿರುವುದು ಗಮನಾರ್ಹವೂ ಶ್ಲಾಘ್ಯವೂ ಆಗಿದೆ. ಈ ನಿಟ್ಟಿನಲ್ಲಿ ಅವರು ಗಾಂಧಿವಾದಿಯೆಂದೇ ಹೇಳಬೇಕು. ಪೂರ್ಣಚಂದ್ರ ತೇಜಸ್ವಿ, ಚೇರ್ಕಾಡಿ ರಾಮಚಂದ್ರ ರಾವ್, ಗಂಗಯ್ಯ ಹೆಗ್ಡೆಯವರಾದಿಯಾಗಿ ನೂರಾರು ಕೃಷಿಕರು, ಪರಿಸರಪ್ರಿಯರ ಒಡನಾಟವನ್ನು ಪ್ರಾಪ್ತಿಸಿಕೊಂಡ ನರೇಂದ್ರ ರೈಯವರು ಕೈ ಕೆಸರು ಮಾಡದೆ ಬರೆಯುವ ಕೃಷಿ ಲೇಖಕರಲ್ಲ; ನಿರಂತರ ಗೆಯ್ಮೆ, ರೈತ ಬಂಧುಗಳೊಂದಿಗಿನ ಸಂವಾದ, ದಣಿವರಿಯದ ಸುತ್ತಾಟ, ಅನುಭವಗಳಿಗಾಗಿನ ತಹತಹಿಕೆ ಅವರನ್ನು ನಾಡಿನ ವಿಶಿಷ್ಟ ಲೇಖಕರನ್ನಾಗಿಸಿದೆ ಎಂದರೆ ಅತಿಶಯೋಕ್ತಿಯಾಗದು.

ಈಗಾಗಲೇ ಸಾಕಷ್ಟು ಮರೆಯಾಗಿರುವ ಗ್ರಾಮೀಣ ಸೊಗಡನ್ನೂ ಸೊಗಸನ್ನೂ ಮುನ್ನೆಲೆಗೆ ತರುವ ಸದಾಶಯದೊಂದಿಗೆ ಸಾಕಷ್ಟು ಲೇಖನ ನುಡಿಚಿತ್ರಗಳನ್ನು ಬರೆಯುತ್ತ ಬಂದಿರುವುದಲ್ಲದೆ, ತಮ್ಮ ಉಪನ್ಯಾಸಗಳ, ಸಂದರ್ಶನಗಳ, ಅಂಕಣ ಬರಹಗಳ ಮೂಲಕ ಗಮನ ಸೆಳೆದಿರುವ ದೇರ್ಲರು, ಶ್ರೀಪಡ್ರೆಯವರು ಸರಿಯಾಗಿಯೆ ಸೂಚಿಸಿರುವಂತೆ ‘ಹಸಿರು ಕ್ಯಾಪ್ಸೂಲ್’ಗಳನ್ನು ತಿನ್ನಿಸುತ್ತಲೇ ಬಂದಿರುವ ಸಹೃದಯಿ ಡಾಕ್ಟರೂ ಆಗಿ ಖ್ಯಾತರಾಗಿದ್ದಾರೆ! ಹಳ್ಳಿಯ ಆಂತರಿಕ ಚೈತನ್ಯ, ಅಂತಃಶಕ್ತಿ, ಧಾರಣ ಶಕ್ತಿ, ಆಹಾರವೈವಿಧ್ಯ, ಶ್ರಮಸಂಸ್ಕೃತಿಗಳನ್ನು ಸಕಾರಣವಾಗಿ ಶ್ಲಾಘಿಸಬಲ್ಲ ದೇರ್ಲರು, ಬದಲಾದ ಹಳ್ಳಿಯ ಪಾಡಿನ ಅರಿವಿಲ್ಲದವರೇನೂ ಅಲ್ಲ.

ಬರಡಾದ ಹೊಲಗದ್ದೆಗಳಿಂದ, ಕ್ಷುದ್ರರಾಜಕೀಯ-ನಕಲಿ ಧಾರ್ಮಿಕತೆಗಳಿಂದ ಬಳಲುತ್ತಿರುವ ವಾಸ್ತವದ ಹಳ್ಳಿ ಅವರ ಪ್ರಜ್ಞಾವಲಯದಲ್ಲಿರುವಂಥದ್ದೇ. ಹಾಗಾಗಿ ಅವರ ಬರಹಗಳಲ್ಲಿ ವ್ಯಕ್ತವಾಗಿರುವುದು ಬರಿಯ ಭಾವುಕತೆಯಲ್ಲ; ಬದಲಾಗಿ ‘ಹಾಲು, ತರಕಾರಿ, ಅಕ್ಕಿಯ ಮೂಲ ಹಳ್ಳಿಯೇ’ ಎಂಬ ಬಲವಾದ, ಯಾರೂ ನಿರಾಕರಿಸಲಾಗದ ತಾತ್ವಿಕತೆಯೇ ಆಗಿದೆ. ಸಮೂಹ ಪ್ರಜ್ಞೆ – ಸಹಕಾರ ತತ್ತ÷್ವಗಳ ಭದ್ರ ಅಡಿಪಾಯದಿಂದ ರೂಪುಗೊಂಡ ಗ್ರಾಮೀಣ ಹಿನ್ನೆಲೆ ಅವರದ್ದಾಗಿರುವುದರಿಂದಲೇ ಅವರ ‘ಹಳ್ಳಿಯ ಆತ್ಮಕಥೆ’ ಊರವರೆಲ್ಲರ ಆತ್ಮಕಥೆಯೂ ಆಗಿ ಮನಮುಟ್ಟುತ್ತದೆ. ಕೇರಳೀಯರೂ ಸಿಂಹಳೀಯರೂ, ಇಲ್ಲಿಯವರೇ ಆಗಿ ಮಾರ್ಪಡುವ ಅಚ್ಚರಿ ಪವಾಡಸದೃಶವಾಗಿ ಸಂಭವಿಸುತ್ತದೆ.

ಯಾರೇ ಆಗಲಿ ತಾವು ತಿನ್ನುವ ಆಹಾರದ ಮೂಲದ ಅರಿವುಳ್ಳವರಾಗಬೇಕೆಂಬುದು ಲೇಖಕರ ಆಶಯ. ಅದಿಲ್ಲದವನು ಗ್ರಾಹಕ ಮಾತ್ರ; ಬಳಕೆದಾರನಲ್ಲ ಎನ್ನುತ್ತ, ಬಿಸಿಲುತಾಗದ, ನೆರಳಲ್ಲೇ ಉಳಿಯುವ, ಬೆವರದ, ದೇಹಶ್ರಮ ಇಲ್ಲದ ನಗರ ಜೀವನಶೈಲಿ ಶರೀರವನ್ನು ಜಡಗೊಳಿಸುತ್ತದೆ. ಕೊರೊನಾ ಸಂದರ್ಭ ಅನಿವರ‍್ಯವಾಗಿ ವಲಸೆ ಏರ್ಪಟ್ಟಾಗ ಪಡಿಪಾಟಲು ಪಟ್ಟವರು ಮೂಲ ನಗರ ವಾಸಿಗಳೇ ಎಂಬ ಸತ್ಯವನ್ನು ಹೊರಗೆಡಹಿದ್ದಾರೆ. ಶುದ್ಧನೀರು, ಸ್ವಚ್ಛಗಾಳಿ, ವಿಷರಹಿತ ಹಾಲು, ತರಕಾರಿ, ಅನ್ನ, ನಿರ್ಮಲ ಸಂಪನ್ನ ಪ್ರೀತಿಯೇ ವರ್ತಮಾನದ ಬಹುದೊಡ್ಡ ಸುಖ.

ಈ ಸುಖಾನುಭವ ಹೊಂದಬೇಕಾದರೆ, ಸಾಲ-ಬಡತನ-ಮಣ್ಣಿನ ಮನೆ- ಕಾಲಿನ ಕೆಸರು – ಗಂಜಲದ ವಾಸನೆ – ಬರಿಗಾಲ ಓಡಾಟ, ಇವ್ಯಾವುದೂ ಅವಮಾನವಲ್ಲ ಎಂದು ಭಾವಿಸುವ ಮನೋಧರ್ಮವೂ ಅನಿವರ‍್ಯವೆನ್ನುತ್ತಾರೆ. ಕೊರೊನಾ ಆರ್ಭಟಕ್ಕೆ ಮಹಾನಗರಗಳೇ ತತ್ತರಿಸಿ ಹೋಗಿದ್ದಾಗ, ಹಳ್ಳಿಯ ಜೀವನ ಲಯ ಅಷ್ಟಾಗಿ ಕೆಡದಿದ್ದುದನ್ನು ಅವರು ಗಮನಿಸುತ್ತ, ರೈತಾಪಿವರ್ಗ ಈ ಅವಧಿಯಲ್ಲಿ ಹೆಚ್ಚು ಕ್ರಿಯಾಶೀಲವಾಗಿರುವುದನ್ನು ಸಂಭ್ರಮದಿಂದ ಉಲ್ಲೇಖಿಸುತ್ತಾರೆ. ಬಯಲುಸೀಮೆಯ ಕೃಷಿ ವಿನ್ಯಾಸಕ್ಕೂ ಕರಾವಳಿ – ಮಲೆನಾಡುಗಳ ಕೃಷಿ ವಿನ್ಯಾಸಕ್ಕೂ ಇರುವ ವ್ಯತ್ಯಾಸವನ್ನು ನಿಚ್ಚಳವಾಗಿ ಗುರುತಿಸುತ್ತ, ಈ ಕಾರಣಕ್ಕೇ ಟೊಮೊಟೋ ಆಲೂಗಡ್ಡೆ ಬೆಳೆಗಾರರು ಸೋತ ಸಂದರ್ಭಗಳಲ್ಲಿ ಅಡಿಕೆ – ರಬ್ಬರ್ ಕೃಷಿಕರು ತಕ್ಕಮಟ್ಟಿಗೆ ನಿರಾಳವಾಗಿದ್ದುದನ್ನು ಗುರುತಿಸುತ್ತಾರೆ.

ನಗರವಾಸಿಗಳು ಹಳ್ಳಿಗೆ ಮರಳಿ ಕೃಷಿಯತ್ತ ಒಲವು ತೋರಿದ್ದು, ದುಂದುವೆಚ್ಚ-ಆಡಂಬರ ಕಡಿಮೆ ಮಾಡಿಕೊಂಡದ್ದು, ಕೊರೊನಾದಿಂದ ಆದ ಲಾಭವೆಂದಿದ್ದಾರೆ. ಕೊರೊನಾ ಹಾವಳಿ ನಿಯಂತ್ರಣಕ್ಕೆ ಬಂದಾಗ ಈ ವಲಸಿಗರ ಆದ್ಯತೆ ಯಾವುದಕ್ಕಿರಬಹುದೆಂದು ಊಹಿಸುವುದು ಕಷ್ಟವಾಗದು!

ಪ್ರಶಸ್ತಿ ಪುರಸ್ಕೃತ ಕೃತಿ ‘ಬೇರು ಬದುಕು’ ‘ವಿಜಯವಾಣಿ’ ದೈನಿಕದಲ್ಲಿ ಪ್ರಕಟಗೊಂಡ ಅಂಕಣ ಬರಹಗಳಲ್ಲಿ ಆಯ್ದ ಮೂವತ್ತನ್ನು ಸಂಕಲಿಸಿದ್ದಾಗಿದ್ದು, ವಸ್ತುವೈವಿಧ್ಯ ಹಾಗೂ ಮಾನವೀಯ ಸ್ಪಂದನದ ಕಾರಣದಿಂದ ಮಹತ್ವದ್ದಾಗಿದೆ. ಪ್ರವಾಹದ ಬವಣೆ, ಬಹುಧಾನ್ಯ ಬಹುತ್ವ, ಅನ್ನದ ಬಟ್ಟಲಿಗೆ ಬಿದ್ದ ವಿಷ, ಕೃಷಿಕರ ಸಮಯಕ್ಕೂ ಬೆಲೆಯಿದೆ, ರೈತರ ಆತ್ಮಹತ್ಯೆ, ನದಿ ತಿರುವು, ಅನ್ನ ಅನ್ನ ಅನ್ನ, ಕಾಡುವಾಸಿಗಳಿಬ್ಬರ ಕತೆ| ಹೀಗೆ ವಿಭಿನ್ನ ಶೀರ್ಷಿಕೆಗಳಲ್ಲಿ ವಿಸ್ತರಿಸಲ್ಪಟ್ಟ ಬರಹಗಳು ಮನೋವೇಧಕವಾಗಿದೆ.

ಜೇನು ಸಾಕಣೆಯ ಮೂಲಕ ಹಳ್ಳಿಯಲ್ಲೇ ಸಮೃದ್ಧ ಬದುಕು ಕಟ್ಟಿಕೊಂಡ ಮನಮೋಹನ ಯಶೋಗಾಥೆ; ಐಟಿಯಿಂದ ಮೇಟಿಗೆ ಒಲಿದ ವಸಂತ ಕಜೆಯವರ ‘ಮನೆಯಿಂದ ಕೆಲಸ ಅಲ್ಲ ಮನೆಯೇ ಕೆಲಸ’ ಎಂಬ ತಾತ್ವಿಕತೆ, ತನ್ಮೂಲಕ ಸಿದ್ಧಿಸಿಕೊಂಡ ಕೌಟುಂಬಿಕ ಸೌಖ್ಯ, ಹಳ್ಳಿಯ ಬೇರುಗಳನ್ನು ಮರೆಯದ ನಾಗೇಶ್ ಹೆಗಡೆ, ನಿರಂಜನ ವಾನಳ್ಳಿಯವರ ಸ್ಫೂರ್ತಿದಾಯಕ ವ್ಯಕ್ತಿತ್ವ ; ‘ಅಡಿಕೆ ಪತ್ರಿಕೆ’ ಯಂಥಾ ಪತ್ರಿಕೆಗಳ ಮಹತ್ವ ; ‘ಮಿರಾಸು’ ಎಂಬ ಒದಗು ಸಂಪ್ರದಾಯದ ಧಾನ್ಯ ಹಂಚೋಣ ವೈಖರಿ – ಹೀಗೆ ಎಷ್ಟೆಷ್ಟೋ ಇವೆ. ಓದಿಯೇ ಸ್ವಾರಸ್ಯ ಸವಿಯಬೇಕಾಗಿದೆ.

ಈ ಕೃತಿಗಳುದ್ದಕ್ಕೂ ದೇರ್ಲರು ಎತ್ತಿರುವ ಮೂಲಭೂತ ಪ್ರಶ್ನೆಗಳು ಅವಲೋಕನಗಳು ಓದುಗರದ್ದೂ ಆಗಿ ಕಾಡುತ್ತವೆ ;
‘ಕೃಷಿ ಪ್ರೀತಿಯ, ಹಳ್ಳಿಯಲ್ಲೇ ಉಳಿಯಿರಿ ಎನ್ನುವ, ಅನ್ನ ಸ್ವಾವಲಂಬನೆಯ ಒಂದೇ ಒಂದು ಪಾಠ ನಮ್ಮ ಸಿಲೆಬಸ್‌ನಲ್ಲಿ ಇದ್ದಂತಿಲ್ಲ’.
‘ರೈತನಿಗೆ ಇಂದಿಗೂ ತಾನು ಬೆಳೆದ ಬೆಳೆಯ ಬೆಲೆ ನಿರ್ಧಾರದ ಹಕ್ಕಿಲ್ಲ.ʼ
‘ಕೃಷಿಕನಿಗೆ ಹೆಣ್ಣು ದೊರೆಯುವುದಿಲ್ಲ.’
‘ರೈತರ ಯಶೋಗಾಥೆ ಯಾಕೆ ಮುನ್ನೆಲೆಗೆ ಬರುವುದಿಲ್ಲ? ಇತರ ಎಲ್ಲಾ ಪ್ರಕಾರಗಳಲ್ಲಿ ಪ್ರಶಸ್ತಿ ಇರುವಂತೆ ರೈತರಿಗೆ ಶ್ರೇಷ್ಠ ಮಟ್ಟದ ಪ್ರಶಸ್ತಿ ಯಾಕೆ ಇಲ್ಲ? ಸಾಧಕರ ಪ್ರತಿಮೆಗಳನ್ನು ನಿರ್ಮಿಸಿ, ಅವರ ಹೆಸರುಗಳನ್ನು ರಸ್ತೆಗಳಿಗೆ ಇರಿಸಿ ಗೌರವ ತೋರಿರುವಂತೆ ರೈತರನ್ನು ಯಾಕೆ ಗುರುತಿಸಿಲ್ಲ? ಅವರದ್ದು ಸಾಧನೆಯಲ್ಲವೆ?ʼ ಈ ಎಲ್ಲ ಜಿಜ್ಞಾಸೆಗಳು ಸ್ವತಃ ರೈತರೇ ಆಗಿರುವ ನರೇಂದ್ರ ರೈಯವರ ಅಂತರಾಳದಿಂದ ಮೂಡಿ ಬಂದು ಕಾಡುತ್ತವೆ. ಹಾಗಾಗಿಯೇ ಈ ಕೃತಿಗಳು ಮಹತ್ವಪೂರ್ಣವಾಗಿವೆ.

‍ಲೇಖಕರು Admin

28 September, 2021

ನಿಮಗೆ ಇವೂ ಇಷ್ಟವಾಗಬಹುದು…

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading