ಪ್ರೇಮಾ ಹೂಗಾರ
ಬಂದುಬಿಡು ನೀನೊಮ್ಮೆ ನಾ ಮನಸಾರೆ ಅತ್ತು ಬಿಡುವೆ ಸಾಕಿ
ಬಂದ ಬಂಧುಗಳೆಲ್ಲ ಸುಳ್ಳೆಂದು ಎದೆತಟ್ಟಿ ಹೇಳಿ ಬಿಡುವೆ ಸಾಕಿ
ಕಂದಿಲಿಗೆ ಬೆಳಕು ಕಾಯುವಾಗ ಚಂದ್ರನಿಗೆ ಬಿದ್ದ ಕನಸು ಹೇಗೆ ಹೇಳಲಿ
ಏಕತಾರಿಗಳೆಲ್ಲ ಉಸಿರು ಗಟ್ಟುವಾಗ ಹೇಗೆ ಸಾಂತ್ವನ ನೀಡುವೆ ಸಾಕಿ
ವಿಧಿ ಬರೆಯದ ಹಣೆ ಬರಹದಲ್ಲೂ ನಿನ್ನೆ ನಾ ಬರೆದುಕೊಂಡಿದ್ದೆ
ಜಾತಕಗಳೆಲ್ಲ ಸೂತಕದ ಮನೆ ಏರುವ ಮುನ್ನ ನಾ ಅತ್ತು ಬಿಡುವೆ ಸಾಕಿ

ತೂತು ಬಿದ್ದ ಈ ಫಕೀರಳ ಜೋಳಿಗೆಯಲ್ಲಿ ಪ್ರೀತಿ ಸೋರುತಿದೆ
ಕರುಳು ಕಿವುಚುವ ಆ ನಗೆ ಕೊಟ್ಟುಬಿಡು ಈ ಉಸಿರೇ ಕೊನೆ ಮಾಡುವೆ ಸಾಕಿ
ಹೆಣಲಿನ ನೆಪದಲ್ಲಿ ತಲೆಯಲ್ಲಾ ಓಡಾಡಿದ ಆ ಬೆರಳ ತುಡಿತ ಇನ್ನೆಲ್ಲಿ
ತೊಡೆಗೆ ತಾಕಿದ ಭುಜಗಳಿಗೆ ಲೆಕ್ಕ ಕೊಡದ ನೀ ಎಲ್ಲಿ ಓಡುವೆ ಸಾಕಿ
ನಿನ್ನ ತಬ್ಬಿ ಬಂದ ಆ ಗಾಳಿಗೆ ಒಂದಷ್ಟು ಸಂಸ್ಕಾರ ಕಲಿಸಿ ಬಿಡು
ಅಪ್ಪಣೆ ಇಲ್ಲದೆ ಈ ‘ಪ್ರೇಮಾ’ ಒಲಿಯುವುದಿಲ್ಲವೆಂದು ನುಡಿವೆ ಸಾಕಿ






ಪ್ರೇಮಾ ಹೂಗಾರರ
ಗಜಲ್… ತುಂಬಾ ಚೆನ್ನಾಗಿದೆ