
ಎನ್ ಎಸ್ ಶ್ರೀಧರ ಮೂರ್ತಿ
ಕನ್ನಡದಲ್ಲಿ ವಿಭಿನ್ನ ಮಾದರಿಯ ಬರವಣಿಗೆಗಳನ್ನು ಮಾಡಿ ಗಮನ ಸೆಳೆದಿರುವ ಹಿರಿಯ ಬರಹಗಾರ ಕೆ.ಸತ್ಯನಾರಾಯಣ ಅವರ ಇತ್ತೀಚೆಗೆ ಪ್ರಕಟವಾದ ಕೃತಿ ‘ಅವರವರ ಭವಕ್ಕ ಓದುಗರ ಭಕುತಿಗೆ’. ಇದು ಕನ್ನಡದ ಏಳು ಪ್ರಮುಖ ಬರಹಗಾರರಾದ ಗೋಪಾಲಕೃಷ್ಣ ಅಡಿಗರ ‘ನೆನಪಿನ ಗಣಿಯಿಂದ’ ಯು.ಆರ್.ಅನಂತ ಮೂರ್ತಿಯವರ ‘ಸುರುಗಿ’ ಎಸ್.ಎಲ್.ಭೈರಪ್ಪನವರ ‘ಭಿತ್ತಿ’, ಗಿರೀಶ್ ಕರ್ನಾಡ್ ಅವರ ‘ಆಡಾಡುತ ಆಯುಷ್ಯ’ ಪಿ.ಲಂಕೇಶ್ ಅವರ ‘ಹುಳಿ ಮಾವಿನ ಮರ’ ಸಿದ್ದಲಿಂಗಯ್ಯನವರ ‘ಊರುಕೇರಿ’ ಮತ್ತು ಪೂರ್ಣ ಚಂದ್ರ ತೇಜಸ್ವಿಯವರ ‘ಅಣ್ಣನ ನೆನಪುಗಳು’ ಹೀಗೆ ಏಳು ಕೃತಿಗಳ ಮೂಲಕ ಆತ್ಮಕಥಾನಕದ ಪರಿಕಲ್ಪನೆಯನ್ನು ಚರ್ಚಿಸುವ ಪ್ರಯತ್ನ.
ಈ ಏಳು ಕೃತಿಗಳಲ್ಲಿ ತೇಜಸ್ವಿಯವರ ಕೃತಿಯೊಂದನ್ನು ಹೊರತು ಪಡಿಸಿದರೆ ಉಳಿದ ಆರೂ ಕೂಡ ಲೇಖಕರ ಅನುಭವಗಳನ್ನು ದಾಖಲಿಸುವ ಪ್ರಯತ್ನಗಳು. ಸತ್ಯನಾರಾಯಣ್ ಈ ಏಳು ಕೃತಿಗಳನ್ನು ಪ್ರಾತಿನಿಧಿಕವಾಗಿ ಆರಿಸಿ ಕೊಂಡಿದ್ದರೂ ಇನ್ನೂ ಅನೇಕ ಕೃತಿಗಳನ್ನು ಪ್ರಾಸಂಗಿಕವಾಗಿ ಉಲ್ಲೇಖಿಸಿದ್ದಾರೆ. ಅವರ ಉದ್ದೇಶ ಸಮೀಕ್ಷೆಯಲ್ಲ ಬದಲಾಗಿ ಒಂದು ತಾತ್ವಿಕತೆಯನ್ನು ಚರ್ಚಿಸುವುದು ಈ ಪ್ರಯತ್ನವೇ ಕೃತಿಯ ನೆಲೆಯನ್ನು ವಿಸ್ತಾರಗೊಳಿಸಿದೆ.
ಕೃತಿಯ ಮೊದಲ ಮೂರು ಅಧ್ಯಾಯಗಳು ಮತ್ತು ಅನುಷಂಗಿಕವಾಗಿ ನಾಲ್ಕನೇ ಅಧ್ಯಾಯ ಕೂಡ ಆಯ್ಕೆ ಮಾಡಿಕೊಂಡ ಕೃತಿಗಳ ಸುತ್ತ ಬೆಳೆಯುವುದಿಲ್ಲ. ಆತ್ಮಕತೆ ಎನ್ನುವ ತಾತ್ವಿಕತೆಯನ್ನು ಪರಿಶೀಲಿಸಲು ಪ್ರಯತ್ನಿಸುತ್ತದೆ. ಮೊದಲಿಗೆ ಈಗಾಗಲೇ ನಾಲ್ಕು ಭಾಗಗಳಲ್ಲಿ ತಮ್ಮದೇ ಆದ ವಿಭಿನ್ನ ಶೈಲಿಯಲ್ಲಿ ಅನುಭವಗಳನ್ನು ದಾಖಲಿಸಿರುವ ಸತ್ಯನಾರಾಯಣ್ ತಮ್ಮ ಅನುಭವದ ನೆಲೆಯಲ್ಲಿಯೇ ಆತ್ಮಕಥೆಯ ಸಾಧ್ಯತೆಗಳನ್ನು ಚರ್ಚಿಸುತ್ತಾರೆ.
ಜೊತೆಗೆ ‘ಇವರೆಲ್ಲಾ ನಮ್ಮ ಕಾಲದಲ್ಲಿಯೇ ಬದುಕಿದವರು, ನಮ್ಮನ್ನು ರೂಪಿಸಿದವರು ಮಾತ್ರವಲ್ಲ ರೂಪುಗೊಂಡವರೂ ಕೂಡ, ಇವರೆಲ್ಲಾ ನಮ್ಮ ಕಾಲವನ್ನು ಹೇಗೆ ನೋಡಿದರು’ ಎನ್ನುವ ಸಾಂಸ್ಕೃತಿಕ ನೆಲೆಯನ್ನೂ ಕೂಡ ತಮ್ಮ ಪ್ರಯತ್ನಕ್ಕೆ ತಂದು ಕೊಳ್ಳುತ್ತಾರೆ. ಎರಡನೇ ಅಧ್ಯಾಯ ಆತ್ಮಕತೆಗಳ ಸಾಧ್ಯತೆಯ ಕುರಿತೇ ಹಲವು ಮುಖ್ಯವಾದ ಪ್ರಶ್ನೆಗಳನ್ನು ಎತ್ತುತ್ತದೆ. ತಾನು ಮಾಡುತ್ತಿರುವ ಬರವಣಿಗೆ ತನಗೂ ಇಲ್ಲವೆ ಓದುಗರಿಗೆ ಮಾತ್ರವೋ ಎನ್ನುವುದು ಇಲ್ಲಿನ ಗಮನಿಸ ಬೇಕಾದ ಪ್ರಶ್ನೆ.

ಪುರಾತನ ಚೀನಿ, ಗ್ರೀಕ್ ಬರವಣಿಗೆಯಲ್ಲಿ ಕೂಡ ‘ಆತ್ಮ ನಿವೇದನೆ’ಯ ಗುಣ ಇರುವುದನ್ನು ಸತ್ಯನಾರಾಯಣ್ ಗುರುತಿಸಿ ಡಿ.ವಿಜಿಯವರ ‘ಜ್ಞಾಪಕ ಚಿತ್ರಶಾಲೆ’ ನವರತ್ನ ರಾಮರಾಯರ ‘ಕೆಲವು ನೆನಪುಗಳು’ ಕುವೆಂಪು ಅವರ ‘ನೆನಪಿನ ದೋಣಿಯಲ್ಲಿ’ಯ ಸಾಧ್ಯತೆಯನ್ನು ಇಲ್ಲಿ ಗಮನಿಸುತ್ತಾರೆ. ಈ ಹಿನ್ನೆಲೆಯಲ್ಲಿ ತಾವು ಆರಿಸಿಕೊಂಡ ಏಳು ಆತ್ಮಚರಿತ್ರೆಗಳನ್ನು ‘ಸಾಹಿತ್ಯಿಕ’ ಆತ್ಮ ಕಥನಗಳೆಂದೇ ಗುರುತಿಸುತ್ತಾರೆ. ಆತ್ಮ ಚರಿತ್ರೆ ಕುರಿತ ಮೀಮಾಂಸೆ ಇರಲಿ ಈ ಪ್ರಕಾರವೇ ಭಾರತೀಯರಿಗೆ ಒಗ್ಗುವುದಿಲ್ಲ. ಇದು ಮೂಲಭೂತವಾಗಿ ಪಶ್ಚಿಮರಿಗೆ ಒಗ್ಗುವ ಪ್ರಕಾರ ಎನ್ನುತ್ತಾ ಇಂಗ್ಲೀಷ್ ಭಾಷೆಯಲ್ಲಿ ಕೂಡ Autobiography ಎಂಬ ಪದ ಬಳಕೆಗೆ ಬಂದಿದ್ದು ೧೮೦೯ರಲ್ಲಿ ಎನ್ನುವುದನ್ನು ಗುರುತಿಸುತ್ತಾರೆ. ನೈಪಾಲ್ ಅವರ ತಾತ್ವಿಕತೆ ಕೂಡ ಇಲ್ಲಿ ಚರ್ಚಿತವಾಗಿದೆ.
ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದ ನಾಯಕರು ಆತ್ಮಚರಿತ್ರೆ ಬರೆದ ಕಾರಣಗಳನ್ನು ಚರ್ಚಿಸುತ್ತಾ ಈ ಕಾಲಘಟ್ಟದವರಾ ಬಿ.ಆರ್.ಅಂಬೇಡ್ಕರ್ ಏಕೆ ಆತ್ಮ ಚರಿತ್ರೆಯನ್ನು ಬರಯಲಿಲ್ಲ ಎನ್ನುವ ಕುತೂಹಕಲಕರ ಪ್ರಶ್ನೆಯನ್ನು ಎತ್ತುತ್ತಾರೆ. ಕೊನೆಗೂ ಜೀವನ ಚರಿತ್ರೆ ಇರಲಿ, ಆತ್ಮಚರಿತ್ರೆ ಇರಲಿ ಎಲ್ಲವೂ ಕಟ್ಟುವಂತಹದೇ ಕಥನಗಳಲ್ಲಿ ಕೂಡ ಆತ್ಮಚರಿತ್ರೆ ಹುಡುಕ ಬಹುದು ಎಂದು ಸತ್ಯನಾರಾಯಣ್ ಗುರುತಿಸುತ್ತಾರೆ. ಇನ್ನೊಂದು ಬಹಳ ಮುಖ್ಯವಾದ ವಿಚಾರ ಆತ್ಮಚರಿತ್ರೆಯನ್ನು ಓದುವವರು ಯಾರು? ಎಲ್ಲಾ ಆತ್ಮಚರಿತ್ರೆಕಾರರಿಗೂ ಓದುಗರಿಂದ ನ್ಯಾಯ ಬೇಡುವ ಪ್ರವೃತ್ತಿ ಇದ್ದೇ ಇರುತ್ತದೆ. ತಾವು ಮಾತ್ರ ಹೆಚ್ಚು ಅನುಕಂಪಕ್ಕೆ, ಪ್ರೀತಿಗೆ ಅರ್ಹರು ಎಂದು ಬರವಣಿಗೆಯಲ್ಲಿ ಸ್ಥಾಪಿಸುವ ಉದ್ದೇಶವೂ ಇರುತ್ತದೆ.
ಮಹಾತ್ಮ ಗಾಂಧಿ, ಟಾಲಸ್ಟಾಯ್ ಅವರ ಆತ್ಮಕತೆಗಳ ಸಾಧ್ಯತೆಗಳ ಜೊತೆಗೆ ಸರ್.ಎಂ.ವಿ, ಮಿರ್ಜಾ ಇಸ್ಮಾಯಿಲ್ ಅವರ ಪ್ರಯತ್ನಗಳನ್ನೂ ಕೂಡ ಗುರುತಿಸಿ ತಾತ್ವಿಕತೆ ಕಟ್ಟುವ ಪ್ರಯತ್ನ ಮಾಡುತ್ತಾರೆ. ಇಲ್ಲಿರುವುದು ಓದುಗರ ನಿರೀಕ್ಷೆಯ ಪ್ರಶ್ನೆ. ಅದನ್ನು ತಪ್ಪಿಸಿ ಕೊಳ್ಳಲು ಸಾಧ್ಯವಾಗುತ್ತದೆಯೇ ಎನ್ನುವುದು ಕೂಡ ಕುತೂಹಲದ ಸಂಗತಿ. ಇಲ್ಲಿನ ಆಯ್ಕೆಗಳಲ್ಲಿ ಕೂಡ ಅಡಿಗರಿಗೆ ಆತ್ಮಚರಿತ್ರೆಯ ಕುರಿತು ಅಂತಹ ಉತ್ಸಾಹವಿಲ್ಲ. ಸಿದ್ದಲಿಂಗಯ್ಯನವರು ಅದರ ಕಾರಣವಿವರಿಸಿದೆ ನೇರವಾಗಿ ಬರವಣಿಗೆಗೆ ತೊಡಗುತ್ತಾರೆ. ಭೈರಪ್ಪನವರಿಗೆ ದೃಷ್ಟಿಕೋನ ಮುಖ್ಯವಾಗುತ್ತದೆ.
ಲಂಕೇಶ್ ಒಲವಿರುವುದು Moral Ambivalence ನೆಲೆಗಳನ್ನು ಹುಡುಕುವಲ್ಲಿ, ಅನಂತಮೂರ್ತಿಯವರ ಆತ್ಮಕತೆ ಹೇಳಿ ಬರೆಸಿದ್ದಾದ್ದರಿಂದ ಪರಿಷ್ಕರಣೆ, ಸಂಪಾದನೆಯ ಹಂತಗಳನ್ನು ದಾಟಿ ಬಂದಿದೆ, ತೇಜಸ್ವಿಯವರ ಅಣ್ಣನ ನೆನಪು ಒಂದು ರೀತಿಯಲ್ಲಿ ಹಲವು ಪ್ರಕಾರಗಳ ಮಿಶ್ರಣ, ಕಾರ್ನಾಡರು ತಮ್ಮ ಬರವಣಿಗೆ ಉದ್ದೇಶದ ಕುರಿತು ಸೂಚನೆಯನ್ನೂ ಕೊಡುವುದಿಲ್ಲ ಎಂದು ಗುರುತಿಸುತ್ತಾ ಹೋಗುವ ಸತ್ಯನಾರಾಯಣ್ ಒಟ್ಟಿನಲ್ಲಿ ಆತ್ಮಚರಿತ್ರೆ ಏಕೆ ಬರೆಯ ಬೇಕು ಎನ್ನುವ ಪ್ರಶ್ನೆ ಹೇಗೆ ಬರೆಯ ಬೇಕು ಎಂದು ಬದಲಾಗುತ್ತದೆ ಎಂಬ ಸಮೀಕರಣದಲ್ಲಿ ಈ ಪ್ರಕ್ರಿಯೆಯನ್ನು ನಿಲ್ಲಿಸುತ್ತಾರೆ.
ಆತ್ಮಚರಿತ್ರೆಯಲ್ಲಿ ದಾಖಲಾಗಿರುವ ಬಾಲ್ಯದ ಕುರಿತು ನೋಡುವುದಾದರೆ ತೇಜಸ್ವಿಯವರ ಬರಹದಲ್ಲಿ ಕುವೆಂಪು ಅವರ ಚಿತ್ರ ಚೇತೋಹಾರಿಯಾಗಿ ಮೂಡಿ ಬಂದಿದೆ, ‘ಭಿತ್ತಿ’ಯ ಬಾಲ್ಯ ಪ್ರಪಂಚ ವೈಶಿಷ್ಟ್ಯವಾದದ್ದು ಇಲ್ಲಿ ಸವಾಲುಗಳೂ ಕೂಡ ಇದೆ. ಕಾರ್ನಾಡರ ಬಾಲ್ಯದ ದಾಖಲಾತಿಯಲ್ಲಿ ಸಂಧಿಗ್ಧದ ಸೂಚನೆಗಳಿವೆ, ‘ಊರುಕೇರಿ’ಯಲ್ಲಿ ಕಾಲಾನುಕ್ರಮಣ ನಿರೂಪಣೆ ಇಲ್ಲ. ಅನಂತ ಮೂರ್ತಿಯವರ ಬರವಣಿಗೆಯಲ್ಲಿ ಬದುಕು ಒಂದು ನಿರ್ದಿಷ್ಟ ದಿಕ್ಕಿನಲ್ಲಿ ಚಲಿಸಲು ಎಲ್ಲಾ ರೀತಿಯ ಪೂರಕ ಬೆಳವಣಿಗೆಗಳೂ ಬಾಲ್ಯದಲ್ಲಿಯೇ ನಡೆದಿದೆ ಎಂಬ ಪ್ರಜ್ಞಾಪೂರ್ವಕ ಭಾವವಿದೆ.

ಅಡಿಗರ ದಾಖಲಾತಿಯಲ್ಲಿ ಬಾಲಕನ ದೃಷ್ಟಿಕೋನ, ಮನೋಧರ್ಮದ ಮೂಲಕವೇ ಬಾಲ್ಯ ದೊರಕುತ್ತದೆ. ಲಂಕೇಶರಲ್ಲಿ ಗ್ರಹಿಕೆಗೆ ಮಹತ್ವ ಸಿಕ್ಕಿದೆ. ಹೀಗೆ ಸತ್ಯನಾರಾಯಣ್ ಬರಹಗಳ ವ್ಯತ್ಯಾಸವನ್ನು ಸೂಕ್ಷ್ಮವಾಗಿ ಗಮನಿಸಿ ಮುಂದಿನ ತಾತ್ವಿಕತೆಗೆ ಅಗತ್ಯ ಭೂಮಿಕೆ ರೂಪಿಸಿ ಕೊಳ್ಳುತ್ತಾರೆ. ಮುಂದಿನ ಹಂತದಲ್ಲಿ ಗಂಡು, ಹೆಣ್ಣು, ದಾಂಪತ್ಯ-ಕುಟುಂಬದ ಪ್ರಶ್ನೆ ಬರುತ್ತದೆ. ಸಿದ್ದಲಿಂಗಯ್ಯನವರ ಬರಹದಲ್ಲಿ ಈ ಕುರಿತು ಒಂದು ರೀತಿ ಸಂಭ್ರಮ ಮತ್ತು ತುಂಟತನವಿದೆ. ಅಡಿಗರ ‘ಯಾವ ಮೋಹನ ಮುರಲಿ ಕರೆಯಿತು’ ಭಾಗದಲ್ಲಿ ಲೀಲಾವತಿ ಅವರ ಬದುಕಿನಲ್ಲಿ ಬೀರಿದ ಪರಿಣಾಮ ಕಾವ್ಯಾತ್ಮಕವಾಗಿ ಬರುತ್ತದೆ.
ಲಂಕೇಶರಲ್ಲಿ ಇದು ವಿವರಗಳ ಮೂಲಕ ಬರುತ್ತದೆ. ಆತ್ಮಪರಿವೀಕ್ಷಣೆ ಇರುವ ಇಲ್ಲಿ ಆತ್ಮ ಸಮರ್ಥನೆ ಕೂಡ ಇದೆ. ಕಾರ್ನಾಡರಲ್ಲಿ ವಸ್ತುನಿಷ್ಟವಾಗಿ ಇದು ಬರುತ್ತದೆ, ಭೈರಪ್ಪನವರ ‘ಭಿತ್ತಿ’ಯಲ್ಲಿ ಸಿಗುವ ಲೋಕ, ಆ ಲೋಕದ ಬಯಕೆ ಬೇರೆಯದೇ ಆಗಿರುತ್ತದೆ. ಇದು ಸಾಮಾಜಿಕ ವಿಷಯಕ್ಕೆ ಬಂದರೆ ಬೇರೆಯದೇ ನೆಲೆನ್ನು ಪಡೆದು ಕೊಳ್ಳುತ್ತದೆ. ಅಡಿಗರ ‘ನೆನಪಿನ ಗಣಿ’ಯಲ್ಲಿ ಬರುವ ಎಲ್ಲಾ ನೆನಪುಗಳು, ಘಟನೆಗಳು ಸಾಹಿತ್ಯ ಲೋಕದ್ದೇ ಅಲ್ಲ, ಅಷ್ಟೇ ಅಲ್ಲ ಅದು ೧೯೭೪-೭೫ಕ್ಕೇ ನಿಂತು ಹೋಗುತ್ತದೆ. ‘ಸುರಗಿ’ ಸಾಹಿತ್ಯ ಸಂದರ್ಭವನ್ನು ಪ್ರಜ್ಞಾಪೂರ್ವಕವಾಗಿ ನಿರ್ವಹಿಸುತ್ತದೆ, ‘ಹುಳಿ ಮಾವಿನ ಮರ’ ಬಿಂಬಿಸುವುದು ಬರಹಗಾರನಾಗುವ ಆಕಾಂಕ್ಷೆಯನ್ನು, ‘ಭಿತ್ತಿ’ ಸಾಮಾಜಿಕ ನೆಲೆಗಳನ್ನು ಹಿಡಿದಿಡುತ್ತದೆ.
ಸಿದ್ದಲಿಂಗಯ್ಯನವರ ಬರವಣಿಗೆ ತೇಜಸ್ವಿಯವರಂತೆ ಹಲವನ್ನು ಬಳಸುವ, ಬೆರೆಸುವ ಬರವಣಿಗೆ. ಬೂಸಾ ಪ್ರಕರಣ, ಒಕ್ಕೂಟ, ತುರ್ತ ಪರಿಸ್ಥಿತಿ, ಗೊಕಾಕ್ ಚಳುವಳಿ ಹೀಗೆ ಪ್ರಮುಖ ಸಾಮಾಜಿಕ ಘಟನೆಗಳ ಕುರಿತು ಲೇಖಕರ ದಾಖಲಾತಿಯನ್ನು ತುಲನಾತ್ಮಕವಾಗಿ ನೋಡುವ ಪ್ರಯತ್ನವನ್ನು ಸತ್ಯ ನಾರಾಯಣ್ ಮಾಡುತ್ತಾರೆ. ತಮ್ಮ ದಾಖಲಾತಿಯಲ್ಲಿ ಇನ್ನೊಬ್ಬರ ಬಂದಾಗ ಅವರ ಘನತೆ ಏನಾಗುತ್ತದೆ ಎನ್ನುವ ಪ್ರಶ್ನೆ ಮುಂದಿನದು.
ಅನಂತ ಮೂರ್ತಿಯವರ ಬರವಣಿಗೆಯಲ್ಲಿ ನೈತಿಕ ಉತ್ತಮಿಕೆ ಮಾದರಿ ಇದೆ. ಅದನ್ನು ಸಿ.ಡಿ.ಎನ್, ಪೋಲಂಕಿ ಅಂತಹವರ ಕುರಿತ ಬರಹದ ಮೂಲಕ ಗುರುತಿಸಲಾಗಿದೆ. ಲಂಕೇಶರ ಬರವಣಿಗೆಯಲ್ಲಿ ಇನ್ನೊಬ್ಬರನ್ನು ಕೀಳಂದಾಜು ಮಾಡುವುದು, ಭರ್ತ್ಸನೆಗೆ ಒಳ ಪಡಿಸಿ ಅನಾವರಣ ಮಾಡುವುದು ಹಲವು ರೀತಿಯಲ್ಲಿ ಕಾಣಿಸಿ ಕೊಳ್ಳುತ್ತದೆ. ಕಾರ್ನಡರ ಇಂತಹ ದಾಖಲಾತಿಯಲ್ಲಿ ಖುಷಿ ಮತ್ತು ಸಂಭ್ರಮವಿದೆ. ಪ್ರಣಯ ಸಂಬಂಧದ ವಿವರಗಳನ್ನು, ಹೇಮ ಮಾಲಿನಿ ಕುರಿತ ಮಾತುಗಳನ್ನು ಸತ್ಯನಾರಾಯಣ್ ಉದಾಹರಣೆಗೆ ನೀಡುತ್ತಾರೆ.
ಭೈರಪ್ಪನವರ ಬರವಣಿಗೆಯಲ್ಲಿ ಒಂದು ರೀತಿಯ Victim Mode ಇದೆ. ತೇಜಸ್ವಿಯವರಲ್ಲಿ ಇರುವುದು ಒಂದು ರೀತಿಯ ವಕ್ತಾರತನ, ಸಿದ್ದಲಿಂಗಯ್ಯನವರದು ಕಾಮಿಕ್ ದಾಟಿ. ಎಲ್ಲರೂ ‘ಇನ್ನೊಬ್ಬ’ರನ್ನು ತಮಗೆ ಬೇಕಾದ ರೀತಿಯಲ್ಲಿ ನೋಡುತ್ತಾರೆ. ಅದರಿಂದ ಓದುಗರಿಗೂ ಲಾಭ ಇದೆ ಎನ್ನುವ ಸತ್ಯನಾರಾಯಣ್ ಈ ಮೂಲಕ ಅವರು ತಮ್ಮನ್ನೂ ಅನಾವರಣ ಮಾಡಿ ಕೊಳ್ಳುತ್ತಾ ಇರುತ್ತಾರೆ. ಇದರಿಂದ ಅನಾಯಾಸವಾಗಿ ಆತ್ಮಚರಿತ್ರೆಕಾರರ ಒಳವ್ಯಕ್ತಿತ್ವಕ್ಕೆ ಪ್ರವೇಶ ಸಿಗುತ್ತದೆ ಎನ್ನುವುದನ್ನು ಗುರುತಿಸುತ್ತಾರೆ.
ಆತ್ಮಚರಿತ್ರೆಯ ಮುಕ್ತಾಯ ಹೇಗಾಗುತ್ತದೆ. ಈ ಪ್ರಶ್ನೆಗೆ ಸತ್ಯನಾರಾಯಣ್ ಆರಿಸಿ ಕೊಂಡಿರುವ ಆತ್ಮಚರಿತ್ರೆಗಳು ಸೂಕ್ತ ನೆಲೆಯನ್ನು ನೀಡಲಾರವು. ಅಡಿಗರ ಆತ್ಮಚರಿತ್ರೆ ೧೯೭೪-೭೫ಕ್ಕೇ ನಿಂತು ಹೋಗುತ್ತದೆ, ಕಾರ್ನಾಡರಿಗೆ ಎರಡನೇ ಭಾಗ ‘ಆಡಾಡತ ಆಯಷ್ಯ’ ಬರೆಯುವ ಉದ್ದೇಶ ಇತ್ತು. ಸಿದ್ದಲಿಂಗಯ್ಯನವರಿಗೂ ಮುಂದಿನ ಸಂಪುಟ ತರುವ ಉದ್ದೇಶ ಇತ್ತು, ತೇಜಸ್ವಿಯವರದು ಆತ್ಮಚರಿತ್ರೆಯೂ ಅಲ್ಲ, ಕುವೆಂಪು ಅವರ ಜೀವನ ಚರಿತ್ರೆ ಕೂಡ ಅಲ್ಲ. ಉಳಿದ ಆತ್ಮಚರಿತ್ರೆಗಳಲ್ಲಿ ಸಾವಿನ ತಣ್ಣನೆಯ ಕೈ ಮುಕ್ತಾಯದ ಸಂದರ್ಭದಲ್ಲಿ ಸವರಿರುವುದನ್ನು ಗಮನಿಸ ಬಹುದು.
ಆತ್ಮಚರಿತ್ರೆಯಲ್ಲಿ ಲೇಖಕ ನಿರೂಪಕನೂ ಹೌದು, ಪಾತ್ರಧಾರಿಯೂ ಹೌದು, ಫಿರ್ಯಾದುದಾರನೂ ಹೌದು, ನ್ಯಾಯಾಧೀಶನೂ ಹೌದು ಈ ಎಲ್ಲಾ ಪಾತ್ರಗಳನ್ನೂ ಅವನು ತನ್ನ ಮೂಗಿನ ನೇರಕ್ಕೆ ಅನುಗುಣವಾಗಿ ನಿರ್ವಹಿಸಬಹುದು, ಆದರೆ ಮುಕ್ತಾಯದ ಪ್ರಶ್ನೆ ಬಂದಾಗ ಒಂದು ಪಾತ್ರವನ್ನು ಖಚಿತವಾಗಿ ಆಯ್ಕೆ ಮಾಡಿ ಕೊಳ್ಳಲಾಗುತ್ತದೆ ಎಂದು ಸತ್ಯನಾರಾಯಣ್ ಗುರುತಿಸುತ್ತಾರೆ. ಆದರೆ ಅವರ ಆಯ್ಕೆಯ ಆತ್ಮಚರಿತ್ರೆಗಳ ಮೂಲಕ ಇದನ್ನು ತಾತ್ವೀಕರಿಸುವುದು ಸಾಧ್ಯವಾಗಿಲ್ಲ.
ಸಾಮಾಜಿಕ ಮಾಧ್ಯಮಗಳು ಸಕ್ರಿಯವಾಗಿರುವ ಇಂದಿನ ದಿನಗಳಲ್ಲಿ ಫೇಸ್ ಬುಕ್ ಅಂತಹ ಕಡೆ ದಾಖಲಾಗುತ್ತಿರುವ ಕ್ಷಣ ಕ್ಷಣದ ಘಟನೆಗಳು ಆತ್ಮಚರಿತ್ರೆಯ ಮುಂದಿನ ಸಾಧ್ಯತೆ ಇರ ಬಹುದೆ? ಎಂದು ಗುರುತಿಸುವ ಸತ್ಯನಾರಾಯಣ್ ಈ ಅರ್ಥದಲ್ಲಿ ನಾವು ಕ್ಷಣ ಕ್ಷಣವೂ ಕಥಾನಕ ಬರೆಯುವದರಲ್ಲಿ ತೊಡಗಿದ್ದೇವೆ ಎಂದಿದ್ದಾರೆ. ಅನುಬಂಧವಾಗಿ ಇಂದಿರಾ ಲಂಕೇಶ್ ಅವರ ‘ಹುಳಿ ಮಾವಿನ ಮರ ಮತ್ತು ನಾನು’ ರಾಧಾಕೃಷ್ಣ ಅವರ ‘ನನ್ನ ತಂದೆ’ ಮತ್ತು ನಮಿತಾ ‘ಸಂಗೀತ ಕೊಣೆ’ ಎಂಬ ಆತ್ಮಚರಿತ್ರೆಯ ಮಾದರಿಯ ಕೃತಿಯ ಕುರಿತ ಬರಹಗಳು ಇವೆ. ಇವುಗಳ ಬರವಣಿಗೆ ಬೇರೆಯದೆ ನೆಲೆಯಲ್ಲಿ ಇರುವುದರಿಂದ ಕೃತಿಯ ತಾತ್ವಿಕತೆಯ ಕೇಂದ್ರದ ವಿಸ್ತಾರದ ರೂಪದಲ್ಲಿ ಬಂದಿದೆ.
ಇಂತಹ ಕೃತಿಗಳು ಏನನ್ನು ನೀಡ ಬಲ್ಲವು ಎನ್ನುವುದು ಬಹಳ ಮುಖ್ಯವಾದ ಪ್ರಶ್ನೆ. ಆತ್ಮಕಥೆಗಳ ಮೂಲಕ ಸಾಂಸ್ಕೃತಿಕ, ಸಾಮಾಜಿಕ ಜಗತ್ತನ್ನು ಗ್ರಹಿಸುತ್ತವೆಯೋ, ಆ ವ್ಯಕ್ತಿಯನ್ನು ಅರಿಯಲು ಪ್ರಯತ್ನಿಸುತ್ತವೆಯೋ ಅಥವಾ ಕೇವಲ ಫ್ಯಾಂಟಸಿ ಮಾದರಿಯಲ್ಲಿ ಕಥನ ಕುತೂಹಲಕ್ಕೆ ಓದುತ್ತೇವೆಯೋ ಎನ್ನುವುದು ಓದುಗರ ಆಯ್ಕೆ, ಆದರೆ ಅದು ರೂಪುಗೊಳ್ಳುವ, ಓದಿಸಿ ಕೊಳ್ಳುವ ಪ್ರಕ್ರಿಯೆ ಒಂದು ಗಂಭೀರ ತಾತ್ವಿಕ ಚರ್ಚೆಗೆ ಕಾರಣವಾಗ ಬಲ್ಲದು.
ಕನ್ನಡದ ಮಟ್ಟಿಗಂತೂ ಈ ಚರ್ಚೆ ತೀರಾ ಹೊಸದು. ಈ ಕಾರಣದಿಂದ ಸತ್ಯನಾರಾಯಣ್ ಅವರ ಪ್ರಯತ್ನಕ್ಕೆ ಮಹತ್ವವಿದೆ. ಅವರು ಆಯ್ಕೆ ಮಾಡಿದ ಆತ್ಮಚರಿತ್ರೆಗಳನ್ನು ಬದಿಗಿರಿಸಿ ಬೇರೆ ಆತ್ಮಚರಿತ್ರೆಗಳ ಮೂಲಕ ಈ ಪ್ರಶ್ನೆಯನ್ನು ಮುಂದುವರೆಸ ಬಹುದು ಮತ್ತು ಸತ್ಯನಾರಾಯಣ್ ಅವರ ಕೃತಿಯ ಉದ್ದೇಶ ಕೂಡ ಇದೇ ಆಗಿದೆ. ಹೀಗಾಗಿ ಇದು ಒಂದು ಚರ್ಚೆಯ ಆರಂಭ ಮಾತ್ರ. ಇಂತಹ ಆರಂಭಕ್ಕೆ ಅಗತ್ಯ ಭೂಮಿಕೆ ರೂಪಿಸಿದ ಸತ್ಯನಾರಾಯಣ್ ಅವರಿಗೆ ಕೃತಜ್ಞತೆಗಳು ಸಲ್ಲುತ್ತವೆ.






0 Comments