ಬಿದಲೋಟಿ ರಂಗನಾಥ್
ನನಗೂ ಆಸೆ
ಮೈಗಂಟದ ಕ್ವಾಲಿಟಿ ಅಂಗಿ ತೊಡಲು
ನಾಲಾರಂತೆ ಬೀಗಿ ನಡೆಯಲು
ತ್ಯಾಮಾನಿಲ್ಲದ ಅಪ್ಪ
ಹಸಿವೊತ್ತು ಬರೀ ಕರಿಮೈಯಲ್ಲಿ
ತಿರುಗುತ್ತಿದ್ದವರನ್ನು ತೋರಿಸುತ್ತಿದ್ದ !
ಆ ಅಂಗಿಯೊಳಗೂ ಎಷ್ಟೊಂದು
ಕನಸುಗಳು ಮಗುವಂತೆ ಆಡುತ್ತಿದ್ದವು
ಇಡೀ ಅಂಗಿಯ ತುಂಬಾ ಬಣ್ಣದ ಲೋಕ
ಕಲಾವಿದ ಕುಂಚವಿಡಿದು ನಡೆದ ಹೆಜ್ಜೆ ಗುರುತು

ಸೂರ್ಯನೋ ಮುತ್ತಿಡುವ ಪರಿಗೆ
ಮೈಯಲ್ಲೆ ಹೆಂಚಿಟ್ಟು ರೊಟ್ಟಿ ತೊಟ್ಟ ಭಾವ
ಆ ಅಂಡ ಬಂಡ ಅಂಗಿಯ ಮೇಲೆ
ಜಾತ್ರೆಯ ದೂಳೂ ಚಿತ್ತಾರದ ಚಿತ್ರ !
ಜೊತೆಗೊಂದು ತಾತ ಕೊಡಿಸಿದ
ಕಣ್ಣುಗಳು ತೊಟ್ಟ ಬಣ್ಣದ ಕನ್ನಡಕ
ನಡೆಯುವ ನೆಲಡೊಂಕಾದರೂ
ಬಣ್ಣ ಮಿಶ್ರಿತ ರಸ್ತೆಯ ತುಂಬಾ
ಅಬ್ಬಾ! ಎಷ್ಟೊಂದು ಚಿತ್ರಗಳು ನಡೆಯುತ್ತಿದ್ದವು

ಲೋಕದ ಕಣ್ಣುಗಳಿಗೋ
ಸಂತೆ ಅಂಗಿ ತೊಟ್ಟು ವಾರಕಳೆದರು
ತಾನಿರುವ ಜೀವಂತಿಕೆಯ ಗಾಳಿಯ ವಾಸನೆ
ಗಂಜಳ ಸುರಿದ ಹೆಗ್ಗುರುತು ಕಾಣುತ್ತಲೇ ಇತ್ತು.
ಮೊನ್ನೆ,
ಅವ್ವ ಬಿಚ್ಚಿದ ಬಟ್ಟೆಗಂಟಿನೊಳಗೆ
ಬೆರಳು ತಾಕಿದ ಸೀರೆ
ನನ್ನದೇ ಸಂತೆ ಅಂಗಿಯ ಚಂದ್ರನಷ್ಟು ಚೂರು
ತ್ಯಾಪೆ ಹೊತ್ತಿದ್ದ ಕಂಡು ವಿಚಲಿತನಾದೆ
ಅದರ ಮೇಲೆ ಅಪ್ಪನ ಶ್ರಮದ ಬೆವರ ವಾಸನೆ
ಇನ್ನೂ ಇತ್ತು !
ನಾನು ಹೊಲಿಸಿದ ಕೋಟು ಸೂಟು
ಮಂಕಾಗಿ ಕಂಡವು.






ಬಿದಲೋಟಿ ರಂಗನಾಥ್ ಅವರ ಅಂಗಿ ಪ್ರಧಾನಾಂಶವಿರುವ ಈ ಕವಿತೆ ಹಲವು ಸತ್ಯಗಳನ್ನು ದರ್ಶಿಸುತ್ತದೆ. ಇದು ಹೆಚ್.ಗೋವಿಂದಯ್ಯನವರ ‘ಅಆ ಮತ್ತು…’ ಕವಿತೆಯನ್ನು ನೆನಪಿಗೆ ತರುತ್ತದೆ.