ಭುವನೇಶ್ವರಿ ಹೆಗಡೆ ಅಂಕಣ- ರಮೇಶರ ನೆನಪು ಚಿರಸ್ಥಾಯಿ…

13

ಆಗ ನಮಗೆ ಡಾ. ಶಾಲಿನಿ  ರಘುನಾಥ್ ಅವರು ಕೆಲ ದಿನ ಕನ್ನಡ ಬೋಧಿಸುತ್ತಿದ್ದರು. ನಂತರ ಅವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ವಿಭಾಗದ ಮುಖ್ಯಸ್ಥೆಯಾಗಿ ನಿವೃತ್ತರಾಗಿದ್ದಾರೆ. ಶಿರಸಿಯ ಕಾಲೇಜಿನಲ್ಲಿದ್ದ ಕೆಲವೇ ದಿನಗಳಲ್ಲಿ ಅವರ ವಿದ್ಯಾರ್ಥಿಗಳಾದ ನಮ್ಮಲ್ಲಿ ಮುಂದೆ ಎಮ್. ಎ. ಓದಬೇಕು ಏನಾದರೂ ಸಾಧಿಸಬೇಕು ಎಂಬೆಲ್ಲ ಮಹಾತ್ವಾಕಾಂಕ್ಷೆ ಬಿತ್ತಿದವರು. ಅವರ ಜತೆ ಪುಸ್ತಕಕ್ಕಾಗಿಯೋ, ಭಾಷಣದ ತಯಾರಿಗೆ ನೆರವು ಪಡೆಯಲೆಂದೊ ನಾನು ನನ್ನ ಸ್ನೇಹಿತೆ ಸುಶೀಲಳ ಜತೆ ಶಿರಸಿಯ ಸಹ್ಯಾದ್ರಿಯಲ್ಲಿದ್ದ ಅವರ  ಮನೆಗೆ ಹೋಗುವುದಿತ್ತು. ಅಲ್ಲಿ ಪರಿಚಯವಾದವರು ಪ್ರೊ ವಿಜಯನಳಿನಿ ರಮೇಶ್.

ಈ ಮೂವರ ನಡುವೆ ನಡೆಯುವ ಮಾತುಕತೆ, ಚರ್ಚೆ ವಾಗ್ವಾದಗಳಲ್ಲಿ ಕ್ರಮೇಣ ನಾವೂ ಭಾಗವಹಿಸುತ್ತಿದ್ದೆವು. ಅವರ ಮಗಳು ಪ್ರಜ್ಞಾ ಆಗಿನ್ನೂ ಪೆಟ್ಟಿಕೋಟ್ ಮಗು. ಮಧು ಕಿಲಾಡಿ ಬಾಲಕನಾಗಿದ್ದ ಅಷ್ಟೇ. ಹಳ್ಳಿ ಹುಡುಗಿಯರ ಕೀಳರಿಮೆ ಹೋಗಿ ಆತ್ಮವಿಶ್ವಾಸದ ಸಾಧನೆಯ ಕನಸುಗಳು ಮೊಳೆತದ್ದು ಸಹ್ಯಾದ್ರಿಯ ರಮೇಶರ ಮನೆಯಲ್ಲಿಯೇ ಎಂಬುದನ್ನು ಹೇಳಿಕೊಳ್ಳಲು ಇದೀಗ ಅದೆಂಥ ಅಭಿಮಾನ.

ಸಾಮಾನ್ಯವಾಗಿ ಹೆಂಡತಿಯು ಒಂದು ಪ್ರಾಣಿಯೇ ಆಗಿರುತ್ತಿದ್ದ ಕುಟುಂಬಗಳ ನಡುವೆ ಬೆಳೆದು ಬಂದ ನನಗೆ ‘ಸತಿ ಪತಿಯರ ಸಾಹಿತ್ಯಿಕ ಸಲ್ಲಾಪ’ ಎಂಬ ವಿನೂತನ ದಾಂಪತ್ಯದ ಮಾದರಿಯೊಂದರ ದರ್ಶನವಾಗಿದ್ದು ಅವರ ಮನೆಯಲ್ಲಿಯೇ. ತಪ್ಪನ್ನು ತಪ್ಪೆಂದು ಹೇಳಲು ಹುಡುಗಿಯರು ಭಯಪಡಬಾರದು. ಅದಕ್ಕೂ ಮೊದಲು ಯಾವುದು ಸರಿ ಯಾವುದು ತಪ್ಪು ಎಂಬುದನ್ನು ನಾವು ಅರ್ಥ ಮಾಡಿಕೊಳ್ಳುತ್ತಾ ಆತ್ಮವಿಶ್ವಾಸದಿಂದ ವಿಚಾರವಾದಿಗಳಾಗಿ ಬೆಳೆಯಬೇಕು- ಇದು ವಿಜಯನಳಿನಿ ರಮೇಶ್ ಅವರು ನಮಗೆ ಕಲಿಸಿದ್ದ ಜೀವನ ಪಾಠ.

ವಿದ್ಯಾರ್ಥಿಗಳಿಗೆ ಹೀಗ್ ಹೀಗೆ ನಡೆಯಿರಿ ಎಂದು ಹೇಳುವ ಮೊದಲು ತಾವು ಹಾಗೆ ನಡೆದು ತೋರಿಸಿದ ಪ್ರೇರಕ ಶಕ್ತಿ ಈ  ಪ್ರಾಧ್ಯಾಪಕ ದಂಪತಿಗಳದ್ದು. ಜಾತಿ ಮತ ಭೇದವಿಲ್ಲದೆ ದೂರದಲ್ಲೆಲ್ಲೋ ಒಬ್ಬ ಯುವತಿ ಅನ್ಯಾಯಕ್ಕೊಳಗಾಗಿದ್ದಾಳೆ ಎಂಬುದು ತಿಳಿದರೆ ಅದನ್ನು ಪ್ರತಿಭಟಿಸಿ ಆ ಯುವತಿಗೆ ನ್ಯಾಯ ಒದಗಿಸುವತ್ತ ಅವರ ಮನಸ್ಸು ತುಡಿಯುತ್ತದೆ. ವಿದ್ಯಾರ್ಥಿಗಳ ಪಾಲಿಗೆ ಸಾಹಿತ್ಯಾಸಕ್ತರಿಗೆ ಈ ಕುಟುಂಬ ಒಂದು ಆದರ್ಶವಿದ್ದಂತೆ. ಶಿರಸಿಯಲ್ಲಿ ನನ್ನ ಕಾಲೇಜು ವಿದ್ಯಾಭ್ಯಾಸ ಆಗುವಂತಾದದ್ದು ಈ ಕಾರಣಕ್ಕಾಗಿ ನನ್ನ ಭಾಗ್ಯ ಎಂದು ಭಾವಿಸಿದ್ದೇನೆ. 

ಶಿರಸಿಯ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರ ಪ್ರೋತ್ಸಾಹದಿಂದ ನಾವೊಂದು ‘ಸಾಹಿತ್ಯ ಬಳಗ’ ಎಂಬ ಸಾಹಿತ್ಯಾಸಕ್ತರ ಗುಂಪನ್ನು ಕಟ್ಟಿದೆವು. ವಿದ್ಯಾರ್ಥಿಗಳ ಹೊಸ ಹುರುಪಿನ ಸಾಹಿತ್ಯದ ರಚನೆಯ ಪ್ರಸ್ತುತಿ ಈ ಬಳಗದಲ್ಲಿ ನಡೆಯುತ್ತಿತ್ತು. ಕೆಲ ಪ್ರಾಧ್ಯಾಪಕರ ಉಪಸ್ಥಿತಿಯಲ್ಲಿ ಅವುಗಳ ವಿಮರ್ಶೆ ತುಂಬಾ ಅನೌಪಚಾರಿಕವಾಗಿ ನಡೆಯುತ್ತಿತ್ತು ರಮೇಶರ ನಗು ಮಾತುಗಳು ನಮ್ಮ ತಪ್ಪುಗಳನ್ನು ನಾವು ತಿದ್ದಿಕೊಳ್ಳುವಲ್ಲಿ ತುಂಬಾ ಸಹಾಯ ಮಾಡುತ್ತಿದ್ದವು.

ಬರೆಯುವುದಕ್ಕಿಂತ ಓದುವುದೇ ಹೆಚ್ಚು ಸುಖ ಎಂಬ ತೀರ್ಮಾನ ತೆಗೆದುಕೊಂಡತ್ತಿದ್ದ ಪ್ರೊ ರಮೇಶ್ ಅವರು ತಮ್ಮ ನಗೆ ಮಾತುಗಳನ್ನು ದಾಖಲಿಸಿ ಕೃತಿ ರಚನೆ ಮಾಡಿದರೆ ಕನ್ನಡ ಹಾಸ್ಯ ಸಾಹಿತ್ಯಕ್ಕೆ ಅಪರೂಪದ ಕೊಡುಗೆ ಗಳಾಗುತ್ತಿದ್ದವು. ಅವರಿಗೆ ಅರ್ಪಿಸಿದ ಸನ್ಮಾನ ಗ್ರಂಥ ರವಿ ಮುಖಿ ಯಲ್ಲಿ ಅವರ ಶಿಷ್ಯರು ಪ್ರೊ ರಮೇಶ್ ಅವರ ಚಾಟೂಕ್ತಿ ಗಳನ್ನು ಸಂಗ್ರಹಿಸಿ ಪ್ರಕಟಿಸಿದ್ದಾರೆ. ಶಿರಸಿಯಲ್ಲಿ ನಡೆದ ರಮೇಶ್ ದಂಪತಿಗಳ ಸನ್ಮಾನ ಕಾರ್ಯಕ್ರಮದಲ್ಲಿ ಈ ಪುಸ್ತಕವನ್ನು ಬಿಡುಗಡೆ ಮಾಡಿದ್ದರು. ಆ ಸಮಾರಂಭದಲ್ಲಿ ಪಾಲ್ಗೊಂಡು ಗುರುವರ್ಯರನ್ನು ಅಭಿನಂದಿಸಿ ಮಾತನಾಡಿದ್ದು ನನ್ನ ಭಾಗ್ಯ ಗಳಲ್ಲಿ ಒಂದು.     

ಇಂಥ ನನ್ನ ಗುರು ರಮೇಶರಿಗೆ ಅಸೌಖ್ಯವಾಗಿದೆ ಎಂಬ ವಿಷಯ ತಿಳಿದು ನಾನು ಮಂಗಳೂರಿನಿಂದ ಶಿರಸಿಗೆ ಹೋಗಿದ್ದೆ.  ಸ್ಟ್ರೋಕ್ ನಿಂದಾಗಿ   ಅವರಿಗೆ ಮಾತು ಹೋಗಿತ್ತು. ಆಸ್ಪತ್ರೆಯಿಂದ ಮರಳಿ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ನನ್ನನ್ನು ನೋಡಿದೊಡನೆಯೇ ನಗುಮುಖದಲ್ಲಿ ಓಹೋಹೋ ಎಂದು ನಕ್ಕರು. ಅರೆ ಇವರಿಗೆ ಪೂರ್ತಿ ಗುಣವಾಗಿದೆಯೇ ಎಂದುಕೊಂಡು ಮೇಡಂ ಹತ್ತಿರ ಮಾತನಾಡಿದೆ. ನೀನು ಬಂದಿದ್ದಕ್ಕೆ ಅವರಿಗೆ ಅಷ್ಟು ಖುಷಿಯಾಗಿದೆ ಅದಕ್ಕೆ ನಕ್ಕರು ಎಂದರು. ಎರಡು ಮೂರು ವರ್ಷ ಅಸೌಖ್ಯದಲ್ಲಿ ನರಳಿದ ಪ್ರೊ. ರಮೇಶ ಜಗತ್ತಿಗೆ ವಿದಾಯ ಹೇಳಿ ಒಂದು ವರುಷವಾಯಿತು. 

ಪ್ರೊಫೆಸರ್ ರಮೇಶ್ ಅವರ ನೆನಪನ್ನು ಚಿರಸ್ಥಾಯಿಯಾಗಿಸಲು ವಿನೂತನ ಕಾರ್ಯಕ್ರಮವೊಂದನ್ನು ಕುಟುಂಬದವರು ಹಮ್ಮಿಕೊಂಡಿದ್ದಾರೆ. ಸಾಹಿತ್ಯ ಸಂಗೀತ ಹಾಗೂ ಯಕ್ಷಗಾನಗಳಲ್ಲಿ ಅಪಾರ ಆಸಕ್ತಿ ಹೊಂದಿರುವ ಅಮೇರಿಕೆಯಲ್ಲಿ ನೆಲೆಸಿರುವ ಮಗ ಮಧುಕೇಶ್ವರ, ಧಾರವಾಡದಲ್ಲಿರುವ ಮಗಳು ಕವಯಿತ್ರಿ ಪ್ರಾಧ್ಯಾ ಪಕಿ ಡಾ. ಪ್ರಜ್ಞಾ ಮತ್ತಿಹಳ್ಳಿ ಇವರಿಬ್ಬರೂ ತಮ್ಮ ತಾಯಿ ಡಾ. ವಿಜಯನಳಿನಿ ಅವರೊಂದಿಗೆ ಸೇರಿ ಶಿರಸಿಯಲ್ಲಿ ರಮೇಶರ ಸಂಸ್ಮರಣೆ ಕಾರ್ಯಕ್ರಮವನ್ನು ಸಾರ್ಥಕವಾಗಿ ನಡೆಸಿದರು. ಹಾಗೂ ರಮೇಶ್ ಅವರಿಗೆ ಪ್ರಿಯ ಕ್ಷೇತ್ರಗಳಾದ ಯಕ್ಷಗಾನ ನಾಟಕ ಸಾಹಿತ್ಯ ಇವುಗಳಲ್ಲಿ ಸಾಧನೆ ಮಾಡಿದ ಕಲಾವಿದರನ್ನು ಗುರುತಿಸಿ ಪ್ರತಿವರ್ಷ ಇಪ್ಪತ್ತೈದು ಸಾವಿರ ಮೊತ್ತದ ಪ್ರಶಸ್ತಿ ಯನ್ನು ನೀಡುವ ಯೋಜನೆಯೊಂದನ್ನು ರೂಪಿಸಿಕೊಂಡಿದ್ದು ಉತ್ತರ ಕನ್ನಡ ಜಿಲ್ಲೆಯ ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನೆರವೇರಿಸಿದರು.

ಪ್ರೊ ರಮೇಶ್ ಅವರ ನೆಚ್ಚಿನ ಶಿಷ್ಯ ನಾಟಕ ಹಾಗೂ ಸಿನಿಮಾ ಕಲಾವಿದ ನೀರ್ನಳ್ಳಿ ರಾಮಕೃಷ್ಣ ಅವರು ಅತಿಥಿಯಾಗಿ ಮಾತಾಡುತ್ತ ರಮೇಶರು ತಮ್ಮ ಮೇಲೆ ಬೀರಿದ ಪ್ರಭಾವವನ್ನು ಅವರ  ಸರಳ ಸ್ನೇಹಮಯ ವ್ಯಕ್ತಿತ್ವವನ್ನು ನೆನಪಿಸಿಕೊಂಡರು. ಶಿರಸಿಯ ಖ್ಯಾತ ನೇತ್ರ ತಜ್ಞರಾದ ಡಾ ಕೆ ಬಿ ಶಿವರಾಮು ಅವರು ಅಧ್ಯಕ್ಷತೆ ವಹಿಸಿದ್ದ ಈ ಕಾರ್ಯಕ್ರಮ ದಲ್ಲಿ ಸಂಸ್ಕೃತಿ ಚಿಂತಕರು ಹಾಗೂ ವಾಗ್ಮಿಗಳೂ ಆದ ಪ್ರಮೋದ ಹೆಗಡೆಯವರು ಮನನೀಯ ಮಾತುಗಳನ್ನಾಡಿದರು.             

ಈ ಬಾರಿಯ ಚೊಚ್ಚಲ ರಮೇಶ್ ಪ್ರಶಸ್ತಿ ನನ್ನ ಹಳ್ಳಿಯ ಪಕ್ಕದವನಾದ ಯಕ್ಷಗಾನ ಕಲಾವಿದ ಚಪ್ಪರಮನೆ ಶ್ರೀಧರ ಇವರಿಗೆ ಸಂದಿದೆ. ಹೆಚ್ಚು ವಿದ್ಯಾವಂತನಲ್ಲದಿದ್ದರೂ ಬಾಲ್ಯದಿಂದಲೂ ಅನುಭವಿಸಿದ ಬಡತನದಲ್ಲಿ ಜೀವನೋತ್ಸಾಹವನ್ನು ಕಳೆದುಕೊಳ್ಳದ ಕಲಾವಿದ ಈತ.ಯಕ್ಷಗಾನದ ಹಾಸ್ಯದಲ್ಲಿ ತನ್ನದೇ ಛಾಪನ್ನು ಮೂಡಿಸಿ ಜನಮನ್ನಣೆ ಗಳಿಸಿರುವ ಯಶಸ್ವಿ ಹಾಸ್ಯ ಕಲಾವಿದ ಶ್ರೀಧರನಿಗೆ ರಮೇಶರ ಹಾಸ್ಯಾಶೀರ್ವಾದ   ಸಿಕ್ಕಿರುವುದು ಸಂತೋಷದ ಸಂಗತಿ. ರಮೇಶರ ಘನತೆವೆತ್ತ ಹಾಸ್ಯವನ್ನು ಯಕ್ಷಗಾನದಲ್ಲಿ ಜಾಗೃತವಾಗಿಡುವ ಪ್ರೇರಣೆ ಶ್ರೀಧರನಿಗೆ ಈ ಮೂಲಕ ಲಭಿಸಲಿ ಎಂದು ಹಾರೈಸುತ್ತೇನೆ. ಶಿರಸಿಯ ವಿದ್ಯಾಸಕ್ತರ ಪಾಲಿಗೆ ಅಚ್ಚುಮೆಚ್ಚಿನ ಪ್ರಾಧ್ಯಾಪಕರಾಗಿದ್ದ ಪ್ರೊ ರಮೇಶ್ ಅವರು ವಿನೋದ ವಿಡಂಬನೆಗಳೊಂದಿಗೆ ಪ್ರಚಲಿತ ಸಾಮಾಜಿಕ ರಾಜೀಯ ವಿದ್ಯಮಾನಗಳನ್ನು ವಿಶ್ಲೇಷಿಸುವ ಶೈಲಿ ಅಪರೂಪದ್ದಾಗಿತ್ತು.

ಜನಪ್ರಿಯ ಭಾಷಣಕಾರರಾಗಿ ಹಾಗೂ ತಾಳಮದ್ದಲೆಯ ಅರ್ಥ ದಾರಿಗಳಾಗಿ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಕನ್ನಡ ನುಡಿ ತೇರನ್ನು ಎಳೆದವರು ಅವರು. ಸಹ್ಯಾದ್ರಿ ಮಕ್ಕಳ ಯಕ್ಷಗಾನ ಸಮೂಹದ ಸ್ಥಾಪಕ ರಾಗಿ ಅನಂತರ ಮಹಿಳಾ ಯಕ್ಷಗಾನ ತಂಡದ ಸಂಘಟಕರಾಗಿ ನೂರಾರು ಪ್ರದರ್ಶನಗಳ ಯಶಸ್ಸಿಗೆ ಕಾರಣಿಭೂತರಾದವರು. ಪ್ರೊ ರಮೇಶ್ ದಂಪತಿಗಳ ಅನೇಕ ಶಿಷ್ಯೆಯರು ಇಂದಿಗೂ ಯಶಸ್ವಿ ಯಕ್ಷಗಾನ ಕಲಾವಿದರಾಗಿ ಹೆಸರು ಮಾಡಿದ್ದಾರೆ. 

ಹೀಗೆ ಸಾಹಿತ್ಯ ನಾಟಕ ಯಕ್ಷಗಾನಗಳ ಶ್ರೀಮಂತ ಅಭಿರುಚಿಯಿಂದ ಜೀವನ್ಮುಖಿ ನಿಲುವನ್ನು ಸದಾ ಕಾಪಾಡಿಕೊಂಡು ಬಂದವರು ಈ ಪ್ರಾಧ್ಯಾಪಕರು. ತಮ್ಮ ನಗೆ ಮಾತುಗಳಿಂದ ಶಿಷ್ಯಕೋಟಿಯ ಹೃದಯದಲ್ಲಿ ಸದಾ ನೆಲೆಸಿರುವ ಪ್ರೊ. ರಮೇಶರ ಚೈತನ್ಯಕ್ಕೊಂದು ನಗೆ ದೀಪ ಹಚ್ಚಿ ನಮಿಸುತ್ತೇನೆ. ಪ್ರೊ ರಮೇಶ್ ಸಂಸ್ಮರಣೆ ಕಾರ್ಯಕ್ರಮದ ಮೂಲಕ ಶಿರಸಿಯ ಸಹೃದಯರಲ್ಲಿ ರಮೇಶರ ನೆನಪು ಚಿರಸ್ಥಾಯಿಯಾಗಿ ಮೇಲೆ ನಿಲ್ಲುತ್ತದೆ ಎಂಬ ವಿಶ್ವಾಸ ನನ್ನದು.  

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

September 28, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: