-ನಂದಿನಿ ಹೆದ್ದುರ್ಗ
ಹೂಧಾರೆ
—
ವಾಸ್ತವದ ಬಗ್ಗೆ
ವಿಪರೀತ
ಕ್ರೋಧವಿದೆ ನನಗೆ
ಹುಸಿಯೆಂಬುದು ತಿಳಿದಿದ್ದರೂ
ಇನ್ನಷ್ಟು ಕಾಲ
ನಂಬಿಕೊಂಡೇ ಇರಬಹುದಿತ್ತು.
*
ಸತ್ಯವೇ..
ಯಾಕಿಷ್ಟು ಪ್ರೀತಿ
ನಿನಗೆ ನನ್ನ ಮೇಲೆ.
ನೀನು
ಭೆಟ್ಟಿಯಾದಂದಿನಿಂದ
ನನ್ನ ದಿನಗಳು
ವಿಪರೀತ ದೊರಗು,
ಮುಗಿಸಲಾರದಷ್ಟು ದೀರ್ಘ.
*
ಬಾ…
ಅಪ್ಪಿಕೊ ಹೀಗೆ
ಮುತ್ತು ಕೊಡು ಕುತ್ತಿಗೆಗೆ
ಎತ್ತಿ ಹೊತ್ತಾಡು
ಆತ್ಮಕ್ಕೆ ತಾಕು
ಮಿಸುಗಾಡು ಮೆಲ್ಲಗೆ
ಪಿಸುಗುಡು ಆಗಾಗ…
ಸುಳ್ಳೇ…
ನಿನ್ನ ಧಮ್ಮಯ್ಯ
ಪ್ರೀತಿಸುತ್ತಿರು ನನ್ನ ಹೀಗೇ
ಆದೀತು ಬದುಕು ಸಹ್ಯ.
*
ನಮ್ಮ ಭೆಟ್ಟಿಯ ಕಾಲಕ್ಕೆ
ವಿಧಿ ಸಮಯವನ್ನು
ಅಯೋಮಯವಾಗಿಸುತ್ತದೆ.
ಗಡಿಯಾರ
ವಿಪರೀತ ಓಡುತ್ತದೆ.
*
‘ಎಂತಹ ಚೆಲುವ ಗೊತ್ತೇನೆ ಅವನು?
ನೋಟಕ್ಕೇ ಕೂಟದ ಅಮಲು,
ಅಪ್ಪಿದರೆ
ಜೀವದ ಗೆಲ್ಲುಗೆಲ್ಲೂ ಚಿಗುರು,
ಮನ್ಮಥ ಮಿತ್ರ!
ಸೆಳೆತವೆಂಬುದು
ಅವನಿಗೆ ಸಿದ್ದ ಸೂತ್ರ!!’
ಇನ್ನೆಷ್ಟು ಕಾಲ
ಸಂಕಲ್ಪ ಮಾಡಿಕೊಳ್ಳಲಿ ಪ್ರಭುವೇ?
ಸತ್ಯವಾಗಿಸಿಕೊಳ್ಳುವುದು ಸರಸ
ಇಷ್ಟೊಂದು ತ್ರಾಸವೇ??
*
ಮಾತುಗಳ
ಮಾಲೆ ಕಟ್ಟುತ್ತಾನೆ ನಿತ್ಯ
ತುರುಬು ಸರಿಮಾಡಿ
ಹಾರ
ನನ್ನ ಮುಡಿಗೇರಿಸುವಾಗೆಲ್ಲ
ಎಡಬದಿ ಹುಡುಗಿಯ
ಮೆದುವಿಗೆ ಮೊಣಕೈ ತಾಕುತ್ತದೆ
ಗೊತ್ತಿದೆ ನನಗೆ
ಅಕಸ್ಮಾತ್
ಆಗುವುದು ಅದು.
*
ನಿಂತದ್ದು ಕುಂತದ್ದು
ನಡೆದದ್ದು ಕೊಡವಿದ್ದು
ಬಾಗಿದ್ದು ತಾಗಿದ್ದು
ಸಿಡುಕಿದ್ದು ಮಿಡುಕಿದ್ದು
ಎಲ್ಲವನ್ನೂ ತನ್ನ
ಕ್ಯಾಮೆರಾದಲ್ಲಿ
ದಾಖಲಿಸುತ್ತಿದ್ದಾನೆ.
ಒಂದು ದಿವ್ಯ ಕ್ಷಣಕ್ಕಾಗಿ
ಹಂಬಲಿಸಿ ಅವಳು
ನೋಡಿದಾಗೆಲ್ಲ
ಅವಸರವೇರಿದವನಂತೆ
ಪಟಕ್ಕೆ
ಸರಿಯಾದ ಅ್ಯಂಗಲ್
ಹುಡುಕುವುದರಲ್ಲೇ
ವ್ಯಸ್ತ…
ಒಪ್ಪಿಕೊಳ್ಳುವ
ಅಥವಾ ಬಿಟ್ಟು ನಡೆಯುವ
ಕ್ರಿಯೆಗಳಲ್ಲಿ ಯಾವುದನ್ನು ಕರಗತ
ಮಾಡಿಕೊಳ್ಳಬೇಕೆಂಬುದು
ಗೊಂದಲವಾಗಿದೆ
ಆ ನಂತರದಲ್ಲಿ ಅವಳಿಗೆ
*
ಎಳೆದುಕೊಂಡು ಹೋದ
ಬದುಕೂ ತಲುಪಿಸುತ್ತದೆ
ಒಂದು ಅನಿರೀಕ್ಷಿತ ಜಾಗಕ್ಕೆ.
ಅದೃಷ್ಟವೆಂದರೆ
ಎಲ್ಲವೂ ಇರುತ್ತದೆ ಅಲ್ಲಿ!!
ಕಳೆದುಕೊಂಡಿದ್ದನ್ನು
ಹೊರತುಪಡಿಸಿ.
*
ಮಿಗಿಸಿಟ್ಟುಬಿಡು
ಪ್ರಭುವೇ
ಬೊಗಸೆ ಶಕ್ತಿಯನ್ನು
ಮತ್ತೊಂದು ಪ್ರೇಮ ನಂಬಲು
ಮತ್ತು
ಯಾವತ್ತೂ
ಮಗದೊಂದು ಪ್ರೇಮ ಹೊಂದಲು
*
ಸ್ವರದಲ್ಲಿ ಸಾಧ್ಯತೆಯ
ಕುರುಹೂ ಇಲ್ಲ.
ಒಂದು
ಸೌಜನ್ಯದ
ವಿದಾಯ ಬಯಸುವುದೂ
ಇಷ್ಟೊಂದು ತುಟ್ಟಿಯೇನೇ
ಗೆಳತಿ?
*
ಕುದಿಗೊಳದಲ್ಲಿ
ಮುಳುಗಿ ಸಾಯುವುದು
ಮತ್ತು
ಸಾವಿನ ಸುಖದ
ಕುರಿತು ವಿವರವಿವರವಾಗಿ
ದಾಖಲಿಸುವುದು
ನಿಮಿತ್ತ
ಎಂದುಕೊಂಡಿದ್ದೆ.
ಕರುಣಾಳು
ದೇವರು ಸಣ್ಣದೊಂದು ಹುಲ್ಲುಕಡ್ಡಿ
ಎಸೆದು ಬಿಟ್ಟ.
‘ಬೇಡಬಹುದಿತ್ತೇನೇ ನಾನು,
ಇನ್ನಷ್ಟು ಕಾಲ ಸಾಯುವ ಸುಖದ
ವಿವರ ನೀಡುತ್ತೇನೆಂದು?
ಕೇಳಬಹುದಿತ್ತೇನೇ ನಾನು
ಮುಳುಗುವುದೇ ನನಗೆ ಬಾಳೆಂದು?’
*
ಬದುಕಿನ ಸಾಧ್ಯತೆಗಳೇ ಬೆರಗು
ನನಗೆ!!
ಸುಟ್ಟ ಮರದ ಅಡಿಯಿಂದ
ಮೊಳಕೆ ಮೂಡುತ್ತದೆ
ಎಲೆ ಉದುರಿದರೆ ಚಿಗುರು ತಳೆಯುತ್ತದೆ
ಒಣಗಿದರೆ ಹೂದಳ, ಫಲ ಕಟ್ಟುತ್ತದೆ
ಬತ್ತಿದಾಗಲೇ ಬಸಿರು ನಿಲ್ಲುತ್ತದೆ
ಈ
ಸಂಜೆಗಾಲಕ್ಕೆ ಮುಂಜಾವಿನ ನಶೆ…
ಏನುತ್ತರ ಹೇಳಲೇ ಗೆಳತಿ
ಹೊಸದಾದ ಆ ಕರೆಗೆ?
*
‘ಒಳ್ಳೆಯದು ಬೇಡಿಕೊ ಅವನಿಗೆ
ಹೊಲಸು ಮಾತು ನಿಲ್ಲಲಿ..ಪ್ರೀತಿ ಹುಟ್ಟಲಿ.
ಅಂತ ಕೇಳಿಕೊ…
ಅಂತ ಕೇಳಿಕೊ…’
ಗುಡಿಗೆ ಹೋಗಿ ಕೈ ಮುಗಿದು ನಿಂತಾಗಲೆಲ್ಲ
ಅಮ್ಮನದ್ದು ಒಂದೇ ವರಾತ.
ಸಣ್ಣಗೆ
ನಗುತ್ತೇನೆ ಇತ್ತೀಚೆಗೆ..
ದೇವರಿಗೆ
ವಿಪರೀತ ಓಟಿ ಮಾಡಿಸಿದ್ದೇನೆ
ಈ ಹಿಂದೆ.
ಈಗಲೂ
ಅದನ್ನೇ ಬೇಡಿ ಬೇಡಿ
ತ್ರಾಸ ಕೊಡುವುದು
ನನಗಿಷ್ಟವಿಲ್ಲದ ಬಾಬತ್ತು.
*
ಗೋಜಿಲ್ಲದೆ ಬಂದ ಸೋಜಿಗವೊಂದು
ಒಳಕೋಣೆಯ ಕದಬಡಿದು
ಎದೆಯ ಮೇಲೆ ಕೂತು ಮೋಜು
ಮಾಡುತ್ತಿದೆ ಗೆಳತಿ.
ಹೇಗೆ ಉಕ್ಕಿತು ಈ ಸೆಲೆ?
ಯಾರು ಹಾಸಿದರು ಇಲ್ಲಿ
ಈ ಅಕ್ಷರಗಳ ಬಲೆ?
ಯಾರು ಕಲಿಸಿದರೆ
ಪದಗಳಿಗೆ ಹೀಗೆ
ಮೌನ ಉಸುರುವ ಕಲೆ?
ಸೂರ್ಯನ ಕುಡಿದ ನೀರೇ
ಗಾಳಿಯ ಅಪ್ಪಿದ ಉಸಿರೇ
ಕವಿತೆಯೇ ಹೆತ್ತ ದೇವರೇ
ಹೇಳಿ…
ನಡು ರಾತ್ರಿಯ ನಾದ
ಬೆಳಕಿನ ಶಬ್ದ
ಒಲುಮೆಯ ಗಂಧ
ಹೇಗಾಯಿತು ಈ ಎಲ್ಲಾ
ಇಲ್ಲಿ
ಛಂದೋಬದ್ಧ?
ಆಶರೀರವಾಣಿ..!
‘ಕಾವ್ಯ ಸುಡುಗನ್ನೆ, ಅಸ್ಪಷ್ಟ…
ಅಷ್ಟದಿಕ್ಕುಗಳು ಹರಸುವ
ಮೆದುವಾದ ಕಷ್ಟ..!”
*
ಇಲ್ಲದ ಪ್ರೇಮಿಯ
ನಲ್ಲೆ ಇವಳು
*
ಎಂದೋ ಮನೆಬಿಟ್ಟು ಹೋದ
ಒಂದು ಕವಿತೆ
ಇಂದು ನೆನಪಾಗಿ ಎದೆಯ ಹಿಂಡುತ್ತಿದೆ
ಅದರ ಮೌನ ಕುಡಿದ
ಆ
ಮರದ ಮೈ ಪೂರ ಹೂವಾಗಿದೆ
ಹೂವ ಗಂಧ ಕವಿತೆ ಛಂದ
ಎಂದೋ ಒಂದಾಗಿವೆ
ಮರಳಿ ಬನ್ನಿ ಈ ಮನೆಗೆ
ತೊರೆದ ಹಾಡುಗಳೆ ನೀವು
ಕಾದು ಕುಳಿತಿದೆ ಗೂಡು
ತೊರೆಯದಿರಿ ನಿಮ್ಮ ಜಾಡು
*
ಕಣ್ಣೀರಿನ ರುಚಿ ನೋಡಿದ
ಮೇಲೇ
ನಾನು ಹೀಗೆ
ಮಾತು ಕಲಿತಿದ್ದು.
ಅಸಲಿಗೆ ನನಗೆ
ಸೌಜನ್ಯವತಿಯಾಗಿರಬೇಕೆಂಬ
ಬಯಕೆಯಿತ್ತು.






0 Comments