ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪೃಥ್ವಿ ಸೂರಿ ಅಂಕಣ – ಗೌರವಯುತ ಅಂತ್ಯ ಸಂಸ್ಕಾರ (A DECENT BURIAL)

ಕಾನೂನು ಲೋಕದ ಗಂಭೀರ ವಾತಾವರಣವನ್ನು ಹಾಸ್ಯ ಮತ್ತು ವ್ಯಂಗ್ಯ ಶೈಲಿಯಲ್ಲಿ ಸಾಮಾನ್ಯರಿಗೂ ತಲುಪಿಸುವಲ್ಲಿ ಮುಂಬೈನ ಖ್ಯಾತ ವಕೀಲ ರಾಜು ಜೆ಼ಡ್. ಮೊರೆ. ‘ದಿ ಲೀಫ್‌ಲೆಟ್’ ವೆಬ್‌ಸೈಟ್‌ನ ಜನಪ್ರಿಯ ಅಂಕಣಗಳು ಹಾಗೂ ‘ದಿ ಲಾಕ್‌ಡೌನ್ ಲಾಯರ್’, ‘ಫನ್ ಇನ್ ಲಾ’ ಪುಸ್ತಕಗಳ ಮೂಲಕ ಇವರು ಸಾಹಿತ್ಯ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ. ನ್ಯಾಯಾಂಗ ನಿಂದನೆಗೆ ಒಳಗಾಗದಂತೆ, ವ್ಯವಸ್ಥೆಯ ಲೋಪದೋಷಗಳನ್ನು ಲಘು ಹಾಸ್ಯದಲ್ಲಿ ವಿಮರ್ಶಿಸುವ ಇವರ ಚುರುಕಾದ ಬರವಣಿಗೆ ಕಾನೂನು ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ವಿಶೇಷ ಗಮನ ಸೆಳೆದಿದೆ.

ಕೋರ್ಟಿನ ಗಂಭೀರ ವಾದ-ಪ್ರತಿವಾದಗಳ ನಡುವೆಯೂ ಅಕ್ಷರಗಳನ್ನೇ ಆತ್ಮಬಲವಾಗಿಸಿಕೊಂಡಿರುವ ಅಪರೂಪದ ಪ್ರತಿಭೆ ಪೃಥ್ವಿ ಸೂರಿ. ಚಿಕ್ಕಮಗಳೂರು ಜಿಲ್ಲೆಯ ಕಡೂರಿನಲ್ಲಿ ಬೆಳೆದು, ಹಾಸನದಲ್ಲಿ ಕಾನೂನು ಪದವಿ ಪಡೆದ ಇವರು, ‘ಜನಮಿತ್ರ’ ಪತ್ರಿಕೆಯ ಮೂಲಕ ಅಕ್ಷರ ಫ಼್ಲೋಕಕ್ಕೆ ಕಾಲಿಟ್ಟರು. ಪ್ರಸ್ತುತ ಬೆಂಗಳೂರಿನ ಉಚ್ಚ ನ್ಯಾಯಾಲಯದ ವಕೀಲರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಬಾಂಬೆ ಉಚ್ಚ ನ್ಯಾಯಾಲಯದ ವಕೀಲರು, ರಾಜು ಜೆ಼ಡ್. ಮೋರೆ ಅವರ ಇಂಗ್ಲಿಷ್ ನ Fun In Law ಘನ ನ್ಯಾಯಾಲಯದ ಲಘು ಹಾಸ್ಯ ಬರಹಗಳು

ಇನ್ನು ಮುಂದೆ ಕನ್ನಡಕ್ಕೆ ಕರ್ನಾಟಕ ಉಚ್ಚ ನ್ಯಾಯಾಲಯದ ವಕೀಲರಾದ ಪೃಥ್ವಿ ಸೂರಿ ಅವರಿಂದ ಅಂಕಣವಾಗಿ ಬರಲಿದೆ.

ಮೂಲ – ರಾಜು ಜೆ಼ಡ್. ಮೊರೆ
ಕನ್ನಡಕ್ಕೆ – ಪೃಥ್ವಿ ಸೂರಿ

ಅಂಕಣ – 4

ನಾನು ವಕೀಲನಾಗಿ ಸನ್ನದು ಪಡೆದ ಕೆಲವೇ ದಿನಗಳಲ್ಲಿ, ಸೌಭಾಗ್ಯವೆನ್ನುವಂತೆ ಹಿರಿಯ ವಕೀಲರೊಬ್ಬರ ಜೂನಿಯರ್ ಸಹೋದ್ಯೋಗಿಯಾಗಿ (1985-89) ವಕೀಲಿಕೆಯನ್ನು ಕಲಿಯುವ ಅವಕಾಶ ದೊರೆಯಿತು. ನನ್ನ ಸೀನಿಯರ್ ಅವರ ಖಾಸಗಿ ವಕಾಲತ್ತಿನ ಜತೆಯಲ್ಲಿ ಬಾಂಬೆ ಹೈಕೋರ್ಟಿನ ರಿಟ್ ವಿಭಾಗದ ಹಿರಿಯ ಸಹಾಯಕ ಸರ್ಕಾರಿ ವಕೀಲರಾಗಿಯೂ ಕಾರ್ಯನಿರ್ವಹಿಸಿದ್ದರು.

ನ್ಯಾಯಮೂರ್ತಿ ಮೈಕಲ್ ಎಫ್. ಸಲ್ದಾನಾ ಅವರು 1990-94 ರ ಅವಧಿಯ ಬಾಂಬೆ ಹೈಕೋರ್ಟಿನ ನ್ಯಾಯಾಧೀಶರಾಗಿಯೂ ಮತ್ತು 1994-2004 ರ ಅವಧಿಗೆ ಕರ್ನಾಟಕ ಹೈಕೋರ್ಟ್‌ನಲ್ಲಿ ನ್ಯಾಯಾಧೀಶರಾಗಿ ಉತ್ತಮ ಸೇವೆ ಸಲ್ಲಿಸಿದ್ದಾರೆ.

ವಕೀಲರಾಗಿದ್ದ ಸಮಯದಲ್ಲಿ ಅವರೊಂದಿಗೆ ಕಳೆದ ಆ ನಾಲ್ಕು ವರ್ಷಗಳು (ತೀರಾ ನಿಖರವಾಗಿ ಹೇಳುವುದಾದರೆ ಐವತ್ತು ತಿಂಗಳು) ನನ್ನ ಪಾಲಿಗೆ ಅಮೂಲ್ಯವಾದ ಕಲಿಕೆಯ ಅನುಭವದ ಜತೆಗೆ ಸಂತೋಷದಿಂದ ಕೂಡಿದ್ದವು. ನ್ಯಾಯಮೂರ್ತಿ ಸಲ್ದಾನ ಅವರು ಚೆಂದದ ಕತೆಗಾರರು. ಅವರ ಕತಾ ಹಿನ್ನೆಲೆ ಕೇವಲ ಕೇಸ್ ಫೈಲುಗಳು ಮತ್ತು ತೀರ್ಪುಗಳನ್ನು ಓದುವುದಕ್ಕಾಗಿ ಅಥವಾ ನ್ಯಾಯಾಲಯಗಳಿಗೆ ಹೋಗುವುದಕ್ಕಾಗಿ ಮಾತ್ರ ಸೀಮಿತವಾಗಿರಲಿಲ್ಲ. ಬದಲಾಗಿ ಕಾನೂನಿನ ಮೌಲಿಕ, ಜೀವನದ ನೀತಿ ಪಾಠಗಳ ಸಮಗ್ರ ಶಿಕ್ಷಣವಾಗಿತ್ತು. ಕಕ್ಷಿದಾರರನ್ನು ನಿರ್ವಹಿಸುವ ಕೌಶಲ್ಯ ವಕೀಲರಿಗೆ ಬೇಕಾದ ಅಗತ್ಯ.‌
ವಕಾಲತ್ತನ್ನು ನಿರ್ವಹಿಸುವ ವಕೀಲನಿಗೆ ಒಬ್ಬ ಕಕ್ಷಿದಾರರನ್ನು ಪಡೆಯುವುದೂ ಮತ್ತು ಅವರನ್ನು ಉಳಿಸಿಕೊಳ್ಳುವುದು ಅತೀ ಮುಖ್ಯ. ಹಾಗಾಗಿ ಕಕ್ಷಿದಾರರ ನಿರ್ವಹಣೆ ನೀರು ಕುಡಿದಷ್ಟು ಸರಾಗವಾಗಿ ಇರುವಂತಹ ಕೌಶಲ್ಯವನ್ನು ರೂಢಿಸಿಕೊಳ್ಳಬೇಕು. ವಕೀಲ ವೃತ್ತಿಯಲ್ಲಿ ಜನರ ಬಾಯಿಂದ ಬಾಯಿಗೆ ಹರಡುವ ಪ್ರಚಾರದ ಮೂಲಕ‌ ವೃತ್ತಿ ಬೆಳೆಯುತ್ತದೆ.

ವೃತ್ತಿ ಪರಿಣತಿಯಿಂದ ಸಂತೋಷಗೊಂಡ ಕಕ್ಷಿದಾರ ಕೇವಲ ವಕೀಲನೊಬ್ಬನ ಅನ್ನದಾತ ಮಾತ್ರವಾಗಿರಲಾರ, ಹೊರತಾಗಿ ಆತ ಒಬ್ಬ ಶ್ರೇಷ್ಠ ಜಾಹೀರಾತುದಾರನೂ ಆಗಿರುತ್ತಾನೆ. ಹೆಚ್ಚಿನದ್ದಾಗಿ ನಮಗೆ ಅನುಮತಿಸಲಾದ ಜಾಹೀರಾತಿನ ಏಕೈಕ ಪ್ರಕಟಣಾ ಮಾಧ್ಯಮ ಇದೊಂದೆ.
ಹೊಸದಾಗಿ ವಕಾಲತ್ತು ಶುರುಮಾಡಿದವರಿಗೆ ಕಾನೂನಿನ ಪುಸ್ತಕಗಳಿಂದಲೊ ಅಥವಾ ಕಾಲೇಜಿನ ಪಠ್ಯದಿಂದಲೊ ಕಲಿಕೆ ಪ್ರಾರಂಭವಾಗುವುದಿಲ್ಲ. ಬದಲಾಗಿ, ನಿಜವಾದ ಅಧ್ಯಯನ ತಿಳುವಳಿಕೆ ಶುರುವಾಗುವುದು ಹಿರಿಯ ವಕೀಲರ ಚೇಂಬರ್‌ ನಲ್ಲಿ ಕೆಲಸ ಮಾಡಿದಾಗಿನಿಂದ ಆಗುತ್ತದೆ. ನಾನಾದರೂ ಹಾಗೆ ಭಾವಿಸುತ್ತೇನೆ.

ನಾನು ಜೂನಿಯರ್ ಆಗಿದ್ದ ಸಂದರ್ಭದ ಒಂದು ಉದಾಹರಣೆ. ಒಮ್ಮೆ ಕಕ್ಷಿದಾರರೊಬ್ಬರು ಪ್ರಕರಣದ ಸಂಬಂಧವಾಗಿ ಕಚೇರಿಗೆ ಭೇಟಿ ನೀಡಿ ತಮ್ಮ ಫೈಲ್ ಅನ್ನು ಕೊಟ್ಟು ಅಭಿಪ್ರಾಯ ತಿಳಿಸಲು ಹೇಳಿದರು. ಸೀನಿಯರ್ ಕೆಲವು ದಿನಗಳ ನಂತರ ಕಚೇರಿಗೆ ಬರಲು ತಿಳಿಸಿದ್ದರು.
ಸಂಪೂರ್ಣ ದಾಖಲೆಗಳನ್ನು ಓದಿ ಪ್ರಕರಣದ ಸಾರಾಂಶವನ್ನು ಸಿದ್ದಪಡಿಸುವ ಕೆಲಸವನ್ನು ನನಗೆ ನಿರ್ದೇಶಿಸಿದ್ದರು. ಇದರಲ್ಲಿ ಕಕ್ಷಿದಾರನ ಪರವಾಗಿದ್ದ ಅನುಕೂಲ ಮತ್ತು ಅನಾನುಕೂಲಗಳು ಹಾಗೂ ಪ್ರಕರಣದ ವಸ್ತು ವಿಷಯದ ಪರ ಮತ್ತು ವಿರುದ್ಧವಾಗಿದ್ದ ಕಾನೂನಿನ ತೀರ್ಪುಗಳನ್ನು ಪಟ್ಟಿ ಮಾಡುವುದರ ಜತೆಗೆ ನನ್ನ ವೈಯಕ್ತಿಕ ಅಭಿಪ್ರಾಯವನ್ನು ಸೇರಿಸುವ ಅವಕಾಶವಿತ್ತು.

ಕಕ್ಷಿದಾರನ ಜಟಿಲವಾದ ಸಮಸ್ಯೆಯನ್ನು ಹೊತ್ತು ಕೂತಿದ್ದ ಪ್ರಕರಣದಲ್ಲಿ ನಮಗೆ ಉಪಯೋಗವಾಗಕ್ಕೆ ಬರುವ ಯಾವುದಾದರೊಂದು ಅಂಶ ಇರಬಹುದೆನ್ನುವ ಆಶಾಕಿರಣವನ್ನು ಇಟ್ಟುಕೊಂಡು ಸಂಪೂರ್ಣವಾಗಿ ಅಧ್ಯಯನ ಮಾಡಿದೆ. ದುರಾದೃಷ್ಟವೆನ್ನುವಂತೆ ನಮಗೆ ಅನುಕೂಲವಾಗುವ ತೀರ್ಪುಗಳಿಗಿಂತ ನಮ್ಮ ವಿರುದ್ಧವಾಗಿದ್ದ ಐತೀರ್ಪುಗಳೇ ಹೆಚ್ಚಿದ್ದವು. ಆ ಎಲ್ಲಾ ತೀರ್ಪುಗಳನ್ನು ಪಟ್ಟಿಮಾಡಿ, ಅಂತಿಮವಾಗಿ ಸೀನಿಯರ್ ನೀಡಿದ ವಿಶೇಷ ಅಧಿಕಾರವನ್ನು ಬಳಸಿಕೊಂಡು ನನ್ನ ಅಭಿಪ್ರಾಯವನ್ನು ಉಲ್ಲೇಖಿಸಿದೆ. ಪ್ರಕರಣವನ್ನು ದಾಖಲಿಸಲು ಯಾವುದೇ ಮೂಲಾಧಾರಗಳಿಲ್ಲ ಇದೊಂದು “ಹತಾಶ ಪ್ರಕರಣ” ಎಂದು ಗಮನಸೂಚಿಯಾಗಿ ಬರೆದಿಟ್ಟೆ. ವೈದ್ಯಕೀಯ ಪರಿಭಾಷೆಯಲ್ಲಿ ‘ಬಹುಅಂಗಾಗ ವೈಫಲ್ಯದಿಂದ ಬಳಲಿದ ಪ್ರಕರಣ’ವಾಗಿದೆ ಎಂದು ಹೆಸರಿಡಬಹುದಿತ್ತು.

ಸೀನಿಯರ್ ನಾನು ಟಿಪ್ಪಣಿ ಮಾಡಿದ್ದ ಬರಹವನ್ನು ಎಚ್ಚರಿಕೆಯಿಂದ ಓದಿದರು. ಆದರೆ, ಅವರ ಮುಖಭಾವದಲ್ಲಿ ಯಾವುದೇ ಪ್ರತಿಕ್ರಿಯೆಗಳಿರಲಿಲ್ಲ. ಬದಲಾಗಿ ಎಂದಿನಂತೆ ತುಟಿ ಅಂಚಿನಲ್ಲಿ ನಸುನಕ್ಕರು. ಅದು ಅವರ ತೀರ ವಿಶಿಷ್ಟವಾದ ಮತ್ತು ಕಣ್ಣುಗಳಲ್ಲಿ ತುಂಟತನದ ಮಿಂಚು ತುಂಬಿದ ಆಕರ್ಷಕ ನಗು.

ಕಕ್ಷಿದಾರನ ಜತೆಯಲ್ಲಿ ಚರ್ಚೆಗೆ ಸಮಯವನ್ನು ನಿಗಧಿಪಡಿಸಲಾಗಿತ್ತು. ಈ ಸಂದರ್ಭದಲ್ಲಿ ನಾನು ಏನನ್ನೂ ಮಾತನಾಡದಂತೆ, ಸುಮ್ಮನೆ ಕುಳಿತುಕೊಂಡಿರಬೇಕೆನ್ನುವ ಆದೇಶವನ್ನು ಸೀನಿಯರ್ ವಿಧಿಸಿದ್ದರು. ನಾನು ಆದೇಶವನ್ನು ಪಾಲಿಸಿದೆ. ಸೀನಿಯರ್ ಪ್ರಕರಣದ ಸತ್ಯಾಂಶಗಳು ಮತ್ತು ಕಾನೂನಿನ ವಾಸ್ತವತೆ ಹಾಗೂ ಅನುಕೂಲ-ಅನಾನುಕೂಲಗಳ ಬಗ್ಗೆ ಕಕ್ಷಿದಾರನ ಮನ ಮುಟ್ಟುವಂತೆ ಅತ್ಯಂತ ಆತ್ಮ ವಿಶ್ವಾಸದ ಮಾತುಗಳಿಂದ ಅರ್ಥೈಸಿದರು. ಹಿರಿಯ ವಕೀಲರು ಈಗಾಗಲೇ ಎಷ್ಟು ಚೆನ್ನಾಗಿ ತಯಾರಿ ನಡೆಸಿದ್ದಾರೆ ಎಂದು ಕಕ್ಷಿದಾರನಿಗೆ ಖುಷಿಯಾಯಿತು.
ಚರ್ಚೆಯ ಕೊನೆಯ ಹಂತದಲ್ಲಿ ಸೀನಿಯರ್ ಆ ಕಕ್ಷಿದಾರನಿಗೆ ಅದ್ಭುತವಾಗಿ ಧೈರ್ಯ ತುಂಬುವಂತೆ “ನ್ಯಾಯಾಲಯದಲ್ಲಿ ಅಥವಾ ಆಪರೇಷನ್ ಥಿಯೇಟರ್‌ನಲ್ಲಿ ಫಲಿತಾಂಶದ ಬಗ್ಗೆ ಯಾರೂ ಗ್ಯಾರಂಟಿ ನೀಡಲು ಸಾಧ್ಯವಿಲ್ಲದಿದ್ದರೂ, ನಾವು ಖಂಡಿತವಾಗಿಯೂ ನಿಮಗಾಗಿ ನಮ್ಮ ಪ್ರಾಮಾಣಿಕ ಪ್ರಯತ್ನವನ್ನು ಶಕ್ತಿಮೀರಿ ಮಾಡುತ್ತೇವೆ” ಎಂಬ ಮಾತುಗಳನ್ನು ಹೇಳಿದ ನಂತರ ನನ್ನ ತಿರುಗಿ ಹೌದೆನ್ನುವಂತೆ ನೋಡಿದರು. ನಾನೂ ಹೌದೌದು ಎನ್ನುವಂತೆ ತಲೆಯಾಡಿಸಿದೆ.

ಕಕ್ಷಿದಾರನು ಚರ್ಚೆಯೆಲ್ಲ ಮುಗಿದ ನಂತರ ಸೀನಿಯರ್ ಟೇಬಲ್ ನ ಮೇಲೆ ಮುಗಂಡವಾಗಿ ದೊಡ್ಡ ಮೊತ್ತದ ಹಣದ ಕಟ್ಟನ್ನು ಇಟ್ಟು ಸಂತೋಷದಿಂದ ಚೇಂಬರ್ ನಿಂದ ಹೊರಬಂದನು.

ಅವರು ಹೋದ ನಂತರ, ನಾನು ಸೀನಿಯರ್ ಬಳಿ “ಸರ್, ಈ ಪ್ರಕರಣವನ್ನು ಫೈಲ್ ಮಾಡುವುದೆಂದರೆ, ಹೆಣವನ್ನು ಆಪರೇಷನ್ ಟೇಬಲ್ ಮೇಲೆ ಮಲಗಿಸಿದಂತೆ. ಸತ್ತ ವ್ಯಕ್ತಿಯನ್ನು ಬದುಕಿಸಲು ಹೇಗೆ ಸಾಧ್ಯವಿಲ್ಲವೋ, ಹಾಗೆಯೇ ಈ ಪ್ರಕರಣದಲ್ಲಿ ನಾವೇನೂ ಮಾಡಲು ಸಾಧ್ಯವಿಲ್ಲ.” ಎಂದು ಬಡಬಡಾಯಿಸಿದೆ.

ಅವತ್ತು ಸೀನಿಯರ್ ಹೇಳಿದ ಮಾತುಗಳು 35 ವರ್ಷ ಕಳೆದರೂ ಇನ್ನೂ ನೆನಪಿನಲ್ಲಿ ಅಚ್ಚ ಹಸಿರಾಗಿದೆ: “ನೀನು ತಪ್ಪು ತಿಳಿದಿದ್ದೀಯಾ ರಾಜು. ಸತ್ತ ದೇಹಕ್ಕೂ ಮಾಡಬಹುದಾದ ಕೆಲಸವೊಂದು ಬಾಕಿ ಉಳಿದಿರುತ್ತದೆ.”
ನಾನು ಆಶ್ಚರ್ಯದಿಂದ “ಏನು ಮಾಡಬಹುದು ಸರ್?” ಎಂದು ಕೇಳಿದೆ.

ಅವರ ಉತ್ತರ ಹೀಗಿತ್ತು, “ಎಂದಿಗೂ ಇದನ್ನು ನೆನಪಿಟ್ಟುಕೊ. ಪ್ರಕರಣದಲ್ಲಿ ಯಾವುದೇ ಹುರುಳಿಲ್ಲವೆಂದಾದರೂ, ಪವಾಡದಲ್ಲಿ ನಂಬಿಕೆ ಕಳೆದುಕೊಳ್ಳಬೇಡ. ಒಂದು ವೇಳೆ ನಮ್ಮ ಎಲ್ಲಾ ಪ್ರಯತ್ನಗಳು ತಲೆ ಕೆಳಗಾಗಿ ನಾವು ಯಶಸ್ವಿಯಾಗದಿದ್ದರೆ, ನೀನು ‘ಸತ್ತ ಪ್ರಕರಣ ಎಂದು ಕರೆದಿದ್ದಕ್ಕೆ ಕನಿಷ್ಠಪಕ್ಷ ಒಂದು ‘ಗೌರವಯುವಾಗಿ ಅಂತ್ಯಕ್ರಿಯೆ’ಯಾದರೂ ಮಾಡಿದ್ದೇವೆ ಎಂಬ ತೃಪ್ತಿಯಾದರೂ ನಮಗೆ ಇರುತ್ತದೆ!”
ನಂತರ ನನ್ನ ವೃತ್ತಿ ಜೀವನದ ಅನುಭವದಲ್ಲಿ, ಈ ಮಾತುಗಳು ಎಷ್ಟು ನಿಜ ಎಂಬುದರ ಅರಿವಾಯಿತು. ವಕೀಲರು ಹತಾಶೆ ಎಂದು ಕೊಂಡಿದ್ದ ಎಷ್ಟೋ ಪ್ರಕರಣಗಳಲ್ಲಿ ಅನುಕೂಲವಾದ ಆದೇಶಗಳು ಬಂದಿದ್ದನ್ನು ನಾನು ನೋಡಿದ್ದೇನೆ; ಹಾಗೆಯೇ ವಕೀಲ ವೃಂದವೇ ಅತ್ಯುತ್ತಮ ಪ್ರಕರಣ ಎಂದುಕೊಂಡಿದ್ದನ್ನು ನ್ಯಾಯಾಧೀಶರು ಯಾವುದೇ ಹುರುಳಿಲ್ಲವೆನ್ನುವಂತೆ ಮಾಡಿ, ಸೋತಿರುವ ಪ್ರಕರಣವನ್ನು ನೋಡಿದ್ದೇನೆ.
ಈ ಕತೆಯ ನೀತಿ ಅತ್ಯಂತ ಸ್ಪಷ್ಟ ಮತ್ತು ನಿಖರ. ಒಬ್ಬ ವಕೀಲನು ಎಂದಿಗೂ ತೀರ್ಪು ನಿಡಬಾರದು. ಆ ಕೆಲಸ ನಿರ್ವಹಿಸಲು ಬೇರೊಬ್ಬರ ನೇಮಕ ಈಗಾಗಲೇ ಆಗಿದೆಯಲ್ಲವೇ?

‍ಲೇಖಕರು Admin

8 August, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading