ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಓದಬೇಕಾದ ಕಾದಂಬರಿ ‘ಶಕುನದ ಹಕ್ಕಿ’

ಹೇಮಂತ್ ಪಾರೇರಾ ಅವರ ಕಾದಂಬರಿ ‘ಶಕುನದ ಹಕ್ಕಿ’

ನಂದಿತ ಪ್ರಕಾಶನ’ ಈ ಕೃತಿಯನ್ನು ಪ್ರಕಟಿಸಿದೆ.

ಈ ಕೃತಿಯ ಕುರಿತು ಸಂಗೀತ ರವಿರಾಜ್ ಅವರ ಬರಹ ಇಲ್ಲಿದೆ.

ಸಂಗೀತ ರವಿರಾಜ್

ಹೇಮಂತ್ ಪಾರೇರ ಅವರ ಚೊಚ್ಚಲ ಕಾದಂಬರಿ ಮತ್ತು ನಾಲ್ಕನೆಯ ಕೃತಿ “ಶಕುನದ ಹಕ್ಕಿ”  ತನ್ನ ಸೃಜನಶೀಲ ಬರವಣಿಗೆಯಿಂದ ಒಂದು ಮಹತ್ವದ ಕೃತಿಯಾಗಿ ರೂಪುಗೊಂಡಿದೆ. ಸಮಾಜದ ಹಲವಾರು ಬಣ್ಣಗಳ, ಮುಖವಾಡಗಳ ಮುಸುಕೆಳೆಯುತ್ತ, ನಗ್ನ ಸತ್ಯಗಳನ್ನೆಲ್ಲ ನಿರ್ಭಿಡೆಯಿಂದ ಹೊರಹಾಕಿ  ನಮ್ಮ ಮುಂದಿಡುವ ಎದೆಗಾರಿಕೆ ಬೇಕೆಂದರೆ ಲೇಖಕರ ಪೆನ್ನು ತುಂಬಾ ಹರಿತವಿರಬೇಕು! ಒಂದು ಹಂತದಲ್ಲಿ ಸಮಾಜದ ವರ್ತನೆಗಳ ಆಳ- ಅಗಲಗಳನ್ನು ಪರಾಮರ್ಶಿಸುವ ಕಾದಂಬರಿಯಾಗಿ ಇದು ನಮಗೆ ಕಂಡುಬರುತ್ತದೆ. ಏಕೆಂದರೆ ಕಾದಂಬರಿಯು ನಮ್ಮರಿವಿಗೆ ದಕ್ಕುವ ಎಲ್ಲವನ್ನು ಕಕ್ಕುವ ಒಂದು ಸಶಕ್ತ ಪ್ರಕಾರ ಎಂಬುದು ನನ್ನ ಭಾವನೆ. ಕಾದಂಬರಿಯ ರಚನೆ ಖಂಡಿತ ಸುಲಭದ ಮಾತಲ್ಲ. ಇದನ್ನು ಬರೆಯುವುದೆಂದರೆ ಅದೊಂದು ಧ್ಯಾನಸ್ಥ ಸ್ಥಿತಿ.  ಹಲವಾರು ವರ್ಷಗಳ ತಪಸ್ಸು ಆಗಿರುತ್ತದೆ.  ಈ ‘ಶಕುನದ ಹಕ್ಕಿ’ ಕಾದಂಬರಿಯು ಮೂರು ವರ್ಷಗಳ ತಪಸ್ಸಿನ ಫಲ ಎಂಬುದು ಲೇಖಕರ ಮಾತಿನಲ್ಲಿ ನಮಗಿಲ್ಲಿ ಅರಿವಾಗುತ್ತದೆ. ಬರೆದ ನಂತರವೂ ಏಕಾಂತದ ಧ್ಯಾನಸ್ಥ ಸ್ಥಿತಿಯಲ್ಲಿ ಅದನ್ನು ಕೆಲವು ಸಮಯವಿಟ್ಟು ಸಂವೇದನಶೀಲ ಬರಹವನ್ನಾಗಿ ಮಾರ್ಪಡಿಸಿ ಲೋಕಾರ್ಪಣೆ ಮಾಡಿರುವುದು ನಾವೆಲ್ಲರೂ ಮೆಚ್ಚುವಂತಹ ವಿಷಯ. ಲೋಕಾರ್ಪಣೆಯ ನಂತರ ಪ್ರತಿಯೊಬ್ಬರು ತನ್ನ ಕಾದಂಬರಿಯನ್ನು ಓದಬೇಕೆಂಬ ಹಂಬಲವಿರುವುದು ಅವರ ಬರವಣಿಗೆಯ ಮೇಲೆ ಅವರಿಗಿರುವ ಶಕ್ತಿ ಮತ್ತು ಆತ್ಮ ವಿಶ್ವಾಸವನ್ನು ತೋರಿಸುತ್ತದೆ. ಈ ಹಂಬಲ ಪ್ರತಿ ಬರಹಗಾರನಿಗೆ ಇರಲೇಬೇಕು ಮತ್ತು ಬರಬೇಕು.

‘ಶಕುನದ ಹಕ್ಕಿ’ ಕಾದಂಬರಿಯಲ್ಲಿ ಅತೀವ ಸಾಮಾಜಿಕ ಕಳಕಳಿಯೊಂದಿಗೆ ಲೇಖಕರು ನ್ಯಾಯಕ್ಕಾಗಿ,ಸತ್ಯಕ್ಕಾಗಿ ಹೋರಾಡುತ್ತಾರೆ. ಅದರಲ್ಲೂ ಹೆಣ್ಣೊಬ್ಬಳಿಗೆ ಸಿಗಬೇಕಾದ ನ್ಯಾಯಕ್ಕಾಗಿ ಹೋರಾಡುವ ವಿಚಾರ ನಮ್ಮನ್ನು ಇನ್ನಿಲ್ಲದಂತೆ ತಟ್ಟುತ್ತದೆ. “ನಾನೊಬ್ಬ ಪತ್ರಕರ್ತನಾಗಿ ಅಲ್ಲಿನ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲಾಗದೆ ಮೂಡಾತ್ಮನಂತೆ ಹೆಣ್ಣೊಬ್ಬಳನ್ನು ಸಾಯಲು ಬಿಟ್ಟು ಬಂದವನಲ್ಲವೇ?  ಅವಳನ್ನು ಯಾಕೆ ಕೊಲೆ ಮಾಡಿದರು? ಅವಳನ್ನು ಕೊಲೆ ಮಾಡಿ ಬಾವಿಯಲ್ಲಿ ಯಾಕೆ ಹಾಕಿದರು?  ಹೀಗಾಗುತ್ತದೆ ಎಂದು ನಾನು ಅಂದುಕೊಂಡಿರಲಿಲ್ಲ. ಅವಳದು ಆತ್ಮಹತ್ಯೆ ಅಲ್ಲ ಎಂಬುದು ನನಗೆ ಗೊತ್ತಿದೆ. ಇಷ್ಟು ವರ್ಷ ಕಳೆದರೂ ಅದಕ್ಕೆ ಸಂಬಂಧಪಟ್ಟ ಸಾಕ್ಷಿಗಳು ನನ್ನಲ್ಲಿದ್ದರೂ ಅವಳ ಆತ್ಮಕ್ಕೆ ನ್ಯಾಯ ಒದಗಿಸುವ ಕೆಲಸಕ್ಕೆ ನಾನು ಯಾಕೆ ಕೈ ಹಾಕಲಿಲ್ಲ? ನಾನೆಷ್ಟು ನಿಷ್ಕರುಣಿ. ಇನ್ನು ಮುಂದೆ ಎದೆ ತಟ್ಟಿ ನಾನೊಬ್ಬ ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವ ಪತ್ರಕರ್ತನೆಂದು ಬೀಗುವ ಅರ್ಹತೆಯನ್ನು ಕಳೆದುಕೊಂಡಿದ್ದೇನೆ ಎಂದು ಅಂತರಾತ್ಮ ಚುಚ್ಚುತಿದೆ.” ಕಾದಂಬರಿಯಲ್ಲಿ ಹೆಣ್ಣಿಗೆ ನ್ಯಾಯ ಸಿಗಲಿಲ್ಲವೆಂಬ ವೇದನೆಯಲ್ಲಿ ಬರೆದ ಸಾಲುಗಳನ್ನು ಓದಿದಾಗ ಬರವಣಿಗೆಯ ಧೈರ್ಯ, ಬಿಚ್ಚು ಮನಸ್ಸು, ಪ್ರೀತಿ, ಕರುಣೆ, ಸಹಾಯ ಹಸ್ತ ಎಲ್ಲವೂ ನಮಗಿಲ್ಲಿ ಗೋಚರಿಸುತ್ತದೆ.  ಏಕೆಂದರೆ ನಮ್ಮ ಭಾವನೆಗಳೇ ನಮ್ಮ ಬರಹದ ಅಭಿವ್ಯಕ್ತಿ.  ಒಟ್ಟಿನಲ್ಲಿ ಕಾದಂಬರಿಯಲ್ಲಿ ವರ್ಣನೆಗಳು ಸಹ ಬೇಕಾದಷ್ಟು ಇದ್ದು, ಅವುಗಳು ಅಪ್ಯಾಯಮಾನ ಆಗಿದ್ದರು, ಘಟನೆಗಳನ್ನು ವರ್ಣನೆಗೆ ಮಾತ್ರ ಮುಗಿಸದೆ ಬರಹದಲ್ಲಿ ದಿಟ್ಟ ಕಾದಂಬರಿಯ ಬದ್ಧತೆ ಎದ್ದು ಕಾಣುತ್ತದೆ.

ಶಕುನದ ಹಕ್ಕಿಯ ಆಕರ್ಷಣೆ ಹೇಗಿದೆಯೆಂದರೆ ಪ್ರಾರಂಭಿಸಿದರೆ ಮುಗಿಯುವವರೆಗೆ ಜಾಣತನದಿಂದ ನಮ್ಮನ್ನು ಹಿಡಿದಿಟ್ಟುಕೊಳ್ಳುತ್ತದೆ . ಒಂದು ಕ್ರಿಯಾಶೀಲ ಮನಸ್ಸು ಎಷ್ಟೊಂದು ಸೃಜನಶೀಲತೆಯಿಂದ ಚಿಂತನೆಗಳನ್ನು ಒರೆಹಚ್ಚಿ ಕಾದಂಬರಿಯಾಗಿರಿಸಿದ್ದಾರೆ ಎಂಬುದು ನಮಗಿಲ್ಲಿ ಮನದಟ್ಟಾಗುತ್ತದೆ. ಆಳಹಕ್ಕಿ  ಎನ್ನುವ  ಶಕುನದ ಹಕ್ಕಿಯ ಕಲ್ಪನೆಯೆ ಇಲ್ಲಿ ವೈಶಿಷ್ಟ್ಯ ಪೂರ್ಣವಾಗಿದೆ.  ಆ ಹಕ್ಕಿಯ ಸಂಗತಗಳನ್ನು ಬದುಕಿನ ನೋವು,ನಲಿವುಗಳಿಗೆ ಹೋಲಿಸಿ  ಕರಾರುವಕ್ಕಾಗಿ ಆಗುವ ಘಟನೆಗಳು ಕಾಕತಾಳೀಯವೆಂಬಂತೆ ಬಿಂಬಿಸಿದ ಪರಿ ಅಭೂತಪೂರ್ವವಾಗಿದೆ.  ಕಾದಂಬರಿ ಒಳಗೆ ಹಲವಾರು ಕಥೆಗಳು ಘಟಿಸಿದರು ಎಲ್ಲೂ ಒಂದಕ್ಕೊಂದು ಗೊಂದಲಕ್ಕೆ ಅವಕಾಶವಿಲ್ಲದಂತೆ ಒಂದಕ್ಕೊಂದು ಹೆಣೆದುಕೊಂಡು ಹೋದ ರೀತಿ ವಿಶೇಷವಾಗಿದೆ. ಕಾದಂಬರಿಯಲ್ಲಿ ಎಲ್ಲ ವಸ್ತುವೈವಿದ್ಯಗಳು   ಸಮರ್ಥವಾಗಿ ಪಡಿಮೂಡಿದೆ. ಅದರಲ್ಲೂ ಮಾದೇವನ ಪಾತ್ರ ಇದರಲ್ಲಿ ಮಹತ್ವಪೂರ್ಣವಾಗಿ ಹೊರಹೊಮ್ಮಿದೆ.  ಮಾದೇವನನ್ನು ಕಾದಂಬರಿಯಲ್ಲಿ ನೇರವಾಗಿ ಕೊಂಡೊಯ್ಯದೆ, ಕಥೆಯ ರೂಪದಲ್ಲಿ ನಡುವಿನಲ್ಲಿ ಹೆಣೆದು ಅವನ ಮೂಲಕ ಒಂದು ಹೊಸ ರೀತಿಯ ಸಂದೇಶವನ್ನು ಓದುಗರಿಗಾಗಿ ಲೇಖಕರು ನೀಡುತ್ತಾರೆ. ಮಾದೇವನ ಕೆಟ್ಟ ಕೆಲಸಕ್ಕೆ ಹಿರೀಗೌಡರು ಹೇಳಿರುವ ಮಾತು ಮಾರ್ಮಿಕವಾಗಿದೆ. ” ನೂಲಿನಿಂದ ಬಟ್ಟೆ ನೇಯ್ದ ಹಾಗೆ ಜೀವನ. ಒಂದೊಂದು ದಾರವೂ ಕೂಡ ಬಟ್ಟೆಯ ಅಸ್ತಿತ್ವವನ್ನು ಒಂದಕ್ಕೊಂದು ಹೆಣೆದು ಕಾಪಾಡಿಕೊಂಡಿರುತ್ತದೆ. ಸಂಬಂಧಗಳು ಕೂಡ ಹಾಗೆಯೇ. ಒಂದು ಸಣ್ಣ ದಾರದ ಎಳೆಯು ತುಂಡಾದರೂ ಮುಂದೆ ಒಂದೊಂದೇ ಎಳೆಯು ತುಂಡಾಗಿ ಬಟ್ಟೆ ಹರಿದು ಹೋಗುತ್ತದೆ. ಹೀಗೆ ಹಿರೀಗೌಡರೆಂಬ ತಾತಯ್ಯ ತನ್ನ ಅನುಭವದ ಗ್ರಹಿಕೆಯಿಂದ ಹೇಳಿರುವಂಥದ್ದು ಕಾದಂಬರಿಯಲ್ಲಿ ವಸ್ತುನಿಷ್ಠ  ದೃಷ್ಟಿಕೋನವಾಗಿ ಗೋಚರಿಸುತ್ತದೆ. ಜೊತೆಗೆ ಮಾದೇವನಿಗೆ ತನ್ನ ತಪ್ಪಿನ ಅರಿವಾಗಿ ಪಶ್ಚಾತಾಪವಾಗಿರುವುದು ಒಳ್ಳೆಯದಾದರೂ ಆತನ ದುರಂತ ಅಂತ್ಯ ಖೇದವೆನಿಸುತ್ತದೆ. “ನಾನು ಮಾಡಿದ ತಪ್ಪಿಗೆ ಅವಳು ಎಲ್ಲಿಗೆ ಹೋಗುವುದು ಬೇಡ ನಾನೇ ಮನೆ ಬಿಟ್ಟು ಹೋಗುತ್ತೇನೆ. ನಿಜ ನಾನು ಮಾಡ ಬಾರದ ತಪ್ಪನ್ನು ಮಾಡಿದ್ದೇನೆ. ಅವಳು ಹೇಳುವುದರಲ್ಲಿ ಯಾವ ತಪ್ಪಿಲ್ಲ. ಅವಳ ನಂಬಿಕೆಯನ್ನು ನಾನು ಕಳೆದುಕೊಂಡಿದ್ದೇನೆ ಅದನ್ನು ನಾನೇ ಸರಿ ಮಾಡುತ್ತೇನೆ. “ಹೀಗೆ ಪಶ್ಚಾತಾಪದ ಪರಮಾವಧಿಗೆ ಬಂದಿರುವುದು ಕಾದಂಬರಿಯಲ್ಲಿ ಗಮನಿಸಬೇಕಾದ ಗಮನಾರ್ಹ ಸಂಗತಿ. ಸಾಮಾನ್ಯ ಮನುಷ್ಯರಿಗೆ ಪಶ್ಚಾತಾಪವಾಗುತ್ತದೆ, ಆದರೆ ಹಣದ ಮದದಿಂದ ರಾಜೇಗೌಡರಂತವರು ಎಷ್ಟು ತಪ್ಪು ಮಾಡಿದರು ಸಿಕ್ಕಿಬಿದ್ದರೂ ಅವರಿಗೆ ಪಶ್ಚಾತಾಪ ಆಗುವುದಿಲ್ಲ. ಇದು ಬದುಕಿನ ದುರಂತ. ಇಂತಹ ಧೈರ್ಯಗಳು, ಪುಳಕಗಳು, ವಿದಾಯಗಳು, ಸಂಬಂಧಗಳು ಇವೆ ಅಲ್ಲವೇ ಬದುಕನ್ನು ಸಾಗಿಸಲು ಇರುವಂತಹ ಬಂಡಿಗಳು!  ಅಂದಮೇಲೆ ಪಶ್ಚಾತಾಪ ಮನುಷ್ಯನ ಜೀವನದಲ್ಲಿ ಇರಲೇಬೇಕು. ಇವೆಲ್ಲ ಕಾದಂಬರಿಯ ಹೆಚ್ಚುಗಾರಿಕೆ. ಹೀಗೆ ಮಾದೇವ ಕಾದಂಬರಿಯ ನಡುವಿನಲ್ಲೊಮ್ಮೆ ಬಂದರೂ ಆತನ ಅಸ್ತಿತ್ವ ಕೊನೆಯವರೆಗೂ ಇರುವಂತೆ ಲೇಖಕರು ಕಾದಂಬರಿಯನ್ನು ಕಟ್ಟಿದ ರೀತಿ ಬುದ್ದಿವಂತಿಕೆಯಿಂದ ಕೂಡಿದೆ ಎನ್ನಬಹುದು.

ರಾಜೇಗೌಡರದಂತಹ ರಾಜಕಾರಣಿ ಕಾದಂಬರಿಯಲ್ಲಿ ಕಾಣಿಸಿಕೊಂಡರು ಆತನ ಭ್ರಷ್ಟಾಚಾರ ಕೊನೆಯವರೆಗೂ ನಮ್ಮ ನಡುವೆ ಹರಿದಾಡುತ್ತಿದ್ದರು, ನಾವ್ಯಾರು ಅದನ್ನು ಗಮನಿಸಿ ಇಲ್ಲವಲ್ಲ ಎಂಬ ಖೇದ ಆವರಿಸಿಕೊಳ್ಳುತ್ತದೆ. ನಮ್ಮ ನಿಜ ಜೀವನದಲ್ಲೂ ಇದು ನೂರು ಪ್ರತಿಶತ ಅನ್ವಯವಾಗುವ ವಿಚಾರಗಳು. ಸಮಾಜದ ವ್ಯವಸ್ಥೆಗಳು ನಮಗೆಲ್ಲ ರಕ್ಷಣಾ ಭಾವ ಮೂಡಿಸುತ್ತದೆ ಎಂದು ಜನಸಾಮಾನ್ಯರಾದ ನಾವು ಭಾವಿಸಿಕೊಂಡಿರುವುದು  ಸತ್ಯ ಅಲ್ಲ ಎಂಬುದಾಗಿ ಈ ಕಾದಂಬರಿ ನಮ್ಮೊಳಗನ್ನು ಎಚ್ಚರಿಸುತ್ತದೆ. ಅಕ್ರಮ ಹಣ ಮಾಡುವ ಪುಢಾರಿಗಳ ವಿರುದ್ಧ ನಿರ್ಭಿಡೆಯಿಂದ ಮುನ್ನುಗ್ಗುವ ಪತ್ರಕರ್ತನ ಎದೆಗಾರಿಕೆ ಇಲ್ಲಿದೆ. ರಾಜಕೀಯ ವ್ಯಕ್ತಿಗಳು ಹೊರ ಜಗತ್ತಿಗೆ ತಿಳಿಯದಂತೆ ಚಾಣಾಕ್ಷತನದಿಂದ ಮಾಡುವ ಪಿತೂರಿಗಳನ್ನು ಕಂಡು ಹಿಡಿಯುವ ರೀತಿಯನ್ನು ಕಾದಂಬರಿಯಲ್ಲಿ ಬಿಂಬಿಸಿ ಯಶಸ್ವಿಯಾಗಿದ್ದಾರೆ. ಯಾಕೆಂದರೆ ವಾಸ್ತವಕ್ಕೆ ಹತ್ತಿರವಿರುವ ಇಂತಹ ವಿಚಾರವನ್ನು ಸೂಕ್ಷ್ಮವಾಗಿ ನೋಡಿ ಭ್ರಷ್ಟತೆಯನ್ನು ಕಂಡುಹಿಡಿಯುವ ರಭಸದಲ್ಲಿ ಜಾಣ್ಮೆಯಿಂದ ವ್ಯವಹರಿಸುತ್ತಾರೆ. ಕಥೆಯನ್ನು ಕೊಂಡೊಯ್ಯುವ ರಭಸದಲ್ಲಿ ಕಥೆಯಲ್ಲೂ ಮತ್ತು ತಾಳ್ಮೆಯಲ್ಲು ಆತುರಕ್ಕೆ ಬೀಳುವುದಿಲ್ಲ. “ರಾಜ್ಯದಲ್ಲಿ ಅಹಿತ ಘಟನೆಗಳು ನಡೆದಂತೆ ಎಲ್ಲ ಕಾನೂನು ವ್ಯವಸ್ಥೆ ಕ್ರಮಗಳನ್ನು ಅಂತಿಮಗೊಳಿಸಿ ರಾಜೇಗೌಡರನ್ನು ಬಂಧಿಸಲಾಗಿತ್ತು. ಅಧಿಕಾರದಲ್ಲಿದ್ದ ಗೃಹಮಂತ್ರಿಯವರನ್ನು ಅವರದೇ ವ್ಯಾಪ್ತಿಯ ಕಾನೂನು ವ್ಯವಸ್ಥೆ ಬಂಧಿಸುವುದೆಂದರೇನು? ಮುಖ್ಯಮಂತ್ರಿಗಳೇ ನಡುಗಿ ಹೋದರು.” ಕಾದಂಬರಿಯ ಈ ಸಾಲುಗಳು ಓದುಗರಿಗೆ ಹೊಸ ನೋಟವೊಂದನ್ನು ಸೃಷ್ಟಿಸಿದೆ.

ಕಾದಂಬರಿಯ ವಿಷಾದ, ಟೀಕೆಗಳು ಹಲವು ಕಡೆ ಓದುಗರನ್ನು ಎಚ್ಚರಿಸುತ್ತಾ ಹೋಗುತ್ತದೆ. “ಕೆಲವು ವರ್ಷಗಳ ಹಿಂದೆ ಹೆಣವಾಗಿ ತೇಲುತ್ತಿದ್ದ ಪುನರ್ವಿಯ ಆತ್ಮವು ಈಗ ಹಕ್ಕಿಯಾಗಿ ಮರುಜನ್ಮ ಪಡೆದಿರಬಹುದೇ?” ಇವೆಲ್ಲವೂ ಕಾದಂಬರಿಕಾರರ ಸುಪರ್ದಿಯಲ್ಲಿ ತೇಲಾಡುವ ಅರಿಯಲಾಗದ ಭಾವನೆಗಳು.  ಈ ಸತ್ಯವನ್ನು ನಮ್ಮ ಮುಂದೆಯು ಹರವಿ  ಹಗುರವಾಗಿ ಬಿಡುತ್ತಾರೆ. ಜೊತೆಗೆ ಲೇಖಕರು ಇವೆಲ್ಲ ಭ್ರಮೆ, ಮೂಢನಂಬಿಕೆಗಳು ಎಂಬುದಾಗಿ ಮನವರಿಕೆ ಮಾಡಿಬಿಡುತ್ತಾರೆ. ಅಂದರೆ, ಒಂದು ಓದಿನ ನಿರೀಕ್ಷೆಯನ್ನು ನಮಗೂ ಆವರಿಸುವ ಚಾಕಚಕ್ಯತೆ ಇವರ ಬರಹದಲ್ಲಿದೆ. ಹೀಗೆ ಕಾದಂಬರಿಯಲ್ಲಿ ನೀತಿ ಹೇಳುವ ತತ್ವಗಳು ಇವೆ. ಕಾದಂಬರಿಯಲ್ಲಿ ಬಹುವಾಗಿ ವಿಷಯ ವೈವಿಧ್ಯತೆ ಇರುವುದು ಲೇಖಕರ ಯೋಚನ ಲಹರಿಯ ಪ್ರೌಢಿಮೆಯನ್ನು ಹೇಳುತ್ತದೆ. ಗೆಳೆಯರ ಇಸ್ಪೀಟ್ ಆಟ, ಭರತ ವರ್ಷರ ಪ್ರೀತಿಯ ಛಾಯೆ,  ಪುನರ್ವಿಯ ಸಾವು,ಮಾದೇವನ ಕಥೆ,ಅಚಾನಕ್ಕಾಗಿ ಬರುವ ಚಂದ್ರಿಕಾ, ರಾಜೇಗೌಡರ ಇನ್ನೊಂದು ಮುಖ, ಕೋಕನೆಟ್ ಗಾರ್ಡನ್ ಎಂಬ ಅತಿಥಿ ಗೃಹದ ಅಕ್ರಮಗಳು,  ಇವೆಲ್ಲಕ್ಕಿಂತ ಮುಖ್ಯವಾಗಿ ಬರುವ ವಿಭಿನ್ನವಾಗಿ ಚಿತ್ರಿಸಿರುವ ಶಕುನದ ಹಕ್ಕಿಯ ವಿಚಾರಗಳೆಲ್ಲವೂ ಇಲ್ಲಿ ಒಂದೊಂದು ಕಥೆಗಳಂತೆ ಕಾಣುತ್ತದೆ. ಇನ್ನು ವಿಶೇಷವೆಂದರೆ ಈ ಎಲ್ಲಾ ವೈವಿಧ್ಯಮಯ ಕಥೆಗಳನ್ನು ಒಂದಕ್ಕೊಂದು ಪೋಣಿಸಿದ ಶೈಲಿ ಒಂದೇ ಗುಟುಕಿಗೆ ಓದಿ ಮುಗಿಸುತ್ತದೆ. ತೋಟದಲ್ಲಿ ಗೆಳೆಯರು ಇಸ್ಪೀಟ್ ಆಟದಲ್ಲಿ ತಲ್ಲೀನರಾಗಿದ್ದಾಗ ಪೊಲೀಸರ ದಾಳಿಯಿಂದ ತಪ್ಪಿಸಿಕೊಂಡ ಪಜೀತಿಯನ್ನು ಸಾಂದರ್ಭಿಕವಾಗಿ ಚಿತ್ರಿಸಿ ಹೇಳಿರುವುದು ಹಾಸ್ಯಮಯವಾಗಿ ಕಣ್ಣಿಗೆ ಕಟ್ಟುವಂತಿದೆ.

ಒಂದು ಹಂತದಲ್ಲಿ ಈ ಕಾದಂಬರಿಯ ಛಾಪು ಪತ್ತೆದಾರಿಯೇ ಎಂದು ಮನಸೊಳಗೆ ಆವರಿಸಿಕೊಳ್ಳುತ್ತದೆ. ಓದುತ್ತಾ ಹೋದಂತೆ ಕಾದಂಬರಿಯ  ವಿಶೇಷತೆಯ ಅರಿವು ನಮಗಾಗುತ್ತದೆ. ಇದು ಸಾಮಾಜಿಕ ಕಾದಂಬರಿಯೋ, ಪತ್ತೆದಾರಿಯೋ, ಪ್ರೇಮ ಕಾದಂಬರಿಯೋ,  ಕ್ರೈಂ ಕಥೆಯೋ ಹೀಗೆ ಯಾವುದೆಂದು ತಿಳಿಯದೆ ನಿರೀಕ್ಷೆಯಲ್ಲಿಯೆ ಓದುತ್ತೇವೆ. ಎಲ್ಲದರ ಸಮಕ್ಷಮದೊಂದಿಗೆ ಹೊಸ ರೀತಿಯ, ಹೊಸ ಹೊಳುವಿನ ನೈಜತೆಯಿಂದ ಪರಿಭಾವಿಸುವ ಜನಪರ ಕಾಳಜಿಯ ಈ ಕಾದಂಬರಿ ಹೊಸ ತಲೆಮಾರು, ಹಳೆ ತಲೆಮಾರು ಎಲ್ಲರಿಗೂ ಆಪ್ತವಾಗುವುದರಲ್ಲಿ ಎರಡು ಮಾತಿಲ್ಲ. ಒಟ್ಟಿನಲ್ಲಿ ಲೇಖಕರು ತಾವು ಕೇಳಿದ ನೋಡಿದ ತುಡಿತಗಳಿಗೆ- ಮಿಡಿತಗಳಿಗೆ ಕಾದಂಬರಿಯ ರೂಪ ನೋಡಿ ಗೆದ್ದಿದ್ದಾರೆ. ಹೊಸ ಪರಿಕಲ್ಪನೆಯೊಂದಿಗೆ “ಶಕುನದ ಹಕ್ಕಿ”  ಮನೋಜ್ಞವಾಗಿ ಮೂಡಿಬಂದಿದೆ ಮೈಸೂರಿನ ನಂದಿನಿ ಪ್ರಕಾಶನದಿಂದ ಈ ಕೃತಿ ಪ್ರಕಟಗೊಂಡಿದೆ. ಕೊಡಗಿನ ಪ್ರಸಿದ್ಧ ಬರಹಗಾರರಾದ ಕಿಗ್ಗಾಲು ಗಿರೀಶ್,  ಭಾರದ್ವಾಜ ಕೆ ಆನಂದ ತೀರ್ಥರ ಮುನ್ನುಡಿ ಬೆನ್ನುಡಿಯೊಂದಿಗೆ ಹೊರಬಂದಿದೆ. ಶಕ್ತಿ ದಿನಪತ್ರಿಕೆಯ ಬಿ ಜಿ ಅನಂತಶಯನ ಕೃತಿಯಲ್ಲಿ ಶುಭ ಹಾರೈಸಿದ್ದಾರೆ. ಚೊಚ್ಚಲ ಕಾದಂಬರಿಯ ಮೂಲಕ ಭೂಮಿಕೆಗಿಳಿದಿರುವ ಹೇಮಂತ್ ಪಾರೇರ ಅವರ ಬರಹ ನಿರಂತರವಾಗಿರಲಿ ಎಂಬುದಾಗಿ ಆಶಿಸೋಣ.

‍ಲೇಖಕರು Admin

8 August, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading